ಮಂಗಳವಾರ, ಏಪ್ರಿಲ್ 1, 2014

ಬದನೆ ಗೊಜ್ಜು (BRINJAL CURRY)

ಯುಗಾದಿ ಹಬ್ಬ ಚೆನ್ನಾಗಿ ಆಯಿತಾ? ಬೆಲೆಯೇರಿಕೆಯ ಬಿಸಿ ಹಾಗೂ ವಾತಾವರಣದ ಬಿಸಿ ಎರಡೂ ತಾಳಲಾರದಷ್ಟಿದ್ದರೂ ಎಲ್ಲವನ್ನೂ ಸಾಂಗವಾಗಿ ಮುಗಿಸಿ ಉಸ್ಸಪ್ಪ ಎಂದು ಬೆವರೊರೆಸಿಕೊಳ್ಳುತ್ತಾ ಕುಳಿತ್ರಾ...?ಮಾರ್ಕೆಟ್ಟಿನಿಂದ ತಂದ ತರಕಾರಿಗಳು, ಹಣ್ಣು ಹಂಪಲುಗಳು ಫ್ರಿಜ್ಜಲ್ಲಿ ತುಂಬಿ ತುಳುಕುತ್ತಿವೆಯೇ..?ನಾಳೆ ಪುನಹ ಅದೇ ತರಕಾರಿಗಳಿಂದ  ಅಡುಗೆ ಮಾಡಬೇಕಲ್ಲಾ ಎಂದೆನುಸುತ್ತೆ  ಅಲ್ವೇ..? ನಾವು ನಮ್ಮ ಜೀವನ ಶೈಲಿಯನ್ನ ಅಪ್  ಡೇಟ್ ಮಾಡಿಕೊಳ್ಳುವ ಹಾಗೇ  ದಿನಾಲೂ ಮಾಡುವ ಅಡುಗೆಯನ್ನೇ ಸ್ವಲ್ಪ ಬದಲಾವಣೆ  ಮಾಡಿಕೊಂಡರೆ ಹೇಗಿರುತ್ತೆ ನೋಡೋಣ.
ಬದನೆ ಎಂದ ಕೂಡಲೇ ನಮ್ಮ ಮಕ್ಕಳು ಮೂಗು ಮುರಿಯೋದು ಸಹಜ(ಚಿಕ್ಕದಿರುವಾಗ ನಾವೂ ಮಾಡಿದ್ದು ಅದನ್ನೇ!)ಅಲ್ವೇ?  ನಮ್ಮ ಹಳ್ಳಿಯಲ್ಲಿ ಬೆಳೆದ ವಿಷರಹಿತ ಬದನೆ ಮನೆಗೆ ಬಂದಾಗ ಖುಷಿಯಾಗಿತ್ತು . ಆದರೆ ಮಕ್ಕಳು ಇಷ್ಟಪಟ್ಟು ತಿನ್ನೋಹಾಗೆ ಏನು ಮಾಡಲಿ?ಎಂದು ಯೋಚಿಸಿದೆ.ನಾವೆಲ್ಲಾ ಚಿಕ್ಕದಿರುವಾಗ ದುಂಡು ಬದನೆಯನ್ನು ಕೆಂಡದಲ್ಲಿ ಸುಟ್ಟು ಗೊಜ್ಜಿ ಮಾಡುತ್ತಿದ್ದುದು ನೆನಪಾಯಿತು.ಬದನೆಯ ಆ ಒಂದು ಪ್ರಿಪರೇಶನನ್ನು  ಮಾತ್ರ ನಾವು ಸವಿಸವಿದು ಉಣ್ಣುತ್ತಿದ್ದೆವು. ಆದರೆ ಈಗ ಕೆಂಡದ ಒಲೆಯೇ ಇಲ್ಲವಲ್ಲ....ಆದರೂ ಒಂದು ಟ್ರೈ ಮಾಡಿ ನೋಡೋಣ ಎಂದುಕೊಂಡೆ.ಗ್ಯಾಸಿನ ಒಲೆಯ ಮೇಲೆಯೇ ಬದನೆ ಬೇಯಿಸಿ ಗೊಜ್ಜಿ ಮಾಡಿದೆ. ಕೆಂಡದಲ್ಲಿ ಸುಟ್ಟ ಅದೇ ಟಿಪಿಕಲ್  ರುಚಿ ಬಂದಿತ್ತು!ಮನೆಯವರೆಲ್ಲರೂ ತುಂಬಾ ಇಷ್ಟ ಪಟ್ಟು ತಿಂದರು  ಎಂದು ಬೇರೆ ಹೇಳಬೇಕಾಗಿಲ್ಲ ತಾನೇ...?ನೀವೂ ಮಾಡಿ ನೋಡಿ.ಫ್ರಿಜ್ಜಲ್ಲಿರುವ ಬದನೆ ಖಾಲಿಯಾಗಲಿ (ಈಗ ಅದರ ಸೀಸನ್ ಅಲ್ವೇ ..?). 
      
                                  
ಬೇಕಾಗುವ ಸಾಮಾನುಗಳು
1.ಬದನೆ ಮಧ್ಯಮ ಗಾತ್ರದ್ದು ಮೂರು .
2.ಹುಳಿರಸ,4 ದೊಡ್ಡ ಚಮಚ
3.ಬೆಲ್ಲ, ಪುಟ್ಟ ನಿಂಬೆ ಗಾತ್ರ  
4.ಹಸಿರು ಮೆಣಸಿನ ಕಾಯಿ ಎರಡು.
5. ಉಪ್ಪು,ರುಚಿಗೆ ತಕ್ಕಷ್ಟು.
6. ಒಗ್ಗರಣೆಗೆ -2 ಚಮಚ ಎಣ್ಣೆ ,ಕೆಂಪು ಮೆಣಸು,ಸಾಸಿವೆ, ಕರಿಬೇವಿನೆಲೆಗಳು.
7. ನೀರು ಒಂದು ಸಣ್ಣ ಕಪ್.
ಹಂತ. 1

ಹಂತ 2 
      
ಹಂತ 3 
    
ವಿಧಾನ :ಆದಷ್ಟೂ ಕಪ್ಪು ಚುಕ್ಕೆಗಳಿಲ್ಲದ ಬದನೆಯನ್ನು ಆಯ್ದುಕೊಳ್ಳಿ. ಚೆನ್ನಾಗಿ ತೊಳೆದು ಅದರ ಮೇಲ್ಮೈಗೆ ಎಣ್ಣೆಯನ್ನು ಸವರಿಕೊಳ್ಳಿ. ಚಿತ್ರದಲ್ಲಿ ತೋರಿಸಿದಂತೆ ಗ್ಯಾಸಿನ ಮೇಲೆ ಇಟ್ಟು ಬೇಯಿಸಿ (ಹಂತ 1). ಒಂದು ಬದಿ ಬೆಂದ ಮೇಲೆ ಬದನೆಯನ್ನು ತಿರುಗಿಸಿ ಇಟ್ಟು  ಬೇಯಿಸಿ. ಎಲ್ಲ ಬದಿ ಬೆಂದ ಮೇಲೆ ಒಂದು ತಟ್ಟೆಯಲ್ಲಿ ತೆಗೆದಿರಿಸಿ.(ಹಂತ 2) ತಣಿದಮೇಲೆ  ಕಪ್ಪಗಾದ ಸಿಪ್ಪೆಯನ್ನು ಮೆಲ್ಲನೆ ತೆಗೆಯಿರಿ (ಹಂತ 3). ತೊಟ್ಟನ್ನು ಹಿಡಿದು ತಿರುಳನ್ನು  ಶುದ್ದವಾದ ನೀರಿನಲ್ಲಿ ತೊಳೆಯಿರಿ. ಒಂದು ತಟ್ಟೆಯ ಮೇಲಿಟ್ಟು ಸೌಟಿನಿಂದ ಬದನೆಯನ್ನು ಮಧ್ಯದಿಂದ ಸೀಳಿರಿ (ಹಂತ 4). ಹಾಳಾದ ಭಾಗವೇನಾದರೂ ಇದೆಯೋ ಎಂದು ಪರೀಕ್ಷಿಸಿ. ಸೌಟಿನಿಂದ ತಿರುಳನ್ನು ಚೆನ್ನಾಗಿ ಹಿಸುಕಿ ಮುದ್ದೆ ಮಾಡಿ (ಹಂತ 5). ಮೆಣಸಿನ ಕಾಯಿಯನ್ನು  ಕಟ್ ಮಾಡಿ ಹಾಕುವುದಕ್ಕಿಂತಲೂ ಮಧ್ಯದಿಂದ ಸೀಳಿ ತಿರುಳಿನ  ಮೇಲೆ ಇಟ್ಟು ಜಜ್ಜಿದರೆ ಪರಿಮಳ ಹೆಚ್ಚು. ಇದನ್ನು  ಒಂದು ಬೌಲಿನಲ್ಲಿ ಹಾಕಿ ಮೇಲೆ ಹೇಳಿದ ಉಳಿದ ಸಾಮಾಗ್ರಿಗಳೆಲ್ಲವನ್ನು ಸೇರಿಸಿ.ಒಗ್ಗರಣೆ ಕೊಡಿ (ಹಂತ 6). ಬೇಕಿದ್ದರೆ ಬೆಳ್ಳುಳ್ಳಿಯನ್ನು ಸೇರಿಸಿ ಒಗ್ಗರಣೆ ಕೊಡಬಹುದು.ಅನ್ನದೊಂದಿಗೆ ಸೈಡ್ ಡಿಶ್ ಆಗಿಯೂ ತಿನ್ನಬಹುದು,ಚಪಾತಿಗೆ ಕಾಂಬಿನೇಶನ್  ಆಗಿಯೂ ಉಪಯೊಗಿಸಬಹುದು.

2 ಕಾಮೆಂಟ್‌ಗಳು: