ತಮ್ಮ ದೇಹದ ಮೂಳೆಗಳನ್ನು ಸವೆಯಿಸುವ ರಕ್ಕಸ ತನ್ನೊಳಗನ್ನು ವ್ಯಾಪಿಸಿದ್ದಾನೆ ಎಂದು ತಿಳಿದಾಗ ನಮ್ಮ ಶ್ಯಾಮತ್ತೆ ದೈಹಿಕವಾಗಿ ಕಂಗಾಲಾದರು. ಆದರೇನಂತೆ? ಅವರ ಮನಸ್ಸಿನ ದೃಢತೆಗೆ ಅವರೇ ಸಾಟಿ. ಆಸ್ಟಿಯೋಪೋರೋಸಿಸ್ ಅಲ್ಲ, ಅದರ ಅಜ್ಜನೆೇ ಬಂದರೂ ತನ್ನನ್ನೇನು ಮಾಡೀತು ಎಂಬಂತೆ ಮಕ್ಕಳು ಸೊಸೆಯಂದಿರು ಬೇಡ.., ಬೇಡ ಎಂದರೂ ಕೇಳದೆ ಆ ದೊಡ್ಡ ಮನೆಯ ಉದ್ದಕ್ಕೂ ಎಂದಿನಂತೆ ಓಡಾಡಿ ಕೆಲಸವನ್ನು ಹಚ್ಚಿಕೊಳ್ಳುತ್ತಿದ್ದರು . ಗ್ರೈಂಡರಿನಲ್ಲಿ ಸುತ್ತುತ್ತಿರುವ ಹಿಟ್ಟಿನ ಹದವನ್ನು ಅವರುನೋಡದಿದ್ದರೆ ದೋಸೆ ಸರಿಯಾಗುವುದು ಹೇಗೆ? ಹತ್ತೋ ಹನ್ನೆರಡೋ ಆಳುಕಾಳುಗಳ ಕಾಫಿ, ತಿಂಡಿ, ಊಟ ಇತ್ಯಾದಿಗಳ ಉಸ್ತುವಾರಿ ನೋಡದಿದ್ದರೆ ಮನೆ ನಡೆಯುವುದಾದರೂ ಹೇಗೆ? ಚಕ್ಕುಲಿ, ಹಪ್ಪಳ, ಉಪ್ಪಿನಕಾಯಿಗಳಂತೂ ಅವರು ಕೈಯಾಡಿಸದಿದ್ದರೆ ಅವು ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂಬಂತಾಗುವುದೇ ಸೈ(ಹಾಗೆಂದು ಅವರ ಬಲವಾದ ನಂಬಿಕೆ). ವಿಪರೀತ ಕಾಲುನೋವು, ಸೊಂಟನೋವು ಬಂದಾಗ ಒಂದಷ್ಟು ಹೊತ್ತು ಕುಳಿತುಕೊಳ್ಳುವರು. ಮತ್ತೆ ಯಥಾಪ್ರಕಾರ ಕೆಲಸದ ಯಂತ್ರ. ಬೆಳ್ಳಂಬೆಳಗ್ಗೆ ಎದ್ದು ತಾವು ಉಟ್ಟ ಕಾಸರಗೋಡು ಹ್ಯಾಂಡ್ಲೂಮ್ ಸೀರೆಯ ನಿರಿಗೆಯನ್ನು ಎತ್ತಿ ಸೆರಗನ್ನು ಸೊಂಟಕ್ಕೆ ಸುತ್ತಿ ಕಟ್ಟಿಕೊಂಡರೆಂದರೆ ಮತ್ತವುಗಳು ಕೆಳಗಿಳಿಯುವುದು ರಾತ್ರಿ ಮಲಗುವಾಗಲೇ. ಇಂತಹ ಶ್ಯಾಮತ್ತೆ ಇತ್ತೀಚೆಗೆ ಕಡ್ಡಾಯವಾಗಿ ಕುರ್ಚಿ ಗೆ ಅಂಟಿಕೊಳ್ಳಬೇಕಾಗಿ ಬಂತು. ಸಿ.ಟಿ.ಸ್ಕ್ಯಾನ್, ಎಮ್,ಆರ್, ಐ. ಎಲ್ಲವೂ ಮೊದಲೇ ಆಗಿತ್ತಲ್ಲ?ಶ್ಯಾಮತ್ತೆ ಬಿದ್ದು ಗಿದ್ದು ಹೋದರೆ ಮಲ್ಟಿಪಲ್ ಫ್ರಾಕ್ಚರ್ ಆಗುವ ಸಾಧ್ಯತೆ ಬಹಳ ಇದೆಯೆಂದು ಎರಡು ವರ್ಷ ಹಿಂದೆಯೇ ತಜ್ಞ ವೈದ್ಯರು ಎಚ್ಚರಿಸಿದ್ದರು. ವಾಕರ್ ಇದ್ದರೂ ಅದು ಸೋಫಾದ ಬೆನ್ನಿಗೆ ಆಧಾರವಾಗಿಯೋ ಮೇಜಿನ ಕಾಲಿಗೆ ಜೊತೆಯಾಗಿಯೋ ಇರುವುದೇ ಹೆಚ್ಚು. ಹಾಗೆ ಒಂದು ದಿನ ಅವರು ಏನೋ ಕೆಲಸದ ನೆನಪಾಗಿ ಲಟ್ಟೆಂದು ಎದ್ದು ಅಡುಗೆ ಕೋಣೆಯ ಕಡೆಗೆ ಹೆಜ್ಜೆ ಹಾಕಿದರು. ಧಡಾರ್ ಎಂದು ಬಿದ್ದು ಬಿಟ್ಟರು. ಮಕ್ಕಳು ಕೂಡಲೇ ಅಮ್ಮನನ್ನು ಆಸ್ಪತ್ರೆಗೆ ಸಾಗಿಸಿದರು. ಶ್ಯಾಮತ್ತೆಯ ಧರ್ಮಕರ್ಮಗಳೇ ಅವರನ್ನು ಕಾಯ್ದದ್ದಿರಬೇಕು. ಫ್ರಾಕ್ಚರ್ ಆಗಿರಲಿಲ್ಲ. ಆದರೆ ನೆಲಕ್ಕೆ ಬಡಿದ ದೇಹದ ಭಾಗ ನೀಲಿಗಟ್ಟಿ ಹೋಯ್ತು. ವಿಪರೀತ ನೋವು ತಿನ್ನಬೇಕಾಗಿ ಬಂತು. ಕಾಲು ಅಲ್ಲಾಡಿಸಲೂ ಸಾಧ್ಯವಿಲ್ಲದಂತಾಯ್ತು. ದಿನನಿತ್ಯದ ಔಷಧಿ, ಮಾತ್ರೆಗಳ ಜೊತೆಗೆ ಮತ್ತೊಂದಷ್ಟು ಸೇರ್ಪಡೆಯಾಯ್ತು. ನಡೆಯುವಾಗ ಕಾಲಿಗೆ ಸೀರೆ ತೊಡರಿದಂತಾಗಿ ಬಿದ್ದುಬಿಟ್ಟೆ ಎಂದು ಅವರೇ ನಂತರದ ದಿನಗಳಲ್ಲಿ ಸೊಸೆಯೊಂದಿಗೆ ಹೇಳಿಕೊಂಡಿದ್ದರಂತೆ. ಒಂದು ದಿನ ಅತ್ತೆಯ ಮೂಡು ಚೆನ್ನಾಗಿರುವ ಹೊತ್ತು ನೋಡಿ ಸೊಸೆ ದೊಡ್ಡ ಬೆಣ್ಣೆ ಮುದ್ದೆಯನ್ನುತಯಾರುಮಾಡಿಕೊಂಡು ಅವರೆದುರು ಹಾಜರಾದಳು.
"ಅತ್ತೇ..."
"ಏನಮ್ಮಾ..."
"ಮತ್ತೇನೂ ಇಲ್ಲಾ....,ಅತ್ತೇ...ಮೊನ್ನೆ ನೀವು ಬಿದ್ದುಬಿಟ್ರಲ್ಲಾ...,ನಿನ್ನೆಯೂ ಅಷ್ಟೆ, ಸ್ನಾನದ ನಂತರ ಸೀರೆ ಉಡುವಾಗ ಜೋಲಿತಪ್ಪಿದ್ರಲ್ಲಾ....ಅದರ ಸೆರಗು ನಿರಿಗೆ ರವಿಕೆ ಎಲ್ಲವನ್ನೂ ಒಂದೊಂದಾಗಿ ಮಾಡಿಕೊಳ್ಳುವ ಹೊತ್ತಿಗೆ ನೀವು ಸುಸ್ತಾಗಿ ಹೋಗ್ತಿರಲ್ಲ ....?
"ಹೂಂ...ಹೌದು...ತುಂಬ ಕಷ್ಟ ಆಗ್ತಿದೆ...."
ಸೊಸೆಗೆ ತನ್ನ ಕೈಯ್ಯಲ್ಲಿನ ಬೆಣ್ಣೆ ಕರಗುವ ಮೊದಲು ಕೆಲಸ ಮುಗಿಸಬೇಕಿತ್ತು.
"ಹೌದತ್ತೆ..., ನಾವು ರಾತ್ರಿ ನೈಟಿ ಹಾಕೋದೂ ಅದೇ ಉದ್ದೇಶಕ್ಕೇ, ನಿದ್ದೆ ಕಣ್ಣಲ್ಲಿ ಏಳುವಾಗ ಮೈಮೇಲಿನ ಬಟ್ಟೆಯ ಪರಿವೆ ಇರೋದಿಲ್ಲ, ಅದು ಸೀರೆಯಾಗಿದ್ದರಂತೂ ಪಜೀತಿ ಹೇಳೋದೇ ಬೇಡಾ..., ಬಿದ್ದು ಗಿದ್ದು ಆಗಿಬಿಟ್ರೇ..., ನಾವೇ ತಾನೇ ಅನುಭವಿಸ್ಬೇಕು? ನಮ್ಗೂ ಐವತ್ತೆಲ್ಲ ದಾಟಿತಲ್ವಾ...?"
"ಹೌದಮ್ಮ, ಪ್ರಾಯ ಆಗ್ತಾ ನಮ್ಮ ಎಚ್ಚರಿಕೆಯಲ್ಲಿ ನಾವು ಇರ್ಬೇಕು..."
"ಹೌದತ್ತೆ, ನಿಮ್ಮ ಅನುಭವ ನಮಗೆಲ್ಲಿದೆ? ಮೊದಲು ನೀವು ಚೆನ್ನಾಗಿರ್ಬೇಕು....,ಆ ಮೇಲೆ ನಮ್ಮದು..."
ಶ್ಯಾಮತ್ತೆಗೆ ಸೊಸೆಯ ಇಂಗಿತ ಅರ್ಥವಾಗದೆ ಆಕೆಯೆಡೆಗೆ ಪ್ರಶ್ನಾರ್ಥಕವಾಗಿ ನೋಡಿದರು.
"ಅತ್ತೇ....ನೀವೂ ನೈಟಿ ಹಾಕಿ ಒಂದು ಟ್ರಯಲ್ ನೋಡ್ತೀರಾ...?"
"ಏನು!? ನಾನು ಆ ಮಾನಗೆಟ್ಟ ಲಂಗ ಹಾಕೋದಾ...?"
ಸೊಸೆ ಉಗುಳುನುಂಗುತ್ತಾ ಹೇಳಿದಳು
"ಅಲ್ಲತ್ತೇ...ಈಗ ನಮ್ಗೆ ಹೇಗೆ ಬೇಕೋ ಹಾಗೆ ನೈಟಿ ಹೊಲಿದು ಕೊಡ್ತಾರೆ. ನೀವು ಹೇಗೆ ಹೇಳಿದ್ರೆ ಹಾಗೆ....ಬೇಡವೇ ಬೇಡ ಅನ್ನೋದಾದ್ರೆ ನಾನು ಒತ್ತಾಯ ಮಾಡೋದಿಲ್ಲ, ಮೊನ್ನೆ ನೀವು ಬಿದ್ದ ಲಾಗಾಯ್ತಿನಿಂದ ಪಡ್ತಿರೋ ಕಷ್ಟ ನೋಡಿ ಹೇಳಿದ್ದಷ್ಟೆ"
ಶ್ಯಾಮತ್ತೆ ಮೌನವಾದರು. ಊಟ, ತಿಂಡಿ, ಟಾಯ್ಲೆಟ್ಟು, ಬಾತ್ರೂಂ... ಹೀಗೆ ಎಲ್ಲದಕ್ಕೂ ಅವರಿಗೀಗ ಸೊಸೆಯ ಸಹಾಯ ಬೇಕೇ ಬೇಕಾಗಿತ್ತು. ಬೆಳಗ್ಗೆ ಸ್ನಾನ ಮುಗಿಸಿ ಸೀರೆ ಉಡುವ ಪ್ರಕ್ರಿಯೆಯೇ ಒಂದು ಯಜ್ಞ ಎನ್ನುವಷ್ಟು ಸಾಕಾಗಿ ಹೋಗುತ್ತಿತ್ತು. ಬವಳಿ ಬಂದಂತಾಗಿ ಮಂಚದಲ್ಲಿ ಕೂತೇ ಹೇಗೋ ಸೀರೆಯೊಂದನ್ನು ಸುತ್ತಿಸಿಕೊಂಡಿದ್ದರು. ಪರರಿಗೆ ಉಪಕಾರ ಮಾತ್ರ ಮಾಡಿ ಗೊತ್ತಿದ್ದ ಜೀವ. ಈಗ ಪರಾವಲಂಬಿಯಾಗಬೇಕಾಗಿ ಬಂದುದು ಬಹಳ ಕಿರಿಕಿರಿಯೆನಿಸಿತ್ತು. ಯಾವತ್ತಿಗೂ ಇನ್ನೊಬ್ಬರಿಗೆ ತೊಂದರೆ ಕೊಟ್ಟು ಗೊತ್ತಿಲ್ಲದ ಅವರಿಗೆ ಸೊಸೆ ಹೇಳಿದ ಮಾತುಗಳಲ್ಲಿಯೂ ಹುರುಳಿದೆ ಅನಿಸಿತ್ತು.
"ಹೂಂ...ಹೇಗೆ ಬದುಕಿದ್ದವಳು ನಾನು! ಈಗ ಆ ಗತಿಗೆಟ್ಟ ಲಂಗ ಹಾಕುವಲ್ಲಿಗೆ ಬಂತಲ್ಲಾ...? ಅಲ್ಲಾ....,ಈಗೀಗ ಮಾರ್ಕೆಟಿಗೆ ಹೊಗುವಾಗಲೂ ಅದನ್ನು ಹಾಕ್ತಾರಂತೆ....ಮತ್ತಿನ್ನು ಮನೆಯೊಳಗೇ ಇರುವ ನನಗೇನಂತೆ...?" ತನ್ನಲ್ಲೇ ಎಂಬಂತೆ ಗೊಣಗಿಕೊಂಡರು.
ಸೊಸೆ ಬಹು ಜಾಗರೂಕತೆಯಿಂದ ಹೇಳಿದಳು.
"ಹೋ...ಪರ್ವಾಗಿಲ್ಲ ಅತ್ತೆ..., ನಿಮ್ಮ ಮನಸ್ಸಿಗೆ ಅದು ಒಗ್ಗುವುದಿಲ್ಲ ಅಂತ ತೋರಿದ್ರೆ ಬಿಟ್ಟು ಬಿಡೋಣ"
"ಹಾಗಲ್ಲಾ...ನನ್ನ ಕೆಲಸ ನನ್ಗೇ ಮಾಡಿಕೊಳ್ಳಲು ಆಗುವುದಿಲ್ಲವೆಂದ ಮೇಲೆ ಮನಸ್ಸನ್ನ ಒಗ್ಗಿಸಿಕೊಳ್ಳಲೇ ಬೇಕಲ್ಲ?"
"ಹಾಗಾದ್ರೆ ನೈಟಿ ಹೊಲಿಸೋದಾ...?"
ಶ್ಯಾಮತ್ತೆ ಮೌನವಾಗಿ ತಲೆಯಲ್ಲಾಡಿಸಿದರು. ಬೆಣ್ಣೆ ಹಚ್ಚಿದ್ದು ಕೆಲಸಕ್ಕೆ ಬಂತು ಎನ್ನುವ ಸಮಾಧಾನದ ಜೊತೆಗೆ ಇನ್ನೂ ಅಲ್ಲೇ ನಿಂತರೆ ಅತ್ತೆ ಮನಸ್ಸು ಬದಲಾಯಿಸಬಹುದು ಎಂಬ ಅಂಜಿಕೆಯೂ ಸೇರಿ ಒಂದು ಕ್ಷಣವೂ ವ್ಯರ್ಥಮಾಡದೆ ಕೂಡಲೇ ಟೈಲರನ್ನು ಬರ ಹೇಳಿದಳು. (ಸುಮಾರು ಆರು ತಿಂಗಳಿನಿಂದ ಮಕ್ಕಳು, ಸೊಸೆಯಂದಿರು ಶ್ಯಾಮತ್ತೆಯ ಮನವೊಲಿಸುವ ಪ್ರಯತ್ನದಲ್ಲಿ ವಿಫಲರಾಗಿದ್ದರು). ಅರ್ಧಗಂಟೆಯಲ್ಲಿ ಟೈಲರಮ್ಮ ಹಾಜರಾದಳು. ಆಕೆ ಅಳತೆ ಟೇಪು ಹಿಡಿದು ಅವರ ಮುಂದೆ ನಿಂತಾಗ ಸೊಸೆ ಅತ್ತೆಯ ಕೈಹಿಡಿದು ನಿಲ್ಲಿಸಿದಳು.
"ಏನಮ್ಮಾ ನಾನು ಹೇಳಿದ ಹಾಗೇ ಆ ಲಂಗವನ್ನು ಹೊಲಿದು ಕೊಡ್ತೀಯಾ?" ಶ್ಯಾಮತ್ತೆಯ ಪ್ರಶ್ನೆಗೆ ಆಕೆ ನಗು ಮುಖದಿಂದಲೇ ಉತ್ತರಿಸಿದಳು,
"ಓ..ಖಂಡಿತಾ..."
"ನೋಡೂ...ಆ ಲಂಗ ಕಾಲಿಗೆ ತೊಡರಿಕೊಳ್ಳದ ಹಾಗೆ ಹೊಲಿ. ಅದನ್ನ ಹಾಕ್ಕೊಂಡ್ರೆ ಸೆಖೆ ಆಗ್ಬಾರ್ದು. ಎದೆಯ ಭಾಗ ಪೂರ್ತಿ ಮುಚ್ಚುವ ಹಾಗೆ ಒಂದು ಸೆರಗು ಇರಲಿ. ಅದು ಹೆಚ್ಚು ಉದ್ದ ಬೇಡ. ಕೈಉಜ್ಜಿಕೊಳ್ಳಲು ಸಿಗುವ ಹಾಗೆ ಇರಲಿ. ಸೊಂಟದಲ್ಲಿ ಟವೆಲು ಸಿಗಿಸುವ ವ್ಯವಸ್ತೆ ಮಾಡಮ್ಮಾ. ಇನ್ನೇನಾದ್ರೂ ಬೇಕಿದ್ರೆ ಮುಂದೆ ಸೊಸೆ ತಿಳಿಸ್ತಾಳೆ..." ಎನ್ನುತ್ತಾ ಸೊಸೆಯ ಮುಖ ನೋಡಿದರು.
"ಹೌದು. ಏನು ಮಾಡ್ಬೇಕು ಹೇಳಿ ಅತ್ತೆ, ಮುಂದಿನ ಕ್ಷಣದಲ್ಲಿ ಅದು ರೆಡಿಯಾಗಿ ಬಿಡ್ತದೆ."
ಟೈಲರಮ್ಮ ಹೋದ ನಂತರ ಶ್ಯಾಮತ್ತೆ ಗಂಭೀರವಾಗಿ ಯೋಚಿಸತೊಡಗಿದರು. ನೈಟಿಯಲ್ಲಿ ಬೇರೇನೂ ಬದಲಾವಣೆ ಬೇಡ ಎಂದು ತೋರಿತು. ಅದನ್ನೇ ಸೊಸೆಯ ಬಳಿ ಹೇಳಿದರು.
ಮಾರನೆಯ ದಿನವೇ ನೈಟಿ ಬಂತು.
"ಅತ್ತೇ...ಒಮ್ಮೆ ಟ್ರಯಲ್ ನೊಡೋದಾ..?" ನೈಟಿ ಕೈಯ್ಯಲ್ಲಿ ಹಿಡಿದು ಸೊಸೆ ಕೇಳಿದಾಗ ಶ್ಯಾಮತ್ತೆ ಉಗುಳು ನುಂಗಿಕೊಂಡರು. ಸುಮಾರು ಎಪ್ಪತ್ತು ವರ್ಷ ಸಂಗಾತಿಯಾಗಿದ್ದ ಸೀರೆಯನ್ನು ಬೀಳ್ಕೊಡುವ ಸಂದರ್ಭ ತಮ್ಮ ಜೀವನದಲ್ಲಿ ಬಂದೀತೆಂದು ಅವರು ಎಣಿಸಿರಲೇ ಇಲ್ಲ. ತುಂಬಿ ಬಂದ ಕಣ್ಣನ್ನು ಸೊಸೆಗೆ ಕಾಣದಂತೆ ಸೆರಗಿನಿಂದ ಉಜ್ಜಿಕೊಂಡರು(ಇನ್ನೆಲ್ಲಿ ಈ ಭಾಗ್ಯ ಎನಿಸಿತೆನೋ? ಸೆರಗನ್ನು ಆಪ್ಯಾಯತೆಯಿಂದ ನೇವರಿಸಿದರು). ಸಾವರಿಸಿಕೊಂಡು ಹೇಳಿದರು,
"ಅದನ್ನು ಮೊದೆಲು ಒಗೆದು ಹಾಕಿಬಿಡು, ಯಾರ್ಯಾರ ಕೈಯ್ಯಲ್ಲೋ ಮುಟ್ಟಿಸಿಕೊಂಡ ಅದನ್ನು ನಾನು ಹಾಕೋದಾ...?"
"ಸರಿ ಅತ್ತೆ"
ಬೀಸುವ ದೊಣ್ಣೆ ತಪ್ಪಿ ಹೋಯ್ತು ಎಂಬಂತೆ ಶ್ಯಾಮತ್ತೆ ನಿಡಿದಾಗಿ ಉಸಿರನ್ನೆಳೆದುಕೊಂಡರು.
ಮಾರನೆಯ ದಿನ ಶ್ಯಾಮತ್ತೆಯ ಸ್ನಾನ ಮುಗಿಯುತ್ತಲೂ ಸೊಸೆ ನೈಟಿಯೊಂದಿಗೆ ಹಾಜರ್! ಸೊಸೆಯ ನಗುಮುಖದೆದುರು ಶರಣಾಗದೆ ಬೇರೆ ದಾರಿಯಿರಲಿಲ್ಲ. ಹಾಗೆ ನೈಟಿ ಶ್ಯಾಮತ್ತೆಯನ್ನಲಂಕರಿಸಿತು. ತಾಯಿಯನ್ನು ತೊರೆದ ತಬ್ಬಲಿಯಂತಹ ಅವರ ಮುಖಭಾವವನ್ನು ನೋಡಿ ಸೊಸೆಗೆ ಅಯ್ಯೋ ಎನಿಸಿತು. ಆದರೇನು ಮಾಡೋಣ? ನಡೆಯುವಾಗ ಹೆಜ್ಜೆ ಹೆಜ್ಜೆಗೂ ಮುಗ್ಗುರಿಸುವ ಶ್ಯಾಮತ್ತೆಗೆ ಸೀರೆ ದೊಡ್ಡ ತೊಡಕೇ ಆಗಿತ್ತು.
