ಬುಧವಾರ, ಜುಲೈ 27, 2016

ಭಾರತದ ಹೆಮ್ಮೆ- ಈ ತಾಂತ್ರಿಕ ಅದ್ಭುತ (ಜಮ್ಮು- ವೈಷ್ಣೋದೇವಿ ರೈಲು ಮಾರ್ಗ)


ನಮ್ಮ ದೇಶದಲ್ಲಿ ನಡೆಯುತ್ತಿರುವ ಋಣಾತ್ಮಕ ವಿದ್ಯಮಾನಗಳಿಗೆ ಮಾಧ್ಯಮಗಳು ಕೊಡುತ್ತಿರುವ ಪ್ರಚಾರಗಳಿಗೆ ಹೋಲಿಸಿದರೆ ಇಲ್ಲಿ ಆಗುತ್ತಿರುವ ಧನಾತ್ಮಕ, ಅಭಿವೃದ್ಧಿ ಕಾರ್ಯಗಳಿಗೆ ಕೊಡುತ್ತಿರುವ ಪ್ರಾಮುಖ್ಯತೆ ಬಹಳ ಕಡಿಮೆಯೆಂದೇ ಹೇಳಬಹುದು. ಅದೇ ಜನಪರ ಯೋಜನೆಗಳು ವಿದೇಶದಲ್ಲಿ ಕಾರ್ಯಗತವಾಗಿ ಯಶಸ್ವಿಯಾಯಿತೋ ಅದನ್ನು ರಂಗುರಂಗಾಗಿ ಹಾಡಿ ಹೊಗಳಲು ಮಾಧ್ಯಮಗಳು ಮುಗಿಬೀಳುತ್ತವೆ. ಇತ್ತೀಚೆಗೆ ಸಮಾಜಕ್ಕೆ ಸಮರ್ಪಣೆಗೊಂಡ ತಾಂತ್ರಿಕ ಅದ್ಭುತವೆಂದೇ ಪರಿಗಣಿಸಲಾದ ಉಧಮ್ ಪೂರ್ - ಕಟ್ರಾ (ವೈಷ್ಣೋದೇವಿ) ರೈಲುಮಾರ್ಗದ ಬಗ್ಗೆ ಮಾಧ್ಯಮಗಳು ಕಾಟಾಚಾರಕ್ಕೆ ಎಂಬಂತೆ ಒಂದಷ್ಟು ಹೇಳಿದ್ದೂ ಫ್ರಾನ್ಸಿನ ಬ್ಯಾಸೈಲ್ ಡೇ (ನಮ್ಮ ಆಗಸ್ಟ್ 15 ರಂತೆಯೆ ಫ್ರಾನ್ಸಿನಲ್ಲೂ ದಿನವನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸುತ್ತಾರೆ. ಅಂದು ಭಯೋತ್ಪಾದಕರು ಟ್ರಕ್ಕಿನಲ್ಲಿ ದಾಳಿ ಮಾಡಿ ಅಮಾಯಕರನ್ನು ಬಲಿಕೊಟ್ಟದ್ದು ನಿಮಗೂ ನೆನಪಿರಬಹುದು) ನೆತ್ತರ ಓಕುಳಿಯಲ್ಲಿ ಹರಿದೇ ಹೋಗಿತ್ತು. ಜನಸಾಮಾನ್ಯರಿಗೂ ನಮ್ಮ ದೇಶದ ಪವಾಡ ಸದೃಶವಾದಂತಹ ಸಾಧನೆ ತಿಳಿದಿರಲೇಬೇಕು ಎಂಬ ಉದ್ದೇಶದಿಂದ ಇವತ್ತು ಅದರ ಬಗ್ಗೆ ಬರೆಯುತ್ತಿದ್ದೇನೆ.


1898ರಲ್ಲಿ ರಾಜಾ ಮಹಾರಾಣಾ ಪ್ರತಾಪ್ ಸಿಂಹ ಜಮ್ಮು ಮತ್ತು ಶ್ರೀನಗರವನ್ನು ಪರಸ್ಪರ ಜೋಡಿಸುವ ಕುರಿತು ಆಲೋಚಿಸಿದ್ದ. ಆದರೆ ಹಲವಾರು ಕಾರಣಗಳಿಂದ ಅದು ನೆನೆಗುದಿಗೆ ಬಿದ್ದಿತ್ತು. 2005 ರಲ್ಲಿ ಜಮ್ಮುವಿನ ಬದಿಯಿಂದ ಉಧಮ್ ಪೂರ್ ವರೆಗೂ  ಶ್ರೀನಗರದ ಬದಿಯಿಂದ ಬನಿಹಾಲ್ ವರೆಗೂ  ರೈಲುಮಾರ್ಗದ ನಿರ್ಮಾಣವಾಯ್ತು. 2012 ರಲ್ಲಿ ಪೀರ್ಪಂಜಾಲ್ ರೈಲ್ವೇ ಸುರಂಗ ಮಾರ್ಗವು ಬದಿಯಿಂದ ಜಮ್ಮು ಮತ್ತು ಬದಿಯಿಂದ ಶ್ರೀನಗರವನ್ನು ಜೋಡಿಸುವ ಕೆಲಸವನ್ನು ಮಾಡಿತು ಮತ್ತು ಕಾಮಗಾರಿ ಮುಂದುವರಿಯುತ್ತಲೇ ಇತ್ತು. ಹಾಗೆ ಒಂದು ಶತಮಾನಕ್ಕೂ ಹಿಂದೆ ಕಂಡ ಕನಸು ಮೊನ್ನೆ ಜೂನ್ 14 ರಂದು ನನಸಾಯ್ತು. ನಮ್ಮ ಪ್ರಧಾನಿ ದಿನ ಬೆಳಗ್ಗೆ 10 ಘಂಟೆಗೆ ರೈಲು ಮಾರ್ಗವನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದರು.

ಉತ್ತರ ರೈಲ್ವೇಯ ಮಹತ್ವಾಕಾಂಕ್ಷೆಯ ಯೋಜನೆಯಾದ ಮುನ್ನೂರ ಅರುವತ್ತೆರಡು ಕೀ.ಮೀ.ಉದ್ದದ ಉಧಮ್ ಪೂರ್- ಖ್ವಾಝೀಖಂಡ್-ಶ್ರೀನಗರ-ಬಾರಮುಲ್ಲಾ(ಯೂ.ಎಸ್.ಬಿ.ಆರ್.ಎಲ್.) ರೈಲುಮಾರ್ಗವೆನ್ನುವುದು ಪ್ರಕೃತಿಯ ಎದುರಿಗಿನ ತಾಂತ್ರಿಕ ಸವಾಲುಗಳನ್ನು ಮೀರಿ ಸೃಷ್ಟಿಯಾದಂತಹ ಯೋಜನೆ. ಮಾರ್ಗವು ನಮ್ಮ ದೇಶದ ಅತ್ಯಂತ ಕಠಿಣ ಪ್ರಾಕೃತಿಕ ಪದರದ ಮೇಲೆ ರಚನೆಗೊಂಡಿದೆ. ಕಡಿದಾದ ಏರಿಳಿತಗಳು, ಕೊಳ್ಳ, ಕೊತ್ತಲಗಳು ಯಾವಾಗೆಂದರೆ ಆವಾಗ ಕುಸಿದು ಬೀಳುವಂತಹ ಭೂರಚನೆ, ಮೇಘ ಸ್ಫೋಟ, ಹಿಮವರ್ಷ, ಕಡುಬಿಸಿಲು...ಇತ್ಯಾದಿಗಳೆಲ್ಲವೂ ದಿನನಿತ್ಯದ ಜೀವನ ಎನ್ನುವಂತಹ ಪ್ರದೇಶವೇ ಹಿಮಾಲಯದ ಭಾಗವಾದ ಶಿವಾಲಿಕ್ ಮತ್ತು ತ್ರಿಕೂಟ ಪರ್ವತ ಶ್ರೇಣಿಗಳು. ಅನಿರೀಕ್ಷಿತವಾಗಿ ಬಾಯೊಡೆಯುವ ನಾಲೆಗಳು, ಸುರಂಗಗಳು, ಪ್ರಪಾತಗಳು ಇವೆಲ್ಲವನ್ನೂ ನಿವಾರಿಸಿಕೊಂಡು ಶಾಶ್ವತವಾಗಿ ನಿಲ್ಲಬಲ್ಲಂತಹ ರೈಲುಮಾರ್ಗದ ರಚನೆ ಎನ್ನುವುದು ನಿಜಕ್ಕೂ ಮಾನವನ ಬುದ್ಧಿಮತ್ತೆಗೊಂದು ಸವಾಲೇ ಸೈ. ಆದರೆ ನಮ್ಮ ದೇಶದ ತಾಂತ್ರಿಕ ತಜ್ಞರು ವೀದೇಶೀ ಮಿದುಳಿನ ನೆರವಿಲ್ಲದೆ ರಚಿಸಿದಂತಹ ರೈಲುಮಾರ್ಗ ಇಂದು ಲಕ್ಷಗಟ್ಟಲೆ ಜನರ ಕನಸುಗಳ ಮೂಟೆಯನ್ನೇ ಹೊತ್ತು ಸಾಗುತ್ತಿದೆ. ರೈಲು ಮಾರ್ಗವು ತನ್ನ ಹಾದಿಯಲ್ಲಿ ಹೆಚ್ಚು ಕಡಿಮೆ ಹನ್ನೊಂದು ಕೀ.ಮೀ. ಉದ್ದದ ಸುರಂಗದೊಳಗೆ ಹಾದು ಹೋಗುತ್ತದೆ. ಏಳು ಬೃಹತ್ ಸೇತುವೆಗಳು,

