"ಹಾ...,ಶೀಲಕ್ಕಾ ನೀವೂ ಬಂದಿದೀರಾ...?
ಆಗ್ಲೇ ಬಂದ್ರಾ...?"
"ಹೋ....ಶೀಲಾ...,ಟಿಕೆಟ್ ಆಯಿತಾ...?
ನಾವಂತೂ ರಗಳೆ ಬೇಡಾ ಅಂತ
ಆನ್ಲೈನಲ್ಲಿ ಟಿಕೆಟ್ ಬುಕ್ ಮಾಡಿಯೇ
ಬಂದಿದ್ದು...."
"ಯೋ....ಶೀಲಕ್ಕಾ...,ನಿಮ್ಮನ್ನು ನೋಡದೆ ಎಷ್ಟು ದಿನ
ಆಯ್ತು....! ಈ ಸಿನೆಮಾಕ್ಕೆ ನೀವು
ಬಂದೇ ಬರ್ತೀರಿ ಅಂತ ಖಂಡಿತ
ಗೊತ್ತಿತ್ತು ..."
"ನಮಸ್ಕಾರ.
ಎಷ್ಟೊತ್ತಿಗೆ ಬಂದ್ರಿ? ರಶ್ಶ್ ಉಂಟಲ್ಲ?
ನೀವು ಸಾಲಲ್ಲಿ ನಿಲ್ಲೋದ್ಯಾಕೆ? ನಮ್ಮ
ಹುಡುಗ ಹೇಗೂ ನಿಂತಿದ್ದಾನೆ.ಅವನ
ಕೈಯಲ್ಲೇ ಟಿಕೆಟ್ ದುಡ್ಡು ಕೊಟ್ಟುಬಿಡಿ...."
"ಓಹೋ....ಶೀಲಾ, ತುಂಬ ಸಮಯದ
ನಂತರ ಭೇಟಿ ಅಲ್ವಾ? ಮಕ್ಕಳೆಲ್ಲ
ಹೇಗಿದ್ದಾರೆ? ಈ ಸಿನೆಮಾ ಬಾರೀ
ಗೌಜಿ ಮಾಡ್ತಾ ಉಂಟಲ್ವ, ಹಾಗೇ
ಒಮ್ಮೆ ನೋಡಿಬಿಡುವಾ ಅಂತ..."
ಹೀಗೆ ಎತ್ತ ತಿರುಗಿದರೂ ಅಪ್ಪಟ
ಕಾಸರಗೋಡು ಕನ್ನಡದ ಜೇನು ಹನಿ
ಹನಿಯಾಗಿ ಕಿವಿಯ ಮೂಲಕ ಹಾದು
ಹೃದಯದಲ್ಲಿ ಮಡುಗಟ್ಟಿ ನಿಂತದ್ದು ನಮ್ಮ ಕಾಸರಗೋಡಿನ ಮೂವಿಮ್ಯಾಕ್ಸ್
ಥಿಯೆಟರಿನ ಟಿಕೆಟ್ ಕೌಂಟರ್ ಎದುರು
ನಾನು ನಿಂತಿದ್ದಾಗ. ಸರಕಾರಿ ಹಿರಿಯ ಪ್ರಾಥಮಿಕ
ಶಾಲೆ ಕಾಸರಗೋಡು ಸಿನೆಮಾ ರಿಲೀಸ್ ಆಗಿತ್ತಲ್ಲ?
ಫಸ್ಟ್ ಡೇ ಫಸ್ಟ್ ಶೋ
ನೋಡಬೇಕೆನ್ನುವ ಆಸೆ ಈಡೇರಿರಲಿಲ್ಲ. ಸೆಕೆಂಡ್
ಡೇ ಹೋಗಬೇಕಾಯ್ತಲ್ಲ ಎಂಬ ಬೇಸರ ಈ
ಎಲ್ಲ ಆತ್ಮೀಯ ಮಾತುಗಳ ಪ್ರವಾಹದಲ್ಲಿ
ಕೊಚ್ಚಿಯೇ ಹೋಯ್ತು. ಸಿನೆಮಾದ ಬಗ್ಗೆ
ನಾನು ಪ್ರತ್ಯೇಕವಾಗಿ ಹೇಳುವಂತಾದ್ದು ಏನೂ ಇಲ್ಲ. ಸಂವಹನ
ಮಾಧ್ಯಮಗಳು, ಸೆಲೆಬ್ರಿಟಿಗಳು, ವಿ.ಐ.ಪಿ.ಗಳು, ಜನಸಾಮಾನ್ಯರು ಹೀಗೆ
ಪ್ರತಿಯೊಬ್ಬರೂ ನೋಡಿ ಕೇಳಿ ಅನುಭವಿಸಿ
ಮೆಚ್ಚುಗೆಯ ಸಾಗರವನ್ನೇ ಹರಿಯಬಿಟ್ಟಿದ್ದಾರೆ. ಆ ಸಾಗರದ ಅಲೆಗಳು
ಫಳ ಫಳ ಹೊಳೆಯುತ್ತಲೂ ಇದೆ.
ನಾನೂ ಪುನಃ ಅದನ್ನೇ ಕೊರೆಯುತ್ತಿಲ್ಲ.
ನಾನಿಲ್ಲಿ ಹೇಳ ಹೊರಟಿರುವುದು ಕನ್ನಡ
ಮನಸುಗಳ ಮಿಲನದ ಸಂದರ್ಭ, ಸನ್ನಿವೇಶ.
ಥೀಯೆಟರ್ ಒಳ ಹೋಗುತ್ತಿದ್ದಂತೆ ಗರಬಡಿದು
ಹೋದೆ. ಬೆರಳೆಣಿಕೆಯಷ್ಟೇ ಖಾಲಿ ಕುರ್ಚಿಗಳು ಮಾತ್ರ ಉಳಿದಿದ್ದುವು!
ಅದೂ ಕಾಸರಗೋಡಿನ ಥಿಯೇಟರಲ್ಲಿ ...., ಕನ್ನಡ ಸಿನೆಮಾಕ್ಕೆ! (ನನಗೆ
ನೆನಪಿರುವ ಹಾಗೆ ಡಾ.ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ, ಭಕ್ತಕುಂಬಾರ
ಸಿನೆಮಾಗಳಿಗೆ ಕಾಸರಗೋಡಿನಲ್ಲಿ ಇದೇ ರೀತಿಯ ಪ್ರತಿಕ್ರಿಯೆ
ಇತ್ತು). ಅಕ್ಕ ಪಕ್ಕ ಸುತ್ತ
ಮುತ್ತ ಎಲ್ಲೆಲ್ಲೂ ಕನ್ನಡ ಕಲರವ. ಸ್ವಲ್ಪ
ಹೊತ್ತಿನಲ್ಲಿ ಪರೆದೆಯಲ್ಲೂ ಅದೇ ಕಾಸರಗೋಡು ಕನ್ನಡದ
ಚಿಲಿಪಿಲಿ! ಅದು ಸಿನೆಮಾ ಆಗಿರಲಿಲ್ಲ,
ನನ್ನ ಬಾಲ್ಯವೇ ಆಗಿತ್ತು. ಬಳಿಯಲ್ಲಿ
ಕುಳಿತ ಮಹಿಳೆ ನನ್ನನ್ನು ಮುಟ್ಟಿ
ಮಾತನಾಡಿಸಿದಾಗಷ್ಟೇ ಇಹಲೋಕಕ್ಕೆ ಮರಳಿದೆ.
"ನೀವು
ಕಡ್ಲೆ ತಿನ್ತೀರಾ?"ಪಕ್ಕದಲ್ಲಿ ಕುಳಿತಿದ್ದ ಮಹಿಳೆ ಕೇಳುತ್ತಿದ್ದರು. ಕತ್ತಲಲ್ಲಿ ಆಕೆಯ ಮುಖ ಸ್ಪಷ್ಟವಾಗಿ
ಕಾಣುತ್ತಿರಲಿಲ್ಲ. ಆದರೆ ಆಕೆ ನನ್ನ
ಪರಿಚಿತಳಂತೂ ಆಗಿರಲಿಲ್ಲ. ನಯವಾಗಿ ತಿರಸ್ಕರಿಸಿದೆ. ಬೇಸರಗೊಂಡರೇನೋ?
