ಮಳೆಗಾಲದಲ್ಲಿ ಕೃಷಿ ಕೆಲಸಗಳಿಗೆ ಸ್ವಲ್ಪ ಬಿಡುವು ತಾನೇ ...?ಹಳ್ಳಿಯಲ್ಲಿರುವ ನನ್ನ ಬಾಲ್ಯದ ಗೆಳತಿ ಜಯಾ ಪೇಟೆಯಲ್ಲಿರುವ ನಮ್ಮ ಮನೆಯಲ್ಲಿ ನಾಲ್ಕು ದಿವಸಗಳ ಕಾಲ ಇರಲೆಂದು ಬಂದಿದ್ದಳು. ಇದು ನಮ್ಮಪ್ರತಿ ವರ್ಷದ ಪ್ರೊಗ್ರಾಮ್. ವರ್ಷದಲ್ಲಿ ಒಂದು ಬಾರಿ ನಾವೂ ಅವಳ ಹಳ್ಳಿಗೆ ಹೋಗಿ ಹತ್ತಾರು ದಿವಸಗಳ ಕಾಲ ಇದ್ದು ಬರುತ್ತಿದ್ದೆವು. ಹಚ್ಚಹಸುರಿನ ನಡುವೆ ಕಳೆದ ಸವಿ ಸವಿ ನೆನಪುಗಳನ್ನು ಬುತ್ತಿ ಕಟ್ಟಿ ತರುತ್ತಿದ್ದೆವು.ಮುಂದಿನ ವರ್ಷದವರೆಗೂ ಅದನ್ನು ಹನಿ ಹನಿಯಾಗಿ ಸವಿಯುತ್ತಿದ್ದೆವು.ಜಯಾಳ ಪತಿಯಾದರೋ ಕೆಲಸದಲ್ಲಿ ಜೇನುಹುಳ. ನನ್ನವರಂತೆ ಬೇಕಾದ ಹಾಗೆ ಲೀವ್ ಹಾಕೋಹಾಗಿರಲಿಲ್ಲ.ಪತ್ನಿಯನ್ನುನಮ್ಮ ಮನೆಗೆ ಬಿಡಲೆಂದು ಬರುತ್ತಿದ್ದರು. ನಂತರ ಕರೆದೊಯ್ಯಲೆಂದು ಬರುತ್ತಿದ್ದರು. ಈ ನಡುವೆ ನಾವು ಜೀವನವನ್ನು ಸಾಕಷ್ಟು ರಿಫ್ರೆಶ್ ಮಾಡಿಕೊಳ್ಳುತ್ತಿದ್ದೆವು. ಜಯಾ ಇರುವಾಗಲೇ ನನ್ನ ಮಗ ರವಿಯೂ ತನಗೆ ರಜಾ ಇದೆಯೆಂದು ಬೆಂಗಳೂರಿನಿಂದ ಬಂದಿದ್ದ. ನನ್ನ ಸಂಭ್ರಮಕ್ಕೆ ರೆಕ್ಕೆಗಳು ಮೂಡಿದ್ದುವು.ಹಿಂದಿನ ದಿನದ ಪ್ಲಾನಿನಂತೆ ನಾವಿಂದು ಸಿಟಿಮಾಲ್ ಕಡೆಗೆ ಹೋಗುವುದಿತ್ತು. ಆದರೆ ಮಳೆಯ ಆರ್ಭಟ ನೋಡಿ ಮನೆಯೊಳಗೆಯೇ ಇರಲು ನಿಶ್ಚಯಿಸಿದೆವು. ರವಿ ಸ್ನೇಹಿತನ ಭೇಟಿಗೆಂದು ಹೊರಟುಹೋದ. ನನ್ನ ಪತಿ ಆಗಲೇ ಆಫೀಸ್ ಕಡೆ ಮುಖ ಮಾಡಿಯಾಗಿತ್ತು.ಅಡೆತಡೆಯಿಲ್ಲದೆ ಸಾಗುತ್ತಿದ್ದ ನಮ್ಮ ಮಾತು, ನಗು,ಕಥೆಯಾಗಿ ಧಾರಾವಾಹಿಯಾಗಿ ಹರಿದು ಹೊರಕ್ಕಿಳಿದು ಮಳೆ ನೀರಲ್ಲಿ ಕರಗಿ ಒಂದಾಗಿ ಗೇಟನ್ನು ದಾಟಿ ರಸ್ತೆಯನ್ನು ಸೇರುತ್ತಿತ್ತು.
ಜಯಾ ಮತ್ತು ನಾನು ಒಂದೇ ವಯಸ್ಸಿನವರು. ಆಟ,ಊಟ,ಓದು ಒಟ್ಟಿಗೇ ಮಾಡಿ ಬೆಳೆದವರು.ನಮ್ಮ ಮಾತುಗಳು ಅಲ್ಲಿ ಇಲ್ಲಿ ಹೊರಳಿ ಕೊನೆಗೆ ನಮ್ಮ ಬಾಲ್ಯದ ನಿಲ್ದಾಣದಲ್ಲಿ ಬಂದು ನಿಂತಿತು. ರಜಾ ದಿನಗಳಲ್ಲಿ ಅವಳೂ ನಮ್ಮೊಂದಿಗೆ ನನ್ನ ಅಜ್ಜಿ ಮನೆಗೆ ಬರುತ್ತಿದ್ದಳು.ಮಾವಂದಿರ ಮಕ್ಕಳೊಂದಿಗೆ ಬೋಳು ಗದ್ದೆಯಲ್ಲಿ ಆಡುತ್ತಿದ್ದ ಲಗೋರಿ ಆಟ, ಲಗೋರಿಯ ಚೆಂಡು ಪಕ್ಕದ ಕೆರೆಗೆ ಬಿದ್ದಾಗ ಅದನ್ನು ಹೆಕ್ಕಲೆಂದು ಓಡಿದ ಜಯಾ ಕಾಲು ಜಾರಿ ಕೊಳದೊಳಕ್ಕೆ ಬಿದ್ದಿದ್ದು,ಬೇಸಿಗೆಯಾದುದರಿಂದ ನೀರು ಹೆಚ್ಚಿರಲಿಲ್ಲವಾದರೂ ಮುಳುಗಿದ ಭಯಕ್ಕೆ ಪ್ರಜ್ಞೆ ತಪ್ಪಿದ್ದು, ನಮ್ಮ ಬೊಬ್ಬೆಗೆ ಮಾವ ಓಡಿ ಬಂದಿದ್ದು, ಆಕೆಯನ್ನು ಮೇಲಕ್ಕೆತ್ತಿ ನೀರನ್ನು ಕಕ್ಕಿಸಿದ್ದು, ಅನಂತರ ನಮಗೆ ದೊರೆತ ಬೈಗುಳದ ಸಹಸ್ರನಾಮಾರ್ಚನೆ,ಅತ್ತೆಯಂದಿರು ಹಲಸಿನ ಹಪ್ಪಳದ ತಯಾರಿಯಲ್ಲಿರುವಾಗ ರುಬ್ಬುವ ಕಲ್ಲಿನಿಂದಲೇ ಹಿಟ್ಟನ್ನ ಎಗರಿಸಿ ಓಡಿದ್ದು,ಓಡುವ ರಭಸಕ್ಕೆಒತ್ತಿ ಇಟ್ಟ ಹಸಿ ಹಪ್ಪಳಗಳನ್ನೇ ಮೆಟ್ಟಿದ್ದು, ಕಾಲಲ್ಲಿ ಅಂಟಿದ್ದ ಹಿಟ್ಟು ಆಗಷ್ಟೇ ಒರೆಸಿ ಫಳ ಫಳ ಹೊಳೆಯುತ್ತಿದ್ದ ಕೆಂಪು ನೆಲದ ಮೇಲೆ ರಂಗೋಲಿಯಾದದ್ದು, ಅಜ್ಜಿಯ ಕೈಯ್ಯಲ್ಲಿರುತ್ತಿದ್ದ ದೊಣ್ಣೆಗೆ ಹೆದರಿ ಹಿಂಬದಿಯ ಗುಡ್ಡೆಗೆ ಪಲಾಯನ ಮಾಡಿದ್ದು,ಗೇರು ಮರದ ಮೇಲೆ ಅಡಗಿ ಕುಳಿತದ್ದು,ಊಟಕ್ಕೆ ಹೋಗುವ ಧೈರ್ಯ ಸಾಲದೆ ಗೇರುಹಣ್ಣುಗಳನ್ನೇ ತಿಂದು ಹೊಟ್ಟೆ ತುಂಬಿಸಿಕೊಂಡಿದ್ದು,ಅವುಗಳ ಅತಿಯಾದ ಸೇವನೆಯಿಂದ ನನಗೆ ಗಂಟಲೊಣಗಿ ಕೆಮ್ಮು ಶುರುವಾಗಿ ಕಣ್ಣಲ್ಲಿ ನೀರು ಧಾರೆಯಾದಾಗ ಅಂದೂ ನನ್ನೊಂದಿಗಿದ್ದ ಇದೇ ಜಯಾ ನನ್ನನ್ನು ಮೆಲ್ಲನೆ ಮರದಿಂದ ಕೆಳಕ್ಕೆ ಇಳಿಸಿ ಸದ್ದಿಲ್ಲದಂತೆ ಹಿಂಬಾಗಿಲಿನಿಂದ ಅಡುಗೆ ಕೋಣೆಯೊಳಕ್ಕೆ ನುಗ್ಗಿದ್ದು,ಪಾತ್ರೆಯ ಸದ್ದಾದಾಗ ಕಳ್ಳಬೆಕ್ಕಿರಬೇಕೆಂದು ಬೈಯ್ಯುತ್ತಾ ಅಜ್ಜಿ ಒಳಕ್ಕೆ ಬಂದಾಗ ಹಪ್ಪಳದ ಅವಾಂತರಕ್ಕೆ ಹೊಡೆತ ಬೀಳುವುದು ಖಂಡಿತ ಎಂದುಕೊಂಡ ನಾವು ದೊಡ್ಡ ಸ್ವರ ತೆಗೆದು ಅಳುವ ನಾಟಕವಾಡಿದಾಗ ಅಜ್ಜಿ ಹೇಳಿದ್ದುದಾದರೂ ಏನು...?".... ಶೋ.... ಇದು ಎಂತ ಮಕ್ಕಳೇ ನಿಮ್ಮ ಅವತಾರ....?