ಶನಿವಾರ, ಏಪ್ರಿಲ್ 28, 2018

ಜೀವನ ಪ್ರೀತಿ ಮತ್ತು ವಿಮುಖತೆಯ ದ್ವಂದ್ವ




ದೃಶ್ಯ- 1

ಅದು ಎಮ್ ಫಿಲ್. (MPhil) ವಿದ್ಯಾರ್ಥಿಗಳ  ಸೆಮಿನಾರ್ ಕಾರ್ಯಕ್ರಮ. ವಿಷಯ, `ಮಹಿಳಾ ಕಾದಂಬರಿಗಳಲ್ಲಿ ಜೀವನ ಪ್ರೀತಿ ಮತ್ತು ವಿಮುಖತೆಯ ದ್ವಂದ್ವ'. ಹಾಜರಾಗಿದ್ದ ವಿದ್ಯಾರ್ಥಿಗಳ  ಸಂಖ್ಯೆ ಹದಿನೈದರಿಂದ ಇಪ್ಪತ್ತು. ವಿದ್ಯಾರ್ಥಿನಿಯರೆಲ್ಲ ಶ್ರೀಮತಿಯವರೇ. ಒಬ್ಬಳಂತೂ ಆರು ತಿಂಗಳಿನ ತನ್ನ ಪುಟ್ಟ ಮಗುವನ್ನೂ ಕರೆದುಕೊಂಡೇ ಬಂದಿದ್ದಳು. ಸಂಭಾಳಿಸಲೆಂದು ಜೊತೆಯಲ್ಲಿ ಮಗುವಿನ ಅಜ್ಜಿಯೂ ಇದ್ದರು!
ವಿಷಯ ಪ್ರಸ್ತುತ ಪಡಿಸಿದ ವಿದ್ಯಾರ್ಥಿನಿ ಸೊಗಸಾದ ಸ್ಪಷ್ಟ ಕನ್ನಡದಲ್ಲಿ ತಾನು ಬರೆದು ಸಿದ್ಧಪಡಿಸಿ ತಂದುದನ್ನು ಓದಿದಳು. ನಂತರದ ಹಂತ ಅದರ ಮೇಲಿನ ಚರ್ಚೆ. ಎದುರು ಕುಳಿತಿದ್ದ ವಿದ್ಯಾರ್ಥಿಗಳು ಟಿಪ್ಪಣಿ ಮಾಡಿಕೊಂಡಿದ್ದರು. ಓರ್ವ ವಿದ್ಯಾರ್ಥಿನಿ ಎದ್ದು ನಿಂತು ಈಗಾಗಲೇ ಪ್ರಸ್ತುತ ಪಡಿಸಿದ ಲೇಖನವನ್ನು ಹೇಗೆ ಇನ್ನಷ್ಟು ಪರಿಣಾಮಕಾರಿಯಾಗಿ ಬರೆಯಬಹುದು ಎಂಬುದರ ಬಗ್ಗೆ ಸಲಹೆಗಳನ್ನು ಕೊಡುತ್ತಾ ಕಾದಂಬರಿಗಳಲ್ಲಿ ಜೀವನ ಪ್ರೀತಿಯು ವ್ಯಕ್ತವಾದ ಸನ್ನಿವೇಶ, ಸಂದರ್ಭಗಳನ್ನು ಎತ್ತಿ ತೋರಿಸಿರುತ್ತಿದ್ದರೆ ಲೇಖನ ಹೆಚ್ಚು ಪ್ರಖರವಾಗಿ ಮೂಡಿಬರುತ್ತಿತ್ತು ಎಂದು ಆಧಾರ ಸಹಿತ ವಿವರಿಸಿದಳು. ಮತ್ತೊಬ್ಬಳು ತನ್ನ ಅಭಿಪ್ರಾಯವನ್ನು ಮಂಡಿಸುತ್ತಾ,