"ನಾನು ಮನೆಯಲ್ಲೇ ಹುರಿದದ್ದು ತಿನ್ನಿ.." ಎಂದಾಗ ಅಚ್ಚರಿಗೊಂಡೆ. "ನೀರು
ಬೇಕಾ?" ಪುನಃ ಕೇಳಿದರು. "ಬೇಡ,
ನಾನು ತಂದಿದ್ದೇನೆ" ಎಂದೆ. ಬಂಧುವಲ್ಲ, ಸ್ನೇಹಿತಳಲ್ಲ,
ಆದರೂ ಈ ಆತ್ಮೀಯತೆ! ಕನ್ನಡ
ಎನ್ನುವ ಮಧುಮಧುರ ಕೊಂಡಿಯೊಂದೇ ನಮ್ಮನ್ನು
ಬೆಸೆದದ್ದು. ಮತ್ತೆ ಪರೆದೆ ಯೊಳಕ್ಕೆ ಹೊಕ್ಕೆ.
`ಏ...ನನ್ನ ವಾರಭವಿಷ್ಯ ನೋಡಿ
ಹೇಳು ಮಾರಾಯಾ...'
`ಅದ್ರಲ್ಲಿ
ಎಂತ ಬೊಜ್ಜ ಸಾ ಇಲ್ಲ...'
`ನನ್ಗೆ
ರಾಮಣ್ಣ ರೈ ಮೇಲೆ ಕ್ರಶ್
ಆಗಿದೆ ಮಾರಾಯಾ...'
`ಏ ಭುಜಂಗ ಬಾರಾ....ಭಯಂಕರ
ಪೆಟ್ಟು ಉಂಟು...'
ಎಲ್ಲವನ್ನೂ
ಮನದಣಿಯೆ ಅನುಭವಿಸಿದೆ. ಅನಂತ್ ನಾಗ್ ಎನ್ನುವ ಮೇರು ಕಲಾವಿದನ
ಎಂಟ್ರಿ ಸೀನ್ ಮನಸ್ಸಿಗೆ ಸ್ವಲ್ಪ
ಕಿರಿಕಿರಿ ಎನಿಸಿ `ಹೀಗೆ ಬೇಕಿತ್ತೇ?'
ಎನಿಸಿದರೂ ಮುಂದೆ ಆತನ ಡೈಲಾಗುಗಳು
ಮುದ ನೀಡಿದುವು. ಕೊನೆಯ ಕೋರ್ಟ್ ಸೀನಲ್ಲಿ `ಪೀಕಾಕ್
ಸ್ವಾಮಿ'ಗಳ ಮಾತು ಪ್ರೇಕ್ಷಕರ
ನರನಾಡಿಗಳಲ್ಲಿ ವಿದ್ಯುತ್ ಸಂಚಾರವನ್ನುಂಟುಮಾಡಿತ್ತು. ಅವರ ಕಿವಿಗಡಚಿಕ್ಕುವ ಚಪ್ಪಾಳೆ,
ವಿಸಿಲು, ಕೇಕೇ ಶಬ್ದಗಳೊಳಗೆ ನನಗರಿವಿಲ್ಲದಂತೆ
ನಾನೂ ವಿಸಿಲಾದೆ,ಚಪ್ಪಾಳೆಯಾದೆ. ಕಾಸರಗೋಡಿನ ಮಗಳಾಗಿ ಸಿನೆಮಾವನ್ನು ಇಂಚಿಂಚಾಗಿ
ಅನುಭವಿಸಿದೆ. ಛೇ...ಮುಗಿಯಿತಲ್ಲ? ಎನ್ನುವ
ಅನಿಸಿಕೆ ಒಂದು ಕಡೆಯಾದರೆ `ಓಹೋ....ಸರಿಯಾಗಿಯೇ ಪಾಠ ಕಲಿಸಿದ್ದಾರೆ ಮಲೆಯಾಳೀ
ಭಾಷಾಂಧರಿಗೆ....' ಎನ್ನುವ ಸಂತಸ ಇನ್ನೊಂದೆಡೆ. ಅನಂತನಾಗ್ ಡಯಲಾಗುಗಳ ಗುಂಗಿನಲ್ಲೇ ಸಿನೆಮಾ ಹಾಲಿನಿಂದ ಹೊರಕ್ಕೆ
ಬಂದೆ. ಆಗ ನಾನು ಒಳ
ಪ್ರವೇಶಿಸುವಾಗ ಇದ್ದುದಕ್ಕಿಂತಲೂ ಹೆಚ್ಚಿನ ಜನಸಂದಣಿ ಅಲ್ಲಿತ್ತು!
