ಮಂಗಳವಾರ, ಜೂನ್ 23, 2015

ಡೆಂಗ್ಯೂವೂ.... ರುಬ್ಬು ಗುಂಡುವೂ...

"....ನಾಳೆ ನಿಮ್ಮಲ್ಲಿಗೆ ಬರ್ತಿದ್ದೀವಿ, ಅಲ್ಲಿ ಬಂದ್, ಗಿಂದ್, ಹರತಾಳ ಏನೂ ಇಲ್ಲ ತಾನೇ...?" ಇದು ನಮ್ಮ ಮನೆಗೆ ಬರಲು ಉದ್ದೇಶಿಸುವ ಇಷ್ಟ ಮಿತ್ರ ಬಂಧುಗಳು ಖಾಯಂ ಆಗಿ ಕೇಳುವ ಪ್ರಶ್ನೆ.ಮನೆಗೆ ಬಂದರೂ ಸುಖ,ದುಃಖ ವಿಚಾರಣೆ, ಮಾತು, ನಗು, ತಿಂಡಿ, ಊಟ ಮಾಡಿ ಹೋದರೆ ಸಾಲದೇ? ಊಹೂಂ..., ' ಈ ಊರಲ್ಲಿ ನೀವು ಜೀವಿಸುತ್ತೀರಾದರೂ ಹೇಗೆ?  ವರ್ಷವಿಡೀ ಬರೀ ಗಲಾಟೆಯ ಗೋಳು ..., ಮುನ್ನೂರರುವತ್ತೈದು ದಿನವೂ ಬರೀ ಟೆನ್ಶನ್  .. ಇಲ್ಲಿ ಲೈಫೇ ಇಲ್ಲಾ... ' ಎಂದೆಲ್ಲಾ ಹೇಳಿ ಯಮ ಲೋಕದ ಮೆಟ್ಟಲ ಮೇಲೆಯೇ ನಾವು ನಿಂತಿದ್ದೇವೆ ಎನ್ನುವಂತೆ ನಮ್ಮೆಡೆಗೆ ತೀವ್ರವಾದ ಕನಿಕರದ ನೋಟವೊಂದನ್ನು ಎಸೆಯುತ್ತಾರೆ. ಅಂತಹ ಸಂದರ್ಭಗಳಲ್ಲೆಲ್ಲಾ ನಾನು ಒಂದೋ ನಗುತ್ತೇನೆ ಇಲ್ಲಾ ಅವರ ಬಗ್ಗೆ ಮರುಕ ಪಡುತ್ತೇನೆ. ಪ್ರಾಣ ಇರುವ ಪ್ರಾಣಿಗಳೆಲ್ಲಾ ಅಭ್ಯಾಸದ ಬಲಿಪಶುಗಳೆಂಬ ಸರಳ ಸತ್ಯವೂ ಅವರಿಗೆ ತಿಳಿಯದಾಯಿತೇ...? ಉಪ್ಪಿನ ಕಾಯಿಯ ರುಚಿ   ಸಾಮಾನ್ಯವಾಗಿ ಖಾರ(ಸಿಹಿ ಉಪ್ಪಿನ ಕಾಯಿಯೂ ಇದೆಯಂತೆ!) ಎಂಬ ವಿಚಾರ ಎಲ್ಲರಿಗೂ ತಿಳಿದಿರುವಂತದ್ದೆ. ಅಕಸ್ಮಾತ್ ಅದರಲ್ಲಿ ಹುಳ ಆಯಿತೆಂದಿಟ್ಟುಕೊಳ್ಳಿ. ಅದರಲ್ಲೇ ಹುಟ್ಟಿ ಅಲ್ಲೇ ಜೀವವಿಸುವ ಅವುಗಳು "ಅಯ್ಯೋ..., ಖಾರಾ... ಖಾರಾ...., ಬಾಯುರೀ..., ಕಣ್ಣುರೀ...ದಿನಾಲೂ ಖಾರ ತಿಂದೂ...  ತಿಂದೂ ಹೊಟ್ಟೆ ಸಂಕಟವಾಗ್ತಾ ಇದೆ...,ಹಾಲೋ ...,ಎಂಟ್ಯಾಸಿಡ್ದೋ ಕೊಡ್ರಪ್ಪೋ... " ಎಂದು ಬಾಯಿ ಬಾಯಿ ಬಡಿದುಕೊಳ್ಳುತ್ತವೆಯೇ..? ಇಲ್ವಲ್ಲಾ..., ಹಾಗೇ ನಾವೂ..., ಗಲಾಟೆ, ದೊಂಬಿ, ಸ್ಟ್ರೈಕುಗಳು ನಮ್ಮ ರೊಟೀನು ಆಗಿ ಹೋಗಿವೆ. ಒಂದು ತಿಂಗಳು ಹರತಾಳ ಇಲ್ಲದೇ ಹೋದರೆ ಏನೋ ಇರುಸು ಮುರುಸು, ಗಲಾಟೆಯ ಸುಳಿವೇ ಇಲ್ಲದೆ ಹದಿನೈದು ದಿವಸಗಳಾದರೆ ಸಾಕು ಎಲ್ಲಾ ಲೋಕಲ್ ಪೇಪರುಗಳನ್ನೂ ತರಿಸಿ ಪ್ರತಿ ಕಾಲಮನ್ನೂ ಕೂಲಂಕುಶವಾಗಿ ಓದುತ್ತೇವೆ(ಎಲ್ಲಾದರೂ....  ಏನಾದರೂ...  ಪೆಟ್ಟು- ಗುಟ್ಟು, ಗಲಾಟೆ, ದೊಂಬಿ ಆಗಿದೆಯೇನೋ ಎಂಬ ಕೆಟ್ಟ ಕುತೂಹಲ).
ಇಂತಿಪ್ಪ ನಮ್ಮ ಕಾಸರಗೋಡಿನ ಹೆಸರು ಈಗ ಕೆಲವು ದಿನಗಳಿಂದ ಬೇರೆಯದೇ ಕಾರಣಕ್ಕಾಗಿ ದಿನಪತ್ರಿಕೆಗಳ ಮುಖಪುಟವನ್ನು ಅಲಂಕರಿಸುತ್ತಿದೆ. ಡೆಂಗ್ಯೂ.... ಡೆಂಗ್ಯೂ... ಡೆಂಗ್ಯೂ...., ಓ...  ಅಲ್ಲಿ ಇಬ್ಬರು ತೀವ್ರ ಜ್ವರದಿಂದ ಸತ್ತರಂತೆ..,ಇನ್ನೊಂದು ಕಡೆ ಮನೆಮಂದಿ ಎಲ್ಲರ ಮೇಲೂ ಡೆಂಗ್ಯೂ ದಾಳಿ ಇಟ್ಟು ಸ್ಥಿತಿ ಗಂಭೀರವಂತೆ ...., ಜನರಲ್ ಆಸ್ಪತ್ರೆಯಲ್ಲಿ ರೋಗಿಗಳನ್ನು ಅಡ್ಮಿಟ್ ಮಾಡಿಕೊಳ್ಳಲೂ ಜಾಗವಿಲ್ಲವಂತೆ..., ಔಷಧಿಗಳ ಪೂರೈಕೆ ಸಾಕಷ್ಟಿಲ್ಲವಂತೆ...,ಖಾಸಗಿ ನರ್ಸಿಂಗ್ ಹೋಂ ಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಡೆಂಗ್ಯೂ ರೋಗಿಗಳೇ ಬರುತ್ತಿದ್ದಾರಂತೆ.... ಇತ್ಯಾದಿ ಭಯಂಕರ ಭಯಂಕರ ಸುದ್ದಿಗಳ ಹಾಹಾಕಾರದಲ್ಲಿ ಆರೋಗ್ಯದಲ್ಲಿರುವವರೂ ಕಂಗೆಟ್ಟು 'ಡೆಂಗ್ಯೂ... ಡೆಂಗ್ಯೂ' ಎಂದು ಕನವರಿಸುವಂತಾಯ್ತು. ಸೊಳ್ಳೆ ಬತ್ತಿ, ಓಡೋಮಸ್, ಸೊಳ್ಳೆ ಮ್ಯಾಟ್ ಇತ್ಯಾದಿಗಳೆಲ್ಲವೂ ನಿಧಾನ ವಿಷ ಎನ್ನುವ ಕಾರಣಕ್ಕಾಗಿ ನಾನು ಅವುಗಳನ್ನು ಉಪಯೋಗಿಸಿದವಳೇ ಅಲ್ಲ. ಡೆಂಗ್ಯೂ ಭೂತ ನಮ್ಮೂರನ್ನು ಪ್ರವೇಶಿಸಿದ ಮೇಲೆ ನಾನು ಪೂರ್ತಿ ಬದಲಾಗಿ ಹೋದೆ. ಫೇರ್ & ಲೌಲಿ ರೂಪದರ್ಶಿಯನ್ನೂ ಮೀರಿಸುವಂತೆ ಇಡೀ ಮೈಗೆ ಓಡೋಮಸ್ ಲೇಪನ ಶುರು ಹಚ್ಚಿಕೊಂಡೆ. ಮನೆಯ ಎಲ್ಲಾ ರೂಮುಗಳೂ ಸೊಳ್ಳೆಬತ್ತಿಯ ಬೂದಿ ಗುಡಾಣವಾಯಿತು. ರಾತ್ರಿ ಸೊಳ್ಳೆ ಪರದೆ ಹಾಕಿದರೆ ನಿದ್ದೆ ಬರುತ್ತಿರಲಿಲ್ಲವಾದುದರಿಂದ ಗುಡ್ನೈಟ್ ಲಿಕ಼್ವಿಡ್ ಉಪಯೋಗಿಸತೊಡಗಿದೆ. ನಮ್ಮೂರಿನ ಮಳೆ ಎಂದರೆ ಅದು ನಿಂತೊಡನೆ ಬೆವರ ಧಾರೆ ಇಳಿಯುವಂತಹ ಸೆಖೆ ಅಲ್ಲವೇ? ಅದಾಗ್ಯೂ ಎರಡಿಂಚು ದಪ್ಪದ ರಜಾಯಿಯನ್ನು ಮುಸುಕು ಹಾಕಿ ನಿದ್ದೆಗಿಳಿಯುತ್ತಿದ್ದೆ!(ಡಬಲ್ ಪ್ರೊಟೆಕ್ಷನ್!) ಇಂತಹ ಒಂದು ದಿನ....,
ಬೆಳಗ್ಗೆ ಸುಮಾರು ಹತ್ತು ಘಂಟೆಯಿರಬಹುದು. ಕರೆಘಂಟೆಯ ಸದ್ದಾಯಿತು. ಬಾಗಿಲು ತೆರೆದೆ. ಬಿಗಿಯಾದ ಜೀನ್ಸ್,ಟಕ್  ಮಾಡಿದ ಫಾರ್ಮಲ್ ಶರ್ಟ್ ತೊಟ್ಟ ಇಬ್ಬರು ಕಡ್ಡಿ ಪೈಲ್ವಾನರು ನಿಂತಿದ್ದರು. ತಮ್ಮ ಗುರುತು ಚೀಟಿಯನ್ನು ತೋರಿಸಿದರು.ಅವರು ಜನರಲ್ ಆಸ್ಪತ್ರೆಯಿಂದ ಬಂದ ಜೆ. ಹೆಚ್. ಐ.(ಜೂನಿಯರ್ ಹೆಲ್ತ್ ಇನ್ಸ್ಪೆಕ್ಟರ್) ಗಳಾಗಿದ್ದರು.ಬಂದ ಉದ್ದೇಶವೇನು ಎಂಬಂತೆ ಪ್ರಶ್ನಾರ್ಥಕವಾಗಿ ನೋಡಿದೆ. ಅವರ ಮಾತುಗಳ ಸಾರಾಂಶ ಇಷ್ಟು, ನಮ್ಮ ನೆರೆಕರೆಯ ಮನೆಯೊಂದರಲ್ಲಿ ಡೆಂಗ್ಯೂ ರೋಗಿಯೋಬ್ಬರಿದ್ದಾರಂತೆ. ಆದುದರಿಂದ ಆರೋಗ್ಯ ಇಲಾಖೆಯ ನಿರ್ದೇಶನದಂತೆ ಈ ಪ್ರದೇಶದಲ್ಲಿರುವ ಜನರಿಗೆ ರೋಗದ ಬಗ್ಗೆ ಅರಿವು ಮೂಡಿಸಲು ಮತ್ತು ಮನೆಗಳ ಸುತ್ತ ಮುತ್ತಲಿನ ಸ್ವಚ್ಛತೆಯ ಪರಿಶೀಲನೆಗೆಂದು ಬಂದಿದ್ದರು. ಸರಿ ಎಂದೆ. ಓವರ್ ಹೆಡ್ ಟ್ಯಾಂಕ್, ಬಾವಿಗಳನ್ನು ತೋರಿಸಿದೆ. ಇಲಾಖೆಯಿತ್ತ ಆರೋಗ್ಯಸೂಚಿಗೆ ತಕ್ಕಂತೆ ಎಲ್ಲವೂ ಇದೆ ಎಂಬಂತೆ ಪ್ರತಿಕ್ರಿಯೆ ನೀಡಿದರೂ ಅವರ ಮುಖದಲ್ಲೇನೊ ಅಸಮಾಧಾನ ಇದ್ದಂತೆ ತೋರಿತು (ಇದ್ದರೆ ಇರಲಿ ನನಗೇನಂತೆ?).  ಇನ್ನು ಮನೆಯ ವಟಾರ ತೋರಿಸಬೇಕಲ್ಲ? ಎಲ್ಲೂ ನೀರು ಕಟ್ಟಿ ನಿಂತಿರುವುದು ಕಾಣಿಸಲಿಲ್ಲ.ಅವರ ಹುಬ್ಬುಗಳು ಇನ್ನಷ್ಟು ಗಂಟಾದುವು. ಕಣ್ಣಿಗೆ ದುರ್ಬೀನು ಅಂಟಿಸಿಕೊಂಡವರಂತೆ ಮತ್ತಷ್ಟು ಸೂಕ್ಷ್ಮವಾಗಿ ನೋಡತೊಡಗಿದರು. ಮೂಲೆಯಲ್ಲಿಟ್ಟಿದ್ದ ಭೀಮಗಾತ್ರದ ರುಬ್ಬುವ ಕಲ್ಲಿನ ಮೇಲೆ ಅವರ ದೃಷ್ಟಿ ಬಿತ್ತು. ಈ ರುಬ್ಬುವ ಕಲ್ಲು ನಮ್ಮ ನಿತ್ಯೋಪಯೋಗಿ ವಸ್ತು ಅಲ್ಲವೇ ಅಲ್ಲ. ಮನೆಯಲ್ಲಿ ಪೂಜೆ ಪುನಸ್ಕಾರಗಳೇನಾದರೂ ಇದ್ದರೆ ಅಡುಗೆ ಭಟ್ಟರು ಇದ್ದೇ ಇರುತ್ತಾರಲ್ಲವೇ?ನಮ್ಮಅಡುಗೆ ಭಟ್ಟರು ಹೋಳಿಗೆಯನ್ನು  ತಯಾರಿಸುವುದಿದ್ದರೆ ಬೇಯಿಸಿದ ಕಡ್ಲೆಬೇಳೆಯನ್ನು ಗ್ರೈಂಡರಿಗೋ ಮಿಕ್ಸಿಗೋ ಹಾಕುವುದಿಲ್ಲ. ಅದೇನಿದ್ದರೂ ಹೋಳಿಗೆಯ ಒರಿಜಿನಲ್ ರುಚಿ ಬರಬೇಕಿದ್ದರೆ ರುಬ್ಬುಗುಂಡಲ್ಲೇ ಅರೆಯಬೇಕು ಎಂಬ ಗಟ್ಟಿ ನಂಬಿಕೆ ಅವರದ್ದು. ದೊಡ್ಡ ಕಾರ್ಯಕ್ರಮ ಹಮ್ಮಿಕೊಂಡಮೇಲೆ ಅಡುಗೆ ಭಟ್ಟರನ್ನು