ಶುಕ್ರವಾರ, ಏಪ್ರಿಲ್ 15, 2016

ಲೇಡೀಸ್ ಬಸ್

ಮೊನ್ನೆ ಬೆಳಗ್ಗೆ ಮಂಗಳೂರಿಗೆ ಹೋಗಲೆಂದು ಬಸ್ ಸ್ಟ್ಯಾಂಡಿನಲ್ಲಿ ಕಾಯುತ್ತಿದ್ದೆ. ಎಂಟು ಘಂಟೆ ಹತ್ತು ನಿಮಿಷಕ್ಕೆ ಸರಿಯಾಗಿ ಸರಕಾರೀ ಬಸ್ಸೊಂದು ಬಂತು. `ಮಹಿಳೆಯರಿಗಾಗಿ' ಎಂಬ ಫಲಕ ಅದರ ಹಣೆಗಂಟಿಕೊಂಡಿತ್ತು. ವಿಶೇಷವೆನಿಸಿ ಹತ್ತಿಯೇ ಬಿಟ್ಟೆ. ಅಷ್ಟು ದೊಡ್ಡ ಬಸ್ಸಿನಲ್ಲಿ ಇದ್ದುದು ಕೇವಲ ಏಳೆಂಟು ಮಹಿಳೆಯರು!(ಚಾಲಕ, ನಿರ್ವಾಹಕರನ್ನು ಹೊರತುಪಡಿಸಿ, ಯಾಕೆಂದರೆ ಅವರು ಪುರುಷರಾಗಿದ್ದರಲ್ಲ?) ನನ್ನ ಹಿಂದೆಯೇ ಸಾಧಾರಣ ಎಪ್ಪತ್ತರ ಆಸುಪಾಸಿನ ಕೃಶ ಶರೀರದ ವೃದ್ಧರೋರ್ವರು ಬಸ್ಸನ್ನೇರಲು ಬಂದರು. ಆಗಲೇ `ಲೇಡೀಸ್ ಬಸ್..., ಲೇಡೀಸ್ ಬಸ್...' ಎಂದು ಗಂಟಲು ಹರಿದುಕೊಳ್ಳುತ್ತಿದ್ದ ಕಂಡಕ್ಟರ ಆ ಅಜ್ಜನ ಮುಖಕ್ಕೇ ಬಾಗಿ `ಓಯ್...ಅಣ್ಣಾ..., ಹತ್ಬ್ಯಾಡ್ರೀ...,ಹತ್ಬ್ಯಾಡ್ರೀ...,ಇದು ಲೇಡಿಸ್ ಬಸ್ ಕಂಡ್ರೀ...'ಎನ್ನುತ್ತಾ ಅವರಿಗಡ್ದವಾಗಿ ನಿಂತು ಬಾಯಿ ಬಾಯಿ ಬಡಿದುಕೊಳ್ಳತೊಡಗಿದ. ನಿಶ್ಶಕ್ತಿಯಿಂದುಂಟಾದ ಅಸಹನೆ, ಕಿವಿ ತಮ್ಮಟೆಯೇ ಹರಿದುಹೋಗುವಂತಹ ನಿರ್ವಾಹಕನ ಕರ್ಕಶ ಧ್ವನಿ, ಅದರೊಂದಿಗೇ ಹತ್ತಬೇಡಿ ಎಂಬ ಆತನ ನಿಷೇಧ ನುಡಿ..., ಎಲ್ಲವೂ ಒಟ್ಟು ಸೇರಿ ಆ ಅಜ್ಜನ ತಾಳ್ಮೆಯ ಕಟ್ಟೆ  ಒಡೆದು ಹೋಯ್ತು. ನಡುಗುವ ಸ್ವರದಲ್ಲಿ ಆತನೂ ಬಡಬಡಿಸತೊಡಗಿದ. "ಎಂದೋ...? ಲೇಡಿಸ್ ಬಸ್ಸಾಣೋ...? ಲೇಡಿಸ್ ಡೋಕ್ಟರ್ ಎನ್ನು ಪರೆಯುನ್ನದು ಕೇಟಿಟುಂಡು. ಪಕ್ಷೇ ಇದು ಅದಿಷ್ಯಮಾಣಲ್ಲೋ...?ಎಂಗಿಲ್ ನಿಂಗಳ್ ಎಂದಿನಾ ಇದಿಂದೆ ಉಳ್ಳಿಲ್...?ಆದ್ಯ ನೀ ಎರಂಗುಡೋ ತಾಯ..."(ಏನೂ..., ಲೇಡಿಸ್ ಬಸ್ಸಾ...? ಲೇಡಿಸ್ ಡಾಕ್ಟರು ಎಂದು ಹೇಳುವುದನ್ನು ಕೇಳಿದ್ದೇನೆ. ಇದು ಭಾರೀ ಆಶ್ಚರ್ಯವಾಗಿದೆಯಲ್ಲ? ಅಲ್ಲಾ.., ಹಾಗಾದರೆ ನೀವು ಯಾಕೆ ಈ ಬಸ್ಸಿನೊಳಗಡೆ ಇದ್ದೀರಾ? ಮೊದಲು ನೀನು ಇಳಿಯೋ ಕೆಳಗೆ). ಧಾರವಾಡ ಕಡೆಯ ಆ ಕಂಡೆಕ್ಟರನಿಗೆ  ಈತನ ಮಲೆಯಾಳಂ ಭಾಷೆಯ ತಲೆಬಾಲ ಅರ್ಥವಾಗಲಿಲ್ಲ.
 ನಮಗೆಲ್ಲರಿಗೂ ಗೊತ್ತಿರುವ ಹಾಗೆ ಎಲ್ಲಾ ಬಸ್ಸುಗಳ ಎಲ್ಲಾ ಚಾಲಕ ನಿರ್ವಾಹಕರೂ ಎಂತಹ ಒತ್ತಡದಲ್ಲಿರುತ್ತಾರೆಂದರೆ ಅಮ್ಮನ ಗರ್ಭದಿಂದ ಎರಡು ತಿಂಗಳು ಮೊದಲೇ ಕೆಳಕ್ಕೆ ಬಿದ್ದವರಂತೆ ಪ್ರತಿಕ್ಷಣವೂ ಚಡಪಡಿಸುತ್ತಲೇ ಇರುತ್ತಾರೆ. ಈ ಚಡಪಡಿಕೆಯೆನ್ನುವುದು ಹೇಗಿರುತ್ತದೆಯೆಂದರೆ ಬಸ್ಸು ನಿಲ್ದಾಣವೆನ್ನುವ ಬದಲು ಆ ಜಾಗವನ್ನು ಮನುಷ್ಯ ನಿಲ್ದಾಣವೆಂದೋ ಪ್ರಾಣಿತಂಗುದಾಣವೆಂದೋ ಕರೆಯುವುದೇ ಸೂಕ್ತ ಎಂದು ನನಗೆಷ್ಟೋ ಸಲ ಅನಿಸಿದ್ದುಂಟು. ಯಾಕೆನುವಿರಾ? ಬಸ್ಸುಗಳು ಅಲ್ಲಿ ನಿಲ್ಲುವುದೇ ಇಲ್ಲ! ಅವು  ಅಲ್ಲಿ ಮುಟ್ಟಿತೆಂಬುದಕ್ಕೆ ಸಾಕ್ಷಿಯಾಗಿ ಅವ್ಯಾಹತವಾಗಿ ಹಾರ್ನ್ ಹೊಡೆಯುತ್ತಾ ವೇಗವನ್ನು ಮಾತ್ರ ಕಡಿಮೆ ಮಾಡುತ್ತವೆ. ಅಲ್ಲಿ ನಿಲ್ಲುವುದೆಲ್ಲಾ ಬರಿಯ ಮನುಷ್ಯರು ಮತ್ತು ಹಸು, ನಾಯಿಗಳು! ಚಾಲನಾ ಸ್ಥಿತಿಯಲ್ಲೇ ಇರುವ ಆ ಬಸ್ಸುಗಳೊಳಕ್ಕೆ ನುಗ್ಗುವುದೂ ಒಂದು ಕಲೆ ಎಂದು ನಾನು ಭಾವಿಸಿದ್ದೇನೆ. ನಮ್ಮ ಈ ಬಸ್ಸೂ ಅದಕ್ಕೆ ಹೊರತಾಗಿರಲಿಲ್ಲ. ಅದು ಖಾಲಿ ಹೊಡೆಯುತ್ತಿದ್ದರೂ ಡ್ರೈವರ ಬಸ್ಸನ್ನು ಸರಿಯಾದ ಸಮಯಕ್ಕೆ ಹೊರಡಿಸಲೇ ಬೇಕು ತಾನೇ? ಆ ಆಸಾಮಿಗೆ ಮೊದಲೇ ಅಸಹನೆ, ಈ ಅಜ್ಜನಿಂದಾಗಿ ಅದು ಸ್ಫೋಟಗೊಂಡಿತು. ಆ ಡ್ರೈವರನಾದರೋ ಕನ್ನಡ, ತುಳು, ಮಲೆಯಾಳಂ ಭಾಷಾ ಕೋವಿದ ಅರ್ಥಾತ್ ನಮ್ಮೂರಿನವ. ಶುರುವಾಯಿತು ನೋಡಿ ಆತನಿಂದ ಸಹಸ್ರನಾಮಾರ್ಚನೆ...,"ಉಂದು  ಎಂಚಿನ ಸಾವು ಮಾರಾಯಾ..., ಇಂಚಿನ ಪಿಸಾಚಿಕ್ಲು ದಾಯೆಗ್ ಬಸ್ಸುಗು ಬಡ್ತುನೆ...?ಬಾಕಿ ಉತ್ನಾಕ್ಲೇನ್ ಕೆರಿಯಾರ..., ಇಂಚ ಗೊಬ್ಬೋನ್ತು ಕುಳ್ಳುಂಟ ನಮ್ಮೋ ಆಡೆಗ್ ಎತ್ತುನೆ ಏಪೋ...?" (ಇದು ಯಾವ ಗ್ರಾಚಾರ ಮಾರಯ್ರೆ.., ಇಂತಹ ಉಪದ್ರವಕಾರಿಗಳು ಯಾಕಾದರೂ ಬಸ್ಸನ್ನೇರುತ್ತಾರೋ? ಉಳಿದವರನ್ನು ಸಂಕಷ್ಟಕ್ಕೀಡುಮಾಡಲೇನು?  ಹೀಗೆ ಆಟ ಆಡ್ತಾ ಕುಳಿತರೆ ನಾವು ಅಲ್ಲಿಗೆ ಮುಟ್ಟುವುದು ಯಾವಾಗ?)
ಈಗಾಗಲೇ ಮಲೆಯಾಳಂ ಭಾಷಾ ಕಾನನದಲ್ಲಿ ಕಳೆದುಹೋಗಿದ್ದ ಆ ಧಾರವಾಡಿಗ ಕಂಡಕ್ಟರ ತುಳು ಭಾಷೆಯ ಪ್ರಹಾರಕ್ಕೆ ಪೆಕರನೇ ಆಗಿ ಹೋದ. ಆ ಅಜ್ಜಯ್ಯ ಮಾತ್ರ ಇದ್ಯಾವುದೂ ತನಗೆ ಸಂಬಂಧಿಸಿದ್ದೇ  ಅಲ್ಲ ಎನ್ನುವಂತೆ ಡ್ರೈವರನ ಎಡಬದಿಯ ಸೀಟಿನಲ್ಲಿ ಆರಾಮದಲ್ಲಿ ಕುಳಿತು ಬಿಟ್ಟರು! ತನ್ನ ಮಾತುಗಳು ಕಂಡಕ್ಟರನ ಮೇಲಾಗಲೀ ವೃದ್ಧರ ಮೇಲಾಗಲೀ ಯಾವುದೇ ಪರಿಣಾಮ ಬೀರದಿದ್ದುದನ್ನು ಗಮನಿಸಿದ ಚಾಲಕ ನಿಗಿನಿಗಿ ಕೆಂಡವೇ ಆಗಿಹೋದ. ಇನ್ನೂ ಏನೇನು ಗುಡುಗುತ್ತಿದ್ದನೋ...? ಅದೇ ಹೊತ್ತಿನಲ್ಲಿ ಇಬ್ಬರು ಮಹಿಳೆಯರು ಬಸ್ಸನ್ನೇರಿದರು. ಆಗಲೇ ಹೇಳಿದಂತೆ ಚಾಪೆ ಬಿಡಿಸಿ ಮಲಗುವಷ್ಟು ಸ್ಥಳಾವಕಾಶ ಬಸ್ಸಿನೊಳಗಿದ್ದರೂ ಅವರ ದೃಷ್ಟಿ ಆ ವೃದ್ಧರೆಡೆಗೆ ಹೋಯ್ತು. ಆತನನ್ನೊಮ್ಮೆ ತೀಕ್ಷ್ಣವಾಗಿ ನೋಡಿ ಆ ತೀಕ್ಷ್ಣತೆಯನ್ನು ಇನ್ನಷ್ಟು ಹರಿತಗೊಳಿಸಿ ಕಂಡಕ್ಟರನೆಡೆಗೆ ನೋಡಿ ಕೇಳಿದರು,"ಈ ಬಸ್ಸಿಂಡೆ ಮುಂಬಿಲ್ ಸ್ತ್ರೀಗಳುಡೆ ಬಸ್ ಎನ್ನ ಬೋರ್ಡ್ ಇಟ್ಟಿಟ್ ಆಣುಂಗಳೇ ಎಂದಿನಾ ಕೇಟ್ಟುನ್ನೇ..? ( ಈ ಬಸ್ಸಿನ ಮುಂಭಾಗದಲ್ಲಿ ಹೆಂಗಸರಿಗಾಗಿ ಎಂಬ ಫಲಕ ಹಾಕಿ ಗಂಡಸರನ್ನು ಯಾಕೆ ಹತ್ತಿಸಿಕೊಂಡಿರಿ)" ಉತ್ತರವಾಗಿ ಕಂಡಕ್ಟರ ಮಹಾಶಯ ಕೀರಲು ಧ್ವನಿಯಲ್ಲಿ `ಲೇಡಿಸ್ ಬಸ್...,ಲೇಡಿಸ್ ಬಸ್' ಎಂದು ಒದರುವುದು ಬಿಟ್ಟರೆ ಬೇರೇನಾದರೂ ಹೇಳಲು ಅರಿತರೆ ತಾನೇ?  ಇದನ್ನೆಲ್ಲಾ ನೋಡಿದ ಡ್ರೈವರನಿಗೆ ತಲೆಯೇ ಕೆಟ್ಟು ಹೋಯ್ತು. ಬಸ್ಸು ಗುರು ಗುರು ಎನ್ನುತ್ತಿದ್ದುದನ್ನು ಹಾಗೇ ಬಿಟ್ಟು ತನ್ನ ಆಸನದಿಂದೆದ್ದ. ಕಂಡಕ್ಟರನನ್ನು ಕೆಕ್ಕರಿಸಿ ನೋಡುತ್ತಾ, "ಈ ಪೊಕ್ಕಡೆ ದಾಯೆಗ್ ಮಾರಾಯಾ ಮುಲ್ಪ ಬಂಗ ಬರ್ಪುಣೆ..? ನಿನ್ನ ಊರುಗ್ ಪೋತ್ ಮೂಜಿ ಮೊಳತ್ತ ಬಳ್ಳಿ ದೆತ್ತೋಂದು ಸೈಯ್ಯಾರ ಆವಂದಾ ...?"( ಇಲ್ಲಿ ಯಾಕೆ ಮಾರಾಯ ಸುಮ್ಮನೆ ಕಷ್ಟ ಪಡ್ತಿಯಾ? ನಿನ್ನ ಊರಿಗೆ ಹೋಗಿ ಮೂರು ಮೊಳದ ಹಗ್ಗ ತಗೊಂಡು ಸಾಯಬಾರದಾ?) ಎಂದು ಬಡಬಡಿಸಿಕೊಂಡೇ ಆ ಅಜ್ಜನ ಬಳಿಗೆ ಹೋಗಿ ಕೈಮುಗಿದು ಹೇಳಿದ,
