ಶನಿವಾರ, ಆಗಸ್ಟ್ 27, 2016

ರಿಯೋ ತಾರೆಯರು....ನಾವೆಷ್ಟು ಪ್ರೋತ್ಸಾಹಿಸಿದ್ದೆವು?


ಒಲಿಂಪಿಕ್ಸ್ ವಿಜೇತೆಯರಾದ ಪಿ.ವಿ.ಸಿಂಧು, ಸಾಕ್ಷೀ ಮಲಿಕ್- ಇಬ್ಬರನ್ನು ಈಗ ನಮ್ಮ ದೇಶದ ಮಾನವರು ಬಿಡಿ....,ಕಲ್ಲು ಮುಳ್ಳುಗಳೂ ಕೂಡಾ ಹಾಡಿ ಹೊಗಳಿ ಅಟ್ಟಕ್ಕೇರಿಸಿ ದುಡ್ಡಿನ ಅಭಿಷೇಕ ಮಾಡುತ್ತಿವೆ. ಮಾಡಬೇಕಾದದ್ದೇ ಹೌದು ಎನ್ನೋಣ. ಅವರ ಸಾಧನೆ ಮಟ್ಟದಲ್ಲಿದೆ. ಅದರಲ್ಲಿ ಎರಡು ಮಾತಿಲ್ಲ. ದೀಪ ಕರ್ಮಕಾರ್, ಲಲಿತ ಬಬರ್ ಅವರು ಪದಕ ಗಳಿಸದಿದ್ದರೇನಂತೆ? ಅತ್ಯುತ್ತಮ ಸಾಧನೆ ಮಾಡಿ ದೇಶದ ಹೆಮ್ಮೆಯ ಪುತ್ರಿಯರೆನಿಸಿದ್ದಾರೆ. ಆದರೆ ಸರಕಾರ,ಸರಕಾರೇತರ  ಸಂಘಟನೆಗಳು ಮತ್ತು ಇತರ ಸಿರಿವಂತ ವ್ಯಕ್ತಿಗಳು ಕೊಡುತ್ತಿರುವ ಈ ದೇಣಿಗೆಗಳು ಮೊದೆಲೇ ಈ ಕ್ರೀಡಾಪಟುಗಳಿಗೆ ಒದಗಿಬರುತ್ತಿದ್ದರೆ....?   

ಪುಸರ್ಲ ವೆಂಕಟ ಸಿಂಧೂ(ಪಿ.ವಿ.ಸಿಂಧು)- 1995ರಲ್ಲಿ ಹೈದರಾಬಾದಿನಲ್ಲಿ ಜನಿಸಿದ ಈಕೆಯ ಹೆತ್ತವರಿಬ್ಬರೂ ಮಾಜಿ ವಾಲಿಬಾಲು ಆಟಗಾರರು. ಕ್ರೀಡಾ ಕ್ಷೇತ್ರದಲ್ಲಿದ್ದವರಾದುದರಿಂದ ಮಗಳ ಆಸಕ್ತಿಯನ್ನು ಎಳವೆಯಲ್ಲಿಯೇ ಗುರುತಿಸಿ ಪ್ರೋತ್ಸಾಹಿಸಿದರು. ತನ್ನ ಎಂಟನೇ ವಯಸ್ಸಿನಲ್ಲಿ ಬ್ಯಾಟ್ ಮಿಂಟನ್ ತರಬೇತಿಯಲ್ಲಿ ತೊಡಗಿಕೊಂಡ ಈಕೆ ಮುಂದೆ ಹೈದರಾಬಾದಿನ ಪುಲ್ಲೇಲ ಗೋಪಿಚಂದ್ ಬ್ಯಾಟ್ಮಿಂಟನ್ ತರಬೇತಿ ಕೇಂದ್ರಕ್ಕೆ ಸೇರಿಕೊಂಡಳು. ಇಲ್ಲಿ ಅವಳು ಎದುರಿಸಿದ ಅಗ್ನಿ ದಿವ್ಯಗಳೆಷ್ಟೋ....ಸಹಿಸಿದ ಬೈಗುಳಗಳೆಷ್ಟೋ....ಕಠಿಣ ತರಬೇತುದಾರರೆಂದೇ ಗುರುತಿಸಲ್ಪಟ್ಟ ಗೋಪೀಚಂದ್ ಅವರು ಮುಂಜಾನೆಯ ನಾಲ್ಕು ಗಂಟೆಯ ಹೊತ್ತಿಗೆ ತನ್ನ ಕೆಲಸಕ್ಕೆ ತಯಾರಾಗಿ ಬರುತ್ತಿದ್ದರು. ಆಯ್ದ ವಿದ್ಯಾರ್ಥಿಗಳು ಹೊತ್ತಿಗೆ ಕೈಯ್ಯಲ್ಲಿ ಬ್ಯಾಟು ಹಿಡಿದು ಲವಲವಿಕೆಯಿಂದ ಆಟಕ್ಕೆ ಸಿದ್ದರಾಗಬೇಕು. ಸಿಂಧುವಿನ ಮನೆ ತರಬೇತಿ ಕೇಂದ್ರದಿಂದ 56 ಕಿ.ಮೀ. ದೂರದಲ್ಲಿದೆ. ಪ್ರತಿ ನಿತ್ಯ ಸ್ವತಃ ತಂದೆಯೇ ಅವಳನ್ನು ತರಬೇತಿಗಾಗಿ ಕರೆದು ತರುತ್ತಾರೆ. ಸಿಂಧುವಿನ ಪ್ರಾಯದ ಮಕ್ಕಳೆಲ್ಲಾ ದಪ್ಪ ರಗ್ಗಿನೊಳಗೆ ಸುಖ ನಿದ್ದೆ, ಸವಿ ಕನಸುಗಳಲ್ಲಿ ಕಳೆದು ಹೋಗುತ್ತಿದ್ದಾಗ ಈಕೆ ಲೀಟರುಗಟ್ಟಲೆ ಬೆವರು ಸುರಿಸುತ್ತಾ ಬೆವರಿನೊಂದಿಗೆ ಕಣ್ಣೀರೂ ಜೊತೆಯಾದುದನ್ನು ಯಾರಿಗೂ ಕಾಣದಂತೆ ಒರೆಸುತ್ತಾ ಆಟ ಆಡುತ್ತಿದ್ದಳು. ಬ್ಯಾಟ್ ಮಿಂಟನ್ ಅವಳಿಗೆ ಬಲವಂತದ ಮಾಘ ಸ್ನಾನ ಅಲ್ಲ, ಚಿಕ್ಕಂದಿನಿಂದ ಗೋಪಿಚಂದ್ ಆಟವನ್ನು ನೋಡುತ್ತಾ ಆರಾಧಿಸುತ್ತಾ ಬೆಳೆದವಳಿಗೆ ಅವರೇ ರೋಲ್ ಮಾಡೆಲ್. ಅವರಂತೆಯೇ ತಾನೂ ಬಹು ದೊಡ್ಡ  ಆಟಗಾರ್ತಿಯಾಗಬೇಕೆಂಬ ಕನಸು. ಕನಸನ್ನು ನನಸು ಮಾಡುವ ಹಾದಿ ಎಂತಹ ಕಠಿಣವಾದುದು ಎಂಬ ಅರಿವಿದ್ದೇ ಅವಳದನ್ನು ಆಯ್ದುಕೊಂಡಳು. ತನ್ನ ಗುರುವಿನ ಮಾತೇ ಅವಳಿಗೆ ವೇದ ವಾಕ್ಯ. ಅದನ್ನೆಂದೂ ಮೀರಿದವಳಲ್ಲ. ಹನ್ನೆರಡು ವರ್ಷಗಳಿಂದ ಆಕೆ ತನ್ನ ಅಚ್ಚುಮೆಚ್ಚಿನ ಚಾಕೊಲೇಟುಗಳು, ಸಿಹಿತಿನಸುಗಳು, ಹೈದರಾಬಾದಿ ಬಿರಿಯಾನಿಗಳ ಕಡೆಗೆ ಕಣ್ಣೂ ಹಾಯಿಸಿಲ್ಲ! ಕನಸು ಮನಸುಗಳಲ್ಲೂ ಹಗಲು ರಾತ್ರಿಗಳಲ್ಲೂ ಒಂದೇ ಧ್ಯಾನ...,ಬ್ಯಾಟ್ ಮಿಂಟನ್. ಇಂತಹ ಏಕಾಗ್ರ ತಪಸ್ಸಿಗೆ ಫಲ ದೊರಕಲೇ ಬೇಕಲ್ಲವೇ?
2009 ರಲ್ಲಿ ಕೊಲಂಬೋದಿಂದ ತೊಡಗಿದ ಅವಳ ಜೈತ್ರ ಯಾತ್ರೆಯ ಹಾದಿಯಲ್ಲಿ ಹಲವಾರು ಪದಕಗಳು, ಪ್ರಶಸ್ತಿಗಳು ಅವಳ ಮಡಿಲಿಗೆ ಬಂದು ಬಿದ್ದುವು. ಇವುಗಳಲ್ಲಿ ಪದ್ಮಶ್ರೀ ಪುರಸ್ಕಾರ, ಅರ್ಜುನ ಪ್ರಶಸ್ತಿಯೂ ಸೇರಿಕೊಂಡಿದೆ. ಒಲಿಂಪಿಕ್ ಪೋಡಿಯಮ್ (ಪ್ರಶಸ್ತಿ ಸ್ವೀಕರಿಸುವ ಮೂರು ಮೆಟ್ಟಲುಗಳಿರುವ ವೇದಿಕೆ) ದಲ್ಲಿ ನಿಲ್ಲುವ ಮೂರು ಜೋಡಿ ಪಾದಗಳಲ್ಲಿ ತನ್ನದೂ ಒಂದಾಗಿರಬೇಕೆಂಬುದೇ ಪ್ರತಿ ಆಟಗಾರನ/ ಕನಸಾಗಿರುತ್ತದೆ. ಸಿಂಧೂ ಬಾಲ್ಯದಿಂದಲೇ ಕನಸನ್ನು ಪೋಶಿಸಿಕೊಂಡು ಬಂದವಳು. ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರೈಲ್ವೇ ಇಲಾಖೆಯ ತನ್ನ ಕೆಲಸಕ್ಕೆ ಎಂಟು ತಿಂಗಳುಗಳ ಕಾಲ ರಜೆ ಹಾಕಿದ ಆಕೆಯ ತಂದೆ ಮಗಳ ಒಲಿಂಪಿಕ್ಸ್ ತಯಾರಿಗೆ ಜೊತೆಯಾದರು. ಮಗಳೊಡನೆ ತರಬೇತಿ, ಆಟ, ವ್ಯಾಯಾಮ ಇತ್ಯಾದಿಗಳ ಕುರಿತಾಗಿ ವಿಚಾರ ವಿನಿಮಯ, ಎಡೆಬಿಡದೆ ಆಕೆಯೊಡನೆಯ ಸಾಂಗತ್ಯ ಅವಳೊಳಗಿನ ಒತ್ತಡವನ್ನು ಕಡಿಮೆಗೊಳಿಸುವಲ್ಲಿ ಸಹಾಯ ಮಾಡಿತು. ಏಕಾಗ್ರ ಮನಸ್ಸು, ಗುರಿಯೆಡೆಗಿನ ಕಠಿಣಾತಿಕಠಿಣ ಹಾದಿ, ವಯೋಸಹಜವಾದಂತಹ ಮನರಂಜನೆಗಳ ತ್ಯಾಗ..,ಇವೆಲ್ಲವೂ ಆಕೆಯನ್ನು ಒಲಿಂಪಿಕ್ಸ್ ಪೋಡಿಯಮ್ ಮೇಲೆ ತಂದು ನಿಲ್ಲಿಸಿತು. ಅದುವರೆಗೂ ಬಿಂದುವಾಗಿದ್ದವಳು ರಜತ ಸಿಂಧುವಾದಳು. ಆದರೆ ಇಲ್ಲಿ ಒಂದು ಅಂಶವನ್ನು ನಾವು ಗಮನಿಸಬೇಕು. ಸಿಂಧೂ ಮುಖದಲ್ಲಿ ಸಾಕ್ಷೀ ಮಲಿಕ್ ಮುಖದಲ್ಲಿ ಉಕ್ಕಿ ಹರಿದಂತಹ ಸಂತಸ ಉಕ್ಕಿ ಹರಿದಿರಲಿಲ್ಲ! ಯಾಕೆ ಗೊತ್ತೇನು? ಸಿಂಧೂ ಚಿನ್ನದ ಪದಕ್ಕಾಗಿ ಹೋರಾಡಿದ್ದಳು. ಅದು ದೊರೆತಿಲ್ಲವಾದುದರಿಂದ ರಜತಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯ್ತು. ಸಾಕ್ಷಿಗೆ ಗೆಲ್ಲುವುದೊಂದೇ ಗುರಿಯಾಗಿತ್ತು. ಗೆದ್ದಳು. ಕಂಚಿನ ಪದಕವನ್ನು ಅತ್ಯಂತ ಆಪ್ಯಾಯತೆಯಿಂದ ಅಪ್ಪಿಕೊಂಡಳು.
ಸಾಕ್ಷೀ ಮಲಿಕ್- ಇಪ್ಪತ್ತಮೂರು ವರ್ಷದ ಹರ್ಯಾಣ  ರಾಜ್ಯದ ಪುಟ್ಟ ಹಳ್ಳಿಯೊಂದರ ಹುಡುಗಿ ಈಕೆ. ತಂದೆ ತಾಯಿ ಬಡ ಕೃಷಿಕರು. ಸಾಕ್ಷೀ ಶಾಲಾ ದಿನಗಳಲ್ಲಿ ಕುಸ್ತಿಯ ಬಗ್ಗೆ ಆಸಕ್ತಿ ತೋರಿಸಿದಾಗ ಮೂಗು ಮುರಿದು ವ್ಯಂಗ್ಯವಾಡಿ `ನೀನು ಹೆಣ್ಣು, ಕುಸ್ತಿ ಮಾಡಬೇಕಾದವರು ಗಂಡಸರು' ಎಂದು ಆಕೆಯನ್ನು, ಆಕೆಯ ಮಹತ್ವಾಕಾಂಕ್ಷೆಯನ್ನು ದಮನಿಸಲು ನೋಡಿದವರೇ ಇಂದು ಅವಳ ಸಾಧನೆಯನ್ನು ನೋಡಿ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಸಮಾಜದ ಭತ್ರ್ಸನೆಗಳ ನಡುವೆಯೂ ತಂದೆ ತಾಯಂದಿರು ಎದೆಗುಂದಲಿಲ್ಲ. ಮಗಳ ಆಸೆಗೆ ನೀರೆರೆದು ಪೋಷಿಸಿದರು. ತನ್ನ ಹನ್ನೆರಡನೇ ವಯಸ್ಸಿನಿಂದ ಕುಸ್ತಿಯ ಆಖಾಡಕ್ಕಿಳಿದ ಈಕೆಯ ಸಾಧನೆ ಒಲಿಂಪಿಕ್ಸ್ ಕೂಟದಲ್ಲಿ ಜಗಜ್ಜಾಹೀರಾಯ್ತು. ಅದಕ್ಕೂ ಮೊದಲೇ 2002 ರಿಂದಲೇ ಈಕೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಬೇಟೆಯಾಡಲು ತೊಡಗಿದ್ದಳು. ಈಶ್ವರ್ ದಹಿಯಾ ಈಕೆಯ ತರಬೇತುದಾರ. ಓರ್ವ ಹೆಣ್ಣು ಮಗಳಿಗೆ ಕುಸ್ತಿ ತರಬೇತಿ ನಿಡುವುದರಿಂದ ಈತನನ್ನು ತಡೆಯಲು ಪಂಚಾಯ್ತಿ ಕಟ್ಟೆ ಹಾಗೂ ಇನ್ನಿತರ ಹಲವು ಮಾಧ್ಯಮಗಳು ಪ್ರಯತ್ನಿಸಿ ಸೋತವು. ಸಾಕ್ಷಿ ಚಿಕ್ಕಂದಿನಿಂದಲೂ ಹುಡುಗರೊಡನೆಯೇ ಅಭ್ಯಾಸ ಮಾಡಬೇಕಾಗಿತ್ತು! ಯಾಕೆಂದರೆ ಊರಿನಲ್ಲಿ ಕುಸ್ತಿಯ ಬಗ್ಗೆ ಆಸಕ್ತಿ ತೋರಿದ್ದು ಈಕೆಯೊಬ್ಬಳೇ! ಪುರುಷ ಪ್ರಧಾನ ಸಮಾಜದಲ್ಲಿ ಪುರುಷರೊಂದಿಗೇ ಕುಸ್ತಿ ಮಾಡಿ ತನ್ನ ಅಸ್ತಿತ್ವವನ್ನು ಒರೆಗೆ ಹಚ್ಚಿ ಯಶಸ್ವಿಯಾದ ಸಾಕ್ಷೀ ದಮನಿತ ಮಹಿಳೆಯರ ರೋಲ್ ಮಾಡೆಲ್ ಆಗಬಲ್ಲಳು. ಭೂಮಿಯವರೆಗೆ ಬಾಗಿ ಪುಟಿದೆದ್ದ ಈಕೆಗೆ ದೊರೆತ ಒಲಿಂಪಿಕ್ ಪದಕ ಅದು ಪದಕವಲ್ಲ. ಹರ್ಯಾಣದ ಪುರುಷ ಪ್ರಧಾನ ಸಮಾಜದ ಮುಖಕ್ಕೆ ಹಿಡಿದಂತಹ ಕಂಚಿನ ಜಾಗಟೆ.
ಲಲಿತ ಬಬರ್- ಸ್ಥಳೀಯವಾಗಿ `ಮಾನ್ ದೇಶೀ ಎಕ್ಸ್ ಪ್ರೆಸ್' ಎಂದೇ ಗುರುತಿಸಲ್ಪಡುವ ಈಕೆ 1989 ರಲ್ಲಿ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಮಾನ್ ಪಂಚಾಯ್ತಿನ ಮೋಹಿ ಜಿಲ್ಲೆಯಲ್ಲಿ ಜನಿಸಿದಳು. ಈಕೆಯ ಕುಟುಂಬ ಕಡುಬಡತನದ್ದು. ನಿತ್ಯದ ದುಡಿಮೆ ಹೊಲದಲ್ಲಿ. ಹೆತ್ತವರೊಂದಿಗೆ ದುಡಿಯದಿದ್ದರೆ ತುತ್ತಿನ ಚೀಲ ತುಂಬಬೇಕಲ್ಲ? ಹೊಲದ ದುಡಿತದಿಂದಾಗಿ ಶಾಲೆಯ ಸಮಯಕ್ಕೆ ಎತ್ತಲಾಗುತ್ತಿರಲಿಲ್ಲ. ಕೆಲವಾರು ಕಿಲೋಮೀಟರುಗಳಷ್ಟು ದೂರವಿರುವ ಶಾಲೆಗೆ ವಾಹನದಲ್ಲಿ ಹೋಗಬೇಕಾದರೆ ಕೈಯ್ಯಲ್ಲಿ ದುಡ್ಡು ಬೇಡವೇ? ಲಲಿತ ಕಂಡುಕೊಂಡ ಉಪಾಯವೇ ಮನೆಯಿಂದ ಶಾಲೆಗೆ ಓಟ! ಇದು ಅವಳ ದೈನಂದಿನ ದಿನಚರಿಯಾಗಿತ್ತು. ಮುಂದೆ ಅದುವೇ ಅವಳ ಜೀವನವಾಯ್ತು. ಅವಳಿರುವ ಹಳ್ಳಿಯಲ್ಲಿ ಸರಿಯಾದ ಮೈದಾನವೇ ಇರಲಿಲ್ಲ. ಗುಡ್ಡಗಾಡು ಪ್ರದೇಶವಾದ ಊರಲ್ಲಿ ಇದ್ದ ಒಂದೇ ಒಂದು ಶಾಲೆಯ ಮೈದಾನವೇ ಈಕೆಯ ಅಭ್ಯಾಸದ ಅಂಗಣವಾಯ್ತು. ಮುಂದೆ ಸ್ಟೀಪಲ್ ಚೇಸ್ (ಹಳಿಗಳು, ಬೇಲಿಗಳು ಇತ್ಯಾದಿಗಳನ್ನು ದಾಟಿ ಓಡುವ ಸ್ಪರ್ಧೆ) ಓಟಗಾರ್ತಿಯಾಗಿ ರೂಪುಗೊಂಡ ಈಕೆ 2005 ರಲ್ಲಿ ಪುಣೆಯಲ್ಲಿ ನಡೆದ ನ್ಯಾಷನಲ್ ಚ್ಯಾಂಪಿಯನ್ಶಿಪ್ ಪಂದ್ಯದಲ್ಲಿ ಮೊದಲ ಚಿನ್ನದ ಪದಕನ್ನು ತನ್ನದಾಗಿಸಿಕೊಂಡಳು. ಮುಂದೆ ನಡೆದ ಹಲವಾರು ಪಂದ್ಯಗಳಲ್ಲಿ ತನ್ನ ದಾಖಲೆಗಳನ್ನು ತಾನೇ ಮುರಿಯುತ್ತಾ ದೌಡಾಯಿಸಿದಾಕೆ ಲಲಿತಾ. ಮೊನ್ನೆ ಒಲಿಂಪಿಕ್ ಕ್ರೀಡಾಂಗಣದಲ್ಲಿ ಮಹಿಳೆಯರ 300ಮೀ. ಸ್ಟೀಪಲ್ ಚೇಸ್ ವಿಭಾಗದಲ್ಲಿ ಫೈನಲ್ ತಲುಪಿದ ಇವರ ಸಾಧನೆ ಭಾರತದ ಕ್ರೀಡಾ ಇತಿಹಾಸದಲ್ಲಿ ಮೂವತ್ತೆರಡು ವರ್ಷಗಳ ನಂತರ ದಾಖಲಾದದ್ದು (ಮಹಿಳೆಯರ ವಿಭಾಗ).   ಓಟದ ಮೊದಲ ಸುತ್ತನ್ನು ಕೇವಲ 9 ನಿಮಿಷ, 19.76 ಸೆಕೆಂಡುಗಳಲ್ಲಿ ಮುಗಿಸಿ ನಾಲ್ಕನೇ ಸ್ಥಾನ ಗಳಿಸಿದ್ದರು. ಎಂತಹ ಸಾಧಕರಿಗೇ ಆದರೂ ಕೆಲವೊಮ್ಮೆ ಅದೃಷ್ಟ ಕೈಕೊಡುವುದಿದೆ. ಇವರ ವಿಷಯದಲ್ಲಿಯೂ ಅದುವೇ ಆಗಿದ್ದುದು. ಇವರ ತರಬೇತುದಾರರಾದ ರಷ್ಯದ ನಿಕೊಲೋಯ್ ನೆಸರೇವ್ ತಮ್ಮ ವಿದ್ಯಾರ್ಥಿನಿಯ ಕಷ್ಟ ಸಹಿಷ್ಣುತೆಯ ಬಗ್ಗೆ ಅತ್ಯಂತ ಅಭಿಮಾನ ಪಡುತ್ತಾರೆ. ಮತ್ತು ಭವಿಷ್ಯದಲ್ಲಿ ಒಲಿಂಪಿಕ್ ಚಿನ್ನ ಗಳಿಸಬಹುದಾದ ಈಕೆಯ ಸಾಮರ್ಥ್ಯದ ಬಗ್ಗೆ ಯಾವುದೇ ಅನುಮಾನ ಇಟ್ಟುಕೊಂಡಿಲ್ಲ.
ದೀಪ ಕರ್ಮಕಾರ್- ಚಿಕಿಣಿ ಹುಡುಗಿಯ ಕುರಿತು ಕಳೆದವಾರ ಸಾಕಷ್ಟು ಬರೆದಿರುವೆನಾದುದರಿಂದ ಈಗ ಅದರ ಪುನರಾವರ್ತನೆಯ ಅಗತ್ಯವಿಲ್ಲ. ಆದರೂ ಜಿಮ್ನಾಸ್ಟಿಕ್ ವಾಲ್ಟ್ ಫೈನಲ್ ತಲುಪಿದ ಧೀರೆಯ ಬಗ್ಗೆ ಒಂದೆರಡು ವಾಕ್ಯಗಳು...,ಪ್ರುಡೊನೋವಾ ವಾಲ್ಟನ್ನು ಅತ್ಯಂತ ಸಮರ್ಪಕವಾಗಿ ಪ್ರದರ್ಶಿಸಿ ಫೈನಲಿಗೆ ಲಗ್ಗೆ ಇಟ್ಟಾಕೆ. ದೂರದಿಂದ ಓಡಿ ಬಂದು ಎರಡೂ ಕೈಗಳನ್ನು ವಾಲ್ಟ್ ಮೇಲೆ ಒತ್ತಿ ನಂತರ ಕೈಗಳನ್ನು ಸ್ಪ್ರಿಂಗ್ ನಂತೆ ಕಾರ್ಯಗತಗೊಳಿಸಿ ಮೇಲಕ್ಕೆ ಜಿಗಿದು ಮೂರೂವರೆ ಸಮ್ಮರ್ ಸಾಲ್ಟ್ ಹೊಡೆದು ನೆಲದ ಮೇಲೆ ಸರಿಯಾಗಿ ನಿಲ್ಲುವುದೇ ಪ್ರುಡನೋವಾ ವಾಲ್ಟ್. ಇಡೀ ವಿಶ್ವದಲ್ಲಿ ಕೇವಲ ಐದೇ ಮಹಿಳೆಯರು ಇದನ್ನು ಸಾಧಿಸುವಲ್ಲಿ ಸಫಲರಾಗಿದ್ದಾರೆ. ದೀಪ ಅವರಲ್ಲೊಬ್ಬಳು. ಕೊನೆಯ ಹಂತದಲ್ಲಿ ಒಲಿಂಪಿಕ್ ಕ್ರೀಡಾಂಗಣ ಅವಳಿಗೆ ಸಹಕರಿಸಲಿಲ್ಲವೆಂದೇ ಹೇಳಬೇಕಷ್ಟೆ.
ಈ ಲೇಖನಕ್ಕೆ ಪೂರಕವಾಗಿ ಮಹಿಳಾ ಕ್ರೀಡಾಪಟುಗಳ ಸಾಧನೆಯ ಕಿರು ಪರಿಚಯವನ್ನಷ್ಟೇ ಕೊಟ್ಟಿದ್ದೇನೆ.  

ಲಿಂಗಾನುಪಾತ, ಭ್ರೂಣ ಹತ್ಯೆ, ನಿರ್ಭಯಾ ಪ್ರಕರಣಗಳು, ಮನೆಯೊಳಗಡೆಯೇ ನಡೆಯುವ ಸ್ತ್ರೀ ಶೋಷಣೆಗಳು....ಇವೆಲ್ಲವುಗಳ ಹೊರತಾಗಿಯೂ ನಮ್ಮ ದೇಶದ ಹೆಣ್ಣು ಮಕ್ಕಳು ಬಹಳಷ್ಟನ್ನು ಸಾಧಿಸಿ ತೋರಿಸಿದ್ದಾರೆ, ತೋರಿಸುತ್ತಲೂ ಇದ್ದಾರೆ, ಇನ್ನು ಮುಂದೆಯೂ ಅದು ನಡೆಯುತ್ತಿರುತ್ತದೆ. ಆದರೆ ಸಾಧನೆಗಳ ಹಿಂದೆ ನಮ್ಮ ಅಂದರೆ ಸಮಾಜದ ಪಾತ್ರವೆಷ್ಟಿದೆ? ಅದರಲ್ಲೂ ಕ್ರೀಡಾ ಕ್ಷೇತ್ರದಲ್ಲಿ ಹೆಂಗಳೆಯರು ಮಿಂಚಲು ಪ್ರಯತ್ನಿಸುವುದನ್ನು ಸಮಾಜ ನೋಡುವ ದೃಷ್ಟಿಯೇ ಬೇರೆ ತೆರನಾದದ್ದು. ಉದಾಹರಣೆ ನೋಡಿ, ಸಿಂಧೂವಿನ ಅಮ್ಮ ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ, "ಸಿಂಧೂ ಒಲಂಪಿಕ್ಸ್ ಪದಕ ಗಳಿಸುವವರೆಗೂ ನೆಂಟರು, ಇಷ್ಟರು ನಿಮ್ಮ ಮಗಳು ಏನು ಓದುತ್ತಿದ್ದಾಳೆ ಎಂದು ಕೇಳುವಾಗಲೆಲ್ಲಾ ಆಕೆ ಬ್ಯಾಟ್ಮಿಂಟನ್ ಆಟಗಾರ್ತಿ ಎನ್ನುವಾಗ ನನ್ನ ನಾಲಿಗೆ ತಡವರಿಸುತ್ತಿತ್ತು. ಯಾಕೆಂದರೆ ಮಾತು ಕೇಳಿದ ತಕ್ಷಣ ಅವರ ಮುಖಭಾವವೇ ಬದಲಾಗಿ ಹೋಗುತ್ತಿತ್ತು..." ಕ್ರೀಡೆಯನ್ನು ನಮ್ಮ ಸಮಾಜ ಯಾವ ದೃಷ್ಟಿಯಿಂದ ನೋಡುತ್ತಿದೆ ಎಂದರಿಯಲು ಒಂದು ವಾಕ್ಯ ಸಾಲದೇ? ನಮ್ಮ ಮನಸ್ಥಿತಿ ಹೇಗಿದೆಯೆಂದರೆ ಡಾಕ್ಟರು, ಇಂಜಿನಿಯರು ಅಥವಾ ಇನ್ನ್ಯಾವುದೋ ಸರಕಾರೀ ಹುದ್ದೆಯಾದರೆ ಅದು ಮಾನವಂತ ಕಸುಬು, ಕ್ರೀಡೆಯಂತಹ ಅಸ್ಥಿರ ಕ್ಷೇತ್ರವನ್ನು ಆಯ್ದುಕೊಂಡವರು ವಿದೇಶದ ಯಾವುದಾದರೂ ಪ್ರಶಸ್ತಿಯೋ ಸನ್ಮಾನವೋ ದೊರಕಿಸಿಕೊಂಡರೆ ಆಗ ಅವರೆಡೆಗೆ ನಾವು  ಗೌರವ ಭಾವದಿಂದ ನೋಡುತ್ತೇವೆ.  ಮೇಲೆ ಹೇಳಿದ ನಾಲ್ಕು ಮಂದಿಯೂ ಪ್ರಾಯೋಗಿಕ ಹಂತದಲ್ಲಿ ದೈಹಿಕ, ಮಾನಸಿಕ, ಆರ್ಥಿಕ ಪ್ರೋತ್ಸಾಹ ದೊರೆಯದೆ ಬಳಲಿದವರೇ. ನಾವು ಕ್ರೀಡಾಪಟುಗಳ ಗೆಲುವನ್ನು ಆರಾಧಿಸುತ್ತೇವೆ ಆದರೆ ಗೆಲ್ಲುವಂತಹ ಪ್ರೋತ್ಸಾಹ ನೀಡಬೇಕಾದ ಸಂದರ್ಭದಲ್ಲಿ ಅವರ ವೈಯಕ್ತಿಕ ವಿಷಯಗಳನ್ನೆತ್ತಿ ಕುಹುಕವಾಡುತ್ತಿರುತ್ತೇವೆ. ಇತ್ತೀಚೆಗೆ ವಾಟ್ಸಾಪಲ್ಲಿ  ನಮ್ಮ ದೇಶದ ಒಲಿಂಪಿಕ್ ಕ್ರೀಡಾಪಟುಗಳ ಆರಂಭಿಕ ವೈಫಲ್ಯದ ಬಗ್ಗೆ ಹರಿದಾಡುತ್ತಿದ್ದ ಕೀಳುಮಟ್ಟದ ಜೋಕುಗಳೇ ಅದಕ್ಕೆ ಉದಾಹರಣೆ. ಅಮೇರಿಕಾ, ಚೀನಾದಂತೆ ನಮ್ಮ ಕ್ರೀಡಾಳುಗಳು ಚಿನ್ನದ ಪದಕಗಳನ್ನು ಬಾಚದಿರಲು ಏನು ಕಾರಣ? ಭಾರತದ ಕ್ರೀಡಾಪಟುಗಳಿಗೆ ಕ್ರೀಡೆ ಎನ್ನುವುದು ಹವ್ಯಾಸ ಮಾತ್ರ. ವೃತ್ತಿ ಬೇರೆಯೇ ಇರುತ್ತದೆ. ಕ್ರೀಡೆಯನ್ನು ವೃತ್ತಿಯಾಗಿ ಸ್ವೀಕರಿಸಿದಾಗ ಅಪಯಶಸ್ಸು ಎದುರಾಯ್ತೋ ಮತ್ತೆ ಅವಳು/ನು ಯಾರಿಗೂ ಬೇಡದವನಾಗಿಬಿಡುತ್ತಾಳೆ/ನೆ. ಮಾತ್ರವಲ್ಲ ಕುಟುಂಬ ಮಾತ್ರದಿಂದ ಅವರ ಅಭ್ಯಾಸದ ದುಬಾರಿ ಖರ್ಚನ್ನು ನಿಭಾಯಿಸಲೂ ಸಾಧ್ಯವಿಲ್ಲ. ಒಂದು ವೇಳೆ ಯಶಸ್ವಿ ಆಟಗಾರ/ರ್ತಿ ಯನ್ನು ಕಂಪೆನಿಯೊಂದು ದತ್ತು ತೆಗೆದುಕೊಂಡಿತು ಎಂದೇ ಇಟ್ಟುಕೊಳ್ಳೋಣ. ಯಾವಾಗ ಅವರ ಸಾಧನೆಯ ರ್ಯಾಂಕಿಂಗ್  ಕೆಳ ಮಟ್ಟಕ್ಕಿಳಿಯುತ್ತದೋ  ಕ್ಷಣದಿಂದ ಅವರಿಗೆ ಎಳ್ಳು ನೀರು ಬಿಟ್ಟು ಆ ಕಂಪೆನಿ ಕೈ ತೊಳೆದುಕೊಂಡಿತು ಎಂದೇ ಅರ್ಥ. ಆದುದರಿಂದಲೇ ನಮ್ಮ ಕ್ರೀಡಾಳುಗಳಿಗೆ ಕ್ರೀಡೆ ಎನ್ನುವುದು ಹವ್ಯಾಸವಷ್ಟೇ. ಸಿಂಧೂವಿನ ಹೆತ್ತವರಂತೆ ಮಕ್ಕಳ ಕ್ರೀಡಾಭವಿಷ್ಯಕ್ಕಾಗಿ ಸ್ವಂತ ಕಸುಬಿನ ಸುರಕ್ಷಾ ಕವಚವನ್ನು ಕಡಿದೊಗೆದು ಹೊರಬರಲು ತಯಾರಿರುವಂತಹ ಹೆತ್ತವರು ನಮ್ಮಲ್ಲಿ ಎಷ್ಟು ಜನರಿದ್ದಾರೆ? `ನೀನು ಹೆಣ್ಣು....ನಿನ್ನಿಂದ ಅದು ಸಾದ್ಯವಿಲ್ಲ....' ಎಂಬ ಋಣಾತ್ಮಕ ನುಡಿಗಳನ್ನು ಮೀರಿ ಪ್ರತಿಯೊಬ್ಬ ಮಹಿಳಾ ಕ್ರೀಡಾಪಟುವೂ ಬೆಳೆಯಬೇಕು, ಚಿನ್ನದ ಪದಕಕ್ಕೆ ಕೊರಳೊಡ್ಡಬೇಕು ಎಂದರೆ ಅದರಲ್ಲಿ ಸಮಾಜದ ಜವಾಬ್ದಾರಿಯೂ ಬಹಳಷ್ಟಿದೆ
ಈಗ ಅವರ ಪದತಲದಲ್ಲಿ ಹೊರಳಾಡುತ್ತಿರುವ ಆ ನೋಟಿನ ಕಂತೆಗಳು ಅಭ್ಯಾಸದ ಹಂತದಲ್ಲಿ ದೊರೆಯುತ್ತಿದ್ದರೆ ನಾಲ್ಕು ಚಿನ್ನದ ಪದಕಗಳು ಭಾರತಾಂಬೆಯ ಕೊರಳನ್ನಲಂಕರಿಸಿರುತ್ತಿತ್ತು.                 

                                            

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