ಎದುರು ಹಾಕಿಕೊಳ್ಳಲುಂಟೆ? ಸೋ... ನಮ್ಮ ಮನೆಯ ಹೊರಗೆ ಮಾಡಿನ ನೆರಳಲ್ಲಿ ಈ ರುಬ್ಬುವ ಕಲ್ಲು ಸ್ಥಾಪನೆಯಾಗಿದೆ. ಈ ನಮ್ಮ ಜೆ. ಹೆಚ್. ಐ. ಗಳು ಅದರ ಪಕ್ಕಕ್ಕೆ ಹೋದವರೇ ಕಲ್ಲಿನ ಮೇಲಿದ್ದ ಗುಂಡನ್ನು ಸರಿಸಿದರು. ಗುಂಡು ನಿಲ್ಲುವ ಗುಂಡಿಯೊಳಗಡೆ ಎಲ್ಲೋ ಎರಡು ಮೂರು ಚಮಚೆಯಷ್ಟು ನೀರು ನಿಂತಿತ್ತು( ಜೋರಾಗಿ ಮಳೆ ಬಂದರೆ ಆ ಜಾಗಕ್ಕೆ ಸೀರಣಿ ಎರಚುತ್ತಿತ್ತು). ಆ ನೀರಲ್ಲಿ ಪುಟ್ಟ ಜೀವಿಯೊಂದು ಅತ್ತಿಂದಿತ್ತ ಚಲಿಸುತ್ತಿತ್ತು. ಜೆ.ಹೆಚ್.ಐ. ಗಳ ಮುಖ ಹೂವಿನಂತೆ ಅರಳಿತು. 'ಹುರ್ರೇ...' ಎನ್ನುವ ದಾಟಿಯಲ್ಲಿ 'ಮ್ಯಾಡಂ...' ಎಂದು ಕರೆದರು.
"ಮ್ಯಾಡಂ ..., ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಬೇಕೆಂದು ನಾವು ಆಗಲೇ ಹೇಳಿರಲಿಲ್ಲವೇ? ಪ್ರಿಕಾಶನ್ ಈಸ್ ಬೆಟರ್ ದ್ಯಾನ್ ಕ಼್ಯೂರ್... ಎಂದು ನಿಮಗೂ ನಾವು ಹೇಳಿಕೊಡಬೇಕೇ? ನೋಡಿ ...,ಇದು(ಆ ಜೀವಿ ಇರುವ ಕಡೆ ಕೈತೋರಿಸುತ್ತಾ) ಡೆಂಗ್ಯೂ ಜ್ವರ ಹರಡುವ ಸೊಳ್ಳೆಯ ಲಾರ್ವ...."ಅವರು ಅಷ್ಟು ಹೇಳುತ್ತಲೇ ನನ್ನೆದೆ ಧಸಕ್ಕೆಂದಿತು. 'ರಾಮ.... ರಾಮಾ... ಇಷ್ಟೆಲ್ಲಾ ಮುಂಜಾಗರೂಕತೆ ಮಾಡಿಯೂ ಈ ಪೆಡಂಭೂತ ನನ್ನ ಮನೆಯನ್ನೂ ಹೊಕ್ಕಿತೇ...? ಛೆ...,ಇನ್ನು  ನಾನೂ ಇದರ ಬಲಿ ಪಶುವಾದಂತೆಯೇ ಸೈ ..? ಡೆಂಗ್ಯೂ ಬಂದರೆ ಇಡೀ ಶರೀರದಲ್ಲಿ ನೋವಿನ ಯಮ ಯಾತನೆಯಂತೆ..., ಮೂಗಲ್ಲಿ ಬಾಯಲ್ಲಿ ರಕ್ತ ಸುರಿಯುತ್ತಂತೆ...ಅಡಿಗಡಿಗೆ ವಾಂತಿಯಂತೆ....., ಅಯ್ಯಯ್ಯೋ... ನಾಡಿದ್ದು ಭಾನುವಾರ ನಮ್ಮ ವಾಟ್ಸ್ಯಾಪ್ ಗ್ರೂಪಿನ ಸದಸ್ಯರೋರ್ವಳ ಮಗಳ ಮದುವೆ ಇದೆ... ಈ ರೋಗದೊಂದಿಗೆ ಹೇಗೆ ಹೋಗಲಿ..?  ಮುಂದಿನ ಭಾನುವಾರ ನನ್ನ ಫೇಸ್ ಬುಕ್ ಫ್ರೆಂಡ್ಸ್ಗಳ ಒಂದು ಗುಂಪು ನಮ್ಮಲ್ಲಿಗೆ ಬರುವವರಿದ್ದಾರೆ. ಯಾವ ಬಾಯಲ್ಲಿ ಅವರನ್ನು ಬರಬೇಡಿರೆಂದು ಹೇಳಲಿ... ಅಕಟಕಟಾ .... ಇದೆಂತಹಾ ಸಂಕಟ  ತಂದಿಟ್ಟೆ ಶಿವನೇ ...?'
