ಮಂಗಳವಾರ, ನವೆಂಬರ್ 4, 2014

ಸ್ಪೆಶಲ್ ಮಸಾಲೆ ದೋಸೆ

ಕೆಲವು ವರ್ಷಗಳ ಹಿಂದೆ ನನ್ನ ಕಸಿನ್ ಓರ್ವಳು ನಮ್ಮಲ್ಲಿಗೆ ಬಂದಿದ್ದಾಗ ಮಸಾಲೆ ದೋಸೆಯ ರೆಸಿಪಿ ಹೇಳಿದ್ದು ನಾನು  ಸಾಧಾರಣವಾಗಿ ಮಾಡುತ್ತಿದ್ದುದಕ್ಕಿಂತ ಭಿನ್ನವಾಗಿತ್ತು. ಅವಳು ಒಂದ್ಸಾರಿ ಉಡುಪಿಗೆ ಹೋಗಿದ್ದಾಗ ಅಲ್ಲಿನ ಸುಪ್ರಸಿದ್ಧ ಹೋಟೆಲೊಂದಕ್ಕೆ ಹೋಗಿದ್ದಳಂತೆ. ಅಲ್ಲಿ ತಿಂದ ಮಸಾಲೆ ದೋಸೆ ಬಹಳ ಇಷ್ಟವಾಗಿ ಅಡುಗೆ ಕೋಣೆಯವರೆಗೂ ಹೋಗಿ(ಹೋಟೆಲುಗಳ ಅಡುಗೆ ಕೋಣೆಗೆ ಹೋಗಲು ಎದೆ ತುಂಬಾ ಗಟ್ಟಿ ಇರಬೇಕಂತೆ!) ರೆಸಿಪಿ ಕೇಳಿದ್ದಳಂತೆ. ಅದನ್ನೇ ನನಗೂ ಹೇಳಿದ್ದಳು. ನಂತರದ ದಿನಗಳಲ್ಲಿ ನಾನೂ ಹಾಗೇ ಮಾಡುತ್ತಿದ್ದೇನೆ. ಮೊನ್ನೆ ಮಸಾಲೆ ದೋಸೆ ಮಾಡಿದಾಗ ಮಗಳು, "ಅಮ್ಮಾ..., ಇದನ್ನ ಬ್ಲಾಗಲ್ಲಿ ಯಾಕೆ ಹಾಕಿಲ್ಲ...?" ಎಂದು ಕೇಳಿದಾಗ ನನಗೂ 'ಹಾ..., ಹೌದಲ್ಲಾ...' ಎನಿಸಿತು. ನೋಡಿ....,ಮಾಡಿ...,










ಬೇಕಾಗುವ ಸಾಮಾಗ್ರಿಗಳು--- ದೋಸೆಗೆ:-

1.ಬೆಳ್ತಿಗೆ ಅಕ್ಕಿ ಮೂರು ಕಪ್
2.ಉದ್ದಿನ ಬೇಳೆ ಅರ್ಧ ಕಪ್
3.ತೆಳ್ಳಗಿನ ಅವಲಕ್ಕಿ ನೆನೆಸಿದ್ದು  ಕಾಲು ಕಪ್
4.ಮೆಂತೆ ಕಾಲು ಚಮಚ
5.ಸಕ್ಕರೆ ಅರ್ಧ ಚಮಚ
6.ಮೈದಾಹಿಟ್ಟು ಎರಡು ಚಮಚ
ವಿಧಾನ:-
ಅಕ್ಕಿ,ಉದ್ದಿನಬೇಳೆ, ಮೆಂತೆಗಳನ್ನು ಒಟ್ಟಿಗೆ ಎರಡು ಘಂಟೆ ನೆನೆಹಾಕಿ. ಅವಲಕ್ಕಿ ಸೇರಿಸಿ ನುಣ್ಣಗೆ ಅರೆದುಕೊಳ್ಳಿ.ಹಿಟ್ಟನ್ನು ಪಾತ್ರೆಗೆ ಹಾಕಿಕೊಂಡು ಅದಕ್ಕೆ ಉಪ್ಪು, ಸಕ್ಕರೆ, ಮೈದಾ ಹಿಟ್ಟುಗಳನ್ನು ಸೇರಿಸಿ ಕೈಯ್ಯಲ್ಲಿ ಚೆನ್ನಾಗಿ ಮಿಶ್ರ ಮಾಡಿ. ಗಂಟಿಲ್ಲದಂತೆ ಕಲಸಿ ಹಿಟ್ಟನ್ನು ಕೈಯ್ಯಲ್ಲಿ ತೆಗೆದುಕೊಂಡು ಎತ್ತರದಿಂದ ಪಾತ್ರೆಗೆ ಹಾಕುವಾಗ ದಪ್ಪನಾಗಿ ತಡೆಯಿಲ್ಲದಂತೆ ಬೀಳಬೇಕು. ಹೀಗೆ ಕೆಲವು ಸಲ ಮಾಡಿ ಮುಚ್ಚಿಡಿ. ಹತ್ತು ಘಂಟೆ ಬಿಟ್ಟು ದೋಸೆ ಎರೆಯಬಹುದು.

ಪಲ್ಯ ಅಥವಾ ಬಾಜಿಗೆ 

1.ಬೇಯಿಸಿದ ಎರಡು ಮಧ್ಯಮ ಗಾತ್ರದ ಆಲೂಗಡ್ಡೆ
2.ಈರುಳ್ಳಿ ಒಂದು
3.ಹಸಿರು ಮೆಣಸಿನ ಕಾಯಿ ಒಂದೆರಡು
4.ಒಗ್ಗರಣೆಗೆ--ಎಣ್ಣೆ ಎರಡು ಚಮಚ, ಕರಿಬೇವಿನಸೊಪ್ಪು ಒಂದೆಸಳು, ಉದ್ದಿನಬೇಳೆ, ಕಡಲೆಬೇಳೆ ತಲಾ ಒಂದು ಚಮಚ, ಸಾಸಿವೆ ಅರ್ಧ ಚಮಚ.
5.ಪುದಿನ ಸೊಪ್ಪು, ಕೊತ್ತಂಬರಿ ಸೊಪ್ಪು ತಲಾ ನಾಲ್ಕೆಸಳು, ಕೊತ್ತಂಬರಿ ಬೀಜ ಒಂದು ಚಮಚ, ಈರುಳ್ಳಿ ಬೆಳ್ಳುಳ್ಳಿ ಚೂರುಗಳು ತಲಾ ಒಂದು ಚಮಚ, ಲವಂಗ ಎರಡು-ಮೂರು, ಚೆಕ್ಕೆ ಅರ್ಧ ಇಂಚಿನ ತುಂಡು.
ವಿಧಾನ:-
ಸಂಖೆ ಐದರಲ್ಲಿನ ಎಲ್ಲಾ ಸಾಮಾಗ್ರಿಗಳನ್ನು ಪೇಸ್ಟ್ ಮಾಡಿಟ್ಟುಕೊಳ್ಳಿ. ಬಾಣಲೆ ಬಿಸಿಗಿಟ್ಟು ಒಗ್ಗರಣೆ ಸಿಡಿಸಿ. ಹೆಚ್ಚಿಟ್ಟ ಈರುಳ್ಳಿ,ಮೆಣಸಿನಕಾಯಿಗಳನ್ನು ಬಾಣಲೆಗೆ ಹಾಕಿ ಹಸಿ ವಾಸನೆ ಹೋಗುವಷ್ಟು ಫ್ರೈ ಮಾಡಿ.
ಮಾಡಿಟ್ಟ ಪೇಸ್ಟನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಬೇಯಿಸಿ ಸಿಪ್ಪೆ ಸುಲಿದ ಆಲೂಗಡ್ಡೆಯನ್ನು ಹಿಚುಕಿ ಇದಕ್ಕೆ ಸೇರಿಸಿ.
ರುಚಿಗೆ ತಕ್ಕಷ್ಟು ಉಪ್ಪನ್ನು ಸ್ವಲ್ಪ ನೀರಲ್ಲಿ ಕದಡಿ ಸೇರಿಸಿ. ಈಗ ಪುನ್ಹ ಎಲ್ಲಾ ವಸ್ತುಗಳು ಚೆನ್ನಾಗಿ ಹೊಂದಿಕೊಳ್ಳುವಂತೆ ಸೌಟು ಆಡಿಸಿ.ಈಗ ಬಾಜಿ ತಯ್ಯಾರ್.(ಈ ಬಾಜಿಯಲ್ಲಿ ನೀರಿನಂಶ ಸ್ವಲ್ಪ ಇರುವಂತೆ ನೋಡಿಕೊಳ್ಳಿ).

