ಭಾನುವಾರ, ಮೇ 29, 2016

ಭಾವಪೀಡನೆ

 "ಎಂಟರಿಂದ ಹದಿನಾಲ್ಕರ ನಡುವಿನ ವಯೋಮಾನದ ಮಕ್ಕಳೇ ಹೆಚ್ಚಾಗಿ ಲೈಂಗಿಕ, ದೈಹಿಕ, ಭಾವನಾತ್ಮಕ ಪೀಡನೆಗೊಳಗಾಗುತ್ತಾರೆ. ಮೊದಲಿನೆರಡು ಪೀಡನೆಗಳು ಫೋಕ್ಸೋ ಕಾಯಿದೆಯಡಿಯಲ್ಲಿ ಎಷ್ಟು ಶಿಕ್ಷಾರ್ಹವೋ ಭಾವನಾತ್ಮಕ ಪೀಡನೆಯೂ ಅಷ್ಟೇ ಶಿಕ್ಷಾರ್ಹ. ಗಮನಿಸಬೇಕಾದ ಅಂಶವೇನೆಂದರೆ ಪೀಡಕರು ಮಾತ್ರವಲ್ಲದೆ ಅಂತಹ ಪೀಡೆಯನ್ನು ಕಣ್ಣಾರೆ ಕಂಡು ಅಥವಾ ವಿಷಯವನ್ನು ತಿಳಿದೂ ಸಂಬಂಧಪಟ್ಟ ಇಲಾಖೆಗೆ ದೂರು ನೀಡದವರು,( ಹೆತ್ತವರೂ ಸೇರಿದಂತೆ) ಪೀಡಕರಷ್ಟೇ ಶಿಕ್ಷಾರ್ಹರು.  ಮಕ್ಕಳನ್ನು  ಉತ್ತಮ ನಾಗರಿಕರನ್ನಾಗಿಸುವ ನಿಟ್ಟಿನಲ್ಲಿ  ಹೆತ್ತವರು ಮತ್ತು ಶಿಕ್ಷಕರನ್ನು  ತರಬೇತಿಗೊಳಿಸುವ ಅಗತ್ಯವಿದೆ".   
 ಡಾ.ಎಸ್.ವಿ.ಆರ್.ಶರ್ಮ.(ಮಕ್ಕಳ ತಜ್ಞರು)         



              

ಮಾಧ್ಯಮಗಳು ಲೈಂಗಿಕ ಪೀಡನೆ, ದೈಹಿಕ ಪೀಡನೆಗಳಿಗೆ ಕೊಡುವ ಪ್ರಾಮುಖ್ಯತೆಯ ನೂರರಲ್ಲಿ ಒಂದಂಶದಷ್ಟನ್ನೂ  ಭಾವಪೀಡನೆಗೆ ಕೊಡಲಾರವು. ಯಾಕೆಂದರೆ ಟಿ.ವಿ.ಯಲ್ಲಿ  ವರ್ಣರಂಜಿತವಾಗಿ ತೋರಿಸಲು, ರೇಡಿಯೋದಲ್ಲಿ ಬಿತ್ತರಿಸಲು, ಪತ್ರಿಕೆಗಳಲ್ಲಿ ರಂಗು ರಂಗಾಗಿ ಬರೆಯಲು ಇದರಲ್ಲಿ ಏನೂ ಸಿಗದು! ಆದರೆ ಮೇಲಿನ ಎರಡೂ ವಿಧದ ಪೀಡನೆಗಳಿಗೆ ಮೂಲ ಇದುವೇ ಎಂಬ ಸತ್ಯ ತಿಳಿದರೆ ಅದರ ನಿರ್ವಹಣೆಯಲ್ಲಿ ನಮ್ಮ ಜವಾಬ್ದಾರಿ ಎಷ್ಟು ಗುರುತರವಾದದ್ದಿದೆ ಎಂಬುದರ ಅರಿವಾಗದಿರದು. ಸಮಾಜದ ಮುಕ್ಕಾಲಂಶ ಜನತೆಗೂ ಇದರ ಅರಿವಿಲ್ಲ. `ಅದೂ ಜೀವನದ ಒಂದು ಭಾಗ' ಎಂದು ತಿಳಿದುಕೊಂಡಷ್ಟೂ ಸಮಾಜ ರೋಗಗ್ರಸ್ತವಾಗುತ್ತದೆ. ಹಾಗಾದರೆ ಭಾವಪೀಡನೆ ಎಂದರೆ ಏನು?
