ಈ ಕಥೆಯನ್ನು ಓದಿದ್ರಲ್ಲಾ...? ಸೆಂಟಿಮೆಂಟಲ್ ಮೆಲೋಡ್ರಾಮ ಅಂದ್ಕೊಂಡ್ರಾ....? ಕೆಲವೊಮ್ಮೆ ನಿಜ ಜೀವನದ ಘಟನೆಗಳು ಅದನ್ನೂ ಮೀರಿಸುವಂತಿರುತ್ತವೆ. ನಾನು ಬರೆದ ಈ ಕಥೆ ನಿಜ ಘಟನೆಯನ್ನು ಆದರಿಸಿದ್ದು ಎಂದರೆ ನೀವು ನಂಬುವಿರಾ....?ನಂಬಲೇಬೇಕು. ಅದನ್ನು ನಿಮ್ಮೊಡನೆ ನಾನು ಹಂಚಿಕೊಳ್ಳಲೇಬೇಕು. ಮುಂದೆ ಓದಿ....,
ಸುಮಾರು ಆರು ವರ್ಷಗಳ ಹಿಂದೆ...., ಆಗ ನನ್ನ ಮಗಳು ಧಾರವಾಡದ ಡೆಂಟಲ್ ಕಾಲೇಜಲ್ಲಿ ದಂತ ವೈದ್ಯಕೀಯ ಸ್ನಾತಕೋತ್ತರ ಪದವಿಗೆ ಓದುತ್ತಿದ್ದಳು. ಮಗಳು ಅಲ್ಲಿದ್ದುದರಿಂದ ಊರನ್ನು ನೋಡಿದ ಹಾಗೂ ಆಯ್ತು ಮಗಳೊಂದಿಗೆ ಇದ್ದ ಹಾಗೂ ಆಯ್ತು ಎಂದುಕೊಂಡು ನಾನು ಎರಡು ದಿನಗಳ ಮಟ್ಟಿಗೆ ಅಲ್ಲಿಗೆ ಹೋಗಿದ್ದೆ. ಅದು ಬಹಳ ಚೆಂದದ ಕಾಲೇಜು. ಅಂದರೆ ಒಳ್ಳೆ ಫೈವ್ ಸ್ಟಾರ್ ಹೋಟೆಲಿನಂತಿತ್ತು. ಕ್ಯಾಂಪಸ್ ತುಂಬಾ ಮರಗಿಡಬಳ್ಳಿಗಳು, ಹೂದೋಟವಂತೂ ನೋಡಿಯೇ ತಣಿಯಬೇಕು. ಒಂದು ಸಂಜೆ ನಾನು ಮಗಳೊಂದಿಗೆ ಆಕೆಯ ಹಾಸ್ಟೆಲಿನ ಹೊರಗಡೆ ಇರುವ ಕಲ್ಲು ಬೆಂಚಿನ ಮೇಲೆ ಕುಳಿತು ಅರಳಿ ನಗುತ್ತಿರುವ ಹೂಗಳ ಚೆಲುವನ್ನು ಆಸ್ವಾದಿಸುತ್ತಾ ಇದ್ದೆವು. ಆಲ್ಲೇ ಅನತಿ ದೂರದಲ್ಲಿ ಕಾಫಿ ಹೌಸ್ ಒಂದಿತ್ತು. ಅದರ ಹೊರಗಡೆ ಎರಡು ಮೇಜು ಮತ್ತು ಕುರ್ಚಿಗಳು. ವಿದ್ಯಾರ್ಥಿಗಳು ಅಲ್ಲಿ ಕುಳಿತು ಕಾಫಿ ಹೀರುತ್ತಾ ಓದುತ್ತಲೋ ಮಾತನಾಡುತ್ತಲೋ ಸಮಯ ಕಳೆಯುತ್ತಿದ್ದರು. ಕೆಲವೊಮ್ಮೆ ಅಲ್ಲಿಯೇ ಚಿಕ್ಕ ಪುಟ್ಟ ಪಾರ್ಟಿಗಳೂ ನಡೆಯುತ್ತಿದ್ದುವು. 'ನಮ್ಮೂರಲ್ಲೂ ಇಂತಹ ಒಂದು ಜಾಗ ಇರುತ್ತಿದ್ದರೆ...' ಎಂದು ನಾನು ಕನಸು ಕಾಣುತ್ತಿರುವಾಗಲೇ ಮಗಳು ಕರೆದಿದ್ದಳು,
"ಅಮ್ಮಾ...,ಅಲ್ಲಿ ನೋಡು..., ಕಾಫಿ ಹೌಸ್ ಕಡೆ ಬರ್ತಾ ಇದ್ದಾನಲ್ಲ... ಆ ಹುಡುಗ.... ನಮ್ಮ ದಕ್ಷಿಣ ಕನ್ನಡದವ...." ಎಂದಳು.
"ಓ ..., ಹೌದಾ...?" ಎಂದು ಆತನೆಡೆಗೆ ನೋಡಿದೆ.ಬಂದು ಖುರ್ಚಿಯಲ್ಲಿ ನನಗಭಿಮುಖವಾಗಿ ಕುಳಿತ.ಕಾಫಿ ಹೀರುತ್ತಾ ಸುಮಾರು ಹದಿನೈದು ನಿಮಿಷ ಅಲ್ಲೇ ಇದ್ದ. ನಾವು ಪರ ಊರಿನಲ್ಲಿರುವಾಗ ನಮ್ಮದೇ ಊರಿನವರನ್ನು ನೋಡಿದಾಗ ಒತ್ತರಿಸಿ ಬರುವ ಆ ಒಂದು ಸೆಳೆತವೇ ಬೇರೆ ಇರುತ್ತೆ ಆಲ್ಲವೇ...?(ಅವರನ್ನೇ ನಮ್ಮೂರಲ್ಲಿ ನೋಡಿದರೆ ಎದುರಿಗೇ ಸವರಿಕೊಂಡು ಹೋದರೂ ಗಮನಿಸುವುದೇ ಇಲ್ಲ!)ನನಗೂ ಹಾಗೇ ಆಯಿತು. ಮಗಳೂ ಅದೇ ಉದ್ದೇಶದಿಂದಲೇ ಹೇಳಿದ್ದಿರಬಹುದು ಎಂದುಕೊಂಡೆ. ಆದರೆ ಮುಂದೆ ಅವಳು ಹೇಳಿದ ಮಾತುಗಳನ್ನು ಕೇಳಿ ಅವಾಕ್ಕಾದೆ.
"ಅಮ್ಮಾ..., ಇವನು ಈಗ ಕೊನೆ ವರ್ಷದ ಪಿ.ಜಿ. ಗೆ ಓದ್ತಿದ್ದಾನೆ. ನಿಜ ಸಂಗತಿ ಏನೆಂದರೆ ಐದು ವರ್ಷ ಹಿಂದೆಯೇ ಇವನು ಪಿ.ಜಿ. ಗೆ ಸೇರ್ಕೋಬೇಕಿತ್ತು. ಆದರೆ ಆವಾಗ ತಂಗಿಗೋಸ್ಕರ ತನಗೆ ದೊರೆತ ಸೀಟನ್ನು ಬಿಟ್ಟುಕೊ
ಟ್ಟಿದ್ದನಂತೆ ...!"
"ಏನು... ಹಾಗಂದರೆ?!" ಮಗಳ ಮಾತುಗಳನ್ನು ಅರ್ಥ ಮಾಡಿಕೊಳ್ಳಲಾರದೆ ಪ್ರಶ್ನೆ ಹಾಕಿದ್ದೆ.
"ಹೌದಮ್ಮಾ..., ಹೆಚ್ಚು ಡೀಟೇಲ್ಸ್ ಗೊತ್ತಿಲ್ಲ. ಆದರೆ ನಮ್ಮ ಕಾಲೇಜಲ್ಲಿ ಎಲ್ರೂ ಹೇಳ್ತಿರ್ತಾರೆ, 'ಐಡಿಯಲ್ ಬ್ರದರ್ ಅಂದ್ರೆ ಅವನೇ...'ಎಂದು. ಅವನು ಮತ್ತು ಅವನ ತಂಗಿ ಇಬ್ಬರೂ ಬಿ.ಡಿ.ಎಸ್. ಮಾಡಿದ್ರಂತೆ....., ಆಮೇಲೆ ಇಬ್ರೂ ಒಟ್ಟಿಗೇ ಪಿ.ಜಿ. ಸಿ.ಇ.ಟಿ. ಬರೆದ್ರಂತೆ...., ಇಬ್ಬರಿಗೂ ಒಳ್ಳೆಯ rank ಬಂದಿತ್ತಂತೆ. ಅದೇನೋ ಕಾರಣಕ್ಕಾಗಿ ..., ಬಹುಶಃ ಫೈನಾನ್ಶಿಯಲ್ ಇರ್ಬೇಕು...., ಇವನು ತನ್ನ ತಂಗಿಗಾಗಿ ತನಗೆ ಸಿಗಬಹುದಾಗಿದ್ದ ಸೀಟನ್ನು ಬಿಟ್ಟುಕೊಟ್ಟದ್ದಂತೆ...., ಆಮೇಲೆ ಎರಡು ವರ್ಷದ ನಂತರ ಇವನು ಪುನ್ಹ ಓದಿ ಈ ಕಾಲೇಜಲ್ಲಿ ಮೆರಿಟ್ ಸೀಟು ತಗೊಂಡದ್ದಂತೆ....."
ಅಬ್ಬಾ...! ಹೀಗೂ ಉಂಟೆ...? ಅಂತ ಅನಿಸಿತ್ತು. ಯಾಕೆ ಗೊತ್ತಾ..? ವೈದ್ಯಕೀಯವೇ ಆಗಿರಲಿ ದಂತ ವೈದ್ಯಕೀಯವೇ ಆಗಿರಲಿ ಜಾತಿಯ ಆಧಾರದಲ್ಲಿ ಹಿಂದಕ್ಕೆ ತಳ್ಳಲ್ಪಟ್ಟ ವಿಭಾಗದವರಿಗೆ (ಅಂದರೆ ಮೀಸಲಾತಿ ಯಾವುದೂ ಇಲ್ಲದೆ ಮೇಲ್ವರ್ಗದವರೆಂಬ ಒಂದೇ ಒಂದು ಕಾರಣಕ್ಕಾಗಿ ಹಿಂದಕ್ಕೆ ತಳ್ಳಲ್ಪಟ್ಟವರು) ಜನರಲ್ ಕೆಟಗರಿಯಲ್ಲಿ ಅರ್ಹತೆಯ ಆಧಾರದಲ್ಲಿ ತನ್ನ ಆಯ್ಕೆಯ ವಿಭಾಗದಲ್ಲಿ ಸೀಟು ದೊರೆಯಬೇಕಾದರೆ ಸಂಬಂಧಪಟ್ಟ ವಿದ್ಯಾರ್ಥಿ/ನಿ ಯ ಅದೃಷ್ಟ ಮಾತ್ರ ಚೆನ್ನಾಗಿದ್ದರೆ ಸಾಕಾಗುವುದಿಲ್ಲ. ಅವನ/ಅವಳ ಪೂರ್ವಜರು ಮಾಡಿದ ಪುಣ್ಯದ ಗಂಟೂ ದೊಡ್ದದಿರಲೇಬೇಕು. ಈ ಹುಡುಗನೂ ಜನರಲ್ ಕೇಟಗರಿಯವನೇ. ಹಾಗಿದ್ದೂ.... ಹೀಗೆ ಮಾಡಬೇಕಾದರೆ ಅದು ಖಂಡಿತಕ್ಕೂ ಬಹು ದೊಡ್ಡ ವಿಷಯವೇ... ಇಂದಿನ ಯುವಜನತೆಯನ್ನು ಹಿಗ್ಗಾ ಮುಗ್ಗಾ ಬೈದು ಹಂಗಿಸುವವರಿಗೆ ಪಾಠದಂತಿದ್ದ ಈ ಹುಡುಗ. ನಾನಂತೂ ಪೂರ್ತಿ ಅಲುಗಾಡಿಹೋಗಿದ್ದೆ. ಮನೆಗೆ ವಾಪಾಸಾದ ಮೇಲೂ ನನ್ನ ಮನಸ್ಸು ಅದನ್ನೇ ಮೆಲುಕು ಹಾಕುತ್ತಿತ್ತು. ಅಂತಹ ದಿನಗಳಲ್ಲೇ ದಿನಪತ್ರಿಕೆಗಳಲ್ಲಿ 'ಕೊಡಿಗಿನ ಗೌರಮ್ಮ ಕಥಾ ಸ್ಪರ್ಧೆ'ಗೆ ಕಥೆಗಳನ್ನು ಆಹ್ವಾನಿಸಿದ ಪ್ರಕಟಣೆ ಕಣ್ಣಿಗೆ ಬಿದ್ದಿತ್ತು.ಅಂದು ಕೇಳಿದ್ದ ಆ ಘಟನೆಯೇ ಕಥಾ ಹಂದರವಾಗಿ ರಕ್ತ ಮಾಂಸಗಳನ್ನು ತುಂಬಿಕೊಂಡು 'ಒಂದೇ ಬಳ್ಳಿಯ ಹೂಗಳು' ಸೃಷ್ಟಿಯಾಯ್ತು. ಪ್ರಥಮ ಬಹುಮಾನವೂ ಬಂತು. ನಿಜ ಜೀವನದಲ್ಲೂ ಅದು ಪ್ರಥಮ ಬಹುಮಾನ ಕೊಡಬೇಕಾದಂತಹ ನಡೆಯೇ ತಾನೇ...?