ಮತ್ತೆ ಚಿರಪರಿಚಿತ ಮುಖಗಳ ಆತ್ಮೀಯ ನಗು
ಮಾತುಗಳ ಪುನರಾವರ್ತನೆ. ಮಾತಿನ ಒಕ್ಕಣೆ ಮಾತ್ರ
ಬದಲಾಗಿತ್ತು.
"ಹೋ...ಶೀಲಕ್ಕಾ...,ಹೇಗಿತ್ತು ಸಿನೆಮಾ? ಅನಂತ್ನಾಗ್ ಇದ್ದ
ಮೇಲೆ ಕೇಳುದೇ ಬೇಡ ಅಲ್ವಾ?"
"ನಮಸ್ತೆ
ಶೀಲಕ್ಕಾ..., ಬಾರೀ ಒಳ್ಳೆದುಂಟಂತೆ ಅಲ್ವಾ
ಸಿನೆಮಾ?"
ಹೀಗೆ ಎಲ್ಲರೊಡನೆ ಬೆರೆಯುತ್ತಾ ನಗುತ್ತಾ ಬಾಗಿಲಿನೆಡೆಗೆ ತಿರುಗಿದೆ.
ಆಗ ಬಂದರು ನೋಡಿ ಕನ್ನಡ
ಹೋರಾಟಗಾರರು.
"ಹ್ಹ...ಶೀಲಾ...ಸಿನೆಮಾ ಮುಗಿಸಿ
ಬರ್ತಾ ಇದ್ದೀರಾ...?"
"ಹೌದು.
ನೀವು ಎಲ್ರೂ ಇದ್ದೀರಲ್ಲ? ನಿಮ್ಮ
ಹೋರಾಟಕ್ಕೆ ಈ ಸಿನೆಮಾ ಇನ್ನಷ್ಟು
ಸ್ಫೂರ್ತಿಯಾದೀತು ..." ಎಂದೆ. ಅವರುಗಳ ಮುಖದಲ್ಲಿ
ಒಂದು ರೀತಿಯ ತಾತ್ಸಾರದ ಭಾವ
ಮಿಂಚಿ ಮರೆಯಾಯಿತು. ಅವಸರವಸರವಾಗಿ ಒಳಕ್ಕೆ ಹೋದರು. ನಾನು
ಮನೆಯ ಹಾದಿ ಹಿಡಿದೆ. ಸಿನೆಮಾ
ನೋಡುವಾಗ ಇದ್ದ ಆ ಉತ್ಸಾಹ,
ಸಂತಸ, ಸಡಗರ ಮರೆಯಾಗಿ ಯೋಚನೆಗಳು
ಮನಸ್ಸನ್ನು ಆಕ್ರಮಿಸಿಕೊಂಡವು. ನಮ್ಮ ಕಾಸರಗೋಡು ಕೇರಳಕ್ಕೆ
ಸೇರಿದ ಲಾಗಾಯ್ತಿನಿಂದ ಈ ಪ್ರದೇಶವು ಕರ್ನಾಟಕದ ತೆಕ್ಕೆಗೆ ಮರಳ ಬೇಕೆಂಬ ಹೋರಾಟದಲ್ಲಿ
ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದ್ದಂತಹ ಪೈಗಳು, ರೈಗಳು, ಭಂಡಾರಿಯವರು,
ಕುಣಿಕುಳ್ಳಾಯರು, ಲಲಿತಾ ಡಾಕ್ಟ್ರು, ಪುರುಷೋತ್ತಮ
ಮಾಷ್ಟ್ರು, ಉಮೇಶ ನಾಯಕರು ಇವರೆಲ್ಲ
ಕಾಸರಗೋಡಿನ ಕಣ್ಮಣಿಗಳು, ಪ್ರಾಥಃಸ್ಮರಣೀಯರು. ಇವರೆಲ್ಲರ ಗುರಿಯೂ ಒಂದೇ ಆಗಿತ್ತು,
ದಾರಿಯೂ ಒಂದೇ ಆಗಿತ್ತು. ಆದರೆ
ಇತ್ತೀಚೆಗಿನ ಕೆಲವೆಲ್ಲ ಬೆಳವಣಿಗೆಗಳು ಬಹಳ ಬೇಸರ ತರಿಸುವಂತಾದ್ದು.
