ವರ್ಷ -1982
ಯೂ....,ಡರ್ಟಿಬಾಯ್...ಶೇಮ್ಲೆಸ್ ಕ್ರೀಚರ್, ಗೆಟ್ ಔಟ್ ಆಫ್ ದಿಸ್ ಕ್ಲಾಸ್...,ನಿನ್ನನ್ನು ಸಹಿಸಿ ಸಹಿಸಿ ನಾನೂ ಅರೆಜೀವವಾದೆ.ನಿನ್ನಂತವರು ಯಾಕಾದರೂ ಜನ್ಮವೆತ್ತುತ್ತಾರೋ...? ಇಡೀ ಕ್ಲಾಸನ್ನ ಸ್ಪಾಯಿಲ್ ಮಾಡೋಕೆ ನೀನೊಬ್ಬನೇ ಸಾಕು. .... "ರೋಸಿಹೋದ ಧ್ವನಿಯಲ್ಲಿ ಗಟ್ಟಿಯಾಗಿ ಬೈಯ್ಯುತ್ತಾ ಆತನ ಸ್ಕೂಲ್ಬ್ಯಾಗನ್ನು ಡೆಸ್ಕಿನಿಂದ ಎತ್ತಿ ಬೀಸಿ ಹೊರಕ್ಕೆಸೆದಿದ್ದೆ. ಅಷ್ಟಕ್ಕೂ ತೃಪ್ತಿಯಾಗದೆ ಕೈಯ್ಯಲ್ಲಿದ್ದ ಸ್ಕೇಲಿನಿಂದ ಆತನ ಬೆನ್ನಿಗೆರಡು ಬಲವಾಗಿ ಬಾರಿಸಿ ಹೊರಕ್ಕೆ ದಬ್ಬಿದ್ದೆ.ಪಷ್ಚಾತ್ತಾಪದ ಸುಳಿವೇ ಇಲ್ಲದ ಮುಖಭಾವ ಹೊತ್ತುಕೊಂಡ ಆ ಧಡಿಯ ಎದೆ ಸೆಟೆಸಿ ಹೊರನಡೆದು ಅಲ್ಲಿ ಬಿದ್ದಿದ್ದ ಚೀಲವನ್ನು ಎತ್ತಿಕೊಂಡು ಹೇಳಿದ ಮಾತುಗಳಾದರೂ ಎಂತವು... ?
"ಟೀಚರೇ..,ನನ್ನನ್ನು ಏನೆಂದು ತಿಳಿದುಕೊಂಡಿರಿ?ನೋಡ್ತಾ ಇರಿ,ನಾನು ಸಾಯೋ ಮೊದಲು ನಿಮಗೆ ಒಂದು ಗತಿ ಕಾಣಿಸದಿದ್ರೆ ನನ್ನ ಹೆಸರು ಝಾಬೀರ್ ಅಲ್ಲ... ನೆನಪಿಟ್ಕೊಳ್ಳಿ.... "
ಒರಟು ಸ್ವರ, ಚೂಪು ನೋಟ,ಸಿಟ್ಟಿನಿಂದ ಕೆಂಪಗಾಗಿ ಬಿಗಿದ ಮುಖ,ತೋರುಬೆರಳಿನಿಂದ ನನ್ನೆಡೆಗೆ ಕೈಮಾಡುತ್ತಾ ಆತ ಹೇಳಿದ ರೀತಿ ನಾನು ಬೆಚ್ಚಿಬೀಳುವಂತೆ ಮಾಡಿತ್ತು. ಹಾಗೆಂದು ಅದನ್ನು ತೋರಿಸಲುಂಟೇ?
