ನಮ್ಮೊಳಗಿನ ಕುಂದು ಕೊರತೆ, ದೌರ್ಬಲ್ಯಗಳನ್ನು
ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವುದು, ವ್ಯಕ್ತಿತ್ವ ಸುಧಾರಣೆಗೆ ಮನಸ್ಸು ಮಾಡುವುದು, ಸಹಜೀವಿಗಳೊಂದಿಗೆ
ಸೌಹಾರ್ದತೆಯನ್ನು ಕಾಪಾಡಿಕೊಳ್ಳುವುದು.....ಈ ಮೂರೂ ಕುಣಿಕೆಗಳಾಗಿ
ಒಂದರೊಳಗೊಂದು ಸೇರಿಹೋದಾಗ ಜೀವನವೆನ್ನುವುದು ಸರಳ ಸುಂದರ ಸಂಕಲೆಯಾಗುತ್ತದೆ.
ಆದರೆ ನಮ್ಮ ರಕ್ತದಲ್ಲೇ ಒಂದಾಗಿ
ಹೋಗಿರುವ ಮೋಹ, ಅಹಂ ಎನ್ನುವ
ಇಬ್ಬರು ಗಳಸ್ಯ ಕಂಠಸ್ಯ ಮಿತ್ರರಿದ್ದಾರಲ್ಲಾ
ಎಷ್ಟು ಮಾತ್ರಕ್ಕೂ ಇದನ್ನು ಸಹಿಸಲಾರರು. ಕಣ್ಣಿಲ್ಲದ
ಮೋಹ ವಿವೇಚನೆಯನ್ನೂ ಕಳೆದುಕೊಂಡಾಗ ಮನುಷ್ಯ ಮನುಷ್ಯರೊಳಗಿನ ಸಂಬಂಧ
ಎಷ್ಟು ಜಾಳುಜಾಳಾಗಿ ಬಿಡುತ್ತದೆ ಎನ್ನುವುದಕ್ಕೆ ನನ್ನದೇ ಒಂದೆರಡು ಅನುಭವಗಳು
ಇಲ್ಲಿವೆ. ಇದನ್ನು ಓದುತ್ತಿದ್ದಂತೆ `ಓ..,ಹೌದಲ್ಲ.., ನಮಗೂ ಇಂತಾದ್ದೇ ಅನುಭವವಾಗಿದೆ..'
ಎಂದು ನಿಮಗೂ ಅನಿಸೀತು.
ಕೆಲವು ಸಮಯದ ಹಿಂದೆ ಮದುವೆಯೊಂದಕ್ಕೆ
ಹೋಗಿದ್ದೆ. ನೆಂಟರಿಷ್ಟರೊಂದಿಗೆ ಬೆರೆಯತ್ತಾ,ಮತನಾಡುತ್ತಾ ಹಾಗೇ ಕಣ್ಣು ಹಾಯಿಸಿದಾಗ
ದೂರದ ಮೂಲೆಯೊಂದರಲ್ಲಿ ನನ್ನ ಪರಿಚಿತ ಹಿರಿಯರೊಬ್ಬರು
ಏಕಾಂಗಿಯಾಗಿ ಕುಳಿತಿದ್ದುದನ್ನು ನೋಡಿದೆ. ಇದೇನು ಇವರಿಗೆ
ಯಾರೂ ಜೊತೆ ಸಿಗಲಿಲ್ಲವೇ...? ಒಂಟಿಯಾಗಿ ಕುಳಿತಿದ್ದಾರಲ್ಲಾ ಎಂದುಕೊಂಡೆ. ಪಾಪ...
ಹಿರಿಯರಲ್ಲವೇ..? ಮಾತನಾಡಿಸೋಣ ಎಂದುಕೊಂಡು ಅವರಿದ್ದೆಡೆಗೆ ಹೋದೆ. ನನ್ನನ್ನು ನೋಡಿ
ಮುಗುಳ್ನಕ್ಕರು. ಊಭಯಕುಶಲೋಪರಿ ಸಾಂಪ್ರತ ಮುಗಿದ ಮೇಲೆ
ಕೇಳಿದೆ,
"ಮಾವಾ..,
ಈಗ ನಿಮ್ಮ ಮೊಮ್ಮಗ ಏನು
ಓದ್ತಿದ್ದಾನೆ?"
"ಅವನನ್ನು
`ಆ' ಕಾಲೇಜಿಗೆ ಹಾಕಿ ಸೋತೆವು...,ಅಲ್ಲಿ
ಲೆಕ್ಚರರ್ಸ್ ತುಂಬ ಪಾರ್ಷಿಯಾಲಿಟಿ ಮಾಡ್ತಾರೆ..,ನನ್ನ ಮೊಮ್ಮಗ ಎಸ್.ಎಸ್.ಎಲ್.ಸಿ.ಯಲ್ಲಿರುವಾಗ ಎಷ್ಟು ಚುರುಕಿದ್ದ..,.ಎಲ್ಲ
ಸಬ್ಜೆಕ್ಟಲ್ಲೂ ಡಿಸ್ಟಿಂಕ್ಶನ್ನೇ ತೆಗೀತಿದ್ದ..., ಈಗ ಆ ಕಾಲೇಜಿನಲ್ಲಿ
ಎಲ್ಲರಿಗೂ ಅವನ ಮೇಲೆ ಹೊಟ್ಟೆಕಿಚ್ಚು..,ಯಾವ ಅವನಿಗೆ ಅಲ್ಲಿ
ಒಳ್ಳೆ ಮಾಕ್ಸರ್್ ಕೊಡೋದೇ ಇಲ್ಲ..., ಬರೀ
ದಂಡ ಆ ಕಾಲೇಜು..., ಅಗತ್ಯಕ್ಕಿಂತ
ಹೆಚ್ಚು ರೂಲ್ಸು ಬೇರೆ...,ಮೆಸ್ಸ್
ಫುಡ್ಡಂತೂ ಬರೀ ಬೂರ್ನಾಸು ...ನಿನ್ನ ಸಜೆಶನ್ ಮೇಲೆ ಅಲ್ಲಿ ಸೇರಿಸಿ ಸೋತೆವು"
ಅವರ ಮಾತು ಕೇಳಿ ನಾನು
ಅವಾಕ್ಕಾಗಿ ಹೋದೆ. ಒಂದೆರಡು ಕ್ಷಣಗಳ
ನಂತರ ಚೇತರಿಸಿಕೊಂಡು ಕೇಳಿದೆ,
"ನಾನು
ಹೇಳಿದ್ದಾ...? ಯಾವಾಗ ಮಾವ?"
"ಚೇತನ್(ಅವರ ಮೊಮ್ಮಗ) ಎಸ್.ಎಸ್.ಎಲ್.ಸಿ.
ಗೆ ಬಂದಾಗಲೇ ರಮೇಶ(ಅವರ
ಮಗ) ನಿನಗೆ ಫೋನು ಮಾಡಿ,`ಆ ಕಾಲೇಜು ಹೇಗಿದೆ'
ಎಂದು ಕೇಳಿದ್ದ ಅಲ್ಲವೇ?" ಎಂದು
ಚೂಪಾಗಿ ಪ್ರಶ್ನಿಸಿದರು.
ಈಗ ನನ್ನ ತಲೆಯೊಳಗಿನ ಬಲ್ಬ್
ಉರಿಯಿತು. ಇವರೀಗ ದೂಷಿಸುತ್ತಿರುವ ಅದೇ
ಕಾಲೇಜಿನಲ್ಲಿ ಅಂದು ನನ್ನ ಮಗ
ವಿದ್ಯಾರ್ಥಿಯಾಗಿದ್ದ. ಸಿ.ಇ.ಟಿ.
ಕೋಚಿಂಗಿಗೆ ಹೆಸರುವಾಸಿಯಾದ `ಆ' ಕಾಲೇಜಿನಲ್ಲೇ ತಮ್ಮ
ಮಗನನ್ನೂ ಓದಿಸಿ ವೈದ್ಯಕೀಯ ಪ್ರವೇಶ
ಪರೀಕ್ಷೆಯಲ್ಲಿ ಉತ್ತಮ rank ತೆಗೆಸಿ
ಆತನನ್ನು ಡಾಕ್ಟರು ಮಾಡಬೇಕೆಂಬ ಕನಸು ರಮೇಶರಿಗೆ ಇತ್ತೆಂದು ತೋರುತ್ತದೆ. ಆ ದೂರಾಲೋಚನೆಯಿಂದಲೇ ಆತ
ನನಗೆ ಕರೆ ಮಾಡಿ ಆ
ಸಂಸ್ಥೆ ಹೇಗಿದೆಯೆಂದು ಕೇಳಿದ್ದರು. ನನ್ನ ಮಗನಿಗೆ ಆ
ಕಾಲೇಜಿನೊಂದಿಗೆ ಯಾವ ಸಮಸ್ಯೆಯೂ ಇರಲಿಲ್ಲವಾದುದರಿಂದ
ನಾನು ಅದರ ಬಗ್ಗೆ ಒಳ್ಳೆಯ
ಅಭಿಪ್ರಾಯವನ್ನೇ ಹೇಳಿದ್ದಷ್ಟೆಯಲ್ಲದೆ `ನಿಮ್ಮ ಮಗನನ್ನೂ ಅಲ್ಲಿಗೇ
ಸೇರಿಸಿ' ಎಂದು ಖಂಡಿತಕ್ಕೂ ಹೇಳಿರಲಿಲ್ಲ
ಮತ್ತು ಅಂದಿನ ಆ ಮಾತುಕತೆಯನ್ನು
ನಾನು ಮರೆತೂ ಬಿಟ್ಟಿದ್ದೆ. ಆದರೆ
ಇಂದು ಅದುವೇ ನನಗೆ ತಿರುಗುಬಾಣವಾಗಬೇಕೇ?
ಇದಕ್ಕಿಂತಲೂ ಸ್ವಾರಸ್ಯಕರವಾದ ಇನ್ನೊಂದು ಘಟನೆ ನೋಡಿ, ಸ್ನೇಹಿತೆಯೊಬ್ಬಳು
ಮಾತನಾಡುತ್ತಾ ಈ ಸಿಟಿಯಲ್ಲಿ ಲಾಂಡ್ರಿ
ಎಲ್ಲಿ ಚೆನ್ನಾಗಿದೆ ಎಂದು ಕೇಳಿದ್ದಳು. ನಾನು
ಲಾಂಡ್ರಿಗೆ ಬಟ್ಟೆ ಕೊಡುವುದೇ ಕಡಿಮೆ
ಎಂದೂ ಕೊಡುವುದಿದ್ದರೆ ಇಂತಹ ಕಡೆ ಕೊಡುತ್ತಿದ್ದೇನೆ
ಎಂದು ಆ ಲಾಂಡ್ರಿಯ ಹೆಸರನ್ನು
ಹೇಳಿದ್ದೆ. ಇಂತಹ ನಿಸ್ಸಾರ ಮಾತುಗಳನ್ನು
ಯಾರಾದರೂ ನೆನಪಿಟ್ಟುಕೊಳ್ಳುತ್ತಾರೆಯೇ? ಆದರೆ ಆ `ಸ್ನೇಹಿತೆ'
ನನಗದನ್ನು ನೆನಪು ಮಾಡಿಸಿಯೇ ಬಿಟ್ಟಳು.
ನಮ್ಮ ಆ ಭೇಟಿಯಾಗಿ ಎಷ್ಟೋ
ತಿಂಗಳುಗಳ ನಂತರ ನನಗೆ ಕರೆ
ಮಾಡಿದಳು. ನಾನು ಕಾರ್ಯಕ್ರಮವೊಂದರಲ್ಲಿ ಇದ್ದೇನೆಂದರೂ
ಬಿಡದೆ ಹೇಳಿಯೇ ಹೇಳಿದಳು,
"ನೀನು
ಶಿಫಾರಸು ಮಾಡಿದ್ದಕ್ಕೆ ನಾನು ಆ ಲಾಂಡ್ರಿಯಲ್ಲಿ
ನನ್ನ ರೇಶ್ಮೆ ಸೀರೆ ಕೊಟ್ಟೆ
ಮಾರಾಯ್ತಿ...,ಮೂರೂವರೆ ಸಾವಿರ ಕೊಟ್ಟ
ಸೀರೆ...ನಮ್ಮ ಮ್ಯಾರೇಜು ಆನಿವೆರ್ಸರಿಗೆ
ಇವರು ಗಿಪ್ಟ್ ಕೊಟ್ಟದ್ದು..., ಡ್ರೈ
ವಾಶ್ ಆದಮೇಲೆ ಹಾಗೇ ಕಪಾಟಲ್ಲಿ
ಇಟ್ಟಿದ್ದೆ..., ನಿನ್ನೆ ಮದುವೆಗೆ ಹೋಗೋದಿತ್ತು..,
ಅದನ್ನೇ ಉಡೋಣಾ ಅಂತ ಪ್ಯಾಕೆಟ್
ಬಿಚ್ಚಿ ನೋಡ್ತೇನೆ...ಸೀರೆಯ ಬಣ್ಣ ಎಲ್ಲಾ ಕಲೆಸಿ ಹೋದಂತೆ ಆಗಿಹೋಗಿದೆ..., ಮದುವೆಗೆ ಹೋಗುವ ಮೂಡೇ
ಹಾಳಾಗಿಹೋಯ್ತು ನೋಡು....." ಇತ್ಯಾದಿಯಾಗಿ ಕೊರೆದೇ ಕೊರೆದಳು!
ಬಿಟ್ಟಿಯಾಗಿ
ಸಲಹೆ ಕೊಡುವುದಕ್ಕೂ ಸಲಹೆ ಕೇಳಿದಾಗ ಯಾವುದೇ
ದುರುದ್ದೇಶವಿಲ್ಲದೆ ತನಗೆ ತಿಳಿದಿರುವುದನ್ನು ಹೇಳುವುದಕ್ಕೂ
ತುಂಬ ವ್ಯತ್ಯಾಸವಿದೆ. ಮೇಲಿನ ಉದಾಹರಣೆಯನ್ನೇ ನೋಡಿ,
ತಮ್ಮ ಮಗನನ್ನು ತಾವು ಯಾವ
ರೀತಿಯಲ್ಲಿ ಬೆಳೆಸಿದ್ದೇವೆ? ಆತನಿಗೆ ಹಾಸ್ಟೆಲ್ ಜೀವನಕ್ಕೆ
ಒಗ್ಗಿಕೊಂಡು ಸಿ,ಇ,ಟಿ,
ಕೋಚಿಂಗಿನಂತಹ ಭಾರೀ ಒತ್ತಡದ ಕ್ಲಾಸುಗಳನ್ನು
ನಿಭಾಯಿಸಲು ಸಾಧ್ಯವೇ? ನಿಜಕ್ಕಾದರೂ ವೈದ್ಯಕೀಯ ಕ್ಷೇತ್ರದ ಬಗ್ಗೆ ಅವನಿಗೆ ಒಲವಿದೆಯೇ?
ತಮ್ಮ ನಿರೀಕ್ಷೆಗೆ ತಕ್ಕುದಾದ ಫಲಿತಾಂಶ ಗಳಿಸುವಂತಹ ಇಚ್ಛಾಶಕ್ತಿ
ಆತನಲ್ಲಿ ಇದೆಯೇ? ಎಂಬಿತ್ಯಾದಿ ಸೂಕ್ಷ್ಮವಿಚಾರಗಳನ್ನು
ತಂದೆ ತಾಯಿಯೆಂಬ ಮೋಹದ ಮಿತಿಯನ್ನು ದಾಟಿನಿಂತು ಅವರು ಗಮನಿಸಿರುತ್ತಿದ್ದರೆ ಆ ಹುಡುಗನ ವಿದ್ಯಾರ್ಥಿ ಜೀವನ ಅಷ್ಟು ಕಳಪೆಯಾಗಿ ಹೋಗುತ್ತಿರಲಿಲ್ಲ.
