ಶನಿವಾರ, ಅಕ್ಟೋಬರ್ 10, 2015

ದಾಸನು ಬಂದನು ಮನೆ ಮನೆಗೆ....

ನಮ್ಮ ಬಾಲ್ಯ ಕಾಲದಲ್ಲಿ ದಾಸಯ್ಯ ಮನೆಗೆ ಬಂದು ಶಂಖ ಊದಿ ಜಾಗಟೆ ಬಾರಿಸಿದರೆ ಅಂದಿನ ದಿನ ಶುಭ ಎಂಬ ನಂಬಿಕೆ ಇತ್ತು. ಆಗೆಲ್ಲಾ ನಮ್ಮಮ್ಮ ಮೊರದಲ್ಲಿ ಭತ್ತ, ತೆಂಗಿನಕಾಯಿ ಇಟ್ಟು ಹಳೆ ಬಟ್ಟೆಗಳನ್ನು ಕೊಟ್ಟು ಮೇಲಿನಿಂದ ಅವನಿಗೆ  ಕಾಫಿಯನ್ನೂ ಕೊಡುತ್ತಿದ್ದಳು. ಅವನು ಹೋಗುವಾಗ ನಾವು ಮಕ್ಕಳೆಲ್ಲಾ ಸಾಲಾಗಿ ಅವನ ಹಿಂದಿನಿಂದಲೇ ಗೇಟಿನವರೆಗೂ ಹೋಗುತ್ತಿದ್ದೆವು.ನಮ್ಮನ್ನೆಲ್ಲಾ ಸುತ್ತ ಕೂರಿಸಿಕೊಂಡು ಅವನು ಹಸಿ ತೆಂಗಿನ ಗರಿಯಿಂದ ವಾಚು ಮಾಡಿಕೊಡುತ್ತಿದ್ದ. ಅದನ್ನು ಕೈಯ್ಯಲ್ಲಿ ಕಟ್ಟಿಕೊಂಡು ನಾವು ಪಾಳೆಯಗಾರರ ಪೋಸ್ ಕೊಡುತ್ತಿದ್ದೆವು! ಆ ದಿನಗಳ ಪ್ರಾಮಾಣಿಕತೆ,ಸಂಬಂಧಗಳೊಳಗಿನ ಮಾರ್ದವತೆ, ರೀತಿ ರಿವಾಜುಗಳ ಸರಳತೆಯ ಬಗ್ಗೆ ಸಾಫ್ಟ್ ಕಾರ್ನರ್ ಇಟ್ಟುಕೊಂಡು ಈಗ ಸಂದರ್ಭ ಸಿಕ್ಕಾಗಲೆಲ್ಲಾ ನಾವು  ತುಂಬಾ ಇಮೋಶನಲ್ ಆಗಿ ಮಾತ್ನಾಡುತ್ತಿರುತ್ತೇವೆ ಅಲ್ವೇ? ಅಂದಿನ ದಾಸಯ್ಯ, ಭಿಕ್ಷುಕರಿಗೂ ನೀತಿ ನಿಯತ್ತು ಎಂಬುದು ಇತ್ತು.ಆದರೆ ಲೋಕದ ಮನಸ್ತಿತಿಯಲ್ಲಿ ಭಾವನಾತ್ಮಕತೆ ಕಡಿಮೆಯಾಗಿ ವ್ಯವಹಾರ ದೃಷ್ಟಿಯೇ ಮೇಲಾಗಿ ಲಾಭಕೋರತನವೇ ಜೀವನದ ಉದ್ದೇಶವಾಗುತ್ತಿರುವಾಗ ನಾವು ನಮ್ಮ ದೃಷ್ಟಿಕೋನವನ್ನೂ ಬದಲಾಯಿಸಿಕೊಳ್ಳದಿದ್ದರೆ ಜನಗಳು ನಮ್ಮನ್ನು ಹೇಗೆ ಬೇಕಾದರೂ ಯಾಮಾರಿಸಬಹುದು. ನನ್ನ ಈ ಅನುಭವವನ್ನು ಓದಿ.
