ಶುಕ್ರವಾರ, ಮೇ 18, 2018

ಲೇಡಿಗೊಶನ್ ಆಸ್ಪತ್ರೆಯ ಜನರಲ್ ವಾರ್ಡಿನಲ್ಲಿ..



ಶ್ರಾವಣ್ ಎಮ್.ಬಿ.ಬಿ.ಎಸ್.ಮುಗಿಸಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ಹೌಸ್ಸರ್ಜನ್(ಮೆಡಿಕಲ್ ಇಂಟರ್ನ್) ಆಗಿ ಕೆಲಸ ಮಾಡುವ ನವ ವೈದ್ಯ. ಹೌಸರ್ಜನುಗಳು ಒಂದು ವರ್ಷದ ಅಭ್ಯಾಸ ಕಲಿಕೆಯಲ್ಲಿ ಶರೀರದ ಬೇರೆ ಬೇರೆ ಅಂಗಾಂಗಗಳಿಗೆ ಸಂಬಂಧಪಟ್ಟ ವಿಭಾಗಗಳಲ್ಲಿ ಕೆಲಸ ಮಾಡುತ್ತಾ ಪರಿಣಿತಿಯನ್ನು ಪಡೆಯುತ್ತಾರೆ. ಎರಡು ತಿಂಗಳಿಗೊಮ್ಮೆ ಕಲಿಕಾ ವಿಭಾಗ ಬದಲಾಗುತ್ತಿರುತ್ತದೆ. ಉದಾ: ಎರಡು ತಿಂಗಳು ಮಕ್ಕಳ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದರೆ ಮುಂದಿನ ಎರಡು ತಿಂಗಳು ಮೂಳೆ ಸಂಬಂಧಿ ರೋಗಗಳ ವಿಭಾಗದಲ್ಲಿ ಕೆಲಸ ಮಾಡುತ್ತಾರೆ. ಹೀಗೆ ಒಂದು ವರ್ಷವಿಡೀ ಬೇರೆ ಬೇರೆ ವಿಭಾಗಗಳಲ್ಲಿ ದುಡಿಯುತ್ತಾರೆ. ಯುವ ವೈದ್ಯ ತನ್ನ ಇಂಟರ್ನ್ಶಿಪ್ಪಿನ ಎರಡನೇ ಭಾಗವಾದ ಗೈನಕಾಲಜಿ(ಸ್ತ್ರೀ ರೋಗ ಶಾಸ್ತ್ರ) ವಿಭಾಗದಲ್ಲಿ ಕರ್ತವ್ಯಕ್ಕೆ ನಿಯುಕ್ತಿಗೊಂಡ. ಎರಡು ತಿಂಗಳ ಅವಧಿಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ವಿದ್ಯಾರ್ಥಿಗಳನ್ನು ಬೇರೆ ಬೇರೆ ಗುಂಪುಗಳನ್ನಾಗಿ ಮಾಡಿ ಡ್ಯೂಟಿಗೆ ಹಾಕುತ್ತಾರೆ. ಮೊದಲ ಹದಿನೈದು ದಿನ ಸ್ತ್ರೀ ರೋಗ ವಿಭಾಗ, ನಂತರದ ಹದಿನೈದು ದಿನ ಹೆರಿಗೆ ವಿಭಾಗ, ಮುಂದೆ ಗರ್ಭಿಣಿಯರ ವಿಭಾಗ, ಕೊನೆಗೆ ಶಸ್ತ್ರಚಿಕಿತ್ಸೆ ಮುಗಿಸಿ ವಾರ್ಡಲ್ಲಿ ದಾಖಲಾದವರ ವಿಭಾಗ(ಪೋಸ್ಟ್ ಆಪೆರೇಟಿವ್ ವಾರ್ಡ್). ಶ್ರಾವಣ್ ಇತರ ಕೆಲವು ವಿದ್ಯಾರ್ಥಿಗಳೊಂದಿಗೆ ಸ್ತ್ರೀ ರೋಗ ವಿಭಾಗದಲ್ಲಿ ಕರ್ತವ್ಯಕ್ಕೆ ನೇಮಕಗೊಂಡ. ವಿಧವಿಧದ ರೋಗಗಳು ಮತ್ತು ಚಿಕಿತ್ಸಾ ವಿಧಾನಗಳ ಕುರಿತು ಅಭ್ಯಾಸ ಮಾಡುತ್ತಾ ಗೈನಕಾಲಜಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ (ಅವರೂ ಅಲ್ಲಿ ಕೆಲಸ ಮಾಡುತ್ತಿರುತ್ತಾರೆ) ಸಹಾಯಕನಾಗಿ ದುಡಿಯುತ್ತಾ ಹಗಲು ರಾತ್ರಿ ರೋಗಿಗಳೊಡನೆ ಬೆರೆಯುತ್ತಾ ಲೇಡಿಗೋಶನ್ ಆಸ್ಪತ್ರೆಯ ಖಾಯಂ ನಿವಾಸಿ ಎನ್ನುವಷ್ಟರ ಮಟ್ಟಿಗೆ ಅಲ್ಲಿಯ ಜನರಿಗೆ ಚಿರಪರಿಚಿತನಾದ. ವಿಭಾಗದಲ್ಲಿ ಅಂದು ಅವನ ಕೊನೆಯ ದಿನದ ಡ್ಯೂಟಿಯಾಗಿತ್ತು. ದಿನ ಹೊಸದಾಗಿ ದಾಖಲಾದ ಒಳರೋಗಿಗಳ ಮೇಲುಸ್ತುವಾರಿಗೆ ಹೊರಟ. ಅದು ಸರಕಾರಿ ಆಸ್ಪತ್ರೆಯ ಜನರಲ್ ವಾರ್ಡಿನ ಮಹಿಳಾ ವಿಭಾಗ.  ಹೆಚ್ಚಿನವರೂ ಬಡವರು. ದುಡ್ಡು ಖರ್ಚು ಮಾಡಲು ಮನಸ್ಸಿಲ್ಲದೆ ರೋಗಿಯನ್ನು ತಂದು ಅಲ್ಲಿ ಹಾಕಿ ಹೋದವರೂ ಇದ್ದರು. ನೋವು, ಯಾತನೆ, ಜಿಗುಪ್ಸೆ, ಹತಾಶೆ, ಅಳು, ಹರಟೆ, ಗಾಸ್ಸಿಪ್ಪು, ಜಗಳ....ಇವೆಲ್ಲವೂ ಅಲ್ಲಿ ಸಾಮಾನ್ಯ. ಶ್ರಾವಣ್ ಕೈಯ್ಯಲ್ಲಿ  ಕೇಸ್ ಶೀಟುಗಳನ್ನು ಹಿಡಿದುಕೊಂಡು ಸಂಬಂಧಪಟ್ಟ ರೋಗಿಗಳನ್ನು ತಪಾಸಣೆ  ಮಾಡುತ್ತಾ ಜೊತೆಯಲ್ಲಿದ್ದ  ಸಿಸ್ಟರಿಗೆ ಸೂಚನೆಗಳನ್ನು ಕೊಡುತ್ತಾ  ಬೆಡ್ ನಂಬರ್ 26 ಕ್ಕೆ ಬಂದ. 65 ರಿಂದ 70 ವರ್ಷ ವಯಸ್ಸಾಗಿರಬಹುದಾದ ಮಹಿಳೆಯೋರ್ವಳು ಕಂಗೆಟ್ಟಂತೆ ಕುಳಿತಿದ್ದಳು. ಮೊದಲ ನೋಟದಲ್ಲೇ ಆಕೆ  ಉತ್ತರ ಕರ್ನಾಟಕದವಳೆಂದು  ಯಾರೂ ಹೇಳಬಹುದಾಗಿತ್ತು. ಸಣಕಲು ಶರೀರ, ಅರ್ಧಹಣೆ ಮುಚ್ಚಿದ ಕುಂಕುಮ ಬೊಟ್ಟು. ಉಟ್ಟಿದ್ದ ಹಳೇಯದಾದ ಇಳಕಲ್ ಸೀರೆಯ ಸರಗನ್ನು ತಲೆ  ಮುಚ್ಚಿಕೊಳ್ಳುವಂತೆ ಹೊದೆದಿದ್ದಳು. ದವಡೆಯಲ್ಲಿ ತಾಂಬೂಲ ಇರುಕಿಕೊಂಡಿತ್ತು. ಹಾಸಿಗೆ ಮೇಲೆ ಕುಳಿತುಕೊಂಡು ಆತಂಕದಿಂದ ಸುತ್ತಲೂ ಕಣ್ಣು ಹೊರಳಿಸಿ ನೋಡುತ್ತಿದ್ದಳು.
ಶ್ರಾವಣ್: "ಏನಜ್ಜೀ...ಇವತ್ತು ಬಂದ್ರಾ?"
ಅಜ್ಜಿ: "ಹೂಂನ್ರೀ...ಡಾಕ್ಟ್ರೀಸಾಯೇಬ್ರಾ...."
ಶ್ರಾವಣ್:(ಕೇಸ್ ಶೀಟ್ ನೋಡುತ್ತಾ) " ಖಾಯಿಲೆ ಶುರುವಾಗಿ ಎಷ್ಟು ಸಮಯವಾಯ್ತಜ್ಜೀ?"
ಅಜ್ಜಿ: "ಒಂದೆರಡು ತಿಂಗ್ಳಾ ಆತ್ರೀ ಯಪ್ಪಾ...."
ಶ್ರಾವಣ್: "ನಿಮ್ಮ ಜೊತೆಯಲ್ಲಿ ಯಾರಿದ್ದಾರಜ್ಜೀ? ನಾನು ಮಾತ್ನಾಡಬೇಕಲ್ಲ?" ಡಾಕ್ಟರು ಅಷ್ಟು ಹೇಳಿದ್ದೇ ತಡ, ಅಜ್ಜಿ ಕುಳಿತಲ್ಲಿಂದ ಎದ್ದು ಡಾಕ್ಟರರೆದುರು ಎರಡೂ ಕೈಗಳನ್ನು ಜೋಡಿಸಿ ನಿಂತುಕೊಂಡು ನಡುಗುವ ಸ್ವರದಲ್ಲಿ ಹೇಳತೊಡಗಿದಳು,
"ಡಾಕ್ಟ್ರೀ ಸಾಯೇಬ್ರಾ....ಏನ್ ಹೇಳುವಾಕೀ ನಾನು? ....ನಮ್ಮೂರು ಬಾಗಲ್ಕೋಟ. ಈವಾಗ ನನ್ ಮನೀಯಂವಾ ಅಲ್ಲಿ ನಮ್ ಜಮೀನ್ದಾಗೆ ಒಬ್ನೇ ದುಡೀವಂಗೆ ಆಗೋತಲ್ರೀ...,ನಾನು ಮಗನ್ ತಾವ ಇಲ್ಲೇ ಸಿಟಿನಲ್ಲಿದ್ದೀನ್ರೀ...., ಸೊಸಿ ಬಾಣಂತನಕ್ಕ ಬಂದಿದ್ದೆ ನೋಡ್ರೀ....ವೊಂದು ವರ್ಷ ಆತ್ರೀ ಮಗೂಗೆ....ಇನ್ನೂ ನನ್ನ ಊರಿಗ್ ಕಳ್ಸಾಕ್ ಮನಸ್ಸ ಮಾಡ್ನಿಲ್ಲ ನೋಡ್ರೀ ನನ್ಮಗ....ಎಲ್ಲಾ ಸೊಸೀ ಚಿತಾವಣೀ....ಗಂಡ ಹೆಣ್ತಿ ಹೊರಗ್ ದುಡಿತಾರ್ರಿ....ಮಗೀನ ಚಾಕ್ರೀ...ಮನಿ ಚಾಕ್ರೀ....ಎಲ್ಲಾ ನಾನ್ ಮಾಡೋಳೇ....ಜಮೀನ್ದಾಗೆ ದುಡ್ದೋಳಿಗೆ ಅದೇನ್ ತ್ರಾಸ ಅಲ್ಲ ಬಿಡ್ರೀ....ಊರಾಗೆ ನನ್ ಮನೀಯಂವಾ ಒಂಟಿ ಭೂತ ಆಗೋದ್ನಲ್ರೀ....ನನ್ ಮ್ಯಾಲೆ ಜೀವ ಇಟ್ಕೊಂಡಿದಾನ್ರೀ....ಆದ್ರೂ ಹೇಳ್ಲೊಲ್ಲ....ಅವ್ನಾ ಅಲ್ಲಿ ಬಿಟ್ಟು ನಾ ಒಬ್ಬಾಕೀ ಇಲ್ಲಿ ಏನ್ ಸಾಯ್ಲಿ....? ಅಂವಾ ಅಲ್ಲಿ ಕಷ್ಟ ಪಡ್ತಾನ್ರೀ ಯಪ್ಪಾ....ಒಬ್ನೇ ಕೈ ಬಾಯಿ ಸುಟ್ಕಂಡು ಹೊತ್ತಾರೆ ಬಿಸಿಲ್ನಾಗಿ ಹೊಳ್ಳಾಡ್ತಾ ಮೈಮುರ್ದು ದುಡಿದ್ ತಂದ್ ಹಾಕುದ್ನಾ.... ನನ್ಮಗ ವೋಗಿ ಕಸ್ಕೊಂಡು ಬರ್ತಾನ್ರೀ....,ಈಗೊಂದೆರಡು ತಿಂಗ್ಳ ಹಿಂದಿ ನೋಡ್ರೀ...ಬಚ್ಚಲ್ದಾಗೆ ಚಕ್ಕರ್ ಬಂದು ಬಿದ್ಬಿಟ್ಟೆ ನೋಡ್ರೀ...,ಆವಾಗ್ನಿಂದಾ ಸೊಂಟಾ ನೋವು ಬಾಳ ಐತ್ರೀ....