ಇವತ್ತು 'ಆಂಟಿ ಅಂಕಲ್ ಡೇ' ಅಂತೆ. ಬೆಳಗ್ಗೆ ದಿನಪತ್ರಿಕೆಯಲ್ಲಿ ಈ ಕುರಿತು ಲಘು ಬರಹವೊಂದನ್ನು ಓದುತ್ತಿದ್ದೆ. ಹಾಗೇ ಹಳೆ ನೆನಪುಗಳು ನುಗ್ಗಿ ಬಂದುವು. ನಿಮ್ಮೊಡನೆ ಹಂಚಿಕೊಳ್ತಾ ಇದ್ದೀನಿ....
ನಾನಾಗ ಹೈಸ್ಕೂಲು ಹುಡುಗಿ. ಸಿನಿಮಾ ಹುಚ್ಚು ಬಹಳವಾಗಿಯೇ ಇತ್ತು. ಹಿಂದಿ ಸಿನೆಮಾ(ಹೆಸರು ನೆನಪಾಗ್ತಾ ಇಲ್ಲ) ವೊಂದನ್ನು ನೋಡುತ್ತಿದ್ದೆ ಅದರಲ್ಲಿ ನನ್ನ ಅಚ್ಚು ಮೆಚ್ಚಿನ ನಾಯಕಿಯನ್ನು ಬಲಾತ್ಕಾರದಿಂದ ವೇಶ್ಯಾಗೃಹಕ್ಕೆ ತಳ್ಳಲಾಗಿತ್ತು. ವೇಶ್ಯಾವಾಟಿಕೆ ನಡೆಸುವಾಕೆಯನ್ನು ಅಲ್ಲಿ ಎಲ್ಲರೂ 'ಆಂಟಿ' ಎಂದು ಕರೆಯುತ್ತಿದ್ದರು. ಆ ದಿನಗಳಲ್ಲಿ ನಿಜ ಜೀವನದಲ್ಲಿ ಯಾರೂ ಯಾರನ್ನೂ 'ಆಂಟೀ' ಎಂದು ಕರೆಯುತ್ತಿದ್ದುದನ್ನು ನಾನು ಕೇಳಿರಲೇ ಇಲ್ಲ. ಅಕ್ಕ, ಭಾವ,ಚಿಕ್ಕಮ್ಮ, ಚಿಕ್ಕಪ್ಪ, ಅತ್ತೆ, ಮಾವ, ದೊಡ್ಡಪ್ಪ, ದೊಡ್ಡಮ್ಮ, ಅಜ್ಜ, ಅಜ್ಜಿಯಂದಿರೆನ್ನುವುದೇ ಅಂದಿನ ಸಂಬೋದನಾ ರೀತಿಯಾಗಿತ್ತು. ನನ್ನ ಎಳೆಯ ಮನಸ್ಸಲ್ಲಿ ಆಂಟಿ ಎನ್ನುವ ಶಬ್ಧಕ್ಕೆ ಸಮಾನಾರ್ಥಕವಾಗಿ ಆ ಖೋಟಿವಾಲಿಯ ಚಿತ್ರ ಅಚ್ಚಾಗಿ ಹೋಗಿತ್ತು ಎಂದು ಕಾಣುತ್ತೆ. ಮುಂದೆ ನಾನು ಗೃಹಿಣಿಯಾಗಿ ಎಷ್ಟೋ ಮಂದಿ ನನ್ನನ್ನು 'ಆಂಟಿ' ಎಂದು ಕರೆಯುವಾಗಲೆಲ್ಲ ಮೈ ಮುಳ್ಳಾಗುತ್ತಿತ್ತು. ಮನಸ್ಸು ಕೆಂಡವಾಗುತ್ತಿತ್ತು. ಅಂತಹ ದಿನಗಳಲ್ಲಿ ಅಂದರೆ ಸುಮಾರು ಹತ್ತಿಪ್ಪತ್ತು ವರ್ಷಗಳ ಹಿಂದೆ ನಮ್ಮ ಮನೆಗೆ ಒಬ್ಬ ಹದಿಹರೆಯದ ಹುಡುಗ ಜೋಳಾ ಪುರಿ ಮಾರುತ್ತಾ ಬರುತ್ತಿದ್ದ.ನರಪೇತಲ ಶರೀರ, ಬರಿಕಾಲು,ಧಾರಾಕಾರವಾಗಿ ಸುರಿಯುವ ಬೆವರು,ತಲೆಯಮೇಲೆ ಜೋಳಾ ಪುರಿಯ ದೊಡ್ಡ ಮೂಟೆ. ಅಗತ್ಯವಿಲ್ಲದಿದ್ದರೂ ಆತನ ಮೇಲಿನ ಕನಿಕರದಿಂದ ಜೋಳಾ ಪುರಿ ಕೊಳ್ಳುತ್ತಿದ್ದೆ. ಅದರ ಗುಣಮಟ್ಟ ಚೆನ್ನಾಗಿತ್ತಾದುದರಿಂದ ಮುಂದೆ ನಾನು ಅವನ ಜ್ವಾಳ ಪುರಿಯ ಖಾಯಂ ಗಿರಾಕಿಯಾದೆ. ಪ್ರತಿವಾರ ಬರುತ್ತಿದ್ದ. ಪರಿಚಯ ಹೆಚ್ಚಿದಂತೆ ಅರಳು ಹುರಿದಂತೆ ಮಾತನಾಡತೊಡಗಿದ. ದೊಡ್ಡ ಬಳ್ಳಾಪುರದವನಂತೆ. ಹೊಟ್ಟೆ ಪಾಡಿಗಾಗಿ ಇಲ್ಲಿಗೆ ಬಂದಿದ್ದಾನೆ. ಜೋಳಾ ಪುರಿಯ ದುಡ್ಡು ಕೊಡುವಾಗ ಅಲ್ಪ ಸ್ವಲ್ಪ ತಿಂಡಿಯನ್ನೂ ಕೊಡತೊಡಗಿದೆ. ಹುಡುಗ ಖುಷಿ ಖುಷಿಯಾಗಿ ತಿನ್ನುತ್ತಿದ್ದ. ಅದುವರೆಗೂ ಅವನು ನನ್ನನ್ನು ಏನೆಂದೂ ಸಂಬೋದಿಸದೆ ಸುಮ್ಮನೆ ಮಾತನಾಡುತ್ತಿದ್ದ.ನನಗೂ ಅವನ ಹೆಸರು ಗೊತ್ತಿರಲಿಲ್ಲ. 'ಏಯ್ ಹುಡುಗ' ಎನ್ನುತ್ತಿದ್ದೆ. ಅಂದು ಬಹುಶಃ ಎಲ್ಲ ಮನೆಗಳನ್ನೂ ಮುಗಿಸಿ ಕೊನೆಯದಾಗಿ ನಮ್ಮ ಮನೆಗೆ ಬಂದಿರಬೇಕು.ಗೋಣಿ ಚೀಲ ಬಡಕಲಾಗಿ ಹೋಗಿತ್ತು. ತುಂಬಾ ಹೊತ್ತು ಕುಳಿತು ಪಟಾಂಗ ಹೊಡೆದ. ಅವರೂರಲ್ಲಿ ಬರಗಾಲ ಬಂದು ಬೆಳೆಯಿಲ್ಲದೆ ಕೈ ಬಾಯಿಗೆ ಹೋಗದ ಸ್ಥಿತಿಯನ್ನು ವಿವರಿಸುತ್ತಿದ್ದರೆ ನಾನು ಸ್ಥಬ್ಧಳಾಗಿ ಕೇಳುತ್ತಿದ್ದೆ. ಕೊನೆಗೆ ಹೇಳಿದ,'ಆಂಟೀ..., ನಾನು ನಾಳೆ ಊರಿಗೆ ಹೊಂಟೋಯ್ತೀನಿ ..., ಈ ಸಾರಿ ಜ್ವಾಳ (ಜೋಳ) ಬೆಳೆಯೋ ಹಂಗಿಲ್ಲಾ...,ಮಳೆ ಬೆಳೆ ಚನ್ನಾಗಾದ್ಮೇಲೆ ಬತ್ತೀನಿ ...' ಅಂದ. ಪಾಪ ಅನಿಸಿದ್ದಕ್ಕೂ ಮೀರಿ ಸಿಟ್ಟು ಉಕ್ಕಿ ಬಂತು.ಕೂಡಲೇ ಹೇಳಿದೆ,
'ಯೇಯ್..., ನನ್ನನ್ನು ಆಂಟಿ..... ಸೂಂಟಿ ಎಂದೆಲ್ಲ ಕರೀಬೇಡ..., ಅಕ್ಕಾ...,ಅಮ್ಮಾ... ಅಜ್ಜೀ... ಏನ್ಬೇಕಿದ್ರೂ ಕರಿ....ಆಂಟಿ ಅಂತ ಮಾತ್ರ ಕರೀಬೇಡ... ಗೊತ್ತಾಯ್ತಾ.... ಹಾಂ... ?'ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದೆ.ದೊಡ್ಡ ಬಳ್ಳಾಪುರದವನಿಗೆ 'ಸೂಂಟಿ' ಶಬ್ಧದ ಅರ್ಥ ಗೊತ್ತಿದ್ದರೆ ತಾನೇ? ಏನೋ ದೊಡ್ಡ ಕುಂಬಳಕಾಯಿಯೇ ಇರಬೇಕೆಂದು ಹೆದರಿಹೋದ ಹುಡುಗ ನಡುಗುವ ದನಿಯಲ್ಲಿ 'ಸರಿ ಆಂಟಿ..' ಅಂದ!
