"ಶೀಲಕ್ಕಾ..., ನೀನು ಬರೋವಾಗ ಎರಡು ಡಬ್ಬ S.K.P...ಇಂಗು ತರಬೇಕು......" ಹೀಗೆ ಚರವಾಣಿಯ ಮೂಲಕ ಅಧಿಕಾರ ವಾಣಿಯಿಂದ ಹೇಳಿದ್ದು ನನ್ನ ತಂಗಿ. ಅವಳಿರುವುದು ಪುತ್ತೂರಲ್ಲಿ, ನಾನಿರುವುದು ಕಾಸರಗೋಡಲ್ಲಿ. 'ಈದೇನಪ್ಪಾ ಪುತ್ತೂರಲ್ಲಿ ಇಂಗಿಗೆ ಬರಗಾಲವೇ..?' ಎಂದುಕೊಳ್ಳಬೇಡಿ. ಇದು ಅಂತಹ ಅಭಾವದಿಂದಾಗಿ ಬಂದ ಬೇಡಿಕೆ ಅಲ್ಲ ಮಾರಾಯ್ರೇ...,
'ಭಾಗ್ಯಾದ ಬಳೆಗಾರ ಹೋಗಿ ಬಾ ನನ್ ತವರೀಗೆ....' ಹಾಡು ನೀವು ಕೇಳಿಯೇ ಇರ್ತೀರಿ. 'ಬಳೆಗಾರನಲ್ಲಿರುವ ಅತ್ಯುತ್ಕೃಷ್ಟವಾದ ಬಳೆಗಳು ತನ್ನ ತವರಿಗೂ ಮುಟ್ಟಲಿ, ತನ್ನಮ್ಮ ಅದನ್ನು ಹಾಕಿ ಸಂತಸಪಡಲಿ' ಎಂಬ ಉತ್ಕಟ ಆಸೆಯೇ ಆ ಪದ್ಯದ ತಿರುಳು. ಹೆಣ್ಣು ಮಕ್ಕಳೆಂದರೇ ಹಾಗೆ... ತನ್ನ ತವರಿಂದು, ತವರೂರಿಗೆ ಸೇರಿದ್ದು.... ಹೀಗೆ 'ತವರು' ಎನ್ನುವ ಆ ಮಾಂತ್ರಿಕ ಶಬ್ಧಕ್ಕೆ ಸಂಬಂಧ ಪಟ್ಟದ್ದು ಎಲ್ಲವೂ ಅತ್ಯುತ್ತಮವಾದವುಗಳು...., ಹಾಗೇ ಲೋಕದಲ್ಲಿ ಅತ್ಯುತ್ತಮವಾದುವುಗಳು ಏನಿವೆಯೋ ಅವೆಲ್ಲವೂ ಅಲ್ಲಿಗೂ ಮುಟ್ಟಲಿ ಎನ್ನುವ ತುಡಿತ,ಸೆಳೆತ,ಎಳೆತ ಇದ್ದೇ ಇರುತ್ತೆ. ಬಹುಷಃ ನನ್ನ ತಂಗಿಯ ಇಂಗಿನ ಬೇಡಿಕೆಯ ಹಿಂದೆಯೂ ಇಂತಹುದೇ ಸೆಳೆತ ಇದ್ದಿರಬಹುದು! ನಾನು ಅವಳ ಅಪ್ಪಣೆಯನ್ನು ಮರುಮಾತಿಲ್ಲದೆ ಒಪ್ಪಿದೆ ಎಂದು ಬೇರೆ ಹೇಳಬೇಕಾಗಿಲ್ಲ ತಾನೇ? ಯಾಕೆಂದರೆ ಅವಳು ನನ್ನ ತೌರಿನ ಬಳಗ ಅಲ್ಲವೇ?
ತವರೂರು, ತವರ್ಮನೆ ಅನ್ನೋವಾಗ ಒಂದೆರಡು ಸ್ವಾರಸ್ಯ ಘಟನೆಗಳು ನೆನಪಾಗ್ತಾ ಇವೆ. ನಮ್ಮ ನೆರೆಕರೆಯ ಮಹಿಳೆಯೋರ್ವರ ತವರು ಮನೆ ಪುತ್ತೂರು. ನಮ್ಮೂರ ಸೊಸೆಯಾಗಿ ಬಂದು ಮೂವತ್ತು ವರ್ಷಗಳಾದರೂ ಅವರಿನ್ನೂ ಈ ಊರಿನ ಮಣ್ಣಿಗೆ ಒಗ್ಗಿಕೊಳ್ಳಲಿಲ್ಲ ಅನ್ಸುತ್ತೆ. ಮಾತುಮಾತಿಗೆ ತಾನು 'ಪುತ್ತೂರ್ದ ಮುತ್ತು' ಎಂಬುದನ್ನು ನೆನಪಿಸಿಕೊಳ್ಳುತ್ತಿದ್ದರು. ಒಂದು ದಿನ ತಮ್ಮ ಮೊಮ್ಮಗುವಿನ ಹುಟ್ಟುಹಬ್ಬದ ಪ್ರಯುಕ್ತ ನಮ್ಮನ್ನೆಲ್ಲ ಊಟಕ್ಕೆ ಆಹ್ವಾನಿಸಿದ್ದರು. ಅಡುಗೆಯೇನೋ ಪಸಂದಾಗಿಯೇ ಇತ್ತು. ಆದರೆ ಸಾಂಬಾರು ಸ್ವಲ್ಪ ತಳ ಹಿಡಿದ ಅಡ್ಡವಾಸನೆ ಬಂದ ಹಾಗಿತ್ತು. ಹಾಗೆಂದು ಅದನ್ನು ಹೇಳಲುಂಟೆ? ಶಿಷ್ಟಾಚಾರ ಮರೆಯಲುಂಟೇ? ಅವರ ಅಡುಗೆಯನ್ನು ಬಾಯಿ ತುಂಬಾ ಹೊಗಳಿದೆ. ಎಡವಟ್ಟು ಆದದ್ದು ಅಲ್ಲಿಯೇ..., ಬಂತು ನೋಡಿ ಪುಂಕಾನುಪುಂಕವಾಗಿ ಅವರ ತೌರೂರಿನ ಹೊಗಳಿಕೆ,
"ಓ... ಅದಾ..., ಈ ಕಾಸರಗೋಡಲ್ಲಿ ಸಿಗೋ ಕುಮ್ಟೆ ಮೆಣಸು ಹಾಕಿ ಸಾಂಬಾರು ಮಾಡಿದ್ರೆ ಕಲಗಚ್ಚಾದ್ರೂ ಅದಕ್ಕಿಂತ ಚೆನ್ನಾಗಿರುತ್ತೆ ಕಣ್ರೀ...(ಹಾಗಾದರೆ ನಾವೆಲ್ಲಾ ಕಲಗಚ್ಚು ಕುಡಿಯೋರು!) ಆದರೆ ಇದು ನೋಡಿ...ಎಂತಹ ಪರಿಮಳ...., ಎಂತಹಾ ಕಡು ಬಣ್ಣ... ಹಾಗೆಂದು ಒಂಚೂರು ಖಾರ ಇಲ್ಲ ನೋಡಿ....ನಾನು ಮಾಡಿದ ಸಾಂಬಾರು ಕುದಿಯುವಾಗ ವೆರಾಂಡದವರೆಗೂ ಪರಿಮಳವೇ....." (ತಳ ಕರಟಿದ ವಾಸನೆ ಅದಕ್ಕಿಂತ ಆಚೆಗೂ ಮುಟ್ಟುತ್ತೆ ಎಂದುಕೊಂಡೆ, ಹೇಳಲಿಲ್ಲ)ಎಂದು ಹೇಳುತ್ತಾ ನನ್ನೆಡೆಗೆ ನೋಡಿದಾಗ ನನ್ನ ಮುಖದ ಮೇಲಿನ ಭಾವನೆ ಅವರಿಗೆ ತೃಪ್ತಿ ತಂದಿಲ್ಲ ಎಂದು ತೋರುತ್ತೆ. ಮುಂದಿನ ಕ್ಷಣದಲ್ಲಿ ಮೆಣಸಿನ ಡಬ್ಬ ತಂದು ನನ್ನ ಮೂತಿಗೆ ಹಿಡಿದು ಹೇಳಿದರು,
"ಮೂಸಿ ನೋಡಿ ಎಂತಹಾ ಪರಿಮಳ..."