ಅದ್ರ ಮ್ಯಾಕೆ ನನ್ ಮೊಮ್ಮಗ ಎಳೀ ಬೊಮ್ಟೇ ನೋಡ್ರೀ....ಎತ್ತೋಕಾಗ್ನಿಲ್ಲಾ ಅಂದ್ರೂವೇ ಕೇಳ್ಕಂತಾಯಿಲ್ಲ....ಪಾಪ...ಅದಕ್ಕೇನು ಗೊತ್ತೈತ್ರೀ....ದೇವ್ರ ಕಂದಾ....ನಾನು ಅಂದ್ರೆ ಜೀವ ಬಿಡ್ತೈತಿ..., ನನ್ ಸೊಸಿ ಚಿನಾಲಿ....ಮಗ್ನ ತಲೆ ತಿರಗ್ಸವ್ಳೆ....,ದುಡೀತಿವ್ನಿ ಅಂತ ಇಟ್ಕೊಂಡವ್ರೆ ನನ್ನ....ಇಗೋಂದು ಹದ್ನೈದಿಪ್ಪತ್ತು ದಿನ್ದಿಂದಾ ಉಚ್ಚೆ ಹೊಯ್ಯಕ್ ಆಗಲ್ರೀ....ತೊಡೆ ಸಂದಿಯಾಗ್ ಏನೋ ಸಿಕ್ಕಾಕೊಂಡದೆ....,ಸೊಸಿಗ್ ತೋರಿಸ್ದೆ....ಅದೇನೋ ಗುಸಾಪಿಸಾಂತ ಗಂಡಂಗೇಳಿ ಇಲ್ಲಿಗ್ ತಂದ್ ಹಾಕವ್ರೇ....ಖರ್ಚಿನ  ಬಾಬ್ತು ಇರ್ಬೇಕ್ ನೋಡ್ರೀ....ನನ್ನ ಅಡಮಿಂಟ್ ಮಾಡಿ ಈಗ್ ಬರ್ತೀವಿ ಅಂತ ಹೋದೋರ್ ಹೋಗೇ ಬಿಟ್ರೂ ಸಾಯೇಬ್ರಾ....ಅಪ್ಪಂಗಾರಾ ಹೇಳೋ ಮಗ್ನೇ ಅಂದಿದ್ದಕ್ಕೆ ಅಷ್ಟ್ದೂರಾ ಕಾಲ್ ಮಾಡಾಕೆ ಮಬೈಲಲ್ಲಿ ದುಡ್ಡಿಲ್ಲಾ ಅಂದ್ಬಿಟ್ಟು ತಾರಮ್ಮಯ್ಯ ಆಡಿಸ್ಬಿಟ್ಟು ಹೋಗೇಬಿಟ್ಟ್ರೂ.....ಏಳೆಂಟು ಮಕ್ಳು ಸತ್ತು ಹುಟ್ಟಿದ್ರೂವೇ ಮಲೆಮಾದೇಶ್ವರ್ನ ಮೇಲೆ ನಂಬ್ಕೆ ಕಳ್ಕೊಂಡಿರ್ನಿಲ್ಲಾ ನಾನು...ಕೊನೇಗೂ ದೇವ್ರು ಕಣ್ತೆರೆದ್ಬುಟ್ಟ....ಅಂದ್ಕೋಂಡಿವ್ರೀ....ಇಂತ ಮಗಾ ಇದ್ರೂವೇ ಒಂದೇ ಸತ್ರುವೇ ಒಂದೇ...." ಎನ್ನತ್ತಾ ಗೋಳೋ ಎಂದು ಅತ್ತಳು.
ಶ್ರಾವಣ್ ಒಂದು ಕ್ಷಣ ದಿಙ್ಮೂಢನಾದನು. ಇಂತಹ ಮಕ್ಕಳೂ ಉಂಟೇ....??? ಮಗು ತೊಡೆಯ ಮೇಲೆ ಹೇಸಿಗೆ ಮಾಡಿತೆಂದು ತೊಡೆಯನ್ನೇ ಕೆತ್ತಿ ಬಿಸಾಡಿದಂತೆ ಎಂಬುದು ಹಳೆಯ ಗಾದೆ ಮಾತಾದರೆ ಅದನ್ನು ತಿದ್ದುಪಡಿ ಮಾಡಿ ಮಗುವಿನ ಅಂಡನ್ನೇ ಕೆತ್ತಿ ಬಿಸಾಡಿದ ಎನ್ನಬೇಕು...? ಅಮ್ಮನಿಗಾಗಿ ಜೀವ ಕೊಡುವ ಅಪ್ಪನಿದ್ರೂ ಆತನೊಡನೆ ಜೀವಿಸುವ ಸ್ವಾತಂತ್ರ್ಯವಿಲ್ಲ ಈಕೆಗೆ.....! ಹಾಗೆಂದು ಅಮ್ಮನ ಕಷ್ಟಕ್ಕೆ ಮಗನ ಸ್ಪಂದನೆಯಾದರೂ ಎಂತಹುದು? ಇನ್ನು ಈಕೆಯಿಂದ ತಮಗೆ ಲಾಭಕ್ಕಿಂತಲೂ ನಷ್ಟವೇ ಅಧಿಕ ಎಂದು ಲಕ್ಕಾಚಾರ ಹಾಕಿರಬೇಕು. ಅದಕ್ಕೇ ಮಗ ಎನಿಸಿಕೊಂಡವ ಈಕೆಯನ್ನು ಇಲ್ಲಿ ಬಿಟ್ಟು ಪರಾರಿಯಾದದ್ದು. ಏಳೆಂಟು ಮಕ್ಕಳನ್ನು ಹೆಡೆದು ವಿಫಲಳಾದದ್ದೂ ಅಲ್ಲದೆ ಹೊಲದಲ್ಲಿ ನಿರಂತರ ದುಡಿತ, ಕೆಮ್ಮು,ದಮ್ಮು.... ಎಲ್ಲವುಗಳನ್ನು ಸಹಿಸಿಯೂ ಒಂದು ಮಗುವಿಗಾಗಿ ಈಕೆ ಪಟ್ಟ ಪಾಡು...?ಕೊನೆಗೂ ಹುಟ್ಟಿದ್ದ ಗಂಡು ಮಗ....,ಕೊನೆಗಾಲಕ್ಕೆ ದಿಕ್ಕಾಗಬೇಕಾದವನು ಮಾಡಿದ್ದೇನು....? ಎಲ್ಲ ಕಷ್ಟಗಳಿಗೆ ಕಳಶವಿಟ್ಟಂತೆ ಈಗ ಈಕೆಗೆ ಗರ್ಭಕೋಶ ಜಾರಿದ್ದೂ ಅಲ್ಲದೆ ಸೋಂಕಿಗೂ ಒಳಗಾಗಿದೆ. ಶಸ್ತ್ರಚಿಕಿತ್ಸೆ ಆಗಲೇಬೇಕು, ರಕ್ತದೊತ್ತಡ,ಸಕ್ಕರೆ ಖಾಯಿಲೆಗಳೂ ಗಂಭೀರ ಅನ್ನುವಷ್ಟರ ಮಟ್ಟಕ್ಕೆ ಮುಟ್ಟಿದೆ. ಮೊದಲು ಅದನ್ನು ಹಿಡಿತಕ್ಕೆ ತರಬೇಕು, ಎಲ್ಲ ಸಮಸ್ಯೆಗಳಿಗೂ ಯಜಮಾನನಂತೆ ಬಂದು ಕೂತಿದೆ, ಮಾನಸಿಕ ಒತ್ತಡ.....
