`ನನ್ನ ಮಕ್ಕಳಿಗೆ ಒಬ್ಬೊಬ್ಬರಿಗೂ ದಿನಾಲೂ ಬೇರೆ ಬೇರೆ
ತಿಂಡಿಯೇ ಆಗಬೇಕು. ಇಡ್ಲಿ, ದೋಸೆ
ಎಲ್ಲ ಅವರು ಮುಟ್ಟಿಯೂ ನೋಡುವುದಿಲ್ಲ.
ಮಗನಿಗೆ ಬ್ರೆಡ್ ಆಮ್ಲೆಟ್ ಇಷ್ಟ
ಎಂದು ಇವತ್ತು ಅದನ್ನು ಮಾಡಿದೆ.
ಮಗಳು ಅದು ಬೇಡವೇ ಬೇಡ
ಎಂದು ಹಟ ಹಿಡಿದಳು. ಅವಳಿಗೆಂದೇ ನ್ಯೂಡಲ್ಸ್ ಮಾಡಿ ಕೊಟ್ಟೆ. ನಾವು
ಚಿಕ್ಕದಿರುವಾಗ ನಮ್ಮ ಬೇಕು ಬೇಡಗಳನ್ನು
ಕೇಳುವವರ್ಯಾರಿದ್ದರು? ಈಗ ಕೈಯ್ಯಲ್ಲೂ ಬೇಕಾದಷ್ಟು
ದುಡ್ಡಿದೆ, ಇರೋರು ಇಬ್ಬರೇ ಮಕ್ಕಳು.
ಅವರಿಗಲ್ಲದೆ ಇನ್ಯಾರಿಗೆ ಖರ್ಚು ಮಾಡಲಿ ಹೇಳಿ...?" ಕೆಲವು ವರ್ಷಗಳ ಹಿಂದೆ ಪರಿಚಯದ
ಮಹಿಳೆಯೊಬ್ಬರು ಹೀಗೆ ಹೆಮ್ಮೆಯಿಂದ ನನ್ನೊಡನೆ
ಹೇಳಿದ್ದರು. ಮೊನ್ನೆ ಮೊನ್ನೆ ಅವರನ್ನು
ಅಕಾಸ್ಮಾತ್ತಾಗಿ ಭೇಟಿಯಾಗಿದ್ದೆ. `ಮಕ್ಕಳು ಏನು ಓದುತ್ತಿದ್ದಾರೆ?'
ಕೇಳಿದೆ. ಆಕೆಯ ಮುಖ ಇಳಿದೇ
ಹೋಯ್ತು. `....ಕಣ್ಗೊಂಬೆಯಂತೆ ಸಾಕಿದ್ದೆವು ನೋಡಿ. ಎಸ್.ಎಸ್.ಎಲ್.ಸಿ. ಯಲ್ಲಿ
ಚೆನ್ನಾದ ಮಾರ್ಕ್ಸ್ ಬಂದಿತ್ತು...ನಮ್ಮ ಜೊತೆಯಲ್ಲೇ ಇದ್ದು
ಮುಂದೆ ಓದು ಎಂದು ಬೇಡಿಕೊಂಡಿದ್ದೆವು.
ಪ್ರೆಂಡ್ಸೆಲ್ಲಾ ಹಾಸ್ಟೆಲಲ್ಲಿ ನಿಂತು ಓದ್ತಿದ್ದಾರೆ ಎಂದು
ಹಟ ಹಿಡಿದು ತಾನೂ ಹಾಸ್ಟೆಲಿಗೆ
ಸೇರಿಕೊಂಡಳು, ಒಂದು ರೂಮಲ್ಲಿ ಮೂವರು
ಹುಡುಗಿಯರಂತೆ. ರಾಣಿಯ ಹಾಗೆ ಮನೆಯಲ್ಲಿದ್ದವಳಿಗೆ
ಆ ಕಿಷ್ಕಿಂದೆಯಲ್ಲಿ ಹೊಂದಿಕೆಯಾಗಲೇ
ಇಲ್ಲ. ಅದೇನಾಯ್ತೋ ಗೊತ್ತಿಲ್ಲ. ತೀರಾ ಮಂಕಾಗಿಬಿಟ್ಟಳು. ಓದು,
ಊಟ, ನಿದ್ದೆ ಯಾವುದೂ ಇಲ್ಲದೆ
ಅಳುತ್ತಲೇ ಇರುತ್ತಾಳೆ. ಚಿಕತ್ಸೆ ನಡೀತಾ ಇದೆ...'
ಎಂದು ತುಂಬಾ ಬೇಸರದಲ್ಲಿ ಹೇಳಿಕೊಂಡರು.
ಅವರ ಮಾತುಗಳಲ್ಲಿದ್ದ `ರಾಣಿಯ ಹಾಗೆ....' ಎನ್ನುವ
ಪದ ಪ್ರಯೋಗವೇ ಅವರ ಮನಸ್ಥಿತಿಯನ್ನು ಎತ್ತಿ
ತೋರಿಸುತ್ತಿತ್ತು ಮತ್ತು ಮಗಳ ಜೀವನದ
ದುರಂತಕ್ಕೆ ಅದುವೇ ಕಾರಣವೆಂದರೆ ಅವರು
ಒಪ್ಪಿಕೊಂಡಾರೇ...? ಮನುಷ್ಯ ಮೂಲತಃ ಸಂಘಜೀವಿ.
ಸುಖ ದುಃಖ ವಿನಿಮಯ, ಕೊಟ್ಟು
ಕೊಳ್ಳುವಿಕೆ, ನಕ್ಕು ನಗಿಸುವುದು....ಇವುಗಳೆಲ್ಲಾ
ಪ್ರತಿಯೊಬ್ಬನ ಜೀವನ ವಿಧಾನವಾದಾಗಲೇ ಅದು
ಸಹಜ ಎನಿಸುತ್ತದೆ. ಈ ಎಲ್ಲಾ ಗುಣಗಳನ್ನು
ಮೈಗೂಡಿಸಿಕೊಳ್ಳಲು ಮನೆಗಿಂತ ಉತ್ತಮ ಜಾಗ
ಇನ್ನೊಂದಿಲ್ಲ. ಮನೆ ಮಂದಿ ಪರಸ್ಪರ
ಸೇರಿಕೊಂಡು ಮಾಡುವ ಅಡುಗೆ, ಅದನ್ನು
ಜೊತೆಯಲ್ಲಿ ಕುಳಿತು ಉಣ್ಣುವ ಆ
ಎರಡು ಕ್ರಿಯೆಗಳಿವೆಯಲ್ಲಾ...? ನಮ್ಮ ವ್ಯಕ್ತಿತ್ವದ ಬೆಳವಣಿಗೆಯಲ್ಲಿ
ಮಹತ್ತರ ಪಾತ್ರವನ್ನು ವಹಿಸುತ್ತವೆ.
ನಾವೆಲ್ಲಾ
ಚಿಕ್ಕದಿರುವಾಗ ಡೈನಿಂಗ್ ಟೇಬಲ್ ಅಷ್ಟಾಗಿ
ಬಳಕೆಗೆ ಬಂದಿರಲಿಲ್ಲ. ಡೈನಿಂಗ್ ಹಾಲ್ ಅಂತೂ
ಇರಲೇ ಇಲ್ಲ. ಮನೆಯಲ್ಲಿ ಎಂಟ್ಹತ್ತು
ಜನರು. ಅಡುಗೆ ಕೋಣೆಗೆ ತಾಗಿದಂತೆ
ಉದ್ದದ ಕೋಣೆಯೊಂದಿರುತ್ತಿತ್ತು. ಅಲ್ಲೇ ನಮ್ಮೆಲ್ಲರ ಊಟ,
ತಿಂಡಿಗಳ ಸಮಾರಾಧನೆಯಾಗುತ್ತಿತ್ತು. ಆಗೆಲ್ಲಾ ಮನೆಯಲ್ಲಿ ಅತಿಥಿಗಳು ಸರ್ವೇಸಾಮಾನ್ಯವಾಗಿ ಇದ್ದೇ ಇರುತ್ತಿದ್ದರು. ರಾತ್ರಿ ಹೊತ್ತು ಅವರಿಗದು
ಮಲಗುವ ಕೋಣೆಯೂ ಆಗಿರುತ್ತಿತ್ತು. ಆ
ಕೋಣೆಯಿಂದ ಕಾಲು ಹೊರಕ್ಕಿಡುವುದೇ ಹಿಂಬದಿಯ
ಅಂಗಳಕ್ಕೆ. ಆದುದರಿಂದ ಈ ಕೋಣೆಯನ್ನು ಊಟದ
ಜಗಲಿ ಎನ್ನುತ್ತಿದೆವು. ಬಡಿಸುವ ಜವಾಬ್ದಾರಿ ಹೊತ್ತುಕೊಳ್ಳುತ್ತಿದ್ದ
ಅಮ್ಮ ಮತ್ತು ಚಿಕ್ಕಮ್ಮನನ್ನು ಹೊರತುಪಡಿಸಿ
ಮನೆಯ ಸದಸ್ಯರೆಲ್ಲರೂ ಒಟ್ಟಿಗೇ ಊಟಕ್ಕೆ ಕುಳಿತುಕೊಳ್ಳುತ್ತಿದ್ದೆವು.
ರೋಗಿಗಳ ಚಿಕಿತ್ಸೆಯೇ ದೇವರ ಕೆಲಸ ಎಂಬಂತೆ
ದಿನದ ಹೆಚ್ಚಿನ ಹೊತ್ತೂ ಆಸ್ಪತ್ರೆಯಲ್ಲೇ
ಇರುತ್ತಿದ್ದ ನಮ್ಮ ತಂದೆ, ಚಿಕ್ಕಪ್ಪಂದಿರು
ಆರಾಮವಾಗಿ ನಮ್ಮೊಡನೆ ಮಾತನ್ನಾಡುತ್ತಿದ್ದುದು ಊಟಕ್ಕೆ ಕುಳಿತಾಗಲೇ. ನಮ್ಮಮ್ಮನ
ಅಡುಗೆಯೆಂದರೆ ಅದು ರಸಕವಳ. ಅದರ
ಜೊತೆಜೊತೆಗೆ ಸಾಹಿತ್ಯ, ಕಲೆ, ಆಟ ಅಥವಾ
ಅಂದಿನ ಅಡುಗೆಯ ಬಗೆಗೇ ಇರಬಹುದು,
ಅದೂ ಅಲ್ಲದಿದ್ದರೆ ನಮ್ಮ ನಮ್ಮ ಶಾಲೆ
ಕಾಲೇಜುಗಳ ಕುರಿತೂ ಇರಬಹುದು......ನಮ್ಮ
ಮಾತುಗಳು ಮಳೆಗಾಲದ ಜೋಗದಂತೆ ಧೋ...ಎಂದು ಸುರಿಯುತ್ತಿದ್ದುವು.
ತಂದೆ ಮತ್ತು ಚಿಕ್ಕಪ್ಪ ನಮ್ಮ
ಕೇಳುಗರು. ನಮ್ಮ ಮಾತುಗಳನ್ನಾಲಿಸುತ್ತಾ ತಮ್ಮದನ್ನೂ
ಸೇರಿಸುತ್ತಾ ಅದಕ್ಕೆ ರಂಗನ್ನೀಯುತ್ತಿದ್ದರು. ಅಮ್ಮನ
ಕೈಯ್ಯ ರಸಕವಳ ಮತ್ತು ಈ
ಪರಸ್ಪರ ಮಾತುಗಳಿಂದುಂಟಾದ ರಸನಿಮಿಷಗಳು.... ಇವೆರಡೂ ಸೇರಿ ಒಂದು
ವಿನೂತನ ರುಚಿ ನಮ್ಮ ಹೊಟ್ಟೆ
ಹಾಗೂ ಮನಸ್ಸುಗಳನ್ನು ತಣಿಸುತ್ತಿದ್ದುವು. ನಮ್ಮ ಮಾತುಗಳಿಗೆ ಹಿರಿಯರು
ಕಿವಿಯಾಗುವಾಗ ನಮಗೆ ಆನೆಯ ಬಲ
ಬರುತ್ತಿತ್ತು. ತಂದೆಯವರು ಊಟ ಮಾಡುತ್ತಾ ನಮ್ಮೊಡನೆ,
`ಪುಟ್ಟಾ/ಪುಟ್ಟೀ, ನಿನಗೆ ಇಷ್ಟವೆಂದು
ಅಮ್ಮ ಇದನ್ನು ಮಾಡಿದ್ದಾಳೆ, ಇನ್ನೊಂದಷ್ಟು
ಹಾಕಿಸಿಕೋ...'ಎನ್ನುತ್ತಿದ್ದರು. ಆಗ ಎರಡು ತುತ್ತು
ಜಾಸ್ತಿಯೇ ಹೊಟ್ಟೆಯೊಳಕ್ಕಿಳಿಯುತ್ತಿತ್ತು. ಪಂಕ್ತಿಯಲ್ಲಿ ಕುಳಿತುಕೊಳ್ಳುವುದು ಎಂದ ಮೇಲೆ ಅಲ್ಲಿ
ಕುಳಿತ ಎಲ್ಲರಿಗೂ ಒಂದೇ ರೀತಿಯ ಆಹಾರ
ತಾನೇ ಬಡಿಸಬೇಕು? `ನಿನ್ನ ಇಷ್ಟ' `ನನ್ನ
ಇಷ್ಟ' ಎನ್ನುವ ಏಕವಚನಕ್ಕೆ ಅಲ್ಲಿ
ಜಾಗವೇ ಇಲ್ಲ. ಅಲ್ಲಿ ಏನಿದ್ದರೂ
ಬಹುವಚನವೇ, ನಮ್ಮ ಉಗ್ರಾಣ(ಸ್ಟೋರ್
ರೂಮ್)ದಲ್ಲಿ ಏನಿದೆಯೋ ಅದನ್ನು
ರುಚಿ, ಶುಚಿಯಾಗಿ ಬೇಯಿಸಿ ಎಲ್ಲರಿಗೂ ಪ್ರೀತಿಯಿಂದ
ಬಡಿಸುವುದು, ಎಲ್ಲರೂ ಮನಃಪೂರ್ವಕವಾಗಿ ಉಣ್ಣುವುದು,
ಹಿರಿಯರು ಎದ್ದ ಮೇಲೆಯೇ ಕಿರಿಯರು
ಏಳುವುದು...ಈ ಎಲ್ಲ ಧನಾತ್ಮಕ
ಸ್ವಭಾವಗಳು ಪಂಕ್ತಿ ಭೋಜನದ ಜೊತೆ
ಜೊತೆಗೇ ಜೀವನ ವಿಧಾನದಲ್ಲಿ ಹಾಸುಹೊಕ್ಕಾಗಿ
ಬಿಡುತ್ತವೆ. ತನ್ನನ್ನು ತಾನು ಉಳಿದವರೆದುರು ಹೇಗೆ ಬಿಂಬಿಸಿಕೊಳ್ಳಬೇಕು, ತನ್ನ ಮಾತುಗಳನ್ನು ಹಿರಿಯರು
ಗಮನಕೊಟ್ಟು ಕೇಳುತ್ತಿದ್ದಾರೆ ಎಂಬುದರಿಂದಾಗಿಯೇ ವೃದ್ಧಿಸುವ ಆತ್ಮವಿಶ್ವಾಸ, ಸಾಂಘಿಕ ಜೀವನವೆನ್ನುವ ಕಲೆ....,ಈ ಎಲ್ಲಾ ವಿಷಯಗಳನ್ನೂ
ಪಂಕ್ತಿ ಭೋಜನ ಕಲಿಸಿಕೊಡುತ್ತದೆ. ಕಾಲಕ್ಕೆ
ತಕ್ಕಂತೆ ಆಗುವ ಬದಲಾವಣೆಗಳಿಗೆ ಹೊಂದಿಕೊಳ್ಳಲೇಬೇಕು. ಇಂದು ಟೇಬಲ್ ಊಟ, ಬುಫೆ ಊಟ
ಎಲ್ಲವೂ ಅನಿವಾರ್ಯ ಎಂದು ಒಪ್ಪಿಕೊಳ್ಳೋಣ. ದಿನಾಲೂ
ನೆಲದಲ್ಲಿ ಕುಳಿತು ಬಾಳೆಲೆ ಊಟ
ಮಾಡುವ ಕಾಲ ಎಂದೋ ಮುಗಿಯಿತು
ಹೌದು. ಆದರೆ ಪರಸ್ಪರ ಇಷ್ಟ,
ಅಇಷ್ಟಗಳನ್ನು ಹೊಂದಿಸಿಕೊಂಡು ಸಾಧ್ಯವಿರುವಾಗಲೆಲ್ಲಾ ಎಲ್ಲರೂ ಜೊತೆಯಲ್ಲಿ ಕುಳಿತು
ಒಂದೇ ವಿಧದ ಊಟ, ಊಟಕ್ಕೆ
ತಕ್ಕ ಮಾತು, ಮಾತಿಗೆ ತಕ್ಕ
ನಗು...ಇವುಗಳನ್ನಾದರೂ ರೂಢಿಸಿಕೊಳ್ಳಬಹುದಲ್ಲ? ಆದರೆ ಇಂದು ಏನಾಗಿದೆ?
ಮನೆಯಲ್ಲಿ ಹಿರಿಯ ವೃದ್ಧರು ಇದ್ದರೂ
ಅವರಿಗೆ ಪ್ರತ್ಯೇಕ ರೂಮು, ಅಲ್ಲಿಯೇ ಊಟದ
ವ್ಯವಸ್ಥೆಯಿರುತ್ತದೆ. ಅಪ್ಪ, ಅಮ್ಮ ಇಬ್ಬರೂ
ಹೊರಗೆ ದುಡಿಯುವುದು ಅನಿವಾರ್ಯವಾಗಿದೆ. ಒಬ್ಬರು ಮನೆಯಲ್ಲಿರುವಾಗ ಇನ್ನೊಬ್ಬರಿರುವುದಿಲ್ಲ.
ಮಕ್ಕಳಿಗೆ ಆಯಮ್ಮನೇ ತಂದೆ ತಾಯಿ,
ಇಂಟರ್ನೆಟ್ಟೇ ಬಂಧು ಬಳಗ. ದುಡ್ಡು
ಕೊಟ್ಟರೆ ಸಿಗದ ತಿಂಡಿ ತಿನಸುಗಳಾವುವು?
ಹಳೆ ಕಾಲದ ಇಡ್ಲಿ, ದೋಸೆ,
ಕಡುಬು, ಮಾಡಲು ಪುರುಸೊತ್ತಾದರೂ ಯಾರಿಗಿದೆ?