ಆಕ್ಷೀ... ಆಕ್ಷೀ... ಮೆಣಸಿನ ಘಾಟು ನನ್ನ ಬ್ರಹ್ಮ ರಂದ್ರಕ್ಕೇರಿತ್ತು.
"ಇಲ್ಲಿ ಸಿಗೋ ಮೆಣಸೂ ಹೀಗೇ ಇರುತ್ತೆ..." ನನ್ನ ನರಸತ್ತ ಧ್ವನಿ ಆಕೆಗೆ ಕೇಳಿದರೆ ತಾನೇ?
"ಸ್ವಲ್ಪ ನೀವೂ ತಗಂಡು ಹೋಗಿ... ಒಂದಿವ್ಸನಾದ್ರೂ ನಿಮ್ಮನೆವ್ರು ರುಚಿ ರುಚಿಯಾಗಿ (?) ಊಟ ಮಾಡಲಿ" ಎನ್ನತ್ತಾ ಮೆಣಸಿನ ಪುಟ್ಟ ಪೊಟ್ಟಣವೊಂದನ್ನು ನನ್ನ ಬ್ಯಾಗಿಗೆ ಇಳಿಸಿಯೇ ಬಿಟ್ಟಿದ್ದರು! ಹೇಗಿದೆ ನೋಡಿ ತವರೂರ ಮೋಹ...!
ಇನ್ನೊಂದು ಘಟನೆ ಓದಿ...,
ನನ್ನ ಚಿಕ್ಕಮ್ಮ ಮೊನ್ನೆ ಮೊನ್ನೆಯವರೆಗೂ ಇಲ್ಲೇ ಇದ್ದವರು ತಮ್ಮ ಪತಿಯ ನಿವೃತ್ತಿಯ ನಂತರ ಪುತ್ತೂರಿಗೆ ಸ್ಥಳಾಂತರಗೊಂಡಿದ್ದರು. ಇಲ್ಲಿದ್ದಾಗ ಅವರ ಮನೆಯ ಸಮೀಪದಲ್ಲೇ margin free market ಒಂದಿತ್ತು. ಇವರು ಅದರ ಖಾಯಂ ಗಿರಾಕಿಯೂ ಆಗಿದ್ದರು. ಕೆಲವು ದಿನಗಳ ಹಿಂದೆ ಇಲ್ಲಿಗೆ ಬಂದಿದ್ದಾಗ ಮೊದಲು ಅವರು ಹೋಗಿದ್ದೆಲ್ಲಿಗೆ ಗೊತ್ತಾ? ಅದೇ margin free market ಕಡೆಗೆ! ಇಲ್ಲಿ ಸಿಗುವ ವಸ್ತುಗಳು ಪುತ್ತೂರಲ್ಲಿ ಸಿಗದಿರುವಂತಹ ಅನರ್ಘ್ಯ ರತ್ನಗಳೇನೂ ಅಲ್ಲ! ಆದರೂ.... ಅವರಿಗೆ ಇಲ್ಲಿಯದ್ದೇ ಉತ್ಕ್ರುಷ್ಟ. ಆ ಕಟ್ಟಡದೊಳಕ್ಕೆ ಪ್ರವೇಶಿಸುವಾಗ ಅವರ ಮುಖದಲ್ಲಿ ಬೆಳಗುವ ಆ ನಗು ನೋಡಿಯೇ ಸಂತೋಷದ ಮಟ್ಟವನ್ನು ಅಂದಾಜಿಸಬಹುದು. ಜನಜಂಗುಳಿಯಲ್ಲಿ ಕಳೆದು ಹೋದ ಮಗುವಿಗೆ ಅಕಸ್ಮಾತ್ತಾಗಿ ತನ್ನಮ್ಮನ ಮುಖ ಕಂಡಾಗ ಆಗುವ ಅದೇ ನಿರಾಳತೆ, ಸಮಾಧಾನ ಇವರ ಮುಖದಲ್ಲೂ ಇರುತ್ತೆ. ಎಲ್ಲಾ ವಸ್ತುಗಳನ್ನು ನೋಡಿ, ಮುಟ್ಟಿ, ಸವರಿ ಆನಂದಿಸಿದ ಮೇಲೆ ಅವರು ಕೊಳ್ಳುವುದಾದರೂ ಏನನ್ನು ಗೊತ್ತೇ? ಡಾಬರ್ ಟೂತ್ ಪೇಸ್ಟು, ಲಾವಂಚದ ಬೇರು...., ಇಂತವುಗಳನ್ನು!
