ಇನ್ನೊಂದು ಘಟನೆ ...., ಅದೊಂದು ಹೈ ಫೈ ಮದುವೆ ಪಾರ್ಟಿ. ಎಲ್ಲೆಲ್ಲೂ ಶ್ರೀಮಂತಿಕೆ ಎದ್ದು ಕಾಣುತ್ತಿತ್ತು. ನಾವು ಐದು ಮಂದಿ ಜೊತೆಯಲ್ಲಿ ಅಲ್ಲಿಗೆ ಹೋದೆವು. ನಮ್ಮ ಗುಂಪಿನಲ್ಲಿ ಒಬ್ಬರು ಮಾತ್ರ ಸಾದಾ ಪಂಚೆಯುಟ್ಟು ಅರ್ಧ ತೋಳಿನ ಶರ್ಟು ತೊಟ್ಟುಕೊಂಡು ಬಂದಿದ್ದರು.ಉಳಿದ ನಾವು ನಾಲ್ವರೂ ಭರ್ಜರಿ ರೇಶ್ಮೆ , ಚಿನ್ನ, ಮೇಕಪ್ಪು, ಎಂದೆಲ್ಲಾ ಮಿಂಚಿಂಗೋ ಮಿಂಚಿಂಗ್ ಎಂಬಂತ್ತಿದ್ದೆವು. ಇಡೀ ಪಾರ್ಟಿ ಹಾಲಲ್ಲಿ ಪಂಚೆ ಉಟ್ಟವರು ನಮ್ಮ ಬಂಧುವೊಬ್ಬರೇ! ನಾವೂ ವೇದಿಕೆಗೆ ಹೋದೆವು. ವಧೂವರರಿಗೆ ವಿಶ್ ಮಾಡಿದೆವು. ಫೋಟೋಗೆ ನಿಂತೆವು. ವೀಡಿಯೊ ಮತ್ತು ಫೋಟೋಗ್ರಾಫ಼ರುಗಳು ನಮ್ಮ ಸಾಲಿನ ಒಂದು ಮೂಲೆಯಲ್ಲಿ ನಿಂತಿದ್ದ ಪಂಚೆಧಾರಿಯವರನ್ನು ವರನ ಪಕ್ಕದಲ್ಲಿ ನಿಲ್ಲುವಂತೆ ಹೇಳಿದರು. ಅವರಿಬ್ಬರನ್ನೆ ಝೂಮ್ ಮಾಡಿ ಫೋಟೋ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು! ಕೊನೆಗೆ ನಾವು ನಿಂತ ಕರ್ಮಕ್ಕೆ ಎನ್ನುವಂತೆ ನಮ್ಮೆಲ್ಲರದೂ ಫೋಟೋ ತೆಗದರೆನ್ನಿ. ಅದೆಲ್ಲಾ ಮುಗಿದು ಊಟದ ಹಾಲಿಗೆ ಹೋದೆವು. ಬುಫೆ ಊಟ. ಪರಿಚಯದವರೆಲ್ಲ ತಟ್ಟೆ ಹಿಡಿದಿದ್ದಂತೆಯೇ ನಮ್ಮ ಬಳಿಗೆ ಬಂದು ನಮ್ಮ ಪಂಚೆ ಅಣ್ಣನ ಕಡೆಗೆ ನೋಡಿ ತುಸು ತಲೆ ಬಾಗಿ ವಂದಿಸಿ ಗೌರವದಿಂದ ಮಾತನಾಡಿಸಿ ನಮ್ಮನ್ನು ಕಡೆಕಣ್ಣಿನಲ್ಲಿ ನೋಡಿ ನಕ್ಕಂತೆ ಮಾಡಿ ಕಾಟಾಚಾರದ ಒಂದೆರಡು ಮಾತುಗಳನ್ನಾಡಿ ಹೋಗುತ್ತಿದ್ದರು. ಅಂತೂ ಇಡೀ ಕಾರ್ಯಕ್ರಮದಲ್ಲಿ ಅವರು ಮಿಂಚಿಂಗ್ ಮಿಂಚಿಂಗ್ ಆದರೆ ನಾವು ಪಂಚಿಂಗ್ ಪಂಚಿಂಗ್...
ಹಿಂದೆಯೂ ಇಂದೂ ನಮ್ಮ ಎಷ್ಟೆಷ್ಟೋ ಜನ ನಾಯಕರು ಪಂಚೆಯನ್ನುಟ್ಟೇ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಆ ಪಂಚೆಯ ಶುಭ್ರ ಬಿಳಿವರ್ಣದ ಹಿಂದೆ ತಿಕ್ಕಿ ತೊಳೆದು ಹೋಗಲಾಡಿಸಲಸಾಧ್ಯವಾದಷ್ಟು ಕೆಸರು ಮೆತ್ತಿಕೊಂಡಿದೆ.ಆದರೆ ದಿ. ಕಲಾಂ ಅವರು ಪಂಚೆ ಉಟ್ಟಿದ್ದು ಮಾತ್ರ ಅಲ್ಲ ಅವರ ಜೀವನವೂ ಅಷ್ಟೇ ಬಿಳಿ ಬಿಳಿ....ಅದರಂಚಿನ ಜರಿಯಂತೆ ಫಳ ಫಳ..., ಮನಸ್ಸೂ ಅಷ್ಟೇ.... ಒಂದೇ ಒಂದು ಚುಕ್ಕೆಯಿಲ್ಲದ ಮಡಿ ಮಡಿಯಾದ ಪಂಚೆಯಂತೆ. ಆದುದರಿಂದಲೇ ಅವರುಡುವ ಜರಿಯಂಚಿನ ಬಿಳಿ ಪಂಚೆ (ಜರಿಯಂಚು ಇರುವ ಪಂಚೆ ಕೆನೆ ಬಣ್ಣದಲ್ಲಿರುವುದೂ ಇದೆ. ಆದುದರಿಂದ ಬಿಳಿ ಪಂಚೆ ಎಂಬ ಉಪಯೋಗ) ಗೆ ಅಷ್ಟು ಕೀಮತ್ತು. ಮನದಲ್ಲಿ, ಮಾತಲ್ಲಿ, ಕ್ರಿಯೆಯಲ್ಲಿ ಯಾರು ಒಂದೇ ವಿಧವಾಗಿರುತ್ತಾರೋ ಅವರು ಮಹಾತ್ಮರಂತೆ. ಕಲಾಂ ಸರ್ ಅಂತಹವರು. ಅದಕ್ಕೇ ಆ ಹಿರಿಯ ಜೀವ ಕಣ್ಮರೆಯಾದಾಗ ಇಡೀ ವಿಶ್ವವೇ ಎದ್ದು ನಿಂತು ಕಣ್ಣೀರು ಮಿಡಿಯಿತು.
ಅನುಕರಣೆ ಹೊಗಳಿಕೆಯ ಇನ್ನೊಂದು ರೂಪ ಎನ್ನುತ್ತಾರಲ್ಲವೇ? ಈ ಮೇಲೆ ನಾನು ವಿವರಿಸಿದ ಘಟನೆಗಳಲ್ಲಿ ಪಂಚೆ ಉಟ್ಟವರೂ ಇವರಿಂದ ಪ್ರಭಾವಿತರಾದವರೇ ಹೌದು. ಇಂತಹವರ ಸಂತತಿ ಸಾವಿರವಾಗಲಿ. ಸಾವಿರದ(ಸಾವು ಇರದ) ಕಲಾಮರ ಸಂಖ್ಯೆ ನೂರ್ಮಡಿಗೊಳ್ಳಲಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