ಬಾಜಿಯ ಚಟ್ನಿಗೆ 

1.ತೆಂಗಿನ ತುರಿ ಒಂದು ಕಪ್
2.ಕೆಂಪು ಮೆಣಸು ಎರಡು
3.ಬೇವಿನ ಸೊಪ್ಪು ಒಂದೆಳೆ
4.ಪುದಿನ ಸೊಪ್ಪು ನಾಲ್ಕು
5.ಕೊತ್ತಂಬರಿ ಸೊಪ್ಪು ಎರಡೆಸಳು
5.ಉಪ್ಪು, ಹುಳಿ ರುಚಿಗೆ ತಕ್ಕಷ್ಟು
ವಿಧಾನ:-
ಮೆಣಸು ಮತ್ತು ಸೊಪ್ಪುಗಳನ್ನು ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
ತೆಂಗಿನ ತುರಿ, ಉಪ್ಪು ಹುಳಿಗಳೊಂದಿಗೆ ಮಿಕ್ಸಿ ಮಾಡಿ.
ಈ ಚಟ್ನಿ ಗಟ್ಟಿಯಾಗಿರಲಿ.

ಈಗ ಎಲ್ಲ ತಯಾರಾಯಿತಲ್ಲವೇ ...? ಕಾವಲಿಯನ್ನು ಬಿಸಿಮಾಡಿ ಸ್ವಲ್ಪ ಎಣ್ಣೆ ಹಚ್ಚಿ ಅಥವಾ ನೀರು ಚಿಮುಕಿಸಿ(ನಿಮ್ಮ ಕಾವಲಿಗೆ ಯಾವುದು ಅಭ್ಯಾಸವಾಗಿದೆಯೋ ಅದನ್ನೇ ಬಳಸಿ) ಮೇಲಿನ ಚಿತ್ರದಲ್ಲಿ ತೋರಿಸಿದಂತೆ ತೆಳ್ಳಗಿನ ದೋಸೆ ಎರೆಯಿರಿ. ಮೇಲ್ಭಾಗಕ್ಕೆ ಚಟ್ನಿ ಸವರಿ. ಅದರ ಮೇಲಕ್ಕೆ ಪಲ್ಯವನ್ನು ಹರಡಿ ದೋಸೆಯನ್ನು ಫೋಲ್ಡ್  ಮಾಡಿ ಬೆಣ್ಣೆ ಯಾ ತುಪ್ಪ ಹಾಕಿ ಎರಡೂ ಬದಿ ಗರಿಗರಿಯಾದಾಗ ತೆಗೆದು ಸರ್ವ್ ಮಾಡಿ. ನೆಂಜಿಕೊಳ್ಳಲು ನಿಮ್ಮ ಆಯ್ಕೆಯ ಚಟ್ನಿಯನ್ನು ಸೇರಿಸಿಕೊಳ್ಳಿ.
ಇಲ್ಲಿ ನಿಮಗೊಂದು ಕಿವಿಮಾತು ಹೇಳಲೇಬೇಕು. ಇದನ್ನು ನೀವು ಮಾಡಿದೀರಾದರೆ ನಿಮ್ಮ ಮನೆಯ ಸದಸ್ಯರು ಮುಂದೆಂದೂ ಮಸಾಲೆದೋಸೆಯ ಆಸೆಗಾಗಿ ಹೋಟೆಲಿನ ಕಡಗೆ ಮುಖ ಮಾಡಲಾರರು 

1 ಕಾಮೆಂಟ್‌:

  1. ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ತಿಂಡಿ - ಈಗೀಗ ಉತ್ತರ ದಲ್ಲೂ ಬೇಡಿಕೆ ಇದೆ.. ಇದರಲ್ಲಿ ಇರುವ ವೈವಿಧ್ಯತೆ ಅಪಾರ - ಹಾಗೂ ಇದನ್ನು ಮೆಚ್ಚದವರು ಯಾರೂ ಇರಲಾರರು. ನೀವು ಹೇಳಿದಂತೆ ಮನೆಯಲ್ಲೇ ಸಿಕ್ಕರೆ ಅದೇ ಶ್ರೇಷ್ಠ

    ಪ್ರತ್ಯುತ್ತರಅಳಿಸಿ