ಈಗ ನಮ್ಮ ಇಂಗಿನ ಕಥೆಗೆ ಬರೋಣ. ಮಾರನೆಯ ದಿನ ಬೆಳಗ್ಗೆಯೇ ನನ್ನ ಸವಾರಿ ಮಾರ್ಕೆಟ್ಟಿನ ಕಡೆಗೆ ಹೊರಟಿತು. ಒಂದು ಯಕಶ್ಚಿತ್ ಇಂಗು ತರಲು ಎಷ್ಟು ಹೊತ್ತು ಬೇಕು? ಹೆಚ್ಚೆಂದರೆ ಹತ್ತು ನಿಮಿಷ. ಹೋಗಿ ಬರುವ ಸಮಯವನ್ನೆಲ್ಲ ಸೇರಿಸಿದರೆ ಅಬ್ಬಬ್ಬಾ ಎಂದರೆ ಅರ್ಧ ಘಂಟೆ ಬೇಕು. ಅಡುಗೆಯನ್ನು ಬಂದ ನಂತರ ಮಾಡಿದರಾಯ್ತು ಎಂದುಕೊಂಡೆ. ತಂಗಿ ಹೇಳಿದ ಮಾತುಗಳನ್ನು ನೆನಪು ಮಾಡಿಕೊಂಡೆ,"ಅಪ್ಪ ಅಲ್ಲಿಂದ ತರುತ್ತಿದ್ದ S.K.P. ಇಂಗಿನ ರುಚಿ ಇಲ್ಲಿ ಸಿಗುವ ಯಾವ ಇಂಗಿನಲ್ಲೂ ಇಲ್ಲ... ಇಲ್ಲಿಯದು ಬರೀ ಬೂರ್ನಾಸು... ಕೆಲವುದಕ್ಕೆ ಗಬ್ಬು ವಾಸನೆ, ಕೆಲವುದಕ್ಕೆ ಕುಂಬು ವಾಸನೆ...." ಎಂದೆಲ್ಲಾ ಹೇಳಿ ತನ್ನ ಬೇಡಿಕೆಯನ್ನು ಸಮರ್ಥಿಸಿಕೊಂಡಿದ್ದಳು.
ಯಾರೋ ಬಹು ದೊಡ್ಡ ಜ್ಞಾನಿಯೊಬ್ಬ ಹೇಳಿದ್ದಾನಂತೆ, 'ಗಂಡಸಿನ ಹೃದಯಕ್ಕೆ ಲಗ್ಗೆ ಇಡಬೇಕಿದ್ದರೆ ಆತನ ಜಠರದ ಮೂಲಕ ಒಳನುಗ್ಗು' ಎಂದು. ನನ್ನ ಚಿಕ್ಕಪ್ಪ ಅಂದರೆ ಇಂಗಿನ ಬೇಡಿಕೆಯಿಟ್ಟ ನನ್ನ ತಂಗಿಯ ತಂದೆಯವರು ಇದನ್ನು ಚೆನ್ನಾಗಿ ಮನನ ಮಾಡಿದ್ದುದುದರಿಂದಲೇ ಇರಬೇಕು ಮಗಳಿಗಾಗಿ ಇಲ್ಲಿಂದ ಅಲ್ಲಿಗೆ ಇಂಗನ್ನು ಒಯ್ಯುತ್ತಿದ್ದುದು! ತಮ್ಮ ಮಗಳು ರುಚಿ ರುಚಿಯಾಗಿ ಘಮ ಘಮಿಸುವ ಅಡುಗೆ ಮಾಡಿ ಹಾಕಿ ತನ್ನ ಗಂಡನನ್ನು ಸುಪ್ರೀತಗೊಳಿಸಿ ಆ ಮೂಲಕ ಸುಖೀ ಜೀವನ ನಡೆಸಲಿ ಎಂಬ ಉದ್ದೇಶವೇ ಇದರ ಹಿಂದೆ ಇದ್ದಿರಬಹುದು. ಚಿಕ್ಕಪ್ಪನ ಪ್ರಚಂಡ ಬುದ್ದಿಯನ್ನು ಮನಸಾರೆ ಮೆಚ್ಚಿಕೊಂಡೆ. ಇದು ನಿಜವೇ ಹೌದಾದರೆ ಸಂಶೋಧನೆ ಮಾಡುವ ವಿದ್ಯಾರ್ಥಿಗಳಿಗೆ ಒಂದು ಹೊಸ ವಿಷಯ ಸಿಕ್ಕಂತಾಯ್ತು.ಇದಕ್ಕೆ 'ಅಡುಗೆಯ ರುಚಿವರ್ಧನೆಯಲ್ಲಿ ಇಂಗಿನ ಮಹತ್ವ ಹಾಗೂ ದಾಂಪತ್ಯ ಬೆಸುಗೆಯಲ್ಲಿ ಇಂಗಿನ ಪಾತ್ರ---ಒಂದು ತುಲನಾತ್ಮಕ ಅಧ್ಯಯನ' ಎಂಬ ಶೀರ್ಷಿಕೆ ಕೊಡಬಹುದು. ಇದು ಕಾರ್ಯ ರೂಪಕ್ಕೆ ಬಂತೆಂದಾದರೆ ಮುಂಬರುವ ದಿನಗಳಲ್ಲಿ ಇಂಗಿನ ಪೊಟ್ಟಣಗಳ ಮೇಲೆ ಘೋಷವಾಕ್ಯವೊಂದು ಮುದ್ರಿತವಾಗಿರುವುದರಲ್ಲಿ ಸಂಶಯವಿಲ್ಲ, 'ಇಂಗಿನ ಸಾರಥ್ಯ..., ದಾಂಪತ್ಯದ ಸಾಮರಸ್ಯ!'
ಓದುಗ ಮಿತ್ರರೇ.., ಗಮನಿಸಿ, ನಾನು ಮಾರ್ಕೆಟ್ಟಿನ ಕಡೆಗೆ ಮುಖ ಮಾಡಿ ಬಸ್ಸಿನಲ್ಲಿ ಪಯಣಿಸುತ್ತಾ ಇರಬೇಕಾದರೆ ನನ್ನ ತಲೆಯೆಂಬ ಇಂಗುಗುಂಡಿಯಲ್ಲಿ ಅಡುಗೆಯ ಇಂಗಿನ ವಿರಾಟ್ ರೂಪದ ನರ್ತನ ನಡೆಯುತ್ತಿದ್ದುದು. "ಇಂಗ್ ಈಸ್ ಕಿಂಗ್... ಇಂಗ್ ಈಸ್ ಕಿಂಗ್... "ಎಂಬ ಮೊರೆತ ನನ್ನ ಪಕ್ಕದಲ್ಲೇ ಕೇಳಿದಾಗ ಬೆಚ್ಚಿಬಿದ್ದು ಎಚ್ಚೆತ್ತುಕೊಂಡೆ. ಇದೇನು ಟೆಲಿಪತಿಯೇ....?ನನ್ನ ಮನದೊಳಗಿನ ಚಿಂತನ ಮಂಥನ ಹೊರಗಿನವರಿಗೆ ತಿಳಿಯಬೇಕಾದರೆ....? ಗಮನವಿಟ್ಟು ಪುನ್ಹ ಕೇಳಿದೆ.ಅದು ಟೆಲಿ-ಪತಿಯೂ ಅಲ್ಲ, ಪತ್ನಿಯೂ ಅಲ್ಲ... ನನ್ನ ಪಕ್ಕದಲ್ಲಿ ಕುಳಿತ ಮಹಿಳೆಯೋರ್ವರ ಮೊಬೈಲ್ ಕೂಗುತ್ತಿತ್ತು, 'ಸಿಂಗ್ ಈಸ್ ಕಿಂಗ್... ಸಿಂಗ್ ಈಸ್ ಕಿಂಗ್....' 'ಸಿಂಗ್' ಎಂಬ ಶಬ್ಧ ನನ್ನ ಕಿವಿಗೆ 'ಇಂಗ್' ಎಂದು ಕೇಳಿಸಿತ್ತು!
