ಬಾತ್ ರೂಮು ನೊರೆಯ ಹಾಸಿಗೆಯಾಯ್ತು.
ಆ ನೊರೆಯೇ ಮಗುವಿಗೆ ಹೊದಿಕೆಯಾಯ್ತು. ಈಗ ಮಗುವನ್ನು ಕವಚಿ
ಮಲಗಿಸಿದಳು. ತಲೆಗೆ ಅಭಿಷೇಕ
ಶುರುವಾಯ್ತು. ಜಲಲ ಜಲಲ ಜಲ
ಧಾರೇ....ಅಂತ ನಾನು ಹಾಡಬೇಕೆಂದಿದ್ದವಳು
ಹಾಡಲಿಲ್ಲ, ಮಗುವಿನ ಚೀತ್ಕಾರದೊಂದಿಗೆ ನನ್ನ
ಆಕ್ರಂದನದ ಕಾಂಬಿನೇಶನ್ ಬಹಳ ಡೇಂಜರ್ ಪರಿಣಾಮವನ್ನುಂಟುಮಾಡೀತು
ಎಂಬ ಅರಿವು ನನಗಿತ್ತು. ಐದನೇ
ಬಕೆಟು ನೀರು ಮುಗಿವ ಹೊತ್ತಿಗೆ
ನಿತ್ರಾಣಗೊಂಡ ಮಗು ನಿದ್ದೆಗೆ ಜಾರತೊಡಗಿತು.
"ನೋಡಿ...ಎಂತಾ ಒಳ್ಳೆ ನಿದ್ದೆ
ಅಮರಿಕೊಂಡು ಬರ್ತಾ ಇದೆ....ಇನ್ನು
ಹಾಲು ಕುಡಿಸಿ ಮಲಗಿಸಿದ್ರೆ ಮಧ್ಯಾಹ್ನದವರೆಗೂ
ಮಲಗಿಬಿಡ್ತಾನೆ....ನೋಡ್ತಾ ಇರಿ..." ಎಂದಳು ಚಂದ್ರಮ್ಮ.
ಬಾತ್ ರೂಮಿನಲ್ಲೆ ಕುಳಿತುಕೊಂಡು ಮಗುವಿನ ಮೈಕೈ ಎಲ್ಲ
ತಿಕ್ಕಿ ತಿಕ್ಕಿ ಉಜ್ಜಿದಳು. ಬೈರಾಸಿನ
ತುದಿಯನ್ನು ಸೂಜಿ ಮಾಡಿ ಮೂಗು
ಕಿವಿಗಳೊಳಗೆಲ್ಲಾ ಹಾಕಿ ಶುಚಿಗೊಳಿಸಿದಳು. ಅರ್ಧ
ಲೋಟ ನಿರನ್ನು ಕೈಯಲ್ಲಿ ಹಿಡಿದು
ಬಾಯಲ್ಲೇನೋ ಮಣ ಮಣ ಮಂತ್ರ
(`..ಗಾಳಿಯ ಕಣ್ಣು, ಭೂಮಿಯ ಕಣ್ಣು,
ಮಾರಿಯ ಕಣ್ಣು ಕಿತ್ತೋಗಲಿ....ಕಿತ್ತೋಗಲಿ..')
ಹೇಳುತ್ತಾ ಮಗುವಿಗೆ ಮೂರು ಪ್ರದಕ್ಷಿಣೆ
ತಂದು ಅದಕ್ಕೆ ಉಗುಳಿದಂತೆ ಮಾಡಿ
ನೀರನ್ನು ಬದಿಗೆ ಚೆಲ್ಲಿ ಎದ್ದು
ನಿಂತಳು. ಮಗುವಿನ ಮುಖ, ಮೂತಿ
ಕಾಣದಂತೆ ಬಟ್ಟೆಯಲ್ಲಿ ಸುತ್ತಿ ಹೊರಕ್ಕೆ ಬಂದು ಬೆಡ್ಡಿನ ಮೇಲೆ
ಕುಳಿತು ಮತ್ತೊಮ್ಮೆ ಶುಚಿ ಕಾರ್ಯ ನಡೆಯಿತು.
