ಶುಕ್ರವಾರ, ಏಪ್ರಿಲ್ 1, 2016

ಸೆಖೆಯ ಅಬ್ಬರವೂ ಕೆಮ್ಮಿನ ಉಬ್ಬರವೂ

ಚಾಂದ್ರಮಾನ ಕಾಲಗಣನೆಯ ಪ್ರಕಾರ ಮಾಘ -ಪಾಲ್ಗುಣ ಮಾಸಗಳು ಸೇರಿ ಶಿಶಿರ ಋತು ಉಂಟಾಗಿದೆ. ಅಂದರೆ ಆಂಗ್ಲ ಕ್ಯಾಲೆಂಡರ್ ಪ್ರಕಾರ ಸಾಮಾನ್ಯವಾಗಿ ಜನವರಿ ಮಧ್ಯಭಾಗದಿಂದ ಮಾರ್ಚ್ ಮಧ್ಯದವರೆಗೆ ಎಂದು ಹೇಳಬಹುದು. ಅದು ಚಳಿಗಾಲ. ಅದರ ನಂತರ ಬರುವುದೇ ಋತುಗಳ ರಾಜ ವಸಂತ ಋತು. ಈ ಎರಡೂ ಋತುಗಳೂ ಕವಿಗಳ ಅಚ್ಚು ಮೆಚ್ಚಿನ ಕಾಲ. ವಿರಹ, ಪ್ರೇಮ, ಮಿಲನ ಇತ್ಯಾದಿ ಇತ್ಯಾದಿ ಭಾವನೆಗಳೆಲ್ಲಾ ಉಕ್ಕಿ ಶಬ್ದಗಳ ರೂಪದಲ್ಲಿ ಹಾಡಾಗಿ ಹೊರ ಹರಿಯುವ ಕಾಲ. ಆದರೆ ಇಲ್ಲಿ ಕರಾವಳಿ ಪ್ರದೇಶದಲ್ಲಿ ನಮ್ಮಂತಹ ಸಾಮಾನ್ಯರ ಜೀವನ ಹೇಗಿರುತ್ತದೆ? ಶಿಶಿರ, ವಸಂತ ಎರಡೂ ಒಂದೇ..., ಶರೀರದಿಂದ ಬೆವರು ಉಕ್ಕಿ ಕಡಲಾಗಿ ಹೊರಹರಿಯುವ ಕಾಲ. ವಿರಹ, ಪ್ರೇಮ, ಮಿಲನ...ಎಲ್ಲ ಮಳೆಗಾಲಕ್ಕೆ ಬುಕ್ ಮಾಡಿ ಇಡಬೇಕಾದಂತಹ ಸ್ಥಿತಿ. ಇಂತಿಪ್ಪ ನಮ್ಮ ಊರಿನಲ್ಲಿ ನಾವೂ ಬಳ್ಳಾರಿ ಜನರಂತೆ, `ನಮ್ಮೂರಲ್ಲಿ ಎರಡೇ ಕಾಲ..., ಬೇಸಿಗೆ, ಬಿರು ಬೇಸಿಗೆ...' ಎಂದು ಹೇಳುವ ದಿನಗಳು ದೂರವಿಲ್ಲ.
ಸೆಖೆಯ ದಾಳಿಗೆ ಸೋತು ಸೊಪ್ಪಾಗಿ ಕುಡಿಯಲು ತಂಪು ನೀರು, ಸ್ನಾನಕ್ಕೆ ತಣ್ಣಗಿನ ನೀರು, ತಿನ್ನಲು ಛಳಿ ಛಳಿ ಐಸ್ ಕ್ರೀಂ,ಫ್ರೂಟ್ ಸಲಾಡ್,  ಮಲಗಲು ಒದ್ದೆ ನೆಲ, ಹೀಗೆಲ್ಲಾ ಮಾಡಿಕೊಂಡು ದೇಹಕ್ಕೆ ಜಲ ಮರುಪೂರಣದ ದಾರಿ ಕಂಡುಕೊಂಡೆ. ಈ ಎಲ್ಲದರ ಪರಿಣಾಮವೇನಾಯ್ತು ಗೊತ್ತೇ? ಮೆಲ್ಲ ಮೆಲ್ಲನೆ ಶುರುವಾಯ್ತು ನೋಡಿ ಕೆಮ್ಮು... ಕ್ಯಾರೇ ಎನ್ನಲಿಲ್ಲ ನಾನು. `ಮೊದಲು ತಂಪು ಮಾಡ್ಕೋ.., ಆಮೇಲ್ ಬೇಕಿದ್ರೆ ಕೆಮ್ಕೋ ..(ದುಂಡಿ ರಾಜರ ಕ್ಷಮೆ ಕೋರಿ)' ಎಂದುಕೊಂಡಿದ್ದೇ ತಪ್ಪಾಯ್ತು ಎಂದು ನಂತರ ಅನ್ನಿಸಿ ಏನು ಪ್ರಯೋಜನ? ಖ್ಖ ...,ಖ್ಖ... ಖ್ಖ... ಎಂಬ ಕೆಮ್ಮು ನನ್ನನ್ನಾಳತೊಡಗಿತು. ಇದೇ ಸಮಯದಲ್ಲಿ  ದೂರದಲ್ಲಿರುವ ಮಗಳ ಕರೆ ಬಂತು. ಅವಳ ಎಲ್ಲಾ ಮಾತುಗಳಿಗೂ ನನ್ನ ಪ್ರತಿಕ್ರಿಯೆ ಒಂದೇ,
"ಅಮ್ಮಾ, ನನಗ್ಯಾಕೋ ಇವತ್ತು ನಿನ್ನನ್ನು ತುಂಬಾ ನೆನಪಾಗ್ತಾ ಇದೆ..."
"ಖ್ಖ... ಖ್ಖ... ಖ್ಖ..."
" ಅಮ್ಮಾ , ನೀನು ಇಲ್ಲಿಗೆ ಯಾವಾಗ ಬರ್ತೀಯಾ..?"
"ಖ್ಖ...ಖ್ಖ...ಖ್ಖ..."
"ಅಮ್ಮಾ.., ಯಾಕೆ ಈ ತರ ಕೆಮ್ಮು ..? ಔಷಧಿ ತಗೊಳ್ಲಿಲ್ವಾ..?"
"ಖ್ಖ...ಖ್ಖ... ಖ್ಖ..."
ಹೀಗೆ ನಮ್ಮಿಬ್ಬರ ಸಂಭಾಷಣೆ ಮಮತೆಯ ಮಹಾಪೂರದಲ್ಲಿ ತೇಲಬೇಕಾಗಿದ್ದುದು ಕೆಮ್ಮಿನ  ಪ್ರವಾಹದಲ್ಲಿ ಕೊಚ್ಚಿ ಹೋಯ್ತು.
ಮಾರನೆಯ ದಿನ ನಮ್ಮ ಬಂಧುವೊಬ್ಬರು ಮನೆಗೆ ಬಂದರು. ಕೆಮ್ಮಿನೊಂದಿಗೇ ಅವರನ್ನು ಸ್ವಾಗತಿಸಿದೆ. ಅವರು ಅದು ಇದು ಎಲ್ಲ ಮಾತನಾಡಿದರು. ನನ್ನ ನಗು ಮಾತು ಎಲ್ಲವನ್ನೂ  ಬರಿಯ ಕೆಮ್ಮಿನಲ್ಲೇ ವ್ಯಕ್ತಪಡಿಸಿದೆ! ವಿಚಿತ್ರವಾಗಿ ನನ್ನೆಡೆಗೆ ನೋಡುತ್ತಿದ್ದ ಅವರನ್ನು ಅವರ ಪಾಡಿಗೆ ಬಿಟ್ಟು ಅವರಿಗಾಗಿ ಕಾಫಿ ಮಾಡಲೆಂದು ಒಳಕ್ಕೆ ಹೋದೆ. ಒಂದು ಕೈಯ್ಯಲ್ಲಿ ಸೆರಗನ್ನು ಬಾಯಿಗಡ್ದ ಹಿಡಿದು ಇನ್ನೊಂದು ಕೈಯ್ಯಲ್ಲಿ ಕಾಫಿಯನ್ನು ಹಿಡಿದುಕೊಂಡು ಅವರೆದುರು ನಿಂತೆ. ಬಿಸಿ ಬಿಸಿ ಕಾಫಿ, ಖಸ ಖಸ ಕೆಮ್ಮು, ಉರಿ ಉರಿ ಸೆಖೆ..., ಬಂದವರ ಮುಖ ಹರಳೆಣ್ಣೆ ಕುಡಿದವರಂತಾಯ್ತು.(ಅಸಲಿಗೆ ವಿಷಯವೇನಿತ್ತೆಂದರೆ ಭವಿಷ್ಯದಲ್ಲಿ ಕೆಮ್ಮಿನ ಕಪಿಮುಷ್ಟಿಗೆ ಸಿಲುಕಲೇಬಾರದು ಎಂದು ಧೃಢ ನಿರ್ಧಾರ ಮಾಡಿದ್ದೆ. ಹಾಗಾಗಿ ಫ್ರಿಜ್ಜಿನಲ್ಲಿರುವ ತಣ್ಣಗಿನ ಪಾನೀಯ, ತಿನಸುಗಳನ್ನು ಮಾಡಬಹುದಾದಂತಹ ವಸ್ತುಗಳೆಲ್ಲವನ್ನೂ ಮೂಟೆಕಟ್ಟಿ ಹೊರಕ್ಕೆಸೆದಿದ್ದೆ. ಸದ್ಯ..! ಫ್ರಿಜ್ಜೊಂದು ನನ್ನ ಕಣ್ಣಿಗೆ ಕಿಸುರಾಗಿ ಅಲ್ಲೇ ಉಳಿದಿತ್ತು). ನಮ್ಮ ಅತಿಥಿ ಇನ್ನೇನು ನನ್ನ ಕೈಯಿಂದ ಕಾಫಿ ತೆಗೆದುಕೊಳ್ಳಬೇಕು ಎನ್ನುವಾಗ ಅದೆಲ್ಲಿತ್ತೋ ...,  ಸಮುದ್ರದೊಳಗಿನ ಸುನಾಮಿಯಂತೆ ಒಮ್ಮೆಲೇ ನನ್ನೊಳಗಿಂದ ಉಕ್ಕಿ ಸೊಕ್ಕಿ ಕೊಬ್ಬಿ ಹೊರಹರಿಯಿತು, ಖ್ಖ...,ಖ್ಖ...,ಖ್ಖ..., ನನ್ನ ಕೆಮ್ಮಿನ ವಿಶ್ವರೂಪ ದರ್ಶನವಾದ ಸಾರ್ಥಕತೆಯಲ್ಲಿ ಅವರು ಕುಳಿತಲ್ಲಿಂದ ಎದ್ದೇ ಬಿಟ್ಟರು. ಅವರ ಬಿಳಿ ಪಂಚೆಯಲ್ಲಿ ಕಾಫಿಯ ಕಡು ಕಂದು  ಬಣ್ಣದ ಆಫ್ರಿಕಾ ಭೂಖಂಡದ ರಚನೆಯಾಗಿ ಹೋಗಿತ್ತು.  ಮುಖವಾದರೋ..? ಆಫ್ರಿಕಾ ಖಂಡದ ಜನರಂತಾಗಿತ್ತು.
`ಅಯ್ಯೋ .., ದೇವರೇ.., ಇದೇನಾಗಿ ಹೋಯ್ತು..?' ಎಂದುಕೊಂಡ ನಾನು,
"ಕ್ಷ..., ಖ್ಖ...,ಮಿ...ಖ್ಖ....ಸಿ..,(ಕ್ಷಮಿಸಿ ಎನ್ನುವ ಪದ ಕೆಮ್ಮಿನೊಂದಿಗೆ ಜುಗಲ್ಬಂದಿ ಹಾಡಿದಾಗ ಹಾಗಾಯ್ತು), ಬೇ..ರೆ ... ಕಾ...ಫಿ..." ಎಂದು ನಾನು ಹೇಳಲು ಪ್ರಯತ್ನಿಸುತ್ತಿರುವುದನ್ನು ನೋಡಿಯೇ ಅವರು ಬಿಳಿಚಿ ಹೋದರು.( ಅಲ್ಲವೇ ಮತ್ತೆ? ಬಿಸಿ ಕಾಫಿ  ಬಿದ್ದ ಜಾಗ ಸುಟ್ಟದ್ದೂ ಅಲ್ಲದೆ ದುಬಾರಿ ಪಂಚೆ ಹಾಳಾಗಿಯೂ ಹೋಯ್ತು. ಪುನಃ ನನ್ನ ಕೈಯಿಂದ ಕಾಫಿ  ತೆಗೆದುಕೊಳ್ಳಲು ಅವರೇನು ಹುಚ್ಚರೇ)
"ಬೇಡಮ್ಮಾ.., ಬೇಡ..., ನೀನು ರೆಸ್ಟು ತಗೋ.., ನನಗೆ ಸಿಟಿಗೆ ಹೋಗೊ ಕೆಲಸ ಇದೆ...ಬರ್ತೀನಿ..." ಎನ್ನುತ್ತಾ ಹೊರಟೇ ಬಿಟ್ಟರು.
`ಛೆ... ಈ ಪಂಚೆಯನ್ನುಟ್ಟುಕೊಂಡು ಇವರು  ಸಿಟಿಗೆ ಹೋಗೋದೇ...? ಈಗ ನಾನೇನು ಮಾಡಲಿ...?' ಏನಾದರೂ  ಹೇಳೋಣ ಎಂದುಕೊಂಡರೆ ಕೆಮ್ಮು...,ಛೆ... ಛೆ...ಎಂದು  ಕೈ ಕೈ ಹಿಸುಕಿಕೊಳ್ಳುತ್ತಿರುವಾಗಲೇ ಪಕ್ಕದ ಮನೆಯ ನನ್ನ ಸ್ನೇಹಿತೆ ದೇವರಂತೆ  ಅದೇನೋ ಕಾರ್ಯ ನಿಮಿತ್ತ  ನಮ್ಮಲ್ಲಿಗೆ ಬಂದರು. ನನ್ನ ಸ್ಥಿತಿಯನ್ನು ಅರ್ಥೈಸಿಕೊಂಡ ಅವರು ನಮ್ಮ ಅತಿಥಿಯನ್ನು ಚೆನ್ನಾಗಿ ಉಪಚರಿಸಿ ಒಗೆದ ಪಂಚೆಯನ್ನು ಉಡುವಂತೆ ಮಾಡಿ ಕಳಿಸಿಕೊಟ್ಟರು. ಅವರು ಹೋಗುವಾಗ ಇವರೊಡನೆ,
"ನಿಮ್ಮ ಸ್ನೇಹಿತೆ ಇಷ್ಟು ವಿದ್ಯಾವಂತೆಯಾಗಿ ಆರೋಗ್ಯವನ್ನು ಹೀಗಾ ಕಡೆಗಣಿಸೋದು? ಇಂತವರ ಮನೆಗೆ ಬರೋದೂ ರಿಸ್ಕೇ...ಯಾವ ರೋಗವೋ...ಏನು ಕರ್ಮವೋ... ನೀವೂ ಸ್ವಲ್ಪ ಹುಷಾರಾಗಿರಿ..." ಎಂದರಂತೆ!