ಬೆಳಗ್ಗಿನ ಹೊತ್ತು. ಕೆಲಸ ಕಾರ್ಯಗಳಲ್ಲಿ ಬಿಸಿಯಾಗಿದ್ದೆ. ಫಕ್ಕನೆ ಶಂಖ ಧ್ವನಿ ಕೇಳಿದಂತಾಯ್ತು. ಮಿಕ್ಸಿಯನ್ನು ಮೌನವಾಗಿಸಿ ಕಿವಿಕೊಟ್ಟು ಕೇಳಿದೆ. ಹೌದು ಶಂಖದೊಂದಿಗೆ ಜಾಗಟೆಯೂ ಮೊಳಗಿತು. ಕುತೂಹಲದಿಂದ ಹಾಲಿಗೆ ಬಂದೆ.ಯಾವಾಗಲೂ ಯಾರು ಬಂದಿರುವರೆಂದು ಕಿಟಿಕಿಯಲ್ಲಿ ನೋಡಿ ನಂತರ ಬಾಗಿಲು ತೆರೆಯುತ್ತಿದ್ದೆ. ಆ ದಿನ ಅದೇಕೋ ಹಾಗೆ ಮಾಡಲಿಲ್ಲ ಬಹುಶಃ ದಾಸಯ್ಯನ ಜೊತೆಗಿನ ಬಾಲ್ಯಕಾಲದ ಸವಿನೆನಪು ನನ್ನನ್ನು ಹಾಗೆ ಮಾಡದಂತೆ ಪ್ರೇರೇಪಿಸಿದ್ದಿರಬೇಕು! ಒಳಕ್ಕೆ ಬಂದೇ ಬಿಡುತ್ತೇನೆ ಎಂಬಂತೆ ಹೊಸಿಲಿನ ಮೇಲೆಯೇ ಒಬ್ಬ ಯುವಕ ನಿಂತಿದ್ದ. ಎಂತಹ ಅಸಭ್ಯತೆ ಇದು? ರಪ್ಪನೆ ಬಾಗಿಲು ಮುಚ್ಚಿದೆ. ಹಿಂಬದಿಯ ಬಾಗಿಲು ತೆರೆದು ಸುತ್ತು ಹೊಡೆದು ಎದುರು ಭಾಗಕ್ಕೆ ಬಂದೆ. ನಾನು ಬಾಗಿಲು ರಾಚಿದ್ದಕ್ಕಿರಬೇಕು, ಈಗ ಮೆಟ್ಟಲಿನ ಮೇಲೆ ನಿಂತಿದ್ದ. ನಾನು ಅಂಗಳದಲ್ಲಿ ನಿಂತಿದ್ದೆ! 20 -25 ರ ಆಸುಪಾಸಿನ ಯುವಕ. ಮುಖದಲ್ಲಿ ಹೊಡೆದು ಕಾಣುವಂತೆ ಕುಂಕುಮ ನಾಮ. ಮುಂಗೈಗೆ ಕಟ್ಟಿದ್ದ ಮೂರ್ನಾಲ್ಕು ಬಣ್ಣಗಳ ದಪ್ಪ ದಪ್ಪ ನೂಲುಗಳು, ನೀಟಾಗಿ ಇಸ್ತ್ರಿ ಮಾಡಿದ ಫುಲ್ ಶರ್ಟ್, ಜೀನ್ಸ್ ಪ್ಯಾಂಟ್, ಹೆಗಲಲ್ಲಿ ಚಿಂಗಾರಿ ಚೀಲ. ಒಂದು ಕೈಯ್ಯಲ್ಲಿ ಶಂಖ ಇನ್ನೊಂದು ಕೈಯ್ಯಲ್ಲಿ ಜಾಗಟೆ(ಅದರ ಕೋಲು ಬಹುಶಃ ಚೀಲದಲ್ಲಿದ್ದಿರಬೇಕು). ಒಂದಕ್ಕೊಂದು ಸಂಬಂಧವೇ ಇಲ್ಲದ ಅವನ ವೇಷ ನೋಡಿ ನಗೆ ತಡೆಯದಾಯಿತು. ಆದರೆ ನಗಲಿಲ್ಲ. ನನ್ನನ್ನು ಕಂಡೊಡನೆಯೇ ಬಡಬಡಿಸತೊಡಗಿದ,
" ಯೋ..., ನೀವು ಎಂತಾದ್ದಮ್ಮ... ಅಷ್ಟು ಸಾ ಹೆದರಿಕೆಯಾ...? ದಾಸಯ್ಯ ಬಂದಾಗ ಎದುರಿನ ಬಾಗಿಲು ತೆರೆದು ದಾನ ಧರ್ಮ ಮಾಡುವುದು ಬಿಟ್ಟು ಆ...ಚೆ ಕಡೆಯಿಂದ ಯಾಕೆ ಬಂದಿದ್ದು? ಇದೆಲ್ಲಾ ನಮ್ಮದೇ ಏರಿಯಾ... ನನ್ನ ತಂದೆಯವರು ಇದ್ದಾಗ ನಾವು ದಿನಾಲೂ ಇಲ್ಲೆಲ್ಲಾ ಬರುತ್ತಿದ್ದೆವು. ಆವಾಗ ನಿಮ್ಮ ತಂದೆಯವರೂ ಇದ್ರು ... ಎಷ್ಟು ದುಡ್ಡು ಕೊಡ್ತಿದ್ರು .... ಏನು ಕಥೆ..,ಆವತ್ತು ಅವ್ರು ಅಷ್ಟು ದಾನ ಧರ್ಮ ಮಾಡಿದ್ದಕ್ಕೇ ನೀವು ಇವತ್ತು ಇಷ್ಟು ದೊಡ್ಡ ಮನೆಯಲ್ಲಿ ಇದ್ದೀರಿ... , ಈಗಿನವ್ರಿಗೆ ಎಂತದೂ ಬೇಡ..."