"ಯೂ, ಗೆಟ್ ಲಾಸ್ಟ್... ಬ್ಲಡಿ...."ನನ್ನ ಮಾತು ಪೂರ್ತಿಯಾಗುವ ಮೊದಲೇ ಆತ ಪುನ್ಹ ಒಳಕ್ಕೆ ಬಂದಿದ್ದ. ಟೇಬಲ್ ಮೇಲಿದ್ದ ಚಾಕ್ ಪೀಸನ್ನು ತೆಗೆದುಕೊಂಡು ಇಡೀ ಕ್ಲಾಸು ಗರಬಡಿದ ಹಾಗೆ ನೋಡುತ್ತಿದ್ದಂತೆ ಬೋರ್ಡಿನ ಮೇಲೆ ದಪ್ಪಕ್ಷರದಲ್ಲಿ ಬರೆದಿದ್ದ, 'ಐ ಹೇಟ್ ದಿಸ್ ಟೀಚರ್,ಐ ವಿಲ್ ಟೀಚ್ ಹರ್ ಎ ಲೆಸೆನ್... ದಿಸ್ ಈಸ್ ಮೈ ಛೇಲೆಂಜ್... ' ಸುಣ್ಣದ ಕಡ್ಡಿಯನ್ನು ಅಲಕ್ಷ್ಯದಿಂದ ಟೇಬಲ್ ಮೇಲಕ್ಕೆಸೆದು ನನ್ನೆಡೆಗೆ ಇರಿಯುವಂತೆ ನೋಡಿ ಕಾಲಪ್ಪಳಿಸುತ್ತಾ ಹೊರಕ್ಕೆ ನಡೆದಿದ್ದ. ಆ ಕ್ಷಣ ನನ್ನ ಶರೀರದೊಳಗಿನ ಶಕ್ತಿಯೆಲ್ಲಾ ಸೋರಿ ಹೋದಂತೆನಿಸಿತ್ತು. ಭಯ ನನ್ನ ಇಂಚಿಂಚನ್ನೂ ಆವರಿಸಿಕೊಂಡಿತ್ತು. ಪತಿ,ಮಕ್ಕಳು,ಕಲೀಗ್ಸ್,ಯಾರು ಎಷ್ಟೇ ಸಾಂತ್ವನ ಹೇಳಿದರೂ ನನಗೆ ಮೊದಲಿನ ಸ್ಥಿತಿಗೆ ಬರಲಾಗಲೇ ಇಲ್ಲ. ಆ ಕಾಲಕ್ಕೆ ನಮ್ಮೂರಲ್ಲಿದ್ದ ಏಕ ಮಾತ್ರ ಇಂಗ್ಲಿಷ್ ಮಾಧ್ಯಮ ಶಾಲೆಯ 'ವೆರಿ ಸ್ಟ್ರಿಕ್ಟ್ ಟೀಚರ್' ಎನ್ನುವ ನನ್ನ ಬಿರುದಿನ ಬಗ್ಗೆ ನನಗೆ ತುಂಬಾ ಹೆಮ್ಮೆಯಿತ್ತು.ಶಾಲೆಯಲ್ಲಿ ಹುಲಿಯಂತಿದ್ದ ನಾನು ಅಂದಿನಿಂದ ಇಲಿಗಿಂತ ಕಡೆಯಾಗಿ ಹೋಗಿದ್ದೆ.ಹಗಲೂ ರಾತ್ರಿ ಝಾಬಿರನ ಭಯ... ಎಲ್ಲಿ ಹೋದರೂ ಆತ ನನ್ನನ್ನು ಹಿಂಬಾಲಿಸುತ್ತಿದ್ದಾನೆ... ನನ್ನ ಪ್ರತಿ ಚಲನವಲನಗಳನ್ನು ಗಮನಿಸುತ್ತಿದ್ದಾನೆ ಅನ್ನುವ ಗುಮಾನಿ... ಕೊನೆಗೊಮ್ಮೆ ಧೈರ್ಯ ಮಾಡಿ ಸೈಕಿಯಾಟ್ರಿಸ್ಟ್ ಬಳಿಗೆ ಹೋಗಿದ್ದೆ. ಅದರ ನಂತರ ಸಾಕಷ್ಟು ಚೇತರಿಸಿಕೊಂಡೆ. ಆದರೂ ಆತನ ಭಯ ಬೂದಿ ಮುಚ್ಚಿದ ಕೆಂಡದಂತೆ ನನ್ನ ಮನದಾಳದಲ್ಲಿ ಹುದುಗಿಯೇ ಇತ್ತು.ಆದರೆ ಅದು ಮೊದಲಿನ ಹಾಗೆ ನನ್ನ ದೈನಂದಿನ ಬದುಕನ್ನು ಅಸ್ಥವ್ಯಸ್ಥಗೊಳಿಸುತ್ತಿರಲಿಲ್ಲ ಅಷ್ಟೆ
ಹತ್ತು ವರ್ಷಗಳ ನಂತರ
1992 ಡಿಸೆಂಬರ್ 8.
