ಗುರುವಾರ, ಏಪ್ರಿಲ್ 20, 2017

ಜೋ... ಜೋ... ಲಾಲೀ...

ಮಗಳ ಬಾಣಂತನವೆಂಬ ಅನಿರ್ವಚನೀಯ ಅನುಭವದ ಕಣಜದಿಂದ ಕೆಲವೊಂದು ಆಣಿಮುತ್ತುಗಳನ್ನು ನಿಮ್ಮೆದುರು ಇಡುತ್ತಿದ್ದೇನೆ. ಹೆಕ್ಕಿ  ನೋಡಿ ಖುಷಿ ಪಡಿ.

ಮೊಮ್ಮಗು ಹುಟ್ಟಿದಾಕ್ಷಣದಿಂದ ಅಜ್ಜಿಯಾದೆನೆಂಬ ಸಂಭ್ರಮ, ಕುಟುಂಬದಲ್ಲಿ ಹಿರಿತನದ ಸ್ಥಾನ ಸಿಕ್ಕಿತೆಂಬ ಹಮ್ಮು , 
 ಠೇಂಕಾರ ನನ್ನ ನಡೆನುಡಿಗಳಲ್ಲಿ ರಾರಾಜಿಸತೊಡಗಿತು. ಅಗತ್ಯವೇ ಇಲ್ಲದಿದ್ದರೂ ತತ್ವಾದರ್ಶಗಳ ಮಾತುಗಳೂ ಬೋಧನೆಗಳೂ ನನ್ನ ಬಾಯಿಂದ ಪುಂಕಾನುಪುಂಖವಾಗಿ ಹೊರ ಹರಿಯತೊಡಗಿದುವು. ಮನೆಮಂದಿ ನನ್ನನ್ನು ವಿಚಿತ್ರವಾಗಿ ನೋಡಿದಾಗಲೆಲ್ಲ ಸ್ಥಿತಪ್ರಜ್ಞನ ನಗುವೊಂದನ್ನು ಬೀರಿ ಎದ್ದು ಹೋಗುತ್ತಿದ್ದೆ. ಮಲ್ಲಿಗೆ ಚೆಂಡಿನಂತಹ ಕಂದಮ್ಮ ನನ್ನ ಮೊಮ್ಮಗ ಕೈಯೊಳಗಿದ್ದಾಗ ಮಾತ್ರ ನನ್ನ ಮುಖವಾಡ ಕಳಚಿ ಬೀಳುತ್ತಿತ್ತು. ಮಗುವಿನೊಂದಿಗೆ ಮಗುವಾಗಿ ತೊದಲ್ನುಡಿಗಳಿಂದ ಅವನನ್ನು ಲಲ್ಲೆಗರೆಯುತ್ತಾ ಜಗವನ್ನೇ ಮರೆಯುತ್ತಿದ್ದೆ. ನನ್ನ ದೌರ್ಬಲ್ಯವನ್ನು ಕಂಡುಕೊಂಡ ಮಗಳು ನಾನು ಕೊರೆತವನ್ನು ಶುರು ಹಚ್ಚಬೇಕು ಎನ್ನುವಾಗಲೆಲ್ಲ ಮಗುವನ್ನು ತಂದು ನನ್ನ ಕೈಗೆ ತುರಕುತ್ತಿದ್ದಳು. ಆದುದರಿಂದ ನಾನೆಣಿಸಿದಂತಹ ಅಜ್ಜಿಯ ಪಾತ್ರಧಾರಿಣಿಯಾಗಿ ನಾನು ಯಶಸ್ವಿಯಾಗಲಿಲ್ಲ. ಹೋಗಲಿ...ಬಾಣಂತಿ, ಮಗುವಿನ ಎಣ್ಣೆ, ಮಸಾಜು, ಸ್ನಾನ...ಇತ್ಯಾದಿಗಳಲ್ಲಾದರೂ ನನ್ನ ಜ್ಞಾನವನ್ನು ಮೆರೆಯೋಣ ಎಂದುಕೊಂಡರೆ ಅದಕ್ಕೂ ಕಲ್ಲು ಬೀಳಬೇಕೇ? ಮಗಳ ಬಾಣಂತನಕ್ಕೆಂದು ಬಂದಿದ್ದ ಚಂದ್ರಮ್ಮನ ಮುಂದೆ ನಾನು ಮೂವರು ಮಕ್ಕಳನ್ನು ಹೆತ್ತು ಬೆಳೆಸಿದ್ದೇನೆ ಎಂಬುದೇ ಮರೆತುಹೋಗುವಂತಾಗಿತ್ತು. ಯಾಕೆನುವಿರಾ? ಮೊದಲನೆಯದಾಗಿ ಆಕೆ ಮಗುವನ್ನು ಸ್ನಾನ ಮಾಡಿಸುತ್ತಿದ್ದ ವಿಧಾನ (ಅದರ ಕುರಿತಾಗಿ ಒಂದಿಡೀ ಲೇಖನವನ್ನೇ ಬರೆಯಬೇಕಿಂದಿದ್ದೇನೆ), ಎರಡನೆಯದಾಗಿ ಮಗುವಿನ ನಿದ್ದೆ, ಹಸಿವು ಇತ್ಯಾದಿಗಳ ಬಗ್ಗೆ  ಆಕೆ ಭಾಷಣ ಬಿಗಿಯುತ್ತಿದ್ದ ರೀತಿ.
