ಚರಿತ್ರೆಯತ್ತ ಒಂದು ಇಣುಕು ನೋಟ ಹಾಯಿಸಿ ಮುಂದುವರಿಯೋಣ ....,
ರಾಜಾ ಅಕ್ಬರನ ಆಸ್ಥಾನ -ಚಕ್ರವರ್ತಿಯ ಮುಖ ಬಹಳ ಗಂಭೀರವಾಗಿದೆ. ಕಣ್ಣುಗಳು ಕೆಂಪಡರಿವೆ, ಹುಬ್ಬುಗಳು ಗಂಟಿಕ್ಕಿವೆ. ಸಭೆಯಲ್ಲಿ ಸೂಜಿ ಬಿದ್ದರೂ ಸಪ್ಪಳವಾಗಬಹುದಾದಂತಹ ಮೌನ. ಅಕ್ಬರ ಪ್ರಶ್ನಿಸುತ್ತಾನೆ,
"ನಮ್ಮನ್ನು ಕಾಲಲ್ಲಿ ತುಳಿಯುವಂತಹ ಹೀನ ಕೃತ್ಯ ಮಾಡಿದ ಪಾಪಿಗೆ ಎಂತಹ ಶಿಕ್ಷೆ ವಿಧಿಸಬೇಕು?"
ಆಸ್ಥಾನಿಕರ ಹುಬ್ಬು ಮೇಲೇರಿತು. ಮಹಾರಾಜರನ್ನು ಒದೆಯುವಂತಹ ದಾರ್ಷ್ಟ್ಯ, ದುರಹಂಕಾರ ಯಾರಿಗಿದೆ? ಕೆಲಹೊತ್ತು ಗುಸು..ಗ಼ುಸು.. ತಲೆಗೊಂದರಂತೆ ಸಲಹೆಗಳು ಬರತೊಡಗಿದುವು,
'ಅಪರಾಧಿಯನ್ನು ಆನೆಯಿಂದ ತುಳಿಸಿ ಕೊಲ್ಲಬೇಕು'
'ಕುದುರೆಯ ಕಾಲಿಗೆ ಅಪರಾಧಿಯನ್ನು ಕಟ್ಟಿ ಗಲ್ಲಿ ಗಲ್ಲಿಯಲ್ಲಿ ಎಳೆಯಬೇಕು'
'ಅಪರಾಧಿಯ ಕಾಲ್ಗಳನ್ನು ಕುದಿಯುವ ಎಣ್ಣೆಯಲ್ಲಿ ಅದ್ದಬೇಕು'
ರಾಜನಿಗೆ ಸಮಾಧಾನವಾಗಲಿಲ್ಲ. ಬೀರ್ಬಲನೆಡೆಗೆ ನೋಡುತ್ತಾನೆ. ಬೀರ್ಬಲ ಎದ್ದುನಿಂತು ವಿನೀತನಾಗಿ ನುಡಿಯುತ್ತಾನೆ'
"ಜಹಾಪನಾ...,ಅಂತಹ ಕಾಲ್ಗಳನ್ನು ಹೂವಿನ ಸರಪಣಿಯಿಂದ ಬಂಧಿಸಬೇಕು"
ಆಸ್ಥಾನಿಕರು ,'ಇವನೆಂತಹ ಹುಚ್ಚ?' ಎನ್ನುವಂತೆ ನೋಡುತ್ತಾರೆ. ಅಕ್ಬರನ ಮುಖದಲ್ಲಿ ಪ್ರಶ್ನಾರ್ಥಕ ಚಿಹ್ನೆ. ಬೀರ್ಬಲ ವಿವರಿಸುತ್ತಾನೆ,
"ಹೌದು ಮಹಾಪ್ರಭೋ...,ತಮ್ಮಂತಹ ಅತಿರಥ, ಮಹಾರಥ, ಅಜಾತಶತ್ರುವನ್ನು ತುಳಿಯುವಂತಹ ಯೋಗ್ಯತಿಗೆ ತಮ್ಮ ತೊಡೆಯಲ್ಲಿ ಆಡುವ ಪುಟ್ಟ ರಾಜಕುಮಾರನಿಗಲ್ಲದೆ ಬೆರಾರಿಗಾದರೂ ಇರಲು ಸಾಧ್ಯವೇ? ಆ ಹಸುಳೆಯ ಮೃದು ಪಾದಗಳ ಬಂಧನಕ್ಕೆ ಹೂವಿನ ಸರಪಣಿಯಲ್ಲದೆ ಬೇರೆ ಯಾವುದು ಸಾಧುವೆನಿಸೀತು ರಾಜನ್?" ರಾಜ ಈ ಉತ್ತರದಿಂದ ಸಂಪೂರ್ಣ ತೃಪ್ತಿ ಹೊಂದಿ ಇನಾಮು ಕೊಟ್ಟ ಎನ್ನುವುದು ಕಥೆ.
ಇಲ್ಲಿ ಬೀರ್ಬಲನ ಸಾಮಾನ್ಯ ಜ್ಞಾನದ ಆಳವನ್ನು ಗಮನಿಸಿ ನೋಡಿ. ಹಾಗೇ ಉಳಿದ ಅಸ್ಥಾನಿಕರು ಹಿಂದೆ ಮುಂದೆ ಯೋಚಿಸದೆ ಅಪರಾಧ,ಶಿಕ್ಷೆ ಎರಡನ್ನೂ ತೀರ್ಮಾನಿಸಿದ ಬಗೆಯನ್ನೂ ನಾವು ಗಮನಿಸಬೇಕು.ಪಕ್ಕದ ಮನೆಯವರ ಮಗ ಗಾಂಜಾ ತೆಗೆದುಕೊಳ್ಳುತ್ತಾನಂತೆ ಎಂಬ ಗಾಳಿ ಸುದ್ದಿ ನಮ್ಮ ಕಿವಿಯನ್ನು ಸೋಕಿದ್ದಷ್ಟೇ ಗೊತ್ತು. ಮಾರನೆ ದಿನದಿಂದಲೇ ನಮ್ಮ ಮಗನ ಮೇಲೆ ಬೇಹುಗಾರಿಕೆ ಶುರುಮಾಡಿ ಬಿಡ್ತೀವಿ. ಇರುವುದೇ ಒಬ್ಬ ಮಗ . ಇಷ್ಟರವರೆಗೆ ಹೇಗೋ ಕಣ್ಣಿಗೆ ಎಣ್ಣೆ ಹಾಕಿದಂತೆ ಕಾಯ್ದು 'ದಾರಿ ತಪ್ಪದಂತೆ' ಬೆಳೆಸಿಯಾಗಿದೆ ಟೀನೇಜ್ ಬೇರೆ(ಮಾಧ್ಯಮಗಳೆಲ್ಲಾ ಗಂಟಲು ಹರಿಯುವಂತೆ ಅರಚಿಕೊಳ್ಳುತ್ತಾ ಇವೆ,ನಶೆಗೆ ಬಲಿಯಾಗುವವರಲ್ಲಿ ಶೇಕಡಾ ಎಪ್ಪತ್ತರಷ್ಟು ಮಂದಿ ಹದಿಹರೆಯದವರು, ಇವರಿಗೆ ಕೊಟ್ಟ ಪಾಕೆಟ್ ಮನಿ ಸೀದಾ ಹೋಗುವುದು ಡ್ರಗ್ಸ್ ಅಡ್ಡೆಗಳಿಗೆ ಇಲ್ಲಾ ಬಾರ್ಗಳಿಗೆ ಇತ್ಯಾದಿ ...). ಅಪ್ಪ ಅಮ್ಮ ಮಗನ ಕಂಬೈನ್ಡ್
ಸ್ಟಡಿಗೆ ಸೊಪ್ಪು ಹಾಕದೆ ತಾವೇ ಸರದಿಯಂತೆ ರಜಾ ಹಾಕಿ ಆತನೊಡನಿದ್ದು ಹತ್ತನೆಯ ತರಗತಿ ಪರೀಕ್ಷೆಗೆ ಓದಿಸಿಯಾಗಿದೆ. ಅತ್ಯುತ್ತಮ ಅಂಕಗಳೂ ಬಂದಿತ್ತಾದುದರಿಂದ ಪ್ರತಿಷ್ಟಿತ ಕಾಲೆಜಲ್ಲೇ ಸೀಟೂ ಸಿಕ್ಕಿದೆ. ಪ್ರವೇಶ ಪರೀಕ್ಷೆಯಲ್ಲಿ ಅತ್ತ್ಯುತ್ತಮ ಸಾಧನೆ ಮಾಡಿ ತಮ್ಮ ಅಪೇಕ್ಷೆಯಂತೆ ಐ.ಐ.ಟಿ. ಯಲ್ಲೇ ಕಲಿಯುತ್ತಲೂ ಇದ್ದಾನೆ. ಯಾರಿಗುಂಟು ಯಾರಿಗಿಲ್ಲ ಇಂತಹ ಭಾಗ್ಯ?
