ಬುಧವಾರ, ಜುಲೈ 19, 2017

Role Models( Malayalam movie)

ಶ್ರೀದೇವಿಯ 'Mom' ಸಿನೆಮಾದ ಬಗ್ಗೆ ತುಂಬಾ ಕುತೂಹಲ ಇಟ್ಟುಕೊಂಡಿದ್ದೆ. ಮಗಳ ಜೀವನದ ಒಳಿತಿಗಾಗಿ ಓರ್ವ ತಾಯಿಯಾಗಿ ಅವಳು ತನ್ನ ಮಿತಿಯನ್ನೂ ದಾಟಿ ಯಾವ ರೀತಿಯಲ್ಲಿ ಮುಂದೆ ಸಾಗುತ್ತಾಳೆ, ಅದರಲ್ಲಿ ಅವಳು ಯಶಸ್ವಿಯಾಗುತ್ತಾಳೋ ಇಲ್ಲವೋ ಎನ್ನುವುದೇ ಕಥೆ ಎಂಬುದನ್ನು ತಿಳಿದಿದ್ದೆ. ನಮಗೆ ನೋಡಬೇಕೆನಿಸುವ ಸಿನೆಮಾದ ಅರ್ಧಂಬರ್ಧ ಕಥೆ ತಿಳಿದ ಮೇಲೆ ಅದನ್ನು ಇಡಿಯಾಗಿ ನೋಡುವವರೆಗೂ ಚಡಪಡಿಕೆ ಇದ್ದದ್ದೇಮೊನ್ನೆ ಬುಧವಾರ ಪೇಟೆಗೆ ಹೋದವಳಿಗೆ ಆ ಸಿನೆಮಾದ ಪೋಸ್ಟರ್ ಕಂಡು ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತಾಗಿತ್ತು. (ಸಿನೆಮಾಗಳನ್ನು ಸರಿಯಾಗಿ ಸವಿಯಬೇಕಾದರೆ ಥಿಯಟರಿಗೇ ಹೋಗಬೇಕೆಂಬುದು ನನ್ನ ಅಭಿಮತ). ಭಾನುವಾರ ಮಾರ್ನಿಂಗ್ ಷೋಗೆ ಹೋಗೋಣವೆಂದು ಗೆಳತಿಯೊಡನೆ ಕೂಡಿ ಪ್ಲಾನ್ ಮಾಡಿದೆ. ಟಾಕೀಸಿಗೆ ಹೋದಾಗ ಅಲ್ಲಿ ಕಂಡದ್ದೇನು? Mom ಜಾಗದಲ್ಲಿ ಇನ್ಯಾವುದೋ ಸಿನೆಮಾ ಇತ್ತು! ಗಲ್ಲಾಪೆಟ್ಟಿಗೆಯ ಹುಡುಗನೊಡನೆ ವಿಚಾರಿಸಿದಾಗ ಗುರುವಾರವೇ ಅದು ಬದಲಾಗಿದೆ ಎಂದ. ಸಿನೆಮಾಗಳ ಎತ್ತಂಗಡಿ ರಾಜಕೀಯ ಇಲ್ಲೂ ಶುರುವಾಗಿ ಕೆಲವು ಕಾಲವೇ ಆಯಿತು ಎಂಬುದನ್ನು ಮೇಲೆ ತಿಳಿದುಕೊಂಡೆ. ಸಿನೆಮಾಕ್ಕೆ ಹೋಗಲೆಂದೇ ಬೆಳಂಬೆಳಗ್ಗೆ ಎದ್ದು ಅಟ್ಟಿ ಕುಟ್ಟಿ ಕೆಲಸಗಳನ್ನು ಪೂರೈಸಿ ಇಲ್ಲಿ ಬಂದು ಈಗ ಹ್ಯಾಪು ಮೋರೆ ಹಾಕಿಕೊಂಡು ಬರಿತಲೆಯಲ್ಲಿ ವಾಪಾಸು ಹೋಗುವುದೆಂದರೇನು? ಅದು ಮಲ್ಟಿಪ್ಲೆಕ್ಸ್ ಆಗಿತ್ತಾದುದರಿಂದ ನಾಕೈದು ಸಿನೆಮಾಗಳು ಒಂದೇ ಕಡೆ ಇದ್ದುವಲ್ಲ? ಎಲ್ಲವೂ ಮಲೆಯಾಳಮ್ ಸಿನೆಮಾಗಳೇ ಆಗಿದ್ದುವು. ಸದಭಿರುಚಿಯ ಮಲಯಾಳಂ ಸಿನೆಮಾಗಳನ್ನು ನಾವಿಬ್ಬರೂ ತುಂಬಾ ಇಷ್ಟ ಪಡುತ್ತೇವಾದುದರಿಂದ ಒಂದನ್ನು ನೋಡಿಯೇ ಹೋಗಿಬಿಡೋಣ ಎಂದು ತೀರ್ಮಾನಿಸಿದೆವು. ಯಾವ ಸಿನೆಮಾ ಚೆನ್ನಾಗಿದೆ ಎಂದು ಮತ್ತೆ ಅದೇ ಹುಡುಗನೊಡನೆ ಕೇಳಿದೆವು. Role Models ನೋಡಿ ಎಂದ.

 ನಾವು ಥೀಯೆಟರಿನೊಳಗೆ ಹೋಗುತ್ತಿರುವುದು ಬರೋಬ್ಬರಿ ಎರಡು ವರ್ಷಗಳ ನಂತರ. ಕತ್ತಲಲ್ಲಿ ತಡವರಿಸುತ್ತಾ ನಿಂತ ನಮ್ಮನ್ನು ನೋಡಿದ ಬಾಗಿಲು ಮಾಣಿ  ಟಾರ್ಚ್ ಹಿಡಿದು ಸೀಟುವರೆಗೂ ಬಂದು ಕುಳ್ಳಿರಿಸಿ ಹೋದ. ಸಿನೆಮಾ ಶುರುವಾಗಲು ಇನ್ನೂ ಕೆಲವು ಕ್ಷಣಗಳಿದ್ದುವು. ಶ್ರೀದೇವಿಯ ಸಿನೆಮಾ ಮಿಸ್ಸ್ ಆದ ದುಖಃವನ್ನು ಮರೆಯಲೋ ಎಂಬಂತೆ ರೋಲ್ ಮಾಡೆಲ್ಸ್ ಬಗ್ಗೆ ಇತ್ತೀಚೆಗೆ ನೆಟ್ಟಲ್ಲಿ ನೋಡಿದುದರ ಬಗ್ಗೆ ಹರಟೆ ಕೊಚ್ಚತೊಡಗಿದೆವು. ಫಕ್ಕನೆ ಪ್ರೇಕ್ಷಕರೆಲ್ಲರೂ ಎದ್ದು ನಿಂತುದನ್ನು ಗಮನಿಸಿ ಆಶ್ಚರ್ಯಚಕಿತರಾದೆವು. ಎದುರಿನ ಪರದೆ ರಾಷ್ಟ್ರಗೀತೆಗೆ ಸಾಕ್ಷಿಯಾಗಿ ನಮ್ಮ ರಾಷ್ಟ್ರ ಧ್ವಜ ಅಲ್ಲಿ ಅತ್ತಿಂದಿತ್ತ ಓಲಾಡುತ್ತಿತ್ತು. ಗಡಬಡಿಸಿ ಎದ್ದು ನೆಟ್ಟಗೆ ನಿಂತೆವು. ಅಚಾನಕಾಗಿ ಬಾಲ್ಯದ ನೆನಪುಗಳು ಹಣಕಿ ಹಾಕಿದುವು. ಆವಾಗೆಲ್ಲ ಸಿನೆಮಾದ ಮುಕ್ತಾಯದೊಂದಿಗೆ ರಾಷ್ಟ್ರಗೀತೆ ಬಿತ್ತರವಾಗುತ್ತಿತ್ತು. ಎಲ್ಲೋ ಕೆಲವೇ ಕೆಲವು ಪ್ರೇಕ್ಷಕರನ್ನು ಹೊರತುಪಡಿಸಿ ಉಳಿದವರೆಲ್ಲಾ ಧಡಬಢನೆ ನೂಕು ನುಗ್ಗಾಟ ಮಾಡಿಕೊಂಡು ಹೊರಗೆ ಹೋಗಿಬಿಡುತ್ತಿದ್ದರು. ಆದರೆ ಇಂದು? ಪ್ರೇಕ್ಷಕರು ಬಿಡಿ, ಆ ಬಾಗಿಲು ಮಾಣಿಯೂ ಒಳಕ್ಕೆ ಬಂದು ಪ್ರತಿಮೆಯಂತೆ ನಿಂತಿದ್ದ. ನಮ್ಮ ಮುಂದಿನ ಸಾಲಿನಲ್ಲಿದ್ದ ಮಗುವೊಂದು ಬಲದ ಕೈಯ್ಯನ್ನು ಹಣೆಗೆ ಒತ್ತಿ ಸೆಲ್ಯೂಟ್ ಮಾಡಿಕೊಂಡು ನಿಂತಿತ್ತು! ಮೇರಾ ಭಾರತ್ ಮಹಾನ್...
 ಛೇ, ನಾವು ನಿಲ್ಲುವ ಹೊತ್ತಿಗೆ ರಾಷ್ಟ್ರಗೀತೆ ಶುರುವಾಗಿ ಹೋಗಿತ್ತು. ತೀರಾ ಮುಜುಗರಕ್ಕೊಳಗಾದರೂ ತೋರಿಸಿಕೊಳ್ಳದೆ  ನೆಟ್ಟಗೆ ನಿಂತೆವು. ಸಮಕಾಲೀನ ವಿಷಯಗಳನ್ನು update ಮಾಡಿಕೊಳ್ಳದಿದ್ದರೆ ಆಗುವ ಆಭಾಸಕ್ಕೆ ನಾವೇ ಉದಾಹರಣೆಗಳಾದೆವು. ಯಾವಾಗಲೋ ಆಗೊಮ್ಮೆ ಈಗೊಮ್ಮೆ ಸಿನೆಮಾಗಳನ್ನು ಮನೆಯಲ್ಲೇ ಕುಳಿತು  ನೋಡುತ್ತಿದ್ದೆವಾದುದರಿಂದ ಥೀಯೆಟರ್ ಕಡೆಗೆ ತಲೆ ಹಾಕದೆ ವರ್ಷಗಳೇ ಆಗಿದ್ದುವಲ್ಲ? ಇತ್ತೀಚೆಗೆ ಬಂದ ನಿಯಮದಂತೆ ಮೊದಲಿಗೆ ರಾಷ್ಟ್ರಗೀತೆ, ನಂತರವೇ ಸಿನೆಮಾ ಪ್ರದರ್ಶನ ಎಂಬುದನ್ನು ನಾವು ಮರೆತೇ ಬಿಟ್ಟಿದ್ದೆವು!
