ಭಾನುವಾರ, ಜುಲೈ 5, 2015

ಮಾತು-ಧ್ವನಿ

ಇದೇನು ಇಂತಹ ಅಸಂಬದ್ಧ ತಲೆಬರಹ ....?ಮಾತು ಎಂದಾಗ ಧ್ವನಿಯೂ ಇದ್ದೇ ಇರುತ್ತಲ್ಲಾ...ಅದನ್ನು ಪ್ರತ್ಯೇಕವಾಗಿ ಉಲ್ಲೇಖ ಮಾಡುವ ಅಗತ್ಯೇವೇನು (ಬಾರ್ ಸೋಪು ಸಾಬೂನು ಎಂದಂತೆ) ಎಂದುಕೊಂಡಿರಾ? ಸಾರಸ್ಯ ಇರುವುದು ಅಲ್ಲೇ.  ಭಾಷೆ ಸರಿಯಾಗಿ ಬಲ್ಲ ಎಂತಹವರೂ ಒಂದು ವಾಕ್ಯದ ಶಬ್ಧಾರ್ಥವನ್ನು ಹೇಳಬಲ್ಲರು. ಆದರೆ ಅದರ ಇಂಗಿತ ಅಥವಾ ಅದು ಧ್ವನಿಸುವಂತಹ ಅರ್ಥಗಳು ಹಲವು ಇರಬಹುದು. ಉದಾ:- 'ನೀನು ಇಷ್ಟು ಬೇಗನೆ ಇಲ್ಲಿಗೆ ಬರುತ್ತೀಯಾ ಎಂದು ನಾನು ನಿರೀಕ್ಷಿಸಿಯೇ ಇರಲಿಲ್ಲ.' ಈ ವಾಕ್ಯ ಮೇಲ್ನೋಟಕ್ಕೆ ಎಷ್ಟು ಸರಳವಾಗಿದೆ ಅಲ್ಲವೇ? ಆದರೆ ಇದನ್ನು ಹೀಗೂ ಅರ್ಥೈಸಬಹುದು, 'ನನ್ನ ಕೆಲಸಗಳು ಇನ್ನೂ ಮುಗಿದೇ ಇಲ್ಲ, ಆಗಲೇ ನೀನು ವಕ್ಕರಿಸಿಬಿಟ್ಟೆಯಾ..., ಕರಾರುವಕ್ಕಾಗಿ ಇಷ್ಟು ಘಂಟೆಗೇ ಬರುವವಳಿ(ನಿ)ದ್ದೇನೆ ಎಂದು ಮೊದಲೇ ಹೇಳಲು ನಿನಗೇನು ಸಂಕಟ..?, ಬೆಳಗ್ಗೆ ಬೆಳಗ್ಗೆಯೇ ನಿನ್ನ ಕೊರೆತ ಕೇಳುವ ಕರ್ಮ ನನ್ನದು...', ಹೀಗೆ ಹತ್ತು ಹಲವು ವಿಧದಲ್ಲಿ ಅವರವರ ಭಾವಕ್ಕೆ ತಕ್ಕಂತೆ ಅರ್ಥೈಸಿಕೊಳ್ಳಬಹುದು.ಇದನ್ನೇ ಮಾತುಗಳೊಳಗಿನ ಧ್ವನಿ ಎನ್ನುವುದು. ಮಾತು ಎನ್ನುವುದು ಒಂದು ಕಲೆ. ಅದರಲ್ಲೂ ಅರ್ಥಗರ್ಭಿತ ಮಾತು ಹಾಗೂ ಮಾತಿನ ಗರ್ಭದೊಳಗೆ ಅನ್ಯಾರ್ಥವನ್ನು ಹುದುಗಿಸಿ ಸುಂದರವಾದ ಶಬ್ಧಗಳ ಮೂಲಕ ಹೊರಗೆಡಹುದಿದೆಯಲ್ಲಾ ಅದೊಂದು ನೈಪುಣ್ಯತೆ. ಸ್ತ್ರೀಯರು ಇದರಲ್ಲಿ ಬಹಳ ನಿಪುಣರು ಎಂದು ನನ್ನ ಅನಿಸಿಕೆ. ನಿತ್ಯ ಜೀವನದಲ್ಲಿ ಇಂತಹ ಹಲವು ಘಟನೆಗಳಿಗೆ ನಾವು ಸಾಕ್ಷಿಯಾಗುತ್ತೇವೆಯಾದರೂ ಅವುಗಳನ್ನು ಗಮನಿಸಿ ನೆನಪಿಟ್ಟುಕೊಳ್ಳುವಷ್ಟು ವ್ಯವಧಾನ ಯಾರಿಗಿದೆ? ಅಂತಹ ಒಂದು ಚಿಕ್ಕ ಪ್ರಯತ್ನವನ್ನಷ್ಟೆ ನಾನಿಲ್ಲಿ ಮಾಡಿರುವುದು.
ಬ್ರಹ್ಮನ ಸೃಷ್ಟಿಯಲ್ಲಿ  ಸ್ತ್ರೀ ಪ್ರಭೇದದ ಸೃಷ್ಟಿಯಾಗದೇ ಇರುತ್ತಿದ್ದರೆ ಇಡೀ ಜಗತ್ತು ಡಯಾಬೆಟಿಕ್ ಡಯಟ್ಟಿನಂತಾಗಿ ಹೋಗಿರುತ್ತಿತ್ತು, ಸಪ್ಪೆ... ಸಪ್ಪೆ....ಬರೀ ಸಪ್ಪೆ. ಬ್ರಹ್ಮ ಸ್ವತಃ ವಿರಾಗಿಯಾಗಿದ್ದರೂ ಈ ಭೂಮಂಡಲವು ವೈರಾಗ್ಯ ಮಂದಿರವಾಗುವುದು ಬೇಡ ಎಂದೇ ಸರಸ್ವತಿಯನ್ನು ಸೃಷ್ಟಿಸಿ  ಆಕೆಯನ್ನು ವರಿಸಿದ್ದಿರಬೇಕು .ಅಷ್ಟರ ಮಟ್ಟಿಗೆ ನಾವು ಆತನಿಗೆ ಕೃತಜ್ಞರಾಗೋಣ. ಸ್ತ್ರೀಯು ಬರಿಯ ತನ್ನ  ಕಣ್ಸನ್ನೆ, ಕಣ್ಣೋಟ ಮತ್ತು ಹತ್ತು ಹಲವು ವಿಧದ ನಗುವಿನಿಂದಲೇ ಮನದಲ್ಲಿರುವ ಭಾವನೆಗಳನ್ನು ಬೇಕೆನಿಸಿದಾಗ ಬೇಕೆಂದವರೊಡನೆ ಬೆಣ್ಣೆಯಲ್ಲಿ ಕೂದಲೆಳೆದಂತೆ ನವುರಾಗಿ ವ್ಯಕ್ತ ಪಡಿಸಿ ಕಾರ್ಯ ಸಾಧಿಸಿಕೊಳ್ಳಬಲ್ಲಳು. ಈ ಎಲ್ಲ ಆಂಗಿಕ ಭಾಷೆಗಳೊಂದಿಗೆ ಮಾತೂ ಸೇರಿಕೊಂಡರೆ ಕೇಳಬೇಕೆ?  ಪರಿಣಾಮ.... ? ಇಡೀ ಜಗತ್ತೇ  ರಂಗು ರಂಗಿನಾಟದ ರಂಗ ಮಂಚವಾಗಿದೆ. ಅಂದಿನ ಸೀತೆಯಿಂದ ಹಿಡಿದು ಇಂದಿನ ಸ್ಮಿತಾವರೆಗೂ ಎಲ್ಲವೂ ನಡೆಯುತ್ತಿರುವುದು ಹೆಣ್ಣಿಂದ, ಹೆಣ್ಣಿಗಾಗಿ, ಹೆಣ್ಣಿಗೋಸ್ಕರ ಎಂದರೆ ತಪ್ಪಾಗಲಾರದೇನೊ? ಹೆಣ್ಣಿಗೆ ಚುರುಕುಮತಿ, ಚಾಣಕ್ಯಮತಿ, ಚಂಡೀಮತಿ ಎಂದೆಲ್ಲಾ ಬಿರುದು ಬಾವಲಿಗಳನ್ನಿತ್ತು ಹರಸಿದ ನಮ್ಮ ಪುರುಷ ರತ್ನಗಳು ಒಂದನ್ನಂತೂ ಒಪ್ಪಿಕೊಂಡಂತಾಯ್ತು, 'ನೀನು ಚುರುಕುಮತಿ' ಎನ್ನುವ ಆ ಶಬ್ಧಗಳ ಧ್ವನಿ 'ನಿನ್ನಷ್ಟು ನಾನು ಚರುಕಿನವನಲ್ಲ' ಎಂದೂ ಆಗಬಹುದಲ್ಲವೇ? ಅದು ಹೇಗೂ ಇರಲಿ, ಚುರುಕು ಮಾತು, ಚಾಣಾಕ್ಷ ಧ್ವನಿಗಳು ಹೇಗೆ ಕೆಲಸ ಮಾಡುತ್ತವೆ ಎಂಬುದಕ್ಕೆ ಉದಾಹರಣೆಯಾಗಿ ಕೆಲವು ರೋಚಕ ಘಟನೆಗಳು ಇಲ್ಲಿವೆ. ಓದಿನೋಡಿ ...,
ಆ ಮನೆಯಲ್ಲಿ ಗಂಡ ತನ್ನ ಹೆಂಡತಿಗೆ ತಿಳಿಯದಂತೆ ಫೈನಾನ್ಸ್ ಕಂಪೆನಿಯೊಂದರಲ್ಲಿ ಒಂದಷ್ಟು ದುಡ್ಡಿಟ್ಟಿರುತ್ತಾನೆ. ಬೇರೆಯವರ ಮೂಲಕ ಪತ್ನಿಗೆ ಅದು ತಿಳಿದರೂ ಮಾತುಗಳಲ್ಲಾಗಲೀ ನಡತೆಯಲ್ಲಾಗಲೀ ಅವಳದನ್ನು ತೋರ್ಪಡಿಸುವುದಿಲ್ಲ. ಕೆಲವು ಸಮಯದ ನಂತರ ಆ ಕಂಪೆನಿ ಬ್ಲೇಡು ಕಂಪೆನಿಯಾಗುವ ಎಲ್ಲಾ ಸೂಚನೆಗಳೂ ಇವೆ ಎಂದು  ಆಕೆಯೊಡನೆ ಲೋಕಾಭಿರಾಮದ ಮಾತುಗಳನ್ನಾಡುತ್ತಾ ಯಾರೋ ಹೇಳುತ್ತಾರೆ.ಅವಳು ತಳಮಳಗೊಂಡರೂ  ಧೃತಿಗೆಡುವುದಿಲ್ಲ. ರಾತ್ರಿ ಹೊತ್ತು ನಿತ್ಯದಂತೆ ಮನೆಮಂದಿಯೆಲ್ಲರೂ ಕಲೆತಾಗ ಸಂದರ್ಭ ನೋಡಿ ತಣ್ಣಗೆ ಹೇಳುತ್ತಾಳೆ,
 'ನನ್ನ ಫ್ರೆಂಡಿನ ಗಂಡ 'ಆ ಫೈನಾನ್ಸ್' ಕಂಪೆನಿಯಲ್ಲಿಟ್ಟ ದುಡ್ಡನ್ನೆಲ್ಲಾ ಹಿಂಪಡೆದರಂತೆ, ಅಲ್ಲೇನೋ  ಗೋಲ್ಮಾಲ್ ನಡೆಯೋ ಹಾಗಿದೆಯಂತೆ......'
 ಈ ಮಾತುಗಳ ಹಿಂದಿನ ಧ್ವನಿಯಾದರೂ ಎಂತಹುದು? 'ಮಾರಾಯಾ...,ನಿನ್ನ ಗುಟ್ಟು ನನಗೆಲ್ಲಾ ಗೊತ್ತಿದೆ, ದುಡ್ಡು ಅಲ್ಲಿಟ್ಟು ರಾತ್ರಿ ಕಂಡ ಬಾವಿಗೆ ಹಗಲು ಬೀಳೋಕೆ ಹೋಗ್ತಿದ್ದೀಯಾ...ನಿನ್ನ ಗಂಟನ್ನ ಬೇಗನೆ ಭದ್ರಪಡಿಸಿಕೋ...' ಥಂಡಾ ಹೊಡೆದು ಹೋದ ಗಂಡ  ಮುಂದೊಮ್ಮೆ ಸಮಸ್ಯೆಯಾಗಬಹುದಾದುದನ್ನು  ಮಾರನೆಯ ದಿನವೇ  ಸರಿಪಡಿಸಿಕೊಂಡ.ಹೆಂಡತಿ ಹೇಳಬೇಕಾದುದನ್ನು ಹೇಳಿದ್ದಳು. ಆ ನಂತರವೂ ಅದರ ಬಗ್ಗೆ ಅವಳು ಕೇಳಲಿಲ್ಲ. ಅವನು ಹೇಳಲೂ ಇಲ್ಲ. ಅವಳು ಹೇಳದೆ ಇದ್ದುದನ್ನು ಅವನು ಅರ್ಥ ಮಾಡಿಕೊಂಡಿದ್ದ. ಅವನು ಅರ್ಥ ಮಾಡಿಕೊಂಡಿದ್ದಾನೆ ಎಂಬುದು ಅವಳಿಗೆ ಗೊತ್ತಾಗಿತ್ತು.  ಆ ಹೆಂಡತಿ ಚಂಡೀಮತಿಯಾಗಿರುತ್ತಿದ್ದರೆ ಅದೇ ದುಡ್ಡಿನ ವಿಷಯವಾಗಿ ಮನೆಯೊಳಗೆ ಬಹುದೊಡ್ಡ ಗಲಾಟೆಯೇ ಆಗಿರುತ್ತಿತ್ತು
