"ಜನರಲ್ ಮೆರಿಟ್ ವಿಭಾಗಲ್ಲಿ ಗಾತಿಯ ಕೌನ್ಸೆಲ್ಲಿಂಗ್ ಮೊದಲ ದಿನವೇ ಬತ್ತಪ್ಪಾ...." ಹರಿ ತಣ್ಣಗೆ ಉತ್ತರಿಸಿದ. ಮುಂದಿನ ಪ್ರಶ್ನೆಯನ್ನೂ ಊಹಿಸಿ ಉತ್ತರವನ್ನೂ ಆಗಲೇ ತಯಾರು ಮಾಡಿಟ್ಟುಕೊಂಡಿದ್ದ.
"ಹಾಗಾದ್ರೆ ನಿನ್ನದು ಯಾವ ದಿನ ಬತ್ತು... ಮಗಾ...?"
"ಅಪ್ಪಾ...,ಎನಗೆ ಈಗೀಗ ಈ ಭೂಮಿ, ಪ್ರಕೃತಿ ಎಲ್ಲ ಹೆಚ್ಚೆಚ್ಚು ಆತ್ಮೀಯ ಅಂತ ಅನ್ಸುತ್ತಾ ಇದ್ದು. ಮಾನವ ಎಷ್ಟೇ ದೊಡ್ಡ ಸ್ಥಾನಕ್ಕೇರಿದರೂ ಕೊನೆಗೆ ಹೋಪದು ಪ್ರಕೃತಿಯ ಮಡಿಲಿಂಗೇ ತಾನೆ..? ಮೂಲಭೂತವಾಗಿ ಮನುಷ್ಯ ಪ್ರಕೃತಿಯ ಕೂಸು ಹೇಳಿ ನಿಂಗಳೇ ಎಷ್ಟೋ ಸಾರಿ ಹೇಳಿದ್ರಿ ಅಲ್ದಾ...? ಸೋ... ಮಧ್ಯಲ್ಲಿ ಒಂದ್ಸಾರಿ ಎಂತಕೆ ಅದರಿಂದ ದೂರ ಹೋಪದು ಅಲ್ದಾ ಅಪ್ಪಾ...? ಆನು ನಿಮ್ಮೊಟ್ಟಿಗೆ ಇದ್ರೆ ಒಳ್ಳೆದಲ್ದಾ...?" ಒಂದೊಂದು ಶಬ್ಧವನ್ನೂ ಆಯ್ಕೆ ಮಾಡಿ ಎಚ್ಚರಿಕೆಯಿಂದ ನುಡಿದಿದ್ದ. ಎಂತಹ ಸಂದರ್ಭದಲ್ಲೇ ಆದರೂ ಸಮಚಿತ್ತವನ್ನು ಕಾಯ್ದುಕೊಳ್ಳಬಲ್ಲ ಗೋಪಾಲನೂ ಒಂದುಕ್ಷಣ ಅಯೋಮಯಕ್ಕೊಳಪ್ಪಟ್ಟ. ಮಗನ ಮಾತುಗಳ ಹಿಂದಿನ ಭಾವವಾದರೂ ಏನು...? ಆ ಮಾತುಗಳ ಹೊಳಹನ್ನರಿಯದೆ ಗಲಿಬಿಲಿಗೊಂಡ ಗೋಪಾಲನ ಧ್ವನಿ ಸ್ವಲ್ಪ ಎತ್ತರಕ್ಕೇರಿತು,
"ಎಂತ ನೀನು ಹೇಳ್ತಾ ಇರೋದು...? ಪ್ರಕೃತಿ... ಭೂಮಿ...ಮಡಿಲು....? ಸಾಹಿತಿಯ ಹಾಂಗೆ ಮಾತ್ನಾಡೆಡ.... ವಿಷಯವ ಸ್ಪಷ್ಟವಾಗಿ ಹೇಳು..."
