ನನ್ನ (ನಮ್ಮ) ಅಬ್ಬೆ
ಕೆಲವು ವರ್ಷಗಳ ಹಿಂದೆ ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ಶ್ರೀ ರಾಧಾಕೃಷ್ಣ ಭಡ್ತಿಯವರು 'ನೀರು ನೆರಳು' ಎಂಬ ಅಂಕಣವನ್ನು ಬರೆಯುತ್ತಿದ್ದರು.'ಅಬ್ಬಿ'(ಹರಿಯುವ ನೀರು )ಯ ಕುರಿತು ಬರೆಯುತ್ತಾ "....ಕುಂದಾಪುರ ಭಾಗದಲ್ಲಿ ಅಮ್ಮನನ್ನು ಅಬ್ಬಿ ಎಂದೇ ಕರೆಯುತ್ತಾರೆ. ಹಳೆಗನ್ನಡದಲ್ಲಿ ಅಬ್ಬಿಗೆ ತಾಯಿ ಎಂಬರ್ಥ ವ್ಯಾಪಕ,ಊರಿಗೆ ಊರನ್ನೇ ಪೊರೆಯುವ ಈ ಅಬ್ಬಿಯೂ ಸಾಕ್ಷಾತ್ ಅಮ್ಮನೆ ...."ಅವರ ಬರವಣಿಗೆ ಹೀಗೇ ಮುಂದುವರಿದಿತ್ತು. ಆ ಲೇಖನವನ್ನು ಓದುತ್ತಿರುವಾಗ ನನ್ನ ಅಬ್ಬೆಯ ಕುರಿತೇ ಭಡ್ತಿಯವರು ಬರೆದರೇನೋ ಎನಿಸಿತ್ತು. ಮಕ್ಕಳಿಗೆ,ಸೊಸೆಯಂದಿರಿಗೆ,ಮೊಮ್ಮಕ್ಕಳಿಗೆ,ನೆಂಟರಿಗೆ,ಇಷ್ಟರಿಗೆ,ಮಾತ್ರವಲ್ಲದೆ ಹಸುಕರುಗಳು,ನಾಯಿ,ಬೆಕ್ಕು,ಭಿಕ್ಷುಕರು ಹೀಗೆ ಸರ್ವರಿಗೂ ಮೊಗೆದಷ್ಟೂ ಬತ್ತದ ವಾತ್ಸಲ್ಯದ ಚಿಲುಮೆ ನನ್ನಬ್ಬೆ.
ಈ ಲೇಖನವನ್ನು ಓದುವಾಗ ನಿಮಗೂ '... ನನ್ನ ತಾಯಿಯೂ ಹೀಗೇ ಇದ್ದರಲ್ಲವೇ...?' ಎಂದೆನಿಸಬಹುದು. ಓದುತ್ತಾ ಓದುತ್ತಾ ನಿಮ್ಮ ಬಾಲ್ಯ ಕಾಲದ ಮಧುರ ನೆನಪುಗಳಲ್ಲಿ ಒಂದಿಷ್ಟು ಹೊತ್ತಾದರೂ ಮೈಮರೆತಿರಿ ಎಂದಾದರೆ ನನ್ನ ಈ ಬರವಣಿಗೆಯ ಉದ್ದೇಶ ಸಾರ್ಥಕವಾದೀತು.
ನಮ್ಮ ಕಾಸರಗೋಡು, ವಿಟ್ಲ,ಪುತ್ತೂರು, ಕಡೆಗಳಲ್ಲಿ ಹವ್ಯಕ ಭಾಷೆಯಲ್ಲಿ ಅಮ್ಮನಿಗೆ 'ಅಬ್ಬೆ'(ಅಬ್ಬಿ ಅಲ್ಲ )ಎಂದು ಕರೆಯುತ್ತೇವೆ. ಹವ್ಯಕರಿಗಷ್ಟೇ ಸೀಮಿತವಾಗಿದ್ದ ಹೆತ್ತ ಮಕ್ಕಳು ಮಾತ್ರವೇ ಕರೆಯುತ್ತಿದ್ದ ಕಲ್ಲುಸಕ್ಕರೆಯಂತಹ ಈ ಎರಡಕ್ಷರ ಕರಗಿ ಕರಗಿ ಈಗ ಯಾರು ಯಾರನ್ನೂ ಕರೆಯಬಹುದಾದ 'ಅಮ್ಮ' ಎಂಬ ಶಬ್ಧವೇ ಹವೀಕರಿಗೂ ಸರ್ವಸಮ್ಮತವೆನಿಸಿದೆ. (ನನ್ನ ಮಕ್ಕಳೂ ಇದಕ್ಕೆ ಹೊರತಲ್ಲ )ಹೋದ ಸಲ ನನ್ನ ಅಬ್ಬೆ ನಮ್ಮ ಮನೆಗೆ ಬಂದಿದ್ದಾಗ ನನ್ನ ಮಗ ತಮ್ಮ ಶಾಲೆಯಲ್ಲಿ 'ಮದರ್ಸ್ ಡೇ' ಆಚರಣೆಗಾಗಿ ಅಮ್ಮಂದಿರೊಡಗೂಡಿ ಹಮ್ಮಿಕೊಳ್ಳಲಿರುವ ಕಾರ್ಯಕ್ರಮಗಳ ಬಗ್ಗೆ ರಸವತ್ತಾಗಿ ವಿವರಿಸುತ್ತಿದ್ದ. ನಾನೂ ಬಹಳ ಹುಮ್ಮಸ್ಸಿನಿಂದ ಕೇಳುತ್ತಿದ್ದೆ. ಅಲ್ಲೇ ಇದ್ದ ನನ್ನ ಗೆಳತಿಯೂ ತನ್ನ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದಳು. ನಮ್ಮೆಲ್ಲರ ಮಾತುಗಳನ್ನು ಮೌನವಾಗಿ ಕೇಳುತ್ತಿದ್ದ ಅಬ್ಬೆ ಹೇಳಿದ್ದು ಒಂದೇ ಮಾತು,"ಇವತ್ತಿನ ಹುಡುಗಿಯರು ನಿಜ ಅರ್ಥದಲ್ಲಿ ತಾಯಿ ಎನಿಸಿಕೊಳ್ಳುವುದು ಆ ಒಂದೇ ದಿನಕ್ಕೇನು?ಹಾಗಿದ್ದರೆ ಉಳಿದ ದಿನಗಳಲ್ಲಿ ಮಕ್ಕಳಿಗೆ ದಾತಾರರೇ ಇಲ್ಲವೇ... ?"ಅವಳ ಮಾತುಗಳನ್ನು ಕೇಳಿ ಗಪ್ ಚಿಪ್ ಆಗಿಬಿಟ್ಟಿದ್ದ ನಾವು ಒಂದು ಕ್ಷಣ ನಮ್ಮ ಎದೆಯನ್ನೇ ಮುಟ್ಟಿನೋಡಿಕೊಳ್ಳುವಂತಾಗಿತ್ತು. ಅಬ್ಬೆಯ ಅಭಿಪ್ರಾಯಗಳೆಲ್ಲವೂ ಅಷ್ಟು ಕರಾರುವಾಕ್ಕು. ಅವಳಿಗೆ ಮದರ್ಸ್ ಡೇ ಯೂ ಒಂದೇ ಚಿಲ್ಡ್ರನ್ಸ್ ಡೇ ಯೂ ಒಂದೇ. ಇನ್ನು ವಿಮೆನ್ಸ್ ಡೇ ಬಗ್ಗೆ ಬಹುಷಃ ಅವಳಿಗೆ ಗೊತ್ತೇ ಇರಲಾರದು. ಸಮರ್ಥ ಮಹಿಳೆಯಾಗಿ ಮಮತೆಯ ಅಬ್ಬೆಯಾಗಿ, ಮಕ್ಕಳಿಗಾಗಿ ಕುಟುಂಬಕ್ಕಾಗಿ ಜೀವನ ಪೂರ್ತಿಯ ಆಚರಣೆಯಲ್ಲಿ ಗಟ್ಟಿ ನಂಬಿಕೆ ಇರುವವಳು ಅವಳು.
ನೋಡುಗರಲ್ಲಿ ಗೌರವ ಮೂಡಿಸುವಂತಹ ಮಟ್ಟಸ ನಿಲುವಿನ ಲಕ್ಷಣವಾದ ಹೆಂಗಸು ನನ್ನಬ್ಬೆ. ತನ್ನ ಹನ್ನೆರಡನೆಯ ವಯಸ್ಸಿನಲ್ಲಿ ಇಪ್ಪತ್ತೆಂಟರ ಯುವ ವೈದ್ಯನ ಕೈ ಹಿಡಿದು ಅತ್ತೆಮನೆಗೆ ಕಾಲಿಟ್ಟ ದಿನದಿಂದ ಇಂದಿನವರೆಗಿನ ಅವಳ ಜೀವನವೆಂದರೆ ಅದು ಹಲವು ಕವಲುಗಳ ಮಜಲು. ಅತ್ತೆ, ಮಾವ, ಭಾವ, ಮೈದುನ,ಅವರೆಲ್ಲರ ಸಂಸಾರ,ತನ್ನ ಮನೆ, ಗಂಡ,ಮಕ್ಕಳು, ದನಕರುಗಳು,ಆಳುಕಾಳುಗಳು,ತೋಟ,ಗದ್ದೆ....... ಹೀಗೆ ಬೃಹದ್ಗಾತ್ರದ ಕುಟುಂಬ ಮೆರವಣಿಗೆಯ ಸಾರಥ್ಯವನ್ನು ವಹಿಸಿದ್ದ ಅಬ್ಬೆ
ಬಹು ಕಾಳಜಿಯಿಂದ ಎಲ್ಲರನ್ನೂ ಎಲ್ಲವನ್ನೂ ಸುಸೂತ್ರವಾಗಿ ಗಮ್ಯಕ್ಕೆ ತಲುಪಿಸಿದ ನಿರಾಳತೆಯಿಂದ ಇಂದು ಮಗ ಸೊಸೆಯಂದಿರ ತಂಪಿನ ನೆರಳಲ್ಲಿ ಸಂತೃಪ್ತಿಯ ವಿಶ್ರಾಂತ ಜೀವನ ನಡೆಸುತ್ತಿದ್ದಾಳೆ.ಅಬ್ಬೆ ತನ್ನ ಇಪ್ಪತ್ತೊಂದರ ಹರೆಯಕ್ಕೆ ನಾಲ್ಕು ಮಕ್ಕಳ ತಾಯಿ ಆಗಿದ್ದೂ ಅಲ್ಲದೆ ಇನ್ನೂ ನಾಲ್ಕು ಮಕ್ಕಳನ್ನು ತನ್ನ ಮಡಿಲೊಳಕ್ಕೆ ತುಂಬಿ ಕೊಳ್ಳಬೇಕಾಗಿ ಬಂದಿತ್ತು. ನನ್ನ ದೊಡ್ಡಪ್ಪನವರ ಅಕಾಲ ಮೃತ್ಯುವಿನಿಂದಾಗಿ ಅವರ ಸಂಸಾರದ ಹೊಣೆಯನ್ನೂ ನನ್ನ ತಂದೆಯವರೇ ವಹಿಸಿಕೊಂಡಿದ್ದರು.ತನ್ನ ಮಕ್ಕಳು ನಾಲ್ಕು,'ಆ ಮಕ್ಕಳು ನಾಲ್ಕು' ಎಂದೆಣಿಸದೆ ತನಗಿರುವುದೇ ಎಂಟು ಮಕ್ಕಳು ಎಂದುಕೊಂಡಿದ್ದಳಂತೆ .ದೊಡ್ಡಪ್ಪನ ಮಕ್ಕಳು ಅವಳನ್ನು ಕಿರಿಯಬ್ಬೆ ಎಂದೇ ಕರೆಯುತ್ತಾರೆ. ಈ ಕಿರಿಯಬ್ಬೆಯ ಹಿರಿಯ ಗುಣಗಳಿಂದಾಗಿ ಅವಳು ನಾವು ನಾಲ್ಕು ಜನರಿಗಲ್ಲದೆ ಇನ್ನೂ ಹನ್ನೆರಡು ಮಕ್ಕಳಿಗೆ ಅಚ್ಚುಮೆಚ್ಚಿನ ಅಬ್ಬೆಯೆನಿಸಿಕೊಂಡಿದ್ದಾಳೆ.ಹೇಗೆನ್ನುವಿರಾ?
ಅವಳ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳು ನಾವು ನಾಲ್ಕು ಜನರಾದರೆ ನಮ್ಮೆಲ್ಲರ ಮಕ್ಕಳು ಒಂಭತ್ತು ಮಂದಿ. ಇನ್ನು ನನ್ನ ಚಿಕ್ಕಪ್ಪನ ಮಕ್ಕಳು ಮೂವರು. ಇವರೆಲ್ಲರೂ ಆಕೆಯನ್ನು ಕರೆಯುವುದು 'ಅಬ್ಬೇ....' ಎಂದೇ. ಮನೆ ತುಂಬಾ ಜನ, ಮೈ ತುಂಬಾ
ಕೆಲಸಗಳಿರುತ್ತಿದ್ದರೂ ಅವಳೆಂದೂ ಮುಖ ಸಿಂಡರಿಸಿಕೊಂಡಿದ್ದನ್ನಾಗಲೀ ಮನೆ ಮಂದಿಯೊಂದಿಗೆ ಸಿಡುಕಿದ್ದನ್ನಾಗಲೀ ನೋಡಿದ
ನೆನಪಿಲ್ಲ. ಅಡುಗೆ ಕೆಲಸ,ದನಕರುಗಳ ಕೆಲಸವೆಂದರೆ ಅದೊಂದು ಮಹಾ ಯಜ್ಞವೆಂದೇ ಆಕೆ ತಿಳಿದಿದ್ದಳು. ಎರಡರಲ್ಲೂ ಅಷ್ಟು
ತನ್ಮಯತೆ. ಹಸುಗಳ ಭುಜ ಸವರಿ,ಗಂಗೆದೊಗಲು ನೇವರಿಸುತ್ತಾ ಅವುಗಳೊಡನೆ ಅಬ್ಬೆ ಮಾತನಾಡುತ್ತಾ ನಿಂತರೆ ಅವುಗಳು

ಕುತ್ತಿಗೆ ನೀಡಿ ಅರೆಕಣ್ಣು ಮುಚ್ಚಿ ಅಬ್ಬೆಯ ಪ್ರೀತಿಯನ್ನು ಹೀರಿಕೊಳ್ಳುತ್ತಿದ್ದುವು. ಆಗೆಲ್ಲಾ ನಮಗೂ ಆ ಮೂಕ ಪ್ರಾಣಿಗಳಿಗೂ ಒಂದೇ ವ್ಯತ್ಯಾಸವಿದ್ದುದು,ನಾವು ಶಾಲೆಯಿಂದ ಬರುವ ಹೊತ್ತಿಗೆ ಅವಳು ಎದುರಿಲ್ಲದಿರುತ್ತಿದ್ದರೆ ".... ಅಬ್ಬೇ..." ಎಂದು ಕರೆಯುತ್ತಿದ್ದೆವು. ಅವುಗಳಾದರೋ ಅಬ್ಬೆ ಕೊಟ್ಟಿಗೆಯ ಎದುರಿನಿಂದ ಹಾದು ಹೋಗುವಾಗಲೆಲ್ಲಾ ' ಅಂಬಾ...'ಎಂದು ಕೂಗುತ್ತಿದ್ದುವು.
ಅಡುಗೆಯ ಬಗ್ಗೆ ಹೇಳುವುದಿದ್ದರೆ ಅಬ್ಬೆ ಸಾಕ್ಷಾತ್ ಅನ್ನಪೂರ್ಣೆಯೇ. ಹತ್ತು ಹನ್ನೆರಡು ಜನರಿರುತ್ತಿದ್ದ ಮನೆಯಲ್ಲಿ ಕೆಲಸಕ್ಕೇನು ಬರಗಾಲವೇ? ಕೆಲಸಗಳ ಬೆಟ್ಟವೇ ಎದುರಿದ್ದರೂ ಅವಳೆಂದೂ ಅಡುಗೆಯನ್ನು ಉಪೇಕ್ಷಿಸಿದವಳಲ್ಲ. ಸೌದೆ ಒಲೆಯ ಮೇಲೆ ದೊಡ್ಡ ದೊಡ್ಡ ಕೊಳದಪ್ಪಲೆ,ಬಾಂಡಲಿಗಳಲ್ಲಿ ರುಚಿಕಟ್ಟಾಗಿ ಅಡುಗೆ ಮಾಡಿಟ್ಟು ಮಧ್ಯಾಹ್ನ ಸರಿಯಾಗಿ ಹನ್ನೆರಡೂವರೆಗೆ ನಮ್ಮನ್ನು ಊಟಕ್ಕೆ ಕರೆಯುತ್ತಿದ್ದಳು.ಅಂದಿನ ದಿನಗಳಲ್ಲಿ ಕಾಫಿ, ತಿಂಡಿ, ಊಟದ ಹೊತ್ತಿನಲ್ಲಿ ಪಂಕ್ತಿಯಲ್ಲಿ ಒಂದಿಬ್ಬರು ಅತಿಥಿಗಳಿರುವುದು ಸಾಮಾನ್ಯವಾಗಿತ್ತು. ಅವರು ಊಟ ಮಾಡುತ್ತಾ "....ಏನಿವತ್ತು ವಿಶೇಷ...?" ಎಂದು ಕೇಳದೆ ಇರುತ್ತಿರಲಿಲ್ಲ.ಅನ್ನದೊಂದಿಗೆ ಅಷ್ಟು ಬಗೆಯ ವ್ಯಂಜನಗಳಿರುತ್ತಿದ್ದುವು. ಆಗಿನ್ನೂ ಡಯಟ್,ಕೊಲೆಸ್ಟ್ರಾಲ್ಗಳ ಭೂತ ನಮ್ಮೂರಿಗೆ ಹೊಕ್ಕಿರಲಿಲ್ಲ. ಹಾಗಾಗಿ ಶುದ್ಧ ಕೊಬ್ಬರಿಎಣ್ಣೆ,ತಾಜಾ ಬೆಣ್ಣೆ,ತುಪ್ಪಗಳನ್ನು ಧಾರಾಳವಾಗಿ ಬಳಸಿ ಅಬ್ಬೆ ನಿರ್ವಂಚನೆಯಿಂದ ಬೇಯಿಸಿ ಬಡಿಸುತ್ತಿದ್ದರೆ ನಾವು ನಿರ್ಯೋಚನೆಯಿಂದ ತಿಂದು ತೇಗುತ್ತಿದ್ದೆವು.ನಮ್ಮ ಕಾಸರಗೋಡು ಸರಕಾರೀ ಕಾಲೇಜಿನ ಭಾಷಾವಿಭಾಗಗಳಲ್ಲಿ ಆಗ ಸೇವೆ ಸಲ್ಲಿಸುತ್ತಿದ್ದ ಪ್ರೊ.ಡಾ. ಉಪ್ಪಂಗಳ ಶಂಕರನಾರಾಯಣ ಭಟ್ಟರು,ಪ್ರೊ.ಡಾ. ಶ್ರೀಕೃಷ್ಣ ಭಟ್ಟರು,ಪ್ರೊ.ಡಾ. ತಿಮ್ಮಪ್ಪಗೌಡರು, ಪ್ರೊ.ಶೇಷಾದ್ರಿ ಇವರೆಲ್ಲರೂ ನನ್ನಬ್ಬೆಯ ರಸಕವಳದ ರುಚಿಗೆ ಮನ ಸೋತವರೇ. ನಮ್ಮ ತಂದೆಯವರಿಗೆ ಸಾಹಿತ್ಯದಲ್ಲಿ ಆಸಕ್ತಿ ಇತ್ತಾದುದರಿಂದ ಸಾಹಿತ್ಯರಸದೊಂದಿಗೆ ಷಡ್ರಸಪೂರಿತವಾದ ಅಡುಗೆಯೂ ಸೇರಿ ಒಂದು ನವೀನ ರಸಪಾಕ ನಮ್ಮಹೊಟ್ಟೆಯೊಳಕ್ಕಿಳಿಯುತ್ತಿತ್ತು.ಎಪ್ಪತ್ತೈದರ ಈ ಇಳಿ ಹರೆಯದಲ್ಲೂ ಸಂದರ್ಭ ಬಂದರೆ ಅಡುಗೆ ಮಾಡಲು ಅಬ್ಬೆ ಹಿಂದೆ ಮುಂದೆ ನೋಡುವುದಿಲ್ಲ.ಅಂತಹ ದಿನಗಳಲ್ಲಿ ನಮ್ಮ ಹೊಟ್ಟೆಯೊಳಕ್ಕೆ ನಾಲ್ಕು ತುತ್ತು ಜಾಸ್ತಿಯೇ ಇಳಿಯುತ್ತದೆ ಎಂಬುದೂ ಅತಿಷಯೋಕ್ತಿಯಲ್ಲ.

ಅಬ್ಬೆ ಮಾಡುವ ತಿಂಡಿಗಳ ವಿಶೇಷತೆಯನ್ನು ನಾನಿಲ್ಲಿ ಬರೆಯಲೇಬೇಕು,ಆಕೆ ಉದ್ದಿನ ದೋಸೆ ಎರೆಯುತ್ತಾಳೆಂದರೆ ಅದರ ಪರಿಮಳ ಅಂಗಳದವರೆಗೂ ಹಾದು ಬರುತ್ತಿತ್ತು. ಏಕೆನ್ನುವಿರಾ? ದೊಡ್ಡ ಕಾವಲಿಗೆಯಲ್ಲಿ ಅತಿತೆಳ್ಳಗೆ ದೋಸೆಯನ್ನು ಹರಡಿ
ಅದು ಗರಿ ಗರಿಯಾಗಿ ಬೆಂದಾಗ ನಾಲ್ಕು ಚಮಚ ತಾಜಾ ತುಪ್ಪ ಎರೆಯುತ್ತಾಳೆ. ನಂತರ ದೋಸೆಯನ್ನು ಕವುಚಿ ಹಾಕಿ ಮತ್ತೆ ಅಷ್ಟೇ ಪ್ರಮಾಣದ ತುಪ್ಪ ಎರೆದ ನಂತರವೇ ಆ ದೋಸೆ ನಮ್ಮ ತಟ್ಟೆಗೆ ಬೀಳುತ್ತಿದ್ದುದು.ಇದು ನನ್ನ ಬಾಲ್ಯದ ಕಥೆಯಾದರೆ ಈಗಲೂ ಪರಿಸ್ಥಿತಿಯಲ್ಲಿ ವಿಶೇಷ ಬದಲಾವಣೆಯಾಗಿಲ್ಲ. ನನ್ನ ಹತ್ತೊಂಭತ್ತು ವರ್ಷದ ಮಗ ರಜಾ ಬಂದೊಡನೆ ಅಬ್ಬೆ ಇರುವಲ್ಲಿಗೆ ಹೋಗಲು ಆತುರ ತೋರುತ್ತಾನೆ. ಯಾಕೆಂದರೆ ಅಬ್ಬೆಯ ಯುನೀಕ್ ಪ್ರಿಪರೇಶನ್ ಆದ ಉದ್ದಿನ ದೋಸೆ ತಿನ್ನಲು!ನಾನು ಎಷ್ಟೇ ಪ್ರಯತ್ನ ಪಟ್ಟು ರುಚಿಕಟ್ಟಾದ ದೋಸೆ ಮಾಡಿದರೂ ನನ್ನ ಮಗನ ಬಾಯಿಯಿಂದ ಬರೋದು ಒಂದೇ ಕಾಮೆಂಟ್,".... ನೀನು ಏನೇ ಮಾಡಿದ್ರೂ
ಅಬ್ಬೆ ಮಾಡೋ ದೋಸೆಗೆ ಕಂಪೇರಿಸನ್ನೇ ಇಲ್ಲಮ್ಮ ...", ಇನ್ನು ಅಬ್ಬೆ ಮಾಡುವ ಚಕ್ಕುಲಿ....., ಅಕ್ಕಿಹಿಟ್ಟು,ಉದ್ದಿನಹಿಟ್ಟು ಬೆರೆಸುವಾಗ ದೊಡ್ಡ ಮುಷ್ಠಿ ಗಾತ್ರದ ಬೆಣ್ಣೆಯನ್ನು ಸೇರಿಸುತ್ತಾಳೆ. ಮತ್ತಿನ್ನೇನೋ ಒಂದು ಅಬ್ಬೆಯ ಕೈಯ್ಯದ್ದೇ ಆದ ಸ್ಪೆಶಲ್ ಇಫೆಕ್ಟ್ ಸೇರಿಕೊಂಡು ಆ ಚಕ್ಕುಲಿಯ ರುಚಿ 'ಸೂಪರ್' ಎನಿಸಿಕೊಳ್ಳುತ್ತದೆ. ಹೀಗೆ ಎಷ್ಟೆಷ್ಟೋ ಕರಿದ ತಿಂಡಿಗಳು,ಸಿಹಿತಿಂಡಿ ಗಳು,ಹಪ್ಪಳ,ಉಪ್ಪಿನಕಾಯಿ,ಸೆಂಡಿಗೆಗಳು ಅಬ್ಬೆಯ ಮೂಸೆಯಲ್ಲಿ ತಯಾರಾದದ್ದು ಎಂದರೆ ನಮ್ಮ ಕುಟುಂಬದಲ್ಲಿ ಅದಕ್ಕಿರುವ ಡಿಮಾಂಡೇ ಬೇರೆ.
ಅಬ್ಬೆ ಶಾಲೆಗೆ ಹೋಗಿ ಕಲಿತದ್ದು ಬರಿಯ ನಾಲ್ಕನೆ ಕ್ಲಾಸು ಆಗಿದ್ದರೂ ಮ್ಯಾನೇಜ್ಮೆಂಟ್ ಪದವೀದರರೂ ಬೆರಳು ಕಚ್ಚಿಕೊಳ್ಳುವಂತೆ ಬಂದೊದಗಿದ ಪರಿಸ್ಥಿತಿಯನ್ನು ನಿಭಾಯಿಸಬಲ್ಲ ಶಕ್ತಿ ಮತ್ತು ಯುಕ್ತಿ ಎರಡೂ ಅವಳಲ್ಲಿದೆ. ಸಂಕಷ್ಟದ ಸಂದ ರ್ಭಗಳಲ್ಲಿ ಅವಳು ಕಾಯ್ದುಕೊಳ್ಳುವ ನಿರ್ಲಿಪ್ತತೆ ಮತ್ತು ಸಮಚಿತ್ತತೆ ಯಾವಾಗಲೂ ನನ್ನನ್ನು ಚಿಂತನೆಗೆ ಹಚ್ಚುವಂತೆ ಮಾಡುತ್ತದೆ. ಸುಮಾರು ಐವತ್ತು-ಅರುವತ್ತು ವರ್ಷಗಳಷ್ಟು ಹಿಂದೆ ಕಾಸರಗೋಡಿನಲ್ಲಿ ವೈದ್ಯವೃತ್ತಿ ನಡೆಸಿಕೊಂಡಿದ್ದ ನನ್ನ ತಂದೆಯವರು ದೂರದ ಹಳ್ಳಿಯಲ್ಲಿ ವಿಶಾಲವಾದ ಮನೆ, ಅಡಿಕೆತೋಟಗಳನ್ನು ಮಾಡಿಕೊಂಡಿದ್ದರು.ಸರಿಯಾದ ಮೆಲ್ನೋಟವಿಲ್ಲದೆ ಕೃಷಿ ಕೆಲಸ ಕುಂಟಿಕೊಂಡೇ ಸಾಗುತ್ತಿತ್ತು. ಕೊನೆಗೆ ಭೂಮಿ ಪೂರ್ತಿ ಹಾಳಾಗಿಹೋಯ್ತು ಎನ್ನುವ ಸ್ಥಿತಿಗೆ ತಲುಪಿದಾಗ ತಂದೆಯವರು ತಲೆಯ ಮೇಲೆ ಕೈಹೊತ್ತುಕೊಳ್ಳುವಂತಾಗಿತ್ತು. ಆಗ ಅವರಿಗೆ ಅಭಯವನ್ನಿತ್ತು ಬೆನ್ನೆಲುಬಾಗಿ ನಿಂತ ಅಬ್ಬೆ ಹಳ್ಳಿಗೆ ಕಾಲಿಟ್ಟು ಅಲ್ಲೇ ನೆಲೆಸಿಬಿಟ್ಟಳು. ನಂದಗೋಕುಲದಂತಹ ಮನೆ,ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಗಂಡ, ಮಕ್ಕಳು, ಕೊಟ್ಟಿಗೆ ತುಂಬ ಇದ್ದ ಹಸುಕರುಗಳು ಹೀಗೆ ಎಲ್ಲರನ್ನೂ ಚಿಕ್ಕಪ್ಪ,ಚಿಕ್ಕಮ್ಮನವರ ವಶಕ್ಕೆ ಒಪ್ಪಿಸಿ ರಸ್ತೆಯಿಲ್ಲ,ಕರೆಂಟು ಇಲ್ಲ, ಫೋನು ಇಲ್ಲವೇ ಇಲ್ಲ ಎಂಬಿತ್ಯಾದಿ ಇಲ್ಲಗಳ ಸಂತೆಯಂತಿದ್ದ ತೋಟದ ಮನೆಗೆ ನಿಶ್ಚಿಂತೆಯಿಂದ ಎದ್ದು ಹೋಗಿದ್ದಳು.
ತೋಟದ ಕಡೆಗೆ ಬೆನ್ನು ತಿರುಗಿಸಿದ್ದ ಕೆಲಸದವರನ್ನು ಪ್ರೀತಿಯಿಂದ ಕರೆದು ಹುರಿದುಂಬಿಸಿ ಹೊಟ್ಟೆತುಂಬಿಸಿ ತೋಟ ಮನೆಗಳೆರಡನ್ನೂ ಒಂದು ಹಂತಕ್ಕೆ ತರಬೇಕಿದ್ದರೆ ಅಬ್ಬೆ ಪಟ್ಟ ಪಾಡು ಅಷ್ಟಿಷ್ಟಲ್ಲ. ಅನಂತರ ಹಂತ ಹಂತವಾಗಿ ಸಕಲ ಸೌ ಕರ್ಯಗಳಿಂದ ಕಂಗೊಳಿಸಿದ ಆ ಮನೆಯಲ್ಲೇ ನಮ್ಮೆಲ್ಲರ ಮದುವೆಯೂ ನಡೆಯಿತು.