ನಿನ್ನೆ ನಮ್ಮ ಶಾಲೆಯ ವಾರ್ಷಿಕೋತ್ಸವ ಬಹಳ ಚೆನ್ನಾಗಿ ಆಗಿತ್ತು. ಆ ಬಾಬ್ತು ಇವತ್ತು ರಜಾ. ವಾರದ ಖರೀದಿಗೆಂದು ಮಾರ್ಕೆಟ್ ಕಡಗೆ ಹೊರಟೆ. ಬಸ್ ಸ್ಟಾಪ್ ನಿರ್ಜನವಾಗಿತ್ತು.ಅದರ ಬಗ್ಗೆ ಹೆಚ್ಚು ಯೋಚಿಸದೆ ಎದುರಿಗೆ ಬರುತ್ತಿದ್ದ ಅಟೋವನ್ನು ನಿಲ್ಲಿಸಿದೆ.
ಮಾರ್ಕೆಟ್ ತಲುಪಿದಾಗ ನೋಡುತ್ತೇನೆ, ಹೆಚ್ಚಿನ ಎಲ್ಲಾ ಅಂಗಡಿಗಳೂ ಬಂದ್ ಆಗಿದ್ದುವು.ರಸ್ತೆಯಲ್ಲಿ ಜನಸಂಖ್ಯೆ ವಿರಳವಾಗಿತ್ತು. ನಾನು ಖಾಯಂ ಆಗಿ ಹೋಗುತ್ತಿದ್ದ ಪ್ರಾವಿಶನ್ ಸ್ಟೋರಿನ ಮಾಲೀಕ ಎದುರಿಗೇ ಅವಸರ ಅವಸರದಿಂದ ಬರುತ್ತಿದ್ದ.ಮುಖದಲ್ಲಿ ಗಾಬರಿ ಎದ್ದು ಕಾಣುತ್ತಿತ್ತು. ನನ್ನನ್ನು ನೋಡಿದ ತಕ್ಷಣ ತೀರ ಸಮೀಪಕ್ಕೆ ಬಂದು ಪಿಸುಗುಟ್ಟಿದಂತೆ ನುಡಿದ,
"ಮೇಡಮ್,ಆದಷ್ಟು ಬೇಗನೆ ಮನೆ ಸೇರ್ಕೊಳ್ಳಿ, ಮೊನ್ನೆ ಅಯೋಧ್ಯೆಯಲ್ಲಿ ಆದ ಗಲಾಟೆಗೆ ಇವತ್ತು ಇಲ್ಲಿ ಮುಯ್ಯಿ ತೀರಿಸ್ಕೊಳ್ತಿದ್ದಾರಂತೆ. ಎರಡು ಬೀದಿಗಳ ಆಚೆ ಹಿಂದೂವೊಬ್ಬನನ್ನು ಇರಿದಿದ್ದಾರಂತೆ.ನೀವು ಎಂತ ಮಾರಾಯ್ರೆ..... ಎಲ್ಲ ಬಿಟ್ಟು ಇವತ್ಯಾಕೆ ಮಾರ್ಕೆಟಿಗೆ ಬರೋಕೆ ಹೊರಟ್ರಿ? ನಿನ್ನೆಯ ನ್ಯೂಸ್ ಪೇಪುರು ಓದಿಲ್ವಾ? ಹೊರಡಿ... ಹೊರಡಿ... ಬೇಗ ..."
ಹೇಳುತ್ತಾ ನಿಮಿಷದಲ್ಲಿ ಅಂತರ್ಧಾನನಾದ.
ಛೆ, ಇದೆಂತಹ ಮೂರ್ಖತನವಾಗಿಹೊಯ್ತು ...?ಸ್ಕೂಲ್ ಡೇ ಯ ಬಿಝಿಯಲ್ಲಿ ಸುತ್ತಮುತ್ತಲಿನ ಆಗುಹೋಗುಗಳ ಬಗ್ಗೆ ಗಮನ ಹರಿಸಿರಲೇ ಇಲ್ಲ. ಮೊನ್ನೆ ಟಿ. ವಿ. ಯಲ್ಲಿ ಅಯೋಧ್ಯೆಯಲ್ಲಾದ ಗಲಾಟೆಯ ಲೈವ್ ಟೆಲಿಕಾಸ್ಟ್ ನೋಡಿದ್ದೆ. ಆದರೆ ನಮ್ಮದೊಂದು ವಿಶೇಷ ಗುಣವೇನೆಂದರೆ ಯಾವುದೇ ಘಟನೆ ನೇರವಾಗಿ ನಮಗೆ ಸಂಬಂಧಿಸಿಲ್ಲ ಎಂದಾದರೆ ಅದರ ಬಗ್ಗೆ ದಿವ್ಯ ನಿರ್ಲಕ್ಷ್ಯ ತಾಳಿ ಬಿಡುತ್ತೇವೆ. ಇಲ್ಲೂ ಆದದ್ದು ಅದೇ. ಪತಿ ಕಾರ್ಯನಿಮಿತ್ತ ಬೇರೆ ಊರಿಗೆ ಹೋಗಿದ್ದರು. ಮಕ್ಕಳು ದೂರದ ಊರಲ್ಲಿ ಓದುತ್ತಿದ್ದಾರೆ. ಮನೆಯಲ್ಲಿ ನಾನೊಬ್ಬಳೇ. ಸ್ಕೂಲ್ ಡೇ ಕಾರ್ಯಕ್ರಮದಲ್ಲಿ ನನ್ನ ಕ್ಲಾಸಿನ ಮಕ್ಕಳ ಪರ್ಫಾರ್ಮೆನ್ಸ್ ಅತ್ಯುತ್ತಮವಾಗಿ ಮೂಡಿಬರಬೇಕೆಂಬ ಅತಿ ಕಾಳಜಿಯೆದುರು ಉಳಿದೆಲ್ಲ ವಿಚಾರಗಳು ಗೌಣವಾಗಿದ್ದುವು. ನನ್ನ ಪ್ರಯತ್ನಕ್ಕೆ ತಕ್ಕಂತೆ ಮಕ್ಕಳೂ ಸೊಗಸಾಗಿ ನೃತ್ಯ ಮಾಡಿದ್ದರು. ಆಡಿಟೋರಿಯುಂ ಚಪ್ಪಾಳೆಗಳ ಸದ್ದಿನಿಂದ ಗುಂಯ್ಯಿಗುಟ್ಟಿತ್ತು. ಅಷ್ಟೂ ಸಾಲದೆಂಬಂತೆ ಮಕ್ಕಳ ಪೇರೆಂಟ್ಸ್ ಗ್ರೀನ್ ರೂಮುವರೆಗೂ ಬಂದು ನನ್ನನ್ನು ಮನಪೂರ್ವಕವಾಗಿ ಅಭಿನಂದಿಸಿದ್ದರು. ಆ ಗುಂಗಿನಲ್ಲೇ ತೇಲುತ್ತಿದ್ದ ನಾನು ನ್ಯೂಸ್ ಪೇಪರ್ ಓದೋದನ್ನ ಮರೆತುಬಿಟ್ಟಿದ್ದೆ.ಪೋಲಿಸ್ ವ್ಯಾನುಗಳು ನನ್ನೆದುರಿನಿಂದಲೇ ಬರ್ರನೆ ಓಡುತ್ತಿದ್ದುವು. ಒಬ್ಬ ಪೋಲಿಸಂತೂ ತಲೆ ಹೊರಕ್ಕೆ ಚಾಚಿ ನನ್ನನ್ನು ಕೆಕ್ಕರಿಸಿ ನೋಡುತ್ತಾ ಮಲೆಯಾಳಂ ಭಾಷೆಯಲ್ಲಿ ಏನೋ ಹೇಳಿದ.ನಾನು ಸ್ವಭಾವತಃ ಧೈರ್ಯಸ್ಥೆಯಾದರೂ ಇವತ್ಯಾಕೋ ಎದೆಯಲ್ಲಿ ಅವಲಕ್ಕಿ ಕುಟ್ಟತೊಡಗಿತ್ತು. ಕಾಣದ ಭಯವೊಂದು ನನ್ನ ಇಡೀ ಅಸ್ತಿತ್ವವನ್ನೇ ಅಲ್ಲಾಡಿಸತೊಡಗಿತ್ತು. ಬಸ್ಟ್ಯಾಂಡ್ ಕಡೆಗೆ ಓಟ ಕಿತ್ತೆ. ಅದು ಆಗಲೇ ಖಾಲಿ ಹೊಡೆಯುತ್ತಿತ್ತು. ಒಂದೇ ಒಂದು ಬಸ್ಸು ಅಲ್ಲಿರಲಿಲ್ಲ. ನನ್ನಂತೆ ಪರಿಸ್ಥಿತಿಯ ಅರಿವಿಲ್ಲದೆ ಬಂದು ಸಿಕ್ಕಿಹಾಕಿಕೊಂಡವರು ಕೆಲವೇ ಕೆಲವು ಮಂದಿ ಅಲ್ಲಿ ಕಂಗೆಟ್ಟು ನಿಂತಿದ್ದರು. ಅಷ್ಟರಲ್ಲಿ ಕೆಲವು ಪಡ್ಡೆ ಹುಡುಗರು ಏದುಸಿರು ಬಿಡುತ್ತಾ ಶರವೇಗದಿಂದ ಓಡುತ್ತಾ ಬರುವುದು ಕಾಣಿಸಿತು. ಅವರ ಹಿಂದಿನಿಂದಲೇ ತಳವಾರು ಝಳಪಿಸುತ್ತ ಇನ್ನಷ್ಟು ಪಡ್ಡೆಗಳು.....ಬಾಯಲ್ಲಿ ಅವಾಚ್ಯ ಶಬ್ಧಗಳು.... ಕ್ಷಣಾರ್ಧದಲ್ಲಿ ಎಲ್ಲರೂ ಅನತಿ ದೂರದಲ್ಲಿರುವ ಸಾರ್ವಜನಿಕ ಶೌಚಾಲಯದ ಹಿಂಬದಿಯಲ್ಲಿ ಮರೆಯಾದರು. ಅಲ್ಲಿಂದ ಒಂದೇ ಸಮನೆ ಕಿರುಚಾಟ,ಆರ್ತನಾದ ಕೇಳತೊಡಗಿತು.ಮುಂದಿನ ಕ್ಷಣದಲ್ಲಿ ಎಲ್ಲವೂ ಸ್ಥಬ್ಧವಾದುವು. ಭಯದಲ್ಲಿ ನನ್ನ ನಾಲಿಗೆ ಒಣಗಿ ಗಂಟಲು ಕಟ್ಟಿಹೋಯ್ತು. ಕಾಲುಗಳು ಬೆವರಿನ ಕೊಳದಲ್ಲಿ ಜಾರತೊಡಗಿದುವು. 'ರಾಮ... ರಾಮಾ...ಈಗ ನಾನು ಏನು ಮಾಡಲಿ? ನನ್ನ ಮಹೇಶನಾದರೂ ಊರಲ್ಲಿರಬಾರದಿತ್ತೆ? ಕೊನೆಯ ಪಕ್ಷ ಮಗನಾದರೂ ಇರುತ್ತಿದ್ದರೆ...?ಮಧೂರು ಗಣಪಾ... ನನ್ನನ್ನು ಕ್ಷೇಮವಾಗಿ ಮನೆಮುಟ್ಟಿಸಪ್ಪಾ....ನಾಳೆಯೇ ನಿನಗೆ ಒಂದಲ್ಲ, ಎರಡು ಉದಯಾಸ್ತಮಾನ ಸೇವೆ ಮಾಡಿಸುತ್ತೇನೆ....'
"ಟೀಚರೇ.... ನಮಸ್ಕಾರ, ಏನು ಇಲ್ಲಿ ಒಬ್ಬರೇ ನಿಂತದ್ದು?"ಧ್ವನಿ ಬಂದ ಕಡೆಗೆ ಸರಕ್ಕನೆ ತಿರುಗಿದೆ.ಎಷ್ಟೋ ವರ್ಷಗಳಿಂದ ನನ್ನ ಮನದಾಳದಲ್ಲಿ ಹುದುಗಿಕೊಂಡಿದ್ದ ಭಯದ ಭೂತ ಎದುರಿಗೆ ರೂಪ ತಳೆದು ನಿಂತಿತ್ತು! ಕೈಕಾಲುಗಳು ಮಂಜುಗಡ್ಡೆಯಾಗಿ ಹೋದುವು. ನನ್ನ ಎದೆಯ ಬಡಿತದ ಸದ್ದಿಗೆ ಕಿವಿಯ ತಮಟೆಯೇ ಹರಿದು ಹೋಗುತ್ತೇನೋ ಎನಿಸಿತು.('ತಾನು ಹಿಂದೂ..., ಇವನು ಮುಸಲ್ಮಾನ.... ಅಂದು ಈತ ಹೇಳಿದ್ದೇನು?'..... "ನಾನು ಸಾಯೋ ಮೊದಲು ನಿಮಗೊಂದು ಗತಿ ಕಾಣಿಸಿಯೇ ಸಿದ್ಧ .... ...."ಓಹ್... ಈ ಸಂದರ್ಭವನ್ನು ಆಯ್ದುಕೊಂಡು ನನ್ನನ್ನು ಮುಗಿಸುವ ಹುನ್ನಾರವೇ? ಅಂದರೆ ಇಷ್ಟು ವರ್ಷವೂ ಈತ ನನ್ನನ್ನು ಹಿಂಬಾಲಿಸುತ್ತಿದ್ದನೇ....???)
"ಟೀಚರೇ....,ನಾನು ಝಾಬೀರ್.....,ಗುರುತು ಸಿಗ್ಲಿಲ್ವಾ....?"
".........."
ಉತ್ತರಿಸಲು ನನ್ನ ನಾಲಿಗೆಗೆ ಜೀವ ಇದ್ದಾರೆ ತಾನೇ?ಭಯದಿಂದ ಕಣ್ಣು ಗುಡ್ಡೆಗಳು ಹೊರಚಾಚಿದ್ದೆಷ್ಟೋ ಅಷ್ಟೇ.
"ಟೀಚರೇ...,ನನ್ನನ್ನು ನೋಡಿ ನೀವೇನು ಹೀಗೆ ಬೆರ್ಚಪ್ಪನ ಹಾಗೆ ನಿಂತದ್ದು?ನನ್ನ ಮೇಲಿನ ಸಿಟ್ಟು ಇನ್ನೂ ಹಾಗೇ ಉಂಟಾ? ಅಥವಾ ನಾನೇನಾದ್ರು ಮಾಡಿಬಿಟ್ರೇ ಅಂತ ಹೆದರಿಕೆಯಾ? ನಾನೀಗ ಆವತ್ತಿನ ಶೇಮ್ಲೆಸ್ ಕ್ರೀಚರ್ರೂ ಅಲ್ಲ,ಬ್ಯಾಡ್ ಬಾಯ್ ಕೂಡಾ ಅಲ್ಲ. ಆ ದಿನ ನೀವು ನನ್ನ ಸ್ಕೂಲ್ ಬ್ಯಾಗನ್ನ ಹೊರಕ್ಕೆ ಬಿಸಾಡಿ ಬಿಟ್ರಲ್ಲಾ...?ಆ ಚೀಲವನ್ನ ಮನೆಗೆ ತೆಗೆದುಕೊಂಡುಹೋಗಿ ನಾನೂ ಮಾಡಿದ್ದು ಅದನ್ನೇ. ನನ್ನೆಲ್ಲಾ ದುರ್ಗುಣಗಳನ್ನ ಅದರಲ್ಲಿ ತುಂಬಿಸಿ ಆ ಚೀಲ ಸಮೇತ ಎಲ್ಲವನ್ನೂ ನನ್ನ ಲೈಫಿನಿಂದ್ಲೇ ಹೊರಕ್ಕೆ ಬಿಸಾಡಿಬಿಟ್ಟೆ. ಆ ದಿನ ನಾನು ತುಂಬಾ ಅತ್ತಿದ್ದೆ ಟೀಚರೇ... ಯಾಕೆ ಗೊತ್ತಾ..?ನಿಮ್ಮನ್ನು ನಾನು ತುಂಬಾ ಗೌರವಿಸುತ್ತಿದ್ದೆ.ಆದರೆ ನಿಮ್ಮ ಬಾಯಿಯಿಂದ ಭೇಷ್ ಎನಿಸಿಕೊಳ್ಳುವಂತಹ ಸಾಧನೆ ಮಾಡಿ ತೋರಿಸುವಂತಹ ಬುಧ್ಧಿವಂತ ನಾನಾಗಿರಲಿಲ್ಲ. ಅದಕ್ಕಾಗಿ ಮಂಗ ವಿದ್ಯೆ ಮಾಡಿ ನಿಮ್ಮ ಗಮನ ಸೆಳೆಯುತ್ತಿದ್ದೆ. ಆ ದಿನ ನೀವು ಬೈದ ಬೈಗುಳ ಉಂಟಲ್ಲಾ ಟೀಚರೇ.... ನನ್ನ ಮರ್ಮಕ್ಕೆ ಹೊಡೆದ ಹಾಗಾಗಿತ್ತು.ಶಾಲೆಯ ಪಾಠ ನನಗೆ ಹೇಳಿದ್ದಲ್ಲ ಎಂದು ಗೊತ್ತಿದ್ದರೂ ನಿಮ್ಮ ಕ್ಲಾಸಿಗಾಗಿ ಶಾಲೆಗೆ ಬರುತ್ತಿದ್ದೆ.ನೀವೇ ನನ್ನನ್ನು ಹೊರಕ್ಕೆ ಅಟ್ಟಿದ ಮೇಲೆ ಶಾಲೆಯ ಕಡೆಗೆ ಮುಖ ಮಾಡೋದು ಬೇಡ ಅನಿಸಿತ್ತು. ದೊಡ್ಡಪ್ಪನೊಂದಿಗೆ ದುಬೈಗೆ ಹೋದೆ. ವ್ಯಾಪಾರ ಕಲಿತೆ.ನಿಮ್ಮ ಮಾತುಗಳು ಕ್ಷಣ ಕ್ಷಣಕ್ಕೂ ನನ್ನನ್ನು ಚುಚ್ಚುತ್ತಿದ್ದುವು ಟೀಚರೇ....,ಹಾಗಾಗಿ ನಾನೆಂದೂ ಅನ್ಯಾಯದ ಮಾರ್ಗವನ್ನು ತುಳಿಯಲಿಲ್ಲ. ಬೇಕಾದಷ್ಟು ಸಂಪಾದಿಸಿದೆ. ಊರಿಗೆ ಬಂದು ಮದುವೆಯೂ ಆದೆ. ಮಕ್ಕಳೂ ಆದುವು.ನಂತರವೂ ದುಬೈಯಲ್ಲೇ ಇದ್ದೆ.ಎಷ್ಟೇ ದೊಡ್ಡ ಸಾವುಕಾರನಾದ್ರು ಊರಿನ ಸೆಳೆತ ಬಿಟ್ಟೀತ ಟೀಚರೇ? ಅಲ್ಲಿಂದ ಎಲ್ಲ ಬಿಟ್ಟು ಬಂದು ಈಗ ಒಂದೆರಡು ವರ್ಷಗಳಿಂದ ಇಲ್ಲೇ ಇದ್ದೇನೆ. ನೀವು ನನ್ನನು ಬೈದಂತೆ ನನ್ನ ಮಕ್ಕಳನ್ನು ಡರ್ಟಿ,ಶೇಮ್ಲೆಸ್... ಎಂದೆಲ್ಲಾ ಯಾರೂ ಬೈಯ್ಯಬಾರದು ಎಂದು ಕೊಂಡಿದ್ದೆ. ಹಾಗಾಗಿ ಒಳ್ಳೆ ತಿಳುವಳಿಕೆ ಇರುವವಳನ್ನೇ ಮದುವೆಯಾದೆ. ಅವಳು ನನ್ನನ್ನೂ ಅರ್ಥ ಮಾಡಿಕೊಂಡು ಮಕ್ಕಳನ್ನೂ ಚೆನ್ನಾಗಿಯೇ ಬೆಳೆಸಿದ್ದಾಳೆ. ಒಬ್ಬ ಮಗ ನಮ್ಮ ಶಾಲೆಯಲ್ಲೇ ಮೂರನೆ ಕ್ಲಾಸಲ್ಲಿದ್ದಾನೆ. ನೀವೀಗ ಹೈಸ್ಕೂಲ್ ಸೆಕ್ಷನಿಗೆ ಪಾಠ ಮಾಡುವುದಂತೆ ?ಮಗ ನಿಮ್ಮ ಸುದ್ದಿ ಹೇಳ್ತಿರ್ತಾನೆ. ನೀವು ರಿಟೈರ್ ಆಗೋ ಮೊದಲು ಅವನೂ ನಿಮ್ಮ ಸ್ಟೂಡೆಂಟ್ ಆದಾನು. ಇನ್ನೊಬ್ಬ ಮಗ ಎಲ್.ಕೆ.ಜಿ. ಇಬ್ಬರೂ ಡೀಸೆಂಟ್ ಮಕ್ಕಳು ಟೀಚರೇ........ ಎಂತ ಟೀಚರೇ ನೀವು... ನಾನಿಷ್ಟು ಹೊತ್ತಿನಿಂದ ಮಾತ್ನಾಡ್ತಾ ಇದ್ದೇನೆ,ನೀವು ಒಂದೇ ಒಂದು ಶಬ್ದ 'ಹಾಂ... ಹೂಂ ...'ಎನ್ನಲಿಲ್ಲಾ...?ನನ್ನ ಮೇಲೆ ಸಿಟ್ಟು ಇನ್ನೂ ಇದ್ರೆ ಅದನ್ನು ಆಮೇಲೆ ತೋರಿಸಿ. ಈಗ ಇಲ್ಲಿಂದ ಹೋಗಿ ಬಿಡುವಾ ಬನ್ನಿ... ಯಾಕೆ ನನ್ನ ಮೇಲೆ ಸಂಶಯವಾ? ನಮ್ಮ ಮನೆಗೆ ಪೇಪರು ಹಾಕುವ ಹುಡುಗ ಇವತ್ತು ಬಂದಿಲ್ಲ. ಹಾಗೆ ಇಲ್ಲಿ ಪೇಪರು ಉಂಟೋ ಎಂದು ನೋಡಲು ಬಂದೆ. ನಿಮ್ಮನ್ನು ದೂರದಿಂದಲೇ ಗಮನಿಸಿದ್ದೆ. ಈಗಲೂ ನೀವು ಮೊದಲಿನ ಹಾಗೇ ಇದ್ದೀರಿ ಟೀಚರೇ....ಬದಲಾಗಲೇ ಇಲ್ಲ.... ಬನ್ನಿ ಹೋಗುವಾ..... ಇನ್ನೂ ಇಲ್ಲಿ ನಿಲ್ಲುವುದು ರಿಸ್ಕಿ..... "
ಭಯದ ಮೂಟೆಯೊಳಗೆ ಹುದುಗಿ ಹೋಗಿದ್ದ ನಾನು ಪ್ರತಿಕ್ರಿಯೆ ನೀಡುವ ಸ್ಥಿತಿಯನ್ನೇ ಕಳೆದುಕೊಂಡುಬಿಟ್ಟಿದ್ದೆ. ಆದರೂ ಸಾಹಸಪಟ್ಟು ತೊದಲಿದೆ,
"ನಾನು ..... ನನ್ನನ್ನು.... ಕರೆದೊಯ್ಯಲು.... ಊಂ.... ನನ್ನೆಜಮಾನ್ರು ಬರ್ತಾರೆ ......"