"ಮ್ಯಾಡಂ ಇಲ್ಲಿ ಸೈನ್ ಮಾಡಿ... ಮ್ಯಾಡಂ..." ಅವರ ಗಟ್ಟಿ ದ್ವನಿಗೆ ಇಹಲೋಕಕ್ಕೆ ಮರಳಿದೆ. 'ಸೈನ್ ಮಾಡಿ' ಎನ್ನುವ ಶಬ್ಧ ಕಿವಿಗೆ ಬೀಳುತ್ತಲೂ ಅಲರ್ಟ್ ಆದೆ. ಬಂದವರಲ್ಲಿ ಓರ್ವ ತೆರೆದ ನೋಟ್ ಪುಸ್ತಕ ಮತ್ತು ಪೆನ್ನನ್ನು ನನ್ನೆಡೆಗೆ ಚಾಚಿದ. ಅಷ್ಟರಲ್ಲೇ ನಾನು ವಾಸ್ತವ ಸ್ಥಿತಿಯನ್ನು ಮನದಲ್ಲೇ ವಿಮರ್ಶಿಸತೊಡಗಿದ್ದೆ. ರುಬ್ಬುಕಲ್ಲಿನ ಗುಂಡಿಯೊಳಗಿದ್ದುದು ಒಂದೇ ಒಂದು ಪುಟ್ಟ ಜೀವ. ಸೊಳ್ಳೆ ಮೊಟ್ಟೆಯಿಡುವಾಗ ಒಂದೇ ಮೊಟ್ಟೆ ಇಡುವುದೇನು? ಅಥವಾ ಉಳಿದೆಲ್ಲಾ ಮೊಟ್ಟೆಗಳು ಜೊಳ್ಳಾಗಿ ಇದೊಂದೇ ಮರಿಯಾಯಿತೇ...? ಸೊಳ್ಳೆಯ ಲಾರ್ವ ಅರೆಕತ್ತಲಿನಲ್ಲಿಯೂ( ರುಬ್ಬು ಕಲ್ಲಿಟ್ಟ ಸ್ಥಳಕ್ಕೆ ಬೆಳಕು ಬೀಳುತ್ತಿರಲಿಲ್ಲ) ಬರಿಕಣ್ಣಿಗೆ ಕಾಣಿಸುವಷ್ಟು ದೊಡ್ದದಿರುತ್ತದೆಯೇ...? ನನ್ನಲ್ಲಿ ಹತ್ತು ಹಲವು ಪ್ರಶ್ನೆಗಳೆದ್ದುವು.
"ಮ್ಯಾಡಂ... ಬೇಗ ಸೈನ್ ಮಾಡಿ... ನಾವು ಇವತ್ತೇ ರಿಪೋರ್ಟ್ ಕೊಡಬೇಕಾಗಿದೆ.."
"ಯಾರಿಗೆ?"
"ನಮ್ಮ ಡಿ.ಎಮ್. ಓ.(district medical officer) ಅವರಿಗೆ. ಈ ರಣ ಬಿಸಿಲಲ್ಲಿ ಸುತ್ತಿ ನಮಗೂ ಸಾಕಾಯ್ತು..."
