`ಲಿಟ್ ಫೆಸ್ಟ್ ಮಂಗಳೂರು' ಇದರ ಬಗ್ಗೆ ನಮ್ಮ ವಾಟ್ಸ್ಯಾಪ್ ಗ್ರೂಪಲ್ಲಿ ವಿವರ ಬಂದಿತ್ತು. ಹೋಗಿ ನೋಡೋಣ ಎನಿಸಿತು. ತರಂಗದ ಸಂಪಾದಕಿ ಶ್ರೀಮತಿ ಸಂಧ್ಯಾ ಪೈ, ನಿಟ್ಟೆ ಸಮೂಹ ಸಂಸ್ಥೆಗಳ ವಿನಯ್ ಹೆಗ್ಡೆ ಮತ್ತು ರಾಜ್ಯ ಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಜೊತೆಗೂಡಿ ಆಯೋಜಿಸಿದ ಕಾರ್ಯಕ್ರಮ (ಟಿ.ಎಮ್.ಎ.ಪೈ.ಹಾಲ್, ಮಂಗಳೂರು). ಇದರ ಬಗ್ಗೆ ಪೇಪರಲ್ಲಿ ನೀವು ನೋಡಿಯೇ ಇರುತ್ತೀರಿ. ಈ ಮೂವರನ್ನೂ ಸಮಾಜ ಪ್ರೋತ್ಸಾಹಿಸುತ್ತಿರುವ ರೀತಿ ಅನನ್ಯವಾದುದು. ಸಮಾಜದಿಂದ ಪಡೆದುದನ್ನು ಹಿಂದಿರುಗಿಸಲು ಹಲವಾರು ಮಾರ್ಗಗಳಿವೆ. ಆದರೆ ಇವರು ಲಿಟ್ ಫೆಸ್ಟ್ ಮೂಲಕ ಅದನ್ನು ಹಿಂದಿರುಗಿಸಲು ನಿರ್ಧರಿಸಿದರಲ್ಲ? ನಿಜಕ್ಕೂ ಗ್ರೇಟ್! `ಕೆರೆಯ ನೀರನು ಕೆರೆಗೆ ಚೆಲ್ಲಿ....ವರವ ಪಡೆದವರು....' ಎನ್ನುವ ಹಾಡಿನ ಸಾಲು ನೆನಪಾಯ್ತು.
`ಐಡಿಯಾ ಆಫ್ ಭಾರತ್' ಲಿಟ್ ಫೆಸ್ಟಿನ ಥೀಮ್ (ಗಮನಿಸಿ, ಐಡಿಯಾ ಆಫ್ ಇಂಡಿಯಾ ಅಲ್ಲ). ನಿನ್ನೆ ಶನಿವಾರ ನಾನು ಅಲ್ಲಿಗೆ ತಲಪುವ ಹೊತ್ತಿಗೆ ಸಂಧ್ಯಾ ಪೈಯವರ ಭಾಷಣ ಮುಗಿದಿತ್ತು. ಪ್ರಫುಲ್ಲ ಖೇತ್ಕರ್ ಅವರ ಭಾಷಣ ಮುಗಿಯುವ ಹಂತದಲ್ಲಿತ್ತು. ಡೇವಿಡ್ ಫ್ರಾಲಿ, ಮಧು ಕೀಶ್ವರ್, ಶೆಫಾಲಿ ವೈದ್ಯ, ಪ್ರಕಾಶ್ ಬೆಳವಾಡಿ, ವಿವೇಕ್ ಅಗ್ನಿಹೋತ್ರಿ, ಆನಂದ್ ರಂಗನಾಥನ್, ಆನಿರ್ಬನ್ ಗಂಗೂಲಿ ಇಷ್ಟು ಜನರ ಮಾತುಗಳನ್ನಷ್ಟೇ ಕೇಳಲು ನನಗೆ ಸಾಧ್ಯವಾಗಿದ್ದುದು. ಅಂದರೆ ಬೆಳಗ್ಗೆ ಹನ್ನೊಂದು ಘಂಟೆಯಿಂದ ಸಂಜೆ ಮೂರುವರೆವರೆಗೆ ನಾನಲ್ಲಿದ್ದೆ(ಇದರಲ್ಲಿ ಕಾಫಿ, ಊಟಕ್ಕೆಂದು ಒಂದು ಗಂಟೆ ವ್ಯಯವಾಗಿತ್ತು). ಆದರೆ ಈ ಮೂರೂವರೆ ಗಂಟೆ ಎನ್ನುವುದು ಅಮೃತ ಸಂಜೀವಿನಿಯಂತಿತ್ತು. ಬಹುಷಃ ಅಲ್ಲಿ ನೆರೆದಿದ್ದ ಪ್ರತಿಯೊಬ್ಬರಿಗೂ ಹಾಗೇ ಅನಿಸಿರಬೇಕು.