ಸೆರಗಿರುವ ಹೊಸ ನಮೂನೆಯ ನೈಟಿ, ಕುರ್ತಾದ ಮೇಲೆ ದುಪ್ಪಟ್ಟಾ ಇರುವ ಹಾಗೆ ಬಿಲ್ಟ್ ಇನ್ ದುಪ್ಪಟ್ಟಾವೊಂದು ನೈಟಿಯ ಭುಜದಿಂದ ಭುಜಕ್ಕೆ ಹೊಲಿಯಲ್ಪಟ್ಟಿತ್ತು. ಸೊಂಟದಲ್ಲೊಂದು ಪಟ್ಟಿ, ಅದರಲ್ಲಿ ಪ್ರತ್ಯೇಕ ಪ್ರತ್ಯೇಕ ಜೇಬುಗಳಂತಹ ರಚನೆಗಳು, ಒಂದು ಟವೆಲಿಗೆ, ಇನ್ನೊಂದು ಕನ್ನಡಕಕ್ಕೆ, ಮತ್ತೊಂದು ಗಂಟೆ ನೋಡಿಕೊಳ್ಳಲು ದೊಡ್ಡ ಸಂಖ್ಯೆಗಳಿರುವ ರಿಸ್ಟ್ ವಾಚ್ ಹಾಕಿಕೊಳ್ಳಲು . ಹೀಗೆ ಸರ್ವಾಲಂಕಾರಗೊಂಡ ನೈಟಿ ಹಾಕಿದ ಶ್ಯಾಮತ್ತೆಯ ಫೋಟೋ ಕುಟುಂಬದ ವ್ಯಾಟ್ಸ್ಯಪ್ ಗ್ರೂಪಿನಲ್ಲಿ ಹರಿದಾಡಿತು.
`ವಾವ್....ಅಜ್ಜಿ ಲುಕ್ಸ್ ಸೋ ಯಂಗ್...'
`ಅಜ್ಜಿ ಲುಕ್ಸ್ ಲೈಕ್ ಆನ್ ಏಂಜಲ್..'
ಇತ್ಯಾದಿ ಮೆಚ್ಚುಗೆಗಳ ಮಹಾಪೂರವೇ ಹರಿದು ಬಂತು. ಒಬ್ಬ ಮೊಮ್ಮಗನಂತೂ,
`ಅಜ್ಜಿಯ ಸೈಝ್ ಕಳಿಸಿ, ನಾನು ಯು.ಎಸ್.ಎ. ದಿಂದ ಬರೋವಾಗ ಲೇಟೆಸ್ಟ್ ಮಾಡೆಲ್ ನೈಟಿ ತರ್ತೇನೆ' ಅಂತ ಸಂಭ್ರಮಿಸಿದ.
ಶ್ಯಾಮತ್ತೆಗೆ ಎಲ್ಲವನ್ನೂ ವಿವರಿಸಿ ಹೇಳಲಾಯಿತು. ಎಲ್ಲವನ್ನೂ ಆಲಿಸಿದ ಶ್ಯಾಮತ್ತೆ ಉಸಿರಿದ್ದು ಒಂದೇ ವಾಕ್ಯ,
"ಇದರ ಮೇಲೆ ಸೀರೆ ಉಟ್ಟುಕೊಂಡು ಪಟ(ಫೋಟೋ) ತೆಗೆಯಬಹುದಿತ್ತೇನೋ..."
ಸಂಜೆಯಾಯಿತು, ಸೊಸೆಗೆ ಬುಲಾವ್ ಹೊಯ್ತು. ಗಿಡಗಳಿಗೆ ನೀರು ಹಾಕುತ್ತಿದ್ದ ಸೊಸೆ ಓಡಿ ಬಂದಳು.
"ನೊಡಮ್ಮಾ ನನ್ನ ಕಾಲುಗಳಿಗೆ ಸೊಳ್ಳೆ ಕಚ್ತಾ ಇದೆ. ಸೀರೆ ಉಡ್ತಿರೊವಾಗ ಈ ಕಿರಿ ಕಿರಿ ಇರಲಿಲ್ಲ. ಕಾಲಿನ ಅಡಿಭಾಗಕ್ಕೆ ಸೀರೆಯನ್ನು ಎಳೆದುಕೊಳ್ಳಬಹುದಿತ್ತು...."
ಶ್ಯಾಮತ್ತೆಯ ಪೇಚಾಟ ನೋಡಿ ಸೊಸೆಗೆ ಮರುಕ ಹುಟ್ಟಿತು.
"ಅತ್ತೇ.., ಸೊಳ್ಳೆ ಕಚ್ಚದ ಹಾಗೆ ಒಡೊಮಸ್ ಹಚ್ಚಲಾ?"
"ಬೇಡಮ್ಮ, ಅದರ ವಾಸನೆ ಸಹಿಸಕ್ಕಾಗಲ್ಲ"
"ಸೊಳ್ಳೆ ಮ್ಯಾಟ್ ಉರಿತಾನೇ ಇದೆಯಲ್ಲಾ ಅತ್ತೇ...,ಇನ್ನೇನು ಮಾಡೋಣ?"
"ನೀನು ಆ ಟೈಲರಮ್ಮನ್ನ ನಾಳೆ ಬರ್ಲಿಕೆ ಹೇಳ್ತಿಯಾ?"
"ಈಗಲೇ ಹೇಳಿಬಿಡ್ತೇನೆ ಅತ್ತೆ."
ಅರ್ಧ ಗಂಟೆಯೊಳಗೆ ಟೈಲರಮ್ಮ ಹಾಜರಾದಳು.
"ನೋಡಮ್ಮಾ, ವಿಪರೀತ ಸೊಳ್ಳೆ ಕಚ್ತಾ ಇದೆ. ಈ ಲಂಗದ ಕೆಳಭಾಗಕ್ಕೆ ನನ್ನ ಹಳೆಯ ಸೀರೆಯನ್ನು ತುಂಡು ಮಾಡಿ ಸೇರಿಸಿ ಕೊಡ್ತಿಯಾ?"
ಸೊಸೆ ಎನೋ ಹೇಳಲು ಬಾಯಿ ತೆರೆದವಳು ಹಾಗೇ ನುಂಗಿಕೊಂಡಳು.
"ಸರಿಯಮ್ಮ, ನಾಳೆ ರೆಡಿ ಮಾಡಿ ತರ್ತೇನೆ."
ನೈಟಿ ಹೋದ ಸಂಭ್ರಮದಲ್ಲಿ ಶ್ಯಾಮತ್ತೆ ಪುನಃ ಸೀರೆಯೊಳಗೆ ಬಂಧಿಯಾದರು, ನಿಶ್ಚಿಂತೆಯಿಂದ ಕೂತು ಟಿ.ವಿ. ಸೀರಿಯಲ್ ನೋಡಿದರು.
ಮಾರನೆಯ ದಿನ ನೈಟಿ ಹೊಸ ಅವತಾರದಲ್ಲಿ ಶ್ಯಾಮತ್ತೆಯೆದುರು ಬಂದು ನಿಂತಿತು. ಮಲತಾಯಿಯನ್ನು ನೋಡುವಂತೆ ಅದರೆಡೆಗೆ ದೃಷ್ಟಿ ಹಾಯಿಸಿದರು. ನೈಟಿಯ ಕೆಳಭಾಗದ ಸುತ್ತಲೂ ಅಷ್ಟುದ್ದಕೆ ಸೀರೆಯ ತುಂಡು ಜೋತಾಡುತ್ತಿತ್ತು.
"ಅತ್ತೇ..., ಇದು ಕಾಲಿಗೆ ತೊಡರಿಕೊಳ್ಳಬಹುದಲ್ಲ?"
"ನಡೆಯುವಾಗ ಕೈಯ್ಯಲ್ಲಿ ಎತ್ತಿ ಹಿಡಿದರಾಯ್ತು ಬಿಡು" ಎಂದರು.
ಹಾಗಾದರೆ ವಾಕರ್ ಹಿಡಿಯೋದು ಹೇಗೆ? ಎನ್ನುವ ಪ್ರಶ್ನೆಯನ್ನು ಕೇಳಲಾರದೆ ಹೋದಳು ಸೊಸೆ.
ಪುನಃ ಶ್ಯಾಮತ್ತೆಯ ಹೊಸ ಅವತಾರ ಕುಟುಂಬದ ವಾಟ್ಸ್ಯಾಪ್ ಗ್ರೂಪಲ್ಲಿ ಹರಿದಾಡಿತು.
`ವಾವ್....,ಲೇಡಿ ಡಯಾನಾಳ ಗವನು ಇದ್ದಹಾಗಿದೆ. ಅಜ್ಜಿಯ ತಲೆಗೊಂದು ಕಿರೀಟ ಇಟ್ಟು ಫೊಟೋ ಕಳ್ಸಿ'
`ಅಯ್ಯೋ...,ಇದಕ್ಕಿಂತಲೂ ಸೊಳ್ಳೆ ಪರದೆಯ ತುಂಡುಗಳನ್ನು ಜೋಡಿಸಬಹುದಿತ್ತು...' ಇತ್ಯಾದಿಯಾಗಿ ಹೊಸ ಕಮೆಂಟುಗಳೂ ಹರಿದಾಡಿದುವು.
ಈ ಸಲ ಅದನ್ನು ಶ್ಯಾಮತ್ತೆಗೆ ಓದಿ ಹೇಳುವ ಧೈರ್ಯವನ್ನು ಯಾರೂ ಮಾಡಲಿಲ್ಲ.
ಮಾರನೆಯ ದಿನ ಧೋ... ಎಂದು ಮಳೆ ಸುರಿಯತೊಡಗಿತು. ಒಳಗೇನೋ ಕೆಲಸದಲ್ಲಿದ್ದ ಸೊಸೆಯನ್ನು ಶ್ಯಾಮತ್ತೆ ಕರೆದರು.
"ನೋಡಮ್ಮಾ..., ಈ ಲಂಗದೊಳಗೆ ರವಿಕೆಯ ವ್ಯವಸ್ತೆ ಇಲ್ವಲ್ಲಾ? ಹೊರಗಿನ ತಂಪು ಹವೆಗೆ ಮೈಯೆಲ್ಲ ತೆರೆದಿಟ್ಟ ಹಾಗೆ ಆಗ್ತಿದೆ"
"ಹೌದಾ ಅತ್ತೆ? ಹಾಗಾದರೆ ಒಂದು ಸ್ವೆಟರ್ ಕೊಡಲಾ?"
"ಥೂ...ಅದೆಲ್ಲ ಬೇಡ, ಉಸಿರು ಕಟ್ಟಿ ಹೊದೀತು. ನನ್ನ ರವಿಕೆಯನ್ನೇ ಇದರೊಳಗಡೆ ಹಾಕ್ತೇನೆ"
"ಸರಿ ಅತ್ತೆ" ಸೊಸೆ ಅತ್ತೆಗೆ ರವಿಕೆ ಹಾಕಲು ಸಹಾಯ ಮಾಡಿದಳು.
"ಅಯ್ಯೋ ರಾಮಾ....ಇದರ ಕೈ ಈ ಲಂಗದ ಕೈಯಿಂದ ಹೊರಗೆ ಇಣುಕುತ್ತಲ್ಲಪ್ಪಾ...?" ಶ್ಯಾಮತ್ತೆ ಅಳುವುದೊಂದೇ ಬಾಕಿ ಇತ್ತು.
"ಅದಕ್ಯಾಕತ್ತೆ ಅಷ್ಟು ಬೇಜಾರು ಮಾಡ್ಕೊಳ್ತೀರಾ? ನಾನು ರವಿಕೆಯ ಕೈಯ್ಯನ್ನು ಗಿಡ್ಡ ಮಾಡಿ ಕೊಡಲಾ?"
"ಅಷ್ಟೊಂದು ಉಪಕಾರ ಮಾಡಿಬಿಡಮ್ಮ"
ಅಲ್ಪ ಸ್ವಲ್ಪ ಹೊಲಿಗೆಯನ್ನು ಬಲ್ಲ ಸೊಸೆ ಅರ್ಧಗಂಟೆಯಲ್ಲಿ ಅದನ್ನು ಸರಿ ಮಾಡಿ ಅತ್ತೆಯ ಮುಂದೆ ಹಿಡಿದಳು.