(ಹಾಕಿಕೊಂಡಿದ್ದ ಸಿಮಿಸು ಗೇರು ಹಣ್ಣಿನ ರಸದಿಂದಾಗಿ ಮಾಡರ್ನ್ ಆರ್ಟಿನ ಕ್ಯಾನುವಾಸಾಗಿತ್ತು.ಬಿಸಿಲಲ್ಲಿ ನಿಂತು ನಿಂತು ಮುಖ ಮೈಯ್ಯೆಲ್ಲಾ ಹಣ್ಣಾಗಿ ಹೋಗಿತ್ತು. ಅಳು,ಕೆಮ್ಮು ಎರಡೂ ಸೇರಿ ಕಣ್ಣುಗಳು ಕೆಂಪಗಾಗಿದ್ದುವು.)ಇಷ್ಟೊತ್ತು ಎಲ್ಲಿಗೆ ಹೋದದ್ದು ನಿಮ್ಮ ಸವಾರಿ...?ನಿಮ್ಮನ್ನು ಹುಡುಕಿ ತರಲು ಈಗಷ್ಟೇ ಕಲ್ಯಾಣಿಯನ್ನು ಕಳಿಸಿದ್ದೆ..."ಎನ್ನುತ್ತಲೇ ಅಜ್ಜಿ ಹೋಗೆ ಹಿಡಿದು ಕಪ್ಪಗಾಗಿದ್ದ ಡಬ್ಬಿಯಿಂದ ದೊಡ್ಡ ದೊಡ್ಡ ಬೆಲ್ಲದ ತುಂಡುಗಳನ್ನು ತೆಗೆದು ನಮ್ಮ ಬಾಯಿಗೆ ಹಾಕಿ ಕಾದಾರಿದ ನೀರು ಕುಡಿಸಿ ನೆತ್ತಿಗೆ ಮೃದುವಾಗಿ ತಟ್ಟಿದ್ದು..... ಇಂತಹ ಸಾವಿರ ಸಾವಿರ ನೆನಪುಗಳ ಅಲೆಗಳಲ್ಲಿ ತೇಲುತ್ತಾ ಕೊನೆಗೊಮ್ಮೆ ಮೌನದ ಬಂದರದಲ್ಲಿ ಕೊಂಚ ಹೊತ್ತು ವಿಶ್ರಮಿಸಿದೆವು.ನಿಡಿದಾದ ಉಸಿರೊಂದನ್ನು ಹೊರಚೆಲ್ಲಿದ ಜಯಾ ಪುನಃ ಮಾತಿಗಿಳಿದಳು,
"ಅಲ್ಲಾ..., ನೋಡು ಸುಮಾ...., ಅಂದಿನ ಕಾಲ....ಎಂತಹಾ ಮಜಾ ಇತ್ತಲ್ವಾ....?ನಾವು ಎಂಟ್ಹತ್ತು ಮಕ್ಕಳು ಸೇರಿ ಮಾಡದ ಮಂಗ ಚೇಷ್ಟೆ ಇತ್ತಾ...? ನಮ್ಮ ಬಾಲ್ಯ ಕಾಲ ಎಂದರೆ ಅದು ನಿಜವಾಗ್ಲೂ ಗೋಲ್ದನ್ ಪಿರೀಡ್ ಆಫ್ ಲೈಫ್... ಅಲ್ವೇನೇ...?ನಮಗೆ ಇಷ್ಟು ಪ್ರಾಯವಾದರೂ ಸಮಯ ಸಿಕ್ಕಾಗಲೆಲ್ಲಾ ನಾವಿಬ್ಬರೂ ಒಟ್ಟು ಸೇರ್ತೀವಿ... ಹೊರಗೆಲ್ಲಾ ಸುತ್ತಾಡ್ತೀವಿ... ಕಷ್ಟ ಸುಖ ಹಂಚ್ಕೊಂಡು ಲೈಫನ್ನ ಹಗುರ ಮಾಡ್ಕೊಳ್ತೀವಿ.... ಆದರೆ ನಮ್ಮ ಮಕ್ಕಳು...?ನನ್ನ ಮಗ ಮುಂಬೈ.... ನಿನ್ನ ಮಗ ಬೆಂಗಳೂರು... ವರ್ಷಕ್ಕೋ ಎರಡು ವರ್ಷಕ್ಕೋ ಯಾವಾಗಲೋ ಒಂದು ಬಾರಿ ನಮ್ಮ ಮನೆಯಲ್ಲೋ ನಿಮ್ಮ ಮನೆಯಲ್ಲೋ ಭೇಟಿಯಾದರೂ ಆಯಿತು... ಇಲ್ಲದಿದ್ದರೂ ಆಯಿತು.... ಹತ್ತಾರು ದಿವಸಗಳ ಕಾಲ ಮಕ್ಕಳೆಲ್ಲಾ ಒಟ್ಟಿಗಿದ್ದು ಗುಡ್ಡ ಬೆಟ್ಟ ಸುತ್ತಾಡಿ ಕೊಳ ನದಿಗಳಲ್ಲಿ ಈಜಾಡಿ ಹಸುಕರುಗಳೊಂದಿಗೆ ಕುಣಿದಾಡಿ ಮಾಡುವೆ ಮುಂಜಿಗಳಲ್ಲಿ ಸಂಭ್ರಮಿಸಿ ಕಳೆಯುತ್ತಿದ್ದ ಅಂತಹ ದಿನಗಳು ನಮ್ಮ ಮಕ್ಕಳ ಲೈಫಲ್ಲಿ ಬರೋಕೆ ಸಾಧ್ಯನೇ ಇಲ್ಲಾ ಅನ್ಸುತ್ತೆ...."
"ಹೂಂ... ಕಣೇ..., ಸಂಬಂಧ,ಅಟ್ಯಾಚ್ಮೆಂಟ್ ಎಲ್ಲಾ ನಮ್ಮ ಕಾಲಕ್ಕೇ ಮುಗಿದು ಬಿಡುತ್ತೇನೋ ಅಂತ ಕೆಲವೊಮ್ಮೆ ಭಯಾನೂ ಆಗುತ್ತೆ... ಇಂದಿನ ಜನರೇಷನ್ ಭಾವನೆಗಳಿಗೆ ಬೆಲೆ ಕೊಡದೆ ಶ್ರೀಮಂತಿಕೆಗಾಗಿ ಮಾತ್ರ ದುಡಿಯೋ ರೋಬೋಟುಗಳಾಗಿ ಮಾರ್ಪಾಡು ಹೊಂದುತ್ತಿದ್ದಾರೇನೋ ಅನ್ಸುತ್ತೆ..."ಹೀಗೆ ನಾವಿಬ್ಬರೂ ಮಾತನಾಡುತ್ತಾ ವಿಷಾದಪರ್ವದಲ್ಲಿ
ಮುಳುಗಿದ್ದಾಗಲೇ ರವಿ ಮನೆಯೊಳಕ್ಕೆ ಪ್ರವೇಶಿಸಿದ.
"ಬಾಲ್ಯ ಸಖಿಯರಿಬ್ಬರೂ ಸೇರಿಕೊಂಡು ತುಂಬಾ ಸೀರಿಯಸ್ಸಾಗಿ ತಮ್ಮ ಮಕ್ಕಳ ಬಗ್ಗೆ ಕಾಮೆಂಟ್ಸ್ ಪಾಸ್ ಮಾಡೋ ಹಾಗಿತ್ತು...?"ಒಳಕ್ಕೆ ಬರುತ್ತಿದ್ದಂತೆಯೇ ಅವರ ಮಾತುಗಳ ಕೆಲವು ತುಣುಕುಗಳು ಆತನ ಕಿವಿಗೂ ಬಿದ್ದಿತ್ತಾದುದರಿಂದ ತಮಾಷೆಯಾಗಿ ತನ್ನ ಕುತೂಹಲವನ್ನು ವ್ಯಕ್ತಪಡಿಸಿದ್ದ.
"ಏನಿಲ್ಲಾ ಕಣೋ...,ನಾವು ಚಿಕ್ಕೋರಿದ್ದಾಗ ರಜಾ ಬಂತೆಂದರೆ ಎಲ್ರೂ ಸೇರ್ಕೊಂಡು ಎಷ್ಟು ಖುಷಿಯಿಂದ ಸಮಯವನ್ನ ಕಳೀತಿದ್ವಿ.... ನೀವುಗಳು ಅದ್ರಿಂದೆಲ್ಲಾ ವಂಚಿತರಾಗಿ ಯಾಂತ್ರಿಕ ಮಾನವರಾಗಿ ಬಿಡ್ತೀರೇನೋ ಅಂತ ನಮ್ಮ ಭಯ ಅಷ್ಟೆ...." ಜಯಾ ಹೇಳಿದಾಗ ರವಿ ಒಪ್ಪಲಿಲ್ಲ.
"ಅದ್ಯಾಕೆ ಆಂಟಿ ಹಾಗಂದುಕೊಳ್ತೀರಾ...?ನಿಮ್ಮ ಕಾಲ ಅಂದ್ರೆ ಸ್ಲೋ ವರ್ಲ್ಡ್... ಇಂದಿನಷ್ಟು ಕಾಂಪಿಟಿಶನ್ ಇದ್ದಿರಲಿಲ್ಲ,ಎಜುಕೇಶನ್ನಿಗೆ ಇಂಪಾರ್ಟೆನ್ಸ್ ಕಡಿಮೆ ಇತ್ತು. ಸೋ... ನಿಮ್ಮ ಕೈಯ್ಯಲ್ಲಿ ಸಮಯ ಧಾರಾಳವಾಗಿತ್ತು. ಆದರೆ ಈಗ ಹಾಗಿಲ್ಲ... ನಾವು ಫಾಸ್ಟ್ ವರ್ಲ್ಡಲ್ಲಿದ್ದೀವಿ. ವಿದ್ಯೆ ಮತ್ತು ಕೆರಿಯರ್ ತುಂಬಾ ಇಂಪಾರ್ಟೆಂಟ್. ಎಲಿಜಿಬಿಲಿಟಿ,ಇಂಟಲಿಜೆನ್ಸ್,ಸಕ್ಸೆಸ್ ಈ ಮೂರೂ ನಮ್ಮ ಮೂಲ ಮಂತ್ರವಾಗಿದೆ . ಹಾಗೆಂದು ನಾವು ಜೀವನವನ್ನೇ ಮರೆತುಬಿಡ್ತೀವಿ ಅಂದ್ಕೋಬೇಡಿ... ಮಾನವ ಸಯನ್ಸ್ ಮತ್ತು ಟೆಕ್ನೋಲಜಿಯಲ್ಲಿ ಎಷ್ಟೇ ಮುಂದುವರಿದರೂ ಆತನ ಮೂಲ ವಂಶವಾಹಿ ಸಹಮಾನವನೊಂದಿಗಿನ ಸಂಪರ್ಕ,ಸಂಬಂಧಗಳನ್ನೇ ಹೆಚ್ಚು ಇಷ್ಟಪಡುತ್ತೆ.