ಚಂದ್ರಮ್ಮ ಮಗುವನ್ನು ಸ್ನಾನ ಮಾಡಿಸುವ ಕಾರ್ಯಕ್ರಮ ಎನ್ನುವುದು ಕುವೆಂಪು ಅವರ  `ಅಜ್ಜಯ್ಯನ ಅಭ್ಯಂಜನ' ವನ್ನೂ ಮೀರಿಸುವಂತಿತ್ತುಸ್ನಾನ ಮುಗಿಸಿ ಮಗುವನ್ನು ಬಟ್ಟೆಯಲ್ಲಿ ಸುತ್ತಿ ಕಟ್ಟಿ(swaddle wrap) ಮಲಗಿಸುತ್ತಿದ್ದ ರೀತಿಯಂತೂ ವಾಹ್...ವಾಹ್...ಭಲೇ...ಭಲೇ...ಎನ್ನುವಂತಿತ್ತು. ಆದರೆ ಇದುವೇ ಮುಂದೆ  ಪೀಕಳಾಟಕ್ಕೆ ಇಟ್ಟುಕೊಳ್ಳಬಹುದೆಂಬ ಕಲ್ಪನೆಯೂ ನಮಗಿರಲಿಲ್ಲ. ಬಿಳಿ ಬಟ್ಟೆಯನ್ನು ವಿಶಿಷ್ಟವಾದ ರೀತಿಯಲ್ಲಿ ಮಡಚಿ ಅದನ್ನು ಹರಡಿ ಇಟ್ಟು ಅದರ ಮೇಲೆ ಮಗುವನ್ನು ಮಲಗಿಸಿದ ನಂತರ ಮಗುವಿನ ಮೈ ಪೂರ್ತಿಯಾಗಿ ಮುಚ್ಚಿಕೊಳ್ಳುವಂತೆ ಬಟ್ಟೆಯನ್ನು ಸುತ್ತಿ ಕಾಲಿನ ಬಳಿ ಗಂಟು ಹಾಕಿ ಮಲಗಿಸುತ್ತಿದ್ದ ರೀತಿಯಿದೆಯಲ್ಲಾ....ಬಹು ಚೆಂದ. ಬಾಣಂತಿಗೆ ನಲುವತ್ತು ದಿನಗಳಾಗುವ ಹೊತ್ತಿಗೆ  swaddle wrap ವಿಧಾನದಲ್ಲಿ ಬಟ್ಟೆಯನ್ನು ಕಟ್ಟಲು ನಾವೂ ಕಲಿತೆವು. ಚಂದ್ರಮ್ಮ ಹೋದ ನಂತರ  ನಮಗಿದೊಂದು ಮೋಜಿನ ಸಂಗತಿಯಾಗಿ ಹೋಯ್ತು. ದಿನದಲ್ಲಿ ಹತ್ತಾರು ಬಾರಿ ಕಟ್ಟಿ....ಬಿಡಿಸಿ, ಕಟ್ಟೀ...ಬಿಡಿಸಿ...ನಾವೂ ಅದರಲ್ಲಿ ಪರಿಣಿತರಾದೆವು  ಅಮ್ಮನ ಹೊಟ್ಟೆಯೊಳಗಿರುವಂತಹ ಬೆಚ್ಚಗಿನ ಭಾವನೆ ಮಗುವಿಗೆ ಬರುತ್ತಿದ್ದಿರಬೇಕು. ಅಷ್ಟು ಮಾತ್ರವಲ್ಲ ನವಜಾತ ಶಿಶುಗಳು ನಿದ್ದೆಯಲ್ಲಿ ಬೆಚ್ಚಿ ಬಿದ್ದು ಏಳುತ್ತಿರುತ್ತವೆಯಲ್ಲ? ಅಂತಹ ಯಾವ ಕಿರಿಕಿರಿಯೂ ಇಲ್ಲದೆ   ಬಟ್ಟೆಯ ಗಂಟಿನೊಳಗೆ ಮಗು ಹಾಯಾಗಿ ನಿದ್ರಿಸುತ್ತಿತ್ತು. ಮೊಲೆಹಾಲು ಕುಡಿಯುತ್ತಿರುವಾಗ ಎಷ್ಟೇ ನಿದ್ದೆ ತೂಗುತ್ತಿದ್ದರೂ ಮೈಗೆ ಬಟ್ಟೆಯನ್ನು ಶಾಸ್ತ್ರೀಯವಾಗಿ ಸುತ್ತದೆ ಅದು ನಿದ್ರಿಸುತ್ತಿರಲಿಲ್ಲ. ಕೆಲವೊಮ್ಮೆ ಮಗು ಜೋರಾಗಿ ಅಳುತ್ತಿದೆಯಲ್ಲಾ ಹೇಗಾದರೂ ನಿದ್ದೆ ಮಾಡಿಬಿಡಲಿ ಎಂದುಕೊಂಡು ನಾಮ್ಕೆವಾಸ್ತೆ ಯಾವುದೋ ಒಂದು ಬಟ್ಟೆಯನ್ನು ಸುಮ್ಮನೇ ಸಡಿಲವಾಗಿ ಸುತ್ತಿಬಿಟ್ಟರೆ ಅದಕ್ಕೆ ತಿಳಿಯುತ್ತಿತ್ತು! ಕೈಕಾಲು ಬಡಿದು ಮತ್ತಷ್ಟು ಅಳುತ್ತಿತ್ತು. ಸರಿಯಾದ ರೀತಿಯಲ್ಲಿ ಬಟ್ಟೆಯನ್ನು ಮಡಚಿ ಅದರ ಮೇಲೆ ಮಗುವನ್ನು ಮಲಗಿಸಿ ಕಾಲುಗಳನ್ನು ಎಳೆದು ನೇರ ಇಡುವಾಗ ಮುಂದಿನ ಹೆಜ್ಜೆ ತಿಳಿದಿದೆ ಎನ್ನುವಂತೆ ಕೈಗಳನ್ನೂ ಸಡಿಲಮಾಡಿ ಕೊಡುತ್ತಿತ್ತು. ಬಟ್ಟೆಯ ಉಂಡೆಯೊಳಗೆ ಅಡಗಿ ಮುಖ ಮಾತ್ರ ತೋರಿಸಿ ಕಣ್ಣುಗಳನ್ನು ಪಿಳಪಿಳನೆ ಹೊರಳಿಸುವ ಈ ನಮ್ಮ ಪುಟಾಣಿ  ಗೀಜಗನ ಗೂಡಿನಿಂದ ತಲೆ ಮಾತ್ರ ಹೊರಗೆ ಹಾಕಿ ಅಮ್ಮನ ದಾರಿ ಕಾಯುವ ಮುದ್ದು ಮರಿ ಹಕ್ಕಿಯ ನೆನಪು ತರುತ್ತಿದ್ದ. ಹೀಗೇ ಎರಡು ತಿಂಗಳುಗಳು ಕಳೆದುವು. ಈಗ ಮಗು ನಮ್ಮ ಮುಖ ನೋಡಿ ನಗುವುದನ್ನು ಕಲಿತಿತ್ತು. ನಾವು ಅದರ ಮೈಗೆ ಬಟ್ಟೆ ಸುತ್ತುವಾಗಲೆಲ್ಲ ಕಣ್ಣರಳಿಸಿ ತುಟಿಯಗಲಿಸಿ ಸಂತಸ ವ್ಯಕ್ತಪಡಿಸುತ್ತಿತ್ತು. ನಿದ್ದೆ ಹೋಗಿಬಿಡುತ್ತದಲ್ಲಾ ಎಂದುಕೊಂಡು ಮುದ್ದಿಸಬೇಕೆನ್ನುವ ತುಡಿತವನ್ನು ಕಷ್ಟಪಟ್ಟು ತಡೆಹಿಡಿದು ನಿದ್ದೆ ಮಾಡಿಸಿಬಿಡುತ್ತಿದ್ದೆವು. ನಿಧಾನವಾಗಿ ಬೇಸಿಗೆ ಕಾಲಿಟ್ಟಿತು. ಬಟ್ಟೆಯೊಳಗೆ ಬೆಚ್ಚಗೆ ಮಲಗಿರುತ್ತಿದ್ದ ಮಗು ರಾತ್ರಿ ನಿದ್ದೆಯಲ್ಲಿಯೇ ಮುಲುಗುಟ್ಟತೊಡಗಿತು. ಕಾರಣ ತಿಳಿಯಲಿಲ್ಲ. ಹಾಲೂಡಿಸಲೆಂದು