"ಬಿಡಿ ಟೀಚರೇ.... ನೀವೂ ಸುಳ್ಳು ಹೇಳ್ತೀರಾ.....?ಇನ್ನೂ ನನ್ನ ಮೇಲೆ ಅಪನಂಬಿಕೆಯಾ?ಆ ದಿನ ನಿಮ್ಮ ಮನಸ್ಸನ್ನು ಅಷ್ಟು ನೋಯಿಸಿದ್ದಕ್ಕೆ ಈವತ್ತು ಪ್ರಾಯಶ್ಚಿತ್ತ ಮಾಡಿಕೊಳ್ಳಲು ಒಂದು ಚಾನ್ಸ್ ಕೊಡಿ ಟೀಚರೇ....ನೋಡಿ, ಅಲ್ಲಿ ನಿಂತಿರುವುದೇ ನನ್ನ ಕಾರು. ಇನ್ನೂ ಅದು ಅಲ್ಲೇ ನಿಂತಿದ್ದರೆ ಪುಂಡರು ಅದನ್ನು ಹುಡಿ ಮಾಡಿ ಬಿಟ್ಟಾರು.ಬನ್ನಿ ನಿಮ್ಮನ್ನು ಮನೆಗೆ ಮುಟ್ಟಿಸಿಯೇ ನಾನು ನಮ್ಮ ಮನೆ ಕಡೆಗೆ ಹೋಗ್ತೇನೆ.
"ಅದೂ ..... ಮತ್ತೆ..... ನಾನು ..... "ನನ್ನೆದೆಯ ಪುಕು ಪುಕು ಇನ್ನೂ ಹೋಗಿರಲಿಲ್ಲ.
"ಟೀಚರೇ..... ಈಗ ನಿಮ್ಮನ್ನು ಕರೆದೊಯ್ಯಲು ನಿಮ್ಮ ಮಗ ಕಿಶೋರ ಬಂದಿರುತ್ತಿದ್ದರೆ ನೀವು ಹೀಗೆ ಅನುಮಾನಿಸ್ತಿದ್ರಾ?"
ಆತನ ಧ್ವನಿಯಲ್ಲಿದ್ದ ಪ್ರಾಮಾಣಿಕತೆ, ಬಾಡಿ ಲ್ಯಾಂಗ್ವೆಜಲ್ಲಿ ಎದ್ದು ಕಾಣುತ್ತಿದ್ದ ಅಕ್ಕರೆ ನನ್ನ ಹೃದಯವನ್ನು ನೇವರಿಸಿತು. ಎಷ್ಟೋ ವರ್ಷಗಳಿಂದ ಎದೆಯ ಮೇಲೆ ಕುಳಿತು ಉಸಿರುಗಟ್ಟಿಸುತ್ತಿದ್ದ ಭಯದ ಭೂತ ದೊಪ್ಪನೆ ಉರುಳಿ ಬಿತ್ತು. ಹಗುರ ಮನಸ್ಸಿನಿಂದ ಪ್ರಕಟವಾಗಿ ನಕ್ಕೆ. ಆತ ಕಾರನ್ನೇರುವ ಮೊದಲೇ ನಾನು ಎದುರಿನ ಸೀಟನ್ನಲಂಕರಿಸಿದ್ದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