ಆಫೀಸು ಕೆಲಸ ಮುಗಿಸಿ ಸಂಜೆ
ಮನೆಗೆ ಬರುವಾಗ ಅಮ್ಮನ ಜೊತೆಗೆ
ಬರುವ ತಿಂಡಿಗಳ ಗಂಟು ಬೇರೆ,
ಅಪ್ಪನ ಜೊತೆಯಲ್ಲಿ ಬರುವ ತಿಂಡಿ ತಿನಸುಗಳು
ಬೇರೆ. ಯಾರಿಗೆ ಏನು ಬೇಕೋ
ಅದನ್ನು ಪ್ಯಾಕೆಟ್ಟಿನಿಂದ ತೆಗೆದು ತಿಂದರಾಯ್ತು. ಅಂತಹ
ಊಟಕ್ಕೆ ಪಂಕ್ತಿ ಯಾಕೆ? ಬಡಿಸುವುದಾದರೂ
ಏನನ್ನು ಮತ್ತು ಯಾರಿಗೆ? ಅಥವಾ
ಬೇಯಿಸಲೇ ಬೇಕೆಂದಿದ್ದರೆ ಕುದಿ ನೀರಿನಲ್ಲಿ ಹಾಕಿ
ಎರಡೇ ಎರಡು ನಿಮಿಷದಲ್ಲಿ ತಯಾರಾಗುವ
ತಿಂಡಿಗಳನ್ನೇ ಮಾಡಿ ಇಟ್ಟರಾಯ್ತು. ಬೇಕಾಗುವಾಗ
ಬೇಕಾದವರು ತೆಗೆದು ತಿಂದುಕೊಳ್ಳುತ್ತಾರೆ. ಎಲ್ಲೋ
ಕೆಲವೊಮ್ಮೆ ಎಲ್ಲರೂ ಜೊತೆಯಲ್ಲೇ ಊಟಕ್ಕೆ
ಕುಳಿತರೂ ಪ್ರತಿಯೊಬ್ಬರ ಮಡಿಲಲ್ಲೂ ಮೊಬೈಲು, ಕಿವಿಯಲ್ಲಿ ಅದರ
ಮಾರುದ್ದದ ಕೊಳವೆಗಳು..... ಇಂತಹ ಪಂಕ್ತಿ ಭೋಜನವೆಂದರೆ
ಅದು ಬೇಸಿಗೆಯ ಜೋಗು ಜಲಪಾತದಂತೆ.
ಬೇಕೋ ಬೇಡವೋ ಎಂಬಂತೆ ಅಲ್ಲೊಂದಿಷ್ಟು
ಇಲ್ಲೊಂದಿಷ್ಟು ಮಾತಿನ ಹನಿಗಳು ಉದುರುವುದು
ಎಷ್ಟೋ ಅಷ್ಟೆ. ಕುಟುಂಬದ ಸದಸ್ಯರೆಲ್ಲರೂ
ಜೊತೆಯಲ್ಲಿದ್ದಾಗ ಅಮ್ಮ ಏನು ಮಾಡಿಟ್ಟಿದ್ದಾರೋ
ಅದೆಲ್ಲವನ್ನು ಹಂಚಿಕೊಂಡು ತಿನ್ನುವ ಕಾಲವೊಂದಿತ್ತು. ಉದಾಹರಣೆಗೆ
ಊಟಕ್ಕೆ ಕುಳಿತಿರುವಾಗ ಒಬ್ಬಾತನಿಗೆ ಇಷ್ಟವೆಂದು ಆತನಿಗೆ ಮಾತ್ರ ಗಟ್ಟಿ
ಹಾಲು ಕೊಡುವ ಹಾಗಿರಲಿಲ್ಲ. ಹಾಗೆ
ಮಾಡಿದರೆ ಅದನ್ನು ಪಂಕ್ತಿ ಭೇದವೆನ್ನುತ್ತಿದ್ದರು.
ಹಾಗೆ ಮಾಡಿದವರನ್ನು `ಒಂದು ಕಣ್ಣಿಗೆ ಬೆಣ್ಣೆ,
ಇನ್ನೊಂದು ಕಣ್ಣಿಗೆ ಸುಣ್ಣ' ಮಾಡುವವಳು/ನು ಎಂದು ತಾತ್ಸಾರ
ಮಾಡುತ್ತಿದ್ದರು. ಇಂದು ಅದುವೇ ಫ್ಯಾಶನ್.
ತುಳುವಿನಲ್ಲಿ ಒಂದು ಹೇಳಿಕೆ ಇದೆ,
`ಎಂಕಿಚ್ಚ'. ಅಂದರೆ ನನಗೆ ಹೀಗೇ
ಆಗಬೇಕು, ಹೊಂದಾಣಿಕೆಯ ಮಾತೇ ಇಲ್ಲ ಎನ್ನುವ
ಭಾವವನ್ನು ಆ ಒಂದು ಶಬ್ಧ
ಹೇಳುತ್ತದೆ. ಇಂದಿನ ಮಕ್ಕಳು ಈ
ರೀತಿಯಾಗಿ ಬೇಳೆಯುತ್ತಿದ್ದಾರೆ ಎನ್ನುವುದಕ್ಕಿಂತಲೂ ಇರುವ ಒಂದೋ ಎರಡೋ
ಮಕ್ಕಳನ್ನು ನಾವು ಈ ರೀತಿಯಲ್ಲಿ
ಬೆಳೆಸುತ್ತಿದ್ದೇವೆ. ಊಟದೊಂದಿಗೆ ಕೂಟ ಬೆಳೆಯುತ್ತದೆ ಎನ್ನುವ
ಮಾತು ಇದೆ. ಕೂಟವೆನ್ನುವ ಭಾವನೆಯೇ
ಇಲ್ಲದೆ ಸ್ವಕೇಂದ್ರಿತ ವ್ಯಕ್ತಿಯಾಗಿ ಬೆಳೆಯುವ ಮಕ್ಕಳು ಪ್ರಬುದ್ಧರಾದಾಗ
ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ. ಸಮಾಜ ಹೆಣ್ಣಿನಿಂದಾಗಲೀ ಗಂಡಿನಿಂದಾಗಲೀ
ಕೆಲವೆಲ್ಲ ಹೊಂದಾಣಿಕೆಯ ಗುಣಗಳಗಳನ್ನು ನಿರೀಕ್ಷಿಸುತ್ತಿರುತ್ತದೆ. ಕೊಟ್ಟು ತೆಗೆದುಕೊಳ್ಳುವುದನ್ನು ಕಲಿಯದ
ಮಕ್ಕಳು ಅಂತಹ ನಿರೀಕ್ಷೆಗಳನ್ನು ಪೂರೈಸುವಲ್ಲಿ
ಸೋಲುತ್ತಾರೆ. ಈ ಲೇಖನದ ಪ್ರಾರಂಭದಲ್ಲಿ
ಬರೆದ ಘಟನೆ ಅದಕ್ಕೊಂದು ಉದಾಹರಣೆ.
ಇಂದು ನಾವು ಸಾವಿರಾರು ರುಪಾಯಿಗಳನ್ನು
ಸುರಿದು ಮಕ್ಕಳನ್ನು ಸಮ್ಮರ್ ಕ್ಯಾಂಪಿಗೆ ದಬ್ಬುತ್ತೇವೆ.
ಯಾಕಾಗಿ? ಸೋಷಲ್ ಲೈಫಿನ ಅರಿವಿಗಾಗಿ
ಎನ್ನುತ್ತೇವೆ. ನಾವೇ ನಮ್ಮ ಮಕ್ಕಳಿಗೆ
ಮೂಲಭೂತ ಸಾಮಾಜಿಕ ಬದ್ಧತೆಗಳನ್ನು ನಮ್ಮ
ನಡತೆಯ ಮೂಲಕ ತೋರಿಸಿಕೊಡಲು ಅಸಮರ್ಥರಾದೆವು
ಎಂದಾದ ಮೇಲೆ ಯಾವುದೋ ಕ್ಯಾಂಪುಗಳನ್ನು
ನೆಚ್ಚಿಕೊಂಡು ಮಕ್ಕಳನ್ನು ಅಲ್ಲಿಗೆ ಅಟ್ಟುವುದರೆ ಫಲ
ದೊರೆತೀತೇ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