ಮಾರನೆಯ ದಿನ ದೂರದ ಬೆಂಗಳೂರಿನಿಂದ ಶ್ಯಾಮತ್ತೆಯ ತೌರಿನ ಕಡೆಯ ಸಂಬಂಧಿಕರ ಫೋನು ಬಂತು, `ಶ್ಯಾಮತ್ತೆ ಬಿದ್ದು ನೋವು ಮಾಡಿಕೊಂಡಿದ್ದಾರಂತಲ್ಲ? ನಾವೆಲ್ಲ ಚಿಕ್ಕೋರಿರೋವಾಗ ಅವರ ಕೈತುತ್ತು ತಿಂದಿದ್ದಕ್ಕೆ ಲೆಕ್ಕವಿಲ್ಲ. ಅವರ ಋಣ ತೀರಿಸಲಂತೂ ಸಾಧ್ಯಾನೇ ಇಲ್ಲ. ಕೊನೇಪಕ್ಷ ಊರಿಗೆ ಬಂದಿದ್ದಾಗಲಾದರೂ ಅವರ ಜೊತೆಗೆ ಒಂದರ್ಧ ಗಂಟೆ ಇದ್ದು ಹೊಗ್ತೀವಿ. ನಾವು ಆರು ಜನ ಬರ್ತಿದ್ದೀವಿ ..'ಎಂಬ ಸುದ್ದಿ ಶ್ಯಾಮತ್ತೆಗೂ ಹೋಯ್ತು. ಸೊಸೆಯಂದಿರು ಕಾಲಿಗೆ ಚಕ್ರ ಕಟ್ಟಿಕೊಂಡು ತಿಂಡಿ, ಊಟದ ತಯಾರಿಯಲ್ಲಿ ಮುಳುಗಿ ಹೋದರು. ನೆಂಟರು ಬರಲು ಇನ್ನೇನು ಒಂದೆರಡು ಘಂಟೆ ಇದೆ ಎನ್ನುವಾಗ ಶ್ಯಾಮತ್ತೆಗೆ ಚಡಪಡಿಕೆ ಶುರುವಾಯ್ತು. `ಹೇಳಲಾರೆ, ಹೇಳದಿರಲಾರೆ...' ಎನ್ನುವಂತಹ ಘಟ್ಟಕ್ಕೆ ತಲುಪಿದರು. ಇನ್ನು ತಡೆಯಲು ಸಾಧ್ಯವೇ ಇಲ್ಲ ಎನ್ನುವಾಗ ಸೊಸೆಯನ್ನು ಕರೆದರು.
"ಏನತ್ತೇ..." ಶ್ಯಾಮತ್ತೆಯ ಚಡಪಡಿಕೆಯ ಧ್ವನಿ ಕೇಳಿ ಆತಂಕದಿಂದಲೇ ಕೈಯ್ಯಲ್ಲಿದ್ದ ಕೆಲಸವನ್ನು ಅಲ್ಲೇ ಬಿಟ್ಟು ಓಡಿ ಬಂದಿದ್ದಳು ಸೊಸೆ.
"ನೊಡಮ್ಮಾ...ನಾನು ಹೀಗೆ ಹೇಳ್ತೇನೆ ಅಂತ ಬೇಜಾರು ಮಾಡ್ಕೋಬೇಡ. ಮನೆಗೆ ಅತಿಥಿಗಳು ಬರೋವಾಗ ನಾನು ಈ ವೇಷದಲ್ಲಿದ್ದರೆ ಏನು ಚಂದ ಹೇಳು? ಈ ಲಂಗ ಹಾಕಿ ಕೂತರಂತೂ ಬಿಚ್ಚೋಲೆ ಗೌರಮ್ಮನ ತರ ಕಾಣ್ತೀನಿ. ಕುತ್ತಿಗೆಯಲ್ಲಿರೋ ಸರಗಳೆಲ್ಲ ಒಳಗೆ ಹೂತು ಹೋದಂತೆ ಕಾಣುತ್ತೆ. ಅದೂ ಅಲ್ಲದೆ ಈ ಅವತಾರದಲ್ಲಿ ಅವರ್ಯಾರೂ ನನ್ನನ್ನ ನೋಡೇ ಇಲ್ಲ. ಲಕ್ಷಣವಾಗಿ ಸೀರೆ ಉಡೋದು ಬಿಟ್ಟು ಇದ್ಯಾಕತ್ತೆ ಈ ಅಪದ್ಧದ ಲಂಗ ಅಂತ ಕೇಳಿದರೆ ನಾನೇನು ಹೇಳಲಿ?"
ಶ್ಯಾಮತ್ತೆಯ ದೀನ ಸ್ವರ, ಕಂಗೆಟ್ಟು ಹೋದ ಮುಖಭಾವ ನೋಡಿ ಸೊಸೆಯ ಕರಳು ಚುರುಕ್ ಎಂದಿತು.
ನೆಂಟರು ಬಂದರು. ಅವರೆಲ್ಲರ ಮುಖಭಾವ ಗಂಭೀರವಾಗಿತ್ತು. ಅವರ ಕಲ್ಪನೆಯಲ್ಲಿ ನಿಸ್ತೇಜರಾಗಿ ಹಾಸಿಗೆ ಹಿಡಿದ ಶ್ಯಾಮತ್ತೆಯ ಚಿತ್ರವಿತ್ತೇನೋ? ಶ್ಯಾಮತ್ತೆಯೆಂಬ ರೋಗಿಯನ್ನು ನೋಡಲು ಬರಿಕೈಯ್ಯಲ್ಲಿ ಬರುವುದೇ? ಕೈ ತುಂಬಾ ಹಣ್ಣಿನ ಪ್ಯಾಕೆಟ್ಟುಗಳು, `ಬೇಗ ಆರೋಗ್ಯ ಮರುಕಳಿಸಲಿ' ಎಂಬ ಹಾರೈಕೆಯ ಸ್ಟಿಕರುಗಳು ರಾರಾಜಿಸುತ್ತಿದ್ದ ಹೂವಿನ ಗುಚ್ಛ ಇತ್ಯಾದಿಗಳೊಡನೆ ನೆಂಟರು ಮನೆಯನ್ನು ಪ್ರವೇಶಿಸಿದರು.
ಹಾಲಿನ ಸೊಫಾದಲ್ಲಿ ನಮ್ಮ ಶ್ಯಾಮತ್ತೆ ವಿರಾಜಮಾನರಾಗಿದ್ದಾರೆ. ಸ್ನಾನ ಮುಗಿಸಿ ತಲೆಯನ್ನು ಒಪ್ಪವಾಗಿ ಬಾಚಿ ಗರಿಗರಿಯಾದ ಕಾಸರಗೋಡು ಹ್ಯಾಂಡ್ಲೂಂ ಸೀರೆ ಉಟ್ಟು ಕುತ್ತಿಗೆಯಲ್ಲಿನ ಎರಡ್ಮೂರು ಸರಗಳನ್ನು ಸೆರಗಿನ ಮೇಲೆ ನೀಟಾಗಿ ಕಾಣುವಂತೆ ಹಾಕಿಕೊಂಡಿದ್ದಾರೆ. ಮುಖದ ಶೋಭೆಗೆ ಕನ್ನಡಕ ಇನ್ನಷ್ಟು ಮೆರಗನ್ನು ಕೊಟ್ಟಿತ್ತು. ವಾಕರನ್ನು ಅತಿಥಿಗಳಿಗೆ ಕಾಣದಂತೆ ಒಳಗಿಡಲು ಬೆಳಗ್ಗೆಯೇ ಸೊಸೆಗೆ ತಾಕೀತು ಮಾಡಿದ್ದಾರೆ.