"ಡಾಕ್ಟ್ರೀಸಾಯೇಬ್ರಾ....ನನಗ್ಗೇನಾಗೈತ್ರೀ....ಒಂಚೂರು ನಮ್ಮನೆಯವ್ರ ಕರೆಸ್ರೀ....ನಿಮ್ ದಮ್ಮಯ್ಯಾ ಅಂತೀನೀ....ಇದನ್ನ ನಿಮ್ಕಾಲು ಅಂದ್ಕೊಂಡು ಹಿಡ್ಕಂಡಿದೀನೀ...."
ಎನ್ನುತ್ತಾ ಆಕೆ ಶ್ರಾವಣ್ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಕಣ್ಣೀರು ಹಾಕಿದಳು. ಎಚ್ಚೆತ್ತುಕೊಂಡ ಶ್ರಾವಣ್ ಎಲ್ಲಕ್ಕೂ ಮೊದಲು ತನ್ನ ಕರ್ತವ್ಯವನ್ನು ಜ್ಞಾಪಸಿಕೊಂಡ. (ವೈದ್ಯನಾದವ ಯಾವುದೇ ಕಾರಣಕ್ಕೂ ತನ್ನ ವೈಯಕ್ತಕ ಭಾವನೆಗಳನ್ನು ರೋಗಿಗಳೆದುರು ಹೊರಗೆಡವಬಾರದು. ಮುಖಭಾವದಲ್ಲೂ ಅದರ ಪ್ರದರ್ಶನ ಸಲ್ಲ).
ನಸುನಗುತ್ತಲೇ ಅಜ್ಜಿಯ ಕೈಗಳನ್ನು ಮತ್ತಷ್ಟು ಭದ್ರವಾಗಿ ಹಿಡಿದುಕೊಂಡು ಹೇಳಿದ,
"ಅಜ್ಜೀ, ನೀವಿಷ್ಟು ಗಾಬರಿ ಆಗೋವಂತಾದ್ದು ಏನೂ ಇಲ್ಲಾ...., ಇಲ್ಲಿ ನಾವೆಲ್ಲಾ ಇದ್ದೇವಲ್ಲ? ಹೆದರಬೇಡಿ. ಇಲ್ಲಿಗೆ ಬಂದ್ಮೇಲೆ ನಿಮ್ಮ ಖಾಯಿಲೆಗಳೆಲ್ಲ ವಾಸಿ ಆಯ್ತು ಅಂತಾನೇ ತಿಳ್ಕೊಳ್ಳಿ. ಅಷ್ಟಕ್ಕೂ ಅಂತಾ ದೊಡ್ಡ ಖಾಯಿಲೆ ಏನೂ ಬಂದಿಲ್ಲ ನಿಮ್ಗೆ, ನಿಮ್ಮ ಗರ್ಭಕೋಶ ಅದರ ಸ್ಥಾನದಿಂದ ಕೆಳಕ್ಕೆ ಜಾರಿ ಸ್ವಲ್ಪ ಹೊರಕ್ಕೆ ಬಂದಿದೆ.. ಅದನ್ನ ಇನ್ನೂ ಇಟ್ಕೊಂಡು ಸುಮ್ಮನೆ ನೋವು ತಿನ್ನೋದ್ರಲ್ಲಿ ಅರ್ಥ ಇಲ್ಲ. ಒಂದು ಚಿಕ್ಕ ಆಪರೇಷನ್ ಮಾಡಿ ಅದನ್ನ ತೆಗ್ದುಬಿಡೋಣ. ಆದರೆ ಅದಕ್ಕೂ ಮೊದಲು ನಿಮ್ಮ ಬಿ.ಪಿ. ಶುಗರ್ ಕಂಟ್ರೋಲಿಗೆ ಬರ್ಬೇಕು. ಈಗ ಅದಕ್ಕೆ ಚಿಕಿತ್ಸೆ ಶುರುಮಾಡೋಣ. ಆಮೇಲೆ ಆಪೆರೇಶನ್ ಬಗ್ಗೆ ಯೋಚಿಸೋಣ. ಸರಿಯಾ...? ಅಂದಹಾಗೆ ನಿಮ್ಮ ಯಜಮಾನ್ರ ಫೋನ್ ನಂಬರ್ ಇದೆಯಾ ನಿಮ್ಮತ್ರ? ನಾನು ಅವರೊಡನೆ ಮಾತ್ನಾಡ್ತೀನಿ, ಅವ್ರನ್ನ ಇಲ್ಲಿಗೆ ಬರ್ಲಿಕೆ ಹೇಳ್ತೇನೆ ಆಯಿತಾ?"
ಕೂಡಲೇ ಸ್ವಲ್ಪ ಗೆಲುವಾದ ಅಜ್ಜಿ ತನ್ನ ಸೀರೆಯ ಸೊಂಟದ ಮಡಿಕೆಯಿಂದ ಚಿಕ್ಕ ಚೀಟಿಯೊಂದನ್ನು ತೆಗೆದು ಶ್ರಾವಣ್ ಕೈಗಿತ್ತಳು.