('.... ನನ್ನ ತಮ್ಮ ಆತನ ಮಗನ ಓದಿಗೆಂದು ಒಂದೈವತ್ತು ಸಾವಿರ ಸಾಲ ಕೇಳಿದಾಗ ನೀವು ತಾರಮ್ಮಯ್ಯ ಎಂದು ಕೈ ಆಡಿಸಿ ಬಿಟ್ಟಿರಲ್ಲವೇ...?' ಎಂದೋ ಅಥವಾ 'ನನಗೊಂದು ಮುತ್ತಿನ ಸೆಟ್ ಮಾಡಿಸಿಕೊಡಿ ಎಂದು ನಾಲ್ಕು ವರ್ಷಗಳಿಂದ ಕೇಳ್ತಿದ್ದೀನಿ...  ಆಗೆಲ್ಲಾ ಬೇರೆ ಕಮಿಟ್ಮೆಂಟ್ ಇದೆ ... ಕಮಿಟ್ಮೆಂಟ್ ಇದೆ ... ಎಂದು ಹಾರಡಿದಿರಲ್ಲ...? ಈಗ ಅನುಭವಿಸಿ..., ನನಗೆ ಗೊತ್ತಿಲ್ಲದೆ ಇಡಿಗಂಟು ಮಾಡಲು ಹೊರಟರೆ ಏನಾಗುತ್ತೆ ಗೊತ್ತಾಯಿತಲ್ಲ ಈಗ....? ನಾನು ಹೇಳಿದ್ದಕ್ಕೇ  ನಿಮ್ಮ ದುಡ್ಡು ಉಳಿಯಿತು.  ನಾಳೆಯೇ ನನಗೆ ಹತ್ತು ಪವನು ಚಿನ್ನ ಕೊಡಿಸಿ .... .' ಎಂಬಿತ್ಯಾದಿ ಬೆಂಕಿ ಶಬ್ಧಗಳ ಜ್ವಾಲೆಯಲ್ಲಿ ಆತ ಸುಟ್ಟೇ ಹೋಗುತ್ತಿದ್ದ). ಅವಳು ಹಾಗೇನೂ ಮಾಡಲೇ ಇಲ್ಲ.  ಯಾಕೆಂದರೆ ಅವಳು ಚುರುಕುಮತಿ! ಮನೋವಿಜ್ಞಾನವನ್ನು ಚೆನ್ನಾಗಿ ತಿಳಿದವಳು. ಆತ್ಮೀಯರ ನಾಲ್ಕು ಬೈಗುಳಕ್ಕಿಂತ ಹೆಚ್ಚಿನ ವೇದನೆ ತರುವುದು ಅಸಾಮಾಧಾನ ಮೂಲವಾದ ಮೌನ ಎಂಬುದು ಆಕೆಗೆ ಗೊತ್ತಿತ್ತು. ಪತಿ ಪ್ರಾಮಾಣಿಕನೇ ಹೌದಾಗಿದ್ದರೆ ಮುಂದೆಂದೂ ಆಕೆಯಿಂದ ವಿಷಯಗಳನ್ನು ಬಚ್ಚಿಡಲಾರ.   'ಕಾಂತಾಸಂಹಿತಾ' ಎನ್ನುವ  ಪದಕ್ಕೆ  ವಿದ್ವಾಂಸರು   ಈ ರೀತಿಯಾಗಿ ಅರ್ಥ ವಿವರಣೆ ಕೊಟ್ಟಿರುವುದನ್ನು  ಕೇಳಿದ್ದೇನೆ. 'ತನ್ನ ಮನದಿಂಗಿತವನ್ನು ಪತಿಯ ಮನ ನೋಯದಂತೆ ಆದರೆ ಪೂರ್ಣವಾಗಿ ಕಾರ್ಯಗತವಾಗುವಂತೆ ಕಾಂತೆಯ ತೆರದಿ ಪರೋಕ್ಷವಾಗಿ ಸವಿಯಾಗಿ ಹೇಳುವುದೇ 'ಕಾಂತಾಸಂಹಿತಾ'. ಈ ಮೇಲಿನ ಘಟನೆ ಇದಕ್ಕೊಂದು ಉದಾಹರಣೆ ಎನ್ನಬಹುದೇನೊ? ಆದರೆ ಇಂತಹ ಚುರುಕುಮತಿಗಳ ಸಂಸಾರ ಯಾವುದೇ ಅಬ್ಬರ, ಉಬ್ಬರಗಳಿಲ್ಲದೆ ಸುರಳೀತವಾಗಿ ತಿಳಿನೀರ ನದಿಯಂತೆ ಹರಿಯುತ್ತಾ ಇರುತ್ತೆ. ಇನ್ನೊಂದು ರೀತಿಯಲ್ಲಿ ಹೇಳುವುದಿದ್ದರೆ ಯುದ್ಧಕ್ಕೆ ಮೊದಲೇ ಶಸ್ತ್ರ ಸನ್ಯಾಸ ಮಾಡುವ ಕೇಟಗರಿಯ ಹೆಂಗಸರಿವರು.ಸಮಸ್ಯೆಗಳನ್ನು ಎದುರಿಸುವುದಕ್ಕಿಂತಲೂ ಅವುಗಳು  ಬಾರದಂತೆ ನೋಡಿಕೊಳ್ಳುವುದರಲ್ಲೇ ಹೆಚ್ಚು ಸುಖವಿದೆ ಎಂದು ತಿಳಿದವರಿವರು. ಇನ್ನೊಂದು ಘಟನೆ ಹೀಗಿದೆ,
"ಅಯ್ಯೋ..., ಅತ್ತೇ.., ನೀವೇನು ಹೇಳ್ತೀರಿ..., ಈ ಬಳೆಗಳಿಗೆ ಇಪ್ಪತ್ತೈದು ವರ್ಷಕ್ಕೂ ಮೇಲಾಯಿತು. ನಮ್ಮಮ್ಮ ಸಾಯುವ ಕಾಲಕ್ಕೆ ಇವುಗಳನ್ನ ನನಗಿತ್ತರು. ಅಂದಿನಿಂದಾ ಇಂದೂವರೆಗೆ ಇದೇ ನನ್ನ ಕೈಲಿರೋದು....,ಸವೆದು ಸವೆದು ಹೇಗಾಗಿದೆ ನೋಡಿ...," ಅತಿಥಿಗಳೊಡನೆ ಮಾತನಾಡುತ್ತಾ ಅಲ್ಲೇ  ಕುಳಿತಿದ್ದ ಗಂಡನೆಡೆಗೆ ತೀಕ್ಷ್ಣವಾದೊಂದು  ವಾರೆನೋಟವನ್ನು ಬಿಸಾಡಿಯೇ ಅವಳು ಈ ಮಾತುಗಳನ್ನು ಹೇಳಿದ್ದು. ಹೆಂಡತಿ ಆಡಿದ ಈ ಎರಡೇ ಎರಡು ವಾಕ್ಯಗಳಲ್ಲಿ ಎಂತಹಾ ಬೃಹತ್ತಾದ ಅರ್ಥ ಅಡಗಿದೆ ಎಂಬುದನ್ನು ಗಮನಿಸಿದ್ದೀರಾ?