(ಎಲಾ ಇವನಾ...ಬೇಡಲು ಬಂದವನ ದೀಮಾಕೆಷ್ಟು? ಇವನನ್ನು ಸುಮ್ಮನೆ ಬಿಡಬಾರದು ಎಂದು ನಿಶ್ಚೈಯಿಸಿದೆ).
"ನಿನ್ನ ಏರಿಯಾ...?  ಹಾಗೆಂದರೇನು? ನೀನು ಎಲೆಕ್ಷನ್ ಕ್ಯಾಂಡೇಟಾ?(ನಮ್ಮ ಸ್ಥಳೀಯ ಚುನಾವಣಾ ದಿನಾಂಕ ಪ್ರಕಟವಾಗಿತ್ತು)
ಈ ಶಂಖ ಜಾಗಟೆ ನಿನ್ನ ಪಕ್ಷದ ಚಿಹ್ನೆಯಾ?" ಕೇಳಿದೆ. ಮುಖ ಇಂಗು ತಿಂದ ಮಂಗನಂತಾದರೂ ಕ್ಯಾರೆ ಎನ್ನದೆ ಮತ್ತೊಮ್ಮೆ ಶಂಖ ಜಾಗಟೆಗಳನ್ನು ಮೊಳಗಿಸಿದ. ನಾನೂ ಬಿಡುವವಳಲ್ಲ. ಪುನಃ ಕೇಳಿದೆ,
"ಅಲ್ಲಾ..., ನನ್ನ ತಂದೆಯವರು ಇದ್ದಾಗ ನೀನು ಬರುತ್ತಿದ್ದೆ ಎಂದೆಯಲ್ಲಾ? ನಿನ್ನ ವಯಸ್ಸೆಷ್ಟು?"
"ಇಪ್ಪತ್ತನಾಲ್ಕು"
"ನನ್ನ ತಂದೆಯವರು ತೀರಿಹೋಗಿ ಇಪ್ಪತ್ತೈದು ವರ್ಷಕ್ಕೂ ಮೇಲಾಯ್ತಲ್ಲ ?"
" ಓ... ನೀವೆಂತ ಕೋರ್ಟಿನಲ್ಲಿ ಕೊಶ್ಚನ್ ಮಾಡುವ ಹಾಗೆ ಕೇಳುವುದು?" ಹಾಗೆ ಹೇಳುತ್ತಲೇ ಪುನಃ ಶಂಖ ನಾದವಾಯ್ತು. ಈಗ ನನಗೆ ಅರ್ಥವಾಯ್ತು, ಮುಖವುಳಿಸಿಕೊಳ್ಳಲು ಅವನು ಮಾಡುತ್ತಿದ್ದ ಉಪಾಯವಾಗಿತ್ತದು!( ಶಂಖದ ಶಬ್ದದಲ್ಲಿ ನನ್ನ ಸ್ವರ ಹುದುಗಿ ಹೋಗುತ್ತಿತ್ತು).ನಂತರ ಸಲಕರಣೆಗಳೆಲ್ಲವನ್ನೂ ಚೀಲಕ್ಕೆ ತುಂಬಿಸಿದ. ಮುಖವನ್ನು ಗಡಿಗೆ ಗಾತ್ರ ಮಾಡಿಕೊಂಡು ಹೇಳಿದ,
" ಇಕ್ಕೋಳಿ ಅಮ್ಮಾ..., ಒಳಗೆ ಹೋಗಿ ಎದುರಿನ ಬಾಗಿಲು ತೆರೆದು ಒಂದೈವತ್ತು ರೂಪಾಯಿ, ಒಂದೆರಡು ತೆಂಗಿನ ಕಾಯಿ ಕೊಡಿ ನೋಡುವಾ....ಹೀಗೆ ಹಿಂಬದಿಯಿಂದ ಬರುವುದು ಸರಿ ಅಲ್ಲ. ನನ್ಗೆ ಟೈಮಿಲ್ಲ. ಸುಮಾರು ಮನೆ ಕವರ್ ಮಾಡ್ಲಿಕುಂಟು, ಬೇಗ ಕೊಡಿ."