"ಡಾಕ್ಟ್ರೀ ಸಾಯೇಬ್ರಾ....,ಸಿಟೀಗೆ ಹೊಂಟೋಗ್ತಿಯಾ...ದಿನ ದಿನಕ್ಕೆ ಫೋನು ಹಚ್ಚು ಅಂದಿದ್ದಾ ನನ್ ಮನಿಯಾಂವ....ಮಬೈಲ ಕೊಟ್ಟಿದ್ದಾ....ಮಗ್ನ ಮನೇಗ್ ಬಂದು ನಾಕೈದು ತಿಂಗ್ಳ ವಳಗಿ ಸೊಸಿ ಅದ್ನ ಇಸ್ಕೊಂಡ್ಯಾಳ್ರೀ....ಮುದುಕಿ ಮುಂಡೆ, ನಮ್ ವಿಷ್ಯಾ ಮುದುಕಂಗೆ ತುತ್ತೂರಿ ಮಾಡ್ತ್ಯಾ...ಅಂತ ಹಿಂಸಾ ಕೊಟ್ಟ್ಯಾಳ್ರೀ.....ಇದೊಂದು ಚೀಟಿನ ಹೆಂಗೋ ಜ್ವಾಪಾನ ಮಾಡಿದೀನ್ರೀ...." ಅಜ್ಜಿ ಮತ್ತೆ ಬಿಕ್ಕಳಿಸಿದಳು.
"ಅಜ್ಜೀ...., ಮರೆತುಬಿಡಿ ಅದನ್ನೆಲ್ಲ....,ನಮ್ಮನ್ನೆಲ್ಲ ನಿಮ್ಮ ಮಕ್ಕಳು ಅಂತಾನೇ ತಿಳ್ಕೊಳ್ಳಿ ಆಯಿತಾ? ಏನೇ ಸಮಸ್ಯೆ ಇದ್ರೂ ನಮ್ಮತ್ರ ಹೇಳಿ...ಆಂ?"
ಶ್ರಾವಣ್ ಒಂದೆರಡು ಸಲ ಪ್ರಯತ್ನ ಪಟ್ಟ ಮೇಲೆ ಅಜ್ಜಿಯ ಗಂಡ ಲೈನಿಗೆ ಬಂದ. ಅಜ್ಜನಿಗೆ ಗಾಬರಿಯಾಗದಂತೆ ವಿಷಯ ತಿಳಿಸಿದ. ವಿಳಾಸ ಹೇಳಿದ. ತನ್ನ ಹೆಂಡತಿಯ ಕುರಿತು ವಿಷಯ ತಿಳಿದುದೇ ಮೃಷ್ಟಾನ್ನ ಭೋಜನ ಸವಿದಂತಾಯ್ತು ಎಂಬಂತೆ ಮಾತನಾಡಿದ ಅಜ್ಜ ಮಂಗಳೂರಿನ ಬಗ್ಗೆ ತನಗೆ ಏನೇನೂ ಅರಿಯದು ಎಂದ. ಪಕ್ಕದ ಹಳ್ಳಿಯ ಶಾಲೆಯ ಜವಾನ ಮಂಗಳೂರು ಕಡೆಯವನು ಇದ್ದಾನೆ, ಅವನನ್ನು ಜೊತೆ ಮಾಡಿಕೊಂಡು ಹೇಗಾದರೂ ನಾಳೆಯೇ ಬರುತ್ತೇನೆ ಎನ್ನುತ್ತಾ ಅವನೂ ಅತ್ತುಬಿಟ್ಟ.
"ಅಜ್ಜೀ, ನಿಮ್ಮ ಮನೆಯವ್ರು ನಾಳೆಯೇ ಬರ್ತಾರೆ ಆಯಿತಾ? ಈಗ ಮೊದಲು ನಿಮ್ಮ ರಕ್ತ ಪರೀಕ್ಷೆ ಮಾಡ್ಬೇಕು, ಎಲ್ಲಿ ಕೈ ಸ್ವಲ್ಪ ಮುಂದೆ ಮಾಡಿ ನೋಡುವಾ...ಹಾಗೇ...,ಕಣ್ಣು ಮುಚ್ಚಿ....,ಮುಖ ಕಡೆ ಮಾಡಿ....,ಒಂಚೂರು ರಕ್ತ ತೆಗೀತೇನೆ....ಹಾ...ಮುಗಿದೇ ಹೋಯ್ತು... ಹತ್ತಿಯನ್ನ ಇಲ್ಲಿಟ್ಟು ಸ್ವಲ್ಪ ಒತ್ತಿ ಹಿಡೀರಿ ಆಯಿತಾ? ನಾನಿನ್ನು ಬರ್ಲಾ...? ನಾಳೆಯಿಂದ ನನ್ನ ಡ್ಯೂಟಿ ಬೇರೆ ಕಡೆ ಇದೆ. ಇಲ್ಲಿಗೆ ಬೇರೆ ಡಾಕ್ಟ್ರು ಬರ್ತಾರೆ, ಅವ್ರತ್ರ ನಿಮ್ಮ ಬಗ್ಗೆ ಹೇಳಿರ್ತೇನೆ ಆಯಿತಾ?"
"ಡಾಕಿಟ್ರೇ...,ನಿಮ್ಮ ಉಪ್ಕಾರದ ಋಣಾನ ಹೇಂಗ್ ತೀರಿಸ್ಲೀ ಸಾಯಿಬ್ರಾ....ದೇವ್ರಂಗೆ ಬಂದ್ರೀ ಬುದ್ಧೀ....,ನಿಮ್ ಹೆತ್ತಮ್ಮನ್ ಹೊಟ್ಟೆ ತಣ್ಣಗಿರ್ಲಪ್ಪಾ...."
ಶ್ರಾವಣ್ ಅಜ್ಜಿಯ ಗಂಡನ ನಂಬರನ್ನು ತನ್ನ ಫೋನಿನಲ್ಲಿ ಸೇವ್ ಮಾಡಿಟ್ಟುಕೊಂಡ. ಚೀಟಿಯನ್ನು ಹಿಂತಿರುಗಿಸುತ್ತಾ ಹೇಳಿದ.
"ಅಜ್ಜೀ, ಹೆಚ್ಚು ಮಾತ್ನಾಡಿ ಆಯಾಸ ಮಾಡಿಕೊಳ್ಳಬೇಡಿ. ಸಿಸ್ಟರ್ ಕೈಯ್ಯಲ್ಲಿ ಔಷಧಿ ಕೊಟ್ಟು ಕಳಿಸ್ತೇನೆ. ಅಷ್ಟರೊಳಗೆ ಊಟಕ್ಕೆ ಕರೀತಾರೆ. ನೋಡಿ, ನನ್ಜೊತೆ ಬನ್ನಿ..., ಹಾಲಲ್ಲಿ ಹೋಗಿ ಸಾಲಲ್ಲಿ ನಿಂತ್ಕೊಂಡು ಊಟ ಹಾಕಿಸ್ಕೊಳ್ಳಿ. ಇಲ್ಲಿ ಊಟ, ಕಾಫಿಗೆ ದುಡ್ಡೇನೂ ಕೋಡೋದು ಬೇಡ. ಊಟ ಮುಗಿಸಿ ಔಷಧಿ ಕುಡಿದು ಮಲಗಿ ಆಯಿತಾ...?" ಅಜ್ಜಿಯ ಬೆನ್ನು ತಟ್ಟಿ ಶ್ರಾವಣ್ ಮುಂದಿನ ರೋಗಿಯೆಡೆಗೆ ಗಮನ ಹರಿಸಿದ.
ಮಾರನೆಯ ದಿನದಿಂದ ಅವನು ಹೆರಿಗೆ ವಿಭಾಗಕ್ಕೆ ನಿಯುಕ್ತಿಗೊಂಡ. ಹದಿನೈದು ದಿನಗಳ ಅವಿಶ್ರಾಂತ ದುಡಿಮೆಯ ನಂತರದ ಹದಿನೈದು ದಿನಗಳ ಕಾಲ ಗರ್ಭಿಣಿ ಸ್ತ್ರೀಯರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ. ಅದೂ ಮುಗಿಯಿತು. ಅದು ಸರಕಾರೀ ಆಸ್ಪತ್ರೆಯಾಗಿತ್ತಲ್ಲ? ಮಿತಿಮೀರಿದ ರೋಗಿಗಳ ಒತ್ತಡ. ಡ್ಯೂಟಿಯಲ್ಲಿರುವ ವೈದ್ಯನಿಗೆ ತನ್ನ ವಿಭಾಗದ ಹೊರತಾದ ವಿಭಾಗದ ಬಗ್ಗೆ ಯೋಚಿಸಲೂ ಸಮಯ ಇರುವುದಿಲ್ಲ. ಶ್ರಾವಣ್ ಆಗೊಮ್ಮೆ ಈಗೊಮ್ಮೆ ಅಜ್ಜಿಯನ್ನು ನೆನಪಿಸಿಕೊಂಡರೂ ಕೆಲಸದ ಒತ್ತಡದಿಂದಾಗಿ ಅವಳ ಬಗ್ಗೆ ತಿಳಿಯುವುದಾಗಲೀ ಅವಳನ್ನು ಭೇಟಿ ಮಾಡುವುದಾಗಲೀ ಸಾಧ್ಯವಾಗಿರಲಿಲ್ಲ. ಇನ್ನು ಮುಂದಿನ ಹದಿನೈದು ದಿನಗಳ ಕಾಲ ಪೋಸ್ಟ್ ಆಪರೇಟಿವ್ ವಾರ್ಡಿನಲ್ಲಿ ಶ್ರಾವಣ್ ಕರ್ತವ್ಯ ನಿರ್ವಹಿಸಬೇಕಿತ್ತು. ದಿನ ಬೆಳಗ್ಗಿನ ರೌಂಡ್ಸ್. ಅಂದರೆ ಹಿರಿಯ ಸ್ನಾತಕೋತ್ತರ ವಿದ್ಯಾರ್ಥಿಗಳು, ವಿಭಾಗದ ಮುಖ್ಯಸ್ಥರು(ಪ್ರಾಧ್ಯಾಪಕರು) ವಾರ್ಡಿನಲ್ಲಿರುವ ರೋಗಿಗಳ ಮೇಲುಸ್ತುವಾರಿಗೆ ಬರುತ್ತಾರೆ. ಅಲ್ಲಿ ಕರ್ತವ್ಯದಲ್ಲಿರುವ ಹೌಸರ್ಜನುಗಳೂ ಅವರ ಜೊತೆ ಇರಬೇಕಾದುದು ಕಡ್ಡಾಯ. ಪ್ರಾಧ್ಯಾಪಕರು ರೋಗಿಗಳ ಖಾಯಿಲೆಯ ಚರಿತ್ರೆ, ಔಷಧಿಯ ವಿಧಾನ, ಗುಣಮುಖ ಹೊಂದುವ ರೀತಿ, ಅದಕ್ಕೆ ರೋಗಿಯ ದೇಹದ ಪ್ರತಿಕ್ರಿಯೆ ಏನು...ಇತ್ಯಾದಿಯಾಗಿ ಪ್ರಶ್ನಿಸುವಾಗ ಸ್ನಾತಕೋತ್ತರ ವಿದ್ಯಾರ್ಥಿಗಳು ಸಮರ್ಪಕವಾದ ಉತ್ತರ ಕೊಡಬೇಕು. ರೋಗಿಯ ಸ್ಥಿತಿ ತೃಪ್ತಿಕರವಾಗಿ ಇಲ್ಲದಿದ್ದರೆ ಪ್ರಾಧ್ಯಾಪಕರು ಚಿಕಿತ್ಸಾ ವಿಧಾನದಲ್ಲಿ ಬದಲಾವಣೆ ಸೂಚಿಸುತ್ತಾರೆ. ಅದರಂತೆ ಅವರು ಚಿಕಿತ್ಸೆ ನೀಡಬೇಕು. ಅವರಿಗೆ ಸಾಹಾಯಕರಾಗಿ ಇಂಟರ್ನ್ಶಿಪ್ ವಿದ್ಯಾರ್ಥಿ(ಹೌಸರ್ಜನ್)ಗಳು ರೋಗಿಗಳ ಉಸ್ತುವಾರಿ ಮಾಡಬೇಕು. ಹಾಗೆ ದಿನ ಶ್ರಾವಣ್ ಗುಂಪಿನಲ್ಲಿದ್ದ. ಅದು ಪೊಸ್ಟ್ ಆಪೆರೇಟಿವ್ ವಾರ್ಡ್ ತಾನೇ? ಒಂದು ತಿಂಗಳ ಸತತ ಚಿಕಿತ್ಸೆಯ ನಂತರ ಅಜ್ಜಿಯ ಖಾಯಿಲೆಗಳೆಲ್ಲವೂ ಹಿಡಿತಕ್ಕೆ ಬಂದು ನಿನ್ನೆಯಷ್ಟೇ ಶಸ್ತ್ರಚಿಕತ್ಸೆಯೂ ಯಶಸ್ವಿಯಾಗಿ ನಡೆದು ಆಕೆಯನ್ನು ಪೋಸ್ಟ್ ಆಪರೇಟಿವ್ ವಾರ್ಡಿನ ಬೆಡ್ ನಂ.31 ರಲ್ಲಿ ಮಲಗಿಸಿದ್ದರು. ರೋಗಿಗಳನ್ನು ತಪಾಸಣೆ ಮಾಡುತ್ತಾ ವೈದ್ಯರ ಗುಂಪು ಅಜ್ಜಿಯ ಬೆಡ್ಡಿನ ಪಕ್ಕಕ್ಕೆ ಬಂತು. ಗುಂಪಿನಲ್ಲಿ ಪ್ರೊಫೆಸರರ ಮಾತೇ ಅಂತಿಮ. ಹೌಸರ್ಜನುಗಳದ್ದು ಏನಿದ್ದರೂ ಮೌನ ವೀಕ್ಷಣೆ. ಅವರು ತಮ್ಮ ಲೋ ಪ್ರೊಫೈಲನ್ನು ಕಾಯ್ದುಕೊಳ್ಳಬೇಕಾದುದು ಮುಖ್ಯ. ಅಜ್ಜಿಯ ಬೆಡ್ಡಿನ ಪಕ್ಕದಲ್ಲಿ ಪ್ರೊಫೆಸರರು ನಿಂತು ಕೇಸ್  ಶೀಟನ್ನು ನೋಡಿದರು. ಅವರ ಸುತ್ತಲೂ ಕೋಟೆಯಂತೆ ಸ್ನಾತಕೋತ್ತರ ವಿದ್ಯಾರ್ಥಿಗಳು, ಅವರ ಹಿಂದುಗಡೆ ಅಥವಾ ಬದಿಗಳಲ್ಲಿ ಹೌಸರ್ಜನುಗಳು ನಿಂತರು. ಶಸ್ತ್ರಕ್ರಿಯೆಯ ನೋವು ಅಜ್ಜಿಯ ಮುಖದಲ್ಲಿ ಮಡುಗಟ್ಟಿ ನಿಂತಿದ್ದರೂ ಕಣ್ಣುಗಳಲ್ಲಿ ಗೆಲುವು ಇತ್ತು. ಇಷ್ಟು ದಿನವೂ ಗಂಡ ಪಕ್ಕದಲ್ಲೇ ಇದ್ದನಲ್ಲ?
"ಹೇಗಿದ್ದೀರಿ ಅಜ್ಜೀ?" ಪ್ರೊಫೆಸರರು ಕೇಳಿದರು.
ಅಜ್ಜಿಯ ಚುರುಕು ಕಣ್ಣುಗಳು ಏನನ್ನೋ ಕಂಡುಹಿಡಿದಂತೆ ಫಳಫಳ ಹೊಳೆದುವು. ಪ್ರೊಫೆಸರರ ಪ್ರಶ್ನೆಗೆ ಉತ್ತರಿಸುವ ಬದಲು ಮಲಗಿದಲ್ಲಿಂದಲೇ ತಲೆಯನ್ನು ಮುಂದಕ್ಕೆ ಚಾಚಿ ದೃಷ್ಟಿಯನ್ನು ಚೂಪಾಗಿಸಿ ಗುಂಪಿನ ಸೀಳಿನಿಂದ ಸ್ವಲ್ಪವೇ ಸ್ವಲ್ಪ ಕಾಣುತ್ತಿದ್ದ ಶ್ರಾವಣ್ ಕಡೆಗೆ ನೋಟ ಹರಿಸಿ ಸುತ್ತಮುತ್ತಲಿನ ಪರಿವೆಯೇ ಇಲ್ಲದಂತೆ ಗಟ್ಟಿ ಧ್ವನಿಯಲ್ಲಿ ಹೇಳಿದಳು,
"ಡಾಕ್ಟ್ರೀ ಸಾಯೇಬ್ರಾ...,ಇಷ್ಟ್ದಿನಾ ಎಲ್ಲಿ ಹೊಂಟೋಗಿದ್ರೀ ನೀವು....ಯಾಪ್ಪಾ ಎಷ್ಟು ನೆನಸ್ಕೊಂಡೆ ನಿನ್ನ....ಸಿಸ್ಟರಮ್ಮ ಅಂದ್ಲೂ...,ದೊಡ್ಡ ಡಾಕಿಟ್ರು ಇಲ್ಲಿ ಬರೋವಾಗ ನಮ್ಜತೆಯೋರು ಯಾರೂ ಒಳಗ ನಿಲ್ಲೋ ಹಂಗಿಲ್ಲ ಅಂತ...., ಅದಿಕ್ಕೇ ನನ್ ಮನೀಯಂವಾ ಹೊರಗಿದ್ದಾನೆ ಕಂಡ್ರೀ....ನಂಗೆ ಬಾಳು ಕೊಟ್ಟ ನಿಮ್ಮನ್ನ ಅವಂಗೆ ರವಷ್ಟು ತೋರಿಸ್ಬೇಕಾಗಿತ್ತು....ಏಟು ದಿವ್ಸದಿಂದ ನಿಮ್ಮನ್ನ ಕಾಯ್ತಿದ್ದೆ...ನಿಮ್ಮೆಸ್ರು ಗೊತ್ತಿಲ್ಲಾ....ನಿಮ್ಮನ್ನ ಹ್ಯಾಗೆ ಹುಡುಕ್ಲೀ ಗೊತ್ತಿಲ್ಲಾ....ಎಲ್ರೂ ಬಿಳಿಕೋಟಿನ ದೊಡ್ ಮನುಸ್ರೂ...., ಕೇಳೋಕೂ ಭಯ ನೋಡ್ರೀ....ಎಲ್ಲಿ ನಿಮ್ಮನ್ ನೋಡದೆ ಹೋಗಿ ಬಿಡ್ತೀನೋ ಅಂತ ಶ್ಯಾನೆ ಯೋಚನೆಯಾಗ್ಬಿಡ್ತು ಡಾಕಿಟ್ರೇ....,ಒಂದೇ ಒಂದು ಸಲಿ ನನ್ ಮನೀಯಂವ್ನಾ ಒಳಗಾ ಕರೀಲಾ ಡಾಕಿಟ್ರೇ...?"
ಅಜ್ಜಿಯ ಮಾತುಗಳಿಗೆ ಯಾರೂ ಉತ್ತರಿಸುವ ಗೋಜಿಗೆ ಹೋಗಲಿಲ್ಲ. ಉತ್ತರಿಸಬೇಕಾಗಿದ್ದ ಶ್ರಾವಣ್ ಇರುಸುಮುರುಸಿಗೊಳಗಾಗಿ ಮೌನಕ್ಕೆ ಶರಣು ಹೊಡೆದಿದ್ದ.