 ಈಗ ನಾನು ಚುರುಕಾದೆ. ನಮ್ಮ ವಾರ್ಡಲ್ಲಿ ಸುಮಾರು ಮುನ್ನೂರು ಮನೆಗಳಿವೆ. ಡೆಂಗ್ಯೂ ಇರುವ ಮನೆ ಹಾಗೂ ಆಸುಪಾಸಿನ ಮನೆಗಳ ತನಿಖೆ ನಡೆಸಿ'ರೋಗಾಣು ಇರುವ ಪ್ರದೇಶವನ್ನು ಪತ್ತೆ ಹಚ್ಚಲಾಗಿದೆ, ಮುಂದಿನ ಕ್ರಮಕ್ಕೆ ಆದೇಶಿಸಲಾಗಿದೆ... ಉಳಿದಂತೆ ಎಲ್ಲವೂ ಸರಿಯಾಗಿದೆ ...'ಎಂಬ ರಿಪೋರ್ಟ್ ಸಿದ್ಧ ಪಡಿಸಿ ಕೊಟ್ಟು ಬಿಟ್ಟರೆ ಅವರ ಕೆಲಸ ಸುಲಭವಾಯಿತಲ್ಲವೇ?ಎರಡು ದಿವಸಗಳಿಂದ ಮಳೆ ಇಲ್ಲದೆ ಚುರುಗುಟ್ಟುವ ಈ ಬಿಸಿಲಲ್ಲಿ ಎಲ್ಲಾ ಮನೆಗಳಿಗೆ ಹೋಗುವುದೇನು ಅಷ್ಟು ಸುಲಭವೇ? ಇದನ್ನು ಹೀಗೇ ಬಿಡಬಾರದು ಎಂದು ನನಗನ್ನಿಸಿತು. ಅವರ ಕೈಯಿಂದ ಪುಸ್ತಕ ಪೆನ್ನುಗಳನ್ನು ತೆಗೆದುಕೊಂಡು ಕೇಳಿದೆ,
"ಇಲ್ಲಿ ಈಗ ರೋಗಾಣು ಇದೆ ಎಂದಿರಲ್ಲಾ? ಅದಕ್ಕೆ ಪರಿಹಾರ ಏನು?"
 "ನಾವು ರಿಪೋರ್ಟ್ ಕೊಟ್ಟ ಮೇಲೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತಾರೆ. ಆಮೇಲೆ ಆರೋಗ್ಯ ಇಲಾಖೆಯಿಂದ ಇದಕ್ಕೆಂದೇ ನೇಮಕಗೊಂಡವರು ಬರುತ್ತಾರೆ. ಅವರು ಔಷಧಿ ಸಿಂಪಡಿಸಿ ಈ ಲಾರ್ವವನ್ನು ನಾಶಪಡಿಸುತ್ತಾರೆ..."
"ನೋಡಿ ಸಾರ್...,ಸಭೆ,ತೀರ್ಮಾನ ಇವೆಲ್ಲ ಅದರದರ ಪಾಡಿಗೆ ಆಗಲಿ. ಅದಕ್ಕೂ ಮೊದಲು ನಾನು ಈ ಜೀವಿಯನ್ನೊಮ್ಮೆ ಬೆಳಕಿಗೆ ಹಿಡಿದು ನೋಡಬಹುದೇ?" ಎಂದು ಕೇಳಿದೆ.
"ನಿಮ್ಮದೇ ರಿಸ್ಕಲ್ಲಿ ನೋಡಿ.."ಎಂದರು. ಖಾಲಿ ಗೆರಟೆಯೊಂದರಲ್ಲಿ ಆ ಜೀವಿಯನ್ನು ನೀರು ಸಮೇತವಾಗಿ ತೆಗೆದು ಬೆಳಕಿಗೆ ಹಿಡಿದು ಅವರನ್ನು ಬಳಿಗೆ ಕರೆದೆ.ಈಗ 'ಹುರ್ರೇ...' ಎನ್ನುವ ಸರದಿ ನನ್ನದಾಗಿತ್ತು. ಅದು ಅತಿಪುಟ್ಟ ಜಿರಳೆ ಮರಿಯಾಗಿತ್ತು! ಪಾಪ ಜೀವದಾಸೆಗೆ ಒದ್ದಾಡುತ್ತಿತ್ತು! ಇಷ್ಟೊತ್ತೂ ಅರಳಿದಂತಿದ್ದ ಅಧಿಕಾರಿಗಳ ಮುಖ ಪುನಃ ಗಂಟಿಕ್ಕಿತು. ನಾನು ನಗುನಗುತ್ತಲೇ ಹೇಳಿದೆ,
"ಈಗೇನೊ ಅದೃಷ್ಟವಶಾತ್ ಡೆಂಗ್ಯೂ ರೋಗಾಣು ಇದರಲ್ಲಿಲ್ಲ. ಮುಂದೆ ಇದೇ ನೀರಲ್ಲಿ ಸೊಳ್ಳೆ ಆಗಬಹುದಾದ ಸಾಧ್ಯತೆಗಳು ಇವೆಯಲ್ಲವೇ?"
"ಖಂಡಿತಾ ಮ್ಯಾಡಂ..."
"ನೀವೇ ಹೇಳಿದಂತೆ ಪ್ರಿಕಾಶನ್ ಈಸ್ ಬೆಟರ್ ದ್ಯಾನ್ ಕ಼್ಯೂರ್ ಅಲ್ಲವೇ?"