ಸಮಾಜದಲ್ಲಿ ನಡೆಯುತ್ತಿರುವಂತಹ ಕೆಲವು ಅಸಹ್ಯ ಬೆಳವಣಿಗೆಗಳನ್ನು ನಾನು,ನೀವು ಗಮನಿಸದೆ ಇರಲು ಸಾಧ್ಯವೇ ಇಲ್ಲ. ಹಿಂದೂ ಧರ್ಮದ ಅವಹೇಳನ, ನಮ್ಮ ಧಾರ್ಮಿಕ ವಿಧಿ ವಿಧಾನಗಳ ಬಗೆಗಿನ ಅಪಪ್ರಚಾರ, ಸರಕಾರದಿಂದಲೇ ನಡೆಯುತ್ತಿರುವ ದೇವಾಲಯಗಳ ಲೂಟಿ, ಸಾವಿರ ಸಾವಿರ ವರ್ಷಗಳಿಂದ ನಂಬಿಕೊಂಡು ಬಂದಿರುವಂತಹ ಆಚರಣೆಗಳಿಗೆ ಘನವೆತ್ತ ನ್ಯಾಯಾಲಯಗಳು ಮೂಗು ತೂರಿಸುವುದು, ಜನಸೇವೆಯೇ ಈಶಸೇವೆ ಎಂದು ನಡೆದುಕೊಳ್ಳುತ್ತಿರುವ ಮಠಗಳನ್ನು ಮಾಠಾಧೀಶರನ್ನು ಮುಗಿಸಲು ನಡೆಸುವ ಹುನ್ನಾರ, ಇನ್ನು ಸ್ರ್ತೀ ಸಬಲೀಕರಣವೆಂದರೆ ಅಗತ್ಯವೇ ಇಲ್ಲದಿದ್ದರೂ ಇಂಗ್ಲಿಷ್ ಮಾತನಾಡುತ್ತಾ ಅರೆಬರೆ ಬಟ್ಟೆ ಧರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸೇದುತ್ತಾ ಹೆಂಡದ ಕುಪ್ಪಿ(ತೀರಾ ಲೋಕಲ್ ಶಬ್ದ ಬಳಸಿದೆ,ಕ್ಷಮಿಸಿ) ಏರಿಸುವುದು, ಸಮಾಜದಲ್ಲಿ ಒಪ್ಪಿತ ರೀತಿ ನೀತಿ ಅಂತ ಏನಿದೆಯೋ ಅದರ ಹಿನ್ನೆಲೆ, ಕಾರ್ಯ,ಕಾರಣಗಳ ಅರಿವೇ ಇಲ್ಲದೆ, `ನಾವೂ ಅದನ್ನು ಮಾಡಿದರೆ ಏನಾಗುತ್ತದೆ...?' ಎಂದು ಅಕಾರಾಳ ವಿಕಾರಾಳ ವಿರೋಧಿಸುವುದು, (ಸ್ತ್ರೀ ಶೋಷಣೆಯೇ ಬೇರೆ, ಆಧುನಿಕ `ಸುಧಾರಣಾವಾದಿ' ಸ್ರ್ತೀಯರು `ಹೋರಾಟ'ದ ದಿಕ್ಕೇ ಬೇರೆ) women empowerment ಎಂದರೆ ಇದುವೇ ಎಂದು ಬಿಂಬಿಸುವುದು.....