Mom ಚಲನಚಿತ್ರ ನೋಡಲಾಗಲಿಲ್ಲ ಎಂಬ ಬೇಸರವನ್ನು ಬೇರು ಸಮೇತ ಕಿತ್ತೊಗೆದ ಚಲನಚಿತ್ರ Role Models. ಹೆತ್ತವರು ತಮ್ಮ ಫಾಲ್ಸ್ ಪ್ರೆಸ್ಟೀಜಿನ ಪೋಷಣೆಗಾಗಿ ತಮ್ಮ ಮಕ್ಕಳ ಮೇಲೆ ಮಿತಿ ಮೀರಿದ ಒತ್ತಡ ಹಾಕಿದರೆ ಅವರ ಜೀವನ ಎಷ್ಟು ಯಾತನಾಮಯವಾಗುತ್ತದೆ ಎಂಬ ತಿರುಳಿರುವ ಕಥೆ ಇದರಲ್ಲಿದೆ. ನಾಲ್ಕು ಬಕೇಟು ಕಣ್ಣೀರು ಸುರಿಸಿ ಎರಡು ದಪ್ಪ ಟರ್ಕಿ ಟವೆಲುಗಳನ್ನು ಒದ್ದೆ ಮಾಡಿಕೊಂಡು ನೋಡಬಹುದಾಗಿದ್ದಂತಹ ಮೂವಿಯ ಕಥೆಯನ್ನು ಹಾಸ್ಯದ ಹಂದರದಲ್ಲಿ ಹಬ್ಬಿಸಿ ಸೊಗಸಾದ ಫೊಟೋಗ್ರಫಿಯ ತೋರಣದಲ್ಲಿ ಸಿಂಗರಿಸಿ ನಮ್ಮ ಮುಂದೆ ಇಟ್ಟ ರೀತಿ ಅದ್ಭುತವಾಗಿದೆ. ಈ ಸಿನೆಮಾದ ಕಥೆ ಎರಡು ಮಜಲುಗಳಲ್ಲಿ ಪ್ರೇಕ್ಷಕರೆದುರು ತೆರೆದುಕೊಳ್ಳುತ್ತದೆ. ಕಾಲೇಜಿನಲ್ಲಿ ಓದುತ್ತಿರುವ ನಾಲ್ವರು ಹುಡುಗರು ಗಳಸ್ಯ ಕಂಠಸ್ಯ ಗೆಳೆಯರು. ಕಾಲೇಜು ಜೀವನವೆಂದರೆ ಇಂಚಿಂಚನ್ನೂ ಆಸ್ವಾದಿಸಿಯೇ ಮುಂದೆ ಹೋಗಬೇಕೆಂಬ ಮನಸ್ಥಿತಿಯ ಹುಡುಗರ ಹುಡುಗಾಟಿಕೆಗಳೇ ನಮ್ಮನ್ನು ನೆಗೆಗಡಲಲ್ಲಿ ಮುಳುಗೇಳುವಂತೆ ಮಾಡಿಬಿಡುತ್ತದೆ. ಅವರಲ್ಲಿ ಗೌತಮ್ (ಸಿನೆಮಾದ ಹೀರೋ) ಹೆತ್ತವರು ಅದೇ ಕಾಲೇಜಿನ ಪ್ರೊಫೆಸರುಗಳು. ತಮ್ಮ ಮಗ ಮೂವರು ಗೆಳೆಯರ ಜೊತೆ ಸೇರಿ ಕೆಟ್ಟುಹೋಗುತ್ತಿದ್ದಾನೆ ಎಂಬ ಆತಂಕ ಅವರಿಗೆ. ಅಷ್ಟೂ ಸಾಲದೆಂಬಂತೆ ಅದೇ ಕಾಲೇಜಿನ ಶ್ರೇಯಾ ಎನ್ನುವ ಹುಡುಗಿಯ ಜೊತೆ ತಮ್ಮ ಮಗನಿಗೆ ಪ್ರೇಮವೂ ಇದೆ ಎಂದು ತಿಳಿದಾಗಲಂತೂ ಸಮಾಜದಲ್ಲಿರುವ ತಮ್ಮ ವಿ..