"ಏಕ್ಸ್ಯಾ ಕ್ಟ್ಲೀ.... ಮ್ಯಾಡಂ..., ನಾವು ಎಷ್ಟೋ ಮನೆಗಳಿಗೆ ಹೋಗಿ ಬೈರಿಗೆ ಹಚ್ಚಿದ್ದಕ್ಕೆ ನೀವೊಬ್ಬರಾದರೂ ನಾವು ಹೇಳಿದ್ದನ್ನು ಸರಿಯಾಗಿ ಅರ್ಥ ಮಾಡಿಕೊಂಡಿರಲ್ಲಾ? ಗುಡ್... ಗುಡ್.."
"ಈ ರುಬ್ಬು ಕಲ್ಲನ್ನು ಕವುಚಿ ಹಾಕಿಬಿಟ್ಟರೆ ಒಳ್ಳೆಯದಲ್ಲವೇ?"
" ವಾ....ಟ್?... ಹೌದು ಮ್ಯಾಡಂ..."(ಸ್ವರದಲ್ಲಿ ಮೊದಲಿನ ಗತ್ತು ಇರಲಿಲ್ಲ).
"ಇಲ್ಲಿ ಕೆಲಸದವರ ಅಭಾವ ತುಂಬಾ ಇದೆ.ಈಗ ಯಾರನ್ನು ಬರ ಹೇಳಲಿ? ರುಬ್ಬು ಗುಂಡನ್ನು ಎತ್ತಿ ಕೆಳಕ್ಕಿಟ್ಟು ಬಿಟ್ಟರೆ ಕಲ್ಲನ್ನು ಕವುಚಿ ಹಾಕುವ ಕೆಲಸ ಮಾತ್ರ ಸ್ವಲ್ಪ ಕಷ್ಟ..." ಎನ್ನುತ್ತಾ ನಾನೇ ರುಬ್ಬು ಗುಂಡನ್ನು ಎತ್ತುವವಳಂತೆ ಅದರೆಡೆಗೆ ಬಾಗಿದೆ.(ಕಡಿಮೆ ಎಂದರೂ ಮೂವತ್ತು- ನಲುವತ್ತು ಕೆ. ಜಿ. ಭಾರವಿರಬಹುದಾದ ಆ ಗುಂಡನ್ನು ಎತ್ತಲು ನನಗೇನು ಹುಚ್ಚೇ?)
"ಅಯ್ಯೋ..., ನೀವ್ಯಾಕೆ ಎತ್ತೋಕೆ ಹೋಗ್ತೀರಾ ಮ್ಯಾಡಂ..." ಎನ್ನುತ್ತಾ ಅವರಿಬ್ಬರೂ ಸೇರಿ ಅದನ್ನು ಕಷ್ಟಪಟ್ಟು ಎತ್ತಿ ಪಕ್ಕದಲ್ಲಿರುವ ಗೋಡೆಗಾನಿಸಿ ಇಟ್ಟರು.
"ಇನ್ನು ಈ ಕಲ್ಲನ್ನು ಕವುಚಿ ಹಾಕಿಬಿಟ್ಟರೆ ಸಾವಿರಾರು ಜನರನ್ನು ಡೆಂಗ್ಯೂ ರೋಗದಿಂದ ರಕ್ಷಿಸಿದ ಪುಣ್ಯ ಬರುತ್ತೆ ನಿಮಗೆ" ಎಂದೆ.ಜೇಡ ತಾನು ನೇಯ್ದ ಬಲೆಯಲ್ಲಿ ತಾನೇ ಸಿಕ್ಕಿಬಿದ್ದಿತ್ತು! ಅವರ ಮುಖ ಡೆಂಗ್ಯೂ, ಮಲೇರಿಯ ಎರಡೂ ಒಟ್ಟಿಗೆ ದಾಳಿ ಇಟ್ತಂತಾಯ್ತು. ದೀನರಾಗಿ ನನ್ನೆಡೆಗೆ ನೋಡಿದರು. ನಾನು ರುಬ್ಬುಕಲ್ಲಿನೆಡೆಗೆ ನೋಡಿದೆ. ಅವರ ಪುಸ್ತಕ ಪೆನ್ನುಗಳು ನನ್ನ ಕೈಯ್ಯಲ್ಲಿ ಭದ್ರವಾಗಿತ್ತು.
