ಮಂಗಳವಾರ, ಏಪ್ರಿಲ್ 22, 2014

2 States

ಚೇತನ್ ಭಗತ್ ಬರೆದ' 2 States'  ಇಂಗ್ಲಿಷ್ ಕಾದಂಬರಿಯನ್ನು ಎರಡು ಸಲ ಓದಿದ್ದೆ. ಅವರೇ ಹೇಳಿದಂತೆ ಅದು ಅವರ ಮದುವೆಯ ಕಥೆಯನ್ನೇ ಆಧರಿಸಿ ಬರೆದ ಕಾದಂಬರಿ. ಓದುತ್ತಾ ಓದುತ್ತಾ ಪ್ರತಿಯೊಂದು ಸನ್ನಿವೇಶವನ್ನು ,ಘಟನೆಗಳನ್ನೂ ಪೂ ರ್ಣ ಮನಸ್ಸಿನಿಂದ ಆಸ್ವಾದಿಸಿದ್ದೆ. ಅದೇ ಕಾದಂಬರಿ ಹಿಂದಿಯಲ್ಲಿ ಸಿನೆಮವಾಗಿ ಬರಲಿದೆ ಎಂದು ಗೊತ್ತಾದಾಗ ಅಂತಹ ಸಂತಸವೇನೂ ಆಗಿರಲಿಲ್ಲ.  ಕಾದಂಬರಿಯಲ್ಲಿ ವರ್ಣಿಸಿದ ಘಟನೆಗಳು ನಮ್ಮ ಮನದಲ್ಲಿ ಚಿತ್ರಿತವಾಗಿರುವ ಪರಿಗೆ ವಿರುದ್ಧವಾದ ರೀತಿಯಲ್ಲಿ ಚಿತ್ರೀಕರಣಗೊಂಡ ಸಿನೆಮಾವನ್ನು ನೋಡಿ ಹಿಂದೆ ಎಷ್ಟೋ ಬಾರಿ ನಿರಾಸೆ ಗೊಂಡಿದ್ದೆ.'ಅಂತಹ ಒಳ್ಳೆಯ  ಕಾದಂಬರಿಯನ್ನು ಇಂತಹ ಕಳಪೆ ಸಿನೆಮವನ್ನಾಗಿ ಮಾಡಿದರಲ್ಲಾ... ' ಎಂದು ಮರುಗಿದ್ದೂ  ಇದೆ.
2 States ಸಿನೆಮಾ ರಿಲೀಸ್ ಆಗಿದೆ ಎಂಬ ಸುದ್ದಿಯನ್ನು ತಿಳಿದು ನೋಡಲೇಬಾರದು ಎಂದುಕೊಂಡಿದ್ದೆ. ಆದರೆ ಮನಸ್ಸು ಕೇಳಬೇಕಲ್ಲ? ಬಿಗ್ ಸಿನೆಮಾಸ್ ಒಳಗೆ ಅಡಿಯಿಟ್ಟೆ. ನಾನು ಹೋಗುವ ಹೊತ್ತಿಗೆ ಹೌಸ್ ಫುಲ್ ಆಗಲು ಇನ್ನು ಕೆಲವೇ ಸೀಟುಗಳು ಬಾಕಿ ಇದ್ದುವು. ಅಲ್ಲಿ ಎರಡೂಮುಕ್ಕಾಲು ಘಂಟೆ ಕಳೆದದ್ದು worth ಎನಿಸಿತ್ತು. ನೀವು 2 States ಕಾದಂಬರಿ ಓದಿದ್ರಾ? ಓದಿರದಿದ್ರೆ ಈಗಲೇ ಕೊಂಡು  ಓದಿ. ನಂತರ ಸಿನೆಮಾ ನೋಡಿ. ಆಗ ಅದರ ನಿಜ ರುಚಿ ಗೊತ್ತಾಗುತ್ತೆ. ಕಥೆಯ ನಾಯಕ ಕೃಷ್ (ನಿಜ ಜೀವನದಲ್ಲಿ ಸ್ವಯಂ ಚೇತನ್ ಭಗತ್ )ಪಂಜಾಬಿ ಹುಡುಗ,ನಾಯಕಿ ಅನನ್ಯ(ಭಗತ್ ಅವರ ಮಡದಿ ಅನೂಷ )ಮದ್ರಾಸಿ ಬ್ರಾಹ್ಮಣ ಕುಟುಂಬದವಳು. ಇಬ್ಬರೂ ಎಮ್.