ಭಾನುವಾರ, ಆಗಸ್ಟ್ 14, 2016

`ಸಿಟಿಯಸ್, ಆಲ್ಟಿಯಸ್, ಪೋರ್ಟಿಯಸ್ ' (ಇನ್ನೂ ವೇಗವಾಗಿ, ಇನ್ನೂ ಎತ್ತರಕ್ಕೆ, ಇನ್ನೂ ಶಕ್ತಿಶಾಲಿಯಾಗಿ)


ಒಲಿಂಪಿಕ್ಸ್ ಕೂಟದ ಧ್ಯೇಯ ವಾಕ್ಯವದು. ಇಲ್ಲಿ ನಾವು ಹಬ್ಬಗಳ ಸಡಗರದಲ್ಲಿ ಮುಳುಗಿ ಹೋಗಿದ್ದರೆ ಅಲ್ಲಿ ರಿಯೊ ಡಿ ಜೆನೈರೊ ದಲ್ಲಿ ಇಡೀ ಜಗತ್ತಿನ ಕ್ರೀಡಾಪಟುಗಳು ವಿವಿಧ ಆಟೋಟಗಳ ಪಾಲ್ಗೊಳ್ಳುವಿಕೆಯ ಸಂಭ್ರಮದಲ್ಲಿ ಮುಳುಗಿದ್ದಾರೆ. ಏಷ್ಯಾ, ಆಫ್ರಿಕಾ, ಆಸ್ಟ್ರೇಲಿಯಾ, ಯೂರೋಪ್, ಅಮೇರಿಕಾ ಖಂಡಗಳ ನಡುವಿನ ಕ್ರೀಡಾಳುಗಳ ನಡುವೆ ತುರುಸಿನ ಸ್ಪರ್ಧೆ, ಚಿನ್ನದ ಪದಕಕ್ಕಾಗಿ ಮೇಲಾಟ, ಹೋರಾಟ ನಡೆಯುತ್ತಲೇ ಇದೆ. ಭಾರತೀಯ ಆಟಗಾರರೂ ಶಕ್ತಿಮೀರಿ ಪ್ರದರ್ಶನವನ್ನು ನೀಡುತ್ತಿದ್ದಾರೆ. ಅತ್ಯಂತ ಸಂತಸದ ಸಂಗತಿಯೆಂದರೆ ಚರಿತ್ರೆಯಲ್ಲೇ ಮೊತ್ತ ಮೊದಲ ಬಾರಿಗೆ ಜಿಮ್ನಾಸ್ಟಿಕ್ಸ್ ವಿಭಾಗದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಭಾರತೀಯ ಹೆಣ್ಣುಮಗಳೋರ್ವಳು ಆಯ್ಕೆಯಾಗಿದ್ದಾಳೆ. ಇದೇ ಅಗೋಸ್ತು 7 ರಂದು ದೀಪ ಕರ್ಮಕಾರ್ ಎನ್ನುವ ನಾಕಡಿ ಹನ್ನೊಂದು ಇಂಚು ಎತ್ತರದ ಇಪ್ಪತ್ಮೂರು ವರ್ಷದ ಚಿಕಿಣಿ ಹುಡುಗಿ ಭಾರತದ ಒಲಿಂಪಿಕ್ಸ್ ಇತಿಹಾಸದಲ್ಲಿ ಹೊಸದೊಂದು ಅಧ್ಯಾಯವನ್ನು ಬರೆದಳು. ರಿಯೋದಲ್ಲಿ ನಡೆದ ಆಯ್ಕೆ ಸುತ್ತಿನ ಜಿಮ್ನ್ಯಾಸ್ಟಿಕ್ ಸ್ಪರ್ಧೆಯಲ್ಲಿ ಕೊನೆಯ ಹಂತ (ಫೈನಲ್ಸ್ಕ್ಕೆ ಆಯ್ಕೆಯಾಗಿದ್ದಾಳೆ.ಜಿಮ್ನಾಸ್ಟಿಕ್ ಅದ್ಭುತವೆಂದೆ ಪರಿಗಣಿಸಲಾದ `ಪ್ರೊಡುನೋವಾ ವಾಲ್ಟ್'  ಕಸರತ್ತಿನ ಪ್ರದರ್ಶನದಲ್ಲಿ ಎಂಟನೇ ಸ್ಥಾನದೊಂದಿಗೆ ಆಯ್ಕೆಯಾಗಿದ್ದಾಳೆ. ಪ್ರುಡುನೋವಾ ವಾಲ್ಟ್ ಎನ್ನುವ ಕಸರತ್ತಿಗೆ ಇನ್ನೊಂದು ಹೆಸರೇ `ಮರಣದ ನೆಗೆತ'. ಎತ್ತರದ ಮೆತ್ತೆಯ ಮೇಲಕ್ಕೆ ಹಾರಿ ಅಲ್ಲಿಂದ ಕಾಲುಗಳನ್ನು ಮಡಚಿ ಎದೆಗೆ ಒತ್ತಿ ಹಿಡಿದು ಎರಡುಸಲ ಗಾಳಿಯಲ್ಲಿ ಉರುಳು ಹಾಕಿ ಮರುಕ್ಷಣ ಕಾಲನ್ನೂರಿ ನೆಟ್ಟಗೆ ನಿಲ್ಲಬೇಕಾದ ಕಸರತ್ತನ್ನು ಮಾಡಲು ಎಷ್ಟೇ ಪಳಗಿದ ಆಟಗಾರ್ತಿ/ಗಾರರೂ ಮನಸ್ಸು ಮಾಡುವುದಿಲ್ಲ. ಯಾಕೆಂದರೆ ಕಾರಾರುವಕ್ಕಾದ ಹೆಜ್ಜೆ ಒಂದು ಚೂರು ಆಚೀಚೆಯಾದರೂ ಕುತ್ತಿಗೆ ಮುರಿದು ಅಥವಾ ಸೊಂಟ ಮುರಿದು ಸಾವನ್ನಪ್ಪುವ ಅಥವಾ ಜೀವಮಾನವಿಡೀ ಹಾಸಿಗೆ ಹಿಡಿಯುವ ಅಪಾಯವಿದೆ. 1990 ರಲ್ಲಿ ರಷ್ಯಾದ ಎಲಿನಾ ಪ್ರೊಡುನೋವಾ ಕಸರತ್ತನ್ನು ಮೊತ್ತಮೊದಲ ಬಾರಿಗೆ ಪ್ರದರ್ಶಿಸಿ ಯಶಸ್ವಿಯಾದಳು. ಅದರ ನಂತರ ಕಸರತ್ತನ್ನು ಆಕೆಯ ಹೆಸರಿನಿಂದಲೇ ಗುರುತಿಸಲಾಗುತ್ತದೆ. ಇಂತಹ ಅಪಾಯಕಾರಿಯಾದಂತಹ ಕಸರತ್ತನ್ನು ದೀಪ ಇದುವರೆಗೆ ಸಾವಿರಕ್ಕಿಂತಲೂ ಹೆಚ್ಚು ಬಾರಿ ಅಭ್ಯಾಸ ಮಾಡಿದ್ದಾಳೆ. ಇದುವರೆಗೂ ಇಡೀ ವಿಶ್ವದಲ್ಲಿ ಕೇವಲ ಐದು ಮಂದಿ ಮಾತ್ರ  ಕಸರತ್ತನ್ನು ಮಾಡುವಲ್ಲಿ  ಯಶಸ್ವಿಯಾಗಿದ್ದಾರೆ. ಅವರಲ್ಲಿ ನಮ್ಮ ದೀಪ ಒಬ್ಬಳು. ಇದಕ್ಕಿಂತಲೂ ಮೊದಲಿನ ಅವಳ ಸಾಧನೆಗಳು ಹೀಗಿವೆ, 2007 ಕಿರಿಯರ ವಿಭಾಗದ ಸ್ಫರ್ಧೆಯಲ್ಲಿ ರಾಷ್ಟ್ರೀಯ ಚಾಂಪಿಯನ್ಶಿಪ್ ಪಡೆದುಕೊಂಡದ್ದೂ ಅಲ್ಲದೆ ತದನಂತರ ಬೇರೆ ಬೇರೆ ಸ್ಫರ್ಧೆಗಳಲ್ಲಿ ಒಟ್ಟು 77 ಪದಕಗಳನ್ನು ಬಾಚಿಕೊಂಡಿದ್ದಾಳೆ. ಇವುಗಳಲ್ಲಿ ಕಾಮನ್ವೆಲ್ತ್ ಗೇಮ್ಸ್ ಮತ್ತು ಹಿರೋಶೀಮಾ ಏಷ್ಯನ್ ಚಾಂಪಿಯನ್ಶಿಪ್ ಕೂಟಗಳೂ ಒಳಗೊಂಡಿವೆ. ಇಲ್ಲಿ ಈಕೆ ಗಳಿಸಿದ್ದು 66 ಚಿನ್ನದ ಪದಕಗಳು, ಒಂದು ತಾಮ್ರದ ಪದಕ.  ಅಗೋಸ್ತು 14ರಂದು ನಡೆದ ಫೈನಲ್ಸ್ ಪಂದ್ಯದಲ್ಲಿ ಇವಳು ಪದಕ ಗೆಲ್ಲದಿದ್ದರೇನಂತೆ? ಪ್ರುಡುನೋವಾ ವಾಲ್ಟ್ ನೆಗೆತವನ್ನು ಅಂತ್ಯಂತ ಯಶಸ್ವಿಯಾಗಿ ಪೂರೈಸಿ ವಿಶ್ವದ ಸಮಸ್ತ  ಕ್ರೀಡಾ ಪ್ರೇಮಿಗಳ ಹೃದಯ ಪದಕದಲ್ಲಿ ಶಾಶ್ವತವಾದ  ಸ್ಥಾನವನ್ನು ಗಳಿಸಿದ್ದಾಳೆ.  
    
ಯಾವುದೇ ಅದ್ಭುತ ಸಾಧನೆಯ ಹಿಂದೆಯೂ ಕಠಿಣಾತಿಕಠಿಣ ಪರಿಶ್ರಮವಿರುತ್ತದೆ ಎಂಬುದು ಈಕೆಯ ವಿಷಯದಲ್ಲಿಯೂ ನೂರಕ್ಕೆ ನೂರು ಸತ್ಯ. ಭಾರತದ ಹಿಂದುಳಿದ ರಾಜ್ಯಗಳಲ್ಲೊಂದಾದ ತ್ರಿಪುರವೇ ದೀಪ ಕರ್ಮಕಾರ್ ಜನ್ಮಭೂಮಿ. ಹುಟ್ಟಿನಿಂದ ಚಪ್ಪಟೆ ಪಾದವನ್ನು ಹೊಂದಿದಾಕೆ. ಇಂತಹ ಪಾದಗಳಿರುವವರಿಗೆ ಆಟಗಳಲ್ಲಿ ಭಾಗವಹಿಸಲು, ನೆಗೆಯಲು ಅಸಾಧ್ಯವೆಂದೇ ಹೇಳಬಹುದು. ಅದರಲ್ಲೂ ಜಿಮ್ನೇಶಿಯಂನಂತಹ ಕಸರತ್ತುಗಳಿಗೆ ಪಾದದ ಅಡಿಭಾಗದ ಬಾಗುವಿಕೆ ಅತ್ಯಂತ ಅಗತ್ಯ. ಭಾರತದ ಮೊತ್ತಮೊದಲ ಕಸರತ್ತು ತಜ್ಞೆಯೆಂದೇ ಗುರುತಿಸಲ್ಪಡುವ ದೀಪ ತನ್ನ ಆರನೇ ವಯಸ್ಸಿನಿಂದಲೇ ಜಿಮ್ನಾಸ್ಟಿಕ್ ಅಭ್ಯಾಸಕ್ಕೆ ತನ್ನನ್ನು ಸಮರ್ಪಿಸಿಕೊಂಡಾಕೆ. ಅಂದಿನಿಂದ ಇಂದಿನವರೆಗೂ ಆಕೆಯನ್ನು ರೂಪುಗೊಳಿಸುವಲ್ಲಿ ಪರಿಶ್ರಮಿಸಿದವರು ಅವಳ ತರಬೇತುದಾರರಾದ ಬಿಸ್ವೇಸ್ವರ್ ನಂದಿ. ಅವರ ಮಾತುಗಳಲ್ಲೇ ಹೇಳುವುದಿದ್ದರೆ ಕ್ರಿಕೆಟ್ ಒಂದೇ ನಿಜವಾದ ಆಟ ಎಂದು ತಿಳಿದು ಅದಕ್ಕೆ ಮಾತ್ರ ಕೋಟಿಗಟ್ಟಲೆ ದುಡ್ಡು ಸುರಿಯಲು ತಯಾರಿರುವಂತಹ ಭಾರತದಲ್ಲಿ ಜಿಮ್ನಾಸ್ಟಿಕ್ ಕಲೆಗೆ ಕ್ರೀಡಾ ಇಲಾಖೆಯಿಂದ ಪ್ರೋತ್ಸಾಹವನ್ನು ನಿರೀಕ್ಷಿಸುವುದೂ ಹೆಡ್ಡುತನ. ಸಾಲದುದಕ್ಕೆ ದೀಪ ಒಲಿಂಪಿಕ್ಸ್ ಫೈನಲಿಗೆ ಆಯ್ಕೆ ಆಗುವವರೆಗೂ ಹೆಚ್ಚು ಪ್ರಚಾರ ಪಡೆದವಳಲ್ಲ. ಆದುದರಿಂದ ಯಾವುದೇ ಖಾಸಗಿ ಕಂಪೆನಿಗಳೂ ಆಕೆಗೆ ಪ್ರೋತ್ಸಾಹವನ್ನೀಯುವಲ್ಲಿ ಆಸಕ್ತಿ ತೋರಲಿಲ್ಲ. ಜಿಮ್ನಾಸ್ಟಿಕ್ ಕಲೆಯ ಅಭ್ಯಾಸವೆನ್ನುವುದು ಅತ್ಯಂತ ದುಬಾರಿ ಖರ್ಚಿನ ಬಾಬ್ತು.
ಆದರೆ ಬಿಸ್ವೇಸ್ವರ್ ನಂದಿ ಮತ್ತು ದೀಪ ಜೋಡಿಯ ಅದಮ್ಯ ಉತ್ಸಾಹದೆದುರು ಇದು ತಡೆಯಾಗಿ ನಿಲ್ಲಲಿಲ್ಲ. ಮೊತ್ತಮೊದಲಿಗೆ ಈ ಹುಡುಗಿಯ ಕಾಲಿನ ರಚನೆಯನ್ನು ಸರಿಪಡಿಸುವ ಸವಾಲೇ ಅತ್ಯಂತ ಕಠಿಣದ್ದಾಗಿತ್ತು. ಅದಕ್ಕಾಗಿ ಆಕೆ ಸಹಿಸಿದ ತೀಕ್ಷ್ಣವಾದ ನೋವುಗಳೆಷ್ಟೋ, ಹರಿಸಿದ ಕಣ್ಣೀರೆಷ್ಟೋ, ಆದರೆ ದೀಪ ಹೇಳುತ್ತಾಳೆ, `ನನ್ನಲ್ಲಿ ನನಗೆ ನಂಬಿಕೆ ಇತ್ತು, ಗುರುವಿನಲ್ಲಿ ವಿಶ್ವಾಸವಿಟ್ಟೆ, ಆದುದರಿಂದಲೇ ನಾನು ಎತ್ತರಕ್ಕೇರಿದೆ....'. ಸಾಂಪ್ರದಾಯಿಕ ಮನಸ್ಥಿಯ ತ್ರಿಪುರದ ಜನರು ದೀಪ ಮತ್ತು ನಂದಿಯವರ ಜೊತೆಯನ್ನು ಸಂಶಯದಿಂದ ನೋಡಿದ್ದೇ ಹೆಚ್ಚು. ಜುಮ್ನಾಸ್ಟಿಕ್ ಕಸರತ್ತು ದೀಪ ಮೈಯ್ಯನ್ನು ನುಜ್ಜುಗುಜ್ಜಾಗಿಸಿದ್ದರೆ ಊರವರ ವ್ಯಂಗ್ಯದ ಚುಚ್ಚು ಮಾತುಗಳು ಮನಸ್ಸನ್ನು ನುಜ್ಜುಗುಜ್ಜಾಗಿಸಿತ್ತು. ಇತ್ತೀಚೆಗೆ ಮಾಧ್ಯಮಕ್ಕೆ ಸಂದರ್ಶನವಿತ್ತ ತರಬೇತುದಾರ ನಂದಿ ಹೇಳುತ್ತಾರೆ, ನನ್ನ ವಿದ್ಯಾರ್ಥಿನಿಯ ಸಾಧನೆಯ ಹಾದಿಯಲ್ಲಿ ಇಂತಹ ಮುಳ್ಳುಗಳೆಲ್ಲವನ್ನೂ ತುಳಿದುಕೊಂಡೇ ಮುನ್ನುಗ್ಗಿದೆವು, ಮುಳ್ಳಿನ ತುದಿಯಲ್ಲಿ ಅರಳಿದ ಹೂವನ್ನು ಕಂಡಾಗ ಜನರ ಬಾಯಿ ತನ್ನಿಂದ ತಾನಾಗಿಯೇ ಮುಚ್ಚಿ ಹೋಗುತ್ತದೆ ಎಂಬ ನಂಬಿಕೆಯಿದೆ.