'ಎಲೈ ಮಂಕು ದಿಣ್ಣೆ ..,ಇಪ್ಪತ್ತೈದು ವರ್ಷಗಳಿಂದ ನಿನ್ನೊಂದಿಗೆ ಏಗುತ್ತಿದ್ದೇನೆ. ಆದರೂ ನಾಲ್ಕು ಬಳೆ ಮಾಡಿಸಿ ಹಾಕುವ ಯೋಗ್ಯತಿಗೆ ಇಲ್ಲದವ ನೀನು...,ಗೆಸ್ಟು ಗಳೊಂದಿಗೆ ಹಲ್ಲುಕಿರಿದು ಮಾತನಾಡಿ ನೀನೊಬ್ಬ ಸಹೃದಯದ ಸದ್ಗೃಹಸ್ಥ ಎಂದು ತೋರಿಸಿಕೊಳ್ಳುವ ಚಪಲವೇ..? ನೋಡು...,ನಿನ್ನ ಅಸಲೀಯತ್ತನ್ನು ನಾನು ಹೇಗೆ ಬಯಲು ಮಾಡಿಬಿಟ್ಟೆ! ನಿನ್ನ ಮೂತಿಗಿಷ್ಟು...' ಎಂದು ಹೇಳಬೇಕಾದುದನ್ನು ಎಷ್ಟು ಸೊಗಸಾಗಿ ಪ್ರೆಸೆಂಟ್ ಮಾಡಿದ್ದಳು ನೋಡಿ!
'ಅಯ್ಯೋ... ಪಾಪ...  ಗಂಡನಾದವ ಮುಖ ಮುಚ್ಚಿಕೊಂಡು ಒಳಗೆ ಹೋಗಿರಬಹುದು' ಎಂದುಕೊಂಡಿರಾ? ಇಲ್ಲವೇ ಇಲ್ಲ. ಹಾಗೆ ಮಾಡುವುದಿದ್ದರೆ ಪತಿರಾಯ ದಿನದ ಇಪ್ಪತ್ತನಾಲ್ಕು ಘಂಟೆಯೂ ಮುಖ ಮುಚ್ಚಿ ತಲೆಗೆ ಒದ್ದೆ ಬಟ್ಟೆ ಹಾಕಿ (ಆಕೆಯ ಮಾತುಗಳ  ಶಾಖದಿಂದ ಬಿಸಿಯೇರಿದ ತಲೆ ತಂಪಾಗಬೇಡವೇ) ಕೊಂಡು c/o. ಹಾಸಿಗೆ ಎನ್ನುವ ವಿಳಾಸ ಹಿಡಿದಿರುತ್ತಿದ್ದ! 
 ನಾವು ಮನೆಗಳಲ್ಲಿ ದಿನಪತ್ರಿಕೆಗಳನ್ನು ತರಿಸುತ್ತೀವಲ್ಲಾ? ಮೇಲೆ ವಿವರಿಸಿದಂತಹ ಸಂದರ್ಭಗಳಲ್ಲಿ ಈ ದಿನಪತ್ರಿಕೆಗಳು ಗಂಡನ ಮುಖದೆದುರು ಅದ್ಯಾವ ಮಾಯದಲ್ಲೋ ಬಂದು ಸ್ಥಾಪನೆಯಾಗುತ್ತೆ. ಹೆಂಡತಿಯ ಬೈಗುಳವೆಂಬ ಕೆಸರು ಈತನ ಮುಖಕ್ಕೆ ಎರಚದಂತೆ ಹಾಗೂ ಇವನ ಹರಳೆಣ್ಣೆ ಮುಖ ಎದುರಿನವರಿಗೆ ಪ್ರದರ್ಶನವಾಗದಂತೆ ಅದು ಮಡ್ ಗಾರ್ಡಿನ (ವಾಹನಗಳಲ್ಲಿ 'ಮಡ್ ಗಾರ್ಡ್' ಎನ್ನುವ ಒಂದು ಬಿಡಿಭಾಗವಿರುವ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ.ವಾಹನ ಚಲಿಸುತ್ತಿರುವಾಗ ಅದರ ಚಕ್ರಗಳು ತಿರುಗುವ ರಭಸಕ್ಕೆ ಅವುಗಳಿಗೆ ರಸ್ತೆಯಿಂದ ಸಿಲುಕಿಕೊಳ್ಳುವ ಗಲೀಜುಗಳು ಹೊರಕ್ಕೆಸೆಯಲಪಟ್ಟು ವಾಹನ ಹಾಗೂ ಬದಿಯಲ್ಲಿ ಹೋಗುವ ಪಾದಾಚಾರಿಗಳಿಗೆ ತೊಂದರೆಯಾಗದಂತೆ ಅದು ತಡೆಯುತ್ತೆ) ಕೆಲಸ ಮಾಡುತ್ತೆ. ಯಾರ ಮನೆಯಲ್ಲಿ ಹೆಚ್ಚೆಚ್ಚು  ದಪ್ಪದ ದಿನಪತ್ರಿಕೆಗಳು ಬಂದು ಬೀಳುತ್ತವೋ ಅಲ್ಲೆಲ್ಲಾ ಕೆಸರಿನ ದೊಡ್ಡ ದೊಡ್ಡ ಗುಂಡಿಗಳಿವೆ ಎಂದೇ ಅರ್ಥ(ಮಡ್ ಗಾರ್ಡೂ ಹೆಚ್ಚು ಬಲಶಾಲಿಯಗಿರಬೇಕಲ್ಲವೇ?). ಇಲ್ಲಿ ಮಂಕು ದಿಣ್ಣೆ ಎನಿಸಿಕೊಂಡವನೂ ಮಾಡಿದ್ದು ಅದನ್ನೇ. ಗಂಡನ ಮುಖದೆದುರು ಪೇಪರಿನ ಪರದೆ ಇಳಿಬಿದ್ದುದನ್ನು ನೋಡಿದಾಗ ಹೆಂಡತಿಯು ಇನ್ನು ತಾನು ಏನು ಹೇಳಿದರೂ ಅದು 'ಘೋರ್ಕಲ್ಲ ಮೇಲೆ ನೀರೆರೆದಂತೆ ಸರ್ವಜ್ಞ' ಎಂದುಕೊಂಡು ಅಂದಿನ ಮಟ್ಟಿಗೆ ಯುದ್ಧ ವಿರಾಮ ಘೋಷಿಸುತ್ತಾಳೆ.ಈ ಪ್ರಸಂಗದಲ್ಲಿ ಬರುವಂತಹ ಹೆಂಗಸರು ಒಂತರಾ ಸೌಮ್ಯ ಉಗ್ರಮತಿಗಳು. 'ಗುರ್ರ್' ಎನ್ನುವುದೂ ಬೇಗ, 'ಟುಸ್' ಆಗುವುದೂ ಬೇಗ. ಇನ್ನು ಸತಿಪತಿಯರಿಬ್ಬರೂ ಹೊರಗೆ ದುಡಿದು ಸಂಪಾದಿಸುವವರಾಗಿದ್ದರೆ ಅವರ ಕಥೆಯೇ ಬೇರೆ. ಇಂದು ಹೆಣ್ಣು ಗಂಡಿನಷ್ಟೇ ಸಂಪಾದಿಸಬಲ್ಲಳು. ಕೆಲವೊಮ್ಮೆ ಆತನಿಗಿಂತಲೂ ಅವಳ ವರಮಾನವೇ ಜಾಸ್ತಿಯಾಗಿರುತ್ತದೆ. ಆದರೂ ಸಾವಿರಾರು ವರ್ಷಗಳಿಂದ ಹೆಣ್ಣು ವಂಶವಾಹಿಯಲ್ಲಿ ಹರಿದು ಬಂದಂತಹ 'ಗಂಡ ತನಗೆ ಅದನ್ನು ಕೊಡಿಸಬೇಕು, ಇದನ್ನು ತಾನು ಕೇಳದೇ ಇದ್ದರೂ ತಂದು ತನಗಿತ್ತು ತನ್ನನ್ನು ಸುಪ್ರೀತಗೊಳಿಸಬೇಕು' ಎಂದು ನಿರೀಕ್ಷಿಸುವ ಆ ಗುಣ ಇದೆಯಲ್ಲಾ ಅದು ಒಂದು ಚೂರೂ ಬದಲಾಗಿಲ್ಲ. ಜಾಬ್ ಮಾಡುವ ಹೆಣ್ಣಿನ ಮಾತು ಹಾಗೂ ಅದರ ಹಿಂದಿನ ಧ್ವನಿಯ ಸ್ಟೈಲೇ ಬೇರೆ. ಉದಾಹರಣೆ ನೋಡಿ...,