ದೋಷಪೂರಿತ ವ್ಯಕ್ತಿತ್ವದೊಳಗೆ ಹುದುಗಿರುವ ಅತೃಪ್ತ ಮನಸ್ಸಿನ ವಿಕೃತ ಯೋಚನೆಗಳನ್ನು ಮಾತು, ನಡತೆ, ಮುಖಭಾವಗಳ ರೂಪದಲ್ಲಿ ಪ್ರಕಟಪಡಿಸಿ ತನ್ನ ಸಹಜೀವಿಗಳ ಭಾವನೆಗಳಿಗೆ ಯಾರು ಘಾಸಿ ಉಂಟು ಮಾಡುತ್ತಾರೋ ಅವರು ಭಾವಪೀಡಕರು ಮತ್ತು ಯಾರು ಇವುಗಳ ಬಲಿಪಶುಗಳೋ ಅವರು ಭಾವಪೀಡಿತರು. ಬಡತನದ ರೇಖೆಗಿಂತಲೂ ಕೆಳಗಿರುವ, ಸಮಾಜದ ಸವಲತ್ತುಗಳಿಂದ ವಂಚಿತರಾದ, ಅವಿದ್ಯಾವಂತರು, ಕೆಟ್ಟ ಚಾಳಿಗಳ ದಾಸರೇ ಮೊದಲಾದವರು ಇಂತಹ ಕ್ರೂರ ಮನಸ್ಥಿತಿಯನ್ನು ಹೊಂದಿರುತ್ತಾರೆ ಮತ್ತು ಇಂತಹವರ ಮಕ್ಕಳು ಮಾತ್ರ ಭಾವಪೀಡಿತರಿರಬಹುದು ಎಂದು ನೀವು ಅಂದುಕೊಂಡಿದ್ದರೆ ಅದು ಶುದ್ಧ ತಪ್ಪು. ಸಭ್ಯ ಸಮಾಜದಲ್ಲಿ ಸುಶಿಕ್ಷಿತರು, ಗಣ್ಯರು, ಹೈಪ್ರೊಫೈಲಿನವರು ಎಂದು ಗುರುತಿಸಿಕೊಂಡವರೇ ಭಾವಪೀಡಕರಾಗಿ ತಮ್ಮ ಮಕ್ಕಳಿಗೂ ಅದೇ ಮೇಲ್ಪಂಕ್ತಿಯನ್ನು ಹಾಕಿಕೊಡುತ್ತಿರುವ ಧಾರಾಳ ಉದಾಹರಣೆಗಳು ನಮ್ಮ ನಡುವೆಯೇ ಕಾಣಸಿಗುತ್ತವೆ. ಗುರುತಿಸುವ ಒಳಗಣ್ಣು ಇರಬೇಕಷ್ಟೆ.  ಕೆಲವು ಉದಾಹರಣೆಗಳನ್ನು ನೋಡಿ,
1. ಆತ ಪ್ರತಿಷ್ಟಿತ ಕಂಪೆನಿಯಲ್ಲಿ ಜನರಲ್ ಮ್ಯಾನೇಜರ್. ಹೆಂಡತಿ ಗೃಹಿಣಿ. ಒಬ್ಬನೇ ಮಗ. ಐದನೇ ತರಗತಿಯಲ್ಲಿ ಓದುತ್ತಿದ್ದಾನೆ. ಯಾವಾಗಲೂ ತರಗತಿಯಲ್ಲಿ ಮೊದಲ ಸ್ಥಾನವನ್ನು ಉಳಿದವರಿಗೆ ಬಿಟ್ಟುಕೊಟ್ಟವನಲ್ಲ. ಆದರೆ ವಾರ್ಷಿಕ  ಪರೀಕ್ಷೆಯ ಮೊದಲ ದಿನ ಪರೀಕ್ಷೆ ಶರುವಾಗುವ ಸ್ವಲ್ಪವೇ ಮೊದಲು ತೀವ್ರತರದ ಹೊಟ್ಟೆನೋವಿನಿಂದ ಬಳಲತೊಡಗುತ್ತಾನೆ. ಶಿಕ್ಷಕರು ತಂದೆಗೆ ಕರೆಮಾಡಿದರೆ `ಔಟ್ ಆಫ್ ರೇಂಜ್'...,ತಾಯಿಗೆ ಕರೆ ಮಾಡಿದರೆ `ಇನ್ನೊಂದು ಕರೆಯಲ್ಲಿ ನಿರತವಾಗಿದೆ' ಎಂಬ ಉತ್ತರ ಬರುತ್ತಿತ್ತು. ವಿಳಂಬ ಮಾಡುವಂತಿರಲಿಲ್ಲ. ಆರೋಗ್ಯ, ಪರೀಕ್ಷೆ ಎರಡೂ ಮುಖ್ಯವಾದವುಗಳೇ. ಮುಖ್ಯ ಶಿಕ್ಷಕರು ಕೂಡಲೇ ತೀರ್ಮಾನವೊಂದನ್ನು ತೆಗೆದುಕೊಂಡು ಅನತಿ ದೂರದಲ್ಲಿರುವ ಮಕ್ಕಳ ತಜ್ಞರಲ್ಲಿಗೆ ಮಗುವನ್ನೊಯ್ದರು. ಮಗುವಿನ ಖಾಯಿಲೆಯು ಪೂರ್ತಿಯಾಗಿ ಮನಸ್ಸಿಗೆ ಸಂಬಂಧಿಸಿದ್ದು ಎಂಬುದನ್ನು ವೈದ್ಯರು ಮೊದಲ ನೋಟದಲ್ಲೇ ಅರಿತರು. ಅವನನ್ನು ಮಾತ್ರ ಪ್ರತ್ಯೇಕವಾಗಿ ಕುಳ್ಳಿರಿಸಿ ಉಪಚರಿಸಿ ಸಮಾಧಾನದಿಂದ ಪ್ರೀತಿಯಿಂದ ಮಾತನಾಡಿಸಿದಾಗ ಸತ್ಯ ಹೊರಬಿತ್ತು. ಹಿಂದಿನ ದಿನ ಮನೆಯಲ್ಲಿ ಆ ಹುಡುಗನ ಅಪ್ಪ ಹೇಳಿದ್ದು ಇಷ್ಟು..., ಆತನ ಕೈಕೆಳಗೆ ಕೆಲಸ ಮಾಡುವ ಓರ್ವ ಮಹನೀಯರು ತಮ್ಮ ಮಗಳು  ಒಲಿಂಪಿಯಾಡ್ ಪರೀಕ್ಷೆಯಲ್ಲಿ ಅತ್ತ್ಯುತ್ತಮ ಸಾಧನೆ ಮಾಡಿದ್ದಾಳೆ (ಈ ಹುಡುಗನಂತೆ ಅತಿ ಪ್ರತಿಷ್ಠಿತ ಶಾಲೆಗೆ ಹೋಗದಿದ್ದರೂ) ಎಂದು ಎಲ್ಲರಿಗೂ ಸಿಹಿ ಹಂಚಿದ್ದಾರಂತೆ. ತಾನು ಆತನ ಬಾಸ್. ಬಾಸಿನೆದೆರು ತನ್ನ ಮಗಳ ಹೆಚ್ಚುಗಾರಿಕೆಯನ್ನು ತೋರಿಸುವುದೆಂದರೆ ಅದು ತನಗೆ ಮಾಡಿದ ಅವಮಾನವಲ್ಲದೆ ಬೇರೇನೂ ಅಲ್ಲ..., ಎಂಬ ಆಲೋಚನೆ ಅದ್ಯಾವ ಗಳಿಗೆಯಲ್ಲಿ ಈ ತಂದೆಯ ತಲೆಯೊಳಕ್ಕೆ ಹೊಕ್ಕಿತೋ ದೇವರೇ ಬಲ್ಲ. ಹಿಂಸೆ ಅನುಭವಿಸಿದ್ದು ಈ ಮಗು. `ಲಕ್ಷಗಟ್ಟಲೆ ದುಡ್ಡು ಕೊಟ್ಟು ನಿನ್ನನ್ನು ಆ ಶಾಲೆಗೆ ಹಾಕಿದ್ದು ದಂಡವೇ ಸರಿ.., ಊರವರೆದುರು ನನ್ನ ಮರ್ಯಾದೆ ಕಳೆದೆಯಲ್ಲಾ? ನೀನು ಗಂಡಾಗಿ ಹುಟ್ಟಿ ಆ ಹುಡುಗಿಗಿಂತ ಕಡೆಯಾಗಿ ಹೋದೆಯಲ್ಲಾ? ಈ ಸಲದ ವಾರ್ಷಿಕ ಪರೀಕ್ಷೆಯಲ್ಲಿ ಶಾಲೆಗೇ ಟಾಪರ್ ಆಗಿ ಬಾರದಿದ್ರೆ ಬರುವ ವರ್ಷ ನಿನ್ನನ್ನು ಸರಕಾರೀ ಶಾಲೆಗೆ ಸೇರಿಸುತ್ತೇನೆ...' ಎಂದೆಲ್ಲಾ ಗುಟುರು ಹಾಕಿದ್ದನಂತೆ. ಅಸಲಿಗೆ ಈ ಹುಡುಗ ಒಲಿಂಪಿಯಾಡ್ ಪರೀಕ್ಷೆಗೆ ಬರೆದಿರಲೇ ಇಲ್ಲ! ಅಂದರೆ ಎತ್ತಿಗೆ ಜ್ವರ, ಎಮ್ಮೆಗೆ ಬರೆ!
`ಯಾವುದೇ ತಪ್ಪು ಮಾಡದೆಯೂ ತಾನು ಅತ್ಯಂತ ಪ್ರೀತಿಸುವ ತನ್ನ ಶಾಲೆ, ಸ್ನೇಹಿತರು, ಆಟ, ಪಾಠ ಎಲ್ಲವನ್ನೂ ಬಿಟ್ಟು ಹೋಗಬೇಕೇ? ಇದುವರೆಗಿನ ತನ್ನ ಸಾಧನೆಗಳನ್ನು ಅಪ್ಪ ಗಣನೆಗೇ ತೆಗೆದುಕೊಳ್ಳದೆ ಏನೆಲ್ಲಾ ಹೇಳಿಬಿಟ್ಟ...? ಇಂದಿನ ಪರೀಕ್ಷೆಯಲ್ಲಿ ಉತ್ತಮ ಅಂಕಗಳು ಬಾರದೆ ಹೋದರೆ ...??' ಇತ್ಯಾದಿಯಾಗಿ ಮಗುವಿನ ಮನಸ್ಸಿನಲ್ಲಿ ಮೂಡಿದ ಅತಿಯಾದ ಕಳವಳ ಒತ್ತಡದ ರೂಪ ಪಡೆದು ಹೊಟ್ಟೆನೋವಾಗಿ ಪ್ರಕಟಗೊಂಡಿತ್ತು!
2. ಹದಿಹರೆಯದ ಹುಡುಗಿಯೋರ್ವಳು ಮೋಸದ ಪ್ರಪಾತದೊಳಕ್ಕೆ ಜಾರಿ ಬೀಳುವ  ಇನಿತು ಮೊದಲು ಶಿಶು ಸಹಾಯ ಕೇಂದ್ರದ ಕಣ್ಣಿಗೆ ಬಿದ್ದಳು. ಸಮಾಲೋಚನೆಯ ಸಮಯದಲ್ಲಿ ಆಕೆ ಹೇಳಿದ್ದೇನು ಗೊತ್ತೇ? `ನನ್ನ ಅಪ್ಪ ಅಮ್ಮಂದು ಹಿರಿಯರು ನಿಶ್ಚೈಯಿಸಿ ಮಾಡಿದ ಮದುವೆ..., ಜಾತಕ, ಪೂಜೆ, ಪುನಸ್ಕಾರ ಇತ್ಯಾದಿಗಳಲ್ಲಿ ಭಾರೀ ನಂಬಿಕೆ ಇರುವವರು.., ಆದರೂ ನಾನು ಹುಟ್ಟಿದ ಲಾಗಾಯ್ತಿನಿಂದ ನೋಡುತ್ತಲೇ ಇದ್ದೇನೆ. ಏಕ್ ದಂ  ಜಗಳ..., ಒಂದೇ ಒಂದು ದಿನ ಅವರಿಬ್ಬರು ಪ್ರೀತಿಯಿಂದ ಮಾತನಾಡಿದ್ದನ್ನು ನಾನು ನೋಡಿಲ್ಲ.., ಮಾತ್ರವಲ್ಲ ನನ್ನೊಂದಿಗೂ ಅದೇ ತಾತ್ಸಾರದ ನಡವಳಿಕೆ..., ಈ ಹುಡುಗ (ಅವಳೊಡನೆ ಪ್ರೀತಿಯ ನಾಟಕವಾಡಿದವನು) ನನ್ನೊಡನೆ ಬಹಳ ಪ್ರೀತಿಯಿಂದ ಮಾತನಾಡುತ್ತಿದ್ದ..., ಉಡುಗೊರೆಗಳನ್ನು ಕೊಡುತ್ತಿದ್ದ..., ಸುತ್ತಾಡಲು ಕರೆದೊಯ್ಯುತ್ತಿದ್ದ..., ಆದುದರಿಂದಲೇ ಅವನು ಮದುವೆಯಾಗೋಣ ಎಂದಾಗ ಒಪ್ಪಿಬಿಟ್ಟೆ....,ಮುಂದೆ ಅಪ್ಪ ಅಮ್ಮ ನಿಶ್ಚೈಸಿ ನನಗೆ ಮಾಡಿಸುವ ಮದುವೆ ಸಕ್ಸೆಸ್ ಆಗಲಾರದು ಅನ್ನಿಸಿತ್ತು. ಈತನೇ ನನಗೆ ಸರಿಯಾದವ ಎಂದುಕೊಂಡಿದ್ದೆ. ಆದರೆ ಇವನು ಹೀಗೂ ಮೋಸ ಮಾಡಿಯಾನು ಎಂಬ ಕಲ್ಪನೆಯೇ ನನಗಿರಲಿಲ್ಲ..' ಎಂದು ಕಣ್ಣೀರಾದಾಗ ಯಾರಲ್ಲಿತ್ತು ಉತ್ತರ?
3. ಮಗ ಎಲ್ಲಾ ವಿಧದಲ್ಲೂ ಯೋಗ್ಯನೇ. ಸಮಾಜದಲ್ಲಿ, ಶಾಲೆಯಲ್ಲಿ ಎಲ್ಲರ ಕಣ್ಮಣಿ. ಈತನ ಅಪ್ಪನಿಗೆ ಒಂದು ಮಾನಸಿಕ ಖಾಯಿಲೆ ಇತ್ತು. ಸಂದರ್ಭ ದೊರೆತಾಗಲೆಲ್ಲಾ ಅಗತ್ಯವೇ ಇಲ್ಲದಿದ್ದರೂ, `ಎಷ್ಟೆಷ್ಟೋ ಹರಿಕೆಗಳನ್ನು ಹೇಳಿ ಹುಟ್ಟಿದವ ನೀನು..., ನೀನು ಹುಟ್ಟುವ ಮೊದಲೂ ನಿನಗಾಗಿ ಲಕ್ಷಗಟ್ಟಲೆ ಖರ್ಚು ಮಾಡಿದ್ದೇನೆ.., ಈಗಲೂ ನಿನ್ನ ವಿದ್ಯೆಗಾಗಿ, ಅನುಕೂಲಕ್ಕಾಗಿ ಅದಕ್ಕಿಂತಲೂ ಹೆಚ್ಚೇ ಖರ್ಚು ಮಾಡುತ್ತಿದ್ದೇನೆ...ಯಾಕಾಗಿ..? ನಾವು ಸಾಯುವ ಕಾಲಕ್ಕೆ ನಮ್ಮನ್ನು ನೀನು ನೋಡಿಕೊಳ್ಳಬೇಕು... ಎಲ್ಲಾ ಗಂಡು ಹುಡುಗರಂತೆ ಮದುವೆಯಾದಮೇಲೆ ಹೆಂಡತಿಯ ಸೆರಗಿನ ಹಿಂದೆ ಅಡಗಿಕೊಳ್ಳಬಾರದು...' ಇಂತಹ ಮಾತುಗಳನ್ನೇ ಕೇಳುತ್ತಾ ಕೇಳುತ್ತಾ ಮಗ ದೊಡ್ಡವನಾದ. ಅತ್ಯಂತ ದೊಡ್ಡ ಹುದ್ದೆಯನ್ನೂ ಪಡೆದ. ಅಂತರ್ಜಾತೀಯ ವಿವಾಹವಾಗಿ ದೂರದ ಅಮೇರಿಕೆಗೆ ಹಾರಿ ಹೋದ. ಮುದಿ ತಂದೆ ತಾಯಂದಿರು ಹೈಟೆಕ್ ವೃದ್ಧರಾಶ್ರಮದಲ್ಲಿದ್ದಾರೆ! ಮಗನ ಹೆಸರಿನಲ್ಲಿಟ್ಟ  ಇಡಿಗಂಟು ಬ್ಯಾಂಕಿನಲ್ಲಿ ಕೊಳೆಯುತ್ತಿದೆ!
 ಈ ಮೇಲಿನ ಮೂರೂ ಘಟನೆಗಳಲ್ಲಿ ಸಮಾನವಾದ ಒಂದಂಶವನ್ನು ಗಮನಿಸಿದ್ದೀರಾ? ಯಾರೂ ಎಲ್ಲೂ ದೈಹಿಕ ಹಿಂಸಾಚಾರಕ್ಕೆ ಒಳಗಾಗಿಲ್ಲ. ಆದರೆ ಮನಸ್ಸಿಗೆ, ವ್ಯಕ್ತಿತ್ವಕ್ಕೆ ಆದ ಗಾಯ ಮಾತ್ರ ಎಣಿಕೆಗೂ ನಿಲುಕದ್ದು. ಪೀಡಕರು ತಮ್ಮ ಬಾಲ್ಯಕಾಲದಲ್ಲಿ ಪೀಡನೆಗೆ ಒಳಗಾದವರಾದುದರಿಂದಲೇ ಅವರ ಮನಸ್ಸು ಕೀಳರಿಮೆ, ಹಿಂಜರಿಕೆ, ಅಭದ್ರತಾ ಭಾವನೆಗಳಿಂದ ಕುಲುಷಿತಗೊಂಡಿತ್ತು. ಪರಿಣಾಮ? ಅವರಗರಿವಿಲ್ಲದೇ ಮುಂದಿನ ಪೀಳಿಗೆಯನ್ನೂ ಅದೇ ವಿಷ ವರ್ತುಲದೊಳಕ್ಕೆ  ಎಳೆದೊಯ್ದರು. ಸಮಾಜ ಕಂಟಕ ಪಾತಕಿಗಳ ಬಾಲ್ಯಕಾಲವನ್ನು ಗಮನಿಸಿ ನೋಡಿ. ಪ್ರತಿಯೊಬ್ಬರೂ ಒಂದಲ್ಲಾ ಒಂದು ವಿಧದ ಭಾವಪೀಡಿತರೇ. ಕೆಲವರ ಬಾಲ್ಯವಂತೂ ನರಕವೇ. ರಿಮಾಂಡ್ ಹೋಮಿನಿಂದ ಹೊರ ಬಂದ ಬಾಲಾಪರಾಧಿಗಳು ಇನ್ನಷ್ಟು ಕ್ರೂರ ಸಮಾಜ ಘಾತಕ ಕೃತ್ಯಗಳಲ್ಲಿ ಭಾಗಿಯಾಗಲೂ ಇದೇ ಕಾರಣ.