ಈಗ ಒಂದಾರು ತಿಂಗಳ ಹಿಂದೆ ಮದುವೆಯೊಂದಕ್ಕೆ ಹೋಗಿದ್ದೆ. ಆ ಹುಡುಗನೂ ಅಲ್ಲಿಗೆ ಬಂದಿದ್ದ. ಈಗ ಸಂಸಾರಿಯಾಗಿದ್ದ. ದೇಹ ಸ್ವಲ್ಪ ದಪ್ಪಗಾಗಿತ್ತು. ಬಗಲಲ್ಲಿ ಹೆಂಡತಿಯಿದ್ದಳು. ಅಂದು ಒಂದೇ ಸಾರಿ ನೋಡಿದ ಆ ಮುಖ ನನ್ನ ಮನದಲ್ಲಿ ಅಚ್ಚೊತ್ತಿ ನಿಂತಿತ್ತು. ಹಾಗಾಗಿ ಇಷ್ಟು ವರ್ಷಗಳ ನಂತರವೂ ನೋಡಿದ ತಕ್ಷಣ ಗುರುತು ಹಿಡಿದು ಬಿಟ್ಟಿದ್ದೆ. 'ಮಾರಾಯಾ...,ನೀನೇ ಹೀರೋ ಆಗಿ ಬರೆದ ಕಥೆಗೆ ಫ಼ಸ್ಟ್ ಪ್ರೈಜ್ ಬಂತು ಕಣೋ...' ಎಂದು ಹೇಳಬೇಕಿತ್ತು ಹೇಳಲಿಲ್ಲ. ಯಾಕೆಂದರೆ ಅಸಲಿಗೆ ಅವನ ನೇರ ಪರಿಚಯವೇ ಇರಲಿಲ್ಲ.ನನ್ನ ಮಗಳಿಗೆ ಅವನನ್ನು ಪರಿಚಯವಿತ್ತು. ಅವಳ ಮೂಲಕ ನನಗೆ ಅವನನ್ನು ಗೊತ್ತಿತ್ತಷ್ಟೇ. ಕೆಲವು ವಿಷಯಗಳೆಲ್ಲಾ ಹಾಗೆ ಹಾಗೇ ಇದ್ದರೇ ಚೆಂದ. ಇದೂ ಹಾಗೇ ಇರಲಿ ಎಂದುಕೊಂಡೆ. ಸರಿ ತಾನೇ...?
ಇನ್ನು ಕಥೆಗೆ ಬಳಸಿದ ಭಾಷೆಯ ಬಗ್ಗೆ ಹೇಳಬೇಕು. ಆ ಸ್ಪರ್ಧೆಗೆ ಕಳುಹಿಸಬೇಕಾದ ಕಥೆಗಳು ಕಡ್ಡಾಯವಾಗಿ ಹವ್ಯಕ ಭಾಷೆಯಲ್ಲಿರಬೇಕು. ನನ್ನ ಬ್ಲಾಗಲ್ಲಿ ಅದನ್ನು ಪ್ರಕಟಿಸಬೇಕೆಂದು ನಿಶ್ಚೈಸಿಕೊಂಡಾಗ ಎಲ್ಲ ಭಾಷೆಯ ಓದುಗರನ್ನು ಗಮನದಲ್ಲಿಟ್ಟುಕೊಂಡು ಮೂಲ ಹವ್ಯಕ ಭಾಷೆಯಲ್ಲಿದ್ದ ಕಥೆಯನ್ನು ಕನ್ನಡಕ್ಕೆ ಪರಿವರ್ತಿಸಿಕೊಂಡೆ. ಆದರೆ originality ಯ ದೃಷ್ಟಿಯಿಂದ ಸಂಭಾಷಣೆಯನ್ನು ಹವ್ಯಕ ಭಾಷೆಯಲ್ಲೇ ಉಳಿಸಿಕೊಂಡೆ.ಆದರೆ ಅಲ್ಲೂ ನಡುನಡುವೆ ಕನ್ನಡ ಶಬ್ಧಗಳನ್ನು ಉಪಯೋಗಿಸಿರುವೆ.ಅನ್ಯ ಭಾಷಿಕರಿಗೂ ಕಥೆಯಲ್ಲಿ ಬರುವ ಮಾತುಗಳ ಭಾವ ಸುಲಭದಲ್ಲಿ ಅರ್ಥವಾಗಲೆಂದು ಹಾಗೆ
ಮಾಡಿದ್ದೆ.
ಧನ್ಯವಾದಗಳು. ಮತ್ತೆ ಭೇಟಿಯಾಗೋಣ....
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