ಮಗುವನ್ನು ಬಟ್ಟೆಯಿಂದ ಹೊರಕ್ಕೆ ತೆಗೆಯುವಾಗ ತಲೆಯಿಂದ ಕಾಲಿನವರೆಗೂ ಬೆವರಿ ಒದ್ದೆಯಾಗಿರುತ್ತಿತ್ತು. ತರ ಬೆವರಿದರೆ ಸೆಖೆಗಾಲದ ಇನ್ನಿತರ ಸಮಸ್ಯೆಗಳೂ ತಲೆದೋರಬಹುದೆಂಬ ಅರಿವಿದ್ದರೂ ನಾವೇನೂ ಮಾಡಲಾರದವರಾಗಿದ್ದೆವು. ನನ್ನ ಮೊಮ್ಮಗ  swaddle wrap ತಂತ್ರಕ್ಕೆ  ಅಷ್ಟು ಎಡಿಕ್ಟ್ ಆಗಿ ಹೋಗಿದ್ದ.

ಒಂದು ಮಧ್ಯಾಹ್ನ ಮಗಳೊಂದಿಗೆ ಪಟ್ಟಾಂಗ ಹೊಡೆಯುತ್ತಾ ಕುಳಿತಿದ್ದೆ. ಮಗು ಬರಿ ಮೈಯ್ಯಲ್ಲಿ ನಿದ್ದೆ ಮಾಡುತ್ತಿತ್ತು. ಯಾರೋ ಪೆಟ್ಟು ಕೊಟ್ಟು ಎಬ್ಬಿಸಿದಂತೆ ಮಗು ಎದ್ದು ಒಮ್ಮಿಂದೊಮ್ಮೆಗೇ ಅಳಲು ತೊಡಗಿತು. ಇಬ್ಬರೂ ರೂಮಿಗೆ ಧಾವಿಸಿದೆವು. ಮಗು ಕೈಕಾಲು ಬಡಿದು ಅಳುತ್ತಿತ್ತು. ಅಯ್ಯೋ ದೇವರೇ....ಇದೇನಾಗಿ ಹೋಯ್ತು..? ಹಾಸಿಗೆಯಲ್ಲಿ ಇರುವೆಯೇನಾದರೂ ಇದ್ದಿರಬಹುದೇ? ಅಥವಾ ಬೇರೇನಾದರೂ ಕ್ರಿಮಿಗಳು ಕಚ್ಚಿದ್ದಿರಬಹುದೇ? ಮಗುವಿನ ಮೈಯ ಇಂಚಿಂಚನ್ನೂ ಪರಿಶೀಲಿಸಿದೆವು. ಇಡೀ ಹಾಸಿಗೆಯನ್ನು ಜಾಲಾಡಿದೆವು. ಊಹೂಂ....ಏನೂ ಇಲ್ಲ. ಮಗುವಿನ ಧ್ವನಿಯಾದರೋ ನೋವಿನಿಂದ ಹೊರಹೊಮ್ಮುತ್ತಿತ್ತು. ಅದನ್ನು ಹೆಗಲಿಗೆ ಹಾಕಿಕೊಂಡು ಅಂಗಳಕ್ಕಿಳಿದೆ (ಎಷ್ಟೇ ಅಳುತ್ತಿದ್ದರೂ ಅಂಗಳಕ್ಕೆ ಕರೆದೊಯ್ದರೆ ಸುಮ್ಮನಾಗುತ್ತಿತ್ತು. ಹೊರಗಿನ ಹಸುರನ್ನು ಪಿಳಿ ಪಿಳಿ ಕಣ್ಣುಗಳಿಂದ ನೋಡುತ್ತಾ ಹಸಿವು ನಿದ್ದೆಗಳನ್ನು ಮರೆತೇ ಬಿಡುತ್ತಿತ್ತು). ಬೆನ್ನು ನೀವುತ್ತಾ ನಾನು ಐವತ್ತಮೂರು ವರ್ಷಗಳಲ್ಲಿ ಕೇಳಿದ ಎಲ್ಲಾ ಹಾಡುಗಳನ್ನೂ ಹಾಡಿದೆ. (ಪ್ರತಿ ಹಾಡಿಂದೂ ಬರೇ ಒಂದೆರಡು ಗೆರೆಗಳು...,ಅದೆಕ್ಕೇನು ತಿಳಿಯುತ್ತೆ...ಯಾವ ಹಾಡಿನ ಗೆರೆ ಯಾವುದು ಎಂದು) ಅಳು ಇನ್ನಷ್ಟು ಜೋರಾಯ್ತು. ಬಹುಷಃ ಅದಕ್ಕೆ ಅನಿಸಿರಬೇಕು, `ನನ್ನ ತಲೆಬಿಸಿಯೊಂದಿಗೆ ಇದೆಲ್ಲಿಯ ಕರ್ಮ...?' ಮಗಳೆಂದಳು, `ಸಾಕು ಬಿಡಮ್ಮ...,ಹಾಡೋದೇನೂ ಬೇಡಾ... ಅವ್ನಿಗೆ ಹಾಲು ಕೊಡ್ತೀನಿ....ಸೆಖೆಗೆ ಗಂಟಲು ಒಣಗಿದಂತಾಯ್ತೇನೋ....?' ಎನ್ನತ್ತಾ ಮಗನನ್ನು ಒಳಕ್ಕೊಯ್ದಳು. ಮಗು ಹಾಲು ಕುಡಿಯದೆ ಬಿಲ್ಲಿನಂತೆ ಹಿಂದಕ್ಕೆ ಬಾಗಿ ರಚ್ಚೆ ಹಿಡಿದು ಅಳತೊಡಗಿತು. ಅಷ್ಟರಲ್ಲಿ ಮಗುವಿನ ಅಜ್ಜ ಬಂದರು. ಯಾವಾಗಲೂ ಗಲಾಟೆಯಿಲ್ಲದೆ ಮಲಗಿರುತ್ತಿದ್ದ ಮಗು ತರ ಅಳುವುದನ್ನು ನೋಡಿ ಅವರೂ ಗಾಬರಿಯಾದರು. ಮಕ್ಕಳ ತಜ್ಞರಲ್ಲಿಗೆ ಹೋಗೋಣವೇನು ಎಂದು ಕೇಳಿದರು. ನೋಡೋಣ ಸ್ವಲ್ಪ ಇರಿ ಎಂದೆ. ಸ್ವಲ್ಪವೇ ಹೊತ್ತಿನಲ್ಲಿ ಆಸ್ಪತ್ರೆಯಿಂದ ಕರೆ ಬಂತೆಂದು ಅವರು ಹೋದರು. ಸಹಿಸಲಾರದ ಸೆಖೆಗೆ ಅಳುತ್ತಿರಬಹುದೇನೋ ಎಂದುಕೊಂಡು ಮಗುವನ್ನು ಸ್ನಾನ ಮಾಡಿಸಿದೆವು. ಫಲಿತಾಂಶ ಸೊನ್ನೆ. ಛೇ...ಆಗ ಇವರು ಕೇಳುವಾಗಲೇ ಡಾಕ್ಟರಲ್ಲಿಗೆ ಹೋಗಿಬಿಡಬಹುದಿತ್ತು ಎಂದು ಕೈ ಕೈ ಹಿಸುಕಿಕೊಂಡೆ. ಅದೇ ಹೊತ್ತಿಗೆ ನನ್ನ ಮೊಬೈಲು ಹಾಡತೊಡಗಿತು. ಅಸಹನೆಯಿಂದಲೇ ನೋಡಿದೆ, ಚಂದ್ರಮ್ಮ ಕರೆಯುತ್ತಿದ್ದಳು. ಬಾಣಂತನ ಮುಗಿಸಿ ಹೋಗಿದ್ದಳಲ್ಲಾ? ಈಗೊಂದೆರಡು ದಿನಗಳಿಂದ ಮಗುವಿನ ನೆನಪಾಗುತ್ತಿತ್ತಂತೆ. ಅದಕ್ಕಾಗಿ ಕರೆದೆ ಎಂದಳು. ಮಗುವಿನ ಅಳು ಕೇಳಿ `ಯಾಕೆ...?' ಎಂದು ಕೇಳಿದಳು. `...ಗೊತ್ತಿಲ್ಲ' ಎಂದೆ.
`ಮಗುವಿಗೇನೋ ಗಾಳಿ ದೋಷವಿರಬಹುದಕ್ಕಾ...., ಮಗುವನ್ನು ದೇವರ ಕೋಣೆಗೊಯ್ದು ದೀಪ ಹಚ್ಚಿ ದೇವರೆದುರು ತಾಯಿ ಮಗುವನ್ನು ಕುಳ್ಳಿರಿಸಿ ಇಬ್ಬರ ತಲೆಗೂ ಜೊತೆಯಾಗಿ ಒಂದು ನೂರು ರೂಪಾಯಿ ಸುಳಿದಿಟ್ಟು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳಿ. ನಾಳೆ ಮಗುವನ್ನು ದೇವಸ್ಥಾನಕ್ಕೊಯ್ದು ಹರಿಕೆ ತೀರಿಸಿಬಿಡಿ ಎಂದಳು. ಮಗುವಿನ nonstop ಅಳುವಿನಿಂದ ನಾವು ಎಷ್ಟು ಕಂಗೆಟ್ಟು ಹೋಗಿದ್ದೆವೆಂದರೆ ಯಾರು ಏನು ಹೇಳಿದರೂ ಮಾಡಲು ತಯಾರಿದ್ದೆವು. ದೇವರ ಕೋಣೆಯಲ್ಲಿನ ನಮ್ಮ ಗಡಿಬಿಡಿಯನ್ನು ಕಡೆಗಣ್ಣಿನಿಂದ ಗಮನಿಸುತ್ತಿದ್ದ ಮಗ (ಅವನು ವಾರದ ಕೊನೆಯೆಂದು ಮನೆಗೆ ಬಂದಿದ್ದ) ಉಕ್ಕಿ ಬಂದ ನಗುವನ್ನು ತಡೆದುಕೊಳ್ಳುತ್ತಿರುವುದನ್ನು ಗಮನಿಸಿ ಕಣ್ಣಿನಿಂದಲೇ ಅವನನ್ನು ಭಸ್ಮ ಮಾಡುವಂತೆ ನೋಡಿ ನನ್ನ ಕೆಲಸದಲ್ಲಿ ವ್ಯಸ್ತಳಾದೆ. ಹತ್ತು ನಿಮಿಷಗಳ ನಂತರ ಪುನಃ ಚಂದ್ರಮ್ಮ ನ ಕರೆ!
`ಯಾಕೆ ಇನ್ನೂ ಮಗು ಅಳು ನಿಲ್ಲಿಸಿಲ್ವಾ...?'
`ಇಲ್ಲಾ...,ಈಗ ಮಕ್ಕಳ ತಜ್ಞರಲ್ಲಿಗೆ ಹೊರಡ್ತಿದ್ದೀವಿ' ಅಳುವಿನಂಚಿನಲ್ಲಿತ್ತು ನನ್ನ ಮಗಳ ಧ್ವನಿ.
`ಅಯ್ಯೋ ಇಷ್ಟು ಚಿಕ್ಕ ವಿಷಯಕ್ಕೆಲ್ಲಾ ಡಾಕ್ಟರು ಯಾಕೆ? ಇಂತಹ ನೂರಾರು ಮಕ್ಕಳನ್ನ ನಾನು ಸರಿ ಮಾಡಿದೀನಿ....,ನೋಡೂ...., ಕುಂಬಳೆಯ ಬಾಲಕೃಷ್ಣನಿಗೊಂದು ಪ್ರಾರ್ಥನೆ ಮಾಡಿಕೋ...ಮಗುವಿನ ಹೆಸರಲ್ಲಿ ಒಂದು ಗೊನೆ ಬಾಳೇ ಹಣ್ಣು ಸಮರ್ಪಣೆ ಮತ್ತು ಒಂದು ಹಾಲು ಪಾಯಸ ಮಾಡಿಸ್ತೀನಿ ಅಂತ.....ಛೂ...ಮಂತರ್ ಅನ್ನೋ ತರ ಅವನ ಅಳು ಮಾಯವಾಗದಿದ್ರೆ ಮತ್ತೆ ನನ್ನನ್ನು ಕರೀರಿ ಆಯಿತಾ...?' ಎಂದಳು. ಈಗಂತೂ ನನ್ನ ಮಗ ಹೇಳಿಯೇ ಬಿಟ್ಟ,
`ಅಕ್ಕ, ನೀನೂ ಒಬ್ಬಳು ಡಾಕ್ಟರಾಗಿದ್ದುಕೊಂಡು ಇಂತಾದ್ದಕ್ಕೆಲ್ಲಾ ಕಿವಿ ಕೊಡ್ತಿದ್ದಿಯಲ್ಲಾ....ಮಗುವಿಗೆ ಕೋಲಿಕ್ ಪೈನ್ (ಹೊಟ್ಟೆಯಲ್ಲಿ ಗ್ಯಾಸ್ ತುಂಬಿ ನೋವು ಬರುವಂತಾದ್ದು) ಇರಬಹುದು. ಕವುಚಿ ಹಾಕಿ ಚೆನ್ನಾಗಿ ಬೆನ್ನಿಗೆ ತಟ್ಟಿ ನೋಡಲಾ...ಕೊಡಿಲ್ಲಿ ನನ್ನ ಕೈಗೆ....' ಎನ್ನುತ್ತಾ ಅವನು (ವೈದ್ಯಕೀಯ ವಿದ್ಯಾರ್ಥಿ) ಕೈ ಚಾಚಿದ. ನಾನು ಆಗಲೇ ಗೋಪಾಲ ಕೃಷ್ಣನಿಗೆ ಹರಿಕೆ ಹೊತ್ತಾಗಿತ್ತು!
ನನ್ನ ಮಗ ಕೂಡಲೇ ಕಾರ್ಯೋನ್ಮುಖನಾದ. ಅವನು ಶರ್ಟು ಹಾಕಿರಲಿಲ್ಲ. ಅವನಿಗೆ ತುಂಬಾ ಬೆವರುವ ಅಭ್ಯಾಸವಿರುವುದರಿಂದ ಮಗುವನ್ನು ಎತ್ತಿಕೊಳ್ಳುವಾಗ ಆತನ ಬರಿ ಮೈಯ್ಯ ಸ್ಪರ್ಷದಿಂದ ಮಗುವಿನ ಕೋಮಲ ಚರ್ಮಕ್ಕೆ ತೊಂದರೆಯಾಗುವುದು ಬೇಡವೆಂದು ತೆಳ್ಳಗಿನ ಬಟ್ಟೆಯೊಂದನ್ನು ಕೊಡುವಂತೆ ಕೇಳಿದ. ಅಲ್ಲೇ ಸೋಫಾದಲ್ಲಿ ಮಗುವನ್ನು ಸುತ್ತಿ ಕಟ್ಟುವ ಬಟ್ಟೆ ಬಿದ್ದುಕೊಂಡಿತ್ತು. ಅದನ್ನೇ ಬಾಚಿ ಕೊಟ್ಟೆ.
`ಅದನ್ನು spread ಮಾಡಿ ಕೊಡಮ್ಮ...,cover ಮಾಡಿ ಎತ್ಕೋತೇನೆ' ಎಂದ. ಅಭ್ಯಾಸ ಬಲದಿಂದ swaddle wrap ಮಾಡಲು ಬೇಕಾದಂತೆ ನನ್ನ ಕೈಗಳು ಕೆಲಸ ಮಾಡತೊಡಗಿದುವು. ಅದರ ಮೇಲೆ ರಚ್ಚೆ ಹಿಡಿದು ಅಳುತ್ತಿದ್ದ ಮಗುವನ್ನು ಮಲಗಿಸಿದೆ. ಏನಾಶ್ಚರ್ಯ...., ಸ್ವಿಚ್ ಅದುಮಿದಂತೆ ಮಗುವಿನ ಅಳು ನಿಂತೇ ಹೋಯ್ತು!! ನಿದ್ದೆ ಮಾಡುವವರಂತೆ ಕಣ್ಣುಗಳನ್ನು ತೇಲಿಸಿ ನೋಡತೊಡಗಿತು. ಹಾಗಾದರೆ...?ಹಾಗಾದರೆ...? ಇಷ್ಟರವರೆಗೂ ಮಗು ಅತ್ತಿದ್ಯಾಕೆ? ಆಗ ಮಗಳು ನೆನಪಿಸಿಕೊಂಡಳು,
`ಅಮ್ಮಾ ಭೀಕರ ಸೆಕೆಗೆ ಬಟ್ಟೆ ಸುತ್ತಿ ಮಲಗಿಸೋದು ಬೇಡಾ...ಹಾಗೇ ನಿದ್ದೆ ಮಾಡೋದನ್ನ ಅಭ್ಯಾಸ ಮಾಡಿಕೊಳ್ಳಲಿ ಎಂದು ಇವತ್ತು ಬೆಳಗ್ಗಿಂದಾ ನಾವು swaddle wrap ಮಾಡೇ ಇಲ್ವಲ್ಲಾ....ಅದಕ್ಕಾಗಿಯೇ ಅವನು ಸರಿಯಾಗಿ ನಿದ್ದೇನೇ ಮಾಡಿಲ್ಲ.... ಅಳು, ಅಸಹನೆ ಎಲ್ಲವೂ ಅದರಿಂದಾಗಿಯೇ ಇರಬೇಕು...,ಪಾಪ ಹೇಳೋಕೆ ಗೊತ್ತಿಲ್ವಲ್ಲಾ...? ಈವಾಗ ಅದು ಸಿಕ್ಕಿದ ತಕ್ಷಣ ಹೇಗೆ ನಿದ್ದೆಗೆ  ಜಾರ್ತಿದ್ದಾನೆ ನೋಡು...' ಎಂದಳು. ಬಟ್ಟೆಯ ಗಂಟಿನೊಳಗೆ ಮಲಗಿ ಮಗನ ಹೆಗಲ ಮೇಲೆ ಹಾಯಾಗಿ ನಿದ್ದೆ ಮಾಡುತ್ತಿದ್ದ ನನ್ನ ಮುದ್ದು ಮೊಮ್ಮಗ! ಹಾಡೂ ಬೇಡ....ಹಸೆಯೂ ಬೇಡ...ಎನ್ನುವಂತಿತ್ತು ಅವನ ಮುಖಭಾವ.

`ಹರಕೆಯ ನೂರು ರೂಪಾಯಿ, ಬಾಳೇಗೊನೆ, ಹಾಲು ಪಾಯಸದ ಹರಿಕೆ ತೀರಿಸಲು ಹೋಗೋದ್ಯಾವಾಗ...?' ಮಗ ಕೇಳಿದ (ಆತನ ಮುಖದಲ್ಲಿದ್ದ ಕೆಣಕುವ ನೋಟವನ್ನು ನಾನು ಕ್ಯಾರೇ ಎನ್ನಲಿಲ್ಲ). 
`ಹೇಗೂ ನಿನ್ನ ಕೈಯ್ಯಲ್ಲಿ ತಾನೇ ಆತನ ಅಳು ನಿಂತಿದ್ದು....ನೀನೇ ನಮ್ಮನ್ನು ದೇವಸ್ಥಾನಗಳಿಗೆ ಕರೆದೊಯ್ಯೋ ಮಾರಾಯಾ....' ಎಂದುಬಿಟ್ಟೆ. ಅಡಿಗೆ ಬಿದ್ದರೂ ಮೂಗು ಮೇಲೆ ಎಂಬಂತೆ.                  

        

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