ಪೂಜಾ, ನವೀನ್ ಅಧುನಿಕ ಮನೋಭಾವದ ಜೋಡಿ.ಇಬ್ಬರೂ ಕೈತುಂಬಾ ಸಂಪಾದನೆ ಮಾಡುವವರು. ಒಂದು ದಿನ ಅವರು ಫೋರಮ್ ಮೋಲಲ್ಲಿ ಸುತ್ತುತ್ತಿರುವಾಗ ನೇಹಾ, ಸಾಗರ್ ಜೋಡಿಯ ಭೇಟಿಯಾಗುತ್ತೆ. ಅವರೂ ಉನ್ನತ ಉದ್ಯೋಗದಲ್ಲಿರುವವರೇ. ಈಗ ಅವರ ಮಾತುಗಳನ್ನು ಕೇಳಿ,
"ಹಾಯ್..., ನೇಹಾ..., ಹೌ ಆರ್ ಯೂ...?"
"ಹಾಯ್..., ಪೂಜಾ...,ಐಯಾಮ್ ಫೈನ್...."
"...."
"...."
"...."
"...."
ಹೀಗೆ ತುಂಬಾ ಮಾತುಕತೆಯಾದ ಮೇಲೆ ನೇಹಾ ಪೂಜಾಳ ಕತ್ತಿನಲ್ಲಿದ್ದ ಆಧುನಿಕ ವಿನ್ಯಾಸದ ಕರಿಮಣಿ ಸರವನ್ನು ನೋಡುತ್ತಾ ಕೇಳಿದಳು,
"ಹೊಸದಾಗಿ ಪೆರ್ಚೇಸ್ ಮಾಡ್ಕೊಂಡ್ಯಾ....? ಈ ಪೆಂಡೆಂಟ್ ಡೈಮಂಡ್ಡಿದ್ದಾ?"
"ಹೂಂ ಕಣೇ..., ಎಷ್ಟೋ ಸಮಯದಿಂದ ಈ ತರದ್ದು ತಗೊಬೇಕು ಅಂದ್ಕೋತಾ ಇದ್ದೆ.ಮನೆಯ ಸಕಲ  ಖರ್ಚುಗಳೂ ಮುಗಿಯೋದ್ರಲ್ಲಿ  ನನ್ನ ಸ್ಯಾಲರಿಯೂ ಕರಗಿ ಹೋಗಿರುತ್ತೆ. ಪ್ರತಿ ಸಲಾನೂ ಇದೇ ಕಥೆ...,ಲಾಸ್ಟ್ ಮಂತ್ ನಮ್ಮ ಕಂಪೆನಿಯ ಹೊಸ ಪ್ರಾಡಕ್ಟನ್ನ ನಾವೇ ಪ್ರಮೋಟ್ ಮಾಡಿದ್ವಿ.ನಮ್ಮ ಟೀಮ್ ತುಂಬಾ ಹಾರ್ಡ್ ವರ್ಕ್ ಮಾಡಿತ್ತು. ಅದ್ರಲ್ಲಿ ಬಂದ ಇನ್ಸೆಂಟಿವ್ಸ್ ಜೊತೆಗೆ ನಮ್ಮಮ್ಮ ಬರ್ತ್ಡೇಗೆ ಏನಾದರೂ ತಗೋ ಎಂದು ಸ್ವಲ್ಪ ದುಡ್ಡು ಕೊಟ್ಟಿದ್ರು. ಎಲ್ಲಾ ಜೊತೆಗೂಡ್ಸಿ ಇದನ್ನ ತಗೊಂಡೆ ಕಣೇ..."ಪೂಜಾ ತನ್ನ ಕಥೆಯನ್ನು ಬಿಚ್ಚುತ್ತಾ ನವೀನನೆಡೆಗೆ ಕೂರಲುಗಿನ ನೋಟವೊಂದನ್ನು ಸರಕ್ಕನೆ ಬಿಸುಟಳು   ('ನಿನ್ನ ದುಡ್ಡನ್ನೆಲ್ಲಾ ಬೇರೆ ಬೇರೆ ಕಡೆ ಸೈಟು, ಫ್ಲ್ಯಾಟು ಎಂದೆಲ್ಲಾ ಹೆವ್ವಿ ಇನ್ವೆಸ್ಟ್ ಮೆಂಟಿಗೆ ಹಾಕಿ ನನ್ನ ದುಡ್ಡಲ್ಲೇ ಮನೆ ಖರ್ಚು ನಿಭಾಯಿಸುವಂತೆ  ಪುಸಲಾಯಿಸುತ್ತೀಯಲ್ಲ...?ನಿನ್ನ ಹಣೆಬರಹ ಎಲ್ಲರಿಗೂ ಗೊತ್ತಾಗಲೇಬೇಕು..., ನೀನು ಎಂದಾದರೂ ನನಗೆ ಬೇಕಾದುದನ್ನು ತೆಗೆದು ಕೊಡಿಸಿದ್ದಿದೆಯೇ ...?....ನನ್ನ ಫ್ರೆಂಡಿನೆದುರು ಹೇಗೆ ನಿನ್ನ ಮಾನ ಕಳೆದೆ ನೋಡು ...ಸಾಕಾ... ಇನ್ನೂ ಬೇಕಾ...? ನಾನುಂಟು.. ನನ್ನ ದುಡ್ದುಂಟು...., ನೀನ್ಯಾರು ಕೇಳಲು...., ಹಾಂ? ಹೆಂಡತಿಯ ಮನದಾಸೆಯನ್ನು ಅರ್ಥೈಸಿಕೊಳ್ಳಲಾರದ ನೀನೊಬ್ಬ ಯೂಸ್ಲೆಸ್ ಫೆಲೋ...' ). ಆತ  ಅಲ್ಲೇ ಇದ್ದ ಕೆಫೆ ಕಾಫಿ ಡೇಯ ಬೋರ್ಡನ್ನು ತದೇಕಚಿತ್ತದಿಂದ ನೋಡುತ್ತಾ ಹೆಂಡತಿಯ ದೃಷ್ಟಿಬಾಣದಿಂದ ತಪ್ಪಿಸಿಕೊಳ್ಳಲು ಹೆಣಗಿದ್ದನ್ನು  ನೇಹಾ ಗಮನಿಸಿದ್ದಳು. ಆಕೆಗೆ ಗೆಳತಿಯ ಮಾತುಗಳಿಗಿಂತಲೂ ಅದರ ಹಿಂದಿನ ಧ್ವನಿಯೇ ಹೆಚ್ಚು ಸ್ಪಷ್ಟವಾಗಿತ್ತು.ಮೀನಿನ ಹೆಜ್ಜೆ ಮೀನೇ ಬಲ್ಲುದು. 
ಮತ್ತೆ ಆರು ತಿಂಗಳು ಕಳೆದು ಇದೇ ಎರಡು ಜೋಡಿಗಳು ಅದೇ ಜಾಗದಲ್ಲಿ ಪುನಃ ಭೇಟಿಯಾಗುತ್ತವೆ. ಅವರ ಮಾತುಗಳನ್ನು ಕೇಳಿ,
"ಹಾಯ್..., ನೇಹಾ... ಹೌ ಆರ್ ಯೂ...?"
"ಹಾಯ್..., ಪೂಜಾ..., ಐ ಯಾಮ್ ಫೈನ್..."
"...."
"...."
"...."
ಹೀಗೆ ತುಂಬಾ ಮಾತುಕತೆಯಾದ ಮೇಲೆ ಪೂಜಾ  ನೇಹಾಳ ಕರಿಮಣಿ ಸರವನ್ನು ಮುಟ್ಟಿ ನೋಡುತ್ತಾ ಕೇಳುತ್ತಾಳೆ,
"ಓಹ್ .... ನೀನೂ ನನ್ನದೇ ಸೇಮ್ ಕರಿಮಣಿ ತಗೊಂಡ್ಯಾ...? ಪೆಂಡೆಂಟ್ ಡೈಮಂಡಿದ್ದು ತಾನೇ..?"
"ಹೂಂ ಕಣೇ..., ನಾನು ಎಷ್ಟೋ ಸಮಯದಿಂದ ಇದಕ್ಕಾಗಿ ತುಂಬಾ ಆಸೆ ಪಡ್ತಿದ್ದೆ.ಆದರೆ ನನ್ನ ಸಂಬಳವೆಲ್ಲಾ ಅತ್ತೆ ಮಾವನ ಟ್ರೀಟ್ಮೆಂಟ್ಗೆ ಸರಿ ಹೋಗುತ್ತೆ.  ನನ್ನ ಸಾಗರ್ ಎಂತವನು ಗೊತ್ತಾ? ಬರ್ತ್ ಡೇ, ಮ್ಯಾರೇಜ್ ಅನಿವೆರ್ಸೆರಿಗಳನ್ನೆಲ್ಲಾ ಮರೆಯೊದೇ ಇಲ್ಲಾ. ಲಾಸ್ಟ್ ಮಂತ್ ನನ್ನ ಬರ್ತ್ ಡೇ ಇತ್ತಲ್ಲಾ...?  ಎಲ್ಲೋ ಎರಡ್ಮೂರು ಸಾವಿರದ ಸೀರೇನೊ ಡ್ರೆಸ್ ಮೆಟೀರಿಯಲ್ಲೋ ಗಿಫ್ಟ್ ಕೊಡ್ತಾನೆ ಅಂದ್ಕೊಂಡಿದ್ದೆ ಕಣೇ...,ಆದರೆ ಇವನು ತೀರಾ ಸರ್ಪ್ರೈಸ್ ಆಗಿ ಇದನ್ನೇ ತಂದು ಬಿಡೋದೇ...?"ಸುಂದರವಾಗಿ ನಗುತ್ತಾ ಕಣ್ಣರಳಿಸಿ ತುಟಿ ಕೊಂಕಿಸಿ  ಹೆಂಡತಿ ಆಡುತ್ತಿದ್ದ  ಮಾತುಗಳನ್ನು ಕೇಳುತ್ತಿದ್ದ ಸಾಗರ್ ವಿದ್ಯುತ್ ಶಾಕ್ ಹೊಡೆಸಿಕೊಂಡವನಂತೆ ಮರಗಟ್ಟಿ ಹೋದ. ನಲುವತ್ತೆಂಟು ಡಿಗ್ರಿ ಸೆಖೆಯ ನಡುವೆ ಏ.ಸಿ. ಕೈಕೊಟ್ಟಿತೋ ಎನ್ನುವಂತೆ ಛಿಲ್ಲನೆ ಬೆವರಿ ನೀರಾಗಿ ಹೋದ. ಯಾಕೆ ಗೊತ್ತಾ? ಕಳೆದ ತಿಂಗಳು ಅವನಮ್ಮನ ಹುಟ್ಟು ಹಬ್ಬಕ್ಕೆ ಪತ್ನಿಯೊಡನೆ ಹೇಳದೆ ಅವನೊಂದು ಉಂಗುರವನ್ನು ಉಡುಗೊರೆ ಕೊಟ್ಟಿದ್ದ. ನೇಹಾ ಅದೇ ಕಾರಣಕ್ಕಾಗಿ ದುರ್ಗೆಯ ಅವತಾರ ತಾಳಿ ಆಕಾಶ ಪಾತಾಳಗಳನ್ನು ಒಂದು ಮಾಡಿ ಭೂಮಿಗೆ ತಂದಿದ್ದಳು. ('.....ಈಡಿಯೆಟ್...., ನನ್ನ ಬರ್ತ್  ಡೇ ಗೆ ಇದುವರೆಗೆ ಒಂದೇ  ಒಂದು ಗ್ರಾಂ ಚಿನ್ನವಾದರೂ ಗಿಫ್ಟ್ ಕೊಡಬೇಕು ಅನಿಸಿತ್ತಾ ನಿನಗೆ..? ಇಂದೋ ನಾಳೆಯೋ ಗೊಟಕ್ ಎನ್ನುವ ಮುದಿ ಗೂಬೆಗ್ಯಾಕೆ ಚಿನ್ನ....? ಡೆಡ್ ಬಾಡಿಗೆ ಡೆಕೊರೇಟ್  ಮಾಡೋಕಾ... .? ಅಧಿಕಪ್ರಸಂಗಿ...,  ಭಾರಿ ಭಾರಿ ಸಸ್ಪೆನ್ಸ್ ಬೇರೆ ಮಾಡ್ತೀಯಾ ...?