ಇಪ್ಪತ್ತೊಂಭತ್ತು ಕಿರು ಸೇತುವೆಗಳನ್ನೂ ಇದು ದಾಟಿ ಹೋಗುತ್ತದೆ.
ಯೋಜನೆಯ ವೆಚ್ಚದ ಕುರಿತು ಹೇಳದಿದ್ದರೆ ಇದರ ಅಗಾಧತೆಯ ಅರಿವಾಗಲಾರದು. ಇದೇ ಮಾರ್ಚು 31 ರವರೆಗೆ ರೈಲುಮಾರ್ಗವು ರೂ.9966.71 ಕೋಟಿಗಳಷ್ಟು ವಿನಿಯೋಗಿಸಿಕೊಂಡಿದೆ. ಸದ್ಯಕ್ಕೆ ಇಡೀ ದೇಶದಲ್ಲಿಯೇ ಅತ್ಯಂತ ಎತ್ತರದ ರೈಲ್ವೇ ಸೇತುವೆ(85 ಮೀ.ಎತ್ತರ) ಹಾದಿಯಲ್ಲಿದೆ. ಅತ್ಯಂತ ಬಲಿಷ್ಟವಾದ, ಎಂತಹ ಪ್ರಕೃತಿ ವಿಕೋಪಕ್ಕೂ ಜಗ್ಗದ ಕಠಿಣ ಉಕ್ಕಿನಿಂದ ತಯಾರಿಸಿದ ಸೇತುವೆ ಜಜ್ಜರ್ ನದಿಯ ಮೇಲಿನಿಂದ ಹಾದು ಹೋಗುತ್ತದೆ. ಕಠಿಣಾತಿಕಠಿಣವಾದ ಮಾರ್ಗವು ಎದೆ ಝಿಲ್ ಎನಿಸುವ ರುದ್ರ ರಮಣೀಯವಾದ 22 ತಿರುವುಗಳನ್ನು ಒಳಗೊಂಡಿದೆ. ಅವುಗಳಲ್ಲಿ ಕೆಲವಂತೂ ನೇರ ಸ್ವರ್ಗಕ್ಕೇ ದಾರಿ ತೋರುವಂತಿದೆ. ಹಲವಾರು ಸುರಂಗ ಮಾರ್ಗಗಳಲ್ಲಿ 23ನೇ ಸುರಂಗವು ಅತ್ಯಂತ ಉದ್ದವಾದುದು.   

ರೈಲು ಮಾರ್ಗವು ಜಮ್ಮುವಿನ ರಾಸಿ ಜಿಲ್ಲೆಯ ಕಟ್ರಾ ಎನ್ನುವ ಊರನ್ನು ಹಾದು ಹೋಗುತ್ತಿರುವುದರಿಂದ ರೈಲು ಮಾರ್ಗಕ್ಕೆ ವಿಷೇಶ ಪ್ರಾಮುಖ್ಯತೆ ಇದೆ. ಶ್ರೀಮಾತಾ ವೈಷ್ಣೋದೇವಿಯ ಭಕ್ತರಿಗೆ ಇದು ಅತ್ಯಂತ ಉಪಯುಕ್ತ ರೈಲು ಮಾರ್ಗವಾಗಿದೆ. ಮೊದಲು ರಾಷ್ಟ್ರೀಯ ಹೆದ್ದಾರಿ 1. ರಸ್ತೆ ಮಾತ್ರವೇ ಮಂದಿರಕ್ಕಿರುವ ಸಂಪರ್ಕ ವ್ಯವಸ್ಥೆಯಾಗಿತ್ತು. ಹೊಸ ರೈಲು ಮಾರ್ಗದ ನಿರ್ಮಣವಾದ ಮೇಲೆ ಸುತ್ತು ಬಳಸಿನ ಕಡಿದಾದ, ಅಪಾಯಕಾರೀ ಮಾರ್ಗದ ಅವಲಂಬನೆ ಬಹಳಷ್ಟು ಕಡಿಮೆಯಾಗಿದೆ. ವೈಷ್ಣೋದೇವಿಗೆ ಹೋಗುವ ಭಕ್ತರಿಗಾಗಿಯೇ ಕಟ್ರಾದಲ್ಲಿ ಅತ್ಯಾಧುನಿಕ ವ್ಯವಸ್ಥೆಗಳಿರುವ ರೈಲು ನಿಲ್ದಾಣವಿದೆ. ವಿಮಾನ ನಿಲ್ದಾಣವನ್ನೂ ನಾಚಿಸುವ ಇದರ ಅತ್ಯಾಧುನಿಕತೆ, ಸಕಲ ಸೌಕರ್ಯಗಳು ಪುಟ್ಟ ಮಕ್ಕಳಿಗೂ ವೃದ್ಧರಿಗೂ ವರದಾನವಾಗಿದೆ. ರೈಲು ಮಾರ್ಗ ಪ್ರಾರಂಭವಾದ ಕೇವಲ ಎರಡೇ ತಿಂಗಳುಗಳೊಳಗೆ ಮುಂಬೈ ಮತ್ತು ಅಹ್ಮದಾಬಾದಿನಿಂದ ಕಟ್ರಾ ಮಾರ್ಗವಾಗಿ ವೈಷ್ಣೋದೇವಿಗೆ ನೇರ ರೈಲು ಸಂಪರ್ಕವನ್ನು ಕಲ್ಪಿಸಲಾಗಿದೆ. ಇದು ವೈಷ್ಣೋದೇವಿ ಯಾತ್ರೆಯ ಖರ್ಚನ್ನು ಗಣನೀಯವಾಗಿ ಇಳಿಸಲಿದೆ.



ಕಟ್ರಾ ರೈಲ್ವೇ ನಿಲ್ದಾಣದ ಸೃಷ್ಟಿ(ಪ್ರಿಯ ಓದುಗರೇ, ಪ್ರಕೃತಿಯ ಅತಿರೇಕಗಳೊಡನೆ ಹೋರಾಡುತ್ತಾ ನಿರ್ಮಿಸಬೇಕಿದ್ದ ರೈಲು ನಿಲ್ದಾಣ ನಿಜ ಅರ್ಥದ ಹೊಸ ಸೃಷಿಯೇ ಹೌದು. ಆದುದರಿಂದಲೇ ನಾನು ನಿರ್ಮಾಣ  ಶಬ್ಧದ ಬದಲಿಗೆ `ಸೃಷ್ಟಿ' ಎನ್ನುವ ಪದವನ್ನು ಬಳಸಿದ್ದು) ಸಮಯದಲ್ಲಿ ಸಾಮಾಗ್ರಿಗಳ ಸಾಗಣೆಗಾಗಿ ಮತ್ತಿತರ ಸೌಕರ್ಯಗಳ ನಿರ್ಮಾಣಕ್ಕಾಗಿ ಸುತ್ತ ಮುತ್ತಲಿನ 235 ಕೀ.ಮೀ. ಭೂ ಪ್ರದೇಶವನ್ನು ಸರಕಾರ ಸ್ವಾಧೀನಪಡಿಸಿಕೊಂಡಿತ್ತು. ಪ್ರದೇಶಗಳಲ್ಲಿದ್ದ ಜನರಿಗೆ ರೈಲ್ವೇಯ ಬೇರೆ ಬೇರೆ ವಿಭಾಗಗಳಲ್ಲಿ ಖಾಯಂ ಕೆಲಸಗಳನ್ನು ಕೊಡಲಾಯ್ತು. ಸಾಮಾನ್ಯ ಜನಜೀವನದ ಮೇಲೆ ರೈಲು ಮಾರ್ಗವು ಬೀರಿದ ಪ್ರಭಾವ ಅಗಾಧವಾದುದು. ಜಮ್ಮು ಕಾಶ್ಮೀರ ರಾಜ್ಯಗಳು ಹೇಳಿ ಕೇಳಿ ದುರ್ಗಮ ಬೆಟ್ಟಗುಡ್ಡಗಳ ಅತಿರೇಕ ಹವಾಮಾನದ ನಾಡು. ಯಾವಾಗ ಸಂಪರ್ಕ ವ್ಯವಸ್ಥೆ ಸುಧಾರಿಸಿತೋ ವ್ಯಾಪಾರಿಗಳು, ಕೃಷಿಕರು, ದಿನ ಕೂಲಿಗಳು ಚುರುಕಾದರು. ತಮ್ಮ ಉತ್ಪನ್ನಗಳನ್ನು ಕ್ಲಪ್ತ ಸಮಯದಲ್ಲಿ ಮಾರುಕಟ್ಟೆಗೆ ತಲುಪಿಸಿ ಅಧಿಕ ಲಾಬಾಂಶವನ್ನು ಪಡೆಯಲು ಸಾಧ್ಯವಾಯಿತು. ಸಾರಿಗೆ ಸೌಕರ್ಯದ ಅಭಿವೃದ್ದಿಯೊಂದಿಗೆ ಪ್ರದೇಶದ ಸಾಮಾಜಿಕ ಜೀವನದ ಮಟ್ಟ ಮೇಲ್ಸ್ತರಕ್ಕೆ ಭಡ್ತಿ ಹೊಂದುತ್ತಿರುವುದಕ್ಕೆ  ರೈಲುಮಾರ್ಗ ಒಂದು ಜ್ವಲಂತ ಉದಾಹರಣೆ.
ಜಮ್ಮು ಮತ್ತು ಕಾಶ್ಮೀರದ ನಡುವಿನ ಸಂಪರ್ಕವನ್ನು ಇನ್ನಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಇನ್ನೊಂದು ರೈಲು ಮಾರ್ಗದ ನಿರ್ಮಾಣ  ಕಾರ್ಯ ನಡೆಯುತ್ತದೆ. ಇದರ ಅಂಗವಾಗಿ ಚೀನಾಬ್ ನದಿಯ ಮೇಲೆ ಬೃಹದ್ಗಾತ್ರದ ರೈಲ್ವೇ ಸೇತುವೆಯ ಕಾಮಗಾರಿ ನಡೆಯುತ್ತಿದೆ. 2003ರಲ್ಲಿ  ಆರಂಭಗೊಂಡ ಇದು 2016ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. 359 ಮೀ. ಎತ್ತರವಿರುವ ಸೇತುವೆ 1315 ಮೀ. ಉದ್ದವಿದೆ. ಗುಡ್ಡ ಕಾಡು ಪ್ರದೇಶಗಳ ಅಭಿವೃದ್ಧಿಯಿಂದಾಗಿ ದೇಶವೂ ಪುರೋಗತಿಯೆಡೆಗೆ ಹೆಜ್ಜೆ ಇಟ್ಟಾಗಲೇ ಲೋಕದ ಆರ್ಥಿಕ ಭೂಪಟದಲ್ಲಿ ನಮ್ಮ ದೇಶದ ಹೆಜ್ಜೆಯ ಗುರುತೂ ಗಾಢವಾಗಿಯೇ ಅಚ್ಚೊತ್ತಬಹುದು.  

   

      

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