ಹೀಗೆ ನಮ್ಮ ಮಕ್ಕಳನ್ನು, ಮಹಿಳೆಯರನ್ನು ಮತ್ತು ವ್ಯವಸ್ಥಿತ ಸಮಾಜವನ್ನು ಅಸ್ತವ್ಯಸ್ತಗೊಳಿಸುವುದೇ ಇಂದಿನ ಫ್ಯಾಶನ್ ಆಗಿಹೋಗಿದೆ. ಇದಕ್ಕೆ ಕಮ್ಮಕ್ಕು ನೀಡುವ ಶಕ್ತಿಗಳು, ಇದರ ಹಿಂದಿನ ಕೈಗಳು ಎಷ್ಟು ಅಗಾಧವಾಗಿ ಚಾಚಿವೆ ಎಂಬುದರ ಆಳ ಅಗಲದ ಪರಿವೆ ನಮಗಾರಿಗೂ ಇಲ್ಲ. ಹಲವಾರು `ಇಸಂ' ಗಳು ನಮ್ಮನ್ನು ಗುಡಿಸಿ ಗಡಿಪಾರು ಮಾಡಲು ಹೊರಟಿವೆ, ನಮ್ಮನ್ನು ಹೇಳುವವರು ಕೇಳುವವರು ಯಾರೂ ಇಲ್ಲ, ಭಾರತದಲ್ಲಿ `ಸುಖವಾಗಿ' ಜೀವಿಸಬೇಕಾದರೆ ಒಂದೋ ಮುಸಲ್ಮಾನನಾಗಿರಬೇಕು ಇಲ್ಲವೇ ದಲಿತನಾಗಿರಬೇಕು ಎನ್ನುವ ಸ್ಥಿತಿಗೆ ಮುಟ್ಟಿದ್ದೇವೆ. ಮನೆಯಿಂದ ಹೊರಗೆ ಕಾಲಿಟ್ಟರೆ ಪುನಃ ಕ್ಷೇಮವಾಗಿ ಮನೆಗೆ ಮುಟ್ಟಿಯೇನು ಎನ್ನುವ ದೈರ್ಯವಿಲ್ಲ. ಯಾಕೆಂದರೆ ನಾನು ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದವಳು, ಹಿಂತುಳಿಯಲ್ಪಟ್ಟವಳು, ಇನ್ನಷ್ಟು ತುಳಿಸಿಕೊಳ್ಳಲು ತಯಾರಾಗಿರಬೇಕಾದವಳು. ಬಹುಷಃ ಮೇಲ್ಜಾತಿ ಎಂದು ಗುರುತಿಸಿಕೊಂಡವರಲ್ಲಿ ಈ ಭಾವನೆಗಳು ಸಾಮಾನ್ಯ . ಭವಿಷ್ಯ ತೀರಾ ಕತ್ತಲು ಎನಿಸಿದುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಈ ಒಂದು ಅನಾಥ ಪ್ರಜ್ಞೆ ನಮ್ಮನ್ನು ಕಂಗಾಲು ಮಾಡುತ್ತಿರುವುದಂತೂ ಸತ್ಯ. ಇಂತಹ ಮನಸ್ಥಿತಿಯ ಹಿನ್ನೆಲೆಯಲ್ಲಿ ನಾನು `ಲಿಟ್ ಫೆಸ್ಟ್' ಗೆ ಹೋಗಿದ್ದೆ. ಅಲ್ಲಿಂದ ಹೊರಕ್ಕೆ ಬರುವಾಗ ಭವಿಷ್ಯದ ಭಾರತ ಭವ್ಯ ಭಾರತವೇ ಆಗಬಹುದು ಎನ್ನುವ ಆಶಾವಾದ ನನ್ನೊಂದಿಗಿತ್ತು.