ಒಂದು ಲೆಕ್ಕದಲ್ಲಿ ನನಗೆ ತಪ್ಪಾಗಿ ಕೇಳಿಸಿದ್ದೂ ಸರಿಯೇ ಹೌದು. ಹೇಗಂತೀರಾ? ಇಂಗು ಅಡುಗೆ ಮನೆಯ ಕಿಂಗೇ ಹೌದು. 'ತೆಂಗು, ಇಂಗು ಇದ್ದರೆ ಮಂಗನೂ ಅಡುಗೆ ಮಾಡೀತು' ಎನ್ನುವ ಗಾದೆಯೇ ಇದೆಯಲ್ಲ? ರುಚಿ ರುಚಿಯಾದ ಅಡುಗೆ ಮಾಡಲು ಏಕಾಗ್ರತೆ, ಸಹೃದಯತೆ, ಪ್ರಾವಿಣ್ಯತೆ ಈ ಮೂರೂ ಇರಲೇಬೆಕು ಎನ್ನುವುದು ಅನುಭವಿಗಳ ಮಾತು. ಆದರೆ ತೆಂಗು, ಇಂಗು ಇದ್ದರೆ ಎಂತಹ ಕ್ಷಣೇ ಚಿತ್ತಂ... ಕ್ಷಣೇ ಪಿತ್ತಂ ವ್ಯಕ್ತಿಗಳು ಮಾಡಿದ ಅಡುಗೆಯೂ ಸ್ವಾದಿಷ್ಟವಾಗಿಯೇ ಇರುತ್ತದೆ ಎಂಬುದು ತಾತ್ಪರ್ಯ.
ಪ್ರೇಂ.... ಪ್ರೇಂ.... ಬಸ್ಸಿನ ಕರ್ಕಶ ಹಾರ್ನಿನ ಸದ್ದಿಗೆ ಎಚ್ಚೆತ್ತುಕೊಂಡೆ. ಬಸ್ಸು ಗಮ್ಯ ಸ್ಥಾನ ತಲುಪಿತ್ತು. ಇಳಿದೆ. ಚಿಕ್ಕಪ್ಪ ನಮ್ಮೊಂದಿಗಿದ್ದಾಗ ಹೋಗುತ್ತಿದ್ದ ಅಂಗಡಿಗಳ ಪರಿಚಯ ನನಗೆ ಚೆನ್ನಾಗಿಯೇ ಇತ್ತು. ಆದುದರಿಂದ ನನ್ನ ತಂಗಿ ಹೇಳಿದ ಬ್ರಾಂಡಿನ ಇಂಗು ಕೊಳ್ಳುವುದು ಕಷ್ಟದ ಕೆಲಸವೇನೂ ಆಗಿರಲಿಲ್ಲ(ನನ್ನ ಲೆಕ್ಕಾಚಾರ ಪೂರ್ತಿ ತಪ್ಪು ಎಂದು ಆಮೇಲೆ ಗೊತ್ತಾಯ್ತು). ಗಜಾನನ ಟ್ರೇಡರ್ಸ್ ಹೊಕ್ಕೆ.
ಅಂಗಡಿ ಮಾಲೀಕ -" ಬನ್ನೀಮ್ಮಾ.. , ಏನ್ಬೇಕಾಗಿತ್ತು?"
ನಾನು- "S.K.P.ಇಂಗ್ ಕೊಡ್ತೀರಾ...?"
ಅ.ಮಾ. - "ಇದು ನೋಡಿ U.S.P.ಇಂಗು, ಫ಼ಸ್ಟ್ ಕ್ಲಾಸಾಗಿದೆ. ನಮ್ಮನೆಯವ್ರು ಇದರ ಹೊರತು ಬೇರೆ ಯಾವುದನ್ನೂ ಖಾಯಸ್ಸು ಮಾಡೋದೆ ಇಲ್ಲ. ತಗೊಳ್ಳಿ..., ಅಡುಗೆಗೆ ಉಪಯೋಗ್ಸಿ ನೋಡಿ... ದುಡ್ಡು ಆಮೇಲೆ ಕೊಡಿ..."
ನಾನು-"ಅದು ಹಾಗಲ್ಲ..., ನನ್ನ ಚಿಕ್ಕಪ್ಪ ಅವರ ಮಗಳಿಗಾಗಿ S.K.P.ಇಂಗು ತಗೋತಿದ್ರಂತೆ. ಅವರು ಸಾಮಾನ್ಯವಾಗಿ ಇಲ್ಲಿಗೇ ಬರ್ತಿದ್ರಲ್ಲಾ...? ಹಾಗೆ ಅದು ಇಲ್ಲೇ ಇರಬಹುದು ಅಂದ್ಕೊಂಡೆ..."
ಅ.ಮಾ. -"ಹಾಗೆ ಹೇಳಿ ಮತ್ತೆ...,ಬೆಳಗ್ಗೆ ಬೆಳಗ್ಗೆ ನಿಮ್ಮ ಚಿಕ್ಕಪ್ಪನ ಹೆಸರು ಎತ್ತಿದ್ರಲ್ಲ ಮ್ಯಾಡಂ...,ಈವತ್ತು ನಮ್ಮ ವ್ಯಾಪಾರ ಒಂದು ಪಟ್ಟು ಜಾಸ್ತೀನೆ ಆಗುತ್ತೆ ಬಿಡಿ ....,ಅಂತಹಾ ಒಳ್ಳೆ ಮನುಷ್ಯ ಅವರು.... ಅವ್ರ ಕೈಗುಣ ಅಂದ್ರೆ ಸಾಕ್ಷಾತ್ ಧನ್ವಂತರಿಯೇ ಸೈ.... ಯಾಕೆ ಹೇಳ್ತಿದ್ದೀನಿ ಗೊತ್ತಾ...?ಕೆಲವು ವರ್ಷಗಳ ಹಿಂದೆ ನನ್ಮಗೂಗೆ ಕೆಂಡಾಮಂಡಲ ಜ್ವರ ಬಂದಿತ್ತು ನೋಡಿ.....,ಡಿಗ್ರಿ 104 ತೋರಿಸ್ತಿತ್ತು. ಆ ದಿನ ಭಾನುವಾರ ಬೇರೆ.....ನಮ್ಮ ಡಾಕ್ಟ್ರು ರಜಾ ಮೇಲಿದ್ದರು. ಸಾಲದುದಕ್ಕೆ ನಡುರಾತ್ರಿ. ಕೊನೆಗೆ ನಿಮ್ಮ ಚಿಕ್ಕಪ್ಪನಲ್ಲಿಗೆ ಬಂದ್ವಿ. ಅವ್ರು ಕೊಟ್ಟ ಒಂದೇ ಒಂದು ಡೋಸು ಔಷಧಿಗೆ ಜ್ವರ ಜಗ್ಗಿಯೇ ಬಿಡ್ತು ನೋಡಿ... ಅಂತಹಾ ಅಪರಾತ್ರಿಯಲ್ಲಿ ಹೋದ್ರೂ ಒಂದು ಸಿಡಿಮಿಡಿ ಇಲ್ಲಾ... ದುಸುಮುಸು ಇಲ್ಲಾ... ಎಂತಹಾ ಸಾತ್ವಿಕ ಮನುಷ್ಯ.... ಅವ್ರು ಹೋಗಿಬಿಟ್ರು ಎಂದು ಗೊತ್ತಾದಾಗ ನನ್ನ ಹೆಂಡ್ತಿ ಅತ್ತೇ ಬಿಟ್ಲು ನೋಡಿ.... " ಚಿಕ್ಕಪ್ಪನ ಕುರಿತಾದ ಹೊಗಳಿಕೆಯ ಜಲಪಾತದ ಬೋರ್ಗೊರೆತದಲ್ಲಿ ನನ್ನ S.K.P. ಇಂಗು ಕೊಚ್ಚಿಹೋಗಿತ್ತು. ಹೊಗಳಿಕೆ ಯಾರಿಗೆ ಇಷ್ಟವಿಲ್ಲ ಹೇಳಿ? ಅದೂ ನನ್ನ ಅತ್ಯಂತ ಪ್ರೀತಿ ಪಾತ್ರರಾದ ಚಿಕ್ಕಪ್ಪನ ಬಗ್ಗೆ. ನಾನು ಆ ಗುಂಗಿನ ಸುಖವನ್ನು ಅನುಭವಿಸುತ್ತಾ ಇದ್ದಂತೆ ಅವರೇ ನನ್ನನ್ನು ಕರೆದು ಹೇಳಿದರು,
"ಮ್ಯಾಡಂ..., ಇದೇ ತಗೊಳ್ಳಿ..., ಅವ್ರು ಇಲ್ಲಿಗೆ ಬಂದ್ರೆ ಇದನ್ನೇ ಹುಡುಕಿ ತಗೊಳ್ತಿದ್ರು.... ಮಗಳಿಗಾಗಿ... ಎಂದೂ ಹೇಳ್ತಿದ್ರು... ನಿಮಗೆಲ್ಲೋ ಹೆಸರು ತಪ್ಪಿರಬೇಕು..."
ಇರಬಹುದು ಎನಿಸಿ ಅದನ್ನೇ ಎರಡು ಡಬ್ಬ ತಗೊಂಡೆ. ಅಂಗಡಿಯಿಂದ ಹೊರ ಬಂದಾಗ ನನ್ನ ಮನಸ್ಸು ಪುನ್ಹ ನನ್ನ ಸ್ವಾಧೀನಕ್ಕೇ ಬಂದಿದೆ ಎನಿಸಿತು."ಅದು S.K.P. ಅಲ್ಲ ಕಣೇ.... U.S.P. ಅಂತೆ.... ನಿನಗೆಲ್ಲೋ ಕನ್ಫ್ಯೂಸ್ ಆಗಿರಬೇಕು" ಎಂದು ತಂಗಿಗೆ ಹೇಳೋಣ ಎಂದು ಅಲ್ಲಿಂದಲೇ ಕರೆ ಮಾಡಿದೆ. ಅವಳೂ ಸ್ವಲ್ಪ ಗಲಿಬಿಲಿಗೊಂಡಂತೆ ಇತ್ತು. ಎರಡು ನಿಮಿಷ ಬಿಟ್ಟು ಕರೆಮಾಡುವುದಾಗಿ ಹೇಳಿದಳು. ಅವಳ ಅಡುಗೆಮನೆಯಲ್ಲಿರುವ ಇಂಗಿನ ಡಬ್ಬದ ಮೇಲಿನ ಹೆಸರಿನ ಚೀಟಿ ಹರಿದು ಹೋಗಿದೆಯೆಂದೂ ಅಮ್ಮನಿಗೆ ಕರೆ ಮಾಡಿ ಕೇಳಿದಾಗ ಅದು ಖಂಡಿತಕ್ಕೂ U.S.P. ಅಲ್ಲ S.K.P. ಯೇ ಆಗಿತ್ತು ಎಂದೂ ಹೇಳಿದರಂತೆ! ಛೆ...., ನಾನೆಂತಹ ಹೆಡ್ಡುತನ ಮಾಡಿದ್ದೆ? U.S.P. ಕೊಳ್ಳುವ ಮೊದಲೇ ಆಕೆಗೆ ಕರೆ ಮಾಡಿರುತ್ತಿದ್ದರೆ...? ಈಗ ಅದನ್ನು ವಾಪಾಸು ಕೊಡುವ ಹಾಗೂ ಇರಲಿಲ್ಲ.