ನಿನಗೆ ಬುದ್ಧಿ ಕಲಿಸದಿದ್ದರೆ ನನ್ನ ಹೆಸರು ನೇಹಾನೇ ಅಲ್ಲ...' ಇತ್ಯಾದಿಯಾಗಿ ಹೈಡ್ರೋಜನ್  ಬಾಂಬುಗಳನ್ನೇ  ಸುರಿಸಿದ್ದಳು).ಅಷ್ಟೂ ಸಾಲದೆಂಬಂತೆ  ಅದೇ ಹಟದಿಂದ ಗಂಡನ ಏ. ಟಿ . ಎಮ್. ನಿಂದ ದುಡ್ಡು ಡ್ರಾ ಮಾಡಿ ತನ್ನ ಬರ್ತ್ ಡೇ ಗೆಂದು  ವಜ್ರದ ಪದಕವಿರುವ ಕರಿಮಣಿ ಸರವನ್ನು ತಾನೇ ಕೊಂಡುಕೊಂಡಿದ್ದಳು! ಆದರೆ ತನ್ನ ಗೆಳತಿಯೊಂದಿಗಿನ ಸಂವಾದದಲ್ಲಿ  ಪ್ಲೇಟು ಪೂರ್ತಿ ಬದಲಾಗಿ ಹೋಗಿತ್ತು! ಆರು ತಿಂಗಳ ಹಿಂದೆ ತನ್ನ ತಂದೆಗೆ ಅನಿರೀಕ್ಷಿತವಾಗಿ ಸರ್ಜರಿ ಮಾಡಬೇಕಾಗಿ ಬಂದಾಗ ಸಾಗರ್ ಕೈಯ್ಯಲ್ಲಿ ತಕ್ಷಣಕ್ಕೆ ದುಡ್ಡಿರಲಿಲ್ಲ. ಆಗ ನೇಹಾ ಕೈಯಿಂದ ಎರಡು ಲಕ್ಷ ತಗೊಂಡಿದ್ದ. ಅದನ್ನಿನ್ನೂ ಹಿಂದಿರುಗಿಸಿರಲಿಲ್ಲ. ಅದನ್ನವಳು ಕೇಳಿಯೂ ಇರಲಿಲ್ಲ. ಆದರೆ ಇಂದು ಎಲ್ಲವನ್ನೂ ಬಡ್ಡಿ, ಚಕ್ರ ಬಡ್ಡಿ ಸಮೇತ ಹಿಂದಿರುಗಿಸಿದ್ದಳು. ಒಂದೇ ಕಲ್ಲಲ್ಲಿ ಎರಡು ಹಣ್ಣುಗಳನ್ನು ಉದುರಿಸಿದ್ದಳು. 'ಪೂಜಾ, ನನ್ನ ಗಂಡ ನಿನ್ನ ಗಂಡನಂತಹ ಯೂಸ್ಲೆಸ್ ಫೆಲೋ ಅಲ್ಲ...  ತಿಳೀತಾ.?.' ಎಂಬ ಸಂದೇಶವನ್ನು  ಆಕೆಗೆ ನೀಡಿ ಆಂಧ್ರ ಮೆಣಸಿನ ನೀರನ್ನೇ ಅವಳ ಹೊಟ್ಟೆಯೊಳಕ್ಕೆ ಸುರಿದಿದ್ದಳು. ' ಏ .. ಬೇಖೂಫಾ..., ನನ್ನಿಂದ ತಗೊಂಡ  ದುಡ್ಡು ಯಾಕೆ ಇನ್ನೂ ಹಿಂದಿರುಗಿಸಿಲ್ಲ? ಹಾಂ...? ಇನ್ನು ಮುಂದೆ  ನನ್ನ ಬರ್ತ್ ಡೇ ಗೆ ಎರಡ್ಮೂರು ಸಾವಿರದ  ಲಾಯಿ ಲೊಟ್ಟು ಬಟ್ಟೆ ತಂದುಕೊಟ್ಟು ಕಣೊರೆಸುವ ನಾಟಕ ಮಾಡಿದ್ರೆ ನಡೆಯೋಲ್ಲ ತಿಳ್ಕೋ...,  ನಿನ್ನ ಅಮ್ಮನಿಗೆ ಕೊಡಿಸಿದ್ದಕಿಂತ ಹೆಚ್ಚು ಬೆಳೆಬಾಳುವುದನ್ನು....  ಅದೂ ನಿನ್ನದೇ ದುಡ್ಡಲ್ಲಿ ಹೇಗೆ ಲಪಟಾಯಿಸಿದೆ ನೋಡು...' ಎಂಬ ಖಡಕ್  ಮೆಸೇಜನ್ನು ಗಂಡನಿಗೆ ರವಾನಿಸಿದ್ದಳು. ಸಾಗರ್ ಏನು ಮಾಡಿದ? ಉಗುಳು ನುಂಗಿದ್ದು ಮಾತ್ರ. ಸ್ವರ ತೆಗೆದರೆ ಅದು ಮೂರನೆ ಮಹಾಯುದ್ಧಕ್ಕೆ ಕಹಳೆ ಊದಿದಂತೆಯೇ ಎಂಬುದನ್ನು ಅವನು ಅನುಭವದಿಂದ ಕಲಿತಿದ್ದ.