ತನ್ನ ಜೊತೆಯಲ್ಲಿ ಹಿರಿಯ ವಿದ್ಯಾರ್ಥಿಗಳಿದ್ದಾರೆ. ಅದಕ್ಕಿಂತಲೂ ಮಿಗಿಲಾಗಿ ಪ್ರೊಫೆಸರರು ಸ್ವತಃ ರೋಗಿಯನ್ನು ವಿಚಾರಿಸುತ್ತಿದ್ದಾರೆ. ಅವರ ಮಾತುಗಳೆಡೆಗೆ ಗಮನವೀಯದೆ ಅಜ್ಜಿ ತನ್ನನ್ನು ಹೊಗಳಿ ಅಟ್ಟಕ್ಕೇರಿಸುತ್ತಿದ್ದಾಳಲ್ಲ? ಇವರೆಲ್ಲರೆದುರು ತಾನೆಷ್ಟರವನು? ಆದರೆ ತಾನೇನೋ ಮಹತ್ಕಾರ್ಯ ಮಾಡಿದಂತೆ ಒಂದೇ ಸಮನೆ ಬಡಬಡಿಸುತ್ತಿದ್ದಾಳಲ್ಲ ಈಕೆ...?" ಇಂತಹ ಯೋಚನೆಗಳ ಸುಳಿಯಲ್ಲೇ ಆತ ಕಳೆದುಹೋಗಿದ್ದ. ಆದರೆ ಅಜ್ಜಿ ಸುಲಭದಲ್ಲಿ ಬಿಟ್ಟುಕೊಡುವ ಬಾಬ್ತು ಅಲ್ಲ. ಎಷ್ಟೋ ದಿನಗಳಿಂದ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಶ್ರಾವಣ್ ಆಗಮನವನ್ನು ಎದುರು ನೋಡುತ್ತಿದ್ದಳು. ಆತ ಕರೆ ಮಾಡಿದ ಮಾರನೆಯ ದಿನವೇ ಅಜ್ಜ ಬಂದಿದ್ದ. ಅಜ್ಜಿಯಲ್ಲಿ ನೂರಾನೆ ಬಲವನ್ನು ತುಂಬಿದ್ದ. ಆತನ ಅಕ್ಕರೆಯ ಆರೈಕೆಯಿಂದಾಗಿ ಅಜ್ಜಿ ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸಿದ್ದಳು. ರಕ್ತದೊತ್ತಡ, ಸಕ್ಕರೆ ಖಾಯಿಲೆಗಳಿಂದ ಆಕೆ ಚೆನ್ನಾಗಿ ಚೇತರಿಸಿಕೊಂಡಾಗ ಅಜ್ಜ ಒಮ್ಮೆ ಊರಿಗೂ ಹೋಗಿ ಬಂದಿದ್ದ. ಅನಂತರವೇ ಅಜ್ಜಿಯ ಗರ್ಭಕೋಶದ ಆಪರೇಷನ್ ನಡೆದದ್ದು. ಇದೆಲ್ಲವನ್ನೂ ಅಜ್ಜಿ ಶ್ರಾವಣ್ ಬಳಿ ಹೇಳಿಕೊಳ್ಳಲೇಬೇಕಾಗಿತ್ತಲ್ಲ? ಆವತ್ತು ಅಷ್ಟು ಕುಕ್ಕುಲಾತಿಯಿಂದ ತನ್ನನ್ನು ವಿಚಾರಿಸಿಕೊಂಡವ ಇವತ್ತು ಮಾತೇ ಆಡುವುದಿಲ್ಲ ಎಂದರೇನರ್ಥ? ಅಜ್ಜಿ ಮಲಗಿದಲ್ಲಿಂದಲೇ ತಡಕಾಡಿ ತನ್ನ ತಲೆಯ ಬಳಿ ಇಟ್ಟುಕೊಂಡಿದ್ದ ಬಟ್ಟೆಯ ಗಂಟಿನಿಂದ ಹೊಟ್ಟೆ ಉಬ್ಬಿದಂತಿದ್ದ ಚೀಲವೊಂದನ್ನು ಹೊರಕ್ಕೆ ತೆಗೆದಳು.
"ಡಾಕ್ಟ್ರೀ ಸಾಯೆಬ್ರಾ...., ನಾವು ಬಡವ್ರು...ನಿಮ್ಗ ಕೊಡೋದ್ಕೆ ನಮ್ಮ ಬಳಿ ಏನೂ ಇಲ್ರಾ....ಆದ್ರೂವೇ ನಿಮ್ಮಂತ ದ್ಯಾವ್ರಿಗೆ ತಾರಮ್ಮಯ್ಯ ಆಡ್ಸಿ ಹ್ಯಾಂಗ್ರೀ ಹೋಗ್ಲೀ...ಇದ್ನ ಬ್ಯಾಡ ಅನ್ಬೇಡ್ರೀ ಯಾಪ್ಪಾ...ನಮ್ಮ ಹೊಲದಲ್ಲಿ ಬೆಳ್ದಿದ್ದು...ರಾಗಿ...ತಗೊಳಲ್ವೇನ್ರೀ ಸಾಯಿಬ್ರಾ....?" ಅಜ್ಜಿ ದೀನಳಾಗಿ ಕೇಳಿದಾಗ ಶ್ರಾವಣ್ ವಿಧಿಯಿಲ್ಲದೆ ಮುಂದಕ್ಕೆ ಬರಲೇಬೇಕಾಯ್ತು. ರೌಂಡ್ಸ್ ಮುಗಿದ ಮೇಲೆ ಸಾವಕಾಶದಲ್ಲಿ ಅಜ್ಜಿಯ ಬಳಿಗೆ ಬಂದು ಸುಖ ದುಃಖ ವಿಚಾರಿಸಿಕೊಳ್ಳೋಣ ಎಂದುಕೊಂಡಿದ್ದ. ಆದರೆ ಒಂದು ಸಂದರ್ಭ ತೀರಾ ಅನಿರೀಕ್ಷಿತವಾಗಿತ್ತು. ಶ್ರಾವಣ್ ಅತ್ತ ಧರಿ ಇತ್ತ ಪುಲಿ ಎನ್ನುವಂತಹ ಸಂದಿಗ್ಧತೆಯಲ್ಲಿರುವುದನ್ನು ಅರ್ಥಮಾಡಿಕೊಂಡಂತೆ ಪ್ರೊಫೆಸರರು ಆತನೆಡೆಗೆ  ನೋಡಿ ನಸುನಕ್ಕು ಹೆಬ್ಬೆಟ್ಟು ಮೇಲೆ ಮಾಡಿ `ಕ್ಯಾರಿ ಆನ್...' ಎಂದು ಮುಂದಿನ ರೋಗಿಯ ಕಡೆಗೆ ಗಮನವಿತ್ತರು.   
 
            
 

              

1 ಕಾಮೆಂಟ್‌: