

ಹಾಗಲಕಾಯಿ ಪದಾರ್ಥ ಮಾಡುವಾಗ ಅದನ್ನು ಬೇಯಿಸಲು ಸಾಧಾರಣವಾಗಿ ನಾವು ಕುಕ್ಕರನ್ನು ಬಳಸುವುದೇ ಇಲ್ಲ ಅಲ್ವಾ? ಆದರೆ ಈ ಒಂದು ಪದಾರ್ಥದ ವಿಧಾನ ಸ್ವಲ್ಪ ಬೇರೆಯಾಗಿದೆ. ಅದೇ ರೀತಿ ರುಚಿಯೂ ವಿಶೇಷವಾಗಿದೆ. ಮಾಡಿ ನೋಡಿ.
ಸಾಮಾಗ್ರಿಗಳು:- ಹಾಗಲಕಾಯಿ-1
ತೊಗರಿಬೇಳೆ- 1/4 ಕಪ್
ತೆಂಗಿನ ತುರಿ- 1 ಕಪ್
ಕಡ್ಲೆ ಬೇಳೆ - 4 ಚಮಚ
ಕೆಂಪು ಮೆಣಸು-4
ಇಂಗು - 2 ಚಿಟಿಕೆ
ಉಪ್ಪು, ಹುಳಿ, ಬೆಲ್ಲ - ರುಚಿಗೆ ತಕ್ಕಷ್ಟು.
ಒಗ್ಗರಣೆಗೆ - ಎಣ್ಣೆ, ಕೆಂಪು ಮೆಣಸು, ಸಾಸಿವೆ, ಇಂಗಿನ ಪುಡಿ, ಕರಿಬೇವಿನ ಸೊಪ್ಪು.
ವಿಧಾನ:- ಹಾಗಲ ಕಾಯಿಯನ್ನು ಚೆನ್ನಾಗಿ ಉಜ್ಜಿ ಉಜ್ಜಿ ತೊಳೆಯಿರಿ ( ಹೀಗೆ ಮಾಡುವುದರಿಂದ ಕಹಿ ಕಡಿಮೆಯಾಗುತ್ತೆ,ಹೆಚ್ಚಿಟ್ಟ ಹೋಳುಗಳಿಗೆ ಉಪ್ಪು ಅರಶಿನ ಬೆರೆಸಿಟ್ಟು ಕಹಿ ತೆಗೆಯುವುದರಿಂದ ಅದರಲ್ಲಿರುವ ಪೋಷಕಾಂಶಗಳು ನಷ್ಟವಾಗುತ್ತವೆ). ಹೆಚ್ಚಿಯಾದ ಮೇಲೆ ಉಪ್ಪು, ಹುಳಿ ಗಿವುಚಿದ ನೀರು ಮತ್ತು ಹೋಳುಗಳು ಬೇಯಲು ಅಗತ್ಯವಿರುವಷ್ಟು ನೀರು ಹಾಕಿಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ತೊಗರಿಬೇಳೆ ಮತ್ತು ಬೇಕಾದಷ್ಟು ನೀರು ಹಾಕಿ. ಎರಡೂ ಪಾತ್ರೆಗಳನ್ನು ಕುಕ್ಕರಲ್ಲಿಟ್ಟು ಮೂರು ವಿಸಿಲಿಗೆ ಬೇಯಿಸಿ. ಮೇಲೆ ಹೇಳಿದ ಮಸಾಲೆ ಸಾಮಾಗ್ರಿಗಳನ್ನು ಹುರಿದುಕೊಂಡು ತೆಂಗಿನ ತುರಿಯೊಂದಿಗೆ ನುಣ್ಣಗೆ ರುಬ್ಬಿಕೊಳ್ಳಿ. ಬೆಂದ ಬೇಳೆ ಮತ್ತು ಹೋಳುಗಳನ್ನು ಒಂದೇ ಪಾತ್ರೆಗೆ ಹಾಕಿ ಬೆಲ್ಲ ಸೇರಿಸಿ ಕುದಿಸಿ. ರುಬ್ಬಿಟ್ಟ ಮಸಾಲೆಯನ್ನು ಹಾಕಿ ಪುನಃ ಕುದಿಸಿ ರುಚಿ ನೋಡಿ. ಉಪ್ಪು, ಹುಳಿ ಬೇಕಿದ್ದರೆ ಸೇರಿಸಿ ಒಗ್ಗರಣೆ ಕೊಡಿ. ಸಾಸಿವೆ ಸಿಡಿಯುವಾಗ ಇಂಗಿನ ಪುಡಿಯನ್ನೂ ಹಾಕಿಕೊಳ್ಳಿ. ಕರಿಬೇವಿನ ಸೊಪ್ಪು ಉದುರಿಸಿ ಅನ್ನದೊಂದಿಗೆ ಸರ್ವ್ ಮಾಡಿ.
ತರಕಾರಿ ತುಂಡುಗಳಿಗೆ ಹುಳಿನೀರು ಹಾಕಿ ಬೇಯಿಸುವುದರಿಂದ ತೊಗರಿಬೇಳೆಯನ್ನು ಅದೇ ಪಾತ್ರೆಗೆ ಹಾಕಿದರೆ ಅದು ಬೇ ಯಲಾರದು. ಕುಕ್ಕರಲ್ಲಿಡುವಾಗಲೇ ಹಾಗಲ ತುಂಡುಗಳಿಗೆ ಬೆಲ್ಲ ಹಾಕಿದರೆ ಅವು ಮೆತ್ತಗೆ ಬೇಯುವುದಿಲ್ಲ. ಈ ಪದಾರ್ಥ ಹೆಚ್ಚು ನೀರಾಗಿರಬಾರದು. ಇದನ್ನು ಒಮ್ಮೆ ಸವಿದರೆ ಪುನಃ ಪುನಃ ಸವಿಯಬೇಕೆನ್ನುವಷ್ಟುರುಚಿಯಾಗಿರುತ್ತೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