ಬಿ. ಎ. ವಿಧ್ಯಾರ್ಥಿಗಳು. ಕ್ಯಾಂಪಸ್ಸಲ್ಲಿ ಇಬ್ಬರಿಗೂ ಪ್ರೇಮಾಂಕುರವಾಗುತ್ತದೆ. ಮದುವೆಯಾಗಲು ನಿಶ್ಚಯಿಸುತ್ತಾರೆ.ಓದು ಮುಗಿದು ಇಬ್ಬರಿಗೂ ಐದಂಕಿಯ ಪಗಾರ ಬರುವ ಕೆಲಸವೂ ಆಯಿತು. ಆದರೂ ಮದುವೆಯಾಗುವುದೇ ಇಲ್ಲ.ಯಾಕೆ ಗೊತ್ತೇ ?ಇಬ್ಬರ ಮನೆಯವರ ವಿರೋಧ !ಇಬ್ಬರೂ ಪ್ರೌಢರು, ಆರ್ಥಿಕವಾಗಿ ಇಬ್ಬರೂ ಗಟ್ಟಿಯೇ. ಯಾರನ್ನೂ ಅವಲಂಬಿಸಬೇಕಾದ ಅಗತ್ಯವೂ ಇಲ್ಲ. ಹಿರಿಯರು ಒಪ್ಪದಿದ್ದರೇನಂತೆ? ರಿಜಿಸ್ಟರ್ ಮದುವೆಯಾಗಿ ಯಾರ ಗೊಡವೆಯೂ ಇಲ್ಲದೆ ಸುಖವಾಗಿರಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ.  ಎರಡೂ ಕಡೆಯ ಹೆತ್ತವರ ಆಶೀರ್ವಾದ ಪಡೆದೇ ವಿವಾಹವಾಗಬೇಕೆಂಬುದು ಇಬ್ಬರ ಮನದಿಂಗಿತ. ಹಿರಿಯರನ್ನು ಒಪ್ಪಿಸಲು ಅವರು ಪಡುವ ಪಾಡು... ಪಂಜಾಬಿ, ಮದ್ರಾಸಿ ಅಹಂಗಳ ತಿಕ್ಕಾಟ... ಮುನಿಸು...  ಘರ್ಷಣೆ... ಇದು ಎಲ್ಲಿಯವರೆಗೆ ಮುಟ್ಟುವುದೆಂದರೆ ನಾಯಕ ನಾಯಕಿ ಬ್ರೇಕ್ ಅಪ್ ಆಗಿಯೇ ಬಿಟ್ಟರು ಎನ್ನುವಷ್ಟರ ಮಟ್ಟಿಗೆ. ಮುಂದೆ ಏನಾಗುವುದೆಂಬುದನ್ನು ನಾನು ಈಗಲೇ ಹೇಳಿಬಿಟ್ಟರೆ ಸ್ವಾರಸ್ಯ ಇರಲಾರದು. ನೀವೇ ಸಿನೆಮಾ ನೋಡಿ ತಿಳಿಯಿರಿ.ಕಾದಂಬರಿ ಓದದೆ ಸಿನೆಮಾ ನೋಡುತ್ತೀರಾದರೆ'.... ಇಸ್ಸೀ ಅದರಲ್ಲಿ ಕಿಸ್ಸಿಂಗ್ ಸೀನ್ ಇದೆ ... ಮತ್ತೊಂದು ಇದೆ ಎಂದು ನೀವು  ಮೂಗು ಮುರಿಯೋದು ಗ್ಯಾರೆಂಟಿ. ಆದರೆ ಗಮನಿಸಿ,ಬಾಕ್ಸ್ ಆಫೀಸ್ ದೃಷ್ಟಿಯಿಂದ ಈ ದೃಶ್ಯಗಳನ್ನು ತುರುಕಿಲ್ಲ.  