ಇವನ ದುರಹಂಕಾರಕ್ಕೆ ತಕ್ಕ ಶಾಸ್ತಿ ಮಾಡಲೇಬೇಕು ಎಂದುಕೊಂಡೆ.
" ನೋಡು, ನೀನು ಬರುವುದು ಗೊತ್ತಿರ್ಲಿಲ್ಲ... ಹಾಗಾಗಿ ನನ್ನ ಕೈಯ್ಯಲ್ಲಿ ದುಡ್ಡಿಲ್ಲ.ಮನೆಯ ಗಂಡಸ್ರಿಗೆ ಹೇಳುವಾ ಅಂದ್ರೆ ನಮ್ಮ ಲ್ಯಾಂಡ್ ಲೈನ್ ಹಾಳಾಗಿ ಹೋಗಿದೆ. ಮೊಬೈಲಲ್ಲಿ ಬ್ಯಾಲೆನ್ಸ್ ಇಲ್ಲ. ಈಗ ಒಂದು ಕೆಲಸ ಮಾಡುವಾ...,ನಾನೊಂದು ನಂಬರ್ ಕೊಡ್ತೇನೆ. ನಿನ್ನ ಮೊಬೈಲಿಂದ ಒಂದು ಮಿಸ್ಕಾಲ್ ಕೊಡು.ಆಫೀಸಿಂದ ಗಂಡಸರು ಕೂಡಲೆ ಅದೇ ನಂಬರಿಗೆ ಕರೆ ಮಾಡ್ತಾರೆ. ನಾನೇ ಮಾತ್ನಾಡ್ತೇನೆ. ಅವರು ಬಂದು ಬೇಕಾದಷ್ಟು ದುಡ್ಡು ಕೊಟ್ಟು ಹೋಗ್ತಾರೆ. ಆಯ್ತಾ?"
 ನಿರ್ಲಕ್ಷ್ಯದಿಂದೆಂಬಂತೆ ಹೇಳಿದ." ಹೂಂ...ಕೊಡಿ ...ಕೊಡಿ"
"230100" ಹೇಳಿದೆ. ಆತನ ಜೇಬಿನಿಂದ ಸ್ಮಾರ್ಟ್ ಫೋನ್ ಹೊರಕ್ಕೆ ಬಂತು. ನಂಬರುಗಳನ್ನು ನೇವರಿಸಿದ (ಬಹುಷಃ ಧ್ವನಿವರ್ಧಕ ಚಾಲೂ ಸ್ಥಿತಿಯಲ್ಲಿತ್ತೆಂದು ತೋರುತ್ತೆ). ಎರಡು ರಿಂಗ್ ಆಗಿ ಇನ್ನೇನು ಇವನು ಸಂಪರ್ಕ ಕಡಿಯಬೇಕೆನ್ನುವಷ್ಟರಲ್ಲಿ ಆ ಕಡೆಯಿಂದ ಧ್ವನಿ ಕೇಳಿಸಿತು,
"ಹಲೋ..., ಪೊಲೀಸ್ ಸ್ಟೇಶನ್ ಹಿಯರ್ ...?"
ಮೆಟ್ಟಿ ಬಿದ್ದ ಮಾಡರ್ನ್ ದಾಸಯ್ಯ ಒಂದೇ ನೆಗೆತಕ್ಕೆ ಮೆಟ್ಟಲಿನಿಂದ ಅಂಗಳದ ತುದಿಗೆ ಮುಟ್ಟಿದ್ದ! ಮುಂದಿನ ಕ್ಷಣ ರಸ್ತೆಯ ತುದಿಯಲ್ಲಿ ಎದ್ದೆನೋ ಬಿದ್ದೆನೋ ಎಂದು ಆತ ಓಡುವುದನ್ನು ನೋಡಲೆಂದೇ ನಾನೂ ಅಂಗಳದ ತುದಿಗೆ ಹೋಗಿ ನಿಂತೆ.

          

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