ಭಾನುವಾರ, ಏಪ್ರಿಲ್ 24, 2016

ಮಗುವೇ, ಇದು ನಿನಗೆ ಯಾರಿತ್ತ ಶಾಪ...?



ಸುಮಾರು ಒಂದು ವರ್ಷದ ಹಿಂದಿನ ಘಟನೆ, ಅದು ನವೆಂಬರೋ ಡಿಸೆಂಬರೋ ತಿಂಗಳಿರಬೇಕು. ಸಂಜೆ ಐದು ಐದೂವರೆಯ ಹೊತ್ತಿಗೇ ಸೂರಜ್ಜ ಭೂಮಿಗೆ ಕೌದಿ ಹೊದೆದು ಸಮುದ್ರಕ್ಕೆ ದುಮುಕುವ ಕಾಲ. ನಾನು ಪುತ್ತೂರಿನಿಂದ ಕಾಸರಗೋಡಿಗೆ ಬರುವ ಬಸ್ಸಿನಲ್ಲಿದ್ದೆ. ಪುತ್ತೂರಿನಿಂದ ಹೆಚ್ಚು ಕಡಿಮೆ ಮೂವತ್ತು ಕೀ.ಮೀ. ದೂರ ಬಂದಿದ್ದೆವು. ರಾತ್ರಿಯೇ ಆಗಿಬಿಟ್ಟಿತು ಎನ್ನುವಂತೆ ಆಗಸ ಕಪ್ಪಾಗಿಯೇ ಹೋಗಿತ್ತು. ಅಡ್ಯನಡ್ಕ ಎನ್ನುವ ಸ್ಥಳಕ್ಕೆ ಮುಟ್ಟಿದ್ದೆವು. ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಬಸ್ಸು ನಿಂತಿತು. ಮುಂಬದಿಯ ಬಾಗಿಲಿನಿಂದ ಆರೇಳು ಮಂದಿ ಹದಿಹರೆಯದ ಹುಡುಗರು ಧಡಧಡನೆ ಬಸ್ಸನ್ನೇರಿದರು. ಬಹುತೇಕ ಆಸನಗಳು ಖಾಲಿಯಿದ್ದರೂ ಅವರು ಚಾಲಕನ ಹಿಂಬದಿಯಲ್ಲಿ ಖಾಲಿಯಿದ್ದ ಮಹಿಳೆಯರ ಆಸನವನ್ನು ಆಕ್ರಮಿಸಿಕೊಂಡರು. ಇಂತಹ ಸಂದರ್ಭಗಳಲ್ಲಿ ನಿರ್ವಾಹಕರು ಗುರುಗುಟ್ಟಿ ಅವರನ್ನು ಅಲ್ಲಿಂದ ಎಬ್ಬಿಸುವುದು ನಮ್ಮ ಕೇರಳದ ಬಸ್ಸುಗಳಲ್ಲಿ ಸರ್ವೇ ಸಾಮಾನ್ಯ (ಕೇರಳದ ಬಸ್ಸುಗಳಲ್ಲಿ ಮಹಿಳೆಯರಿಗಾಗಿ ಕಾದಿರಿಸಿದ ಸೀಟುಗಳಲ್ಲಿ ಪುರುಷರು ಕುಳಿತುಕೊಳ್ಳುವುದನ್ನು ಕಡ್ಡಾಯವಾಗಿ ನಿಷೇಧಿಸಿದ್ದಾರೆ).  ಆದರೆ ಇಲ್ಲಿ ಹಾಗಾಗಲಿಲ್ಲ. ಬದಲಿಗೆ ಕಂಡೆಕ್ಟರ ತಕ್ಷಣ ಬಸ್ಸಿನೊಳಗಿನ ಎಲ್ಲಾ ದೀಪಗಳನ್ನೂ ಉರಿಸಿದ. ಅದುವರೆಗೂ ಮೌನವಾಗಿ ಓಡುತ್ತಿದ್ದ ಬಸ್ಸು ಮಕ್ಕಳ ಮಾತು ನಗುವಿನಿಂದ ಅಲ್ಲಾಡಿ ಹೋಯ್ತು. ಆದರೆ ನಗುವಾಗಲೀ ಮಾತುಗಳಾಗಲೀ ಸಾಧಾರಣ ಹದಿಹರೆಯದ ಜೊತೆಗಾರರು ಸೇರಿದಾಗ ಉಂಟಾಗುವಂತಾದ್ದಲ್ಲ ಎಂದು ಕೆಲವೇ ಕ್ಷಣಗಳಲ್ಲಿ ಬಸ್ಸೊಳಗಿದ್ದ ಎಲ್ಲರಿಗೂ ತಿಳಿದುಹೋಯ್ತು. ಎದುರಿನಿಂದ ತಂಗಾಳಿ ಬೀಸಿ ಬರುತ್ತಿತ್ತು. ಹೆಂಡದ ಘಾಟು ಗಪ್ಪನೆ ನಮ್ಮ ಮೂಗಿಗೆ ಬಡಿಯಿತು. ಪ್ರಯಾಣಿಕರ ರುಮಾಲುಗಳು ಅವರವರ ಮೂಗಿನ ಸುತ್ತ ಹರಿದಾಡತೊಡಗಿತು. ನಾನು ಗುಂಪನ್ನು ಸರಿಯಾಗಿ ಗಮನಿಸತೊಡಗಿದೆ. ಅರೆ..., ಗುಂಪಿನಲ್ಲಿರುವ ಇಬ್ಬರು ಹುಡುಗರು ನಮ್ಮ ನೆರೆಕರೆಯವರೇ, ಉಳಿದ ಮಕ್ಕಳೂ ತೀರಾ ಅಪರಿಚಿತರಲ್ಲ. ಇಬ್ಬರು ಹೈಸ್ಕೂಲು ಓದುತ್ತಿದ್ದರು. ರಜಾ ದಿನಗಳಲ್ಲಿ ದಿನಸಿ ಅಂಗಡಿಗಳಲ್ಲಿ ಸಹಾಯಕ್ಕೆ ನಿಂತು ದುಡ್ಡು ಸಂಪಾದನೆ ಮಾಡುತ್ತಿದ್ದರು. ತಮ್ಮ ಪುಸ್ತಕ, ಪರೀಕ್ಷೆಗಳಿಗಾಗಿ ಅದನ್ನು ಉಪಯೋಗಿಸುತ್ತಿದ್ದರು. ವಿಷಯವನ್ನು ಎಂದೋ ಒಮ್ಮೆ ಅವರೇ ನನ್ನೊಡನೆ ಹೇಳಿದ್ದರು. ಬಡತನವನ್ನು ಲೆಕ್ಕಿಸದ ಅವರ ಕೆಚ್ಚೆದೆಯ ಬಗ್ಗೆ ತುಂಬಾ ಸಂತಸ ವ್ಯಕ್ತಪಡಿಸಿದ್ದೆ. ಮಕ್ಕಳು ಇಲ್ಲಿ...? ಅವತಾರದಲ್ಲಿ..? ಉಳಿದ ಮಕ್ಕಳೂ ಕೆಟ್ಟವರೇನೂ ಆಗಿರಲಿಲ್ಲ. ಆರ್ಥಿಕ ಮುಗ್ಗಟ್ಟಿನಿಂದಾಗಿ ಕಾಲೇಜು ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಬೇಕರಿ, ಗ್ಯಾರೇಜು, ಐಸ್ಕ್ರೀಮ್ ಪಾರ್ಲರು ಇತ್ಯಾದಿಗಳಲ್ಲಿ ದುಡಿಯುತ್ತಿದ್ದರು.
ಕುತೂಹಲದಿಂದ ಕಣ್ಣು ಕಿವಿಗಳೆರಡನ್ನೂ ಅವರೆಡೆಗೆ ನೆಟ್ಟೆ. ನಾನು ತುಂಬಾ ಹಿಂಬದಿಯಲ್ಲಿ ಕುಳಿತಿದ್ದೆನಾದುದರಿಂದ ಅವರು ನನ್ನನ್ನು ಗಮನಿಸಿರಲೇ ಇಲ್ಲ. ಅಶ್ಲೀಲ ಪದಗಳಿಂದ ಪರಸ್ಪರರನ್ನು ಚೇಡಿಸತೊಡಗಿದರು. ಒಬ್ಬ ತನ್ನ ಕುತ್ತಿಗೆಯಲ್ಲಿದ್ದ ಸರವನ್ನು ತೆಗೆದು ಇನ್ನೊಬ್ಬನ ಕುತ್ತಿಗೆಗೆ ಬಲವಂತವಾಗಿ ಹಾಕುತ್ತಾ, `ನೀನು ನನ್ನ ಹೆಂಡ್ತಿ ಮಾರಾಯಾ...' ಎನ್ನುತ್ತಾ ವಿಚಿತ್ರ ಭಂಗಿಯಲ್ಲಿ ನಿಂತು ಸೆಲ್ಫೀ ತೆಗೆಯತೊಡಗಿದ. ಇನ್ನಿಬ್ಬರು ಮೆಲುಧ್ವನಿಯಲ್ಲಿ ಏನನ್ನೋ ಮಾತನಾಡುತ್ತಿದ್ದವರು ಇದ್ದಕ್ಕಿದ್ದಂತೆ ಏರುಧ್ವನಿಯಲ್ಲಿ ಏನೇನೋ ಹೇಳತೊಡಗಿದರು. ಮತ್ತೊಬ್ಬ ತಲೆ, ಕೈಗಳರಡನ್ನೂ ಕಿಟಿಕಿಯಿಂದ ಹೊರಕ್ಕೆ ಚಾಚಿ `ಸ್ವರ್ಗ ಸುಖ' ಅನುಭವಿಸುತ್ತಿದ್ದ. `ಎಂತ ಮಾರಾಯಾ..., ನಾಳೆ ಲೆಕ್ಕ ಪರೀಕ್ಷೆ..., ಭಯಂಕರ ಟೆನ್ಷನ್..., ಅಪ್ಪ ಆವತ್ತೇ ಹೇಳ್ತಿದ್ರು...., ಟೆನ್ಷನ್ ಆದಾಗ...,ಬೇಸರ ಆದಾಗಲೆಲ್ಲಾ ಸ್ವಲ್ಪ ಸ್ವಲ್ಪ ಗುಂಡು ಹಾಕಿದ್ರೆ ಎಂತ ಆಗೋದಿಲ್ಲ ಅಂತ..., ಅಂಗಡಿ ಮಾಬ್ಲಣ್ಣ ಕೊಟ್ಟ ದುಡ್ಡು ಅಮ್ಮನ ಕೈಯ್ಯಲ್ಲಿ ಕೊಟ್ಟಿದ್ದೆ...., ಬೋ...ಮಗ ಅವ್ನು...,ನನ್ನಪ್ಪ,  ಅಮ್ಮನ ಕೈಯಿಂದ ಅದನ್ನು ವಸೂಲ್ ಮಾಡಿ ಗಡಂಗಿಗೆ ಹೋಗಿದ್ದಾನೆ. ಅದರ ಮೇಲೆ ನನ್ಗೆ ಬುದ್ಧಿ ಬೇರೆ ಹೇಳ್ತಾನೆ..., ನನ್ನ ದುಡ್ಡು...,ನಾನೇ ಕುಡಿದ್ರೇನಂತೆ...ಹಾಂ...?'
`ಹೌದು ಮಾರಾಯಾ..., ಇಕಾ..., ಕುಪ್ಪಿ ನನ್ಗೆ.., ಇದು ನನ್ನಪ್ಪನಿಗೆ...., ಫಿಫ್ಟಿ ಫಿಫ್ಟಿ.... ಮಾರಾಯಾ...'
ಅದುವರೆಗೂ ಕುಳಿತೇ ಇದ್ದ ಇನ್ನೊಬ್ಬ ದಿಗ್ಗನೆ ಎದ್ದು ನಿಂತ. ಜೇಬಿನಲ್ಲಿದ್ದ ನೋಟುಗಳನ್ನು ಎತ್ತಿ ಹಿಡಿದು ಕಂಡಕ್ಟರನೆಡೆಗೆ ನೋಡುತ್ತಾ ಮುಖವನ್ನು ಕೆಟ್ಟದಾಗಿ ತಿರುಚುತ್ತಾ `ಟಿಕಟ್...ಟಿಕೆಟ್...' ಎನ್ನತೊಡಗಿದ. ಕಂಡಕ್ಟರ್ ಮಹಾಶಯ ತಾನು ಕುಳಿತ ಮೂಲೆ ಸೀಟಿನಿಂದ ಅಲ್ಲಾಡಲೇ ಇಲ್ಲ. ಹಿಂದಿನ ಅನುಭವಗಳಿಂದ ಅವನು ಕಲಿತ ಪಾಠಗಳು ಹಲವಿರಬಹುದು. ಆದುದರಿಂದಲೇ ಇವರಿಷ್ಟೆಲ್ಲಾ ಗೌಜು ಗದ್ದಲ ಮಾಡುತ್ತಿದ್ದರೂ ಚಾಲಕ ನಿರ್ವಾಹಕರಿಬ್ಬರೂ ಸ್ಥಿತಪ್ರಜ್ಞರಂತಿದ್ದರು.
ಮಾರನೆಯ ದಿನ ನಾನು ಗುಂಪಿನಲ್ಲಿದ್ದ ನಮ್ಮ ನೆರೆಕರೆ ಹುಡುಗ ಕೆಲಸ ಮಾಡುವ ಅಂಗಡಿಗೆ ಹೋದೆ. ಎಷ್ಟು ಸಭ್ಯವಾಗಿತ್ತು ಅವನ ನಡವಳಿಕೆ! ಗ್ರಾಹಕರೆಡೆಗೆ ಆತ ತೋರಿಸುತ್ತಿದ್ದ ಕಾಳಜಿ ನೋಡಿ ನಿನ್ನೆಯ ಅವನೇ ಇವನಾ? ಎಂದು ನನ್ನನ್ನೇ ಪ್ರಶ್ನಿಸಿಕೊಂಡೆ

ಈಗ ಕೆಲವು ದಿನಗಳ ಹಿಂದೆ ಮಾಧ್ಯಮಗಳಿಗೆ ಸುಗ್ಗಿಯೋ ಸುಗ್ಗಿ. `ಪುಟ್ಟ ಶಾಲಾಬಾಲಕರು ಸರಾಯಿ ಕುಡಿಯುತ್ತಿದ್ದಾರೆ..., ಅದನ್ನು ಕಂಡುಹಿಡಿದದ್ದೇ ನಾವು...' ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡ ಪತ್ರಿಕೆಗಳು, `ಗುಂಡಿನ ಗಮ್ಮತ್ತು, ಮಗುವಿಗೆ ಆಪತ್ತು', `ಗುಪ್ತಗಾಮಿನಿ ಮದಿರೆಯ ಸೆರೆಯಲ್ಲಿ...', ಇಂತಹ ಆಕರ್ಷಕ ತಲೆಬರಹದಡಿಯಲ್ಲಿ ಸುದ್ದಿಗಳ ಮೆರವಣಿಗೆಗಳನ್ನು ಏರ್ಪಡಿಸುತ್ತಾ ಇದ್ದುವು. ಅದೊಂದು ದಿನಪತ್ರಿಕೆಯ ಮೂಲೆಯಲ್ಲಿದ್ದ ಪುಟ್ಟ ಸುದ್ದಿಯೊಂದು ನನ್ನ ಗಮನ ಸೆಳೆದಿತ್ತು. ಕುಗ್ರಾಮದಲ್ಲೊಂದು ಶಾಲೆ. ಐದನೇ ತರಗತಿ ವಿದ್ಯಾರ್ಥಿಯ ನಡತೆಯಲ್ಲಿ ಏನೋ ವಿಶೇಷತೆಯನ್ನು ಗಮನಿಸಿದ ಶಿಕ್ಷಕ ಮಗುವನ್ನು ಬಳಿಗೆ ಕರೆದರು. ದಿನ ಬಸ್ಸಿನಲ್ಲಿ ನನ್ನ ಮೂಗಿಗೆ ಗಪ್ಪೆಂದು ವಾಸನೆ ಬಡಿದಿತ್ತಲ್ಲವೇ? ಅದೇ ಅನುಭವ ಮೇಷ್ಟ್ರಿಗೂ ಆಯಿತಂತೆ. ಬೆದರಿಕೆ, ಹೊಡೆತಕ್ಕೆ ಜಗ್ಗದ ಮಗುವನ್ನು ಪ್ರೀತಿಯಿಂದ ಪುಸಲಾಸಿ ಕೇಳಿದಾಗ ಹೇಳಿದ್ದೇನು ಗೊತ್ತೇ? `ಅದೂ..., ನಮ್ಮಪ್ಪ ಸರಾಯಿ ಹೊಡೀತಾನೆ. ಅವ್ನಿಗೆ ನಾನೇ ತಂದು ಕೊಡೋದು..., ಒಂದಿನ ನನ್ನತ್ರ ಹೇಳಿದ್ದ, ಹೊಸವರ್ಷ, ಹಬ್ಬ, ಮದುವೆ ಟೈಮಲ್ಲಿ ಸ್ವಲ್ಪ ಎಣ್ಣೆ ಹಾಕಿದ್ರೆ ಏನೂ ಆಗೋದಿಲ್ಲ ಅಂತ. ನಿನ್ನೆ ನಮ್ಮಾವನ ಮದುವೆ ಇತ್ತು, ಎಲ್ರೂ ಹಾಕ್ಕೋಳ್ತಿದ್ರು..., ನಾನೂ ಬಗ್ಗಿಸ್ಕೊಂಡೆ..., ಬೆಳಗ್ಗೆ ನೋಡುವಾಗ ಬಾಟ್ಲಿಯಲ್ಲಿ ಒಂಚೂರು ಬಾಕಿ ಇತ್ತು. ಅದನ್ನು ಸ್ಕೂಲಿಗೆ ಬರೋವಾಗ ಇಳಿಸ್ಕೊಂಡೆ...,ಪಾಠ ಕೇಳೊದಿಕ್ಕೆ ಜೋಶ್ ಬರಲಿ ಅಂತ...!' ಹೇಗಿದೆ ಹುಡುಗನ ಮಾತು!?