ಭಗತ್ ಅವರು ತಮ್ಮ  ಜೀವನದಲ್ಲಿ ನಡೆದ ಘಟನೆಗಳನ್ನು ಯಥಾವತ್ತಾಗಿ ಕಥೆಯ  ರೂಪದಲ್ಲಿ ದಾಕಲಿಸಿದ್ದನ್ನು ನಿರ್ದೇಶಕರು ದೃಶ್ಯ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ ಅಷ್ಟೇ.ಕೆಲವೊಮ್ಮೆ ನಿಜ ಜೀವನ ಸಿನೆಮಾಗಿಂತಲೂ ರೋಚಕವಾಗಿರುತ್ತದೆ ಅಲ್ಲವೇ?  ಮೂಲ ಕೃತಿಗೆ ಅಪಚಾರವಾಗದಂತೆ ಸುಂದರ ಸಿನೆಮಾವೊಂದು ಮೈತಳೆದಿದೆ.
ಅದರಲ್ಲಿ ಬರುವ ಒಂದು ದೃಶ್ಯದ ಬಗ್ಗೆ ಮಾತ್ರ ನಿಮಗೆ ಹೇಳುತ್ತೇನೆ. ನಾಯಕಿ ಅನನ್ಯ ಬೋಲ್ಡ್ ಹುಡುಗಿ. ನಾಯಕ ಕೃಷ್  down to earth ಹುಡುಗ.  ಅವಳು ಹೇಳಿದುದನ್ನು ಶಿರಸಾ ಪಾಲಿಸುತ್ತಿರುತ್ತಾನೆ.ಒಂದು ದಿನ  ಅನನ್ಯ  ಶಾರ್ಟ್ಸ್ ಹಾಕಿಕೊಂಡು ಕ್ಯಾಂಪಸ್ ಒಳಗಡೆ ತನ್ನ ಇನಿಯನನ್ನು ಭೇಟಿಯಾಗಲು ಬರುತ್ತಾಳೆ. ಸುತ್ತಮುತ್ತ ಓಡಾಡುತ್ತಿದ್ದ ವಿದ್ಯಾರ್ಥಿಗಳು ಅಲ್ಲಲ್ಲೇ ನಿಂತು ಅವಳನ್ನು, ಅವಳ ಸುಂದರ ಅಂಗಾಂಗಗಳನ್ನು ಕೆಕ್ಕರಿಸಿ ನೋಡತೊಡಗುತ್ತಾರೆ. ಕಿರಿಕಿರಿಗೊಂಡ ಕೃಷ್ ಆಕೆಯ ಡ್ರೆಸ್ ಬಗ್ಗೆ ಆಕ್ಷೇಪಿಸುತ್ತಾನೆ. ಆ ಕ್ಷಣದಲ್ಲಿ ಆಕೆ ದಿಟ್ಟ ಉತ್ತರ ನೀಡಿದರೂ ಮುಂದೆಂದೂ ಅಂತಹ ಡ್ರೆಸ್ ಹಾಕಿಕೊಳ್ಳುವುದಿಲ್ಲ. ಸ್ತ್ರೀ, ತಾನು  ವೇಷದಲ್ಲಿ, ಓದಿನಲ್ಲಿ, ಕೆಲಸದಲ್ಲಿ, ಸಂಪಾದನೆಯಲ್ಲಿ ಪುರುಷನಿಗೆ ಸರಿ ಸಮಾನಳು ಅಥವಾ ಅದಕ್ಕಿಂತ ಒಂದು ಕೈ ಮೇಲೆಯೇ ಎಂದುಕೊಂಡರೂ 'ಆತ ತನ್ನನ್ನು ಮೆಚ್ಚಬೇಕು, ತಾನು ಅವನನ್ನು ಮೆಚ್ಚಿಸಬೇಕು,ತಾನು ಆತನಿಗೆ ಸೋತು ಗೆಲ್ಲಬೇಕು....'ಎನ್ನುವ 'ಪುರಾತನ ಕಾಲ'ದ  ಹೆಣ್ಣಿನ ಈ ಮೂಲಭೂತ ಗುಣ ಇಂದಿಗೂ ಒಂದಿನಿತೂ ಬದಲಾಗದೆ ಉಳಿದುಕೊಂಡಿದೆಯಲ್ಲ?. ಹೆಣ್ಣು ಎಂದಿದ್ದರೂ ಹೆಣ್ಣೇ .... ಎಂದೆನಿಸಿ ನಮ್ಮ ಕುಲದ ಬಗ್ಗೆ ಹೆಮ್ಮೆಯನಿಸಿತು.
