ಮೊನ್ನೆ ನಮ್ಮನ್ನಗಲಿದ ಸಜ್ಜನರಲ್ಲಿ ಸಜ್ಜನ ಕಲಾಂ ಮೇಷ್ಟ್ರ ಹಳೆ ಆಲ್ಬಮನ್ನು ನೆಟ್ಟಲ್ಲಿ ನೋಡುತ್ತಿದ್ದೆ. ಅವರು ಬಾಲ್ಯ ಸ್ನೇಹಿತನೊಡನೆ ರಾಮೇಶ್ವರದಲ್ಲಿ ಅಡ್ದಾಡುವುದು, ವೀಣೆ ನುಡಿಸುವುದು, ಆತ್ಮೀಯ ಗೆಳೆಯನ ಮನೆಯಲ್ಲಿ ಭೋಜನ ಮಾಡುವುದು.... ಹೀಗೆ ಎಷ್ಟೆಷ್ಟೋ ಫೋಟೋಗಳು. ಈ ಎಲ್ಲ ಫೋಟೋಗಳು ಅವರು ವಿಜ್ಞಾನಿಯಾಗಿ ಪ್ರಸಿದ್ಧಿಗೆ ಬಂದ ನಂತರದವುಗಳು. ಎಲ್ಲಾ ಫೋಟೋಗಳಲ್ಲಿ ಸಮಾನವಾದ ಒಂದಂಶ ಅವರು ಉಟ್ಟಿರುವ ಪಂಚೆ ಮತ್ತು ನಗು ಮುಖ. ಮುಂದೆ ಅವರು ರಾಷ್ಟ್ರಪತಿಯಾದ ಮೇಲಿನ ಒಂದು ಫೋಟೋದಲ್ಲಿ ಅವರೊಂದಿಗೆ ಅವರ ಪರಿವಾರದವರೆಲ್ಲರೂ ಇದ್ದರು. ರಾಷ್ಟ್ರಪತಿ ಭವನ ನೋಡಲೆಂದು ಬಂದಿದ್ದ ಅವರೆಲ್ಲರಲ್ಲೂ ಸಮಾನವಾದ ಒಂದಂಶವನ್ನು ಗಮನಿಸಿದ್ದೆ. ಪುನಃ ಅದೇ ಪಂಚೆ ಮತ್ತು ನಗುಮುಖ! ಯಾವಾಗ ಕಲಾಂ ಅವರು ರಾಷ್ಟ್ರಪತಿಯಾದರೋ, ಪಂಚೆಯುಟ್ಟೇ ರಾಷ್ಟ್ರಪತಿ ಭವನದ ಹುಲ್ಲುಹಾಸಿನ ಮೇಲೆ ಬಿಡುಬೀಸಾಗಿ ನಡೆದಾಡಿದರೋ ಆಗಲೇ ನಮ್ಮ (ಭಾರತೀಯರ) ರಕ್ತದಲ್ಲಿ ಗಡ್ಡೆ ಕಟ್ಟಿ ಹೋಗಿದ್ದ ಫಾಲ್ಸ್ ಪ್ರೆಸ್ಟೀಜ್ ಅಥವಾ ಒಣ ಜಂಭವೆನ್ನುವ ಹೊಲಸು ಕರಗಿ ನೀರಾಗತೊಡಗಿದ್ದು. ಅದಕ್ಕೆ ಇಂಬು ಕೊಡುವಂತಹ ಕೆಲವು ಘಟನೆಗಳ ಸ್ಯಾಂಪಲ್ ನೋಡಿ.