"ತುಂಬಾ ಸರಳ ವಿಷಯ ಅಪ್ಪಾ..., ಗಾತಿಯ ಮೆಡಿಕಲಿಂಗೆ ಕಳ್ಸುವದು, ಆನು ಬಿ. ಎಸ್ಸಿ. ಕಂಟಿನ್ಯೂ ಮಾಡುವದು... ಅಷ್ಟೇ ವಿಷಯ..." ಹರಿ ಧೃಢವಾಗಿ ಹೇಳಿದ. ಒಳಗಿನಿಂದಲೇ ಅಪ್ಪ ಮಗನ ಮಾತುಗಳಿಗೆ ಕಿವಿ ಕೊಡುತ್ತಿದ್ದ ಗಾಯತ್ರಿ, ಲಲಿತೆ ಇಬ್ಬರೂ ದುಡು ದುಡುನೆ ಹೊರಕ್ಕೆ ಓಡೋಡಿ ಬಂದರು. ಲಲಿತೆ ಬಡಬಡಿಸಿದಂತೆ ಹೇಳಿದಳು,
"ನೀನು ಇನ್ನೂ ಯಾವ ಓಬೀರಾಯನ ಕಾಲಲ್ಲಿ ಇದ್ದೆ ಮಗಾ...?ಈಗ ಬರೀ ಬಿ. ಎಸ್ಸಿ. ಗೆ.... ಅದೂ ಮೀಸಲಾತಿ ಯಾವುದೂ ಇಲ್ಲದ್ದ ನಮಗೆ ಯಾರು ಕೆಲಸ ಕೊಡ್ತವು...?"
"ಎನೆಗೇ ಹತ್ತು ಜನರ ಕರೆದು ಕೆಲಸ ಕೊಡುವ ತಾಕತ್ತು ಇರುವಾಗ ಇನ್ನು ಬೇರೆಯವರ ಕೈ ಕೆಳಗೆ ಎಂತಕೆ ಆನು ದುಡಿಯೇಕು...?" ಹರಿ ಎದೆಯುಬ್ಬಿಸಿ ನುಡಿದಾಗ ಗಾಯತ್ರಿ ಚಡಪಡಿಕೆಯ ಧ್ವನಿಯಲ್ಲಿ ಹೇಳಿದಳು,
"ಅಣ್ಣಾ..., ಪ್ಲೀಸ್..., ಒಗಟಿನ ಹಾಂಗೆ ಮಾತ್ನಾಡೆಡ.... ಸರಿಯಾಗಿ ಬಿಡ್ಸಿ ಹೇಳು..."
"ಒಗಟೂ ಇಲ್ಲೆ.... ಎಂತದೂ ಇಲ್ಲೆ... ಆನು ಅಪ್ಪನ ಹಾಂಗೆ ಮೇಷ್ಟ್ರು ಆವುತ್ತೆ. ದೂರ ಎಲ್ಲಿಗೂ ಹೋವುತ್ತಿಲ್ಲೆ. ಇಲ್ಲೇ ಹತ್ರದ ಶಾಲೇಲಿ ಕೆಲಸ ಮಾಡ್ತೆ. ಒಟ್ಟಿಗೆ ನಮ್ಮ ಆಸ್ತಿಯನ್ನೂ ಹಾಳಾಗದ ಹಾಂಗೆ ನೋಡಿಕೊಳ್ತೆ. ಇಲ್ಲಿ ಎನಗೆ ಲಕ್ಷಗಟ್ಟಲೆ ಸಂಪಾದನೆ ಇರದಿದ್ರೂ, ಮನಶ್ಶಾಂತಿ, ಅಮ್ಮ, ಅಪ್ಪನೊಟ್ಟಿಗೆ ಇದ್ದೆ ಹೇಳುವ ಸಂತೃಪ್ತಿ, ಸಂಬಂಧದೊಳಗಣ ಆತ್ಮೀಯತೆ ಇವೆಲ್ಲವನ್ನೂ ಉಳಿಸಿಗೊಂಡು ನೆಮ್ಮದಿಯ ಬದುಕು ಕಾಂಬಲಕ್ಕು ಹೇಳುವ ಭರವಸೆ ಇದ್ದು...ಸೋ ....,ಎನ್ನ ಆಯ್ಕೆ ಇದುವೇ.... ದಯಮಾಡಿ ಎಲ್ಲರೂ ಎನ್ನ ಅರ್ಥ ಮಾಡಿಕೊಳ್ಳಿ...." ಹರಿಯ ಗಂಭೀರ ಮುಖ ಭಾವ, ಸ್ಪಷ್ಟ ನುಡಿಗಳ ಮುಂದೆ ಯಾರೂ ಸೊಲ್ಲೆತ್ತುವ ದೈರ್ಯ ಮಾಡಲಿಲ್ಲ. ಸ್ವಲ್ಪವೇ ಹೊತ್ತಿನಲ್ಲಿ ಎಲ್ಲವನ್ನೂ ಅರಗಿಸಿಕೊಂಡ ಗಾಯತ್ರಿ ಗಟ್ಟಿ ಧ್ವನಿಯಲ್ಲಿ ಹೇಳಿದಳು,