ಪಿ. ಇಮೇಜಿನ ಗತಿಯೇನು ಎಂಬ ಕಳವಳವೇ ಅತಿಯಾಗಿ ಮಾಡಬಾರದ ಕೆಲಸಕ್ಕೆ ಕೈಯಿಕ್ಕುತ್ತಾರೆ. ತಮ್ಮ influence ಉಪಯೋಗಿಸಿ ಗೌತಮನ ಗೆಳೆಯರ ಮೇಲೆ ಸುಳ್ಳು ಆಪಾದನೆ ಹೊರಿಸಿ ಕಾಲೇಜಿನಿಂದ ಹೊರಕ್ಕೆಸೆಯುತ್ತಾರೆ. ತಮ್ಮ ಮಗನನ್ನು ಮುಂದೆಂದೂ ನೋಡಲೇಬಾರದು ಮಾತ್ರವಲ್ಲ  ಊರಿನಿಂದಲೇ ದೂರ ಹೋಗುವುದೊಳಿತು ಎಂಬ ಬೆದರಿಕೆಯೊಂದಿಗೆ ಶ್ರೇಯಾಳನ್ನೂ ಹೊರಕ್ಕಟ್ಟುತ್ತಾರೆ. ಇಂತಹ ಸಂದಿಗ್ಧ ಸಮಯದಲ್ಲೇ ಗೌತಮ್ ಕಾಲೇಜು ಆವರಣದಲ್ಲಿ ನಡೆದ ದಾರುಣ ದೃಶ್ಯವೊಂದಕ್ಕೆ ಸಾಕ್ಷಿಯಾಗಬೇಕಾಗುತ್ತದೆ. ಎಲ್ಲೆಡೆಗಳಿಂದಲೂ ಜರ್ಝರಿತನಾದ ಗೌತಮ್ ಮಂಕಾಗಿ ಬಿಡುತ್ತಾನೆ. 
ಹೆತ್ತವರು,  `ಅಂತ ಅಲೆಮಾರಿಗಳ ಜೊತೆ ಸೇರಿ ನೀನು ಹಾಳಾಗೋದು ಬೇಡ ಎಂಬಾ ಕಾರಣಕ್ಕಾಗಿಯೇ ನಾವು ಹೀಗೆ ಮಾಡಿದ್ದು, ಎಲ್ಲವೂ ನಿನ್ನ ಒಳಿತಿಗಾಗಿಯೇ...' ಎಂದು ಮತ್ತೆ ಮತ್ತೆ ಹೇಳತೊಡಗಿದಾಗ ರೋಸಿ ಹೋದ  ಮಗ ತೀರಾ ಅಂತರ್ಮುಖಿಯಾಗುತ್ತಾನೆ. ಇಹದ ಪರಿವೆಯೇ ಇಲ್ಲದಂತಹ ಪುಸ್ತಕದ ಹುಳುವಾಗಿಬಿಡುತ್ತಾನೆ. ಆತನಿಗೇ ಅರಿವಾಗದಂತೆ split personality ಎಂಬ ಮಾನಸಿಕ ಖಾಯಿಲೆಗೆ ತುತ್ತಾಗುತ್ತಾನೆ. ಯಾವ ಚಿಕಿತ್ಸೆಯಿಂದಲೂ ಗುಣಹೊಂದದಾಗ ಹೆತ್ತವರಿಗೆ ಚಿಂತೆ ಹತ್ತಿಕೊಳ್ಳುತ್ತದೆ. ಇದಿಷ್ಟು ಕಥೆಯ ಮೊದಲ ಹಂತ.
