ಗುರುವಾರ, ಜೂನ್ 8, 2017

ಅಭಯನ ಅಭ್ಯಂಜನ



ಮಗಳ ಬಾಣಂತನವೆಂಬ ಅನಿರ್ವಚನೀಯ ಅನುಭವಗಳ ರಾಶಿಯಿಂದ ಆಯ್ದ ಆಣಿ ಮುತ್ತುಗಳನ್ನು ನಿಮ್ಮೆದುರು ಸುರಿಯುತ್ತಿದ್ದೇನೆ ಎಂದು ಕಳೆದ ಸಲವೇ ಹೇಳಿದ್ದೆನಲ್ಲ? ಇಗೊಳ್ಳಿ ಇನ್ನೊಂದಷ್ಟು....
 ಕ್ರಿಕೆಟ್ ಆಟದಲ್ಲಿ expert opinion ಗೆ ಭಾರೀ ಬೆಲೆಯಿದೆಯಲ್ಲವೇ? ಆದರೆ ಕೆಲವೊಮ್ಮೆ ಸಾಮಾನ್ಯ ಕಮೆಂಟೇಟರುಗಳ ವಾಚಾಳಿತನವನ್ನೂ ಮೀರಿಸುವಂತಹ ಎಕ್ಸ್ಪರ್ಟುಗಳೂ ಇರುತ್ತಾರಲ್ಲ? ಆಗ ಕಮೆಂಟೇಟರುಗಳ ಜಾಗದಲ್ಲಿ ಕುಳಿತವರಿಗೇನು ಕೆಲಸ? ಬರಿದೇ ನೊಡುತ್ತಾ ತಲೆಯಾಡಿಸುತ್ತಾ yes...yes...exactly...ಎನ್ನುತ್ತಿರುವುದು ಅಲ್ಲವೇ? ನನ್ನ ಮಗಳ ಬಾಣಂತನದ ಜವಾಬ್ದಾರಿ ಚಂದ್ರಮ್ಮನ ಹೆಗಲಿಗೆ ಬಿದ್ದ ಮೇಲೆ ನಮ್ಮ ಪಾತ್ರ ಸಾಮಾನ್ಯ ಕಮೆಂಟೇಟರುಗಳಿಗೆ ಸಮಾನವಾಯ್ತು. ಅವಳು ಹೇಳುತ್ತಿದ್ದುದೆಲ್ಲವೂ expert opinionಗಳೇ . ನಾವು ಬರಿದೇ ತಲೆಯಾಡಿಸುವ ಚನ್ನಪಟ್ಣದ ಬೊಂಬೆಗಳೇ ಆದೆವು! ಈಗ ಮಗುವಿನ ಸ್ನಾನದ ವಿಷಯಕ್ಕೆ ಬರೋಣ. ಸಿಸೇರಿಯನ್ ಶಸ್ತ್ರಕ್ರಿಯೆಯ ಮೂಲಕ ಮಗಳ ಹೆರಿಗೆಯಾದುದರಿಂದ ಏಳುದಿನಗಳ ಕಾಲ ಆಸ್ಪತ್ರೆಯಲ್ಲೇ ಇದ್ದು ಹೊಲಿಗೆಯನ್ನು ತೆಗೆಸಿಯೇ ಮನೆಗೆ ಹಿಂತಿರುಗೋಣ ಎಂದು ನಿಶ್ಚೈಸಿದ್ದೆವು. ಮಗುವನ್ನು ಸ್ನಾನ ಮಾಡಿಸಿ ತರುವಾಗಲೆಲ್ಲ ಆಸ್ಪತ್ರೆಯ ನರ್ಸಮ್ಮ ,
"ಎಲ್ಲಾ ಮಕ್ಕಳಂತೆ ನಿಮ್ಮ ಮಗು ಸ್ನಾನ ಮಾಡಿಸುವಾಗ ಗಲಾಟೆ ಮಾಡುವುದಿಲ್ಲ, ಸ್ನಾನವನ್ನು ಎಂಜಾಯ್ ಮಾಡುತ್ತೆ..." ಎನ್ನುತ್ತಿದ್ದಳುಸ್ನಾಮಾಡಿಸುವಾಗ ನವಜಾತ ಶಿಶುಗಳು ಅಳುವುದಿಲ್ಲವೆಂದಾದರೆ ಸ್ನಾನ ಮಾಡಿಸುವವರಿಗೆ ಅದೊಂದು ವರವೇ ಸರಿ. ಮಗು ಅಳುತ್ತಾ ಕೈಕಾಲು ಬಡಿದು ಹೊರಳಾಡುತ್ತಿದ್ದರೆ ನೀರು ಕಿವಿಗೆ, ಮೂಗಿಗೆ ಹೋಗುವ ಅಪಾಯವಿದ್ದೇ ಇರುತ್ತದಲ್ಲವೇ? ಹಸಿಯಾಗಿರುವ ಹೊಕ್ಕುಳ ಬಳ್ಳಿಯ ಬಗ್ಗೆಯೂ ನಿಗಾ ವಹಿಸಬೇಕಿರುತ್ತದೆ. ನಮ್ಮ ಅಭಯ(ಮೊಮ್ಮಗ) ವಿಚಾರದಲ್ಲಿ ಚಿಂತೆ ಮಾಡಬೇಕಿಲ್ಲವೆಂದು ನರ್ಸಮ್ಮ ಹೇಳಿದಾಗ ನಿರಾಳವೆನಿಸಿತ್ತು. ಮನಗೆ ಬಂದು ಒಂದೆರಡು ದಿನ ನಾನೇ ಸ್ನಾನವನ್ನೂ ಮಾಡಿಸಿದೆ. ಒಂದು ಬಕೆಟು ಬಿಸಿ ನೀರಿದ್ದರೆ ಐದೇ ನಿಮಿಷದಲ್ಲಿ ಮಗುವಿನ ಜಳಕ ಮುಗಿಯುತ್ತಿತ್ತು. ಸ್ನಾನ ಮಾಡಿಸಿ ತಲೆ,ಮೈಗಳ ಒದ್ದೆ ಉಜ್ಜಿ ಹಾಲುಕುಡಿಸಿ ಬಟ್ಟೆ ಹೊದೆಸಿ ಮಲಗಿಸಿ ಬಿಟ್ಟರೆ ಚೆನ್ನಾಗಿ ನಿದ್ದೆ ಮಾಡಿಬಿಡುತ್ತಿದ್ದ. ಚಂದ್ರಮ್ಮ ಬಂದಳು ನೋಡಿ...,
"ಅಯ್ಯೋ.., ಇದೆಂತಾ ಸ್ನಾನ ಮಾರಾಯ್ರೇ ನಿಮ್ಮದು? ಕಾಗೆ ಸ್ನಾನ...,ಮಕ್ಕಳ ಬೆಳವಣಿಗೆಗೆ ನಿದ್ದೆ, ನೀರು ಎಷ್ಟು ಮುಖ್ಯ ಗೊತ್ತಾ? ತರಾ ಸ್ನಾನ ಮಾಡಿಸಿದ್ರೂ ಒಂದೇ ಮಾಡಿಸದಿದ್ರೂ ಒಂದೇ..." ಎಂದುಬಿಟ್ಟಳು!
ಅಯ್ಯೋ ದೇವರೇ...ಇದೇನಾಗಿ ಹೋಯ್ತು...ಹಾಗಾದರೆ ಹತ್ತು ದಿನಗಳ ಕಾಲ ವೇಸ್ಟಾಗಿ ಹೋಯ್ತಲ್ಲಾ....ಛೇ...ಹತ್ತೈವತ್ತು ಬಾಣಂತನ ಮಾಡಿದ ಅನುಭವಿ ಚಂದ್ರಮ್ಮ ಹೇಳಿದ್ದೂ ಸರಿಯೇ. ನಮ್ಮ ನಾಮ್ಕೇ ವಾಸ್ತೇ ಸ್ನಾನದಿಂದ ಮಗವಿಗೆ ಏನೂ ಪ್ರಯೋಜನವಿಲ್ಲದೆ ಹೋಯ್ತಲ್ಲಾ ಎಂದು ಮಗಳೊಡನೆ ಹೇಳಿಕೊಂಡು ಕೈ ಕೈ ಹಿಸುಕಿಕೊಂಡೆ. ಮಗಳಿಗೂ ಹೌದೆನಿಸಿತು. ಮುಂದೆ ಚಂದ್ರಮ್ಮನ ಮಾತುಗಳನ್ನು ಶಿರಸಾ ಪಾಲಿಸುತ್ತೇನೆ ಎಂದು ಮನದಲ್ಲೇ ಶಪಥ ಮಾಡಿಕೊಂಡೆ. ಅದುವರೆಗೂ ನಮ್ಮ ಬಾತ್ ರೂಮಿನಲ್ಲಿ ಎರಡೇ ಬಕೆಟುಗಳಿರುತ್ತಿದ್ದುವು. ಈಗ ಅದರ ಸಂಖ್ಯೆ ಐದಕ್ಕೇರಿತು. ಚಂದ್ರಮ್ಮ ಬೆಳಗ್ಗೆ ಒಂಭತ್ತಕ್ಕೆ ಹಾಜರಾಗುತ್ತಿದ್ದಳು (ರಾತ್ರಿ ನಿದ್ದೆ ಬಿಟ್ಟು ಮಗುವನ್ನು ನೋಡಿಕೊಂಡರೆ ಅವಳ ಬಿ.ಪಿ. ಹತೋಟಿ ತಪ್ಪುವುದಂತೆ! ಹಾಗಾಗಿ ಅವಳು ಬಾಣಂತಿ ಮಗುವಿನ ಜೊತೆ ನಿಲ್ಲಲು ಸಾಧ್ಯವಿಲ್ಲವೆಂದು ಮೊದಲೇ ಹೇಳಿ ಬಿಟ್ಟಿದ್ದಳು). ನಮ್ಮ ಅಭಯನ ಅಭ್ಯಾಸವೇನಿತ್ತೆಂದರೆ ಮುಂಜಾನೆ ಎದ್ದು ಬೆಳಕನ್ನು ನೋಡುತ್ತಾ ತಲೆಮೇಲೆ ತಿರುಗುವ ಫ್ಯಾನಿನೊಡನೆ `ಹಾ...ಹೂ..' ಎನ್ನುತ್ತಾ ಚೆನ್ನಾಗಿ ಕೈಕಾಲಾಡಿಸಿ ಆಟವಾಡಿ ಕೂಗೆಬ್ಬಿಸಿ ಸುಸ್ತಾಗಿ ಎಂಟು-ಎಂಟೂವರೆ ಹೊತ್ತಿಗೆ ನಿದ್ದೆ ಮಾಡಿಬಿಡುತ್ತಿದ್ದ. ಸ್ವಲ್ಪವೇ ಹೊತ್ತಿನಲ್ಲಿ ಚಂದ್ರಮ್ಮಳ ಪ್ರವೇಶವಾಗುತ್ತಿತ್ತು ತಾನೇ? ಬಂದವಳೇ ಬಾತ್ ರೂಮಿಗೆ ನುಗ್ಗಿ ಗೀಝರಿನ ಸ್ವಿಚ್ಚನ್ನು ಅದುಮಿ ಬಿಡುತ್ತಿದ್ದಳು( ಗೀಝರ್ ಸಾದಾರಣ ಹನ್ನೆರಡು ಘಂಟೆಯವರೆಗೂ ಬಿಸಿಯಾಗುತ್ತಲೇ ಇರುತ್ತಿತ್ತು! ವಿದ್ಯತ್ತ್ ಬಿಲ್ಲಿನ ಬಗ್ಗೆ ಯೋಚಿಸಿ...ಯೋಚಿಸೀ ನನ್ನ ತಲೆಯೂ ಬಿಸಿಯಾಗುತ್ತಲೇ ಇತ್ತು).
"ಪುಟ್ಟಾ...ಚಿನ್ನ ಮರೀ....ಏಳು ಮಗಾ....ಚಾನ ಮಾಡ್ಬೇಕಲ್ಲ ಮರೀ..." ಎಂದು ರಾಗವಾಗಿ ದೊಡ್ಡ ಗಂಟಲಿನಿಂದ ಹೇಳುತ್ತಾ ರೂಮನ್ನು ಪ್ರವೇಶಿಸುತ್ತಿದ್ದಳು.
"ಛೇ...,ನಿದ್ದೆ ಮಾಡುತ್ತಿರುವ ಮಗುವನ್ನು ಎಬ್ಸೋದ್ಯಾಕೆ...? ಮೇಲೆ ಸ್ನಾನ ಮಾಡಿಸಿದರಾಗದೇ?" ಎಂದು ಕೇಳಿದೆ.
"ಅದ್ಹೇಗಾಗುತ್ತೆ? ಬಾಣಂತಿ ಮಗುವಿನ ಸ್ನಾನ ಹನ್ನೆರಡು ಗಂಟೆಯೊಳಗೆ ಮುಗಿದಿರಬೇಕು..." ಎಂದು ಭಿಮ್ಮನೆ ನುಡಿದಳು.