ಲಿಟ್ ಫೆಸ್ಟಿನ ಮೂಲ ಉದ್ದೇಶ ನಮ್ಮ ಭರತವರ್ಷದ ಶಾಂತಿ, ಸಮನ್ವಯತೆ, ಸಮಬಾಳು, ಸಹಜೀವನ, ಸಹೋದರತೆ,ಸಮಾನತೆ, ಪ್ರೀತಿಸು, ಪ್ರೀತಿ ಪಡೆದುಕೋ.... ಇವೆಲ್ಲದರ ಕುರಿತಾಗಿ ಅರಿವು ಮೂಡಿಸುವುದೇ ಆಗಿತ್ತು. ಯುವಜನತೆಯ ಭಾಗವಹಿಸುವಿಕೆ, ಲವಲವಿಕೆ, ನನ್ನ ಕಣ್ಮನಗಳನ್ನು ತುಂಬಿತ್ತು. ಡೇವಿಡ್ ಫ್ರಾಲಿ ಮತ್ತು ಅನಿರ್ಬನ್ ಗಂಗೂಲಿ ಅವರ ಪ್ಯಾನಲ್ ಡಿಸ್ಕಶನ್ ಅಂತೂ ನವ ಯುವಕರಿಗೆ ದಾರಿ ದೀಪದಂತಿತ್ತು. ಬಾರತದ ಭವಿಷ್ಯ ಅದರ ಭವ್ಯ ಪರಂಪರೆ, ವೇದ, ವೇದಾಂತ, ಯೋಗ, ಧರ್ಮಗಳ ಮೇಲೆ ನಿಂತಿದೆ. ಅದುವೇ ನಮ್ಮ ಅಡಿಪಾಯ, ಒಂದೇ ಒಂದು ಕಲ್ಲು ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದನ್ನು ಫ್ರಾಲಿ ವಿವರಿಸಿದ ರೀತಿ ಅನನ್ಯವಾಗಿತ್ತು. ಮಾರ್ಕ್ಸ್ ವಾದಿಗಳ ದೇಶವನ್ನು ಇಬ್ಭಾಗವಾಗಿಸುವ ಕುಟಿಲ ನೀತಿ, ಠೊಳ್ಳು ಸಮಾಜವಾದ, ಜಾತ್ಯಾತೀತ, ಸೆಕ್ಯಲರ್....ಇತ್ಯಾದಿ ವಿಷಬೀಜಗಳು ರಕ್ತಬೀಜಾಸುರನಂತೆ ಬೆಳೆಯುತ್ತಿರುವ ರೀತಿ, ಈ ಎಲ್ಲ ಅಪದ್ಧಗಳಿಗೆ ಇಂಬುಕೊಡಲು ಹೊರದೇಶದಿಂದ ಹರಿದುಬರುತ್ತಿರುವ ಕಾಂಚಾಣ.....ಹೀಗೆ ನಾವೆಲ್ಲರೂ ತಿಳಿದಿರಲೇಬೇಕಾದಂತಹ ಸಂಗತಿಗಳನ್ನು ಆನಂದ್ ರಂಗನಾಥನ್, ಮಧುಕೀಶ್ವರ್, ಶೆಫಾಲಿ ವೈದ್ಯ, ವಿವೇಕ್ ಅಗ್ನಿಹೋತ್ರಿ ಮುಂತಾದವರು ಹೇಳಿದ ರೀತಿಯಿದೆಯಲ್ಲಾ...., `ಯಬ್ಬ...,ನಮ್ಮ ಮನದ ಅಳಲುಗಳಿಗೆ ಶಬ್ದದ ರೂಪಕೊಡುವವರೂ ಇದ್ದಾರಲ್ಲ...' ಎಂದೆನಿಸಿತ್ತು.
