ಎಪ್ಪತ್ತರ ದಶಕ. ನಾನಾಗ ಪದವಿಪೂರ್ವ ಶಿಕ್ಷಣದ ಮೊದಲ ವರ್ಷದ ವಿದ್ಯಾರ್ಥಿನಿ. ನಮ್ಮ ಕಾಲೇಜಿನಲ್ಲಿದ್ದ ಕಾಸರಗೋಡು ಕನ್ನಡ ವಿದ್ಯಾರ್ಥಿ ಸಂಘ (ಕೆ.ಕೆ.ವಿ.ಎಸ್ಸ್) ಅತ್ಯಂತ ಚಟುವಟಿಕೆಯಲ್ಲಿದ್ದ ಕಾಲ. ಆ ವರ್ಷದ ಕಾಲೇಜು ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಕಾರಂತಜ್ಜ(ದಿ. ಡಾ. ಶಿವರಾಮ ಕಾರಂತ) ಅವರನ್ನು ಕರೆಸಬೇಕೆಂದು ಕೆ.ಕೆ.ವಿ.ಎಸ್ಸ್. ಶತ ಪ್ರಯತ್ನ ಮಾಡಿ ಯಶಸ್ವಿಯೂ ಆಗಿತ್ತು. ನಾನು ಹೈಸ್ಕೂಲಿನಲ್ಲಿದ್ದಾಗ ಯಾವುದೋ ಒಂದು ಸ್ಫರ್ಧೆಗೆ ಬಹುಮಾನವಾಗಿ ಕಾರಂತರ `ಮರಳಿ ಮಣ್ಣಿಗೆ' ಕಾದಂಬರಿ ದೊರೆತಿತ್ತು. ಅದನ್ನು ಓದಿದ ನಾನು ಅವರ ಅಭಿಮಾನಿಯಾಗಿ ನಂತರದ ಓದಿನಿಂದಾಗಿ ಅವರ ಭಕ್ತೆಯೇ ಆಗಿ ಹೋಗಿದ್ದೆ. ಈಗ ಅಂತರ್ಜಾಲಕ್ಕೆ ಹೋಗಿ ಹೆಸರು ಟೈಪಿಸಿ ಕ್ಲಿಕ್ಕಿಸಿದ ಕೂಡಲೇ ಸಂಬಂಧಪಟ್ಟ ವಿಷಯ ಅಥವಾ ವ್ಯಕ್ತಿಯ ಪೂರ್ತಿ ಜಾತಕವೇ ಪರದೆಯ ಮೇಲೆ ಬಂದಿರುತ್ತದೆ. ಅಂದಿನ ದಿನಗಳಲ್ಲಿ ಈ ಭಾಗ್ಯ ಎಲ್ಲಿತ್ತು? ಬಾಯಿಂದ ಬಾಯಿಗೆ, ಕಿವಿಯಿಂದ ಕಿವಿಗೆ, ಅಥವಾ ಇನ್ಯಾವುದೋ ಪುಸ್ತಕ ಓದಿಯೋ ಹತ್ತಿರವೆಲ್ಲಾದರೂ ಗ್ರಂಥಾಲಯವಿದ್ದರೆ..., ಅಲ್ಲಿ ಸದಸ್ಯತ್ವವಿದ್ದರೆ.... ಹೀಗೆ ಹಲವಾರು ಮೂಲಗಳಿಂದ ವಿಷಯಗಳನ್ನು ಸಂಗ್ರಹಿಸಬೇಕಿತ್ತು. ಕಾರಂತಜ್ಜರ ಕುರಿತಾಗಿಯೂ ನಾನು `ತುಂಬಾ' ತಿಳಿದುಕೊಂಡಿದ್ದೇನೆ ಎಂಬುದು ನನ್ನ ಅನಿಸಿಕೆಯಾಗಿತ್ತು. ಜೀವಮಾನದಲ್ಲಿ ಒಮ್ಮೆಯಾದರೂ ಅವರನ್ನು ಮುಖತಃ ಭೇಟಿಯಾಗಬೇಕೆನ್ನುವುದು ನನ್ನ ಕನಸಾಗಿತ್ತು. ನಮ್ಮ ಕಾಲೇಜು ವಾರ್ಷಿಕೋತ್ಸವಕ್ಕೆ ಅವರು ಬರುವವರಿದ್ದಾರೆ ಎಂದು ತಿಳಿದು ಬಹಳ ಖುಷಿಯಾಗಿದ್ದೆ. ಆಗ ನಮ್ಮ ಕನ್ನಡ ವಿಭಾಗದಲ್ಲಿ ಡಾ. ಪ್ರೊ. ಉಪ್ಪಂಗಳ ಶಂಕರನಾರಾಯಣ ಭಟ್ಟರು ಸೇವೆ ಸಲ್ಲಿಸುತ್ತಿದ್ದರು. ನಮ್ಮ ಕುಟುಂಬ ಸಂಬಂಧಿಯೂ ಆತ್ಮೀಯರೂ ಆದ ಅವರ ಬಳಿ ಕಾರಂತರ ಭೇಟಿಗೆ ಅವಕಾಶ ಮಾಡಿಕೊಡಲು ಸಾಧ್ಯವೇ ಎಂದು ಕೇಳಿದೆ. ಸಂತಸದಿಂದ ಒಪ್ಪಿಕೊಂಡರು. ನನ್ನ ಗೆಳತಿಯೂ ನನ್ನಂತೆ ಕಾರಂತರ ಭಕ್ತಳೇ. ವಾರ್ಷಿಕೋತ್ಸವದ ದಿನವೂ ಬಂತು. ನಾವಿಬ್ಬರೂ ಆ ಭೇಟಿಗಾಗಿ ತುದಿಗಾಲಲ್ಲಿ ನಿಂತಿದ್ದೆವು.
ಶುಭ್ರ ಶ್ವೇತ ಕಚ್ಚೆ ಪಂಚೆ, ಜುಬ್ಬಾ, ಅದೇ ಬಣ್ಣದ ಕೂದಲನ್ನು ನೀಟಾಗಿ ಹಿಂದಕ್ಕೆ ಬಾಚಿದ್ದರು, ಗಂಭೀರ ಮುಖಭಾವದ ಕಾರಂತರು ನಡೆದು ಬರುತ್ತಿದ್ದರೆ ಅವರನ್ನು ಕಂಡಾಗ ನಮ್ಮಲ್ಲಿ ಭಯ ಮಿಶ್ರಿತ ಭಕ್ತಿಭಾವ. ಕಾರ್ಯಕ್ರಮ ಪ್ರಾರಂಭವಾಗಲು ಇನ್ನೂ ಅರ್ಧ ಘಂಟೆ ಸಮಯ ಇತ್ತಾದುದರಿಂದ ಸಂಘಟಕರು ಅವರನ್ನು ಪ್ರಿನ್ಸಿಪಾಲರ ಚೇಂಬರಿಗೆ ಕರೆದೊಯ್ದು ಕುಳ್ಳಿರಿಸಿದರು. ಪ್ರೊ. ಶಂಕರನಾರಾಯಣ ಭಟ್ಟರು ನಮ್ಮನ್ನು ಕರೆದು ಈಗ ಕಾರಂತರ ಭೇಟಿಗೆ ಸುಸಮಯ ಎಂದು ಸೂಚನೆಯಿತ್ತರು. ಒಂದು ಕೈಯ್ಯಲ್ಲಿ ಪೆನ್ನು, ಹಸ್ತಾಕ್ಷರ ಪುಸ್ತಕ (autograph book) ಇನ್ನೊಂದು ಕೈಯ್ಯಲ್ಲಿ ಗುಲಾಬಿ ಗುಚ್ಛದೊಂದಿಗೆ ಗೆಳತಿಯನ್ನೂ ಕೂಡಿಕೊಂಡು ಡವಗುಟ್ಟುವ ಎದೆಯೊಂದಿಗೆ ಪ್ರಿನ್ಸಿಯವರ ಚೇಂಬರನ್ನು ಪ್ರವೇಶಿಸಿದೆ. ಬಾಗಿಲಿಗೆ ಬೆನ್ನು ಮಾಡಿ ಕುಳಿತಿದ್ದ ಅವರು ಯಾವುದೋ ಪುಸ್ತಕವೊಂದನ್ನು ತಿರುವಿ ಹಾಕುತ್ತಿದ್ದರು. ನಮ್ಮ ಅದೃಷ್ಟಕ್ಕೆ ಅಲ್ಲಿ ಬೇರಾರೂ ಇರಲಿಲ್ಲ. ಅವರು ಬಹಳ ಸೂಕ್ಷ್ಮ ಗ್ರಾಹಿಯಾಗಿದ್ದಿರಲ್ಲ? ನಮ್ಮ ಬೆಕ್ಕಿನ ಹೆಜ್ಜೆಯ ಸದ್ದಿಗೆ ತಿರುಗಿ ನೋಡಿದರು. ನಾವು ಎಲ್ಲಿದ್ದೆವೋ ಅಲ್ಲೇ ಗಕ್ಕನೆ ನಿಂತೆವು. `ನಮಸ್ತೆ ಸರ್' ಇಬ್ಬರ ಧ್ವನಿಯೂ ಪಾತಾಳದಿಂದ ಬಂದಂತ್ತಿತ್ತು. ಬನ್ನಿ ಎಂಬಂತೆ ಸಂಜ್ಞೆ ಮಾಡಿದರು. ಕೀಲುಗೊಂಬೆಗಳಂತೆ ಮುಂದೆ ಹೋಗಿ ಹೂವನ್ನು ಕೊಟ್ಟೆವು. ಅದನ್ನು ಸ್ವೀಕರಿಸುವಾಗ ಅವರ ಮುಖದಲ್ಲಿ ಹೌದೊ ಅಲ್ಲವೋ ಎಂಬಂತಹ ನಗೆಯೊಂದು ಸುಳಿದು ಮಾಯವಾಯ್ತು. ನಾವು ಅವರೊಡನೆ ಏನೇನು ಕೇಳಬೇಕೆಂದುಕೊಂಡಿದ್ದೆವೋ ಅವೆಲ್ಲವೂ ಮಿದುಳಿನಿಂದ ಆವಿಯಾಗಿ ಬೆವರಿನ ರೂಪದಲ್ಲಿ ಕೆಳಕ್ಕಿಳಿದು ನಾವು ತೊಟ್ಟಿದ್ದ ಬಟ್ಟೆಯನ್ನು ಒದ್ದೆ ಮಾಡುತ್ತಿತ್ತು. ನಡುಗುವ ಕೈಗಳಿಂದ ಅಟೋಗ್ರಾಫ್ ಪುಸ್ತಕವನ್ನು ಮುಂದೆ ಮಾಡಿದೆವು. ನನ್ನ ಗೆಳತಿ ಧೈರ್ಯ ಮಾಡಿ ಹೇಳಿದಳು,`ಸರ್, ನಾವು ಮೂಕಜ್ಜಿಯ ಕನಸುಗಳನ್ನು ಓದಿದ್ದೇವೆ' ಅವರು ನಮ್ಮನ್ನೇ ನೇರವಾಗಿ ನೋಡುತ್ತಾ `ಗುಡ್..,ಗುಡ್ ..' ಎಂದರು. ಅಲ್ಲಿಗೆ ನಮ್ಮ ಶಬ್ಧ ಭಂಡಾರ ಬರಿದಾಯ್ತು. ನನ್ನ ಕೈಯ್ಯಲ್ಲಿದ್ದ ಪುಸ್ತಕವನ್ನು ತೆಗೆದುಕೊಂಡರು. ಮುಚ್ಚಳ ತೆರೆದೇ ಹಿಡಿದಿದ್ದ ಪೆನ್ನನ್ನು ಅವರ ಕೈಗಿತ್ತೆ. ಈಗೆಲ್ಲ ಇರುವ ಹಾಗೆ ಅಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಡಾಟ್ ಪೆನ್ನನ್ನು ಉಪಯೋಗಿಸುತ್ತಿರಲಿಲ್ಲ. ಶಾಯಿ ಪೆನ್ನಿನ ಉಪಯೋಗವೇ ಸಾರ್ವತ್ರಿಕವಾಗಿತ್ತು.ಆ ಪೆನ್ನುಗಳು ಹಳತಾದಂತೆ ಅವುಗಳ ತಿರುಗಣೆ ಗಟ್ಟಿ ನಿಲ್ಲದೆ ಹೊಟ್ಟೆಯೊಳಗೆ ತುಂಬಿಕೊಂಡ ಶಾಯಿಯನ್ನು ಆಗಾಗ ಸ್ವಲ್ಪ ಸ್ವಲ್ಪವಾಗಿ ಹೊರಕ್ಕೆ ವಾಂತಿ ಮಾಡಿಕೊಳ್ಳುವ ಖಾಯಿಲೆಯೊಂದು ಸಾಮಾನ್ಯವಾಗಿತ್ತು ನನ್ನ ಪೆನ್ನಿನ ಆ ಖಾಯಿಲೆ ವಿಷಮ ಸ್ಥಿತಿಗೆ ತಲುಪಿತ್ತು ಎಂದು ತೋರುತ್ತದೆ. ಕಾರಂತರನ್ನು ಭೇಟಿಯಾಗುವ ಕಾತರದಲ್ಲಿ ಅದರ ಬಗ್ಗೆ ಗಮನ ಹರಿಸಿರಲೇ ಇಲ್ಲ. ಅವರು ಸಹಿ ಹಾಕಿ ಪೆನ್ನನ್ನು ಮರಳಿ ಕೊಡುವಾಗ ಅದು ತನ್ನ ಹಣೆಬರಹವನ್ನು ತೋರಿಸಿಯೇ ಬಿಟ್ಟಿತು. ಒಂದು ಬಿಂದು ಶಾಯಿ ಕಾರಂತರ ಜುಬ್ಬದ ಎಡಬದಿಯ ಜೇಬಿನ ಮೇಲೆ ಚಿತ್ತಾರ ಬಿಡಿಸಿತ್ತು. ನನಗೆ ಪಂಚಪ್ರಾಣವೇ ಹಾರಿಹೋದಂತಾಯ್ತು (ಕಾರಂತರಿಗೆ ಸಿಟ್ಟು ಜಾಸ್ತಿಯಂತೆ ಎಂದೂ ಕೇಳಿದ್ದೆ ). ಗೆಳತಿಯೂ ಸಹಿ ತೆಗೆದುಕೊಂಡಳು. `ಥ್ಯಾಂಕ್ಯೂ ಸರ್ ' ಎಂದ ನಾನು ಗೆಳತಿಯನ್ನು ಎಳೆದುಕೊಂಡೇ ಹೊರಕ್ಕೆ ಬಂದೆ.
"ಕಾರಂತರೊಡನೆ ಕಥೆ ಬರೆಯುವುದು ಹೇಗೆ? ಲೇಖನ ಬರೆಯುವುದು ಹೇಗೆ..? ಎಂದೆಲ್ಲಾ ಕೇಳಿ ತಿಳಿದುಕೊಳ್ಳಬೇಕೆಂದು ಗಾಳಿ ಗೋಪುರ ಕಟ್ಟುತ್ತಿದ್ದವಳು ಅವರು ಎದುರಿಗಿದ್ದಾಗ ಗಾಳಿ ಬಡಿದವರಂತೆ ಯಾಕೆ ವರ್ತಿಸಿದ್ದು? ಇನ್ನೆಂದಾದರೂ ಇಂತಹ ಅವಕಾಶ ಸಿಕ್ಕೀತಾ ..? ನಿನ್ನಿಂದಾಗಿ ನನಗೂ ಲಾಸ್.." ಎಂದೆಲ್ಲಾ ಗೆಳತಿ ಬಡಬಡಿಸಿದಳು. ನಾನು ನನ್ನಿಂದಾದ ತಪ್ಪನ್ನು ಹೇಳಿಕೊಂಡೆ. ಮತ್ತಷ್ಟು ಜಾಡಿಸಿದಳು. ಆದರೆ ಅವರಿಗದು ಗೊತ್ತಾಗಲಿಲ್ಲ ಎಂದು ನನ್ನನ್ನು ಸಮರ್ಥಿಸಿಕೊಂಡೆ. ಮುಖ ದುಮ್ಮಿಸಿಕೊಂಡು ಹೋದಳು. ಅವಳ ಕೈಯಿಂದೇನೋ ಪಾರಾದೆ. ಆದರೆ ನಿಧಾನಕೆ ನನ್ನೊಳಗೆ ಅಪರಾಧಿ ಪ್ರಜ್ಞೆ ಜಾಗೃತವಾಗತೊಡಗಿತು. ಅದು ಎಷ್ಟು ತೀವ್ರವಾಗಿ ನನ್ನನ್ನು ಕಾಡತೊಡಗಿತೆಂದರೆ ವೇದಿಕೆಯಲ್ಲಿ ನಿಂತು ಅವರು ಭಾಷಣ ಮಾಡುತ್ತಿದ್ದರೆ ನನ್ನ ಮಿದುಳು ಅದ್ಯಾವುದನ್ನೂ ಹೀರಿಕೊಳ್ಳುತ್ತಲೇ ಇರಲಿಲ್ಲ. ನನ್ನ ಕಣ್ಣುಗಳು ಅವರ ಜುಬ್ಬಾದ ಎಡಜೇಬಿನ ಮೇಲೆಯೇ ನೆಟ್ಟಿತ್ತು (ನಾಳೆಯ ಪತ್ರಿಕೆಯಲ್ಲಿ ಕಾರಂತರ ಸುದ್ದಿಯೊಂದಿಗೆ ಅವರ ಜೇಬಿನ ಮೇಲಿನ ಶಾಯಿಯ ಕಲೆಯನ್ನು ಜೂಮ್ ಮಾಡಿ ಅದನ್ನು ಬಾಕ್ಸ್ ಐಟಮ್ಮಲ್ಲಿ ಹಾಕಿದಂತೆ.... `ಕಾರಂತರ ಶುಭ್ರ ವರ್ಚಸ್ಸಿನ ಮೇಲೊಂದು ಕಲೆ' ಎಂಬ ತಲೆಬರಹ ಅಚ್ಚಾದರೆ ....?). ಚಡಪಡಿಕೆ ಹೆಚ್ಚಾದಂತೆ ಒಂದು ತೀರ್ಮಾನಕ್ಕೆ ಬಂದೆ. ಅವರು ವೇದಿಕೆಯಿಂದ ಇಳಿಯುತ್ತಿದ್ದಂತೆ ಸಂಘಟಕರು ಅವರನ್ನು ಬೀಳ್ಕೊಡಲು ಸನ್ನದ್ಧರಾದರು. ನಾನು ಸರ್ರನೆ ಸಭಾಭವನದಿಂದ ಹೊರಬಂದು ಕಾಲೇಜಿನ ಪ್ರವೇಶ ದ್ವಾರದ ಬಳಿಗೆ ತಲುಪಿದೆ. ಆ ಹೊತ್ತಲ್ಲಿ ನನ್ನಲ್ಲಿ ಯಾವುದೇ ಅಳುಕೂ ಇರಲಿಲ್ಲ! ನಾನು ನೋಡುತ್ತಲೇ ಇದ್ದೆ. ಅಭಿಮಾನಿಗಳ ದೊಡ್ಡ ಗುಂಪು