ಅಣ್ಣ ಓದು ಮುಗಿಸಿ ಬರುತ್ತಲೂ ಅಬ್ಬೆ ತನ್ನ ಯಜಮಾನಿಕೆಯನ್ನು ಆತನಿಗೆ ವರ್ಗಾಯಿಸಿಬಿಟ್ಟಳು. 'ಬಂದುದನ್ನು ಬಂದಹಾಗೆಯೇ ಸ್ವೀಕರಿಸಿ ನಿಶ್ಚಿಂತೆಯಿಂದ ನಿನ್ನ ಕರ್ತವ್ಯ ಮಾಡುತ್ತಿರು' ಎಂಬ ತತ್ವವನ್ನು ಅವಳು ತನ್ನ ನಡತೆಯ ಮೂಲಕ ನಮಗೆ ತೋರಿಸಿ ಕೊಟ್ಟಳು. ಅಬ್ಬೆಯಿನ್ನೂ ನಡು ಹರೆಯದಲ್ಲಿರುವಾಗಲೇ ತನ್ನ ಗಂಡನನ್ನು ಕಳೆದುಕೊಳ್ಳಬೇಕಾಗಿ ಬಂದಿತ್ತು. ತಂದೆಯವರ ಮರಣ ನಮಗೆಲ್ಲರಿಗೂ ತೀವ್ರ ಆಘಾತವನ್ನು ತಂದೊಡ್ದಿತ್ತು. ಆಗಲೂ ಅಷ್ಟೆ, ವೈಧವ್ಯದ ದುಃಖವನ್ನು ನುಂಗಿಕೊಂಡು ನಮ್ಮ ಬೆಂಗಾವಾಲಿಗೆ ನಿಂತು ಮುಂದೆ ಆಗಬೇಕಾದ ಕೆಲಸಗಳನ್ನು ಮಗಂದಿರ ಮೂಲಕ ಸಮರ್ಥವಾಗಿ ಮಾಡಿಸಿದ್ದಳು. ಎಂತಹ ನೋವಿನ ಸನ್ನಿವೇಷವನ್ನೂ ತನ್ನ ಸೌಮ್ಯ ನಡವಳಿಕೆಯಿಂದ ಹಗುರಗೊಳಿಸಿಬಿಡುತ್ತಿದ್ದ ಅಬ್ಬೆ ಯಾರಿಗೇ ಆಗಲಿ ಬುದ್ಧಿಹೇಳಿ ತಿಳುವಳಿಕೆ ನೀಡುವ ಗೋಜಿಗೇ ಹೋಗುತ್ತಿರಲಿಲ್ಲ. ತಾನು ಸರಿ ಇದ್ದರೆ ತನ್ನ ಸುತ್ತಲಿನವರೂ ಸರಿ ಇದ್ದೇ ಇರುತ್ತಾರೆ ಎಂಬುದನ್ನು ಬಲವಾಗಿ ನಂಬಿದವಳು ಅವಳು. ಅದಕ್ಕಾಗಿಯೀ ಇರಬೇಕು, ಸ್ಟ್ರೆಸ್ ,ಬಿ.ಪಿ,ಶುಗರ್ ಇತ್ಯಾದಿಗಳು
೭೫ ರ ಹರೆಯದ ಅಬ್ಬೆಯ ಬಳಿಗೆ ಇಂದಿಗೂ ಬರುವ ಧೈರ್ಯ ಮಾಡಿಲ್ಲ. ಇಂದಿನ ಗ್ಲೋಬಲ್ ವಿಲೇಜಿನೊಳಗಿನ ಅಮ್ಮಂದಿರನ್ನು (ನನ್ನನ್ನೂ ಸೇರಿಸಿದಂತೆ)ಅಂದಿನ ವಸುಧೈವ ಕುಟುಂಭಕಂ ದೊಳಗಿನ ಅಬ್ಬೆಯೊಂದಿಗೆ ಹೋಲಿಸುವಾಗ ನನ್ನ (ನಮ್ಮ) ಅಬ್ಬೆಯೇ ಹೆಚ್ಚೆಚ್ಚು ವಂದನೀಯಳೆನಿಸುವುದಿಲ್ಲವೇ?ಅಂತರಂಗ ಬಹಿರಂಗಗಳ ಸಂಘರ್ಷಭೂಮಿಯಾದ ಈ ಸಂಸಾರ ಕ್ಷೇತ್ರದಲ್ಲಿ ಬರಿಯ ಸಾತ್ವಿಕ ಅಸ್ತ್ರಗಳನ್ನು ಹಿಡಿದುಕೊಂಡೇ ಎಲ್ಲವನ್ನೂ,ಎಲ್ಲರನ್ನೂ ಜಯಿಸಿದಾಕೆ ಅವಳು. ಆದುದರಿಂದಲೇ ಅವಳು ಇಂದಿಗೂ ನಮ್ಮ ಸಂಸಾರ ರಥದ ಸಾರಥಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