"ಚಂದ್ರಮ್ಮಾ,
ಮಗುವಿಗೆ ಪೌಡರು ಹಾಕೋದೇನೂ ಬೇಡಾ....ಚೆನ್ನಾಗಿ ಉಜ್ಜಿದಿಯಲ್ಲಾ ಅದುವೇ ಸಾಕು..., ಪೌಡರನ್ನು
ಸಿಂಪಡಿಸುವಾಗ ಅದರ ಸೂಕ್ಷ್ಮ ಕಣಗಳು
ಮೂಗು ಬಾಯಿಗಳಿಗೆ ಹೋಗೋದು ಒಳ್ಳೇದಲ್ಲ. ಶ್ವಾಸಕೋಶವನ್ನು
ಪ್ರವೇಶಿಸಿದ ಈ ಕಣಗಳು ಕ್ರಮೇಣ
ಕಫವನ್ನುಂಟು ಮಾಡುತ್ತವೆ..." ಮಗಳು ಇಷ್ಟು ಹೇಳಿದ್ದೇ
ತಡ,
"ನೀವು
ಬರೀ ಪುಸ್ತಕದ ಬದನೇ ಕಾಯಿ
ಕಲಿತವರು...ನಾನು ಐವತ್ತರುವತ್ತು ಬಾಣಂತನ
ಮಾಡಿದೀನಿ....ಎಲ್ಲಾ ಮಕ್ಕಳೂ ಕಲ್ಲು
ಗುಂಡಿನ ಹಾಗಿವೆ..." ಎನ್ನುತ್ತಾ ಮಗುವಿನ ದೇಹದ ಯಾವ
ಭಾಗವನ್ನೂ ಬಿಡದೆ ಪೌಡರಿನ ಮಳೆ
ಸುರಿಸಿದಳು. ಕಾಡಿಗೆಯಿಂದ ಮುಖವನ್ನು `ಸಿಂಗರಿಸಿದಳು'.ಮಗುವಿನ ಮೈಗೆ ಬಟ್ಟೆಯನ್ನು ನೀಟಾಗಿ ಸುತ್ತಿ ಬಿಗಿಯಾಗಿ ಕಟ್ಟಿದ್ದನ್ನು ನೋಡಿದಾಗ ಪ್ಯಾಕಿಂಗ್ ಕುರಿತು ಕೊರಿಯರ್ ಕಂಪೆನಿಯವರು ಇವಳಿಂದ ಒಂದೆರಡು ಕ್ಲಾಸುಗಳನ್ನು ತೆಗೆದುಕೊಂಡರೆ ಒಳ್ಳೆಯದಿತ್ತು ಎಂದು ನನಗನಿಸಿತು! ನಂತರ ಮಗುವನ್ನು ಪುಟ್ಟ ಹಾಸಿಗೆಯಲ್ಲಿ
ಮಲಗಿಸಿದಳು. ಆಯಾಸದಿಂದ ಬಸವಳಿದು ಹೋಗಿದ್ದ ಮಗು
ಆಗಲೇ ನಿದ್ದೆಗೆ ಜಾರಿತ್ತು. ಸ್ನಾನವೆಂಬ ಈ ವಿಧಿವತ್ತಾದ ಕಾರ್ಯಕ್ರಮ
ಕೆಲವಾರು ದಿನಗಳ ಕಾಲ ಅಡೆತಡೆಯಿಲ್ಲದೆ
ನಡೆಯಿತು. ದಿನದ ಹೆಚ್ಚಿನ ಭಾಗವೂ
ಮಗು ಬಟ್ಟೆಯ ಸುರುಳಿಯೊಳಗೇ ಇರುತ್ತಿದ್ದುದರಿಂದ
ಅದರ ಮೈಯ್ಯಲ್ಲಾದ ಆ ಬದಲಾವಣೆ ನಮ್ಮ
ಗಮನಕ್ಕೆ ಬರುವಾಗ ತಡವಾಯಿತೇನೋ ಎಂದು
ನಮಗೆ ಅನಿಸಿತು.