ಮನೆಮದ್ದು, ಆಯುರ್ವೇದ, ಅಲೋಪತಿ, ಹೋಮಿಯೋಪತಿಗಳೆಲ್ಲವೂ ನನ್ನ ಕೆಮ್ಮನ್ನು ಮುಟ್ಟಿ ತಟ್ಟಿ ನೇವರಿಸಿ ಹೋದುವು. ನಾನು ಮಾತ್ರ ನರಳೋಪತಿಯಾಗಿಯೇ ಉಳಿದೆ.
ಹೀಗೇ ಕೆಮ್ಮಿನ ಸಂಗಾತಿಯಾಗಿ ಜೀವನ ಸಾಗುತ್ತಿರಲು ನನ್ನ ಬಾಲ್ಯದ ಗೆಳತಿ ಎಷ್ಟೋ ವರ್ಷಗಳ ನಂತರ ನಮ್ಮ ಮನೆಗೆ ಬಂದಳು. ಫೋನಿನಲ್ಲಿ ನನ್ನ ಕೆಮ್ಮೇರಾಗವನ್ನು ಕೇಳಿ ಆತಂಕಿತಳಾಗಿಯೇ ಬಂದಿದ್ದಳು. ಹಲವು ಮನೆಮದ್ದುಗಳನ್ನು ಹೇಳಿದಳು. ಎಲ್ಲವೂ ಆಗಿದೆ ಎಂದೆ. ಕೆಲವಾರು ಡಾಕ್ಟರುಗಳ ಹೆಸರನ್ನು ಸಜೆಸ್ಟ್ ಮಾಡಿದಳು. ಅದೂ ಆಗಿದೆ ಎಂದೆ. ಇದು ಹೋಪ್ಲೆಸ್ ಕೇಸು ಎಂದರಿತ ಅವಳು ಲೋಕಾಭಿರಾಮ ಮಾತನಾಡತೊಡಗಿದಳು. ನಮ್ಮಿಬ್ಬರ ಮಾತುಗಳನ್ನೂ ಅವಳೊಬ್ಬಳೇ ಆಡಿ ಮುಗಿಸಿದಳು. ಅವಳೊಡನೆ ಮನಸೋ ಇಚ್ಛೆ ಮಾತನಾಡಲು ಹೇಗೂ ಸಾಧ್ಯವಾಗಿಲ್ಲ. ಬೀಳ್ಕೊಡಲಾದರೂ ಹೋಗೋಣವೆಂದು ಬಸ್ಟಾಪುವರೆಗೆ ಅವಳ ಜೊತೆಯಲ್ಲೇ ಹೆಜ್ಜೆ ಹಾಕಿದೆ. ಅಲ್ಲಿ ಮರದ ನೆರಳಿನಲ್ಲಿ ಕಂಡ ಆ ದೃಶ್ಯ ನಮ್ಮ ಕಣ್ಮನಗಳನ್ನು ತಣಿಸಿತು. ಅದೇನು ಗೊತ್ತೇ? ಬಾಲಕನೊಬ್ಬ ಐಸ್ ಕ್ಯಾಂಡಿ ಪಟ್ಟಿಗೆಯನ್ನಿಟ್ಟುಕೊಂಡು ಕಲ್ಲೊಂದರ ಮೇಲೆ ಕುಳಿತಿದ್ದ!  ನಾವು ಚಿಕ್ಕವರಿದ್ದಾಗ ನಮ್ಮ ಶಾಲೆಯ ಅಕ್ಕಪಕ್ಕದಲ್ಲಿ ಕಾಣುತ್ತಿದ್ದ ಸಾಮಾನ್ಯ ದೃಶ್ಯವಾಗಿತ್ತದು. ಎಷ್ಟೋ ದಶಕಗಳ ನಂತರ ಈಗ ಪುನಃ ಆ ದೃಶ್ಯವನ್ನು ನೋಡುತ್ತಿದ್ದೇವೆ! ಅದೂ ಜೊತೆಯಾಗಿ.`ಬಾಲ್ಯದ ಆಟ...,ಆ ಹುಡುಗಾಟ...' ನೆನಪಾಗಿ ಮನಸ್ಸು ಮತ್ತೆ ಬಾಲ್ಯಕ್ಕೆ ಮರಳಲು ಹವಣಿಸಿತು.
