ಎಲೆ ಕೋಸಿನ ಬೋಂಡ ಅಥವಾ ಬಜ್ಜಿ ಮಾಡುವಾಗ ಸಾಧಾರಣವಾಗಿ ನಾವು ಅದನ್ನು ಕತ್ತರಿಸಿ ಹಾಕಿ ಕಡ್ಲೆ ಹಿಟ್ಟಲ್ಲಿ ಮುಳುಗಿಸಿ ಎಣ್ಣೆಗೆ ಬಿಡುತ್ತೇವೆ ತಾನೇ? ಅದನ್ನು ತಿನ್ನುವಾಗ ಕ್ಯಾಬೇಜು ಪ್ರತ್ಯೇಕವಾಗಿ ಬಾಯಿಗೆ ಸಿಗುತ್ತಿರುತ್ತೆ ಅಲ್ಲವೇ? ಮೊನ್ನೆ ನಾನು ಅದನ್ನೇ ಸ್ವಲ್ಪ ಬೇರೆ ರೀತಿಯಲ್ಲಿ ಮಾಡಿದ್ದೆ.ನನ್ನ ಪರಿವಾರ ಅದನ್ನು ಖುಷಿ ಖುಷಿಯಾಗಿ ಸವಿಯುವುದನ್ನು ನೋಡಿ ಈ ರೆಸಿಪಿಯನ್ನು ನಿಮ್ಮೊಡನೆ ಹಂಚಿಕೊಳ್ಳಬೇಕೆನಿಸಿತು. ಇದೋ ಇಲ್ಲಿದೆ ನೋಡಿ.
ಬೇಕಾಗುವ ಸಾಮಾನುಗಳು :-ಎಲೆಕೋಸಿನ ತುರಿ ಎರಡು ಕಪ್, ಬೇಸನ್ ಹಿಟ್ಟು ಆರರಿಂದ ಏಳು ಚಮಚ,ಅಕ್ಕಿ ಹಿಟ್ಟು ಒಂದೂವರೆ ಚಮಚ, ಮೆಣಸಿನ ಪುಡಿ ಕಾಲು ಚಮಚ, ಕರಿಬೇವಿನ ಎಲೆಗಳು ಹತ್ತರಿಂದ ಹನ್ನೆರಡು, ನೀರುಳ್ಳಿ ಮಧ್ಯಮ ಗಾತ್ರದ್ದು ಒಂದು, ಶುಂಟಿ ಎರಡಿಂಚು ಗಾತ್ರದ್ದು ಒಂದು, ಉಪ್ಪು ರುಚಿಗೆ ತಕ್ಕಷ್ಟು, ಹುರಿಯಲು ಎಣ್ಣೆ ಎರಡು ಕಪ್ .
ವಿಧಾನ:- ಶುಚಿಗೊಳಿಸಿದ ಎಲೆಕೋಸು,ನೀರುಳ್ಳಿ,ಕರಿಬೇವಿನೆಲೆ ಹಾಗೂ ಶುಂಟಿಗಳನ್ನು ಕತ್ತರಿಸಿ ಮಿಕ್ಸಿಯ ಚಿಕ್ಕ ಜಾರಿನಲ್ಲಿ ತುಂಬಿಸಿ vip ಮಾಡಿ (ಅಥವಾ ಒಂದೇ ಸುತ್ತು ತಿರುಗಿಸಿ ). ಈಗ ಈ ಎಲ್ಲಾ ವಸ್ತುಗಳೂ ಒಂದೇ ಮಿಶ್ರಣವಾದುವಲ್ಲವೇ?ಇದನ್ನೊಂದು ಬೌಲಿನಲ್ಲಿ ಹಾಕಿ.ಇದಕ್ಕೆ ನೀರು ಬೆರೆಸುವ ಅಗತ್ಯವಿಲ್ಲ.ಕ್ಯಾಬೇಜಿನಲ್ಲಿರುವ ನೀರಿನ ಅಂಶವೇ ಸಾಕು. ಕಡ್ಲೆ ಹಿಟ್ಟು,ಮೆಣಸಿನಪುಡಿ, ಅಕ್ಕಿಪುಡಿ, ಉಪ್ಪುಗಳನ್ನು ಸೇರಿಸಿ. .ಈ ಮಿಶ್ರಣವನ್ನು ಚೆನ್ನಾಗಿ ಕಲಸಿ. ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ. ನಿಂಬೆ ಗಾತ್ರದ ಉಂಡೆಗಳನ್ನು ಮಾಡಿ ಸ್ವಲ್ಪ ಒತ್ತಿ ಚಪ್ಪಟೆ ಮಾಡಿ ಎಣ್ಣೆಗೆ ಹಾಕಿ. ಬೋಂಡದ ಎರಡೂ ಬದಿ ನಸು ಕಂದು ಬಣ್ಣಕ್ಕೆ ತಿರುಗಿದಾಗ ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹಾಕಿ. ಮೇಲಿನಿಂದ ಇನ್ನೊಂದು ಟಿಶ್ಯೂ ಪೇಪರನ್ನಿಟ್ಟು ಮೃದುವಾಗಿ ಒತ್ತಿ ಎಣ್ಣೆಯ ಜಿಡ್ಡನ್ನು ತೆಗೆದು ತಿನ್ನಲು ಕೊಡಿ. ಟೊಮೇಟೊ ಸಾಸ್ ಇದರೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತೆ.


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