ಚಾಣಕ್ಯಮತಿ, ಚಂಡೀಮತಿಗಳ ಬಗ್ಗೆ ಗೊತ್ತಾಯಿತಲ್ಲ? ಈ ಚಂಡೀಮತಿ ಎನ್ನುವಾಗ ಒಂದು ಕಥೆ ನೆನಪಾಗುತ್ತೆ. ಭದ್ರಗಿರಿ ಅಚ್ಯುತದಾಸರು ತಮ್ಮ ಹರಿಕಥೆಯ ನಡುವೆ  ಲಕ್ಷ್ಮೀಶನ  ಜೈಮಿನಿ ಭಾರತದಲ್ಲಿ ಬರುವ  ಈ ಕಥೆಯನ್ನು ಹೇಳಿದ್ದರು.   ಉದ್ದಾಲಕ ಮಹರ್ಷಿ ತನ್ನ ಮಡದಿ ಚಂಡಿಯ ಗುಣದಿಂದ ರೋಸಿಹೋಗಿ ಒಂದು ದಿನ ಅತಿಯಾದ ಸಿಟ್ಟಿನಿಂದ, 'ನೀನು ಅರೆಯಾಗಿ ಹೋಗು' ಎಂದು ಶಾಪವೀಯುತ್ತಾನೆ. 'ಅರೆ' ಎನ್ನುವ ಕನ್ನಡ ಶಬ್ಧಕ್ಕೆ ಕಲ್ಲು ಎನ್ನವ ಅರ್ಥ ಸಾಮಾನ್ಯ. 'ಅರ್ಧ' ಎನ್ನುವ ಅರ್ಥವೂ ಇದೆ. ಗಂಡ ಹೆಂಡತಿ ಎಂದರೆ ಒಂದೇ ಶರೀರದ ಎರಡು ಭಾಗಗಳು. ಆತನಿಲ್ಲದಿದ್ದರೆ ಇವಳು ಅರ್ಧ, ನಿಷ್ಪ್ರಯೋಜಕಿ. ಅದೇ ರೀತಿ ಅವನಿಗೂ.ಆದುದರಿಂದ ಮುನಿಯ ಶಾಪದ ಧ್ವನಿ, 'ನಾನಿಲ್ಲದೆ ನೀನು ಅರ್ಧವಾಗಿ ಹೋಗು, ನಿಷ್ಪ್ರಯೋಜಕ ಕಲ್ಲಾಗಿ  ಹೋಗು'ಎಂದಾಗಿತ್ತು. ಇಲ್ಲಿ ಕವಿಯ ಆಶಯ ಹೀಗೂ ಇದ್ದಿರಬಹುದು ಎಂದು ದಾಸರು ಹೇಳುತ್ತಾರೆ, 'ಪತಿಗೆ ಸಿಟ್ಟು ಬಂದರೆ ಕಲ್ಲಿನಂತಿರು. ಭಾವನೆಗಳ ಅತಿರೇಕ ಪ್ರದರ್ಶನ ಮಾಡಬೇಡ. ಸಂಸಾರ ಸರಿಗಮದಲ್ಲಿ ಅಪಸ್ವರಕ್ಕೆ ಕಾರಣಳಾಗಬೇಡ.'  ದಾಸರು ತಮ್ಮಹರಿಕಥೆಯಲ್ಲಿ ಯಾವಾಗಲೂ ಮಹಿಳೆಯರಿಗೆ ಬುದ್ಧಿ ಮಾತು ಹೇಳಿಯೇ ಹೇಳುತ್ತಾರೆ.ಬೇಕಿದ್ದವರು ಅನುಸರಿಸಿಕೊಳ್ಳಬಹುದು.  ವಿಷಯ ಅದಲ್ಲ,  'ಅರೆಯಾಗಿ ಹೋಗು'  ಎನ್ನುವ ಆ ಎರಡು ಶಬ್ಧಗಳ ಧ್ವನಿ ವಿಸ್ತಾರ ಎಷ್ಟಿದೆ ನೋಡಿ!  ಉದ್ದಾಲಕನ ಕಥೆಯೇನೋ  ತ್ರೇತಾಯುಗದಲ್ಲಾಯಿತು. ಅದನ್ನೆಲ್ಲಾ ಈಗ ಹೇಳ ಹೊರಟರೆ 'ಮ್ಯೂಸಿಯಮ್ಮಲ್ಲಿ  ಇರಬೇಕಾದ ಪ್ರಾಣಿ ಇಲ್ಲೇಕೆ ಬಂತು' ಎಂಬರ್ಥದ ವಿಚಿತ್ರ ನೋಟವನ್ನು   ಎದುರಿಸಬೇಕಾದೀತು.   ಕಲಿಯುಗದ ಮಟ್ಟಿಗೆ ಹೇಳುವುದಿದ್ದರೆ ಇಂದಿನ ಗಂಡಂದಿರು ಒಂದೋ ತಾವೇ 'ಅರೆ'(ಕಲ್ಲು) ಯಾಗುತ್ತಾರೆ ಇಲ್ಲವೇ 'ಅರೆ'(ರುಬ್ಬು)ಯಲ್ಪಡುತ್ತಾರೆ. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ. ಹೌದಲ್ಲವೇ?
ಪ್ರಿಯ ಓದುಗ ಮಿತ್ರರೇ, 'ಈ ಲೇಖನದಲ್ಲಿ ಇಷ್ಟೆಲ್ಲಾ ಬರೆದಳಲ್ಲಾ? ಇವಳು ಯಾವ ಕೆಟಗರಿ ಎಂದು ತನ್ನ ಬಗ್ಗೆ  ಹೇಳಲೇ ಇಲ್ಲವಲ್ಲಾ...?' ಎಂಬ ಪ್ರಶ್ನೆ ನನ್ನ ಕುರಿತಾಗಿ  ನಿಮ್ಮ ಮನದಲ್ಲಿ ಎದ್ದಿದೆ ಅಲ್ಲವೇ? ಪ್ರಮಾಣಿಕವಾಗಿ ಹೇಳುತ್ತೇನೆ,  ಮಗಳು, ಅಕ್ಕ, ತಂಗಿ, ಪತ್ನಿ, ತಾಯಿ, ಚಿಕ್ಕಮ್ಮ, ದೊಡ್ಡಮ್ಮ, ಅತ್ತೆ, ಅಜ್ಜಿಯಾಗಿ ಜೀವನದ ಹಲವು ಮಜಲುಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ನಟಿಸಿ ಯಶಸ್ವಿ ಅಭಿನೇತ್ರಿಯಾಗಬೇಕಾದರೆ ಈ ಮೇಲೆ ಹೇಳಿದ ಎಲ್ಲ ಗುಣಗಳೊಂದಿಗೆ ಇನ್ನೂ ಹಲವು ಗುಣಗಳನ್ನು ಮೇಳೈಸಿ ನಟಿಸಲೇಬೇಕು. ಆದರೆ ನವರಸಗಳ ಹದಪಾಕದಲ್ಲಿ, ಬುದ್ಧಿ, ವಿವೇಚನೆಗಳ ದಂಡೆಯೊಳಗೆ, ಪರರ ಮನ ನೋಯದಂತೆ, ತನ್ನ ಮನ ಮುದುಡದಂತೆ ಜೀವನ ರಂಗದಲ್ಲಿ ನಟಿಸಲು ಬಹಳ ತಾಳ್ಮೆ ಬೇಕು.ಆ ಮಟ್ಟಿಗೆ ನಾನು ಯಶಸ್ವಿ ನಟಿ ಎನ್ನಬಹುದು. ಇಷ್ಟು ಸಾಕಲ್ಲವೇ?      

  

                       

1 ಕಾಮೆಂಟ್‌:

  1. ಮಿತಾಯಿ ಮಿಠಾಯಿಯುಂಡೆಯೊಳಗೆ ಖಾರ ಹುದುಗಿಸಿದಂತಿದೆ ನಿಮ್ಮ ಮಾತು ಮತ್ತು ಧ್ವನಿಯಲ್ಲಿ.
    ಏನೇ ಆಗಲಿ ಶೀರ್ಷಿಕೆ ನೋಡಿದಾಗ ಸಪ್ಪೆ ಎಂದೆನಿಸಿದ ನಿಮ್ಮ ಕುಹಕ,ಕಾಮಿಡಿ ಲೇಪಿತ ಗಂಡನೊಂದಿಗಿನ ನ(ಹ)ಗೆ ಬರಹ ಸಂಪೂರ್ಣ ಕಪೋಲ ಕಲ್ಪಿತವಲ್ಲ ಎನ್ನುವುದನ್ನು ಸಾರುತ್ತೆ ಮನಸ್ಸಿಗೆ ಮುದನೀಡುತ್ತೆ.👍👌
    ಧನ್ಯವಾದಗಳು 🙏ನಮಸ್ಕಾರ🙏

    ಪ್ರತ್ಯುತ್ತರಅಳಿಸಿ