`ಕಾಸರಗೋಡು ಕನ್ನಡನಾಡು' ಎಂಬ ಘೋಷಣೆಯನ್ನು ಒಕ್ಕೊರಲಿನಿಂದ
ಘೋಷಿಸಬೇಕಾದ ಕನ್ನಡಿಗರೊಳಗೆ ಹಲವು ಗುಂಪುಗಳಾಗಿ ಹೋಗಿವೆ. ಪ್ರತಿಯೊಂದಕ್ಕೂ
ಸೊಗಸಾದ ಹೆಸರುಗಳೂ ಉದ್ದೇಶಗಳೂ ಇವೆ. ಕನ್ನಡ ಪರವಾದ
ಕೆಲಸಗಳೂ ನಡೆಯುತ್ತಿವೆ. ಆದರೆ ಎಲ್ಲಾ ಬಣ್ಣ
ಮಸಿ ನುಂಗಿತು ಎಬಂತೆ ಒಳ
ರಾಜಕೀಯ ಎನ್ನುವುದು ಇದೆಯೆಲ್ಲ? `ಇಬ್ಬರ ನ್ಯಾಯ ಮೂರನೆಯವನಿಗೆ
ಆಯ' ಎನ್ನುವಂತಾಗಿದೆ. ಮಲೆಯಾಳಿಗಳ ಮಿತಿ ಮೀರಿದ ದಬ್ಬಾಳಿಕೆಗೆ
ಇದೂ ಒಂದು ಕಾರಣವೇ ಹೌದು.
ಇತ್ತೀಚೆಗೆ ನಡೆದ ನನ್ನದೇ ಒಂದು
ಉದಾಹರಣೆಯನ್ನು ಕೊಡುತ್ತೇನೆ. ಕಾಸರಗೋಡಿನ ಕನ್ನಡಿಗರ ಮೇಲೆ ಮಲೆಯಾಳಂ ಬಾಷಾ
ಹೇರಿಕೆಯ ವಿರುದ್ಧ ನಡೆದ ಸತ್ಯಾಗ್ರಹದಲ್ಲಿ
ನಾನೂ ಪಾಲುಗೊಂಡಿದ್ದೆ. ಅದನ್ನು ಕೊನೆಗೊಳಿಸಿ ಹೊರಕ್ಕೆ
ಬರುವಾಗ ಚೆನ್ನಾಗಿ ಪರಿಚಯವಿರುವ ಕನ್ನಡಿಗರಿಬ್ಬರು ನನ್ನ ಪಕ್ಕದಿಂದಲೇ ಹಾದು ಹೋಗಿದ್ದರು. ನನ್ನ ಪರಿಚಯವೇ ಇಲ್ಲದಂತೆ!
ಯಾಕೆ ಗೊತ್ತೇ? ನಾನು ಭಾಗವಹಿಸಿದ್ದ
ಸತ್ಯಾಗ್ರಹ ಕಾರ್ಯಕ್ರಮವನ್ನು ಸಂಘಟಿಸಿದವರು ಇನ್ನೊಂದು ಬಣದವರು. ಇಲ್ಲಿ ಒಂದು
ಸಂಘಟನೆಯವರು ಆಯೋಜಿಸುವ ಕಾರ್ಯಕ್ರಮಗಳನ್ನು ಇನ್ನೊಂದು ಸಂಘಟನೆಯವರು ಪ್ರೋತ್ಸಾಹಿಸುವುದೇ ಇಲ್ಲ! ಈ ಕನ್ನಡ
ಸಂಘಟನೆಗಳು ನಡೆಸುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ
ಆಹ್ವಾನ ಹೋಗುವ ರೀತಿಯೂ ವಿಚಿತ್ರವಾಗಿದೆ.