 ಕೆಲವಾರು ಬಡಮಕ್ಕಳ ಕಥೆ ಇದಾದರೆ ಹಲವಾರು ಮೇಲ್ಮಧ್ಯಮ ವರ್ಗದ ಕುಟುಂಬಗಳಲ್ಲೂ ಇಂತಹ ಸಂದರ್ಭಗಳು ಘಟಿಸುತ್ತಲೇ ಇರುತ್ತವೆ. ಕಾರಣ ಸ್ವಲ್ಪ ಬೇರೆ ಇರಬಹುದು. `ಜಸ್ಟ್ ಫಾರ್ ಚೇಂಜ್' ಎಂದೋ `ಸ್ಟೇಟಸ್ ಮೈನ್ಟೈನ್ ಮಾಡಲು' ಎಂದೋ...,ಅಂತೂ ಬಡ ಮಕ್ಕಳು ಸರಾಯಿ ಕುಡಿಯುವುದಿದ್ದರೆ ಸಿರಿವಂತ ಮಕ್ಕಳು `ಹಾಟ್ ಡ್ರಿಂಕ್ಸ್' ಕುಡೀತಾರೆ ಅಷ್ಟೇ ವ್ಯತ್ಯಾಸ. ದಾರಿ ಬೇರೆಯಾದರೂ ಗುರಿ ಒಂದೇ

ಪ್ರಿಯ ಓದುಗ ಮಿತ್ರರೇ, ಈಗ ಹೇಳಿ, ಸರಕಾರ, ಅಬಕಾರೀ ಇಲಾಖೆ, ಮದ್ಯದಂಗಡಿ, ಕಳ್ಳಭಟ್ಟಿ ಸಾರಾಯಿ ಕೇಂದ್ರ, ಸರಬರಾಜು ಮಾಡುವ ದಲ್ಲಾಳಿಗಳು...ಇವರೆಲ್ಲಾ ಇರುವುದೆಲ್ಲಿ? ಮನೆಯ ಹೊರಗೆ ಅಂಗಳ ದಾಟಿದ ಮೇಲೆ ತಾನೇ ಸಿಗುವವರು? ನಮ್ಮ ಮನೆಯ ಒಳಗೆ ನಮ್ಮ ಪಡಸಾಲೆಯಲ್ಲಿ ನಮ್ಮ ಚಾಪೆಯ ಮೇಲೆ ನಾವು ಮದ್ಯದ ಬಾಟಲಿ ಇಟ್ಟುಕೊಂಡು ಕುಳಿತುಕೊಳ್ಳುವುದು, ಮಕ್ಕಳು ಬಳಿಗೆ ಬರುವುದು ಅಥವಾ ಅವರನ್ನು ಬಳಿಗೆ ಕರೆಯುವುದೋ ಮಾಡುತ್ತೇವಲ್ಲಾ? ಇದು ಸರಿಯೇ? ಅಥವಾ ಈಗೆಲ್ಲಾ `ಶೇರ್' ಮಾಡುವ ಖಯಾಲಿ ಸಾರ್ವತ್ರಿಕವಾದಂತೆ ಇದನ್ನೂ ಶೇರ್ ಮಾಡಿಕೊಳ್ಳುವುದೇ ಸರಿಯಾದ ನೀತಿಯೆಂದು ತಿಳಿದಿದ್ದೇವೆಯೇ? ಪ್ರಶ್ನೆ, ಉತ್ತರ ಎರಡೂ ನಮ್ಮಲ್ಲೇ ಇವೆ. ಮಕ್ಕಳು, ಸಮಾಜ ಎರಡೂ ನಮ್ಮವೇ. `ಮನೆಯೇ ಮೊದಲ ಪಾಠಶಾಲೆ' ಎಂದು ನಾವು ಚಿಕ್ಕವರಿರುವಾಗ ಕಂಠ ಪಾಠ ಮಾಡಿದ್ದೆವಲ್ಲಾ? ನಮ್ಮ ಮಕ್ಕಳಿಗಾಗುವಾಗ ಅದು `ಓಲ್ಡ್ ಫ್ಯಾಶನ್' ಆಗಿ ಹೋಯಿತೇ? ಕಲಾಯ ತಸ್ಮೈ ನಮಃ           

           
               





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