ಆಯ್ದುಕೊಂಡ ವಿಷಯದ ಪ್ರಸ್ತುತಿಯಲ್ಲಿ ಜೀವನ ಪ್ರೀತಿಗಿಂತಲೂ ವಿಮುಖತೆಯ ಕಡೆಗೆ ಹೆಚ್ಚು ಒತ್ತು ಕೊಟ್ಟಂತೆ ಅನಿಸಿತು ಎಂದು ಉದಾಹರಣೆಗಳ ಸಹಿತ ಸುಲಲಿತ ಕನ್ನಡದಲ್ಲಿ ಹೇಳಿದಳು. ಹೀಗೆ ಮತ್ತೂ ಒಂದಿಬ್ಬರು ವಿದ್ಯಾರ್ಥಿಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ ನಂತರ ಪ್ರಾಧ್ಯಾಪಕರು ತಮ್ಮ ಅಭಿಪ್ರಾಯ, ಸಲಹೆ,ಸೂಚನೆಗಳನ್ನು ಹೇಳತೊಡಗಿದರು. ಅವುಗಳ ಸಾರಾಂಶ ಹೀಗಿತ್ತು,
`....ಸಂಶೋಧನಾತ್ಮಕ ಮಹಾಪ್ರಬಂಧಗಳನ್ನು ಅಣಿಗೊಳಿಸುವ ವಿದ್ಯಾರ್ಥಿಗಳು ಮಾಡುವ ಸಾಮಾನ್ಯ ಎಡವಟ್ಟುಗೆಳೆಂದರೆ ಹಲವಾರು ಆಕರ ಗ್ರಂಥಗಳನ್ನು ಅಭ್ಯಸಿಸಿ ಅವುಗಳಿಂದ ಆಯ್ದು ತೆಗೆದ ಒಟ್ಟು ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಬರೆದುಬಿಟ್ಟು ತಮ್ಮ ಕೆಲಸ ಮುಗಿಯಿತು ಎಂದು ತಿಳಿದುಕೊಳ್ಳುವುದು.  ಪಿ. ಹೆಚ್. ಡಿ. (PhD) ಎನ್ನುವುದು ನೌಕರಿಯ ಉನ್ನತಿಗಿರುವ ಒಂದು ಮೆಟ್ಟಿಲು ಅಂತ ಲೆಕ್ಕ ಹಾಕಿ ಕೆಲಸ ಮಾಡಬೇಡಿ, ಯಾವುದೇ ವಿಷಯದ ಬಗ್ಗೆ ಸಂಶೋಧನೆ ನಡೆಸುವಾಗ ಸಮಾಜದ ಒಪ್ಪಿತ ರೀತಿ ನೀತಿಗಳಾದ `ಹೆಣ್ಣೆಂದರೆ ಹೀಗೆಯೇ ಇರಬೇಕು....ಗಂಡೆಂದರೆ ರೀತಿಯೇ ಕೆಲಸ ಮಾಡಬೇಕು...' ಎಂಬಿತ್ಯಾದಿ ಪೂರ್ವಾಗ್ರಹಗಳಿಂದ ಹೊರ ಬಂದು ಸಮದರ್ಶ ಭಾವದಿಂದ ವಸ್ತು, ವಿಷಯಗಳನ್ನು ಅಧ್ಯಯನ ಮಾಡಿ...., ಆಕರ ಗ್ರಂಥಗಳನ್ನು ನಿಮ್ಮ ಅಧ್ಯಯನಕ್ಕೆ ಪೂರಕವಾಗಿ ಬಳಸಿಕೊಳ್ಳಿ, ಅದರ ಪಡಿಯಚ್ಚೇ ನಿಮ್ಮ ಬರೆಹ ಆಗಬಾರದು....ನಿಮ್ಮ ಕೆಲಸದಲ್ಲಿ ಹೊಸತನವಿರಲಿ....'ಇತ್ಯಾದಿಯಾಗಿ ಹೇಳಿದರು. 
