ಶುಕ್ರವಾರ, ಏಪ್ರಿಲ್ 29, 2016

......,ದೊಣ್ಣೆಗೆ ನಿಮಿಷ.


ಮಾನವನ ಕ್ರೂರತೆಯ ಅಟ್ಟಹಾಸಕ್ಕೆ ಮತ್ತೊಂದು ಬಲಿ ಶಕ್ತಿಮಾನ್. ಉತ್ತರಾಖಂಡ್ ರಾಜ್ಯದ ಪೋಲೀಸ್ ಅಶ್ವ. ದಿನ(ಮಾರ್ಚ್ 17. 2016) ದವರೆಗೆ ಆಕೆಯ ಬಗ್ಗೆ ತಿಳಿದವರು ಕೆಲವೇ ಮಂದಿ. ಯಾವಾಗ ಅವಳು ಅಡ್ಡ ಮಲಗಿದಳೋ (ಕುದುರೆಗಳು ನೆಲದಲ್ಲಿ ಅಡ್ಡ ಮಲಗಿದುವು ಎಂದರೆ ಅವುಗಳ ಕೊನೆಗಾಲ ಸಮೀಪಿಸಿತು ಎಂದೇ ತಿಳಿಯಲಾಗುತ್ತದೆ) ಆವಾಗ ಜನತೆ ಎಚ್ಚೆತ್ತುಕೊಂಡಿತು, ಮಮ್ಮಲ ಮರುಗಿತು, ಕಣ್ಣೀರಿಟ್ಟಿತು, ಜಾತಿ, ಮತ ಬೇಧವಿಲ್ಲದೆ ಅವಳ ಒಳಿತಿಗಾಗಿ ಪ್ರಾರ್ಥನೆಗಳು ನಡೆದುವು. ಶ್ರೇಷ್ಠದರ್ಜೆಯ  ಚಿಕಿತ್ಸೆಗಳೂ ನಡೆದುವು. ಮೊನ್ನೆ ಏಪ್ರಿಲ್ 20ರಂದು ಸುಮಾರು ಒಂದು ತಿಂಗಳ ನರಕಯಾತನೆಗೆ ವಿದಾಯ ಹೇಳುವ ಸಮಯದಲ್ಲಿ ಅವಳು, `ಹೇ ದೇವಾ.., ಮುಂದೆ ಜನ್ಮವೊಂದಿದ್ದರೆ ನನ್ನನ್ನು ಗೊಬ್ಬರದ ಹುಳವನ್ನಾಗಿಯಾದರೂ ಸೃಷ್ಟಿಸು, ಬೇಸರಿಸಲಾರೆ. ಆದರೆ ಮಾನವನ ಜೊತೆಗಾರನನ್ನಾಗಿ ಮಾತ್ರ ಮಾಡಬೇಡ' ಎಂದು ಪ್ರಾರ್ಥಿಸಿಯೇ ಹೋಗಿರಬೇಕು.

ಇಪ್ಪತ್ತು ವರ್ಷಗಳಷ್ಟು ಹಿಂದೆ ನಮ್ಮ ದೇಶದಲ್ಲಿ 8.17 ಲಕ್ಷಗಳಷ್ಟಿದ್ದ ಕುದುರೆ ಸಂತತಿ 2012ರಲ್ಲಿ 24% ದಷ್ಟು ಕಡಿಮೆಯಾಗಿ 6.25 ಲಕ್ಷಕ್ಕಿಳಿದಿತ್ತು (ಪ್ರಸ್ತುತ ಅದು ಇನ್ನಷ್ಟು ಕಡಿಮೆಯೆ ಇರಬಹುದಷ್ಟೆಯಲ್ಲದೆ ಹೆಚ್ಚಂತೂ ಆಗಿರಲಾರದು). ಅವುಗಳಲ್ಲಿ ಕೇವಲ ಒಂದು ಸಾವಿರಕ್ಕಿಂತಲೂ ಕಡಿಮೆ ಸಂಖ್ಯೆಯ ಕುದುರೆಗಳು ನಮ್ಮ ಪೋಲೀಸ್ ಇಲಾಖೆಯಲ್ಲಿವೆ. ಒಟ್ಟು ಹದಿನಾರು ರಾಜ್ಯಗಳಲ್ಲಿ ಮಾತ್ರವೇ ಪೋಲೀಸ್ ಅಶ್ವದಳವಿದೆ(ಅದರಲ್ಲಿ ನಮ್ಮ ಕೇರಳ, ಕರ್ನಾಟಕವೂ ಸೇರಿದೆ). ಪೋಲೀಸ್ ಅಶ್ವದಳಕ್ಕೆ ಸೇರ್ಪಡೆಗೊಳ್ಳಬೇಕಾದರೆ ವರ್ಷಗಳ ಕಾಲ ಕುದುರೆಗಳನ್ನು ಕಠಿಣ ತರಬೇತಿಗೊಳಪಡಿಸಬೇಕಾಗುತ್ತದೆ. ನಿರ್ಧಿಷ್ಟ ಕುದುರೆ ಮತ್ತು ಅದರ ಸವಾರನ ನಡುವೆ ಅನೂಹ್ಯ ಬಂಧವಿರಬೇಕಾಗುತ್ತದೆ. ಕುದುರೆಯ ಪ್ರತಿ ಚರ್ಯೆ, ನೋಟ, ಬಾಡಿ ಲಾಂಗ್ವೇಜ್ ಆರೋಗ್ಯದ ಸೂಕ್ಷ್ಮ ಏರುಪೇರುಗಳನ್ನು ತಕ್ಕ ಸಮಯದಲ್ಲಿ ತಕ್ಕ ರೀತಿಯಲ್ಲಿ ಗುರುತಿಸುವ ಚಾಕಚಕ್ಯತೆ ಅಥವಾ ತನ್ನ ಮಗುವಿನ ಶಾರೀರಿಕ, ಮಾನಸಿಕ ಬದಲಾವಣೆಗಳನ್ನು ಥಟ್ಟೆಂದು ಕಂಡುಹಿಡಿಯಬಲ್ಲ ತಾಯಿಯ ಹೃದಯ ಅವನಲ್ಲಿರಬೇಕಾಗುತ್ತದೆ. ಕುದುರೆಗಳಿಗೆ ಪೋಲೀಸ್ ಇಲಾಖೆಯ ತರಬೇತಿ ಎಂದರೆ ಅದೊಂದು ಭಗೀರಥ ಪ್ರಯತ್ನವೇ ಸರಿ. ಸ್ವಭಾವತಃ ಸೂಕ್ಷ್ಮ ಸಂವೇದಿಯಾದ ಕುದುರೆ ಕರ್ಕಶ ಶಬ್ಧ, ಜನಸಂದಣಿ, ಬೆಂಕಿ, ಹೊಗೆ, ತನ್ನೆದುರಿನ ದಾರಿಯಲ್ಲಿರಬಹುದಾದ ಅಡೆತಡೆಗಳನ್ನು ದ್ವೇಷಿಸುತ್ತದೆ ಮತ್ತು ತೀಕ್ಷವಾಗಿ ಪ್ರತಿಕ್ರಿಯೆ ನೀಡುತ್ತದೆ. ಪೋಲೀಸ್ ಇಲಾಖೆಯೆಂದರೆ ಇವುಗಳೊಂದಿಗೇ ಜೀವನವಲ್ಲವೇ? ಶ್ರೇಷ್ಠ ತಳಿಯ ಕುದುರೆ ಮರಿಗಳನ್ನು ಖರೀದಿಸಿ ತರಬೇತಿ ಕೇಂದ್ರಗಳಲ್ಲಿ ಅವುಗಳನ್ನು ಸಾಕಲಾಗುತ್ತದೆ. ಆರೋಗ್ಯ, ಆಹಾರ, ಅಭ್ಯಾಸ ಮೂರರ ಗುಣಮಟ್ಟವನ್ನು ಕಾಯ್ದುಕೊಂಡು ಕುದುರೆಗಳನ್ನು ಪಳಗಿಸಿ ಕಾರ್ಯಕ್ಷೇತ್ರಕ್ಕೆ ಇಳಿಸುವ ಮೊದಲು ಅವುಗಳನ್ನು ಪರೀಕ್ಷೆಗೆ ಒಡ್ಡಲಾಗುತ್ತದೆ. ಉದಾಹರಣೆಗೆ ಉತ್ಸವದ ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತಿರುವಾಗ ಡೋಲು, ವಾದ್ಯ, ಮೈಕುಗಳ ಗದ್ದಲಕ್ಕೆ ಕುದುರೆ ವಿಚಲಿತವಾದಂತೆ ಕಂಡರೂ ಸಾಕು. ಅದನ್ನು ಪುನಃ ಸಂಬಂಧಪಟ್ಟ ತರಬೇತಿ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಒಮ್ಮೆ ಅದು ಪೂರ್ತಿಯಾಗಿ ಪಳಗಿತೆಂದಾದರೂ ಕಾಲ ಕಾಲಕ್ಕೆ ಅದರ ಕ್ಷಮತೆಯನ್ನು ಪರೀಕ್ಷಿಸುವ ಕೆಲಸವೂ ನಡೆಯುತ್ತಿರುತ್ತದೆ. ನಮ್ಮ ಹೆಮ್ಮೆಯ ಶಕ್ತಿಮಾನ್ ಎಲ್ಲಾ ಪರೀಕ್ಷೆಗಳನ್ನೂ ಯಶಸ್ವಿಯಾಗಿ ಮುಗಿಸಿದ್ದ ಖತೈಯ್ಯಾವಾರಿ ಜಾತಿಯ ಹದಿನಾಲ್ಕು ವರ್ಷ ಪ್ರಾಯದ ಶುಭ್ರ ಶ್ವೇತವರ್ಣದ ಧೀರೆ, ಗಂಭೀರೆ, ಚೆಲುವೆಯಾಗಿದ್ದವಳು. ಈಕೆಗೆ ಮೂರೂವರೆ ವರ್ಷವಿರುವಾಗ ದಿಲ್ಲಿಯಲ್ಲಿ 95 ಸಾವಿರ ರೂಪಾಯಿಗೆ ಖರೀದಿಸಲಾಗಿತ್ತು. 2006ರವರೆಗೂ ತರಬೇತಿ ಪಡೆದು ನಂತರ ಉತ್ತರಾಖಂಡ್ ಪೋಲೀಸ್ ಇಲಾಖೆಯ ಅವಿಭಾಜ್ಯ ಅಂಗವಾದಳು. ಅರ್ಧಕುಂಭ ಮೇಳ, 2010 ಕುಂಭಮೇಳಗಳಲ್ಲಿ ಇವಳ ಸೇವೆ ಅವಿಸ್ಮರಣೀಯವಾಗಿತ್ತು. ಪಂಜಾಬ್ ಪೋಲೀಸ್ ಪೆರೇಡಿನಲ್ಲಿ ಈಕೆಯ ಘನ ಗಂಭೀರ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.