"ಬನ್ನಿ...ಬನ್ನಿ...ಕೂತ್ಕೊಳ್ಳಿ..." ಎನ್ನುತ್ತಾ ನಗುಮುಖದಿಂದ ಶ್ಯಾಮತ್ತೆ ನೆಂಟರನ್ನು ಸ್ವಾಗತಿಸಿದರು. ತಮ್ಮ ಪಕ್ಕದಲ್ಲೇ ಕೈಮಾಡಿ ತೋರಿಸುತ್ತಾ,
"ಇಲ್ಲೇ ಬನ್ನಿ...ಕೂತ್ಕೊಳ್ಳಿ....ಹೋ...ಇದ್ಯಾರೂ..? ನಮ್ಮ ಗೋಪಾಲನ ಮೊಮ್ಮಗುವಾ...?ಕೊಡಿಲ್ಲಿ...ಎತ್ತಿಕೊಳ್ತೇನೆ ಒಮ್ಮೆ..." ಎನ್ನುತ್ತಾ ಕೈಮುಂದಕ್ಕೆ ಚಾಚಿದರು.
ನೆಂಟರು ತಮ್ಮ ಕಣ್ಣನ್ನು ತಾವೇ ಚಿವುಟಿಕೊಳ್ಳುವ ಹಂತಕ್ಕೆ ಮುಟ್ಟಿದ್ದರು. ಶ್ಯಾಮತ್ತೆಗೆ ಉಶಾರಿಲ್ಲ ಎಂಬ ಸುದ್ದಿ ಹೇಗೆ ಹುಟ್ಟಿಕೊಂಡಿತು ಎಂದು ಅವರೆಲ್ಲ ಮನಸ್ಸಲ್ಲೇ ತಲೆಕೆರೆದುಕೊಂಡರು. ಶ್ಯಾಮತ್ತೆ ಮಗುವನ್ನು ನೋಡಿ ನಗುನಗುತ್ತಲೇ ಬಳಿಯಲ್ಲಿ ನಿಂತಿದ್ದ ಸೊಸೆಯೊಡನೆ ಪಿಸುಧ್ವನಿಯಲ್ಲಿ ಏನೋ ಹೇಳಿದರು. ಕ್ಷಣದಲ್ಲಿ ಆಕೆ ಒಳಗೆ ಹೋಗಿ ಬಂದಳು. ಮಗುವನ್ನು ತಮ್ಮ ಮಡಿಲಲ್ಲಿ ಕುಳ್ಳಿರಿಸಿಕೊಂಡು ನೂರು ರೂಪಾಯಿಯನ್ನು ಅದರ ಕೈಗಿಟ್ಟು ಹರಸಿದರು. ನಂತರ ಗೋಪಾಲನನ್ನು ನೋಡುತ್ತಾ ಯೋಗಕ್ಷೇಮ ವಿಚಾರಿಸಿಕೊಂಡರು. ಅವರ ದೃಷ್ಟಿ ಆತನ ಕೈಯಲ್ಲಿರುವ ಹಣ್ಣಿನ ಪ್ಯಾಕೆಟ್ಟುಗಳ ಮೇಲೆ ಬಿತ್ತು.
"ಏ ಮಾರಾಯಾ... ಯಾಕೋ ಇಷ್ಟೆಲ್ಲ ಹಣ್ಣುಗಳನ್ನ ತರೋಕೆ ಹೋದೆ? ಸುಮತೀ...,(ಗೋಪಾಲನ ಪತ್ನಿ) ನಿನ್ನ ಕೈಯ್ಯಲ್ಲಿರೋ ಹೂವಿನ ಕಟ್ಟ ನೋಡಿದ್ರೆ ಎಲ್ಲೋ ಮದುವೆ ಮನೆಗೆ ಹೊರಟ ಹಾಗಿದೆಯಲ್ಲ?" ಎಂದೆಲ್ಲಾ ಅತ್ಮೀಯವಾಗಿ ವಿಚಾರಿಸಿಕೊಂಡರು.
ನಂತರ ಸೊಸೆಯನ್ನು ನೊಡುತ್ತಾ ಹೇಳಿದರು,
"ವೀಣಾ, ಎಲ್ಲಾ ಹಣ್ಣುಗಳನ್ನೂ ಚಿಕ್ಕದಾಗಿ ಹೆಚ್ಚಿ ಫ್ರೂಟ್ ಸಲಾಡ್ ಮಾಡಿಬಿಡಮ್ಮ....ಆರೊಗ್ಯಕ್ಕೂ ಒಳ್ಳೇದು, ಗೋಪಾಲನಿಗೆ ಫ್ರೂಟ್ ಸಲಾಡ್ ತುಂಬಾ ಇಷ್ಟ, ಅಲ್ವೇನೋ?
ಕೈ ಸ್ವಲ್ಪ ಬಿಡುವಾದಾಗ ಹೂಗಳನ್ನ ಮಾಲೆ ಮಾಡಿಬಿಡಮ್ಮ. ದೇವರಿಗೂ ಇಡು, ಉಳಿದದ್ದನ್ನ ನೀವೆಲ್ರೂ ಹಂಚಿಕೊಂಡು ತಲೆಗಿಟ್ಟುಕೊಳ್ಳಿ" ಎಂದಾಗ ಗೋಪಾಲನ ಹೆಂಡತಿ ಹೂಗುಚ್ಛದಲ್ಲಿ ಅಂಟಿಸಿಟ್ಟ `ಗೆಟ್ ವೆಲ್ ಸೂನ್' ಎಂಬ ಸ್ಟಿಕ್ಕರನ್ನು ಶ್ಯಾಮತ್ತೆಗೆ ಕಾಣದಂತೆ ತೆಗೆಯಲು ಹೆಣಗಿದಳು.