ದಿನಪತ್ರಿಕೆಯೊಂದರಲ್ಲಿ ಹೊಚ್ಚ ಹೊಸ ಕಾರಿನ ಬಿಡುಗಡೆಯ ಫೋಟೋವೊಂದು ಅಚ್ಚಾಗಿತ್ತು. ಸಾಮಾನ್ಯವಾಗಿ ಇಂತಹ ಸಂದರ್ಭಗಳ ದೃಶ್ಯ ಹೇಗಿರುತ್ತೆ? ಮೂರ್ನಾಲ್ಕು ಸೂಟು ಬೂಟುಧಾರಿಗಳು ಕಾರಿನ ಒಂದು ಪಕ್ಕ ಸ್ವಲ್ಪ ಹಿಂಬದಿಗೆ ನಿಂತಿರುತ್ತಾರೆ. ಇನ್ನೊಂದು ಪಕ್ಕ ಅದರ ಬಾನೆಟ್ ಮೇಲೆ ಒರಗಿದಂತೆ ನಿಂತಿರುವ ಸುರಸುಂದರಿ ರೂಪದರ್ಶಿಯೋರ್ವಳು ತನ್ನ ನೀಟಾದ ಸ್ಕರ್ಟ್, ಪೆನ್ಸಿಲು ಮೊನೆಯ ಹೀಲ್ಸ್, ಸ್ಟ್ರೈಟನ್ ಮಾಡಿಸಿದ ಕೂದಲನ್ನು ಎದೆಯ ಮೇಲೆ ಇಳಿಬಿಟ್ಟು ಒಂದು ಕಾಲನ್ನು ಸ್ವಲ್ಪ ಡೊಂಕಾಗಿಸಿ ಹುಣ್ಣಿಮೆ ಚಂದ್ರನಂತಹ ಮುಖದಲ್ಲಿ ನಗುವರಳಿಸಿ ಜಗಮಗಿಸುತ್ತಿರುತ್ತಾಳೆ ಅಲ್ಲವೇ? ಕಾರು ಹಾಗೂ ಹುಡುಗಿಯ ನಡುವಿನ ಸೌಂದರ್ಯ ಸ್ಪರ್ಧೆಯಲ್ಲಿ ಬಡಪಾಯಿ ಗ್ರಾಹಕರು ಕನ್ಫ್ಯೂಸ್ ಆಗಿ ಪಜೀತಿಯಾದ ಘಟನೆಗಳೆಷ್ಟೋ...?ಆದರೆ ಆ ದಿನಪತ್ರಿಕೆಯಲ್ಲಿ ನಾನು ನೋಡಿದ ಫೋಟೋ ಇದಕ್ಕೆ ತದ್ವಿರುದ್ಧವಾಗಿತ್ತು. ಕಡುಕೆಂಪು ಬಣ್ಣದ ಅತಿ ಬೆಲೆ ಬಾಳುವ ಆ ಸುಂದರ ಕಾರಿನ ಬಲಭಾಗದಲ್ಲಿ ಎಂದಿನಂತೆ ಖಡಕ್ ಡ್ರೆಸ್ಸಿನ ಅಧಿಕಾರಿಗಳು ನಿಂತಿದ್ದರು.ಎಡಭಾಗದಲ್ಲಿ ಕಾರನ್ನು ಬಿಡುಗಡೆಗೊಳಿಸಿದ ಗಣ್ಯ ಅಥಿತಿಯೋರ್ವರು ನಿಂತಿದ್ದರು. ಪಕ್ಕಾ ನಮ್ಮ ದಕ್ಷಿಣ ಭಾರತದ ಔಟ್ ಫಿಟ್ಟಲ್ಲಿ ಕಂಗೊಳಿಸುತ್ತಿದ್ದರು. ಜರಿಯಂಚಿನ ಶುಭ್ರ ಪಂಚೆ, ತೋಳನ್ನು ಮೇಲಕ್ಕೆತ್ತಿ ಮಡಚಿದ ಸಾದಾ ಬಿಳಿ ಅಂಗಿ! ಮುಖದಲ್ಲಿ ಆತ್ಮ ವಿಶ್ವಾಸದ ಮುಗುಳ್ನಗು, ನಿಲುವಿನಲ್ಲಿ ಘನ ಗಾಂಭೀರ್ಯ. ಸತ್ಯ ಹೇಳಬೇಕೆಂದರೆ ಆ ಸೂಟುಧಾರಿಗಳು ಇವರೆದುರು ಕಳಾಹೀನರಾಗಿ ಕಾಣಿಸುತ್ತಿದ್ದರು.ಇಲ್ಲಿ ಗ್ರಾಹಕರು ಬೇಸ್ತು ಬೀಳುವ ಪ್ರಸಂಗವೇ ಇರಲಿಲ್ಲ. ಯಾಕೆಂದರೆ ಅವರೇ ಅದರ ಮೊದಲ ಗ್ರಾಹಕರೂ ಆಗಿದ್ದರು.
