ಸೋಮವಾರ, ನವೆಂಬರ್ 16, 2015

'ಇಲ್ಲ' - ಎಂಬ ಸರಳ ವರಸೆ

ಜೀವನ ಬಹು ಭಾರ ಅಥವಾ ಹಗುರ  ಎನ್ನುವ ಭಾವನೆಗಳ ಉಗಮಕ್ಕೆ ನಮ್ಮ ಮೇಲೆ ನಾವೇ  ಹೇರಿಕೊಳ್ಳುವ ನಿರೀಕ್ಷೆಗಳೇ ಕಾರಣ ಎಂದು ನನ್ನ ಅಭಿಮತ. ಮುಂದೆ ಓದಿ. ಆವಾಗ ನೀವೂ ನನ್ನ ಪಕ್ಷಕ್ಕೇ ಸೇರುವುದು ಗ್ಯಾರೆಂಟಿ.
ಮೊನ್ನೆ ಮೊನ್ನೆ ನಮ್ಮ ಸಾಹೀಬ್ರಿಂದ ಬೇಡಿಕೆ ಬಂತು,"ನಾಳೆ ಇಡ್ಲಿ ಮಾಡುವಾಗ ಮುದ್ದಣ್ಣ (ನಮ್ಮಲ್ಲಿ ವಿಶೇಷ ಕಾರ್ಯಕ್ರಮಗಳ ಸಂದರ್ಭದಲ್ಲಿ ಅಡುಗೆ ಮಾಡುವವರು) ಮಾಡುವಂತ್ತಾದ್ದೇ ಚಟ್ನಿ ಮಾಡ್ಬೇಕು  ಆಯಿತಾ...?" ನನ್ನ ರೆಡಿ ಮೇಡ್ ಉತ್ತರ ಹೀಗಿತ್ತು," ಅಯ್ಯೋ ರಾಮಾ..., ಮುದ್ದಣ್ಣ ಮಾಡಿದ ಹಾಗೆ ಮಾಡಲು ಈ ಜನ್ಮದಲ್ಲಿ ನನ್ಗೆ ಸಾಧ್ಯವಿಲ್ಲಪ್ಪ..."ಇದರ ಬದಲು 
"ಆಯ್ತು..." ಎಂದು ಒಪ್ಪಿದ್ದೆನೋ ಕೆಟ್ಟೆ ಎಂದೇ ಲೆಕ್ಕ. ಯಾಕೆ ಗೊತ್ತಾ..? ನಿರೀಕ್ಷೆ ಎನ್ನುವ ಮಣ ಭಾರದ ಹೊರೆ ನನ್ನ ತಲೆಯನ್ನೇರಿತೆಂಬುದು ಶತಃಸ್ಸಿದ್ಧ. ಅದನ್ನು ಬ್ಯಾಲೆನ್ಸ್ ಮಾಡಲು ಎಷ್ಟು ಕಷ್ಟ ನೋಡಿ, ನಮ್ಮ ಮುದ್ದಣ್ಣನ ಪಾಕದಲ್ಲಿ ಮೈವೆತ್ತ   ಚಟ್ನಿಯ ರೂಪ, ರುಚಿ, ಗಂಧಗಳನ್ನು ಮನಃ ಪಟಲದಲ್ಲಿ ಚಿತ್ರಿಸಿಕೊಳ್ಳಬೇಕು. ಕಾಯಿ ಹಾಕಿದ ಮಿಕ್ಸಿ ಒಂದು ಸುತ್ತು ಹೊಡೆದ ಕೂಡಲೇ ಅದನ್ನು ನಿಲ್ಲಿಸಿ ಚಟ್ನಿಯ ರುಚಿ ನೋಡಬೇಕು. ಅದಕ್ಕೆ ಇದನ್ನು ಹೋಲಿಸಿದಾಗ ತನ್ನಿಂದ ತಾನಾಗಿಯೇ ಮುಖ ಗಂಟಾಗಿ ಬಿಡುತ್ತದೆ. ಗುಣ ಮಟ್ಟ up to the standard ಮಾಡಲೆಂದು  ಮತ್ತೆ ಪುನಃ ಉಪ್ಪೋ ಹುಳೀಯೋ ಇಲ್ಲಾ ಕೊತ್ತಂಬರಿ ಸೊಪ್ಪೋ .... ಹೀಗೆ ಎನೋ ಒಂದನ್ನು ಸೇರಿಸಬೇಕಾದ ಕರ್ಮ! ಅಷ್ಟರಲ್ಲಿ ರುಚಿ ನೋಡಿ ನೋಡಿಯೇ ಅರ್ಧಕ್ಕರ್ಧ ಚಟ್ನಿ ಖಾಲಿಯಾಗದಿರುತ್ತದೆಯೇ? ಪುನಃ ಕಾಯಿ ತುರಿದು ಸೇರಿಸು... ಪುನಃ ಕಡೆ.... ಆಯ್ತು....ಇಷ್ಟೆಲ್ಲಾ  ವಿಲಿ ವಿಲಿ ಒದ್ದಾಡಿ ಚಟ್ನಿ ಕಡೆದು ಇಡ್ಲಿಯೊಟ್ಟಿಗೆ ಬಡಿಸಿದೆ ಎಂದಿಟ್ಟುಕೊಳ್ಳಿ, ತಿಂದವರ ಪ್ರತಿಕ್ರಿಯೆ..? "ರುಚಿಯೇನೋ ಚೆನ್ನಾಗಿದೆ, ಆದರೆ ಮುದ್ದಣ್ಣನ ಚಟ್ನಿಗೆ ಸರಿಸಮ ಇಲ್ಲ ..."(ಹಾಗಾದರೆ ಮುದ್ದಣ್ಣನನ್ನೇ ಹಾಕಿ ಅರೆದುಕೊಳ್ಳಿ .." ಎನ್ನುವ ಮಾತು ನಾಲಿಗೆ ತುದಿಗೆ ಬಂದರೂ ಹೇಳಲುಂಟೇ...?) ಅಷ್ಟು ಕಷ್ಟ ಬಂದದ್ದು ಇಷ್ಟು ಹೇಳಿಸಿಕೊಳ್ಳಲೇನು..?  ಅಂತಹ ಸಂದರ್ಭಗಳಲ್ಲೇ ನೋಡಿ....., ಎದೆಯಲ್ಲಿ ದಗ ದಗ ದಗ ಉರಿದ ನಿರಾಶಾಗ್ನಿಯ ಹೊಗೆ ಬಿಸಿಗಾಳಿ ರೂಪದಲ್ಲಿ ಮೂಗಿಗೇರಿ ನಿಟ್ಟುಸಿರಾಗಿ  ಹೊರಕ್ಕೆ ಫೂತ್ಕರಿಸಿ ಸುತ್ತ ಮುತ್ತಲಿನವರು ಅದರ ಬೇಗೆಗೆ ಕಂಗಾಲಾಗಿ ಬಿಡುವುದು.....,ಇಂತಹ ಅವಘಡಗಳೆಲ್ಲಾ ಸಂಭವಿಸಿದಾಗ ಚಟ್ನಿಯ ಕರ್ತೃವಿಗೆ   'ಸಾರವೇ ಇಲ್ಲದ ಈ ಸಂಸಾರ .....ಯಾರಿಗೆ ಬೇಕು ಈ ಗ್ರಾಚಾರ .... , ಶಿವನೇ ಶಂಭು ಲಿಂಗಾ...' ಎನ್ನುವಂತಾಗಿ ಬಿಡುತ್ತದೆ.ಅದರ ಬದಲು "ಇಲ್ಲಾ...ಸಾಧ್ಯವಿಲ್ಲಾ" ಎನ್ನುವ ಎರಡೇ ಶಬ್ದಗಳು ಎಂತಹ ಸುಖವನ್ನು ತಂದುಕೊಡುತ್ತಿತ್ತು? ನಾನು ಮಾಡಿದ್ದೂ ಅದನ್ನೇ....,
ಸಿಂಪಲ್ಲಾಗಿ "ಇಲ್ಲ" ಎಂದುಬಿಟ್ಟೆ. ಮಾರನೆ ದಿನ ಉಪಹಾರಕ್ಕೆ ಇಡ್ಲಿಯೊಂದಿಗೆ ಚಟ್ನಿಯನ್ನೂ ತಂದಿಟ್ಟೆ. ಹೊಗಳಿಸಿಕೊಳ್ಳಬೇಕೆಂಬ ನಿರೀಕ್ಷೆ ನನ್ನಲ್ಲಿ ಇರಲೇ ಇಲ್ಲ. 'ಮುದ್ದಣ್ಣನ ಸ್ಪೆಶಲ್ ಚಟ್ನಿ ತಿನ್ನಲೂ ಯೋಗ ಬೇಕು..., ಇವಳ ಬಳಿ ಹೇಳುವುದೂ ಗೋಡೆಗೆ ಹೇಳುವುದು ಎರಡೂ ಒಂದೇ' ಎಂದು ಇವರಿಗೂ ಅನ್ನಿಸಿರಬಹುದು. ಮೌನವಾಗಿಯೇ ತಿಂದರು. ಎರಡು ಇಡ್ಲಿ ..., ಮೂರು ಇಡ್ಲಿ...,ನಾಲ್ಕು..., ಐದು.... ತಟ್ಟೆಯಲ್ಲಿಟ್ಟಿದ್ದ ಇಡ್ಲಿ ಎಲ್ಲವೂ ಖಾಲಿ... , ಬೋಗುಣಿಯಲ್ಲಿದ್ದ ಚಟ್ನಿಯೂ ಖಾಲಿ! ಹುರ್ರೇ.... , ಅಂತೂ ಆ ದಿನದ ವೈಟ್ ಚಟ್ನಿ ಸೂಪರ್ ಸಕ್ಸೆಸ್... ನಿರೀಕ್ಷೆಯ ಹೊರೆ ಇಲ್ಲದಾಗ  ಹೊಗಳಿಕೆಯ ಮುಲಾಜು ಬೇಕಾಗಿಲ್ಲವಾದರೆ ಬಾಳೆಷ್ಟು ಹಗುರ.... ಸುಂದರ...
ಇನ್ನೊಂದು ಉದಾಹರಣೆ ನೋಡಿ, ಕೆಲವು ದಿನಗಳ ಹಿಂದೆ ಓರ್ವ ಹಿರಿಯ ಅಖಂಡ ವಿದ್ವಾಂಸರು ಕಾಲ್ ಮಾಡಿ, "ನಮ್ಮ ಮನೆತನದ ವಂಶವೃಕ್ಷವನ್ನು ಪುಸ್ತಕ ರೂಪದಲ್ಲಿ ತರುವ ಯೋಜನೆ ಇದೆ, ಒಂದು ಪುಟವನ್ನು ನಿಮ್ಮ ದಿವಂಗತ  ತಂದೆಯವರಿಗಾಗಿ ಮೀಸಲಿರಿಸಿದ್ದೇವೆ. ಅವರ ಬಗ್ಗೆ ಸಂಕ್ಷಿಪ್ತವಾಗಿ ಬರೆದುಕೊಡು" ಎಂದು ಹೇಳಿದರು. ನಾನು ಬೆಚ್ಚಿ ಬಿದ್ದೆ.  ಮೊದಲನೆಯದಾಗಿ ಅಂತಹ ದೊಡ್ಡ ಮನುಷ್ಯರಿಂದ ನಾನು ಫೋನ್ ಕಾಲನ್ನು ನಿರೀಕ್ಷಿಸಿಯೇ ಇರಲಿಲ್ಲ .  ಎರಡನೆಯದಾಗಿ ನಾಲ್ಕು ಜನರ ಕೈಗಳು ಸೇರಿದರೂ ಬಳಸಿ ಹಿಡಿಯಲು ಸಾಧ್ಯವಿಲ್ಲದಂತಹ ಆಲದ ಮರವನ್ನು ಮುಷ್ಠಿಯೊಳಗೆ ಹಿಡಿದು ತೋರಿಸು ಎಂದರೆ ಹೇಗೆ ಸಾಧ್ಯ? ನಮ್ಮ ತಂದೆಯವರ ಬಗ್ಗೆ ಸಂಕ್ಷಿಪ್ತವಾಗಿ ಬರೆಯುವುದೆಂದರೆ ಅದೇನು ಬಾಳೆಹಣ್ಣು ಸುಲಿದು ಬಾಯಿಗೆ ಹಾಕಿದಂತೆಯೇನು? ನನ್ನ ಮನಸ್ಸಂತೋಷಕ್ಕಾಗಿ ನಾಲ್ಕಾರು ಕನ್ನಡ ಪದಗಳನ್ನು ಜೋಡಿಸಿ ನಾನು ನನಗೆ ತೋಚಿದಂತೆ ಏನೋ ಬರೆಯುತ್ತಿರುತ್ತೇನೆ ಎಂದ ಕೂಡಲೇ ಇಂತಹ ಹಿರಿಯರು ಹೀಗೂ ಕೇಳುವುದೇ...? ಹಾಗೆಂದು ಅವರೊಡನೆ 'ಇಲ್ಲಾ' ಎನ್ನುವ ಹಾಗೆಯೂ ಇಲ್ಲ. ಥಟ್ಟೆಂದು ಹೇಳಿದೆ, "ಕ್ಷಮಿಸಿ, ನಿಮ್ಮ ನಿರೀಕ್ಷೆಯಂತೆ ಬರೆಯುವಷ್ಟು ನನಗೆ ಕನ್ನಡ ಭಾಷೆಯಲ್ಲಿ ಪ್ರಬುದ್ದತೆ ಇಲ್ಲ. ಆದರೂ ಪ್ರಯತ್ನ ಮಾಡುವೆ. ಅದನ್ನು ನಿಮಗೆ ಬೇಕಾದಂತೆ ಎಡಿಟ್ ಮಾಡಿಕೊಳ್ಳಬಹುದು. ಅಥವಾ ಅದರಿಂದ ಬೇಕಾದ ವಿಷಯವನ್ನು ಹೆಕ್ಕಿ ಬೇರೆಯದೇ ಲೇಖನವನ್ನು ಬರೆಯುವುದಿದ್ದರೂ ಅಡ್ಡಿ ಇಲ್ಲ." ಎಂದೆ. ಮಾರನೆಯ ದಿನವೇ ಲೇಖನ ಸಿದ್ಧ ಪಡಿಸಿ ಮೇಲ್ ಮಾಡಿದೆ. ನಂತರ ಅದನ್ನು ಮರೆತೂ ಬಿಟ್ಟೆ. ಸುಮಾರು ಹದಿನೈದು ದಿನಗಳ ನಂತರ ನನ್ನ ಮೇಲ್ ಬಾಕ್ಸ್ಸಲ್ಲಿ  ಅವರ ಪ್ರತ್ಯುತ್ತರ ಬಂದು ಕುಳಿತಿತ್ತು!  ನಾನು ಬರೆದುದನ್ನೇ ನನಗೆ ವಾಪಸು ಮಾಡಿದ್ದರು.(ಅದು ಹಾಗೇ ಆಗಬಹುದೆಂದು ತಿಳಿದಿತ್ತು). ಆದರೆ ಅದರ ಕೆಳಗೆ ಅದೇನೋ ಎರಡು ವಾಕ್ಯಗಳಿದ್ದುವು. ಗಮನವಿಟ್ಟು ಓದಿದೆ,  "ನೀನು ಕಳಿಸಿದ ಲೇಖನವು ನಮ್ಮ ಸಂಪಾದಕ ಮಂಡಳಿಗೆ ಒಪ್ಪಿಗೆಯಾಗಿದೆ. ಯಾವುದೇ ರೀತಿಯ ಕತ್ತರಿ ಪ್ರಯೋಗ ಮಾಡಿಲ್ಲ. ಒಂದೆರಡು ಕಾ ಗುಣಿತದ ತಪ್ಪುಗಳಿವೆ. ಅದನ್ನು ಸರಿ ಪಡಿಸಿ ಕಳಿಸಿದ್ದೇವೆ. ನೋಡಿ ಒಪ್ಪಿಗೆ ಸೂಚಿಸು. "ಆ ದೊಡ್ಡವರ ದೊಡ್ಡ ಗುಣಕ್ಕೆ ನಾನೇನು ಹೇಳಲಿ...?
ಅ ದಿನವಿಡೀ ನಾನು ಒಂತರಾ ವಿಚಿತ್ರ ಅಲೆಯಲ್ಲಿ ತೇಲಾಡುತ್ತಿದ್ದೆ.ಬಟ್ಟೆಗಳಿಗೆ ಇಸ್ತ್ರಿ ಹಾಕಲು ಹೊರಟವಳು ಇಸ್ತ್ರಿ ಪೆಟ್ಟಿಗೆಯೆಂದು ಕೈಯ್ಯಲ್ಲಿದ್ದ ಮೊಬೈಲನ್ನೇ ಬಟ್ಟೆಗೆ ಉಜ್ಜಿದ್ದೆ!! ಮಧ್ಯಾಹ್ನ ಒಂದೂವರೆಯ ಮೇಲೆ ಹಸಿವನ್ನು ತಡೆದುಕೊಳ್ಳಲು ಸಾಧ್ಯವೇ ಇಲ್ಲದವಳಿಗೆ ಆ ದಿನ ಘಂಟೆ ಎರಡಾದರೂ ಹೊಟ್ಟೆಯ ನೆನಪೇ ಆಗಿರಲಿಲ್ಲ.  ಹೀ ಗೆಲ್ಲಾ ಆಗಿದ್ದಾದರೂ ಯಾಕಾಗಿ? ನಿರೀಕ್ಷೆಯೇ ಇಲ್ಲದೆ ಬಂದ ಗೌರವದಿಂದಾಗಿ. ಅದರಲ್ಲಿ ಸಿಗುವ ಸುಖ ಅನುಭವಿಸಿದವರಿಗೇ ಗೊತ್ತು. ನಾನು ಈ ಲೇಖನ ಬರೆಯಲು ಶುರು ಮಾಡಿ ಎರಡು ದಿನ ಆಗಿತ್ತು. ಯಾಕೋ ಸೋಮಾರಿತನ...ಅದು ಮುಂದುವರಿಯಲೇ ಇಲ್ಲ. ಈವತ್ತು ಮಧ್ಯಾಹ್ನ ನನ್ನ ಅತ್ಮೀಯರೊಬ್ಬರ ಮೆಸೇಜ್ ಬಂತು. ಒಂದೇ ಒಂದು ಚಿಕ್ಕ ವಾಕ್ಯ, ' ಬ್ಲಾಗ್ ಯಾಕೆ ಅಪ್ಡೇಟ್ ಮಾಡ್ತಾ ಇಲ್ಲ?' ಅದನ್ನು ನೋಡಿ ನನ್ನ ಸೋಮಾರಿತನ ಎಲ್ಲಿ ಓಡಿ ಹೋಯಿತೋ.... ,ಸರಸರನೆ ಟೈಪ್ ಮಾಡಿ ಪೋಸ್ಟ್ ಮಾಡಿಯೇ ಬಿಟ್ಟೆ. ಅವರು 'ನೀನು ಇಂತಾದ್ದೇ ಬರೀಬೇಕು.., ಅದು ಹಾಗಿರಬೇಕು...., ಅದು ಹೀಗಿದ್ರೆ ನನಗೆ ಇಷ್ಟ... ' ಹೀಗೆಲ್ಲಾ ಹೇಳಿರುತ್ತಿದ್ರೆ ಖಂಡಿತಾ ನನ್ನ ತಲೆ, ಕೈ ಎರಡೂ ಸ್ತಬ್ಧವಾಗಿಬಿಡುತ್ತಿತ್ತು. ಆದರೆ ಹಾಗಾಗಲಿಲ್ಲ. ಯಾಕೆ ಗೊತ್ತಾ ? ಅವರ ಮಾತುಗಳಲ್ಲಿ ನಿರೀಕ್ಷೆ ಇರಲಿಲ್ಲ. ಫ್ರೇಂಡ್ಲಿಯಾಗಿ ನೆನಪಿಸಿದ್ದರಷ್ಟೇ... ಅದನ್ನೇ ನಾನು ತುಂಬಾ ಇಷ್ಟ ಪಟ್ಟದ್ದು ಕೂಡಾ... ನಿಮಗೂ ಇಂತಾದ್ದೇ ಇಷ್ಟವಾದೀತು ಅಲ್ವೇ..?
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