ಇನ್ನು ಪ್ರಕಾಶ್ ಬೆಳವಾಡಿ ಹೇಳಿದ ಒಂದು ಮಾತಂತೂ ಮರೆಯಲು ಸಾಧ್ಯವೇ ಇಲ್ಲ, `ಹಿಂದೂ ದೇವತೆಗಳನ್ನು ಅವಹೇಳನ ಮಾಡುತ್ತಾರೆ, ಹಿಂದೂ ಆಚರಣೆಗಳನ್ನು ಅಲ್ಲಗಳೆಯುತ್ತಾರೆ, ಹಿಂದೂ ಎನ್ನುವ ಕಾನ್ಸೆಪ್ಟೇ ಅರ್ಥಹೀನ ಎನ್ನುವಂತೆ ಮಾತನಾಡುವವರೇ ಹಿಂದೂ ದೇವಾಲಯಗಳ ದುಡ್ಡನ್ನು ಯಾಕೆ ಕೊಳ್ಳೆಹೊಡೆಯುತ್ತಾರೆ?'
ಕಾರ್ಯಕ್ರಮದಲ್ಲಿ ಯುವಜನರ ಓಡಾಟ, ಧನಾತ್ಮಕ ಸ್ಪಂದನೆಗಳು ಹಿಂದೂಗಳಿಗೂ ಒಳ್ಳೆಯ ಭವಿಷ್ಯವಿದೆ ಎಂಬುದನ್ನು ಸೂಚಿಸಿತು. ಕಾರ್ಯಕ್ರಮವನ್ನು ಬಹಳ ಚೆನ್ನಾಗಿ ಆಯೋಜಿಸಿದ್ದಾರೆ. ಸಮಯ ಪರಿಪಾಲನೆಯಲ್ಲಿ ಕಾಯ್ದುಕೊಂಡ ಕಟ್ಟುನಿಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರವಾಯ್ತು. ಊಟ, ಕಾಫಿಯೂ ಸೊಗಸಾಗಿತ್ತು . ಇವತ್ತು ಭಾನುವಾರ, ಬಹುಷಃ ಇನ್ನಷ್ಟು ಜನಸಂದಣಿ ಇರಬಹುದು. ಅಂದ ಹಾಗೆ ಹೊರಗಡೆ ಸಾಹಿತ್ಯ ಭಂಡಾರ, ನವಕರ್ನಾಟಕ ಪಬ್ಲಿಕೇಷನ್ ಮುಂತಾದ ಪ್ರಕಾಶಕ ದಿಗ್ಗಜಗಳ ಏಳೆಂಟು ಪುಸ್ತಕ ಮಳಿಗೆಗಳಿವೆ. ಇನ್ನೊಂದು ಸ್ಟಾಲಿನಲ್ಲಿ ಆವೆ ಮಣ್ಣಿನಿಂದ ಗೊಂಬೆ ತಯಾರಿಸುತ್ತಾ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆಯನ್ನು ನಡೆಸಿಕೊಡುತ್ತಿದ್ದರು. ಅಂತೂ ಎಲ್ಲೆಲ್ಲೂ ಯುವಕ ಯುವತಿಯರದ್ದೇ ಓಡಾಟ. ದಿನವೊಂದನ್ನು ಸಾರ್ಥಕವಾಗಿ ಕಳೆದಿದ್ದೆ. ಸಂಜೆಯ ಭೈರಪ್ಪನವರ ಮತ್ತು ಸೂಲಿಬೆಲೆಯವರ ಕಾರ್ಯಕ್ರಮ ಮಿಸ್ ಮಾಡಿಕೊಳ್ತಿದ್ದೇನೆ ಎಂಬ ಬೇಸರವಂತೂ ಇದ್ದೇ ಇತ್ತು.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