ಇನ್ನಷ್ಟು ಸಿಟ್ಟಿನಿಂದ ಕಣ್ಣು ದೊಡ್ಡದು ಮಾಡಿ ಹೊಡೆಯುವಂತೆ ಕೈ ಎತ್ತಿದೆ. ಕೊಟ್ಟ ದುಡ್ಡು ಮತ್ತು ತಿಂಡಿಯನ್ನು ಜೇಬಿಗೆ ಹಾಕಿಕೊಂಡ ಹುಡುಗ ಮುಖ ಚಿಕ್ಕದು ಮಾಡಿಕೊಂಡು ಗೋಣಿ ಚೀಲದೊಡನೆ ಓಡೇ ಬಿಟ್ಟ.ಮುಂದೆ ನನ್ನ ಮಕ್ಕಳೆಲ್ಲ ದೊಡ್ಡವರಾಗಿ ಅವರ ಸ್ನೇಹಿತರೆಲ್ಲ ಮನೆಗೆ ಬಂದು ನನ್ನ ಹಿಂದೆ ಮುಂದೆ ಸುತ್ತುತ್ತಾ 'ಆಂಟಿ..... ಆಂಟೀ....' ಎಂದು ಕರೆಯುವಾಗಲೆಲ್ಲಾ ಮನಸ್ಸು ಪ್ರತಿಭಟಿಸುತ್ತಿದ್ದರೂ ತೋರಿಸಿಕೊಳ್ಳದೆ 'ಕಾಲಕ್ಕೆ ತಕ್ಕ ಕೋಲ' ಇರಲೇಬೇಕು ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡೆ. ಮತ್ತು ಆ ಕರೆಗೆ ಹೊಂದಿಕೊಳ್ಳಲೂ ಕಲಿತುಕೊಂಡೆ. ಸುಮಾರು ಒಂದೆರಡು ತಿಂಗಳುಗಳ ಹಿಂದೆ ಇರಬೇಕು.ಸಂಜೆಯ ಹೊತ್ತು. ವೆರಾಂಡದಲ್ಲಿ ಕುಳಿತಿದ್ದೆ. ಕಟ್ಟು ಮಸ್ತಾದ ಯುವಕನೋರ್ವ ಗೇಟು ತೆರೆದು ಒಳಕ್ಕೆ ಬಂದ. ಕೈಯ್ಯಲ್ಲ್ಲಿ ತುಂಬಿದ ಚೀಲವೊಂದಿತ್ತು. ಪ್ರಶ್ನಾರ್ಥಕವಾಗಿ ನೋಡಿದೆ.
"ಅಕ್ಕಾ..., ಗ್ಯಪ್ತಿ (ಜ್ಞಾಪಕ) ಬರ್ಲಿಲ್ಲೇನ್ರಾ...? ನಾನು ಜ್ವಾಳಾ ಪುರಿ ಹುಡ್ಗಾ..." ಅಂದ.