ಅಪರೂಪಕ್ಕೆ ಮಗ ಮನೆಗೆ ಬಂದಿದ್ದಾನೆ. ತನ್ನ ರೂಮಲ್ಲಿ ಕುಳಿತು ಯೂ ಟ್ಯೂಬಲ್ಲಿ ಅದೇನೊ ಫ಼ನ್ನಿ ವಿಡಿಯೋಸ್ ನೋಡ್ತಾ ತನಗೆ ತಾನೇ ನಗುತ್ತಿರುತ್ತಾನೆ. ಅಷ್ಟರಲ್ಲಿ ರೂಮಿಗೆ ಅಪ್ಪನ ಪ್ರವೇಶವಾಗುತ್ತದೆ. ಅಪ್ಪನಿಗೆ ಮಗನಲ್ಲಿ ಏನೋ ಕೇಳೋದಿತ್ತು, ಕೇಳಿದ, ಮಗ ಸಮರ್ಪಕ ಉತ್ತರವೂ ಕೊಟ್ಟ. ಸರಿ, ಇನ್ನು ಅಪ್ಪ ಅಲ್ಲಿಂದ ನಿರ್ಗಮಿಸಬೇಕಲ್ಲವೇ? ಆತ ಹಾಗೆ ಮಾಡದೆ ಮಗ ತನ್ನ ಟ್ಯಾಬಲ್ಲಿ ಏನನ್ನು ನೋಡ್ತಿದ್ದಾನೆ?ಅಷ್ಟು ಖುಷಿಯಾಗಿ ನಗುವಂತಾದ್ದು ಏನಿದೆ? ತನ್ನೊಡನೆ ಮಾತುಗಳನ್ನಾಡುವಾಗ ಭಾವರಹಿತವಾಗಿರುತ್ತಿದ್ದ ಮುಖ ಟ್ಯಾಬೊಳಗೆ ಹೊಕ್ಕೊಡನೆ ಅಷ್ಟು ಅರಳಿದ್ದು ಯಾಕೆ? ಏನೇನೋ ಕೆಟ್ಟ ವಿಚಾರಗಳನ್ನ ಅದರಲ್ಲಿ ನೋಡಿ ಮಗ ಹಾಳಾಗುತ್ತಿದ್ದಾನೆಯೇ? ಇತ್ಯಾದಿ ಅನಗತ್ಯ ಕೆಟ್ಟ ಕುತೂಹಲಗಳ ಸಂತೃಪ್ತಿಗೋಸ್ಕರ ಬಾಗಿ ಮಗನ ಟ್ಯಾಬಿನೊಳಗೆ ಹಣಕಿ ಹಾಕಿದ, ಅಷ್ಟೂ ಸಾಲದೆಂಬಂತೆ ಬುದ್ದನ ಪೋಸ್ ಕೊಟ್ಟು ಉಪದೇಷಾಮೃತ ಹರಿಯಬಿಟ್ಟ,
"ಪುಟ್ಟಾ..,ಏನೋ ಅದು ಇಪ್ಪತ್ತನಾಲ್ಕು ಘಂಟೆನೂ ಇಂಟರ್ನೆಟ್ಟಲ್ಲೇ ಮುಳುಗಿರ್ತಿಯಾ..., ಇವತ್ತಿನ ಪೇಪರು ಓದಿಲ್ವಾ? ದಿನಕ್ಕೆ ಹದಿನಾರು ಗಂಟೆಗೂ ಮೇಲ್ಪಟ್ಟು ಇಂಟರ್ನೆಟ್ ಉಪಯೋಗಿಸುವವರು ಬುದ್ಧಿ ಸ್ಥಿಮಿತ ಕಳಕೊಳ್ತಾರಂತೆ..., ಇಂಟರ್ನೆಟ್ಟಲ್ಲಿ ನಗೋ ಅಂತಾದ್ದು ಏನಿರುತ್ತೆ? ಅದರ ಬದಲು....." ಬೈರಿಗೆ ಅಲ್ಲೇ ತುಂಡಾಯ್ತು. ಯಾಕೆ ಗೊತ್ತಾ? ಎದುರಲ್ಲೇ ಮಹಾ ಸ್ಫೋಟವೊಂದು ಸಂಭವಿಸಿತ್ತು!ಇಷ್ಟು ವರ್ಷ ಬಹಳ ಸಾತ್ವಿಕ, ಮಿತಭಾಷಿ, ವಿಧೇಯ ಎನಿಸಿಕೊಂಡ ಮಗನ ಮನದೊಳಗಣ ಜ್ವಾಲಾಮುಖಿ ಲಾವಾ ಆಗಿ ಹೊರ ಹರಿಯತೊಡಗಿತ್ತು.