ಈ ಘಟನೆ ನಡೆದಾಗ ದಿ.ಕಲಾಂ ಅವರೇ ರಾಷ್ಟ್ರಪತಿಯಾಗಿದ್ದರು. ಸ್ವಕ್ಷೇತ್ರದಲ್ಲಿ ವಿಷೇಶ ಸಾಧನೆ ಮಾಡಿದವರು ರಾಷ್ಟ್ರಪತಿ ಭವನದಲ್ಲಿ ಪುರಸ್ಕಾರ ಸ್ವೀಕರಿಸುವ ಸಮಾರಂಭ. ಈ ಯಾದಿಯಲ್ಲಿ ನನ್ನ ಒಬ್ಬರು ಮಾವನೂ ಇದ್ದರು. ಆಮಂತ್ರಣ ಪತ್ರಿಕೆ ಬಂತು. ಔಪಚಾರಿಕ ಕರೆಯೊಂದಿಗೆ ಆ ದಿನದ ವಸ್ತ್ರ ಸಂಹಿತೆಯ ಬಗ್ಗೆಯೂ ಸೂಚನೆ ಇತ್ತು. ಆಹ್ವಾನಿತರು ಬಿಳಿ ಬಣ್ಣದ ಬಟ್ಟೆ ಧರಿಸಿರಬೇಕಾಗಿತ್ತು. ಸರಿ. ನಿಗದಿತ ದಿನದಂದು ಮಾವ ಅಲ್ಲಿದ್ದರು.ಸಭಾಭವನದಲ್ಲಿ ಪ್ರೇಕ್ಷಕ ವರ್ಗದ ಮುಂದಿನ ಮೂರು ಸಾಲುಗಳಲ್ಲಿ ಶ್ವೇತ ಶುಭ್ರ ಕೊಕ್ಕರೆಗಳೇಸಾಲು ಸಾಲಾಗಿ ಕತ್ತು ಬಗ್ಗಿಸಿ ಕುಳಿತಂತೆ ತೋರುತ್ತಿತ್ತಂತೆ. ಸ್ವತಃ ರಾಷ್ಟ್ರಪತಿಗಳೇ ಪ್ರಶಸ್ತಿ ಪ್ರದಾನ ಮಾಡುತ್ತಿದ್ದರು. ಪ್ರಶಸ್ತಿ ಸ್ವೀಕರಿಸಲು ಒಬ್ಬೊಬ್ಬರಾಗಿ ವೇದಿಕೆಯೇರತೊಡಗಿದರು. ಬಿಳಿ ಉಣ್ಣೆಯ ಸೂಟು, ಸಫಾರಿ ಸೂಟು, ಪ್ಯಾಂಟು, ಶರ್ಟು, ಸಿಲ್ಕಿನ ಜುಬ್ಬಾ ಪೈಜಾಮ, ಅಚ್ಚ ಬಿಳಿ ರೇಶ್ಮೆಯ ಭಾರೀ ಭಾರೀ ಸೀರೆಗಳು, ಸಲ್ವಾರ್ ಸೂಟುಗಳು.... ಹೀಗೆ ಸಮಸ್ತ ವೇದಿಕೆಯು ಹಾಲ್ನೊರೆ ಉಕ್ಕಿ ಹರಿಯುತ್ತಿರುವಂತೆ ಭಾಸವಾಗುತ್ತಿರಲು ನಮ್ಮ ಮಾವನ ಸರದಿ ಬಂತು. ರಾಷ್ಟ್ರಪತಿಗಳಿಗೆ ತಲೆಬಾಗಿ ವಂದಿಸಿ ವಿನೀತರಾಗಿ ಕೈ ಚಾಚಿದಾಗ ಅಲ್ಲೊಂದು ಅನೂಹ್ಯ ಘಟನೆ ಸಂಭವಿಸಿತಂತೆ. ರಾಷ್ಟ್ರಪತಿಗಳು ನಗುನಗುತ್ತಾ ಇವರೆಡೆಗೆ ತುಸುವೇ ಬಾಗಿ ಕೇಳಿದರಂತೆ,'are you from Kerala?' ರಾಷ್ಟ್ರಪತಿಗಳು ವೈಯ್ಯಕ್ತಿಕ ಆಸಕ್ತಿಯಿಂದ ಮಾತನಾಡಿಸುವುದೆಂದರೆ ಅದೇನು ಸಾಮಾನ್ಯ ಸಂಗತಿಯೇ? ಸಾವರಿಸಿಕೊಂಡ ಇವರು 'yes.sir.' ಎಂದರಂತೆ. ಅವರು ಹಸ್ತ ಲಾಘವ ಮಾಡಿ ಪ್ರಶಸ್ತಿ ಪತ್ರವನ್ನು ಹಸ್ತಾಂತರಿಸುತ್ತಾ 'congratulations...keep it up' ಎಂದರಂತೆ. ಇವರಿಗಾದರೋ ಸ್ವರ್ಗಕ್ಕೆ ಮೂರೇ ಗೇಣು. ನಡೆದ ಸಂಗತಿಯೇನು ಎಂಬುದನ್ನು ಊಹಿಸಿದಿರಾ? ಮಾವ ನಮ್ಮ ಕೇರಳದ ಸಾಂಪ್ರದಾಯಿಕ ಬಿಳಿ ಪಂಚೆ ಮತ್ತು ಅಂಗಿಯನ್ನು ಧರಿಸಿ ಅತ್ಯಂತ ಸರಳ ವೇಷಧಾರಿಯಾಗಿ ಹೋಗಿದ್ದರು. ಕಲಾಂ ಸರ್ ಅವರು ತಮ್ಮ ಸರಳತೆಯನ್ನು ಅಭಿನಂದಿಸಿದರೋ ಇಲ್ಲಾ ತಮ್ಮ ಸಾಧನೆಯನ್ನೋ ಎಂಬ ಗೊಂದಲ ಅವರಿಗೆ ಇಂದಿಗೂ ಇದೆ! (ಸಶೇಷ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