"ಅಮ್ಮಾ,
ಇಲ್ಲಿ ನೋಡು, ಅಭಯನ ಮೈಯ್ಯಲ್ಲಿ
ಇದೇನು ಕೆಂಪು ಕೆಂಪು...?" ಮಗಳು
ಕೇಳಿದಾಗ ನನಗೂ ಹೌದೆನಿಸಿತು. ನವಜಾತ
ಶಿಶುಗಳ ಮೈಯ್ಯಲ್ಲಿ ಅಪಾಯಕಾರಿಯಲ್ಲದ ದಡಾರ ಬೀಳುವುದು ಸಾಮಾನ್ಯ.
ಆದರೆ ಅಭಯನಿಗೆ ಅಂತಾದ್ದೇನೂ ಬಿದ್ದೇ
ಇರಲಿಲ್ಲ. ಜನಿಸಿ ಇಷ್ಟು ದಿನಗಳು
ಕಳೆದ ಮೇಲೆ ಇದೇನು? ಅದನ್ನೇ
ಚಂದ್ರಮ್ಮನಲ್ಲಿ ಹೇಳಿದೆ,
"ಅಯ್ಯೋ...ಅದೂ ಮಗುವಿನ ಉಗುರಿನ
ಗೀರು ಮಾರಾರ್ರೇ....ಉಗುರು ಎಷ್ಟುದ್ದ ಬೆಳೆದು
ಬಿಟ್ಟಿದೆ ನೋಡಿ....ಅದನ್ನ ಕತ್ತರಿಸಿಬಿಟ್ರೆ
ಸರಿಯಾಗುತ್ತೆ.." ಎಂದಳು (ಕೈಗಳು ಯಾವಾಗಲೂ ಬಟ್ಟೆಯೊಳಗೇ ಹುದುಗಿಕೊಂಡಿರುವಾಗ ಉಗುರು ಮೈಗೆ ತಾಗುವುದಾದರೂ ಹೇಗೆ?). ಉಗುರಿನ ಗೀರೇ ಬೇರೆ ಇದುವೇ ಬೇರೆ ಎಂಬುದನ್ನು ಅವಳಿಗೆ ಮನದಟ್ಟು ಮಾಡಿಕೊಡಲು ನಾನು ವ್ಯರ್ಥ ಪ್ರಯತ್ನ ಮಾಡಿದೆ.
ಇನ್ನೂ ಒಂದೆರಡು ದಿನಗಳಲ್ಲಿ ಅದು ಸ್ವಲ್ಪ ಜಾಸ್ತಿಯಾದಂತೆ
ತೋರಿತು. ದಡಾರವೇ ಇರಬಹುದು ಎಂದು
ಚಂದ್ರಮ್ಮ ಕೊನೆಗೂ ಒಪ್ಪಿದಳು.
"ಅಕ್ಕಾ,
ನಾಳೆಯಿಂದ ಗಂಧ, ಚಂದನದ ಜೊತೆಯಲ್ಲಿ
ನೆಲನೆಲ್ಲಿಯನ್ನೂ ತೇದು ಮೈಗೆ ಹಚ್ತೀನಿ....ಅದು ಇಂತಹ ದಡಾರಕ್ಕೆ
ತುಂಬಾ ಒಳ್ಳೆಯ ಮದ್ದು, ನಾಳೆ
ಅದನ್ನು ಸ್ವಲ್ಪ ತರಿಸಿಬಿಡಿ" ಎಂದಳು.