"ಅಣ್ಣಾ...,ಇನ್ನು ಮುಂದೆ ನೀನು ನಿಜವಾಗ್ಲೂ ಅಪ್ಪನೊಟ್ಟಿಗೇ ಇರೋದಾ...? ಯೂ ಆರ್ ರಿಯಲಿ ಗ್ರೇಟ್... ಆದರೆ ಆನು ಮಾತ್ರ ಎಂತಕೆ ದೂರ ಹೊಯೇಕು...? ಆನೂ ನಿನ್ನೊಟ್ಟಿಗೇ ಇರುವೋಳೇ... " ತಂಗಿಯ ಹಟದ ಧ್ವನಿಗೆ ಸೋಲದ ಅಣ್ಣಂದೇ ಕೊನೆಯ ಮಾತಾಯ್ತು,
"ನೋ... ಗಾತಿ..., ಅದು ಸಾಧ್ಯವೇ ಇಲ್ಲೆ... ನೀನು ಹೋಗಲೇಬೇಕು...., ತುಂಬಾ ಕಲಿಯೇಕು...ದೊಡ್ಡ ದಾಕ್ಟರಾಯೇಕು, ಇಷ್ಟು ವರ್ಷ ನೀನು ಹೇಳಿದುದೆಲ್ಲವನ್ನೂ ಶಿರಸಾ ಪಾಲಿಸ್ತಿದ್ದೆ. ಈಗ ಆನು ಹೇಳಿದ ಹಾಂಗೆ ನೀನು ಕೇಳಲೇಬೇಕು... ಇನ್ನು ಇದರ ಬಗ್ಗೆ ಚರ್ಚೆ ಬೇಡ..." ಮುಂದೆ ಮಾತಿಗೆ ಅವಕಾಶ ಇಲ್ಲದಂತೆ ಹರಿ ತೋಟದ ಕಡೆಗೆ ಹೋದ.
ಗೋಪಾಲ ಮೌನವಾಗಿ ಕುಳಿತು ಆಲೋಚಿಸುತ್ತಿದ್ದ.ಸಮಸ್ಯೆಯ ಕಗ್ಗಂಟನ್ನು ಬಿಡಿಸುವ ದಾರಿ ಯಾವುದೆಂದು ತಿಳಿಯದಾಗಿತ್ತು. ಕೊನೆಯ ಭರವಸೆಯಾಗಿ ಡಾ.ಕೃಷ್ಣಮೂರ್ತಿಯ ರೂಪ ಅವನ ಕಣ್ಣ ಮುಂದೆ ಬಂದು ನಿಂತಿತು. ಅದೇ ಸರಿ ಎಂದಿತು ಮನಸ್ಸು.ತನ್ನ ಅಸಹಾಯಕತೆಯಿಂದಾಗಿ ಮಗ ತೆಗೆದುಕೊಂಡ ನಿರ್ಧಾರ ತುಂಬಾ ಕಠಿಣವಾಯಿತೆನಿಸಿತು. ಯಾಕೋ ಕಣ್ಣು ತುಂಬಿ ಬಂತು.ಅದು ಮಗಳಿಗೆ ಕಾಣದಿರಲೆಂದು ಮುಖ ತಿರುಗಿಸಿದ. ಅಲ್ಲಿ ನಿಂತಿದ್ದಳು ಲಲಿತೆ. ಮುಖದಲ್ಲಿ ತೃಪ್ತಿಯ ಮಂದಹಾಸ..... ಕಣ್ಣುಗಳು ಮಗ ಹೋದ ದಾರಿಯನ್ನು ಹೆಮ್ಮೆಯಿಂದ ನಿಟ್ಟಿಸುತ್ತಿದ್ದುವು.
(ಮುಗಿಯಿತು)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