  ತಮ್ಮ ಮಗನನ್ನು ಸರಿಪಡಿಸಲು ಮೂವರು ಗೆಳೆಯರಿಗಷ್ಟೇ ಸಾಧ್ಯ ಎಂದು ಯೋಚಿಸಿದ ತಂದೆ ಅವರನ್ನು ಹುಡುಕಿ ಗೌತಮ್ ಸ್ಥಿತಿಯನ್ನು ವಿವರಿಸಿ ಸಹಾಯ ಮಾಡುವಂತೆ ಅಂಗಲಾಚಿಕೊಳ್ಳುತ್ತಾನೆ. ಇದೇ ಪ್ರೊಫೆಸರ್ ಹಿಂದೆ  ತಮಗೆ ಮಾಡಿದ ಅನ್ಯಾಯವನ್ನು ಗಣನೆಗೆ ತೆಗೆದುಕೊಳ್ಳದೆ ಮೂವರೂ ಗೆಳೆಯರು ಗೌತಮನ ನೆರವಿಗೆ ಧಾವಿಸುತ್ತಾರೆ. ಮುಂದಿನ ಕಥೆ ಎರಡನೆಯ ಹಂತ. ಜೀವದ ಗೆಳೆಯನಿಗಾಗಿ ಅವರು ಹೂಡುವ ನಾಟಕಗಳು, ಮಾಡುವ  ಸಂಧಾನಗಳು, ತೋರಿಸುವ  ಸಾಹಸಗಳು....ಎಲ್ಲಾ ಕಡೆಯೂ ವಿಜ್ರಂಭಿಸಿದ್ದು ಸದಭಿರುಚಿಯ ಜೋಕುಗಳು. ನೆನಪಿಸಿಕೊಂಡು ನಗುವಂತಹ ಸನ್ನಿವೇಶಗಳು. ಮಲೆಯಾಳಂ ಭಾಷೆಯ ಲಾಲಿತ್ಯವನ್ನು ಸವಿಯಬೇಕೆಂದರೆ ಇಂತಹ ಚಲನಚಿತ್ರಗಳಲ್ಲಿ ಧಾರಾಳವಾಗಿ ತುಂಬಿಕೊಂಡಿರುವ  ಸ್ವಯಂ ಸ್ಫೂರ್ತಿಯ ಲಘು ಸಂಭಾಷಣೆಗಳನ್ನು ಕೇಳಬೇಕು.    ಅದಕ್ಕೆ ಪೂರಕವಾದಂತ body language ಗಳನ್ನು ಗಮನಿಸಬೇಕು.  

ಇವರ ಸಹವಾಸದಲ್ಲಿ ಗೌತಮ್ ಸರಿ ಹೋದನೇ...ಎಲ್ಲೋ ಇದ್ದ ಶ್ರೇಯಾ ಪುನಃ ಗೌತಮ್ ಜೊತೆಗೆ ಸೇರಿದ್ದು ಹೇಗೆ...? ಆ ಮಹತ್ಕಾರ್ಯಕ್ಕಾಗಿ  ಆತನ ಗೆಳೆಯರು ಮಾಡಿದ್ದೇನು ......?ಇವೆಲ್ಲವನ್ನೂ ಮನಸಾರೆ ಎಂಜಾಯಿಸಿ ತಿಳಿಯಬೇಕಾದರೆ Role Models ನೋಡಲೇಬೇಕು. ಜೂನ್ 25 ರಂದು ಬಿಡಿಗಡೆಯಾದ ಸಿನೆಮಾ ನಮ್ಮೂರಲ್ಲಿ ಈಗಲೂ ಓಡುತ್ತಾ ಇದೆ. ಇಷ್ಟ,ಮಿತ್ರ, ಬಂಧುಗಳೊಡಗೂಡಿ ಕುಟುಂಬ ಸಮೇತ  ಮೂವಿಯನ್ನು ನೋಡಿ ನಕ್ಕು ಹಗುರಾಗಿ. ನಗುವು ಸಾವಿರವಾದಾಗ ನೆನಪುಗಳೂ ಸಾವೇ ಇರದವಾಗುತ್ತವೆ. ಇಂತಹ ಪುಟ್ಟ ಪುಟ್ಟ ಸವಿನೆನಪುಗಳೇ ಅಲ್ಲವೇ ಜೀವನವನ್ನು ಜೇನುಗೂಡಾಗಿಸುವುದು...?                       

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