"ಅಪ್ಪಾ...,ಪ್ಲೀಸ್..., ಸ್ಟಾಪ್ ಇಟ್..., ನನ್ನನ್ನ ಏನೂಂತ ತಿಳ್ಕೊಂಡ್ರಿ.... ಹಾಂ? ರಿಮೋಟ್ ಕಂಟ್ರೋಲರ್ ಹಿಡಿದು ಟಿ.ವಿ. ಚ್ಯಾನಲ್ ಬದಲಿಸಿದಂತೆ ನಿಮ್ಮ ಟ್ಯೂನಿಗೆ ಬೇಕಾದಂತೆ ಕುಣಿಯೋ ಗೊಂಬೆ ನಾನು ಅಂತ ತಿಳ್ಕೊಂಡ್ರಾ...? ರಜಾದಲ್ಲಿ ನಾಲ್ಕು ಫ್ರೆಂಡ್ಸ್ ಜೊತೆ ಟೂರ್ ಹೋಗ್ತೀನಿ ಅಂದಾಗ ನೀವೇನಂದ್ರಿ...? 'ನಿನ್ನ ಫ್ರೆಂಡ್ಸ್ ಫ್ಯಾಮಿಲಿ ಬಗ್ಗೆ ನಮ್ಗೇನು ಗೊತ್ತೇ ಇಲ್ಲಾ...,ಅವರಿಗೆಲ್ಲ ಏನೇನು ಹ್ಯಾಬಿಟ್ಸ್ಗಳಿವೆಯೋ ಆ ದೇವರೇ ಬಲ್ಲ... ಅಂತವರ ಜೊತೆ ನೀನು ಊರು ಸುತ್ತೋದು ಬ್ಯಾಡ ...' ಹಾಗಾದ್ರೆ ಒಂದು ಲಾಂಗ್ ಡ್ರೈವ್ ಹೊಗ್ಬರ್ತೀನಿ ಅಂದಾಗ ನಿಮ್ಮ ರಿಯಾಕ್ಶನ್ ಏನಾಗಿತ್ತು....? ನಿನ್ನ ಜಾತಕದಲ್ಲಿ ಈಗ ಡ್ರೈವ್ ಮಾಡೋದು ರಿಸ್ಕಿ ಅಂತಿದೆ' ಅಂದ್ರಿ, ಸರಿ..,ಅದ್ಯಾವುದೂ ಬ್ಯಾಡ... ಅಜ್ಜಿಮನೆಗೆ ಹೋಗಿ ಕಸಿನ್ಸ್ ಜೊತೆ ಎಂಜಾಯ್ ಮಾಡಿ ಬರ್ತೀನಿ ಅಂದಾಗ, 'ಅದೆಲ್ಲ ಈಗ ಓಲ್ಡ್ ಫ್ಯಾಷನ್..., ಹಾಗೆಲ್ಲಾ ಇನ್ನೊಬ್ಬರ ಮನೆಯಲ್ಲಿ ಉಳ್ಕೊಳ್ಳೋದು ಡೀಸೆನ್ಸಿ ಅಲ್ಲಾ...' ಅಂದ್ಬಿಟ್ರಿ. ಈಗ ಇಲ್ಲಿ ಬಂದು ನನಗಿರೋ ಈ ಪುಟ್ಟ ಎಂಜಾಯ್ಮೆಂಟಿಗೂ ಕಲ್ಲು ಹಾಕೋಕೆ ನೋಡ್ತಿದ್ದೀರಾ...? ಚಿಕ್ಕಂದಿನಿಂದ ನನ್ನೆಲ್ಲಾ ಆಸೆಗೂ ಕಡಿವಾಣ ಹಾಕಿದ್ರಿ...,ನನ್ನ ಚೈಲ್ಡ್ ಹುಡ್ ಮೆಮೊರೀಸ್ ಅಂದ್ರೆ ಬರೀ ಓದು...ಓದು...