"ಸರಿ, ಮೊದಲು ಬಾಣಂತಿಯ ಸ್ನಾನವಾಗಲಿ, ಅಷ್ಟರಲ್ಲಿ ಮಗು ಎದ್ದಿರುತ್ತೆ..."ಎಂದೆ
"ಅದು ಸರಿಯಲ್ಲ ಅಕ್ಕಾ...,ಬಾಣಂತಿ ಸ್ನಾನ ಮುಗಿಸಿ ಬರೋವಾಗ ಮಗು ಗಾಢವಾದ ನಿದ್ದೆಯಲ್ಲಿರಬೇಕು.... ಆಗ ಬಾಣಂತಿಗೆ ಸರಿಯಾಗಿ ರೆಸ್ಟ್ ಸಿಗುತ್ತೆ...,ಏನಿದ್ದರೂ ಮೊದಲ ಸ್ನಾನ ಮಗುವಿಗೇ..." ಎಂದಾಗ ನನ್ನ ಬಳಿ ಮಾತೇ ಇರಲಿಲ್ಲ.
(ಚಂದ್ರಮ್ಮ ಮೊದೆಲೇ ತಾಕೀತು ಮಾಡಿದ್ದಂತೆ ಗಂಧ, ರಕ್ತ ಚಂದನ, ಕಸ್ತೂರಿ ಅರಸಿನ....ಮುಂತಾದುವುಗಳನ್ನು ಮಗಳ ಹೆರಿಗೆಗೂ ಮೊದಲೇ ಸಂಗ್ರಹಿಸಿ ಇಟ್ಟುಕೊಂಡಿದ್ದೆ. ಶ್ರೀಗಂಧ ಹೇಗೂ ಮನೆಯಲ್ಲಿ ಇದ್ದೇಇರುತ್ತಲ್ವಾ? ಚಂದನಕ್ಕಾಗಿ ಅಲೆದಿದ್ದೇ ಅಲೆದಿದ್ದು. ಕಾಯಿದೆಯ ಪ್ರಕಾರ ಚಂದನವನ್ನು ಅಂಗಡಿಗಳಲ್ಲಿ ಇಟ್ಟುಕೊಳ್ಳುವಂತಿಲ್ಲ. ಯಾವುದ್ಯಾವುದೋ ಗ್ರಂಥಿಗೆ ಅಂಗಡಿಗಳನ್ನು ಹೊಕ್ಕು ಹೊರ ಬಂದೆ, ಎಲ್ಲಾ ಕಡೆಯೂ ಕೈಯ್ಯನ್ನು ತಾರಮ್ಮಯ್ಯ ಆಡಿಸಿಬಿಟ್ಟರು. ಒಂದು ಅಂಗಡಿಯಲ್ಲಿ ಹೇಳಿದರು,
"ಗೊಂಬೆ ಮಾಡುವವರು ಅಳಿದುಳಿದ ಚಂದನದ ತುಂಡುಗಳನ್ನು ನಮಗೆ ಮಾರಿ ಹೋಗಿದ್ದಾರೆ, ಬೇಕಿದ್ದರೆ ಅದನ್ನು ತಗೊಳ್ಳಿ" ಎಂದರು.
"ಸರಿ ಕೊಡಿ" ಎಂದೆ.
ರವಾ ಪುಡಿಗಿಂತ ಸ್ವಲ್ಪ ದೊಡ್ಡ ತರಿಯ ಚಂದನದ ಪುಡಿಯನ್ನು ಕಾಗದದಲ್ಲಿ ಕಟ್ಟುವಾಗ ನಾನೆಂದೆ,
"ಮಗಳ ಬಾಣಂತನಕ್ಕೆ ಬೇಕಾಗಿತ್ತು, ಸ್ವಲ್ಪ ದೊಡ್ಡ ತುಂಡು ಕೊಟ್ರೆ ಒಳ್ಳೆದಿತ್ತು"
" ಹೌದಾ...ಹಾಗಾದರೆ ಇಕೊಳ್ಳಿ...." ಎನ್ನುತ್ತಾ ಒಳಗೆ ಹೋಗಿ ಸಾಧಾರಣ ಆರಿಂಚು ಉದ್ದದ ಚಂದನದ ತುಂಡನ್ನು ತಂದು ಕೊಟ್ಟರು. ದುಡ್ಡು ತೆಗೆದುಕೊಳ್ಳುತ್ತಾ ಹೇಳಿದರು,
"ಪೋಲೀಸು ಗೀಲೀಸು ತನಿಖೆಗೆ ಬಂದ್ರೆ ನನ್ನ ಹೆಸರು ಎತ್ತಬೇಡಿ ಆಯಿತಾ?" 
ನನ್ನೆದೆ ಝಿಗ್ ಎಂದಿತು. ಒಂದು ಕಾಲದಲ್ಲಿ ನಮ್ಮಕಾಸರಗೋಡು ಗಂಧ ಚಂದನದ ಕಣ್ಣು ಮುಚ್ಚಾಲೆಯಾಟಕ್ಕೆ ಬಾರೀ ಫೇಮಸ್ಸು. ಅಂತಾದ್ರಲ್ಲಿ ಒಂದು ಗೇಣುದ್ದದ ಚಂದನವನ್ನು ಮನೆಯಲ್ಲಿಟ್ಟರೆ ಪೋಲೀಸು ಬರುತ್ತಾನೆಯೇ...? ಅಯ್ಯಮ್ಮಾ...ಸುಖಾ ಸುಮ್ಮನೆ ಅಪಾಯವನ್ನು ಮೈಮೇಲೆ ಎಳೆದು ಹಾಕಿಕೊಳ್ಳುತ್ತಿದ್ದೇನೆಯೇ ಎಂದೂ ಅನಿಸತೊಡಗಿತು. ಆದರೆ ಮೊಮ್ಮಗುವಿನ ನಿರೀಕ್ಷೆ ಎನ್ನುವ ಸುಖದ ಸೆಳೆತ ಭಯದ ಎಳೆತಕ್ಕಿಂತ ಬಲವಾಗಿತ್ತು. ಆದುದರಿಂದ ಚಂದನ ಸದ್ದಿಲ್ಲದೆ ನನ್ನ ಕೈಚೀಲವನ್ನು ಸೇರಿತು. ಕೇಸರಿ ಅರಸಿನವೂ ಸುಲಭದಲ್ಲೇ ಸಿಕ್ಕಿತು. ಹೀಗೆ ಎಲ್ಲಾ ತಯಾರಿಯೂ ಆಗಿ ಮೊಮ್ಮಗನ ಆಗಮನವೂ ಆದ ಹತ್ತು ದಿವಸಕ್ಕೆ ಚಂದ್ರಮ್ಮನ ಆಗಮನವೂ ಆಯ್ತು.)
"ನಲುವತ್ತು ದಿವಸಗಳವರೆಗೆ ಒಂದು ದಿನ ಹಾಲಿನ ಕೆನೆ, ಇನ್ನೊಂದು ದಿನ ಅರಸಿನ, ಮತ್ತೊಂದು ದಿನ ಗಂಧ ಚಂದನ...ಹೀಗೆ ಸರದಿಯಂತೆ ಮೈಗೆ ಹಚ್ಚಿ ಸ್ನಾನ ಮಾಡಿಸ್ತೇನೆ. ಚಂದ್ರಮ್ಮನ ಮಾತುಗಳನ್ನು ಕೇಳಿ ನನ್ನ ಮಗಳು ಉಬ್ಬಿ ಹೋದಳು. ಹಾಲಿನ ಕೆನೆ....,ಗಂಧ ಚಂದನದ ಲೇಪನ....ನಂತರ ಸ್ನಾನ....(ಕೃಷ್ಣದೇವರಾಯನ ಕಾಲ ಮರುಕಳಿಸಿತೇ...?) ಟಿ.ವಿ. ಗಳಲ್ಲಿ ಬರುವ ಜಾಹಿರಾತುಗಳಲ್ಲಿ ಬೆಣ್ಣೆ ಮೈಯ್ಯ ಮುದ್ದು ಮಗುವಿಗೆ ಸೋಪಿನ ಲೇಪನ ಮಾಡುವುದನ್ನು ನೋಡಿದಾಗಲೆಲ್ಲ ಸೋಪು ಎಳೇ ಚರ್ಮಕ್ಕೆ ಎಷ್ಟು ಹಾನಿಕಾರಕ ಎಂದೆಲ್ಲ ಹೇಳುತ್ತಿದ್ದವಳಿಗೆ ಗಿರಿಜಮ್ಮನ ಮಾತುಗಳನ್ನು ಕೇಳಿ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತಾಯ್ತು. ನಾನೂ ಮನಸ್ಸಿನಲ್ಲೇ ಹಾಡತೊಡಗಿದೆ...,`ಹಾಲಲಿ ಮಿಂದವನೇ ಗುಂಡನೆ ಮೈಯ್ಯವನೇ...