ಅವರು ಹೊರಿಸಿದ್ದ ಹೊಗಳಿಕೆಯ ಝಗಮಗ ಮೂಟೆಯಿನ್ನೂ ನನ್ನ ತಲೆಯ ಮೇಲೆಯೇ ಇತ್ತಲ್ಲ? ಅವರೊಡನೆ ನಿಷ್ಠೂರ ಮಾಡಲು ಸಾಧ್ಯವೇ ಇಲ್ಲವೆನಿಸಿತು. ಅವರ ಮಾರ್ಕೆಟಿಂಗ್ ಟೆಕ್ನಿಕ್ಕನ್ನು ಮೆಚ್ಚಲೇಬೇಕಾಯ್ತು. ಹಾಗೇ ನನ್ನ ಹುಂಬತನವನ್ನು ಹಳಿದುಕೊಳ್ಳುತ್ತಾ ಇಂಗು ತಿಂದ ಮಂಗನಂತಾಗಿರಬಹುದಾಗಿದ್ದ ನನ್ನ ಮುಖದ ಮೇಲಿನ ಬೆವರನ್ನು ಒರೆಸಿಕೊಳ್ಳುತ್ತಾ ಮುಂದೆ ನಡೆದೆ.ಮುಂದಿನ ಗುರಿ 'ಯುನೀಕ್ ಪ್ರಾವಿಷನ್ ಸ್ಟೋರ್ಸ್'. ಈ ಸಲ ನಾನು ಯಾವುದೇ ಕಾರಣಕ್ಕೂ ಹುಷಾರಿ ತಪ್ಪಬಾರದೆಂದು ನಿಶ್ಚಯಿಸಿಕೊಂಡಿದ್ದೆ. ಯಥಾ ಪ್ರಕಾರ ನಾನು S.K.P. ಕೇಳಿದಾಗ ಅವರು S.V.T.ಯನ್ನು ಶಿಪಾರಸು ಮಾಡಿದ್ರು.ಚಿಕ್ಕಪ್ಪ, ಅವರ ಮಗಳು.... ಇತ್ಯಾದಿ ಪುನರಾವರ್ತನೆಯಾಯ್ತು. 'ಚಿಕ್ಕಪ್ಪನಿಗೆ ಕಾಲ್ ಮಾಡಿ ಕೊಡಿ..., ನಾನು ಮಾತ್ನಾಡ್ತೀನಿ' ಅಂದರು. 'ಅವರು ಕಾಲ್ ರಿಸೀವ್ ಮಾಡೋಲ್ಲ' ಅಂದೆ. 'ಯಾಕೆ ರೇಂಜ್ ಒಳಗಡೆ ಇಲ್ವಾ?' ಎಂದು ಕೇಳಿದಾಗ 'ಇಲ್ಲ' ಅಂದೆ. ಅವರೇನೂ ಬಿಡುವ ಹಾಗೆ ಕಾಣಲಿಲ್ಲ. ಇನ್ನು ಅಲ್ಲಿಂದ ಹೊರಡೋಣ ಎಂದುಕೊಂಡೆ. ಎರಡು ಇಂಗಿನ ಡಬ್ಬಗಳನ್ನು ನನ್ನ ಮುಂದೆ ಹಿಡಿದು ಹೇಳಿದರು ,
"ಇದು ನೋಡಿ 38 ರೂಪಾಯಿಯದ್ದು,ಇದು 58 ರೂಪಾಯಿಯದ್ದು... ಅವರು ಯಾವಾಗಲೂ ಈ 58 ರದ್ದೇ ಪರ್ಚೇಸ್ ಮಾಡ್ತಿದ್ರು...ಮಗಳ ಊರಿಗೆ ಹೋಗ್ತಿದ್ದೀನಿ ಅನ್ನೋರು ....., ಇದನ್ನು ಕೊಳ್ಳಲೆಂದೇ ಇಲ್ಲಿಗೆ ಬರೋರು... ಅರ್ಧ ಘಂಟೆ ಮಾತನಾಡಿಯೇ ಹೋಗೋರು...ತುಂಬಾ ಸಾಧುಸಜ್ಜನ...., ಈಗ ಅವ್ರು ಈ ಕಡೆ ಬಾರದೆ ತುಂಬಾ ಸಮಯವೇ ಆಯ್ತು... ಅಂದ ಹಾಗೆ ಅವರು ಈಗ ಇಲ್ಲಿ ಇಲ್ವಾ...?"
ಚಿಕ್ಕಪ್ಪ ನಮ್ಮನ್ನಗಲಿದ ವಿಷಯ ಹೇಳಲೇಬೇಕಾಯ್ತು.ಆಘಾತಗೊಂಡ ಪಾಂಡುಅಣ್ಣ (ಅಂಗಡಿ ಮಾಲೀಕ) ಮುಂದಿನ ಅರ್ಧ ಘಂಟೆ ಅವರ ಸಾವಿನ ಸುತ್ತಲೇ ಗಿರಕಿಹೊಡೆದು ಹಲವು ಪ್ರಶ್ನೆಗಳನ್ನು ಕೇಳಿ ಲೊಚಗುಟ್ಟಿದರು. ಅಂಗಡಿಗೆ ಬಂದ ಗಿರಾಕಿಗಳೆಲ್ಲ ಮುಖ ಸಿಂಡರಿಸಿಕೊಂಡು ಕಾಯುವಂತಾಯ್ತು. ಕೊನೆಗೆ ಬಹಳ ಬಾವುಕರಾಗಿ ನುಡಿದರು,
"ನೋಡಿ ಅಮ್ಮಾ..., ಅವರ ಹೆಸರು ಹೇಳಿ ಇದನ್ನು ಹೊರಕ್ಕೆ ತೆಗೆದೆ. ಪುನಃ ಒಳಗಿಟ್ರೆ ಅವರಿಗೆ ಅಪಚಾರ ಮಾಡಿದ ಹಾಗೆ ಆಗುತ್ತೆ... ತಗೊಂಡ್ಹೋಗಿ ಇದನ್ನ... ಪ್ಲೀಸ್..., ದುಡ್ಡು ಕೊಡೋದು ಬೇಡಾ..."ಎಂದರು.
ಬಿಲ್ ಪಾವತಿಸದಿದ್ರೆ ಚಿಕ್ಕಪ್ಪನ ಆತ್ಮಕ್ಕೆ ಶಾಂತಿ ಸಿಗಲಾರದೆಂದು ಮನವರಿಕೆ ಮಾಡಿಕೊಟ್ಟು ಅವರು ಚಿಕ್ಕಪ್ಪನಿಗೆ ಕೊಟ್ಟ ಇಂಗಿನ ಸರ್ಟಿಫಿಕೆಟುಗಳನ್ನು ಚೀಲಕ್ಕಿಳಿಸಿ ಹೊರನಡೆದೆ.ನನ್ನ ಪುಟ್ಟ ಹ್ಯಾಂಡ್ ಬ್ಯಾಗ್ ಇಂಗಿನ ಡಬ್ಬಗಳ ಭಾರದಿಂದ ಕೆಳಕ್ಕೆ ಜಗ್ಗುತ್ತಿತ್ತು. ಹೊತ್ತು ಮಧ್ಯಾಹ್ನವಾಗಿತ್ತು. S.K.P.ಇಂಗು ಕೊಳ್ಳುವ ವಿಷಯ ಇಷ್ಟು ದೊಡ್ಡ ಸಮಸ್ಯೆ ಆಗಬಹುದೆಂಬ ನಿರೀಕ್ಷೆಯೇ ಇಲ್ಲದೆ ನಾನು ಮನೆಯಿಂದ ಬೀಡು ಬೀಸಾಗಿ ಹೊರಟಿದ್ದೇ ತಪ್ಪಾಗಿತ್ತು. ಮಧ್ಯಾಹ್ನದ ಅಡುಗೆಯನ್ನು ಮಾಡಿರಲಿಲ್ಲ, ಯಾವಾಗಲಿನಂತೆ ಬ್ಯಾಗಲ್ಲಿ ನೀರಿನ ಬಾಟಲು,ಕೊಡೆ ಹಾಕಿಕೊಂಡಿರಲಿಲ್ಲ. ಬಿಸಿಲಿಗೆ ಸೋತು ಸುಣ್ಣವಾಗಿದ್ದೆ, ಬಾಯೊಣಗಿ ನಾಲಿಗೆಯಿಂದ ತುಟಿ ಸವರಿಕೊಳ್ಳುವಂತಾಗಿತ್ತು.ಆದರೂ ಛಲ ಬಿಡದ ವಿಕ್ರಮನಂತೆ ಇಂಗಿನ ಭಾರವನ್ನು ಬೆನ್ನಲ್ಲಿ ಹೊತ್ತು ಮುನ್ನಡೆದೆ. S.K.P.ಎಂದು ತಂಗಿ ಅಷ್ಟು ನಿರ್ಧಿಷ್ಠವಾಗಿ ಹೇಳಿರುವಾಗ U.S.P. ಯನ್ನೋ S.V.T.ಯನ್ನೋ ಕೊಟ್ಟು ಏನು ಪ್ರಯೋಜನ? ಸಾಲದುದಕ್ಕೆ 'ಬೇರೆಲ್ಲಾ ಇಂಗುಗಳು ಬರೀ ಬೂರ್ನಾಸು' ಎಂದು ಅವಳೇ ಹೇಳಿದ್ದಳಲ್ಲ? ಸೋ...., ನಡೆ ಮುಂದೆ... ನಡೆ ಮುಂದೆ... ನುಗ್ಗಿ ನಡೆ ಮುಂದೆ.... ಎನ್ನಬೇಕಾಯ್ತು. ನಾಲ್ಕು ರಸ್ತೆ ಕೂಡುವಲ್ಲಿ ಬಂದು ಮುಟ್ಟಿದೆ. ಉದ್ದಕ್ಕೂ ಕಣ್ಣು ಹಾಯಿಸಿದೆ. ಬಲಬದಿಯ ರಸ್ತೆ ನಮ್ಮ ಶಾಲೆಗೆ ಹೋಗಿ ಸೇರುತ್ತೆ.ಯಾಕೋ ಅದರಲ್ಲೇ ಹೋಗುವ ಎಂದೆನಿಸಿತು. ನಾವು ಚಿಕ್ಕವರಿರುವಾಗ ದಿನಾಲೂ ಓಡಾಡುತ್ತಿದ್ದ ಆ ರಸ್ತೆಯಲ್ಲಿ ಮುಂದೆ ಹೋಗುತ್ತ ನಾನು ಓದಿದ ಶಾಲೆಯ ಪಕ್ಕಕ್ಕೆ ಬಂದು ಮುಟ್ಟಿದೆ.ನಮ್ಮ ಶಾಲೆ ಎಂದೊಡನೆ ಅದಕ್ಕೆ ತಾಗಿದಂತೆ ಇರುವ ಭಟ್ ಮಾಮನ ಗೂಡಂಗಡಿಯ ಉಲ್ಲೇಖವೂ ಆಗಲೇ ಬೇಕು. ಯಾಕೆ ಗೊತ್ತಾ?ಮಕ್ಕಳಿಗೆ ಬೇಕಾಗಿದ್ದ ಸ್ಲೇಟು, ಬಳಪ, ಪೆನ್ಸಿಲು, ಪೆನ್ನು, ನೋಟು ಪುಸ್ತಕ, ಮೊಟ್ಟೆ ಮಿಠಯಿ(ಅಂದರೆ ಗೋಲಿ ಆಕಾರದ್ದು), ಶುಂಟಿ ಮಿಠಯಿ,ಇತ್ಯಾದಿಗಳು..... ದೊಡ್ಡವರಿಗೆ ಅಗತ್ಯವಿರುವ ಬೀಡ,ಬೀಡಿ, ಸಿಗರೇಟು,ನಸ್ಯ, ಸೋಡಾ ಇವುಗಳೆಲ್ಲ ಆ ಗೂಡಂಗಡಿಯಲ್ಲಿರುತ್ತಿದ್ದುವು.ಅಂದಿನ ನಮ್ಮ ಮುಗ್ಧ ಮನಸ್ಸಿಗೆ ಆ ಅಂಗಡಿಯೆಂದರೆ ಒಂದು ಅದ್ಭುತ ಲೋಕವೇ ಆಗಿರುತ್ತಿತ್ತು!ಅಲ್ಲಿ ಕೊರಳ ಮಧ್ಯಕ್ಕೆ ಬಣ್ಣ ಬಣ್ಣದ ಗೋಲಿಗಳನ್ನು ಸಿಗಿಸಿಕೊಂಡು ಸಾಲಾಗಿ ಕುಳಿತಿರುತ್ತಿದ್ದ ಸೋಡಾ ಬಾಟಲಿಗಳು ನಮ್ಮನ್ನು ಅತಿಯಾಗಿ ಆಕರ್ಷಿಸುತ್ತಿದ್ದ ವಿಶೇಷ ಪಾನೀಯವಾಗಿತ್ತು. ಆದರೆ ಅದನ್ನು ಕುಡಿಯಲೇಬಾರದು ಎಂದು ಮನೆಯಿಂದ ನಿರ್ಬಂಧ ಹೇರಿದ್ದರು. ಈಗ ನನಗೆ ಅಂತಹ ನಿರ್ಬಂಧ, ನಿಷೇಧಗಳ ಹಂಗು ಇಲ್ಲವಲ್ಲ? ಸಾಯುವಂತಹ ಬಾಯಾರಿಕೆ ಬೇರೆ. ಇವತ್ತು ಭಟ್ ಮಾಮನ ಸೋಡಾ ಕುಡಿಯಲೇಬೇಕು ಎಂದುಕೊಂಡು ಅತ್ತ ಹೆಜ್ಜೆ ಹಾಕಿದೆ. ಭಟ್ ಮಾಮನ ಜಾಗದಲ್ಲಿ ಅವರ ಮಗ ಕುಳಿತಿದ್ದರು. ನಾವೆಲ್ಲಾ ಒಟ್ಟಿಗೆ ಶಾಲೆಯಲ್ಲಿ ಓದಿದವರು. ಆತ ನನ್ನನ್ನು ಗುರುತಿಸಿ ಮಾತನಾಡಿದರು. ಸೋಡಾ ಕುಡಿಯಲೆಂದು ಬಂದೆ ಎಂದಾಗ ನಕ್ಕು ಹೇಳಿದರು. 'ಈಗ ಅದೆಲ್ಲಾ out dated. ಈಗ ಏನಿದ್ರೂ ಕೋಲಾ, ಪೆಪ್ಸಿಗಳ ಕಾಲ...' ಎಂದರು. ಮೊದಲು ಸೋಡಾ ಇಟ್ಟಿರುತ್ತಿದ್ದ ಜಾಗದಲ್ಲಿ ಈಗ ಹಲವು ವಿಧದ cool drinks ಇದ್ದುವು. ಯಾವುದನ್ನು ಕುಡಿಯಲಿ ಎಂದು ಯೋಚಿಸುತ್ತಾ ಹಳೆ ನೆನಪಿನಿಂದ ಒಂದು ಬಾರಿ ಗೂಡಂಗಡಿಯನ್ನು ಪೂರ್ತಿಯಾಗಿ ಅವಲೋಕಿಸುತ್ತಾ ಇದ್ದಾಗ ಒಂದು ಕಡೆ ಕಣ್ಣು ಸ್ಥಿರವಾಗಿ ನಿಂತಿತು. ಅಲ್ಲಿ S.K.P. ಇಂಗಿನ ಡಬ್ಬಗಳನ್ನು ಸಾಲಾಗಿ ಇಡಲಾಗಿತ್ತು!! 'ಯುರೇಕಾ... ಯುರೇಕಾ... ಎನ್ನುತ್ತಾ ಓಡಲು ನಾನೇನು ವಿಜ್ಞಾನಿ ಕೆಟ್ಟು ಹೋದೆನೇ ...? 'ದೇವರೇ..., ನೀನೆಷ್ಟು ದಯಾಮಯ...' ಎನ್ನುತ್ತಾ ಆಗಸದತ್ತ ಮುಖ ಮಾಡಿ ಕೈ ಮುಗಿಯವಂತಹ ತತ್ವಜ್ಞಾನಿಯಂತೂ ಮೊದಲೇ ಅಲ್ಲ! ಉಕ್ಕಿ ಬಂದ ಬಾವನೆಗಳನ್ನು ಎಳ್ಳಷ್ಟೂ ಪ್ರಕಟಪಡಿಸದೆ ಒಂದು ಕ್ಷಣ ಅವುಗಳ ಕಡೆಗೇ ತದೇಕ ಚಿತ್ತದಿಂದ ನೋಡುತ್ತಾ ನಿಂತೆ. ಆ ಎಲ್ಲಾ ಇಂಗಿನ ಡಬ್ಬಗಳನ್ನೂ ಒಂದೇ ಬಾರಿಗೆ ಖರಿದಿಸಿಯೇ ಬಿಡೋಣ ಎನ್ನುವಷ್ಟು ಹುಮ್ಮಸ್ಸು ಬಂದಿತ್ತು. ಬಾಯಾರಿಕೆ ಮರೆತೇ ಹೋಗಿತ್ತು! ನನ್ನ ಕಣ್ಣೋಟವನ್ನು ಗಮನಿಸುತ್ತಿದ್ದ ಭಟ್ ಮಾಮನ ಮಗ (ಅವರ ಹೆಸರು ಮರೆತು ಹೋಗಿದೆ) ಕೇಳಿದರು,
"ಇಂಗು ಬೇಕಿತ್ತೇನು?"
"ಹೂಂ..., ನಾಲ್ಕು ಡಬ್ಬ ಕೊಡಿ" ಎಂದೆ. ಅದರ ಅನ್ವೇಷಣೆಗಾಗಿ ಇಷ್ಟು ಕಷ್ಟ ಪಟ್ಟಿರುವಾಗ ತಂಗಿಗೆ ಮಾತ್ರ ಯಾಕೆ ನನಗೂ ಎರಡು ಇರಲಿ ಎಂದುಕೊಂಡೆ!
'ಯಾವುದೋ ಅಂತಃ ಪ್ರೇರಣೆ ನನ್ನನ್ನು ಇಲ್ಲಿಗೆ ಒಯ್ದು ತಂದಿರಬಹುದೇ...? ಇಲ್ಲದಿದ್ದರೆ ಇಷ್ಟು ವರ್ಷದಲ್ಲಿ ಓದು ಬಾರಿಯೂ ಭಟ್ ಮಾಮನ ಅಂಗಡಿಯ ದಿಕ್ಕಿಗೇ ತಲೆ ಹಾಕದವಳು ಇವತ್ತೇ ಯಾಕೆ ಸೋಡಾ ಕುಡಿಯಬೇಕೆನಿಸಿತು...? ಬೇರೆ ಎಷ್ಟೆಷ್ಟೋ ದೊಡ್ಡ ice-cream parlor ಗಳಿದ್ದುವಲ್ಲ? ಅಲ್ಲಿ ಹೋಗಿ ಬಾಯಾರಿಕೆ ತಣಿಸಿಕೊಳ್ಳಬಹುದಿತ್ತಲ್ಲ..? Law of attraction ಅನ್ನುವುದು ಇದಕ್ಕೇ ಏನು ...?' ತಲೆಕೊಡವಿಕೊಂಡೆ. ಈಗ ಮೊದಲು ಆಗಬೇಕಾದ ಕೆಲಸ ಮನೆಗೆ ಹೋಗಿ ಅಡುಗೆ ಮಾಡುವುದು. ಇಂತಹ ದೊಡ್ಡ ದೊಡ್ಡ ವಿಚಾರಗಳನ್ನು ನಂತರ ಯೋಚಿಸೋಣ ಎಂದುಕೊಂಡು ಅಟೋ ಹತ್ತಿ ಮನೆಯ ಕಡೆ ಧಾವಿಸಿದೆ. ಈಗಾಗಲೇ ಘಂಟೆ ಮಧ್ಯಾಹ್ನದ ಒಂದೂವರೆಯಾಗಿತ್ತು. ಅಡುಗೆ ಏನು ಮಾಡಲಿ? ಎರಡು ಘಂಟೆ ಹೊತ್ತಿಗೆ ಡಾಕ್ಟರು ಸಾಹೇಬರು ಊಟಕ್ಕೆ ಬರುವರು. ಚೀಲ ತುಂಬಾ ಇಂಗು ಇಟ್ಟುಕೊಂಡು ಅಡುಗೆಯ ಬಗ್ಗೆ ಚಿಂತಿಸುವ ನನ್ನ ಬೋಳೆತನಕ್ಕೆ ನನಗೇ ನಗು ಬಂತು! ಅನ್ನ ಕುಕ್ಕರಲ್ಲಿ ಬೇಯುವ ಹೊತ್ತಿಗೆ ಇಂಗಿನ ಸಾರು, ಇಂಗಿನ ಚಟ್ನಿ ಮಾಡಿಬಿಡಬಹುದು ಎಂದುಕೊಂಡೆ. ಅಂದ ಹಾಗೆ ನಾಳೆ ಮಕ್ಕಳ ದಿನಾಚರಣೆ...., ಏನು ವಿಶೇಷ ಮಾಡಲಿ? ಇಂಗಿನ ಬಾತ್ ಮಾಡಿದರೆ ಹೇಗಿರಬಹುದು!? ಸಿಹಿ ಏನು ಮಾಡಲಿ? ಇಂಗಿನ ಪಾ... ಯ... ಸ...?? ಅದನ್ನು ಮಾ... ಡಿ.... ದ... ರೆ.... , ಮನೆಯಲ್ಲಿ ಎಲ್ಲರೂ ತಿಂದರೆ.... ನಿಮಗೂ ಹೇಳ್ತೀನಿ.
ingina purana keli mukhadalli mandahasa minugitu shale pakkada goodangadi ya nenapu hasiraytu
ಪ್ರತ್ಯುತ್ತರಅಳಿಸಿo...,hauda? thank u for the compliments
ಪ್ರತ್ಯುತ್ತರಅಳಿಸಿ