"ಓ ಮೂಪರೇ.., ಅದಾ ಆ ಬಸ್ ಇದಿನೆಕಾಳುಂ ನೇರ್ತೆ ಮಂಗಳಾಪುರತ್ತೆಕ್ ಎತ್ತುನ್ನು..., ನಿಂಗಳ್ ಅದಿಲೆ ಪೋಯಿಕ್ಕೊಳು..."(ಓ ಹಿರಿಯರೇ.., ಅಲ್ಲಿ ನೋಡಿ ಆ ಬಸ್ಸು ಈ ಬಸ್ಸಿಗಿಂತಲೂ ಬೇಗನೆ ಮಂಗಳೂರು ತಲಪುತ್ತದೆ. ನೀವು ಅದರಲ್ಲೇ ಹೋಗಿ ಬಿಡಿ) ಎನ್ನುತ್ತಾ ಅವರ ತೋಳು ಹಿಡಿದು ಎಬ್ಬಿಸಿ ಬಸ್ಸಿನಿಂದಿಳಿಸಿ ಪಕ್ಕದಲ್ಲಿರುವ ಎಕ್ಸ್ಪ್ಪ್ರೆಸ್ ಬಸ್ಸಿಗೆ ಹತ್ತಿಸಿ ಕುಳ್ಳಿರಿಸಿದ. ತನ್ನ ಜಾಗಕ್ಕೆ ಮರಳಿದವನೇ ಯಾರ ಅಪ್ಪಣೆಗೂ ಕಾಯದೆ ಆಕ್ಸಿಲೇಟರ್ ಮೇಲೆ ಕಲೊತ್ತಿಯೇ ಬಿಟ್ಟ. ಕಂಡಕ್ಟರ ಟಿಕೆಟ್ ವಿತರಿಸುತ್ತಾ ನನ್ನ ಬಳಿಗೆ ಬಂದ. ಅವನನ್ನು ಮಾತನಾಡಿಸಿದೆ,
"ಈ ಬಸ್ಸು ಶುರುವಾಗಿ ಎಷ್ಟು ಸಮಯವಾಯಿತು?"
" ಎರಡು ವರ್ಷ ಆತ್ರೀ ಅಕ್ಕ"
"ಖಮಾಯಿ ಚೆನ್ನಾಗಿದ್ಯಾ?"
"ಇಲ್ರೀ..,ನುಕ್ಸಾನ್ರೀ..,(ನಷ್ಟದಲ್ಲಿದೆ) ಅಕ್ಕಾ.., ಆರ್ಡಿನರಿ ಬಸ್ಸು(ಸ್ತ್ರೀ ಪುರುಷರಿಬ್ಬರೂ ಪ್ರಯಾಣಿಸುವ ಬಸ್ಸು) ಈ ರೂಟ್ ಮ್ಯಾಗೆ ಹೋಯ್ತಂದ್ರಾ ವಂದ್ ಟ್ರಿ ಪ್ಪಗಾ ಮೂರ್- ಮೂರ್ವರಿ ಸಾವ್ರ ಸಿಗತ್ರೀ...,ಇದ್ರಾಗ ವಂದ್(ಒಂದು) ಟ್ರಿಪ್ಪಗ  ಸಾವ್ರಾನು ಹುಟ್ವಂಗಿಲ್ರೀ..., ಭಾಷಾ ಬ್ಯಾರೆ ತೊಡಕ್(ಸಮಸ್ಯೆ) ಅದಾರ್ರೀ..."ಅಂದ. ಹೂಂ ಗುಟ್ಟಿ ಸುಮ್ಮನಾದೆ. ಫಕ್ಕನೆ ಕುಳಿತಲ್ಲಿಂದ ಮುಗ್ಗರಿಸಿದಂತಾಗಿ ಎದುರಿನ ರಾಡನ್ನು ಗಟ್ಟಿಯಾಗಿ ಹಿಡಿದುಕೊಂಡೆ. ಹಸುವೊಂದು ರಸ್ತೆಯಲ್ಲಿತ್ತು. ಅದನ್ನು ತಪ್ಪಿಸುವ ಭರದಲ್ಲಿ ಚಾಲಕ ಬಸ್ಸೊಳಗಿದ್ದವರ ಬಗ್ಗೆ ಚಿಂತಿಸಿರಲಿಲ್ಲ. ನನ್ನೆದುರು ಕುಳಿತಿದ್ದ ಮಹಿಳೆಯೋರ್ವರು ಮಗುವಿಗೆ ಹಾಲೂಡಿಸುತ್ತಿದ್ದವರು ಅದೃಷ್ಟವಶಾತ್ ನೆಲಕ್ಕುರುಳಲಿಲ್ಲ. ಬಸ್ಸು ಉಪ್ಪಳಕ್ಕೆ  ತಲುಪಿತ್ತು. ಬಸ್ಸಿನಲ್ಲಿದ್ದುದು ಕೇವಲ ಹನ್ನೆರಡು ಮಹಿಳೆಯರು! ಸಾರ್ವಜನಿಕ ಸೇವೆಗಾಗಿರುವ ಬಸ್ಸು ಕಾಸರಗೋಡಿನಿಂದ ಇಲ್ಲಿಯವರೆಗೆ ಕೇವಲ ದೊಡ್ಡ ಸ್ಟಾಪುಗಳಲ್ಲಿ ಮಾತ್ರ ನಿಲುಗಡೆ ಕೊಟ್ಟು (ಗಮನಿಸಿ, ನಾನಿದ್ದುದು ಎಕ್ಸ್ಪ್ರೆಸ್ ಬಸ್ಸಾಗಿರಲಿಲ್ಲ) ಕೆಲವೇ ಕೆಲವು ಹೆಂಗಸರನ್ನು ಮಾತ್ರ ಹತ್ತಿಸಿಕೊಂಡು ಅದೇ ಸ್ಟಾಪಿನಲ್ಲಿ ನಿಂತಿದ್ದ ಪುರುಷರನ್ನು ನಿರ್ಲಕ್ಷಿಸಿ ಓಡಿಯೇ ಓಡಿತ್ತು . ನನಗಂತೂ ಇದು ತೀರಾ ಅಸಂಬದ್ಧ ಎಂದು ತೋರಿತು. ನಮ್ಮ ಕಾಸರಗೋಡಿನಿಂದ ಮಂಗಳೂರಿಗೆ ಐದು ನಿಮಿಷಕ್ಕೊಂದರಂತೆ ಬಸ್ಸುಗಳಿವೆ. ಪ್ರತಿ ಬಸ್ಸಿನಲ್ಲೂ ಮಹಿಳೆಯರು ಧಾರಾಳವಾಗಿ ಯಾವುದೇ ತೊಂದರೆಯಿಲ್ಲದೆ ಪ್ರಯಾಣಿಸುತ್ತಿದ್ದಾರೆ. ಒಂದು ವೇಳೆ ರಾತ್ರಿ ಹೊತ್ತಿನಲ್ಲಿ ಮಂಗಳೂರಿನಿಂದ ಕಾಸರಗೋಡಿಗೆ ಮಹಿಳೆಯರಿಗಾಗಿ (ಕೆಲಸದಿಂದ ಮರಳುವವರು) ಬಸ್ಸು ಓಡಿಸುವುದಿದ್ದರೆ ಅದಕ್ಕೊಂದು ಅರ್ಥವಿರುತ್ತಿತ್ತು. ಈ ಹಗಲು ಹೊತ್ತಿನಲ್ಲಿ ಯಾವ ಪುರುಷಾರ್ಥಕ್ಕೆ? ಮಹಿಳೆಯರಿಂದಲೇ ಇದಕ್ಕೆ ಪ್ರೋತ್ಸಾಹವಿಲ್ಲವೆನ್ನುವುದಕ್ಕೆ ಖಾಲಿ ಹೊಡೆಯುತ್ತಿರುವ ಈ ಬಸ್ಸೇ ಸಾಕ್ಷಿ. ಯಾರ ಕಣ್ಣಿಗೆ ಬೆಣ್ಣೆ ಹಚ್ಚಲು ಸರಕಾರ ಈ ನಾಟಕವಾಡುತ್ತಿದೆ? ಸಾರ್ವಜನಿಕರ ದುಡ್ಡನ್ನು ಹೀಗೂ ಪೋಲು ಮಾಡುವುದುಂಟೆ..? ಅಥವಾ ಇದೂ ಒಂದು ವೋಟ್ ಬ್ಯಾಂಕ್ ರಾಜಕೀಯವೇ?  ಬೇಸರವೆನಿಸಿತು. ಆದರೆ ನಮ್ಮೂರಿನಿಂದ ಮಂಗಳೂರಿಗೆ ಇದುವರೆಗೆ ಇಷ್ಟು ಐಷಾರಾಮವಾಗಿ ಪ್ರಯಾಣಿಸಿದ ನೆನಪೇ ಇಲ್ಲ. ಇಡೀ ಸೀಟಲ್ಲಿ ನಾನೊಬ್ಬಳೇ! ಆರಾಮವಾಗಿ ಕುಳಿತು ಬ್ಯಾಗಿನಲ್ಲಿದ್ದ ದಿನಪತ್ರಿಕೆಯನ್ನು ಹೊರಕ್ಕೆ ತೆಗೆದೆ. ಮುಖ ಪುಟದಲ್ಲಿದ್ದ ಆ ಸುದ್ದಿ ನನ್ನ ಗಮನ ಸೆಳೆಯಿತು. `ಬಾಲಕನ ಚಿಕಿತ್ಸೆಗಾಗಿ ಬಸ್ಸಿನ ಓಟ.' ಗಮನಕೊಟ್ಟು ಓದಿದೆ. ಕಾಂಜಂಗಾಡಿನಿಂದ ಕಾಸರಗೋಡಿಗೆ ಎರಡು ಬಸ್ಸುಗಳು ಒಂದು ದಿನವಿಡೀ ಧರ್ಮಾರ್ಥ ಓಡಲು ನಿರ್ಧರಿಸಿವೆಯಂತೆ.  ಓರ್ವ ಕ್ಯಾನ್ಸರ್ ಪೀಡಿತ ಬಡ ಮಗುವಿನ ಚಿಕಿತ್ಸೆಗೆ ನೆರವು ನೀಡುವುದೇ ಇದರ ಹಿಂದಿನ ಉದ್ದೇಶವಂತೆ. ಪ್ರಯಾಣಿಕರಿಗೆ ಟಿಕೆಟ್ ಇಲ್ಲ. ಅವರು ದಾನವಾಗಿತ್ತ ದುಡ್ಡಿಗೆ ನಿರ್ವಾಹಕ ರಸೀದಿ ಕೊಡುತ್ತಾನಂತೆ. ಸುದ್ದಿಯೊಂದಿಗೆ ಫೋಟೋ ಅಚ್ಚಾಗಿತ್ತು. ಬಸ್ಸು ಪ್ರಯಾಣಿಕರಿಂದ ತುಂಬಿ ತುಳುಕುತ್ತಿತ್ತು. ಮತ್ತೆ ಮತ್ತೆ ಆ ಭಾವಚಿತ್ರವನ್ನು ಕಣ್ಣು ತುಂಬಾ ನೋಡಿ ಖುಷಿ ಪಟ್ಟೆ.
`ಮಹಿಳೆಯರಿಗಾಗಿ ಬಸ್ಸಿನ ಓಟ ಮತ್ತು ಚಿಕಿತ್ಸೆಗಾಗಿ ಬಸ್ಸಿನ ಓಟ' ಈ ಎರಡನ್ನೂ ನಾನು ತುಲನೆ ಮಾಡಿ ನೋಡತೊಡಗಿದೆ.  ಜೀವನದಲ್ಲಿ ನಮ್ಮ ಸುತ್ತ ಮುತ್ತ ಘಟಿಸುವ ಘಟನೆಗಳನ್ನು ನೋಡುತ್ತಾ ಅವುಗಳಲ್ಲಿರುವ ನೆಗೆಟಿವ್ ಅಂಶಗಳನ್ನು ಭೂತ ಕನ್ನಡಿಯ ಮೂಲಕ ನೋಡುವ ಆತುರದಲ್ಲಿ ಪಾಸಿಟಿವ್ ಅಂಶಗಳನ್ನು ಗಮನಿಸುವುದೇ ಇಲ್ಲ. ನಿರಾಸೆಯಿಂದ ಮನಸ್ಸು ಮುದುಡಿದಾಗಲೆಲ್ಲ ಭರವಸೆಯ ಸಾಂತ್ವನ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಮೇಲಿನ ಎರಡು ಉದಾಹರಣೆಗಳೇ ಸಾಕ್ಷಿ ಎನಿಸಿತು.    

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