ಓದು...,ನೀವು, ಅಮ್ಮ ಇದುವರೆಗೆ ಒಂದೇ ಒಂದು ಸಲ ನನ್ನ ಮನಸ್ಸಲ್ಲೇನಿದೆ ಅನ್ನೋದನ್ನ ತಿಳಿಯೋ ಪ್ರಯತ್ನವನ್ನದ್ರೂ ಮಾಡಿದ್ರಾ...? ಎಲ್ರಿಗೂ ಮೂರ್ನಾಲ್ಕು ಜನ ಕ್ಲೋಸ್ ಫ್ರೆಂಡ್ಸ್ ಇದ್ದಾರೆ. ನನ್ಗೆ ಯಾರಿದ್ದಾರೆ? ಯಾರೂ ಇಲ್ಲ... ಅಕ್ಕ..,ತಂಗಿ...,ಅಣ್ಣ..,ತಮ್ಮ...? ಊಹುಂ... ನನ್ನ ಫೀಲಿಂಗ್ಸಳನ್ನ ಯಾರ ಹತ್ರ ಹೇಳಿಕೊಳ್ಳಲಿ...? ನಾನು ಚಿಕ್ಕದಿರೋವಾಗ ಎಷ್ಟೋ ಸಲ ನಿಮ್ಮನ್ನು ಕೇಳಿದ್ದು ನೆನಪಿದೆ...,'ನಮ್ಮನೆಯಲ್ಲೂ ಒಂದು ಪುಟ್ಟ ಪಾಪು ಬೇಕು' ಎಂದು. ನಿಮ್ಗೆ ನಿಮ್ಮ ಕೆರೀರ್ ಮುಖ್ಯ ಆಯ್ತು ಆಲ್ವಾ ...? ಲಿವಿಂಗ್ ಸ್ಟ್ಯಾಂಡರ್ಡ್ ಹೈ ಇರ್ಬೇಕು..., ಕಲೀಗ್ಸ್ ಮುಂದೆ ಜಂಭ ಕೊಚ್ಚಿಕೊಳ್ಳುವಂತೆ ತಮ್ಮ ಮಗ ಶೈನ್ ಆಗ್ಬೇಕು...,ಸೊಸೈಟಿಯಲ್ಲಿ ತಾವು ವಿ.ಐ.ಪಿ. ಎನಿಸಿಕೊಳ್ಳಬೇಕು.... ಇದೇ ತಾನೇ ನಿಮ್ಮ ಎಂಬಿಶನ್ಸ್...? ನನ್ನ ತಲೆಗೂ ಇದನ್ನೇ ತಾನೇ ನೀವು ತುಂಬಿಸಿದ್ದು? ಜೀವಮಾನವಿಡೀ ಕೂಡಿ ಹಾಕಿದ ದುಡ್ಡನ್ನ ಮುದಿಪ್ರಾಯದಲ್ಲಿ ಕಾಡೋ ರೋಗಗಳಿಗಾಗಿ ಖರ್ಚು ಮಾಡಿ... ಮಾಡಿ... ಸೋತು ಸುಣ್ಣವಾಗಿ ಸಾಯುವುದೇ ಜೀವನವೇನು..? ಆವತ್ತು ಒಂದಿನ ಇಲ್ಲಿ ಬಂದಿದ್ದ ನನ್ನ ಕ್ಲಾಸ್ಮೇಟ್ ಸಂದೀಪ್ ಅಗರ್ವಾಲನನ್ನ ನೋಡಿ ನೀವು ಅಂದಿದ್ದೇನು? 'ಮಿಡ್ಲ್ ಕ್ಲಾಸ್ ಹುಡುಗ..., ಮಿಡ್ಲ್ ಕ್ಲಾಸ್ ಥಿಂಕಿಂಗ್...,ಸಬ್ ಸ್ಟ್ಯಾಂಡರ್ಡ್ ಲಿವಿಂಗ್ ಸ್ಟೈಲ್ ....' ಹೀಗೆ ಎನೇನೊ ಕಾಮೆಂಟ್ಸ್ ಪಾಸ್ ಮಾಡಿದ್ರಲ್ಲಾ..? ಮೊನ್ನೆ ಅವನು ಈ ಕಡೆ ಟೂರ್