"ಏ ಕೆಮ್ಮು ರಾಣಿ.., ಐಸ್ ಕ್ಯಾಂಡಿ ತಿನ್ನೋಣ್ವಾ...?" ಗೆಳತಿ ಕೇಳಿದಳು. ಎಷ್ಟೋ ಕಾಲದ ನಂತರ ಭೇಟಿಯಾದ ಜೀವದ ಗೆಳತಿ ಕೇಳುತ್ತಿದ್ದಾಳೆ...., ಅದೂ ಅಲ್ಲದೆ ನಾವಿಬ್ಬರೂ ಲೆಕ್ಕವಿಲ್ಲದಷ್ಟು ಸಲ ಜೊತೆಜೊತೆಯಾಗಿ ಸವಿದ ಆ ಕ್ಯಾಂಡಿಯ ತಣ್ಣಗಿನ ಸ್ವರ್ಗ ಸುಖದ ಪುನರಾವರ್ತನೆಗಾಗಿ..., ಕೆಮ್ಮು, ಶಪಥ, ಔಷಧಿ ಎಲ್ಲವೂ ಆ ಕ್ಷಣದಲ್ಲಿ ನನ್ನ ಮನಸ್ಸಿನಿಂದ ಮರೆಯಾಗಿ ಹೋಯ್ತು. ಐಸ್ ಕ್ಯಾಂಡಿಯೇ ಸರ್ವಸ್ವವೂ ಸರ್ವಮಯವೂ ಆಗಿ ಹೋಯ್ತು.
ನಮ್ಮೊಳಗಿನ ಬಾಲ್ಯ ಮತ್ತೆ ಚಿಗುರಿತು. ಅವಳು ಕಡುಕೆಂಪು ಬಣ್ಣದ ಕ್ಯಾಂಡಿಯನ್ನು ಆಯ್ದುಕೊಂಡರೆ ನಾನು ಗುಲಾಬಿ ಬಣ್ಣದ್ದನ್ನು ಆರಿಸಿದೆ. ನೆಕ್ಕಿ ನೆಕ್ಕಿ ತಿನ್ನುತ್ತಾ ಹಳತನ್ನು ನೆನಪಿಸಿಕೊಂಡು ನಕ್ಕು ನಕ್ಕು ಸುಸ್ತಾದೆವು. ನಮಗೆ ಸುತ್ತಲಿನ ಪರಿವೆಯೇ ಇರಲಿಲ್ಲ. ಮತ್ತೆ ಎರಡೆರಡು ಕೊಂಡು ತಿಂದೆವು. ಮನೆಯೊಳಗಿನ ಬಿಸಿ ಕೆಂಡದಂತಹ ವಾತಾವರಣಕ್ಕಿಂತ ತಣ್ಣಗಿನ ಗಾಳಿ ಬೀಸುವ ಮರದ ನೆರಳು ಬಹಳ ಹಿತವಾಗಿತ್ತು. ಮತ್ತೂ ಒಂದರ್ಧ ಘಂಟೆ ಹೊತ್ತು ಅಲ್ಲೇ ಕುಳಿತು ಪಟ್ಟಾಂಗ ಹೊಡೆದೆವು.
ಓಹ್ ...!! ಫಕ್ಕನೆ ನನಗೇನೋ ನೆನಪಾಯ್ತು. ಏನದು...? ಏನು...? ಐಸ್ ಕ್ಯಾಂಡಿ ಸೇವನೆಯ ನಂತರ ನಾನು ಕೆಮ್ಮಿರಲೇ ಇಲ್ಲ! ಇಲ್ಲ..., ನಿಜಕ್ಕೂ ಇಲ್ಲವೇ ಇಲ್ಲ? ಎಲ್ಲಿ ಹೋಯ್ತು ಆ ಪೆಡಂಭೂತ? ನಿಜಕ್ಕೂ ಮಾಯವೇ ಆಗಿ ಹೋಯ್ತಲ್ಲ? ಓ..., ಐಸ್ ಕ್ಯಾಂಡಿ ಅನ್ವೇಶಕಾ..., ನಿನಗೆ ಕೋಟಿ ಪ್ರಣಾಮಗಳು..., ಕ್ಯಾಂಡಿಯ ಕಡ್ಡಿಯನ್ನು ಹಲ್ಲುಗಳ ಮಧ್ಯೆ ಕಚ್ಚಿ ಹಿಡಿದು ಆಗಸದತ್ತ ಮುಖ ಮಾಡಿ ನಾನು ಎರಡೂ ಕೈಗಳನ್ನೆತ್ತಿ ಮುಗಿಯುತ್ತಿರುವುದನ್ನುಒಂತರಾ ದೃಷ್ಟಿಯಿಂದ ನೋಡಿದ  ನನ್ನ ಗೆಳತಿ ಫ಼ೋನು ತೆಗೆದು ಎಲ್ಲಿಗೋ ಡಯಲ್ ಮಾಡು (ಹುಚ್ಚಾಸ್ಪತ್ರೆಗೆ?) ತ್ತಿರುವುದನ್ನು ನೋಡಿ ಅವಳನ್ನು ತಡೆದು ಸೀರಿಯಸ್ಸಾಗಿ ಈ ಸಂತೋಷದ ವಿಷಯವನ್ನು ಹೇಳಿದೆ.
"ಹೌದು ಮತ್ತೇ..., ಹುಚ್ಚಲ್ಲವೇ ನಿನ್ಗೆ? ಕೆಮ್ಮು ಶರುವಾದಾಗಲೇ ನಾಲ್ಕು ಐಸ್ ಕ್ಯಾಂಡಿ ತಿನ್ನೋದು ಬಿಟ್ಟು ದೊಡ್ಡ ಮನುಷ್ಯಳ ಹಾಗೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಸುತ್ತಿದೆಯಲ್ಲಾ..? ಈಗಲಾದರೂ ಬುದ್ಧಿ ಬಂತಾ..?" ಎಂದು ಕೇಳಿದಳು.
ಅವಳಿಗೆ ಉತ್ತರ ಹೇಳುವ ಗೋಜಿಗೆ ಹೋಗದೆ ಫ್ರಿಜ್ಜಲ್ಲಿಟ್ಟು ತಿನ್ನಲೆಂದು ಇನ್ನೊಂದಷ್ಟು ಐಸ್ ಕ್ಯಾಂಡಿಗಳನ್ನು ಆ ಹುಡುಗನಿಂದ ಕಟ್ಟಿಸಿಕೊಂಡೆ.
ಪ್ರಿಯ ಓದುಗ ಮಿತ್ರರೇ, ಹೇಗಿದೆ ಈ ಕಥೆ? ಅಂದ ಹಾಗೆ ಇವತ್ತು ಏಪ್ರಿಲ್ ಒಂದನೇ ತಾರೀಕು. ನೆನಪಿದ್ಯಾ? 'ಖ..ಖ..ಖ' ಈ ಮೂರು 'ಖ' ಗಳು ಸೇರಿದಾಗ ಏನಾಯ್ತು? 'ಮೂರ್ಖ' .... ಹ್ಹ... ಹ್ಹ...ಹ್ಹ.   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