ಬಟ್ಟೆಯ
ವಿಚಾರದಲ್ಲಿ ನನ್ನ ಗೆಳತಿಯೂ ಮಾಡಿದ್ದು
ಅದನ್ನೇ. ಲಾಂಡ್ರಿಯ ಬಗ್ಗೆ ತಿಳಿಯುವಾಗ ಎಂತಹ
ಬಟ್ಟೆಗಳು ಲಾಂಡ್ರಿಗೆ ಕೊಡಲು ಯೋಗ್ಯವಾದುವುಗಳು? ಬೇರೆ
ಬೇರೆ ತರದ ಬಟ್ಟೆಗಳಿಗೆ ಅದಕ್ಕದಕ್ಕೆ
ಹೊಂದಿಕೊಳ್ಳುವಂತಹ ಸ್ವಚ್ಛತಾಕ್ರಮ (ಡ್ರೈ ವಾಶ್,ಕೆಮಿಕಲ್
ವಾಶ್, ಬ್ಯಾಂಡ್ ಬಾಕ್ಸ್ ಇತ್ಯಾದಿ)
ವೇ ಇದೆಯಾದುದರಿಂದ ತನ್ನ ಬಟ್ಟೆಯ ನೂಲಿಗೆ
ಯಾವುದು ಉತ್ತಮ ಎಂದು ಮುಂತಾಗಿ
ಯೋಚನೆಯೇ ಮಾಡದೆ ಅವಸರದ ನಿರ್ಣಯದಿಂದ
ಒಳ್ಳೆಯ ಬಟ್ಟೆಯೊಂದನ್ನು ಕಳೆದುಕೊಳ್ಳಬೇಕಾಗಿ ಬಂತು. ತಮ್ಮ ತಮ್ಮ
ಅರೆಕೊರೆಗಳನ್ನು ಒಪ್ಪಿಕೊಳ್ಳದೆ ಮಾಹಿತಿ ನೀಡಿದರು ಎಂಬ
ಕಾರಣಕ್ಕಾಗಿ ಅವರ ಮೇಲೆ ಗೂಬೆ
ಕೂರಿಸುವುದಿದೆಯಲ್ಲ ಅದು ಬಹಳ ಅಪಾಯಕಾರಿ
ಅಭ್ಯಾಸ. ಈ ತರದ ಸ್ವಭಾವದಿಂದಾಗಿ
ಆಗುವ ನಷ್ಟ ಅಪಾರ. ಇಂದಿನ
ಧಾವಂತದ ಬದುಕಿನಲ್ಲಿ ಮಾನವ ಜೀವಿಗೆ ಸಹಜೀವಿಗಳೊಡನೆ
ಬೆರೆಯಲು, ಜೊತೆಯಲ್ಲಿರಲು, ಇದ್ದು ನಕ್ಕು ನಗಿಸಲು
ಪುರುಸೊತ್ತಾದರೂ ಎಲ್ಲಿದೆ? ಪರಸ್ಪರ ಭೇಟಿ, ಮಾತು
ಇವುಗಳಿಗೆಲ್ಲ ಸಿಗುವ ಸಮಯ ಟಿ.ವಿ. ಸೀರಿಯಲ್ಲಿನ ನಡುವೆ
ಬರುವ ಕಮರ್ಷ್ಯಲ್ ಬ್ರೇಕಿನಂತೆ ಸೆಕುಂಡುಗಳ ಕಾಲ ಅಥವಾ ನಿಮಿಷಗಳ
ಕಾಲ ಮಾತ್ರ. ಆ ಅಲ್ಪ
ಹೊತ್ತಿನಲ್ಲೂ ದೂಷಣೆ, ವ್ಯಂಗ್ಯ, ಋಣಾತ್ಮಕ
ನಿಲುವು ಯಾಕೆ ಬೇಕು? ನಮ್ಮ
ದೌರ್ಬಲ್ಯ, ಬಲಹೀನತೆಗಳನ್ನು ನಾವೇ ಒಪ್ಪಿಕೊಳ್ಳಲು ತಯಾರಿಲ್ಲದಿರುವಾಗ
ಸಮಾಜ ಯಾಕೆ ಒಪ್ಪಿಕೊಳ್ಳಬೇಕು? ಅಂತಹವರು
ಕ್ರಮೇಣ ದ್ವೀಪವಾಗಿ ಬಿಡುತ್ತಾರೆ. ಆ ಮದುವೆ ಮನೆಯಲ್ಲಿ
ನೂರಾರು ಜನಗಳ ನಡುವೆಯೂ ನನ್ನ
ಪರಿಚಿತ ಹಿರಿಯರು ಏಕಾಂಗಿಯಾಗಿದ್ದುದು ಯಾಕೆಂದು
ಈಗ ನಿಮಗೆ ಅರ್ಥವಾಗಿರಬೇಕಲ್ಲವೇ? ಸಂಬಂಧಗಳನ್ನು
ಉಳಿಸುವುದೂ ಅಳಿಸುವುದೂ ಎರಡೂ ನಮ್ಮ ಕೈಯ್ಯಲ್ಲೇ
ಇದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