ನೆಲನೆಲ್ಲಿ
ಸಸ್ಯ ಹೂವಿನ ಕುಂಡಗಳಲ್ಲಿಯೋ ಅಂಗಳದ
ಬದಿಯಲ್ಲಿಯೋ ಕಳೆ ಗಿಡವಾಗಿ ಹುಟ್ಟುತ್ತಿದ್ದುದು ನನಗೆ ಗೊತ್ತಿತ್ತು.ಆದರೆ
ಅದು ಮಕ್ಕಳ ದಡಾರಕ್ಕೆ ಔಷಧಿ
ಎಂದು ಗೊತ್ತಿರಲಿಲ್ಲ. ಮನೆ ಮದ್ದು ಮಕ್ಕಳ
ಖಾಯಿಲೆಗೆ ದಿವ್ಯ ಔಷಧ ಎಂಬುದರಲ್ಲಿ
ಎರಡು ಮಾತಿಲ್ಲ, ಸಾಲದುದಕ್ಕೆ ನಮ್ಮ ಮನೆಯಲ್ಲೇ ಅದು
ಇದೆ ಎಂದ ಮೇಲೆ ಇನ್ನೇಕೆ
ತಲೆಬಿಸಿ ಎಂದುಕೊಂಡೆವು. ಅಂಗಳದಿಂದ ಕಿತ್ತೂ ಕಿತ್ತೂ ಎರಡು ಮೂರು ದಿನಗಳಲ್ಲಿ ಅದು ಖಾಲಿಯಾಯಿತು. ಮೂರನೇ
ದಿನ ಬೆಳಗ್ಗೆಯೇ ರಸ್ತೆಗಿಳಿದೆ. ತಲೆಬಗ್ಗಿಸಿ ಸೂಕ್ಷ್ಮವಾಗಿ ಇಕ್ಕೆಲಗಳನ್ನೂ ನೋಡುತ್ತಾ ಹೋಗುತ್ತಿದ್ದೆ. ಕೈಯ್ಯಲ್ಲೊಂದು ಪ್ಲಾಸ್ಟಿಕ್ ಚೀಲವೂ ಇತ್ತು. ಮುಂಜಾನೆ
ಹೊತ್ತು ನೋಡಿ, ತಲೆ ಬಾಚಿರಲಿಲ್ಲ.
ಸ್ನಾನ ಆಗಿರಲಿಲ್ಲ. ಎದುರಿನಿಂದ ಬರುತ್ತಿದ್ದ ಇಬ್ಬರು ಹೆಂಗಳೆಯರಿಗೆ ನಾನಿನ್ನೇನು
ಢೀ ಕೊಡುತ್ತೇನೆ ಎನ್ನುವಾಗ ಎಚ್ಚೆತ್ತುಕೊಂಡು ತಲೆ ಎತ್ತಿದೆ.
"ಈ
ಗುಜುರಿ ಹೆಕ್ಕುವವರನ್ನು ಒಂದು ಕಾಸಿಗೆ ನಂಬಬಾರದಪ್ಪ....ಢಿಕ್ಕಿ ಹೊಡೆದ ಹಾಗೆ
ಮಾಡಿ ಮೈಯ್ಯಲ್ಲಿರೋ ಚಿನ್ನವನ್ನೆಗರಿಸೋ ಜಾತಿಗಳು....ಪೋಲೀಸ್ ಕಂಪ್ಲೇಂಟ್ ಕೊಡಬೇಕು
ಇಂತವುಗಳಿಗೆ..., ವಾಕಿಂಗು ಹೋಗೋದೂ ಅಪಾಯವೇ..."
ಎಂದೇನೋ ಗೊಣಗಿಕೊಂಡು ಹೋದರು!
ಇನ್ನು ರಸ್ತೆಯಲ್ಲಿರುವುದು ಅಪಾಯವೆಂದರಿತ ನಾನು ಅಲ್ಲಿ ಸಿಕ್ಕ ಕೆಲವೇ
ಕೆಲವು ನೆಲನೆಲ್ಲಿ ಗಿಡಗಳೊಂದಿಗೆ ಹಿಂತಿರುಗಿದೆ. ಗಂಧ, ಚಂದನ, ನೆಲನೆಲ್ಲಿಯ
ಮಿಶ್ರಣಗಳ ಲೇಪನದಿಂದಾಗಿ ಅತಿ ವಿಚಿತ್ರವಾಗಿ ಕಂಗೊಳಿಸುತ್ತಿದ್ದ ನನ್ನ ಮೊಮ್ಮಗ. ಸ್ನಾನವೆಂಬ
ಅಗಾಧವಾದ ವ್ಯಾಯಾಮವಾದ ಮೇಲೂ ನಿದ್ದೆ ಮಾಡದೆ
ತುಂಬಾ ಕಿರಿ ಕಿರಿ ಮಾಡತೊಡಗಿದ. ಮೈಯ್ಯ
ದಡಾರವೇನೂ ಕಡಿಮೆಯಾಗಿರಲಿಲ್ಲ. ಮೂಗಲ್ಲಿ ಚಿಕ್ಕದಾಗಿ ನೀರು
ಒಸರುತ್ತಿತ್ತು. `ಓ...ಬಹುಷಃ ಶೀತವಾಗುತ್ತೇನೋ...ತಲೆನೋಯುತ್ತೇನೋ' ಎಂದುಕೊಂಡೆ,
ತೇದ ಗಂಧವನ್ನು ಹಣೆಯ ಎರಡೂ ಬದಿಗೆ
ಹಚ್ಚಿದೆ(ಶ್ರೀಗಂಧದ ಲೇಪನ ಮಕ್ಕಳ ತಲೆನೋವನ್ನು
ಕಡಿಮೆಗೊಳಿಸುತ್ತದೆ). ಸ್ವಲ್ಪ ಹೊತ್ತಿನಲ್ಲಿ ಕಡಿಮೆಯೂ ಆಯಿತೆಂದು ತೋರುತ್ತದೆ.