ಆಗಲೇ ಹೇಳಿದಂತೆ ತ್ರಿಪುರ ಹೇಳಿ ಕೇಳಿ ಹಿಂದುಳಿದ ರಾಜ್ಯ. ಕ್ರೀಡಾಪಟುಗಳ ಅಭ್ಯಾಸಕ್ಕೆ ಬೇಕಾದ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ದೀಪ ಅಭ್ಯಾಸ ಮಾಡುತ್ತಿದ್ದ ಮೈದಾನದ ರಚನೆ ಹೇಗಿತ್ತೆಂದರೆ ಮಳೆ ಬಂದ ತಕ್ಷಣ ನೀರು ತುಂಬಿ ಬಿಡುತ್ತಿತ್ತು. ಇನ್ನು ಅಭ್ಯಾಸಕ್ಕೆ ಬೇಕಾದ ಅತ್ಯಂತ ದುಬಾರಿ ಸಲಕರಣೆಗಳಿಗಾಗಿ ಯಾರನ್ನು ಬೇಡುವುದು? ಹಳೆ ಸ್ಕೂಟರಿನ ಬಿಡಿಬಾಗಗಳೇ ಅವಳ ಸಲಕರಣೆಯಾಯ್ತು. ಆಹಾರದ ಬಗ್ಗೆ ಹೇಳುವುದಿದ್ದರೆ ಅಂದಿನಿಂದ ಇಂದಿನವರೆಗೂ ದೀಪ ಸಕ್ಕರೆಯನ್ನು ದೂರವೇ ಇಟ್ಟಿದ್ದಾಳೆ. ಜಿಮ್ನಾಸ್ಟಿಕ್ ಅಭ್ಯಾಸದ ವೇಳೆ ಅತ್ತ್ಯುತ್ತಮ ದೇಹಾರೋಗ್ಯ ಕಾಯ್ದುಕೊಳ್ಳಬೇಕಾದುದರಿಂದ ಅದಕ್ಕೆ ತಕ್ಕಂತಹ ಆಹಾರವನ್ನೇ ತೆಗೆದುಕೊಳ್ಳಬೇಕಷ್ಟೆ? ಕರಾರುವಕ್ಕಾದ ಪೌಷ್ಟಿಕಾಂಶಗಳಿರುವ ದುಬಾರಿ ಆಹಾರವನ್ನು ಕೊಳ್ಳುವುದೂ ದೀಪ ಕುಟುಂಬದ ಬಜೆಟ್ಟಿಗೆ ಹೊರೆಯಾದದ್ದೂ ಹೌದು. ಆದರೆ ಎಲ್ಲಾ ಪ್ರತಿಕೂಲತೆಗಳನ್ನು ಮೆಟ್ಟಿನಿಂತು ಮನೋದೈಹಿಕ ಧಾರ್ಡ್ಯವನ್ನು ಸಾಧಿಸಿ ಒಲಿಂಪಿಕ್ ಜಿಮ್ನಾಸ್ಟಿಕ್ಸ್ ಇತಿಹಾಸದಲ್ಲಿ ಭಾರತದ ಹೆಸರನ್ನು ದಾಖಲಿಸಿದಳಲ್ಲ...,ಅದಕ್ಕಾಗಿ ದೀಪ ಸಾಧನೆಗೆ  ಹ್ಯಾಟ್ಸ್ ಆಫ್ ಎನ್ನೋಣ.
`ಜೀವನದಲ್ಲಿ ಹೋರಾಟ ಮುಖ್ಯ, ವಿಜಯವಲ್ಲ' ಇದು ಒಲಿಂಪಿಕ್ಸ್ ಉದ್ದೇಶ. `ಭಾಗವಹಿಸುವುದು, ಗೆಲ್ಲುವುದಲ್ಲ' ಇದು ಒಲಿಂಪಿಕ್ಸ್ ಸಿದ್ಧಾಂತ. ಆದುದರಿಂದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳೆಲ್ಲರನ್ನೂ ಅಭಿನಂದಿಸೋಣ...ಅವರ ಪರಿಶ್ರಮಕ್ಕಾಗಿ, ತ್ಯಾಗಕ್ಕಾಗಿ....    

           

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