ಬಂದಿದ್ದಾಗ ಏನಾಯ್ತು ಗೊತ್ತಾ? ನಿಮ್ಗೆ ಅದನ್ನ ತಿಳ್ಕೊಳೋ ಇಂಟರೆಸ್ಟೆ ಇಲ್ಲ ಅನ್ನೋದು ಗೊತ್ತು. ಆದರೆ ಇವತ್ತು ನಾನೇನೇನು ಹೇಳ್ತೀನೋ ಅದನ್ನ ನೀವು ಕೇಳಿಸಿಕೊಳ್ಳಲೇಬೇಕು..., ಅವನಿದ್ದ ಟ್ಯಾಕ್ಸಿಯ ಎದುರುಗಡೆಯ ವೆಹಿಕಲ್ ಆಯ್ಕ್ಸಿಡೆಂಟ್ ಆಯ್ತು. ಯಾರೂ ಸಹಾಯಕ್ಕೆ ಬಂದೇ ಇರಲಿಲ್ಲ. ಇವನ ಜೊತೆಗಾರರು ಗಾಯಾಳುಗಳನ್ನ ಆಸ್ಪತ್ರೆಗೆ ಸಾಗಿಸಿದ್ರೆ ಇವನು ಢಿಕ್ಕಿ ಹೊಡೆದ ಆ ವೆಹಿಕಲ್ ಡ್ರೈವರನ್ನ ಹಿಡಿದು ಪೋಲಿಸಿಗೆ ಒಪ್ಪಿಸಿ ಕೇಸ್ ಫೈಲ್ ಮಾಡಿದ್ದ. ನಾರ್ತ್ ಇಂಡಿಯಾದ ಹುಡುಗ...,ಮೈಸೂರಿಗೆ ಟೂರ್ ಬಂದವನು..., ಭಾಷೆ ಗೊತ್ತಿಲ್ಲ..., ಊರು ಗೊತ್ತಿಲ್ಲ.., ಪೋಲಿಸ್ ಕೇಸ್, ಅಕ್ಸಿಡೆಂಟುಗಳಲ್ಲಿ ಇನ್ವಾಲ್ವ್ ಆದ್ರೆ ಎಷ್ಟು ರಿಸ್ಕ್ ಇದೆ ಅನ್ನೋದು ಗೊತ್ತಿದ್ದೇ ಅವನು ಇದೆಲ್ಲ ಮಾಡಿದ. ಅವನ ಗಟ್ಟಿತನವನ್ನ ಅಂದಾಜು ಮಾಡಲು ಸಾಧ್ಯವಾ ನಿಮಗೆ...? ಅದು ಬಂದುದು ಎಲ್ಲಿಂದ ಗೊತ್ತಾ ನಿಮಗೆ? ಅವನ ಫ್ಯಾಮಿಲಿಯಲ್ಲಿ ಕಷ್ಟ ಸುಖ ಎರಡೂ ಇತ್ತು. ಅದು ಅವನಿಗೆ ಗೊತ್ತೂ ಇತ್ತು. ಸಂಬಂಧದೊಳಗೆ, ಸಂಬಂಧಿಕರೊಂದಿಗಿನ ಮಾನವೀಯತೆಯ ಅರಿವು ಅವನಿಗೆ ಚೆನ್ನಗಿಯೇ ಇತ್ತು. ಸೋ... ಅವನು ಆ ದಿನ ಎದೆಗುಂದದೆ ಪರಿಸ್ಥಿತಿಯನ್ನ ಹ್ಯಾಂಡಲ್ ಮಾಡಿದ. ಅದೇ ಅವನ ಜಾಗದಲ್ಲಿ ನಾನು ಇರೋದಾಗಿದ್ರೆ ಏನಾಗಬಹುದಿತ್ತು? ಕೂಡಲೇ ನಿಮಗೆ ಕಾಲ್ ಮಾಡಿರುತ್ತಿದ್ದೆ. ನಿಮ್ಮ ರಿಯಾಕ್ಷನ್ ...? 'ನೀನು ಕೂಡಲೇ ಅಲ್ಲಿಂದ ಜಾಗ ಖಾಲಿ ಮಾಡು...,ರಿಸ್ಕ್ ತಗೋಬೇಡ....,ಎಟ್ಸೆಟ್ರಾ.... ಎಟ್ಸೆಟ್ರಾ... ಹೇಳಿರುತ್ತಿದ್ರಿ ಅಲ್ಲವೇ? ಪುಸ್ತಕದ ಹುಳುವಾಗಿ ಹೋಗಿದ್ದ ನಾನು ಅದಕ್ಕಿಂತ ಹೆಚ್ಚಿನದನ್ನು ಮಾಡುವ ದೈರ್ಯ ತೊರಿಸಲಾದರೂ ಸಾಧ್ಯವಿತ್ತೆ? ನೀವು ನನ್ನನ್ನ ನಿಮ್ಮ ಇಗೋ, ನಿಮ್ಮ ಪ್ರೆಸ್ಟಿಜ್ಗಳನ್ನ ಹೈಲೈಟ್ ಮಾಡೋ ಮೀಡಿಯಂ ಆಗಿ ಬಳಸ್ಕೊಂಡ್ರಿ...,ನಿಮ್ಮ ಹಾಗೆ ನಾನೂ ದುಡ್ಡು ಕೂಡಿಡುವ ಕಣಜ ಆಗಬೇಕು ಎಂಬುದು ತಾನೇ ನಿಮ್ಮ ಹೆಬ್ಬಯಕೆ...? ಲೈಫ಼ನ್ನ ಲೈವ್ಲಿಯಾಗಿ ಬದುಕೋದನ್ನ ಕಲಿಸಲೇ
ಇಲ್ಲ...,ಐ ಹೇಟ್ ಯೂ...,ಜಸ್ಟ್ ಹೇಟ್ ಯೂ ..."
ಯೋಚಿಸಿ..., ಹೇಗಾಗಿರಬೇಡ ಆ ಹೆತ್ತವರಿಗೆ? ತಾವು ನಿಂತ ನೆಲ ಎಷ್ಟು ಟೊಳ್ಳು ಎಂಬುದು ಆಗಷ್ಟೇ ಅವರಿಗೆ ಮನವರಿಕೆಯಾಯಿತು! ತಮಗೆ ಬೇಕಾದಂತೆ ರೂಪು ಕೊಟ್ಟು ಬೆಳೆಸಿದ ಮಗ ಕೊನೆ ಕ್ಷಣದಲ್ಲಿ ಎಲ್ಲವನ್ನು ಅಂದರೆ ಎಲ್ಲವನ್ನೂ ಒದ್ದು ಹೋಗಿಬಿಟ್ಟಿದ್ದ. ಅವನ ಹೆಸರಲ್ಲಿ ಜೋಪಾನವಾಗಿರಿಸಿದ್ದ ಲಕ್ಷಾಂತರ ರೂಪಾಯಿಗಳ ಎಫ್.ಡಿ.ಸರ್ಟಿಫಿಕೇಟುಗಳು ಅಪ್ಪ, ಅಮ್ಮನನ್ನು ನೋಡಿ ಪಕಪಕನೆ ನಕ್ಕವು ಎನ್ನುವಲ್ಲಿಗೆ ಘಟನೆಯ ವಿವರಣೆಯನ್ನು ನಿಲ್ಲಿಸುತ್ತೇನೆ.