ಆಡಲು ತೊಡಗಿದ. ಹಣೆಗೆ ಹಚ್ಚಿದ
ಗಂಧ ಒಣಗಿ ಹಕ್ಕಳೆಯಾಗಿ ಕಣ್ಣಿಗೆ
ಬೀಳುವಂತಾದಾಗ ಅದನ್ನು ಒರೆಸಿ ತೆಗೆದೆ.
ಆಗ ನೋಡುತ್ತೇನೆ...,ಹಣೆಯ ಇಕ್ಕೆಲಗಳಲ್ಲೂ ಅವನ
ಮೈಯ್ಯಲ್ಲಿದ್ದಂತಹ ಅದೇ ಕೆಂಪು ಬಣ್ಣದ
ದಡಾರ ದಟ್ಟವಾಗಿ ಬಿದ್ದಿತ್ತು. ಫಕ್ಕನೆ ನನಗೆ ಹೊಳೆಯಿತು,
ಮಗುವಿಗೆ ಶ್ರೀಗಂಧ ಅಲರ್ಜಿ ಇರಬಹುದೇ..?
ಕೂಡಲೇ ಡಾಕ್ಟರನ್ನು ಬರಹೇಳಿದೆವು. ಅವರು ಮಗುವಿನ ಮೈಗೆ
ಹಚ್ಚುವ ಲೇಪನಗಳ ಬಗ್ಗೆ ಸಾವಾಧಾನದಿಂದ
ಕೇಳಿದರು. ಮಗುವನ್ನು ಎಲ್ಲಾ ಕೋನಗಳಿಂದಲೂ ಸೂಕ್ಷ್ಮವಾಗಿ ಪರೀಕ್ಷಿಸಿ ಕೊನೆಗೆ ಹೇಳಿದರು,
old is not always gold...,ಕುಟುಂಬದಿಂದ ಕುಟುಂಬಕ್ಕೆ ವ್ಯಕ್ತಿಯಿಂದ ವ್ಯಕ್ತಿಗೆ ಕಾಲದಿಂದ ಕಾಲಕ್ಕೆ ಪ್ರತಿ
ಜೀವಿಯ ಶರೀರದ ಗುಣದೋಷಗಳು ಬೇರೆ
ಬೇರೆಯೇ ಇರುತ್ತವೆ. ಮನೆ ಮದ್ದೇ ಆಗಿರಲಿ ಹೊರಗಿನ ಔಷಧಿಯೇ ಆಗಿರಲಿ ಎಲ್ಲಾ ಕಾಲಕ್ಕೂ ಎಲ್ಲರಿಗೂ ಒಂದೇ ರೀತಿಯ ಪರಿಣಾಮ ಬೀರಬೇಕೆಂದೇನೂ ಇಲ್ಲ. ಶರೀರಕ್ಕೆ ಯಾವುದು ಹೊಂದಿಕೆಯಾಗುವುದಿಲ್ಲವೋ ಅದನ್ನು ತ್ಯಜಿಸುವುದೇ
ಅದಕ್ಕಿರುವ ಮದ್ದು ಹೊರತಾಗಿ ಅದಕ್ಕೆ
ಇನ್ನೇನೋ ಮದ್ದುಗಳನ್ನು ಕೊಡುವುದು ಚಿಕಿತ್ಸೆಯಲ್ಲ, ಆ ಲೇಪನಗಳೆಲ್ಲವನ್ನೂ avoid ಮಾಡಿ ನೋಡಿ ಎಂದರು.
ಕೂಡಲೇ ಚಂದ್ರಮ್ಮನಿಗೆ ತಾಕೀತು
ಮಾಡಿದೆ, ಯಾವುದೇ ಕಾರಣಕ್ಕೂ ಗಂಧ
ಚಂದನ ಇತ್ಯಾದಿಗಳನ್ನು ಮಗುವಿನ ಮೈಗೆ ಹಚ್ಚುವುದು
ಬೇಡ ಎಂದು.
"ಹಾಗಾದರೆ
ನೆಲನೆಲ್ಲಿ?" ಎಂದು ಕೇಳಿದಳು.
"ಚಂದ್ರಮ್ಮಾ,
ನಾವು ನೆಲ ನೆಲ್ಲಿಯನ್ನು ಹಚ್ಚುವ
ತೀರ್ಮಾನ ತಗೊಂಡದ್ದು ಯಾಕೆ? ಮಗುವಿಗೆ ದಡಾರ
ಇರಬಹುದು ಎಂದಲ್ವೇ? ಇದು ಖಂಡಿತಕ್ಕೂ ದಡಾರ
ಅಲ್ಲ, ಅಲರ್ಜಿ ಎಂದು ಡಾಕ್ಟರೇ
ಹೇಳಿದ್ರಲ್ಲ...? ಯಾವ ವಸ್ತು ಅವನ ದೇಹ ಪ್ರಕೃತಿಗೆ ಹೊಂದಿಕೆಯಾಗುವುದಿಲ್ಲ ಎಂದು ತಿಳಿಯಬೇಕಾದರೆ ಈ ಎಲ್ಲಾ ಲೇಪನಗಳನ್ನು ಪೂರ್ತಿಯಾಗಿ ನಿಲ್ಲಿಸಿ
ಕೆಲವು ದಿನಗಳ ನಂತರ ಒಂದೊಂದಾಗಿ
ಹಚ್ಚಿ ಪರೀಕ್ಷಿಸಿ ನೋಡೋಣ. ಸದ್ಯಕ್ಕೆ ಮಗುವಿನ ಮೈಗೆ ಲೇಪ ಹಚ್ಚದೆ ಸಾದಾ ಉಗುರುಬೆಚ್ಚಗಿನ ನೀರಲ್ಲಿ ಸ್ನಾನ ಮಾಡಿಸಿದರೆ ಸಾಕು."
ಎಂದೆ.
ಅಸಮಾಧಾನದ ಮುಖಭಾವದಿಂದಲೇ ತನ್ನ
ಕೆಲಸಗಳನ್ನು ಮುಗಿಸಿ ಹೋದಳು. ಮಾರನೆಯ
ದಿನ ಬೆಳಗ್ಗೆ ಅವಳು ಬರುತ್ತಲೇ,
"ಚಂದ್ರಮ್ಮಾ,
ಮಗುವಿಗೆ ಸ್ವಲ್ಪ ಶೀತದ ಲಕ್ಷಣಗಳು
ಕಾಣಿಸ್ತಾ ಇವೆ ಅಂತ ನಿನ್ನೆ
ಡಾಕ್ಟರೇ ಹೇಳಿದ್ರಲ್ಲ? ಅವನ ಸ್ನಾನವನ್ನು ಚಿಕ್ಕದಾಗಿ
ಮುಗಿಸಿಬಿಡು ಎಂದೆ. ಆರು ಬಕೇಟು
ನೀರು ಮೂರು ಬಕೆಟಿಗೆ ಇಳಿಯಿತು.
ಮಗುವಿನ ಕಿರುಚಾಟವೂ ಅಷ್ಟರ ಮಟ್ಟಿಗೆ ಕಡಿಮೆಯಾಯಿತು.
ಲೇಪನಗಳನ್ನು ನಿಲ್ಲಿಸಿದ ಎರಡೇ ದಿನಕ್ಕೆ ಮುಳ್ಳು
ಮುಳ್ಳಾಗಿದ್ದ ಮಗುವಿನ ಮೈ ಮೃದುವಾಗತೊಡಗಿತು.
ಇಷ್ಟೆಲ್ಲ ಆಗುವ ಹೊತ್ತಿಗೆ ಮಗಳು
ಹೆತ್ತು ನಲುವತ್ತು ದಿನಗಳಾದುವು. ಚಂದ್ರಮ್ಮನ ಬಾಣಂತನದ ಅವಧಿಯೂ ಮುಗಿಯಿತು.
ಕೊಡಬೇಕಾದುದನ್ನೆಲ್ಲಾ ಕೊಟ್ಟು ಉಪಚರಿಸಿ ಅವಳನ್ನು
ಬೀಳ್ಕೊಟ್ಟು ನಿಡಿದಾದ ಉಸಿರನ್ನು ಬಿಟ್ಟೆವು!
ನಾನು ನನ್ನ ಮಕ್ಕಳನ್ನು
ಸ್ನಾನ ಮಾಡಿಸುತ್ತಿದ್ದಂತೆ ನಂತರದ ದಿನಗಳಲ್ಲಿ ತಾಜಾ ತೆಂಗಿನೆಣ್ಣೆ ಹಚ್ಚಿ
ನನ್ನ ಮೊಮ್ಮಗುವನ್ನು ಸ್ನಾನ ಮಾಡಿಸಲು ತೊಡಗಿದೆ.
ಒಂದೇ ಬಕೆಟು ನೀರು, ಐದಾರು
ನಿಮಿಷಗಳ ಅವಧಿ....ಅಭಯನ ಸ್ನಾನ
ಮುಗಿದು ಹೋಗುತ್ತಿತ್ತು! ಮಗು ಅಳಬೇಕೆಂದು ಬಾಯಿ
ಒಡೆಯುವಷ್ಟರಲ್ಲಿ ನಾನು ಅದರ ಮೈ
ಒರೆಸುವ ಹಂತಕ್ಕೆ ಮುಟ್ಟಿ ಬಿಡುತ್ತಿದ್ದೆನಲ್ಲಾ?
ಅದಕ್ಕೂ ಈ ರೀತಿಯ ಸ್ನಾನ
ವಿಚಿತ್ರವೆನಿಸಿರಬೇಕು. ಕೈಕಾಲು ಬಡಿಯುದನ್ನೂ ಮರೆತು
ನನ್ನನ್ನೇ ನೋಡುತ್ತಿತ್ತು, ಯಾವ ಸೀಮೆಯ ಸ್ನಾನವಿದು
ಎಂಬಂತೆ. ಒಂದು ದಿನ ನಮ್ಮ
ಮನೆಯ ಬಳಿ ಇರುವ ಅಂಗನವಾಡಿ ಟೀಚರು ಬಂದು ಕೇಳಿದರು,
"ಅಕ್ಕಾ..,
ಬಾಣಂತನದ ಹೆಂಗಸು ಹೋದ ಮೇಲೆ
ಮಗುವನ್ನು ಸ್ನಾನ ಮಾಡಿಸೋದೇ ಇಲ್ವಾ...?" (ನಮ್ಮ ಸುತ್ತಮುತ್ತಲ
ಮನೆಗಳ ಜನರ ಒಕ್ಕೊರಳ ಸಂಶಯಕ್ಕೆ ಟೀಚರು ಶಬ್ಧ ರೂಪವನ್ನು ಕೊಟ್ಟರು ಎಂದೆನಿಸಿತು)
ಮನೆಗಳ ಜನರ ಒಕ್ಕೊರಳ ಸಂಶಯಕ್ಕೆ ಟೀಚರು ಶಬ್ಧ ರೂಪವನ್ನು ಕೊಟ್ಟರು ಎಂದೆನಿಸಿತು)
"ಇಲ್ಲ
ಟೀಚರೇ...ಬಾಣಂತನದ ಸ್ನಾನ ಮುಗಿಯಿತು,
ಈಗ ನಮ್ಮ ಮೊಮ್ಮಗುವಿನ ನಾರ್ಮಲ್
ಸ್ನಾನ ಆಗ್ತಾ ಇರೋದಷ್ಟೆ." ಎಂದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