ಒಹ್...! ಹೇಗಿದ್ದವ ಹೇಗಾಗಿ ಬಿಟ್ಟಿದ್ದಾನೆ...! ಟ್ರಿಮ್ ಆಗಿ ಡ್ರೆಸ್ ಮಾಡಿಕೊಂಡಿದ್ದ. ಮುಖದಲ್ಲಿ ಆತ್ಮವಿಶ್ವಾಸದ ನಗು! ಮೊದಲಿನ ಸಲಿಗೆಯಲ್ಲೇ ಪರಸ್ಪರ ಮಾತುಗಳನ್ನಾಡಿಕೊಂಡೆವು. ಹೊಸಪೇಟೆಯಲ್ಲಿ ಫಾಸ್ಟ್ ಫುಡ್ ಸೆಂಟರ್ ಇಟ್ಕೊಂಡು ಜೊತೆಯಲ್ಲಿ ಪಾಪ್ಕಾರ್ನ್ ಯಂತ್ರವನ್ನೂ ಹಾಕಿಕೊಂಡಿದ್ದಾನಂತೆ. ವ್ಯಾಪಾರ ಪರವಾಗಿಲ್ಲವಂತೆ. ಪುಟ್ಟದಾಗಿ ಜಮೀನು ಮಾಡ್ಕೊಂಡು ಹೆತ್ತವರನ್ನು ಅಲ್ಲಿಗೇ ಕರೆಸ್ಕೊಂಡಿದ್ದಾನಂತೆ. ದೊಡ್ಡಬಳ್ಳಾಪುರ ಮೂಲದ ಕುಟುಂಬವೊಂದು ಮಂಗಳೂರಲ್ಲಿಯಿದೆಯಂತೆ. ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿರುವ ಆ ಸಂಸಾರದ ಹೆಣ್ಣೊಂದನ್ನು ಈತ ಮದುವೆಯಾಗಿದ್ದಂತೆ. ಹಾಗೆ ಮಾವನ ಮನೆಗೆ ಬಂದವನು ನಮ್ಮಲ್ಲಿಗೂ ಬಂದಿದ್ದ! ಕಾಫಿ ತಿಂಡಿ ಕೊಟ್ಟೆ. ಎಲ್ಲ ಮುಗಿಸಿ ಹೊರಡಲೆಂದು ಎದ್ದು ನಿಂತವ ಕೈಯ್ಯಲ್ಲಿದ್ದ ಚೀಲವನ್ನು ನನ್ನ ಮುಂದಿಟ್ಟು ಹೇಳಿದ,
"ಅಕ್ಕಾ..., ತಗೊಳ್ರೀ...., ನಮ್ಮ ಜಮೀನ್ದಾಗೆ ಬೆಳ್ದಿದ್ದು ರಾಗಿ.... , ನಮ್ಮೂರ್ನಾಗೆ ಎಲ್ರಿಗೆ ಎಲ್ರೂ 'ಆಂಟೀ..' ಅಂತಾನೇ ಕರಿಯೋಕ್ ಶುರು ಹತ್ಕೊಂಡ್ ಬಾಳ ಸಮ್ಯ ಆಗೋಯ್ತ್ರೀ ......, ನಿಮ್ಮುಂದ ಹಾಂಗ್ ಹೇಳೋ ಹಂಗಿಲ್ವಲ್ರೀ... ಹ್ವಾದ್ ಸಾರಿ ನಿಮ್ಮನ್ನ ಹಂಗ್ ಕರ್ದಿದಕ್ಕೆ ಬಾಳ ಸಿಟ್ ಮಾಡ್ಕಂಡ್ ಜ್ವಾರ್ ಮಾಡ್ಬಿಟ್ರಲ್ರೀ..., ಅದಿಕ್ಕೆ ಈ ಸಲ ನ್ಯಂಪ್ ಇಟ್ಕಂಡ್ ಅಕ್ಕಾ ಅಂದಿವ್ನಿ..." ಎಂದ ! ಅವನು ನಗುತ್ತಾ ಹೇಳುತ್ತಿದ್ದರೆ ನಾನು ಒಳಗೊಳಗೇ ಅತ್ತುಬಿಟ್ಟೆ.
ನಮ್ಮ ದೇಶದಲ್ಲಿ ಇಂದು ಈ ಆಂಟಿ ಅಂಕಲ್ ಸಾರ್ವತ್ರಿಕವಾಗಿ ಹೋಗಿದೆ - ಆದರೂ ಆ ಯುವಕನ ಕಾಳಜಿ ಮನ ಮುಟ್ಟುತ್ತದೆ
ಪ್ರತ್ಯುತ್ತರಅಳಿಸಿ