ಕಾರಂತರ ಹಿಂಬದಿಗಿತ್ತು. ಕಾರಂತರು ಇನ್ನೇನು ಕಾಲೇಜಿನ ಮೆಟ್ಟಲುಗಳನ್ನಿಳಿಯಬೇಕು ಎನ್ನುವಷ್ಟರಲ್ಲಿ ನಾನು ಅವರ ಎದುರಿಗೆ ಹೋಗಿ ನಿಂತೆ. ನನ್ನನ್ನು ಗುರುತು ಹಿಡಿದ ಭಾವ ಅವರ ಕಣ್ಗಳಲ್ಲಿ ಕಂಡೆ. ಆ ಕಣ್ಣುಗಳನ್ನೇ ನೇರವಾಗಿ ನೋಡುತ್ತಾ ಹೇಳಿದೆ, `ಸರ್.., ನಿಮ್ಮನ್ನು ಭೇಟಿಯಾಗಲು ಬಂದಿದ್ದಾಗ ನನ್ನಿಂದ ಒಂದು ತಪ್ಪಾಗಿ ಹೋಗಿದೆ. ನನ್ನ ಪೆನ್ನಿನಿಂದ ನಿಮ್ಮ ಡ್ರೆಸ್ಸಿಗೆ ಶಾಯಿ ಬಿದ್ದಿತ್ತು...., ಕ್ಷಮಿಸಿ.'
ಅವರು ತಮ್ಮ ಎಡ ಜೇಬನ್ನು ನೇವರಿಸಿಕೊಳ್ಳುತ್ತಾ ನನ್ನೆಡೆಗೆ ಕಿರುನಗೆಯೊಂದನ್ನೆಸೆದರು. ವೇದಿಕೆಯಲ್ಲಿ ಅವರಿಗಿತ್ತ ಪುಷ್ಪ ಗುಚ್ಛ ಹಿಂಬದಿಯಲ್ಲಿ ಬರುತ್ತಿದ್ದ ಸಂಘಟಕರ ಕೈಯ್ಯಲ್ಲಿತ್ತು. ಅದರಿಂದ ಒಂದು ಹೂವನ್ನು ಕಿತ್ತು ನನ್ನ ಕೈಗಿತ್ತು ಹೇಳಿದರು,
"ಇದು ನೀನು ಸತ್ಯ ಹೇಳಿದ್ದಕ್ಕೆ..., ಕೆಲಸಕ್ಕೆ ಮೊದಲು ಪೂರ್ವ ತಯಾರಿ ಬೇಕು' ಎಂದು ಹೇಳಿ ನನ್ನ ಬೆನ್ನು ತಟ್ಟಿ ಕಾರು ಏರಿ ಹೋಗಿಯೇ ಬಿಟ್ಟರು. ನಾನು ಅಲ್ಲಾಡದೆ ನಿಂತೇ ಇದ್ದೆ. ಹಾಗಾದರೆ ಆ ಕಲೆಯನ್ನು ಅವರಾಗಲೇ ಗಮನಿಸಿದ್ದರೇ....??? ಅವರಾಡಿದ ಆ ಎರಡು ಪುಟ್ಟ ವಾಕ್ಯಗಳಲ್ಲಿ ನಾನು ಕೇಳದೆಯೇ ನನ್ನೆಲ್ಲಾ ಪ್ರಶ್ನೆಗಳಿಗೂ ಉತ್ತರ ಇತ್ತು. ಅಂದು ನಾನು ಜೀವನದಲ್ಲಿ ಬಹುದೊಡ್ಡ ಪಾಠವೊಂದನ್ನು ಕಲಿತೆ ಮತ್ತು ಅದನ್ನು ಇಗಲೂ ಪಾಲಿಸುತ್ತಿದ್ದೇನೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