  ಕಾಸರಗೋಡಿನಲ್ಲಿರುವ ಕಣ್ಣೂರು ವಿವಿಯ ಭಾರತೀಯ ಭಾಷಾ ಅಧ್ಯಯನಾಂಗ ಕನ್ನಡ ವಿಭಾಗದ ಸಭಾಂಗಣದಲ್ಲಿ ನಡೆದ ಅರಿವಿನ ಅಂಗಳ ಎನ್ನುವ ಸರಣಿ ಕಾರ್ಯಕ್ರಮವಾಗಿತ್ತದು. ಎಮ್ ಫಿಲ್(MPhil) ವಿದ್ಯಾರ್ಥಿಗಳ ಜ್ಞಾನ ವಿಕಾಸಕ್ಕೆ ಸಹಕಾರಿಯಾಗುವಂತೆ ಅದನ್ನು ಏರ್ಪಡಿಸಲಾಗುತ್ತದೆ.  ಈ ತಿಂಗಳಿ(ಏಪ್ರಿಲ್)ನ ಕಾರ್ಯಕ್ರಮಕ್ಕೆ   ನಾನು ಆಹ್ವಾನಿತಳಾಗಿ ಅಲ್ಲಿಗೆ ಹೋಗಿದ್ದೆಅಲ್ಲಿದ್ದುದು ಗುರು ಶಿಷ್ಯರ ಸಂಬಂಧವಾಗಿರಲಿಲ್ಲ, ಹಿರಿಯ ಅಣ್ಣಂದಿರು ತಮ್ಮ ಬಳಗಕ್ಕೆ ನೀಡುವ ಸಲಹೆ ಸೂಚನೆಗಳೋ ಎಂಬಂತಿದ್ದುವು. ಜೀವನ ಪ್ರೀತಿಯ ತಾಜಾ ಉದಾಹರಣೆಯನ್ನು ನೋಡಿದೆ, ಅನುಭವಿಸಿದೆ, ನನ್ನೊಳಕ್ಕೂ ಹೊಸ ಉತ್ಸಾಹವನ್ನು ತುಂಬಿಕೊಂಡು ಮನೆಗೆ ಮರಳಿದೆ. ನನ್ನನ್ನು ಬಹಳವಾಗಿ ಕಾಡಿದ್ದು ಪುಟ್ಟ ಮಗುವಿನ ಮುಖದಲ್ಲಿದ್ದ `ಅಮ್ಮಾ..., ಹಾಲು ಕೊಡ್ತಿಯಾ...?' ಎನ್ನುಂತಹ ಭಾವನೆಗಿಂತಲೂ  ಅದರ ಅಮ್ಮನ ಮುಖದಲ್ಲಿ ಎದ್ದು ಕಾಣುತ್ತಿದ್ದ `ಇನ್ನಷ್ಟು ಹೇಳಿ ಸರ್...' ಎನ್ನವ ಭಾವನೆ!
ದೃಶ್ಯ-2

 ಅದು ಕರ್ನಾಟಕದ ಎಜುಕೇಷನ್ ಹಬ್ ಎಂದು ಕರೆಸಿಕೊಳ್ಳುವ ಊರಿನಲ್ಲಿರುವ ಒಂದು ವಿಶ್ವವಿದ್ಯಾನಿಲಯ. ಅಲ್ಲೊಂದು ತರಗತಿಯಲ್ಲಿ ಕನ್ನಡ ಸಾಹಿತ್ಯ ಪದವಿಯ ವಿದ್ಯಾರ್ಥಿಗಳು ಸೇರಿದ್ದಾರೆ. ಆ ದಿನದ ಪಠ್ಯ, ಪು.ತಿ..ಅವರ ಕವನ `ವಿಶ್ವಕುಟುಂಬಿಯ ಕಷ್ಟ'. ಮೇಡಂ ಪೀಠಿಕಾ ವಿವರಣೆ ಕೊಡುತ್ತಿದ್ದರುವಿದ್ಯಾರ್ಥಿಯೊಬ್ಬನಲ್ಲಿ ಕವನವನ್ನು ಓದಲು ಹೇಳಿದರು. ಕವಿತಾ ವಾಚನದ ಒಂದು ಉದಾಹರಣೆಯನ್ನಷ್ಟೇ ಇಲ್ಲಿ ಕೊಡಬಲ್ಲೆ.
`.....ಬಿಸಿಯುಂದ ಬವನೆಗೆ ನೆಲದೊಲು ಹೊರಲಿ ನಿ
ತ್ತು ಸಿರೆಳೆಯವಲೆನ್ನ.....' ಇತ್ಯಾದಿ 
(ಇದರ ಮೂಲ ರೂಪ- `......ಬಿಸಿಯುಂಡ ಬವಣೆಗೆ ನೆಲದೊಳು ಹೊರಳಿ ನಿ-
                              ಟ್ಟುಸಿರೆಳೆಯುವಳೆನ್ನ....')
ಮೇಡಂ ಉವಾಚ: "ವೆರಿ ಗುಡ್. ಕೂತ್ಕೊಳ್ಳಿ".
ಇನ್ನೊಬ್ಬ ವಿದ್ಯಾರ್ಥಿನಿ: "ಮೇಡಂ, ಪದ್ಯ ತುಂಬ ಕಷ್ಟ ಇದೆ, ನಾನು ಪರೀಕ್ಷೆಯಲ್ಲಿ ಪಾಸ್ ಆಗ್ತೇನಾ?"
ಮೇಡಂ:" ...ಖಂಡಿತಾ...., ಪದ್ಯ(ಕವನ)ದಿಂದ 2 ಅಥವಾ 4 ಮಾರ್ಕಿನ ಪ್ರಶ್ನೆಗಳು ಬರಬಹುದು. ಅದಕ್ಕೆ ತಕ್ಕಂತೆ ನಾನು ನಿಮ್ಮನ್ನು ತಯಾರು ಮಾಡಿ ಬಿಡ್ತೇನೆ ಆಯಿತಾ?"
ವಿದ್ಯಾರ್ಥಿನಿ: "thank you very much madam"
ಮೇಡಂ: "ನೋಡಿ...,ಎಲ್ಲರೂ ಗಮನವಿಟ್ಟು ಕೇಳಿ, ಇನ್ನು ಪರೀಕ್ಷೆಗಿರುವುದು ಕೇವಲ ಎರಡು ತಿಂಗಳುಗಳು ಮಾತ್ರ....,ನೀವು ಯಾವುದೇ ಪಾಠವನ್ನು ಹೆಚ್ಚು ಡೀಪ್ ಆಗಿ ನೋಡ್ಲಿಕೆ ಹೋಗ್ಬೇಡಿ, ಪಠ್ಯದ ಸಾರಾಂಶವನ್ನು ನೆನಪಿಟ್ಟುಕೊಳ್ಳಿ. ಪ್ರಶ್ನೆಗಳಿಗೆ ಉತ್ತರಿಸುವಾಗ ನಿಮಗೆ ಗೊತ್ತಿರುವ ಒಂದೆರಡು ವಾಕ್ಯಗಳನ್ನು ಬರೆದರೂ ಸಾಕು. ಕನ್ನಡ  ಭಾಷಾ ಪೇಪರಿನಲ್ಲಿ ಪಾಸ್ ಮಾರ್ಕು ಸಿಕ್ಕಿಬಿಡುತ್ತದೆ...,ಡಿಗ್ರಿಯೊಂದು ಸಿಕ್ಕಲು ಬೇರೇನು ಬೇಕು ಹೇಳಿ...?"
ವಿದ್ಯಾರ್ಥಿಗಳೆಲ್ಲ ಬಹಳ ಖುಷಿಯಾದರು.  
ನಾನೂ ದಿನ ತರಗತಿಯಲ್ಲಿ ಇರಲೇಬೆಕಿತ್ತಾದುದರಿಂದ ಇದ್ದೆ. ಕವಿತಾ ವಾಚನವನ್ನು ಕೇಳಿ ಜೀವನದಲ್ಲಿ ಮೊದಲ ಬಾರಿಗೆ ಪು.ತಿ.. ಅವರು ನಮ್ಮ ನಡುವೆ ಇಲ್ಲದಿದ್ದುದಕ್ಕೆ ಸಂತಸಪಟ್ಟೆ.
ಮೂರು ಘಂಟೆಗಳ ಕಾಲ ಇಂತಹುದೇ ಹಲವು ಪ್ರಹಸನಕ್ಕೆ ಸಾಕ್ಷಿಯಾಗಿ ನರಸತ್ತವಳಂತೆ ಕುಳಿತಿದ್ದೆ!

