ಬೇಕಾಗುವ ಸಾಮಾನುಗಳು:-ತಿರುಳು ಧಾರಾಳವಾಗಿರುವ ಹುಳಿಯಿಲ್ಲದ ಮಾವಿನಹಣ್ಣು ಎರಡು, ಮಧ್ಯಮ ಗಾತ್ರದ ಸೇಬು ಮೂರು, ಕದಳಿ ಬಾಳೆ ಹಣ್ಣು (ಏಲಕ್ಕಿ ಬಾಳೆ ಹಣ್ಣಾದರೂ ಸರಿಯೆ)ನಾಲ್ಕು, ದಾಳಿಂಬೆ ದೊಡ್ಡದಾದರೆ ಒಂದು ಸಾಕು. ಅನನಾಸು ಹಣ್ಣು ಒಂದು,ಬೀಜವಿಲ್ಲದ ಸಿಹಿಯಾಗಿರುವ ದ್ರಾಕ್ಷಿ ಹಣ್ಣು 1/4 ಕೆ.ಜಿ, ಕಿತ್ತಳೆ ಹಣ್ಣು ಎರಡು, ದಪ್ಪ ತೆಂಗಿನ ಹಾಲು ಮೂರು ಕಪ್, ಸಕ್ಕರೆ ಒಂದೂವರೆ ಕಪ್, ವೆನಿಲ್ಲಾ ಫ್ಲೇವರಿನ ಕಸ್ಟರ್ಡ್ ಪೌಡರ್ ಎರಡು ಚಮಚ,ಏಲಕ್ಕಿ ಪುಡಿ ಮಾಡಿದ್ದು 1/4 ಚಮಚ, ಜೇನುತುಪ್ಪ ನಾಲ್ಕು ಚಮಚ, ವೆನಿಲ್ಲಾ ಎಸೆನ್ಸ್ ನಾಲ್ಕು ಹನಿ, ತಣ್ಣಗಿನ ಹಾಲು ಒಂದು ಕಪ್.
ವಿಧಾನ :-ಹಣ್ಣುಗಳನ್ನೆಲ್ಲಾ ಚೆನ್ನಾಗಿ
ತೊಳೆದು ಚಿಕ್ಕಹೋಳುಗಳನ್ನಾಗಿ ಮಾಡಿಕೊಳ್ಳಿ(ಕಿತ್ತಳೆ ಹಣ್ಣನ್ನು ಸುಲಿದು ಬೀಜ ಹಾಗೂ ನಾರುಗಳೆರಡನ್ನು ತೆಗೆದು ತುಂಡರಿಸಿ. ಇಲ್ಲದಿದ್ದರೆ ಕಹಿ ರುಚಿ ಬರಬಹುದು). ಎಲ್ಲಾ ಹಣ್ಣುಗಳನ್ನು ಒಟ್ಟಿಗೆ ಅಗಲವಾದ ಪಾತ್ರೆಯೊಂದರಲ್ಲಿ ಹಾಕಿ. ಕೂಡಲೇ ಸಕ್ಕರೆ, ಜೇನುತುಪ್ಪ ಮತ್ತು ವೆನಿಲ್ಲಾ ಎಸ್ಸೆನ್ಸ್ಗಳನ್ನು ಇದಕ್ಕೆ ಬೆರೆಸಿ ಫ್ರಿಜ್ಜಲ್ಲಿಡಿ (ಇಲ್ಲದಿದ್ದರೆ ಸೇಬಿನ ಹೋಳುಗಳು ಕಪ್ಪಾಗಿ ಬಿಡುತ್ತವೆ ). ಕಸ್ಟರ್ಡ್ ಪೌಡರನ್ನು ತಣ್ಣಗಿನ ಹಾಲಿನಲ್ಲಿ ಗಂಟಿಲ್ಲದಂತೆ ಮಿಕ್ಸ್ ಮಾಡಿಕೊಳ್ಳಿ. ಚಿಕ್ಕ ಬೆಂಕಿಯಲ್ಲಿ ಇದನ್ನಿಟ್ಟು ಕೈ ಬಿಡದೆ ಸೌಟಿನಲ್ಲಿ ಮಗುಚುತ್ತಾ ಇರಿ. ಎರಡು ಮೂರು ನಿಮಿಷಗಳಲ್ಲಿ ಇದು ದಪ್ಪವಾಗುವುದು(ಸ್ವಲ್ಪ ನಿರ್ಲಕ್ಷ್ಯವಹಿಸಿದರೂ ತಳಹಿಡಿದು ಬಿಡುತ್ತದೆ ).ಈಗ ಬೆಂಕಿಯಿಂದ ಇಳಿಸಿ ಕೆನೆ ಕಟ್ಟದಂತೆ ಆಗಾಗ ಮಗುಚಿ.ತೆಂಗಿನ ದಪ್ಪಹಾಲನ್ನು ರೆಡಿಮಾಡಿಕೊಳ್ಳಿ(ತೆಳ್ಳಗಿನ ಹಾಲನ್ನು ಬಿಸಾಡಬೇಡಿ. ಬೇರೆ ಪದಾರ್ಥಗಳಿಗೆ ರುಬ್ಬುವಾಗ ನೀರು ಹಾಕುವ ಬದಲು ಇದನ್ನೇ ಉಪಯೋಗಿಸಬಹುದು ). ಈಗ ಫ್ರಿಜ್ಜಲ್ಲಿಟ್ಟ ಮಿಶ್ರಣವನ್ನು ಹೊರಕ್ಕೆ ತೆಗೆಯಿರಿ. ತೆಂಗಿನ ದಪ್ಪಹಾಲನ್ನು ಮಾತ್ರ ಇದಕ್ಕೆ ಸೇರಿಸಿ. ನಿಧಾನಕ್ಕೆ ಚೆನ್ನಾಗಿ ತಿರುವಿ. ತಣಿದ ಕಸ್ಟರ್ಡ್ ಮಿಶ್ರಣವನ್ನು ಸೇರಿಸಿ.ಏಲಕ್ಕಿ ಪುಡಿಯನ್ನೂ ಹಾಕಿ ಪುನಹ ಫ್ರಿಜ್ಜಲ್ಲಿಡಿ. ಒಂದು ಘಂಟೆ ಬಿಟ್ಟು ಕಪ್ಪುಗಳಲ್ಲಿ ಹಾಕಿ ಎಲ್ಲರಿಗೂ ಕೊಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