ನನ್ನ ಮುದ್ದು ಮೊಮ್ಮಗನೇ...' ಆಹಾ...ಯಾರಿಗುಂಟು ಇಂತಹ ಭಾಗ್ಯ..? ಮಗಳ ಬಾಣಂತನಕ್ಕೆ ಚಂದ್ರಮ್ಮನನ್ನು ನೇಮಕ ಮಾಡಿಕೊಂಡದ್ದಕ್ಕೆ ನನ್ನ ಬೆನ್ನನ್ನು ನಾನೇ ತಟ್ಟಿಕೊಂಡೆ. ಸೋಪು, ಬಕೆಟು, ಮಣೆ, ಟವೆಲು, ಪೌಡರು, ಕಾಡಿಗೆ, ತಲೆಗೆ ಮೈಗೆ ಸುತ್ತುವ ಬಟ್ಟೆ...ಎಲ್ಲವೂ ರೆಡಿ ಇದೆ ತಾನೇ?" ಎಂದು ಚಂದ್ರಮ್ಮ ಕೇಳಿದಾಗ ಎಲ್ಲವನ್ನೂ ಅವಳಿಗೆ ಕಾಣುವಂತೆ ಇಟ್ಟೆ. ಅವಳ ಅಬ್ಬರದ ಧ್ವನಿಗೆ ನಿದ್ದೆಯಲ್ಲಿದ್ದ ಮಗು ಎದ್ದು ಅಳತೊಡಗಿತು.
"ಚಿನ್ನಾ ಚಾನ(ಸ್ನಾನ)ಕ್ಕೆ ಹೋಗೋಣಾ...." ಎನ್ನುತ್ತಾ ಮಗುವಿನ ಅಂಗಿ ತೆಗೆದು ಬಾತ್ರೂಮಿಗೆ ಒಯ್ದಳು. ಮಗಳೂ ನಾನೂ ಅಲ್ಲೇ ಬಾಗಿಲಲ್ಲಿ ನಿಂತು ಪ್ರೇಕ್ಷಕರಾದೆವು.
ಸ್ವಲ್ಪ ಎತ್ತರದ ಮಣೆಯಲ್ಲಿ ಕುಳಿತು ಕಾಲು ಚಾಚಿದಳು. ಇನ್ನೊಂದು ಮಣೆಯನ್ನು ಪಾದದ ಅಡಿಬಾಗಕ್ಕೆ ಇಟ್ಟುಕೊಂಡಳು. ಬಟ್ಟೆಯನ್ನು ಸರಿಸಿ ಬರಿಕಾಲ ಮೇಲೆ ಮಗುವನ್ನು ಮಲಗಿಸಿದಳು. ಮಗು ಪಿಳಿ ಪಿಳಿ ಕಣ್ಣು ಬಿಡುತ್ತಾ ಸುತ್ತಲೂ ನೋಡತೊಡಗಿತು. ಮೊದಲೇ ತೇದಿಟ್ಟಿದ್ದ ಗಂಧ,ಚಂದನವನ್ನು ಅವನ ಮೈಗೆ ಹಚ್ಚತೊಡಗಿದಳು. ನಿಧಾನ...ಬಹು ನಿಧಾನಕೆ....ನಂತರ ಗಸ...ಗಸ...ಮಸಾಜು ಮಾಡತೊಡಗಿದಳು. ಬಾಯಲ್ಲಿ ಹಾಡು ಪುಂಖಾನುಪುಂಖವಾಗಿ ಬರುತ್ತಲೇ ಇತ್ತು,
"ಚಿನ್ನ ಮರಿ....ಚಿನ್ನ ಮರಿ...
ನನ್ನ ಮುದ್ದು ಚಿನ್ನ ಮರಿ...
ಗಂಧ ಹಚ್ಚಿ ಚಾನ ಮಾಡಿ...
ಘಮ...ಘಮ...ಮುದ್ದು ಮರಿ..."
ಸ್ನಾನ ಶುರುವಾಗುವ ಮೊದಲು ನಮ್ಮ ಬಾತ್ ರೂಮಿನ ಸ್ಥಿತಿಗತಿಯನ್ನು ನೀವು ತಿಳಿದುಕೊಳ್ಳಲೇ ಬೇಕು.
ನಮ್ಮ ಬಾತ್ ರೂಮಿನಲ್ಲಿ ಸಾಧಾರಣವಾಗಿ ಇರುತ್ತಿದ್ದುದು ಎರಡೇ ಬಕೆಟುಗಳು. ಚಂದ್ರಮ್ಮನ ಪ್ರವೇಶವಾದ ಮೇಲೆ ಅವುಗಳ ಸಂಖ್ಯೆ ಆರಕ್ಕೇರಿತು. ಬೆಳಗ್ಗೆ ಅವಳು ಬಂದ ತಕ್ಷಣ ಗೀಝರಿನ ಸ್ವಿಚ್ ಅದುಮಿದರೆ ಮಧ್ಯಾಹ್ನ ಹನ್ನೆರಡರವರೆಗೂ ಅದು ಬಿಸಿಯಾಗುತ್ತಲೇ ಇರುತ್ತಿತ್ತು ಎಂದು ಹೇಳಿದ್ದೆಯಲ್ಲ? ಮಗುವನ್ನು ಅಲ್ಲಿಗೊಯ್ಯುವ ಮೊದಲೇ ಎಲ್ಲಾ ಬಕೇಟುಗಳಿಗೂ ನೀರನ್ನು ತುಂಬಿಸಿಟ್ಟಿರುತ್ತಿದ್ದಳು. ಪ್ರತಿಯೊಂದರಲ್ಲೂ ಬೇರೆ ಬೇರೆ ಟೆಂಪರೇಚರಿನ ನೀರು! ಕುದಿಬಿಂದುವನ್ನು ತಲುಪಿದ ನೀರು ಹೊಗೆಯುಗುಳುವುದನ್ನು ನೋಡಿಯೇ ನಮಗೆ ಕಣ್ಣು ಕತ್ತಲಿಟ್ಟಂತೆ ಆಗುತ್ತಿತ್ತು. ಮಸಾಜು ಎನ್ನುವುದನ್ನು ಸಾಧಾರಣವಾಗಿ ಯಾವ ಶಿಶುಗಳೂ ಇಷ್ಟಪಡುವುದಿಲ್ಲ. ಚಂದ್ರಮ್ಮನ ಮಸಾಜು ಯಾವುದೇ ಆಯುರ್ವೇದ  ಸೆಂಟರನ್ನೂ ನಾಚಿಸುವಂತಿತ್ತು. ಮಗುವಿಗೆ ಸಹಿಸಿ ಸಹಿಸಿ ಸಾಕಾಗಿ ಹೋಗಿರಬೇಕು, `ಎಹೆಂ...ಎಹೆಂ...'ಎಂದು ಮಂದ್ರ ಸ್ಥಾಯಿಯಲ್ಲಿ ಶುರುವಾದ ರಾಗ  `ಬೆರೇಂ....ಬೆರೇಂ....' ಎಂಬ ತಾರಕ ಸ್ಥಾಯಿಗೆ ಮುಟ್ಟಿದಾಗ ನನ್ನ ಮಗಳಿಗೆ ಜೀವವೇ ಬಾಯಿಗೆ ಬಂದಂತಾಯ್ತು.
`ಚಂದ್ರಮ್ಮಾ...ಮಗು ಅಳ್ತಾ ಇದೆ...ಬೇಗ ಸ್ನಾನ ಶುರು ಮಾಡು...' ಎಂದಳು.
`ಛೇ...ನೀವೇನು ಹೀಗೆ...? ಮಕ್ಕಳ ಬೆಳವಣಿಗೆ ಚೆನ್ನಾಗಿ ಆಗಬೇಕಾದರೆ ಚೆನ್ನಾಗಿ ಅಳಬೇಕು...' ಎನ್ನುತ್ತಾ ಬೆಚ್ಚಗಿರುವ ನೀರನ್ನು ಕುದಿಯುವ ನೀರಿಗೆ ಮಿಶ್ರ ಮಾಡಿ  ಮೀಟರು ಕಾಫಿಯಂತೆ ಎತ್ತರದಿಂದ ....ರ್ರ್.......ಳೋ....ಎಂದು ಹತ್ತಾರು ಬಾರಿ ಮೇಲಿನಿಂದ ಕೆಳಕ್ಕೆ...,ಕೆಳಗಿನಿಂದ ಮೇಲಕ್ಕೆ ಸುರಿದು ಕೊನಗೊಮ್ಮೆ ಚೊಂಬಿನಲ್ಲಿ ನೀರು ತುಂಬಿಸಿ ಮಗುವಿನ ಮೈಗೆ ಎರಚತೊಡಗಿದಳು. ಅಮ್ಮನ ಗರ್ಭದಿಂದ ಹೊರಬಂದ ಹೊತ್ತಿನಲ್ಲಿ ಕೂಡಾ ಮಗು ಅಷ್ಟು ನೋವಿನಿಂದ ಅತ್ತಿರಲಾರದು. ಕಳವಳದಿಂದ ನಾನು ಮಗುವಿನ ಮೇಲೆ ಅಭಿಷೇಕವಾಗುತ್ತಿರುವ ನೀರಿನ ಬಿಸಿಯನ್ನು ಕೈಯ್ಯಲ್ಲಿ ಮುಟ್ಟಿ ಪರೀಕ್ಷಿಸಿದೆ. ಅಂತಹ ಬಿಸಿಯೇನೂ ಇರಲಿಲ್ಲವಾದರೂ ಏಕಪ್ರಕಾರವಾಗಿ ಬೆಚ್ಚಗಿನ ನೀರು ಮೈಗೆ ಬೀಳುತ್ತಲೇ ಇದ್ದರೆ ನವಜಾತ ಶಿಶುವಿಗೆ ತಾಳಿಕೊಳ್ಳಲು ಸಾಧ್ಯವೇ? ಅಳುವುದಲ್ಲದೆ ಬೇರೇನು ಮಾಡಲು ಸಾಧ್ಯ...? ಬೆಳ್ಳಗಿನ ಮೈಯ್ಯ ಮಗು ಗಂಧ ಚಂದನದ ಸಂಗದಿಂದ ಕಂದು ಬಣ್ಣಕ್ಕೆ ತಿರುಗಿತ್ತು, ಈಗ ಬಿಸಿನೀರ ಸಹವಾಸದಿಂದ ಕೆಂಪು ಬಣ್ಣಕ್ಕೆ ತಿರುಗಿತ್ತು! ಅಂತೂ ಎರಡು ಬಕೇಟು ನೀರು ಖಾಲಿಯಾಗುವ ಹೊತ್ತಿಗೆ ಸೋಪು ಹಚ್ಚುವ ಹಂತಕ್ಕೆ ಮುಟ್ಟಿದಳು. ಲಕ್ಸ್ ಸೋಪಿನ ಜಾಹೀರಾತಿನಲ್ಲಿ ಐಶ್ವರ್ಯ ರೈ ಸೋಪಿನ ನೊರೆಯಲ್ಲಿ ಮುಳುಗಿರುತ್ತಾಳಲ್ಲಾ? ನನ್ನ ಮೊಮ್ಮಗ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿದ್ದ. ಬಿಳಿ ಹತ್ತಿಯುಂಡೆಯಲ್ಲಿ ಎರಡು ಕಪ್ಪು ಗುಂಡಿಗಳನ್ನು ಹುದುಗಿಸಿಟ್ಟಂತೆ ಕಣ್ಣುಗಳು ಮಾತ್ರ ಪಿಳುಕಿಸುತ್ತಿದ್ದುವು (ಹಾಲಿನ ಕೆನೆ....ಇತ್ಯಾದಿಗಳ ಬಗ್ಗೆ ಅವಳು ಭಾಷಣ ಬಿಗಿದ ರೀತಿ ನೋಡಿ ಮಗುವಿನ ಮೈಗೆ ಸೋಪನ್ನು ಸೋಕಿಸಲಾರಳೇನೋ ಎಂದುಕೊಂಡಿದ್ದ ನಮಗೆ ಭ್ರಮನಿರಸನವಾಗಿತ್ತು). ಸೋಪು ಹಿಡಿದುಕೊಂಡು ಐಶ್ವರ್ಯ ಸಿಹಿ ಸಿಹಿಯಾಗಿ ನಗುತ್ತಾಳಾದರೆ ಇಲ್ಲಿ ಅಭಯ ಕೈಕಾಲು ಬಡಿದು ಮೂರು ಲೋಕಕ್ಕೂ ಕೇಳುವಂತೆ ಕಿರುಚಿ ಅಳತೊಡಗಿದ!
                                                                             (ಸಶೇಷ)

                  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