ಲೈಂಗಿಕ ಶೋಷಣೆ, ದೈಹಿಕ ಶೋಷಣೆ ಎಲ್ಲರಿಗೂ ಗೊತ್ತು. ಭಾವ ಪೀಡನೆ (ಇಮೋಷನಲ್ ಎಬ್ಯೂಸ್) ಎಂಬುದರ ಬಗ್ಗೆ ಇನ್ನೂ ನಮ್ಮಲ್ಲಿ ಅಷ್ಟಾಗಿ ಅರಿವು ಮೂಡಿಲ್ಲ(ಮುಂದೆ ಇದರ ಬಗ್ಗೆ ವಿಸ್ತೃತವಾಗಿ ಬರೆಯುವೆ). ಈ ಮೇಲಿನ ಘಟನೆ ಅದಕ್ಕೊಂದು ಚಿಕ್ಕಉದಾಹರಣೆ ಅಷ್ಟೇ. ಅರಿವಿದ್ದೋ ಇಲ್ಲದೆಯೋ ಹೆತ್ತವರು,ಶಿಕ್ಷಕರು ತಮ್ಮ ಮಕ್ಕಳ ಮೇಲೆ, ವಿದ್ಯಾರ್ಥಿಗಳ ಮೇಲೆ ಮಾನಸಿಕ ಆಧಿಪತ್ಯ ಸ್ಥಾಪಿಸುವ ಭರದಲ್ಲಿ ಅವರ ವ್ಯಕ್ತಿತ್ವವನ್ನೇ ಬಲಿ ತೆಗೆದುಕೊಳ್ಳುತ್ತಾರೆ.ಚಿಕ್ಕಂದಿನಿಂದಲೂ ಮಕ್ಕಳ ಮನಸ್ಸು ಇದನ್ನು ತೀವ್ರವಾಗಿ ಪ್ರತಿಭಟಿಸಿದರೂ ಬೇರೆ ಬೇರೆ ಕಾರಣಗಳಿಂದಾಗಿ ಇದು ಪ್ರಕಟಗೊಳ್ಳಲು ಸಾಧ್ಯವಾಗುವುದಿಲ್ಲ. ಸಾಗರ ಗರ್ಭದೊಳಗಿನ ತೀಕ್ಷ್ಣ ಅಲೆಗಳು ಭೂಮಿಯಲ್ಲಾಗುವ ಕೆಲವು ವಿಶಿಷ್ಟ ಚಲನೆಗಳಿಂದಾಗಿ ಸುನಾಮಿಯಾಗಿ ಹೊರಹೊಮ್ಮುದಿಲ್ಲವೆ? ಹಾಗೆಯೇ ಮಕ್ಕಳು ಪ್ರೌಢ ವಯಸ್ಸಿಗೆ ಬರುವ ಹೊತ್ತಿಗೆ ಅಷ್ಟೂ ವರ್ಷ ಮನದೊಳಗೆ ಮುಚ್ಚಿಟ್ಟ ಅಸಹನೆಯ ಕೆಂಡ ಬಡಬಾಗ್ನಿಯಾಗಿಯಾಗಿ ಹೊರಹೊಮ್ಮಿದಾಗ ನಾವು ಹೆತ್ತವರು ಮರಗಟ್ಟಿ ಹೊಗುತ್ತೇವೆ. ಕೆಲವೊಮ್ಮೆ ಈ ದುಃಖವೇ ನಮ್ಮ ಸಾವಿಗೂ ಕಾರಣವಾದೀತು. ಇದು ಯಾಕೆ ಹೀಗಾಯ್ತು?ಈಗಲಾದರೂ ನಮಗೆ 'ಮಾಡಿದ್ದು ಉಣ್ಣೋ ಮಹಾರಾಯ' ನೆನಪಾಗಲೇಬೇಕು. ಮಕ್ಕಳ ಮನಸ್ಸು ಎಂದಲ್ಲ.ನಮ್ಮ ಜೊತೆಯಲ್ಲಿರುವ ಅಥವಾ ನಮ್ಮ ಸುತ್ತ ಮುತ್ತ ಇರುವವರ ಮನಸ್ಸಿಗೆ ಘಾಸಿಯಾಗುವಂತೆ ನಡೆದುಕೊಳ್ಳುವಾಗ ಒಂದು ವಿಚಾರ ನೆನಪಿಟ್ಟುಕೊಳ್ಳಬೇಕು,'ಅವರ ಜಾಗದಲ್ಲಿ ನಾವಿರುತ್ತಿದ್ದರೆ...?' ಭಾವ ಪೀಡನೆಗೂ ಭಾವ ಪೋಷಣೆಗೂ ಇರುವ ಅಂತರವನ್ನು ನಾವು ಮನಗಂಡಿಲ್ಲವೆಂದಾದರೆ ನಮ್ಮ ನಡುಹರೆಯದಲ್ಲಿ ನಮ್ಮ ಮಕ್ಕಳ ಮೂಲಕ ನಾವದನ್ನು ಬಲವಂತವಾಗಿ
ಕಲಿಯುವಂತಾದೀತು. ಈಗ ಬೀರ್ಬಲನ ಮಾತುಗಳ ಒಳಾರ್ಥವನ್ನು ಗ್ರಹಿಸಲು ಸಾಧ್ಯವಾಗುತ್ತೆ ಅಲ್ಲವೇ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