ನಮ್ಮ ಜನರೇಶನ್ಗೆ ಒಂದೊದು ಸೆಕುಂಡೂ ವೆರಿ ಪ್ರೆಶಿಯಸ್.... ಸೋ... ಟೈಮ್ ವೇಸ್ಟ್ ಆಗದಂತೆ ಫ್ಯಾಮಿಲಿ ಕಾಂಟಾಕ್ಟ್ಸ್,ಬಿಸ್ನೆಸ್ ಇಂಪ್ರೂವ್ಮೆಂಟ್ಸ್,ಎಜುಕೇಶನ್ ಅಪರ್ಚುನಿಟೀಸ್... ಹೀಗೆ ಎಷ್ಟೆಷ್ಟೋ ವಿಷಯಗಳಿಗಾಗಿ ಹೊಸ ಹೊಸ ಸೌಕರ್ಯಗಳ ಆವಿಷ್ಕಾರಗಳು ಆಗುತ್ತಲೇ ಇವೆ. ಅವುಗಳಲ್ಲಿ ಸ್ಮಾರ್ಟ್ ಫೋನು ಕೂಡಾ ಒಂದು. ಅದರಲ್ಲಿರೋ ವಾಟ್ಸಪ್ ಎಂಬ ಅಪ್ಲಿಕೇಶನ್ ಬಗ್ಗೆ ನಿಮಗೆ ಹೇಳಲೇಬೇಕು.... "
"ವಾ... ಟ್ಸ.... ಪ್ .... ?"ಏನೋ ಹಾಗಂದರೆ...?"ಗೆಳತಿಯರಿಬ್ಬರೂ ಒಕ್ಕೊರಲಿನಿಂದ ಪ್ರಶ್ನಿಸಿದರು. ಗಾತ್ರದಲ್ಲಿ ಸಾಮಾನ್ಯ ಮೊಬೈಲ್ ಫೋನಿಗಿಂತ ದೊಡ್ಡದಿರುವ ಅತ್ಯಾಧುನಿಕ ಮೊಬೈಲ್ ಫೋನೊಂದನ್ನು ತನ್ನ ಜೇಬಿನಿಂದ ಹೊರಕ್ಕೆ ತೆಗೆದ ರವಿ ಇಬ್ಬರಿಗೂ ಅದನ್ನು ತೋರಿಸುತ್ತಾ ಹೇಳಿದ,
"ನೋಡಿಲ್ಲಿ, ನಿಮ್ಮ ಬಳಿ ಇರೋ ಸೆಲ್ ಫೋನಿಗೂ ಇದಕ್ಕೂ ತುಂಬಾ ಅಂತರವಿದೆ.ಇದರೊಳಗೆ ಇಡೀ ಜಗತ್ತನ್ನೇ ಅಡಗಿಸಿಟ್ಟಿದ್ದಾರೆ ಎಂದರೂ ಅತಿಶಯೋಕ್ತಿಯಾಗಲಾರದು.ಇದರ ಉಪಯೋಗಗಳನ್ನ ಹೇಳ ಹೊರಟರೆ ದಿನವಿಡೀ ಹೇಳಿದರೂ ಮುಗಿಯಲಾರದು.ಇದರಲ್ಲಿರೋ ವಾಟ್ಸಾಪ್ ಅನ್ನೋ ಅಪ್ಲಿಕೇಶನ್ ಬಗ್ಗೆ ಮಾತ್ರ ಒಂದಿಷ್ಟು ಹೇಳ್ತೀನಿ. ಇದರ ಜೀವಾಳ ಇಂಟರ್ನೆಟ್. ನಮಗೆ ಬೇಕೆನಿಸಿದ ಯಾರನ್ನೇ ಆದರೂ ಫ್ರೆಂಡ್ ಸರ್ಕಲಲ್ಲಿ ಸೇರಿಸಿದ್ರೆ ಮುಗಿಯಿತು. ಲೋಕದ ಯಾವುದ್ಯಾ ವುದೋ ಮೂಲೆಯಲ್ಲಿರುವ ಎಲ್ಲ ಫ್ರೆಂಡ್ಸ್ಗಳನ್ನೂ ಏಕಕಾಲದಲ್ಲಿ ಕ್ಷಣಾರ್ಧದಲ್ಲಿ ಸಂಪರ್ಕಿಸಬಹುದು. ಅದೂ ಕನಿಷ್ಠ ಖರ್ಚಿನಲ್ಲಿ. ಲ್ಯಾಂಡ್ ಲೈನಲ್ಲಿ ಮಾತನಾಡಬೇಕಿದ್ರೆ ಇನ್ನೊಂದು ತುದಿಯಲ್ಲಿ ಉದ್ದೇಶಿತ ವ್ಯಕ್ತಿ ಇರಲೇ ಬೇಕು ತಾನೆ...? ಮಾತ್ರವಲ್ಲ ಮಾತನಾಡಲೆಂದೇ ಸಮಯವನ್ನೂ ಮೀಸಲಿರಿಸಬೇಕು. ಆರ್ಡಿನೆರಿ ಮೊಬೈಲಲ್ಲಾದರೆ ಎಸ್. ಎಮ್. ಎಸ್. ಲಿಮಿಟೇಶನ್ಸ್,ಇಂಟರ್ಸ್ಟೇಟ್ ಚಾರ್ಜಸ್,ಇಂಟರ್ನೇಷ ಲ್ ಚಾರ್ಜಸ್, ಎಕ್ಸೆಟ್ರಾ ಎಕ್ಸೆಟ್ರಾಗಳನ್ನೆಲ್ಲಾ ನೋಡ್ಕೋಬೇಕು ತಾನೇ...?