ಕೃಷ್, ಅನನ್ಯ ರೋಲಿನಲ್ಲಿ  ಅರ್ಜುನ್ ಕಪೂರ್, ಆಲಿಯ  ಜೋಡಿ ಸಕತ್ತಾಗಿದೆ. ಪಂಜಾಬಿ ಅಮ್ಮನಾಗಿ ಅಮ್ರೀತ ಸಿಂಗ್ ಮಿಂಚಿಂಗೋ ಮಿಂಚಿಂಗ್.ಕಾದಂಬರಿಯಲ್ಲಿ ಮದ್ರಾಸಿ ಅಮ್ಮನನ್ನು ಹೈಲೈಟ್ ಮಾಡಿದಷ್ಟು ಸಿನೆಮಾದಲ್ಲಿ ಮಾಡಿಲ್ಲ ಎನಿಸಿತು. ಇನ್ನು ಆಲಿಯಾಳ ಕಾಸ್ತ್ಯುಮ್ಸ್ ನೋಡಲೆಂದೇ ಇನ್ನೊಮ್ಮೆ ಸಿನೆಮಾಗೆ ಹೋಗಬಹುದು. ಅವಳು ತೊಟ್ಟುಕೊಳ್ಳುವ ಕುರ್ತಾಗಳು, ಉದ್ದ ಲಂಗಗಳು, ಸೀರೆಗಳು, ಹೀಗೆ ಪ್ರತಿಯೊಂದೂ ನಮ್ಮ ಮಿಡ್ಲ್ ಕ್ಲಾಸ್ ಹೆಣ್ಮಕ್ಕಳು ಆಸೆಪಟ್ಟು ಖರೀದಿಸುವ ಹಾಗಿದೆ.ಇಷ್ಟು ಸಾಕು. ಇನ್ನೂ ಹೆಚ್ಚು ಹೇಳುತ್ತಾ ಹೋದರೆ  ನಿಮಗೆ ಮೂವಿ ನೋಡುವ ಉತ್ಸಾಹ ಕಮರೀತು. 
  ನಾನು ಥಿಯೇಟರಿನಿಂದ ಹೊರಗೆ ಬರುವಾಗ ಗಮನಿಸಿದ್ದೇನೆಂದರೆ ಮುಕ್ಕಾಲು ಪಾಲು ಪ್ರೇಕ್ಷಕರೂ ಇಪ್ಪತ್ತು -ಇಪ್ಪತ್ತೈದರ ಆಸುಪಾಸಿನವರೆ.ತಮ್ಮ ತಮ್ಮ ಗೆಳೆಯ ಗೆಳತಿಯರ ಗುಂಪಿನೊಂದಿಗೆ ಬಂದಿದ್ದರು. ಬಹುಷಃ ತಮ್ಮ ಜೀವನಕ್ಕೆ ಈ ಸಿನೆಮಾ ಸ್ಫೂರ್ತಿಯಾದೀತು ಎಂದುಕೊಂಡರೇನೋ...? ಇದೊಂದು ಒಳ್ಳೆಯ ಬೆಳವಣಿಗೆ ಎನಿಸಿತು.     

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