ನಿತ್ರಾಣ ಸಿಂಗರಿಬ್ಬರೂ ಬಾಗಿ ಎರಡೂ ಕಡೆಯಿಂದ ಕಲ್ಲನ್ನು ಸರಿಸಲು ನೋಡಿದರು. ಊಹೂಂ.... ಒಂದಿನಿತೂ ಅಲ್ಲಾಡಲಿಲ್ಲ. ಈಗ ಅವರಿಗೆ ಮರ್ಯಾದೆ ಪ್ರಶ್ನೆ ಎದುರಾಯಿತೇನೊ? ಯಕಶ್ಚಿತ್ ಓರ್ವ ಹೆಂಗಸಿನೆದುರು ಸೂಲೋಪ್ಪಿಕೊಳ್ಳುವುದೆಂದರೆ ಎಂತಹ ನಾಚಿಕೆಗೇಡು ...? 'ಹೂಂ... ಹೂಂ... 'ಎನ್ನುತ್ತಾ ತುಟಿ ಕಚ್ಚಿ ಪೂರ್ತಿ ಶಕ್ತಿ ಹಾಕಿ ಅದನ್ನು ಸರಿಸಿಯೇ ಬಿಟ್ಟರು. ಹಾಗೇ ಸರಿಸುತ್ತಾ ಸರಿಸುತ್ತಾ ಕಲ್ಲು ವಾಲಿಕೊಂಡು ಧಂ... ಎನ್ನುವ ಶಬ್ದದೊಂದಿಗೆ ಕವುಚಿ ಬೀಳುವಾಗಲೇ 'ಪರಾ...ಕ್' ಎನ್ನುವ ಶಬ್ಧವೂ ಅದಕ್ಕೆ ಹಿಮ್ಮೇಳದಂತೆ ಸೇರಿಕೊಂಡಿತು. ಇದೇನಪ್ಪಾ ಎಂದುಕೊಂಡು ನೋಡಿದರೆ...? ಓರ್ವನ ಜೀನ್ಸಿನ ಹಿಂಬದಿ 'ಢಮಾ...ರ್' ಎಂದಿತ್ತು(ನಾನು ಮೊದಲಲ್ಲಿ ಅವರ ಉಡುಪಿನ ಬಗ್ಗೆ ಬರೆಯುವಾಗ 'ಬಿಗಿಯಾದ' ಎನ್ನುವ ವಿಶೇಷಣ ಯಾಕೆ ಸೇರಿಸಿದೆ ಎಂದು ಈಗ ಅರ್ಥವಾಗಿರಬಹುದಲ್ಲವೇ?). ನಾನು ಫಕ್ಕನೆ ತಿರುಗಿ ನಿಂತು ಕಣ್ಣು ಮುಚ್ಚಿಕೊಂಡೆ. ಅವರ ಅದೃಷ್ಟಕ್ಕೆ ನಮ್ಮ ಮನೆಯಲ್ಲಿ ಪುಟ್ಟ ಮಕ್ಕಳ್ಯಾರೂ ಇರಲಿಲ್ಲ. ಹಾಗಿರುತ್ತಿದ್ದರೆ "ಶೇಮ್... ಶೇಮ್... ಪಪ್ಪಿ ಶೇಮ್.." ಎನ್ನುವ ಸ್ಲೋ.. ಗನ್ನನ್ನೂ ಹೊಡೆಸಿಕೊಳ್ಳಬೇಕಾಗುತ್ತಿತ್ತು.
"ತುಂಬಾ ಥ್ಯಾಂಕ್ಸ್" ಎನ್ನುತ್ತಾ ಆ ಪುಸ್ತಕದಲ್ಲಿ ಅವರು ಬರೆದಿದ್ದಂತಹ 'ಈ ಮನೆ(ನಮ್ಮ ವಾರ್ಡ್ ಮತ್ತು ಮನೆಯ ಸಂಖ್ಯೆಯನ್ನು ಬರೆದಿದ್ದರು) ಯಲ್ಲಿ ಡೆಂಗ್ಯೂ ರೋಗಾಣುವನ್ನು ಗುರುತಿಸಲಾಗಿದೆ 'ಎಂಬ ವಾಕ್ಯದ ಮೇಲೆ ಅಡ್ಡ ಗೆರೆ ಎಳೆದು ಅದನ್ನು ಹಿಂತಿರುಗಿಸಿದೆ. ಜೀನ್ಸ್ ಹಗರಣದವ ತನ್ನ ಹಿಂಬದಿಯನ್ನು ಅಂಗಿಯಲ್ಲಿ ಮುಚ್ಚಲು ಹರಸಾಹಸಪಡುತ್ತಿದ್ದಾಗ ಇನ್ನೊಬ್ಬ ನನ್ನ ಕೈಯಿಂದ ಸರಕ್ಕನೆ ಪುಸ್ತಕವನ್ನು ಇಸಿದುಕೊಂಡ. ದುರ್ದಾನ ತೆಗೆದುಕೊಂಡವರಂತೆ ಗಡಿಗೆ ಗಾತ್ರದ ಮುಖ ಮಾಡಿಕೊಂಡು ಜಾಗ ಖಾಲಿ ಮಾಡಿದರು. 
ಪ್ರಿಯ ಓದುಗ ಮಿತ್ರರೇ.., ನೀವೆಂದಾದರೂ ಈ ಕಡೆ ಬರುವುದಿದ್ದರೆ ನಮ್ಮ ಮನೆಗೂ ಬನ್ನಿ. ಕವುಚಿ ಬಿದ್ದಿರುವ ಆ ರುಬ್ಬುವ ಕಲ್ಲನ್ನು ನೋಡಿ ಮತ್ತೆ 'ಆ ಪ್ರಸಂಗ' ವನ್ನು ಮೆಲುಕು ಹಾಕಿ ಹೊಟ್ಟೆ ತುಂಬಾ ನಗೋಣ. ಆಗದೇ..?
     
                           

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