ಒಂದೆರಡು ದಿನಗಳ ಅಂತರದಲ್ಲಿ ಕೇರಳ ಮತ್ತು ಕರ್ನಾಟಕದ ಮಹಾವಿದ್ಯಾಲಯಗಳ ಎರಡೂ ತರಗತಿಗಳಲ್ಲಿ ಕುಳಿತು ಬಂದಿದ್ದೆನಲ್ಲ? ಜೀವನ ಪ್ರೀತಿಯನ್ನು ಕಾಸರಗೋಡಿನ ಕಾಲೇಜಿನಲ್ಲಿ ಅನುಭವಿಸಿಯಾಗಿತ್ತಲ್ಲ? ಇನ್ನು ವಿಮುಖತೆಯ ದ್ವಂದ್ವ? ಅದನ್ನು ಅನುಭವಿಸಿದ್ದು ಮಹಿಳಾ ಬರಹಗಾರ್ತಿಯರೂ ಅಲ್ಲ, ಎಮ್ಫಿಲ್. ವಿದ್ಯಾರ್ಥಿಗಳೂ ಅಲ್ಲ, ಕರುನಾಡಿನ ವಿಶ್ವವಿದ್ಯಾಲಯದ ತರಗತಿಯಲ್ಲಿ ಕುಳಿತು ಹೊರ ಬಂದ ನಾನು!

`ಹೇಗಿದ್ದರೂ ನಾವು ಕನ್ನಡಮ್ಮನ ಮಡಿಲ ಮಕ್ಕಳು, ಏನು ಮಾಡಿದರೂ ನಡೆದುಹೋಗುತ್ತೆ...' ಎನ್ನುವ ಅತಿ ಆತ್ಮವಿಶ್ವಾಸವೇ ಕರ್ನಾಟಕದ  ಶಿಕ್ಷಕಿ ಮತ್ತು ವಿದ್ಯಾರ್ಥಿಗಳನ್ನು ತಮ್ಮ ಮಾತೃ ಭಾಷೆ, ನಾಡ ಭಾಷೆಯಿಂದ ವಿಮುಖರಾಗುವಂತೆ ಮಾಡಿದ್ದಿರಬಹುದೇ? ಯಾರು ಉತ್ತರ ಹೇಳಬೇಕು? ಯಥಾ ರಾಜ ತಥಾ ಪ್ರಜಾ. ಅಷ್ಟೇ ಹೇಳಬಹುದಷ್ಟೇ.   
ಮಲೆಯಾಳೀಕರಣದ ದೃತರಾಷ್ಟ್ರಾಲಿಂಗನದಲ್ಲಿ ಏದುಬ್ಬಸ ಬಿಡುತ್ತಿರುವ ನಮ್ಮ ಕಾಸರಗೋಡಿನ ಕನ್ನಡ ವಿದ್ಯಾರ್ಥಿಗಳು ತಮ್ಮ ಅಸ್ತಿತ್ವವನ್ನು ಶ್ರುತಪಡಿಸಲಿಕ್ಕಾಗಿಯೇ ಇರಬಹುದೇ ಕನ್ನಡತನವನ್ನು, ಕನ್ನಡ ಭಾಷೆಯನ್ನು ದಿನ ನಿತ್ಯ ಮಸೆದು ಮಸೆದು ಹೊಳಪುಗೊಳಿಸುತ್ತಿರುವುದು....? ಇದೂ ಅಷ್ಟೇ, ಯಥಾ ರಾಜ ತಥಾ ಪ್ರಜಾ. 
 ಹಾಗಾದರೆ ಕನ್ನಡಮ್ಮನ ನಿಜವಾದ ಮಕ್ಕಳಾರು...? `...ಕರ್ನಾಟಕದಿಂದ ಹೊರಕ್ಕೆ ತಳ್ಳಲ್ಪಟ್ಟವರು ನಾವು...' ಎಂದು ನಾವು ಕಾಸರಗೋಡಿನ ಕನ್ನಡಿಗರು ಕಣ್ಣೀರಿಡುತ್ತೇವೆಯಲ್ಲ? ಯಾತಕ್ಕಾಗಿ...? ಅದು ಸರಿಯೇ...ಅಥವಾ ತಪ್ಪೇ...?ಈಗಲೂ  ನನ್ನನ್ನು ಕಾಡಿದ್ದು ಬರೀ ದ್ವಂದ್ವವೇ. ನಮ್ಮೆಲ್ಲರ ಕಣ್ಣೀರಂತೂ ಅರಬೀ ಸಮುದ್ರದ ನೀರನ್ನು ಇನ್ನಷ್ಟು ಉಪ್ಪಾಗಿಸುತ್ತಲೇ ಇದೆ.   

              

3 ಕಾಮೆಂಟ್‌ಗಳು: