ಐನೂರು,
ಸಾವಿರದ ನೋಟುಗಳನ್ನು ಬೀಳ್ಕೊಡುವ ಗೌಜಿ ಗಲಾಟೆ ಗಡಿಬಿಡಿ.....,ಇನ್ನೂ ಮುಗಿದಿಲ್ಲ ಅಲ್ವೇ? ಆ ಭರಾಟೆಯೆಡೆಯಲ್ಲಿ ನನಗಾದ
ಅನುಭವವೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳೋದೇ ಈ ಬರೆವಣಿಗೆಯ ಉದ್ದೇಶ.
ಹಳೆ ನೋಟುಗಳ ವಿನಿಮಯಕ್ಕಾಗಿ
ಬ್ಯಾಂಕಿಂಗೆ ಹೋಗಲೆಂದು ಅಟೋಗಾಗಿ ಕಾಯ್ತಾ ಮನೆಯ
ಗೇಟಿನೆದುರು ನಿಂತಿದ್ದೆ. ನಮ್ಮ ಗೇಟಿಂದ ಒಂದ್ಹತ್ತು
ಹೆಜ್ಜೆ ದೂರದಲ್ಲಿ ಹೊರನೋಟಕ್ಕೆ ಬೇಡುವವರಂತೆ ಕಾಣುವ
ಓರ್ವ ಹೆಂಗಸೂ ಚಿಕ್ಕ ಹುಡುಗನೂ
ಒಂದು ಮರದ ನೆರಳಲ್ಲಿ ಕೂತಿದ್ದರು.
ಹುಡುಗ ಮೊಬೈಲಿನ ಹಾಗಿರುವ ವಸ್ತುವನ್ನು
(ಬಹುಶಃ ಅದು ಮೊಬೈಲೇ ಇರಬಹುದು)
ನೆಲದ ಮೇಲಿಟ್ಟು ಕೈಯ್ಯಲ್ಲಿರುವ ಕಲ್ಲಿನಿಂದ ಅದನ್ನು ಜಜ್ಜುತ್ತಿದ್ದ. ನಾನು
ಕುತೂಹಲದಿಂದ ಅದನ್ನು ಗಮನಿಸುತ್ತಾ ಇದ್ದಂತೆ
ನನ್ನೆದುರಿಗೆ ಅಟೋವೊಂದು ಬಂದು ನಿಂತಿತು, ಹತ್ತಿದೆ.
ನನ್ನನ್ನು ಹತ್ತಿಸಿಕೊಂಡ ಅಟೋ ಆ ಇಬ್ಬರೆದುರು
ನಿಂತಿತು. ಅಟೋ ಚಾಲಕ ಅವರಿಬ್ಬರನ್ನೂ
ವಾಚಾಮಗೋಚರ ಬೈದ. ಬೆದರಿದ ಇಬ್ಬರೂ
ಅಲ್ಲಿಂದ ಕಾಲು ಕಿತ್ತರು. ಇದೆಂತ
ಕತೆಯಪ್ಪಾ ಎಂದು ನಾನು ಬಿಟ್ಟ
ಕಣ್ಣು ಒಡೆದ ಬಾಯಿಂದ ನೋಡುತ್ತಲೇ
ಇದ್ದೆ. ಈಗ ರಿಕ್ಷಾ ಡ್ರೈವರ
ನನ್ನ ಕಡೆ ತಿರುಗಿ,
"ಅಕ್ಕಾ...,ಇಂತವ್ರನ್ನೆಲ್ಲಾ ಮನೆ ಪಕ್ಕ ಸೇರಿಸ್ಕೊಳ್ಬಾರ್ದು.
ಯಾರ್ದೋ ಮೊಬೈಲನ್ನ ಎಗರಿಸಿ ಸಿಮ್ ಕಾರ್ಡ್ ತೆಗೆಯೋಕೆ ಒದ್ದಾಡ್ತಾ ಇದ್ದಿದ್ದನ್ನ ನೀವೇ ನೋಡಿದ್ರಲ್ಲಾ? ಇಂತ
ಜನಗಳೆಲ್ಲಾ ಹಗಲಿಡೀ ಹೀಗೇ ಏನಾದ್ರೂ
ಮಾಡ್ತಾ ಸುತ್ತ ಮುತ್ತಲಿನ ಮನೆಗಳನ್ನ
ಗಮನಿಸ್ತಾ ಇರ್ತಾವೆ. ರಾತ್ರಿ ಹೊತ್ತಿಗೆ ಕಳ್ಳತನ,
ದರೋಡೆ ಮಾಡೋ ಗ್ಯಾಂಗು ಇವುಗಳದ್ದೇ..."
ಎಂದ.
ಡ್ರೈವರನ
ಮಾತು ಕೇಳಿ ನನಗೆ ಅಚ್ಚರಿಯಾಯಿತು.
ಆ ನರಪೇತಲ ನಾರಾಯಣರು
ದರೋಡೆಕೋರರೇ....? ಸಿನೆಮಾದಲ್ಲಿ, ದಿನಪತ್ರಿಕೆಗಳಲ್ಲಿ ನಾನು ನೋಡಿದ ಕಳ್ಳರ,
ದರೋಡೆಕೋರರ ಚಿತ್ರಕ್ಕೂ ಇವರ ಬಾಹ್ಯ ರೂಪಕ್ಕೂ
ಅರ್ಥಾರ್ಥ ಸಂಬಂಧವೇ ಇರಲಿಲ್ಲ...? ಇರಲಿ...ಇರಲಿ....,ಯಾವ ಹುತ್ತದಲ್ಲಿ ಯಾವ
ಹಾವೋ....? ಅಂತೂ ಈ ಡ್ರೈವರ
ಅವರನ್ನು ಓಡಿಸಿ ನನಗಿಂದು ಮಹದುಪಕಾರವನ್ನೇ
ಮಾಡಿದ ಎಂದುಕೊಂಡೆ. ಬ್ಯಾಂಕಿನೆದುರು ಅಟೋದಿಂದ ಇಳಿಯುವಾಗ ಕಳ್ಳರ
ಬಗ್ಗೆ ನನಗೆ ಅರಿವು ಮೂಡಿಸಿದ್ದಕ್ಕೆ
ಆತನಿಗೆ ಕೃತಜ್ಞತೆಯನ್ನೂ ಹೇಳಿದೆ. ನೋಟು ವಿನಿಮಯದ
ಕ್ಯೂ ಎಂಬ ಮಹಾಸಾಗರಲ್ಲಿ ನಾನೊಂದು
ಬಿಂದುವಾದೆ. ನನ್ನ ಸರದಿಗಾಗಿ ಕಾಯುತ್ತಾ
ಸುಮ್ಮನೆ ನಿಂತಿರುವಾಗ ಮಾಡುವುದಾದರೂ ಏನನ್ನು? ಎದುರಿಗಿರುವವರನ್ನು ಗಮನಿಸತೊಡಗಿದೆ.
ನನ್ನಿಂದ ನಾಲ್ಕೈದು ಜನರಷ್ಟು ಮುಂದೆ ಓರ್ವ
ಅಜ್ಜಿ ನಿಂತಿದ್ದಳು. ಸುಮಾರು ಅರುವತ್ತು ಎಪ್ಪತ್ತರ
ಪ್ರಾಯ. ಕೈಚೀಲ, ಕೊಡೆ ಇತ್ಯಾದಿಗಳ
ಭಾರ, ಗಂಟೆಗಟ್ಲೆ ನಿಂತುದಕ್ಕೆಯೋ ಏನೋ...ಆಯಾಸದಿಂದ ಅಜ್ಜಿ
ತುಂಬಾ ಕಂಗಾಲಾದ ಹಾಂಗೆ ತೋರಿತು.
ತುದಿ ಕಾಣದ ಈ ಸಾಲಿನಲ್ಲಿ
ಅಜ್ಜಿಯ ಸರದಿ ಬರಲು ಆಕೆ
ಇನ್ನೂ ಎಷ್ಟು ಹೊತ್ತು ನಿಲ್ಲಬೇಕೋ
ಏನೋ...? ಇಲ್ಲಿಗೆ ಬರಲು ಬಹುಶಃ
ಅಜ್ಜಿಯ ಮನೆಯಲ್ಲಿ ಬೇರಾರೂ ಇಲ್ಲವೇನೋ.....ಮಕ್ಕಳೆಲ್ಲ
ದೂರದ ಊರಲ್ಲಿರಬಹುದು....,ಚೀಲದಲ್ಲಿ ಊಟದ ಡಬ್ಬಿಯನ್ನೂ ಹಾಕಿ
ತರಬಹುದಾಗಿತ್ತು....ಹೀಗೆಲ್ಲಾ ಅವಳ ಬಗ್ಗೆ ಯೋಚಿಸುತ್ತಾ
ಸುಮ್ಮನೇ ಹಿಂದಕ್ಕೆ ತಿರುಗಿ ನೋಡಿದೆ. ಅರೇ....ನನ್ನಿಂದ ಒಂದಷ್ಟು ಹಿಂದೆ
ಅದೇ ಅಟೋ ಡ್ರೈವರ ನಿಂತಿದ್ದ.
ನನ್ನನ್ನು ಗಮನಿಸಿ ಮುಗುಳ್ನಕ್ಕ.
ಸುಮಾರು ಒಂದು ಘಂಟೆ
ಕಳೆಯುವಷ್ಟರಲ್ಲಿ ಕ್ಯೂ ಕರಗಿ....ಕರಗಿ...ಅಜ್ಜಿಯ ಸರದಿ ಬಂತು.
ನೋಟು ವಿನಿಮಯ ಮುಂಗಟ್ಟೆ ಕಡೆಗೆ
ಅಜ್ಜಿ ಪುಟು ಪುಟುನೆ ಹೆಜ್ಜೆ
ಇಡುತ್ತಿದ್ದಂತೆಯೇ ಚೀಲದಿಂದ ಒಂದಷ್ಟು ನೋಟಿನ
ಕಂತೆಗಳನ್ನು ತೆಗದು ಕೈಯ್ಯಲ್ಲಿ ಹಿಡಿಯುವ
ತಯಾರಿ ನಡೆಸಿದಳು. ಅಚಾನಕ್ಕಾಗಿ ಅವಳ ಕೈಯಿಂದ ಐನೂರರ
ಒಂದು ನೋಟು ಕೆಳಕ್ಕೆ ಬಿತ್ತು.
ಗ್ರಾಹಕರ ತಳ್ಳಾಟದಲ್ಲಿ ಅಜ್ಜಿಗೆ ಅದು ಗಮನಕ್ಕೆ
ಬರಲೇ ಇಲ್ಲ. ಆ ಕ್ಷಣದಲ್ಲಿ
ವಿಲಕ್ಷಣ ಘಟನೆಯೊಂದು ನಡೆಯಿತು. ಕಣ್ಣೆವೆ ಪಿಳುಕಿಸುವುದರೊಳಗೆ ಸಾಲಿನ
ಹಿಂಬದಿಯಲ್ಲಿದ್ದ ಆ ಅಟೋ ಡ್ರೈವರ
ಅಲ್ಲಿ ಪ್ರತ್ಯಕ್ಷನಾದ. ನೆಲದಲ್ಲಿ ಬಿದ್ದಿದ್ದ ಆ ನೋಟನ್ನು ಸರಕ್ಕನೆ ಎತ್ತಿ ತನ್ನ
ಜೇಬಿನೊಳಕ್ಕೆ ಇಳಿಸಿ ಮಂಗ ಮಾಯವಾಗಿಬಿಟ್ಟ!
ಇದ್ಯಾವುದರ ಪರಿವೆಯೂ ಇಲ್ಲದಿದ್ದ ಅಜ್ಜಿ
ನೋಟುಗಳು ತುಂಬಿದ್ದ ಕೈಯ್ಯನ್ನು ಮುಂಗಟ್ಟೆಯೊಳಗೆ
ಚಾಚಿ ನಿಂತಿದ್ದಳು. ಆ ಘಟನೆಗೆ ಸಾಕ್ಷಿಯಾದ
ನಾನು (ಬೇರೆಯವರೂ ಇದನ್ನು ಗಮನಿಸಿರಬಹುದೇನೋ) ಮರಗಟ್ಟಿಹೋದೆ.
ಹಿಂದಿನಿಂದ ಜೋರಾಗಿ ತಳ್ಳುವಾಗ ಎಚ್ಚರಗೊಂಡು
ಮುಂದಕ್ಕೆ ಹೋದೆ. ಆ ಜನಸಂದಣಿಯಲ್ಲಿ
ಅಜ್ಜಿ ಎಲ್ಲಿ ಹೋದಳೋ....ನೋಟಿನ
ಲೆಕ್ಕ ತಪ್ಪಿದಾಗ ಏನು ಮಾಡಿದಳೋ...ಒಂದೂ
ನನಗೆ ಗೊತ್ತಾಗಲಿಲ್ಲ. ಆದರೆ ಅಂದಿನಿಂದ ಇಂದಿನವರೆಗೂ
ಪ್ರಶ್ನೆಯೊಂದು ನನ್ನನ್ನು ಕಾಡುತ್ತಲೇ ಇದೆ,
ನಮ್ಮ ಮನೆಯ ಪಕ್ಕದಲ್ಲಿ ಕೂತಿದ್ದ
ಆ ಕಡುಬಡವರು, ಅವರಿಗೆ
ಛೀಮಾರಿ ಹಾಕಿದ ಅಟೋ ಡ್ರೈವರು,
ಸುತ್ತಲಿನ ಪರಿವೆಯೇ ಇಲ್ಲದಿದ್ದ ಅಜ್ಜಿ,
ಈ ಎಲ್ಲರಿಗೂ, ಎಲ್ಲದಕ್ಕೂ
ಮೂಕ ಸಾಕ್ಷಿಯಾಗಿದ್ದ ನಾನು...., ಈ ಇಷ್ಟೂ ಜನರಲ್ಲಿ
ನಿಜವಾದ ಸುಭಗರು ಯಾರು....??
ಇಂತಹ ಘಟನೆಗಳು ಮನುಷ್ಯರನ್ನೇ ನಂಬದಂತೆ ಮಾಡುತ್ತವೆ - ಯಾವ ಹುತ್ತದೊಳಗೆ ಯಾವ ಹಾವು ??
ಪ್ರತ್ಯುತ್ತರಅಳಿಸಿ