ಒಂದು ಸಂಘಟನೆಯ ಜೊತೆಗೆ ಗುರುತಿಸಿಕೊಂಡವರನ್ನು
ಇನ್ನೊಂದು ಸಂಘಟನೆಯವರು ಕರೆಯುವುದೇ ಇಲ್ಲ! ಈ ಕಹಿ
ಮಲೆಯಾಳೀ ಅಧಿಕಾರಿಗಳ ಪಾಲಿಗೆ ಸಿಹಿಯಾದದ್ದು ಮಾತ್ರ
ದುರಂತ. ಕನಿಷ್ಟ ಪಕ್ಷ ಹಿ.ಪ್ರಾ.ಶಾ.ಕಾ.
ಸಿನೆಮಾ ನೋಡುವ ವಿಚಾರದಲ್ಲಾದರೂ ಎಲ್ಲಾ
ಕನ್ನಡ ಸಂಘಟನೆಗಳು, ಸಮಸ್ತ ಕನ್ನಡಿಗರು ಒಗ್ಗೂಡಿದರಲ್ಲ? ಆ ಕ್ರೆಡಿಟ್ಟು ನಿರ್ದೇಶಕ ರಿಷಬ್ ಶೆಟ್ರಿಗೆ ಸಲ್ಲಬೇಕು. `ಅವರವರ ತಲೆಯಡಿಗೆ ಅವರವರ
ಕೈ' ಎನ್ನುವ ಗಾದೆ ಮಾತು ಇತ್ತೀಚೆಗೆ ಮಂಗಲ್ಪಾಡಿ ಸರಕಾರಿ ಶಾಲೆಯಲ್ಲಿ ಸಮಸ್ಯೆ
ಉದ್ಭವಿಸಿದಾಗ ಮತ್ತೊಮ್ಮೆ ನಿಜವೆಂದು ಸಾಬೀತಾಯ್ತು. (ಕನ್ನಡ ಮಕ್ಕಳಿಗೆ ಮಲಯಾಳಂ
ಶಿಕ್ಷಕನ ನೇಮಕಾತಿ ಆದಾಗ ಶಾಲಾ
ಅಧ್ಯಾಪಕರು, ಸ್ಥಳೀಯರು, ವಿದ್ಯಾಥಿಗಳು,ಹೆತ್ತವರೇ ಬಲವಾಗಿ ವಿರೋಧಿಸಿ ತಾತ್ಕಾಲಿಕ
ಯಶಸ್ಸನ್ನೂ ಗಳಿಸಿದ್ದಾರೆ). ಸ್ವಾರ್ಥವರಿಯದ ನಿಜಪ್ರೇಮದ ಕನ್ನಡ ಮಕ್ಕಳು ಅವರಿವರಿಗೆ
ಕಾಯದೆ ಸೆಟೆದು ನಿಲ್ಲಬೇಕು. ತಮಗೋಸ್ಕರ
ತಮ್ಮ ಭವಿಷ್ಯಕ್ಕೋಸ್ಕರ ತಾವೇ ಹೋರಾಡಬೇಕು. ಕಾಸರಗೋಡಲ್ಲೇ
ಬಾಳಬೇಕು ಎನ್ನುವುದೇ ಸಿನೆಮಾದ ತಿರುಳು.
Very nicely written Amma!
ಪ್ರತ್ಯುತ್ತರಅಳಿಸಿಲಾಯ್ಕ ಆಯಿದು ಶೀಲಕ್ಕ
ಪ್ರತ್ಯುತ್ತರಅಳಿಸಿThanks Neethi & unknown reader
ಪ್ರತ್ಯುತ್ತರಅಳಿಸಿ