 ಶಾಲೆಯಲ್ಲಿ ಶಿಕ್ಷಕರು, ಸ್ನೇಹಿತರು, ಮನೆಯಲ್ಲಿ ರಕ್ಷಕರು, ಸಂಬಂಧಿಗಳು, ಸಮಾಜದಲ್ಲಿ ಒಡನಾಡಿಗಳು ಇವರೆಲ್ಲರೂ ಒಂದು ಮಗುವಿನ ಸರ್ವತೋಮುಖ ಅಭಿವೃದ್ಧಿಯ ಪಾಲುದಾರರೇ. ಈ ಅಗತ್ಯದ ಗಂಭೀರತೆಯನ್ನು ಮನಗಂಡೇ ಭಾರತೀಯ ಶಿಶುತಜ್ಞರ ಒಕ್ಕೂಟ(ಐ.ಎ.ಪಿ.)ದ ಕೇರಳ ವಿಭಾಗವು ಹಿಟ್(ಹೆಚ್.ಐ.ಟಿ) ಎನ್ನುವ ಮೂರಂಶದ ಕಾರ್ಯಕ್ರಮಗಳನ್ನೊಳಗೊಂಡ ಕಾರ್ಯಾಗಾರವೊಂದನ್ನು ಕೈಗೊಳ್ಳಲು ನಿರ್ಧರಿಸಿತು. ಇದರ ಸದುದ್ದೇಶ, ಉನ್ನತ ಧ್ಯೇಯ, ಕಠಿಣ ಗುರಿಗಳನ್ನು ಅರ್ಥೈಸಿಕೊಂಡ  ಹಲವು ಸಾಮಾಜಿಕ ಸಂಘ ಸಂಸ್ಥೆಗಳು, ಕಾಳಜಿಯುಳ್ಳ ಮಾಧ್ಯಮಗಳು ಐ.ಎ.ಪಿ.(ಇಂಡಿಯನ್  ಅಕಾಡೆಮಿಕ್ಸ್ ಆಫ್ ಪಿಡಿಯಾಟ್ರಿಕ್ಸ್) ಯೊಂದಿಗೆ ಕೈಜೋಡಿಸಿದುವು. ಇತ್ತೀಚೆಗೆ ನಮ್ಮ ಕಾಸರಗೋಡಿನ ಹಲವು ಶಾಲೆಗಳಲ್ಲಿ `ಹಿಟ್' ಬಗ್ಗೆ ಅರಿವು ಮೂಡಿಸುವ ಮೊದಲ ಪ್ರಯತ್ನ ನಡೆಯಿತು.
ಹಿಟ್ ಎಂದರೇನು?
ಹೆಚ್= (ಹೆಲ್ದಿ ಈಟಿಂಗ್,ಹೆಲ್ದಿ ಲೈಫ್ ಸ್ಟೈಲ್) ಆರೋಗ್ಯಪೂರ್ಣ ಆಹಾರ ಮತ್ತು ಜೀವನ.
ಐ= (ಇಮ್ಮ್ಯೂನೈಸೇಶನ್, ಇಂಟರೇಕ್ಷನ್ ಮತ್ತು ಇಂಟರ್ವೆನಷನ್) ಆರೋಗ್ಯಕ್ಕೆ ತಡೆಯಾಗಬಹುದಾದಂತಹ ರೋಗಗಳ ನಿವಾರಣೆಗೆ ಬಾಲ್ಯಕಾಲದಲ್ಲಿ ಕೈಗೊಳ್ಳಬೇಕಾದ ಮುಂಜಾಗರೂಕಾ ಕ್ರಮಗಳ ಬಗ್ಗೆ ಸಂವಹನ.
ಟಿ= (ಟೇಮ್ ಟಿ.ವಿ., ಇ.ಮಿಡಿಯಾ, ಟ್ಯಾಕಲ್ ಆಲ್ಕೋಹಾಲ್, ಸಬ್ಸ್ಟೆನ್ಸ್ ಅಬ್ಯೂಸ್, ಟರ್ಮಿನೇಟ್ ಚೈಲ್ಡ್ ಅಬ್ಯೂಸ್, ಚೈಲ್ಡ್ ಲೇಬರ್) ಮಕ್ಕಳ ಮೇಲೆ ನಡೆಯುವಂತಹ ಭಾವನಾತ್ಮಕ, ದೈಹಿಕ, ಲೈಂಗಿಕ ಪೀಡನೆಗಳು, ಆಧುನಿಕ ಮಾಧ್ಯಮಗಳ ದುರ್ಬಳಕೆ, ಅಮಲು ಪದಾರ್ಥ ಸೇವನೆ, ಮಕ್ಕಳ ಕಡೆಗಿನ ನಿರ್ಲಕ್ಷ್ಯ, ಬಾಲ ಕಾರ್ಮಿಕತೆ ಈ ಎಲ್ಲಾ ಋಣಾತ್ಮಕ ವಿಷಯಗಳ ಬಗ್ಗೆ ಅರಿವು ಮೂಡಿಸಿ ಇಲ್ಲವಾಗಿಸುವುದು.
ಶಾಲೆಗಳಲ್ಲಿ ನಿರಂತರವಾಗಿ ನಡೆಯುತ್ತಿರಬೇಕೆಂಬ ಗುರಿಯೊಂದಿಗೆ ಪ್ರಾರಂಭವಾದ ಈ ಕಾರ್ಯಾಗಾರ ಬರಿಯ ಮಕ್ಕಳನ್ನು ಉದ್ದೇಶಿಸಿ ಆಯೋಜಿಸಿದ್ದಲ್ಲ. ಅವರನ್ನು ರೂಪಿಸುವ ರಕ್ಷಕ ಶಿಕ್ಷಕರೂ ಇದರಲ್ಲಿ ಸಮಭಾಗಿಗಳಾಗಲೇಬೇಕು ಮತ್ತು ಮಕ್ಕಳ ಬೆಳವಣಿಗೆಯಲ್ಲಿ ಈ ಎರಡೂ ವರ್ಗಗಳು ನಿರ್ವಹಿಸಬೇಕಾದ ಸಮಂಜಸ ಪಾತ್ರದ
ಬಗ್ಗೆ ಅರಿವು ಮೂಡಿಸಬೇಕೆಂಬುದೇ ಐ.ಎ.ಪಿ. ಯ ಪ್ರಯತ್ನವಾಗಿದೆ. ಕೊಡುವವರು, ಪಡೆಯುವವರು ಇಬ್ಬರೂ ಪೂರ್ಣಮನಸ್ಕರಾಗಿದ್ದರೆ ಮಾತ್ರ ಉದ್ದೇಶ ಸಫಲವಾಗುತ್ತದೆ ಅಲ್ಲವೇ? ಹಾಗಾದಾಗ ಸಾಕ್ಷರ ಕೇರಳ ನಳನಳಿಸುವ ಮಕ್ಕಳಿಂದಾಗಿ ಸಂತಸ ಕೇರಳವೂ ಆದೀತು, ಉಳಿದ ರಾಜ್ಯಗಳಿಗೆ ಮಾದರಿಯೂ ಆದೀತು.

ಪ್ರಿಯ ಓದುಗ ಮಿತ್ರರೇ, ನಿಮ್ಮ ಓದುವ ಸಮಯ, ವ್ಯವಧಾನಗಳನ್ನು  ಅರಿತು ಏಳು ಸಾಗರದಷ್ಟು ವಿಶಾಲವಾದ ಈ  ವಿಷಯವನ್ನು ಎಳ್ಳಿನ ಗಾತ್ರಕ್ಕೆ ಕುಗ್ಗಿಸಿ ಬರೆದಿದ್ದೇನೆ. ಅವಕಾಶ ದೊರೆತರೆ ಮುಂದೊಮ್ಮೆ ಮತ್ತೆ ಇದರ ಬಗ್ಗೆ ಬರೆಯುವೆ.




             
       

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