ಇದರಲ್ಲಿ ಅಂತಹ ಕಿರಿ ಕಿರಿಗಳೇನೂ ಇಲ್ಲ. ಒಂದು ಉದಾಹರಣೆ ತೋರಿಸ್ತೀನಿ. ಆವಾಗ ನಿಮಗೆ ಕ್ಲಿಯರಾಗುತ್ತೆ. ಆಂಟಿ.., ಮೊನ್ನೆ ನಿಮ್ಮ ಮಗ ಫ್ಯಾಮಿಲಿಯೊಂದಿಗೆ ದಾರ್ಜಲಿಂಗ್ ಸುತ್ತಾಡೋಕೆ ಹೋದ ತಾನೆ...? ಅಲ್ಲಿನ ಬ್ಯೂಟಿಫುಲ್ ಸ್ಪಾಟ್ಸ್ಗಳ ಫೋಟೊಗಳನ್ನ ಮತ್ತು ಬೇರೆಲ್ಲಾ ಡೀಟೇಲ್ಸ್ಳಳನ್ನ ಆಗಿಂದಾಗ್ಗೆ ವಾಟ್ಸಪ್ ಮೂಲಕ ನನಗೆ ಕಳುಹಿಸುತ್ತಲೇ ಇದ್ದಾನೆ. ನಾನು ಇಲ್ಲಿ ಇದ್ದುಕೊಂಡೇ ಫ್ರೀ ಇದ್ದಾಗಲೆಲ್ಲಾ ಅವನೊಂದಿಗೆ ಚ್ಯಾಟ್ ಮಾಡ್ತಾ ಅವನ ಸಂತೋಷವನ್ನ ನಾನೂ ಶೇರ್ ಮಾಡ್ಕೊಳ್ತೀನಿ. ಇಲ್ಲಿದೆ ನೋಡಿ ಫೋಟೋಸ್... "ರವಿ ಇಬ್ಬರಿಗೂ ಗೆಳೆಯ ರಾಹುಲ್ ಮತ್ತು ಆತನ ಕುಟುಂಬದ ಸಂತೋಷದ ಕ್ಷಣಗಳ ಪ್ರತಿಯೊಂದು ಫೋಟೋಗಳನ್ನೂ ತೋರಿಸಿದ.ಇಬ್ಬರೂ ಪೈಪೋಟಿಗಿಳಿದಂತೆ ಮತ್ತೆ ಮತ್ತೆ ಅವುಗಳನ್ನು ನೋಡಿದರು. ವಾಟ್ಸಪ್ ಹೇಗೆ ಕಾರ್ಯಾಚರಿಸುತ್ತದೆ ಎಂಬುದನ್ನೂ ತಾಳ್ಮೆಯಿಂದ ಹೇಳಿಕೊಟ್ಟ.
"ಒಹ್..., ಇದು ನಿಜವಾಗ್ಲೂ ಅದ್ಭುತ ಕಣೋ...,ಇಡೀ ಜಗತ್ತೇ ಒಂದು ಪುಟ್ಟ ಗ್ರಾಮವಾಗಿ ಪರಿವರ್ತನೆ ಹೊಂದಿದೆ ಎಂಬ ಮಾತು ಎಷ್ಟು ಸತ್ಯ...! ರಾಹುಲ್ ತನ್ನ ಟೂರಿನ ಫೋಟೊಗಳನ್ನ ಮೇಲ್ ಮಾಡ್ತಾನೆ ಅನ್ನೋ ನಿರೀಕ್ಷೆಯಲ್ಲಿ ನಾವಿದ್ರೆ ನೀನು ಕುಳಿತಲ್ಲೇ ನಮ್ಮನ್ನ ಡಾರ್ಜಲಿಂಗ್ ಸುತ್ತಿಸಿಬಿಟ್ಟೆ ನೋಡು ....!ಜಯಾ ಮೆಚ್ಚುಗೆಯಿಂದ ನುಡಿದಾಗ ರವಿ ನಗುತ್ತಾ ಹೇಳಿದ,
"ಅಷ್ಟು ಮಾತ್ರ ಅಲ್ಲ ಆಂಟಿ..., ಇನ್ನೂ ಗಮ್ಮತ್ತು ಇದೆ ನೋಡಿ...,ನಿಮ್ಮ ಸ್ವಾತಿಯ ಮಗಳು ರೀತಿಯ ಸ್ಕೂಲಲ್ಲಿ ಇವತ್ತು ಫ್ಯಾನ್ಸಿಡ್ರೆಸ್ ಕಾಂಪಿಟಿಷನ್ ಇತ್ತಂತೆ ...?ಅದ್ರಲ್ಲಿ ಅವಳಿಗೇ ಫಸ್ಟ್ ಬಂತಂತೆ...,ನೋಡಿಲ್ಲಿ,ಸ್ವಾತಿ ಫೋಟೋ ಸೆಂಡ್ ಮಾಡಿದ್ದಾಳೆ.."
"ಆಂ...!?ಒಂದರ ಮೇಲೊಂದು ಪ್ಲೆಸೆಂಟ್ ಸರ್ಪ್ರೈಸ್ ಕೊಡ್ತಾನೇ ಇದ್ದೀಯಾ... ಸ್ವಾತಿ ಹೋದ ಸಾರಿ ಫೋನು ಮಾಡಿದ್ದಾಗ ಕಾಂಪಿಟಿಷನ್ ವಿಷಯ ಹೇಳಿದ್ಲು...,ಅವಳ ಮನೆಗೆ ನಾನು ಹೋದಾಗ ಆಲ್ಬಮ್ ತೋರಿಸ್ತೀನಿ ಅಂದಿದ್ಲು.... ಈವಾಗ ನೋಡಿದ್ರೆ ನಿನ್ನ ಬಳಿ ಎಲ್ಲಾ ಸುದ್ದೀನೂ ಇನ್ಸ್ಟೆಂಟ್ ಆಗಿಯೇ ಇದೆಯಲ್ಲೋ...?"ಜಯಾ ಸಂಭ್ರಮಾಶ್ಚರ್ಯಗಳಿಂದ ಹೇಳುತ್ತಾ ರವಿಯ ಫೋನಿನೊಳಗಡೆ ಹುದುಗಿ ಕುಳಿತಿದ್ದ ತನ್ನ ಮೊಮ್ಮಗಳ ವಿವಿಧ ಭಾವ ಬಂಗಿಗಳ ಭಾವಚಿತ್ರಗಳನ್ನೂ ನೋಡುತ್ತಾ ಹನಿಗಣ್ಣಾದಳು. ರವಿ ಮಾತು ಮುಂದುವರಿಸಿದ,
"ಅಮ್ಮಾ..., ನೀವು ರಜಾ ದಿನಗಳಲ್ಲಿ ಮಾತ್ರ ಒಟ್ಟಾಗ್ತಿದ್ರಿ ಅಲ್ವಾ...?ಆದರೆ ನಾವು.... ಅಂದರೆ ಎಲ್ಲಾ ಕ್ಲೋಸ್ ಫ್ರೆಂಡ್ಸ್, ಕಸಿನ್ಸ್ ಎಲ್ರೂ ದಿನಾಲೂ ಸಂಪರ್ಕದಲ್ಲಿರ್ತೀವಿ ಗೊತ್ತಾ...?ಮುಂದಿನ ಸ್ಪ್ರಿಂಗ್ ಸೀಸನಲ್ಲಿ ನಾವೆಲ್ರೂ ಟ್ರೆಕ್ಕಿಂಗ್ ಹೋಗೋ ಪ್ಲಾನ್ ಇದೆ....."
"ಟ್ರೆಕ್ಕಿಂಗ್....?ಯಾರೆಲ್ಲಾ ಹೋಗ್ತಿದ್ದೀರಾ.....?ಎಲ್ಲಿಗೆ ಹೋಗೋ ಪ್ಲಾನ್ ...?" ಇದುವರೆಗೂ ಆಶ್ಚರ್ಯದಿಂದ ಬಾಯಿ ಕಳೆದುಕೊಂಡವಳಂತೆ ಕುಳಿತಿದ್ದ ಸುಮಾ ಕೊನೆಗೂ ಮಾತನಾಡಿದಳು.
"ಹೌದಮ್ಮಾ..., ಈ ಜಯಾಆಂಟಿಯ ಮಗ ರಾಹುಲ್,ಯು.ಎಸ್. ಎ.ದಲ್ಲಿರೋ ರಾಘವ ದೊಡ್ಡಪ್ಪನ ಮಗ ಸುನಿಲ್, ಆಸ್ಟ್ರೇಲಿಯಾದಲ್ಲಿರೋ ಕಲಾಆಂಟಿಯ ಮಗ ನಿಕಿತ್..., ನಾನು,ಕೇರಳದಲ್ಲಿರೋ ಮಧುಚಿಕ್ಕಪ್ಪ, ಇಲ್ಲೇ ಉಜಿರೆಯಲ್ಲಿರೋ ಗೋಪಿ ಮತ್ತು ಬೆಂಗಳೂರಲ್ಲೇ ಇರುವ ನನ್ನ ಒಂದೆರಡು ಫ್ರೆಂಡ್ಸ್.... ಕುಮಾರಧಾರಾ ಪರ್ವತಕ್ಕೆ ಚಾರಣ ಹೋಗೋದು ಅನ್ನೋ ಪ್ಲಾನ್ ಇದೆ...."
"ವಾವ್...,ದಿಸ್ ಈಸ್ ರಿಯಲಿ ಫೆಂಟಾಸ್ಟಿಕ್....!'ಕಾಲಕ್ಕೆ ತಕ್ಕ ಕೋಲ' ಎಂದು ಹಿರಿಯರು ಸುಮ್ಮನೆ ಹೇಳಿಲ್ಲ,ನಮ್ಮ ಕಾಲಕ್ಕೆ ಅದು ಸರಿ ಇತ್ತು. ನಿಮ್ಮ ಕಾಲಕ್ಕೆ ಇದು ನೂರಕ್ಕೆ ನೂರರಷ್ಟು ಸರಿ ಇದೆ.ಒಟ್ಟಿನಲ್ಲಿ ಮನುಷ್ಯರ ನಡುವಿನ ಬಾಂಧವ್ಯ ಮಧುರವಾಗಿ ಮುಂದುವರಿತಾನೇ ಇರಬೇಕು. ನಮ್ಮಜ್ಜನ ಕಾಲದಲ್ಲಿ ಅದು ಎತ್ತಿನ ಗಾಡಿಯ ಮೂಲಕ ಬೆಸೆಯಿತು.ನಮ್ಮಪ್ಪನ ಕಾಲಕ್ಕೆ ಲ್ಯಾಂಡ್ ಲೈನ್ ಫೋನು ಬಂತು.ನಾವು ಅದನ್ನೂ ಉಳಿಸಿಕೊಂಡೆವು,ಮೊಬೈಲನ್ನೂ ಹೊಂದಿದೆವು. ಮಾತ್ರವಲ್ಲ ಕಂಪ್ಯೂಟರ್ ಸಾಕ್ಷರರೂ ಆದೆವು. ಇಷ್ಟೆಲ್ಲಾ ಸಂಪರ್ಕಸಾಧನಗಳು ಇದ್ದರೂ ಕುಟುಂಬ ವ್ಯವಸ್ಥೆ ಶಿಥಿಲವಾಗುತ್ತಾ ಇದೆ ಎಂದು ಗೊಣಗುತ್ತಲೂ ಇದ್ದೀವಿ. ಆದರೆ ನೀವು...? ಕೆರಿಯರ್,ಕಾಂಪಿಟಿಷನ್,ಸಕ್ಸೆಸ್ ಎಲ್ಲದರಲ್ಲೂ ಸೈ ಎನಿಸಿಕೊಂಡು ಸಂಬಂಧಿಕರು,ಗೆಳೆಯರು ಎಂಬ ಮಮಕಾರವನ್ನೂ ಉಳಿಸಿಕೊಂಡು ಎಂಜಾಯ್ ಮಾಡ್ತಿದ್ದೀರಲ್ಲ.....ಐ ಆಮ್ ರಿಯಲಿ ಪ್ರೌಡ್ ಆಫ್ ಯು ಮೈ ಸನ್..."ಸುಮಾ ಹೃದಯ ತುಂಬಿ ಹೇಳಿದಾಗ ಜಯಾ ತನ್ನ ಧ್ವನಿಯನ್ನೂ ಸೇರಿಸಿದಳು.
"ಹೌದು ಕಣೋ...,'ಓಲ್ಡ್ ಈಸ್ ಗೋಲ್ಡ್ ... 'ಎನ್ನುತ್ತಾ ನಮ್ಮ ಗತ ವೈಭವದಲ್ಲೇ ಬದುಕುತ್ತಾ ಹೊಸ ತಲೆಮಾರಿನ ಯೋಚನೆಗಳಿಗೆ,ಭಾವನೆಗಳಿಗೆ,ಆವಿಷ್ಕಾರಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳದಿದ್ದರೆ ನಾವೊಂದು ಐಲ್ಯಾಂಡ್ ಆಗ್ತೀವಿ ಅಷ್ಟೆ. ಜನರೇಶನ್ ಗ್ಯಾಪ್ ಬೆಳೆದು ಬಿಡುತ್ತೆ. ನೀನಿವತ್ತು ಎಷ್ಟು ತಾಳ್ಮೆಯಿಂದ ನಮಗೆ ವಾಟ್ಸ್ಯಾಪ್ ಹೀಳಿ ಕೊಟ್ಟೆ. ನಾವೂ ಉತ್ಸಾಹದಿಂದ ಕಲಿತೆವು. ಮನಸ್ಸೆಂಬ ಸಾಫ್ಟ್ವೇರನ್ನ ಅಪ್ಡೇಟ್ ಮಾಡ್ತಾ ಇದ್ರೆ ಎರಡು ತಲೆಮಾರುಗಳ ನಡುವೆ ಸಮಸ್ಯೆಗಳೇ ಬರಲಾರವು.... ಅಲ್ವೇನೋ ರವಿ...?"
"ಹೌದು ಆಂಟಿ....,ಎಗ್ಸೇಕ್ಟ್ ಲೀ....,ಈಗ ನಾವು ಊಟ ಮಾಡೋಣ್ವಾ...?ಹೊಟ್ಟೆ ತಾಳ ಹಾಕ್ತಾ ಇದೆ...."ಹೊಸ ವಿದ್ಯೆಯನ್ನು ಕಲಿತ ಹುಮ್ಮಸ್ಸಿನಲ್ಲಿದ್ದ ಗೆಳತಿಯರನ್ನು ರವಿಯೇ ಎಚ್ಚರಿಸಬೇಕಾಯ್ತು.
"ಓ...,ಹೌದಲ್ಲ...?ಮರೆತೇ ಬಿಟ್ಟಿದ್ದೆ ನೋಡು...,"ಎನ್ನುತ್ತಾ ಸುಮಾ ಟೇಬಲ್ ಅಣಿಗೊಳಿಸಲು ಒಳಕ್ಕಡಿಯಿಟ್ಟಳು
Nicely done article amma:)
ಪ್ರತ್ಯುತ್ತರಅಳಿಸಿThree cheers to your new blog amma:):) love your spirits and enthusiasm towards life..gotta learn lot from you..:)keep it going..!!!
Thanks a lot munny.Ur comments are my strength....
ಪ್ರತ್ಯುತ್ತರಅಳಿಸಿ