ವರ್ಷಗಟ್ಟಲೆ ತರಬೇತಿಯಿಂದಾಗಿ ಅದು ತೋರಿಸುತ್ತಿದ್ದ ಬುದ್ಧಿವಂತಿಕೆ, ಭವಿಷ್ಯದಲ್ಲಿ ಅದು ನೀಡಬಹುದಾಗಿದ್ದ ಇನ್ನಷ್ಟು ಉತೃಷ್ಟ ಸೇವೆ ಎಲ್ಲವೂ ಒಂದೇ ಒಂದು ಕ್ಷಣದ ಕೋಪೋದ್ರೇಕಕ್ಕೆ ಬಲಿಯಾಗಿ ಹೋಯ್ತಲ್ಲ? ಇಂತಹ ದುರಹಂಕಾರದ ಮೌಢ್ಯತೆಗೆ ಏನೆನ್ನೋಣ? ದೆಹ್ರಾಡೂನಿನಲ್ಲಿ ಪ್ರತಿಭಟನಾಕಾರರ ದಾಳಿಗೆ ಅದು ಸಿಲುಕಲು ಕಾರಣವೇನು? ಏನೂ ಇಲ್ಲಅದು ಸರಕಾರೀ ಇಲಾಖೆಯಲ್ಲಿತ್ತು ಎನ್ನುವುದೇ ಅದರ ಮೇಲಿನ ಆರೋಪಯಾಕೆಂದರೆ ಸರಕಾರದ ವಿರುದ್ಧ ತಾನೇ ಪ್ರತಿಭಟನೆ ನಡೆಯುತ್ತಿದ್ದುದು?  ಅದು ತನ್ನ ಕರ್ತವ್ಯವನ್ನಷ್ಟೇ ಮಾಡುತ್ತಿದ್ದುದು. ಉದ್ರಿಕ್ತ ಪ್ರತಿಭಟನಾಕಾರರು ಮುನ್ನುಗ್ಗಿ ಅನಾಹುತವೆಸಗದಂತೆ ಗಂಭೀರತೆಯಿಂದ ಅಚಲ ತಡೆಗೋಡೆಯಾಗಿ ನಿಂತಿತ್ತು. ಒಂದಿಷ್ಟೂ ಉಗ್ರವಾಗಿರಲಿಲ್ಲರಾಜಕಾರಿಣಿಯೋರ್ವನ ಕೈಯ್ಯಲ್ಲಿದ್ದ ದೊಣ್ಣೆಯ ಬಲವಾದ ಹೊಡೆತ ತನ್ನಮೇಲೆ ಬಿದ್ದಾಗ ಏಟಿನ ನೋವಿನಿಂದ ವಿಚಲಿತಳಾದ ಶಕ್ತಿಮಾನ್ ಹಿಂದಕ್ಕೆ ಸರಿಯತೊಡಗಿದಳು. ರಸ್ತೆಯಲ್ಲಿದ್ದ ಅದೇನೋ ಗುಂಡಿಯೋ ಅಥವಾ ಕಬ್ಬಿಣದ ಸಲಾಕೆಯೆಡೆಗೋ ಹಿಂದಿನ ಕಾಲು ಸಿಲುಕಿಕೊಂಡಿತು. ಎದುರಿನ ಕಾಲಿಗೆ ಬಿದ್ದ ಬಲವಾದ ಏಟು, ಹಿಂದಿನ ಕಾಲಿನ ಮೂಳೆ ಮುರಿತ..., ಧರಾಶಾಯಿಯಾಗಲು ಇನ್ನೇನು ಬೇಕು? ಅಮೇರಿಕಾದ ವೈದ್ಯರು, ಕೃತಕ ಕಾಲು, ಕಟ್ಟೆಚ್ಚರದ ಚಿಕಿತ್ಸೆ ಯಾವೂದೂ ಶಕ್ತಿಮಾನಳ ಶಕ್ತಿಯನ್ನು ಮರಳಿಸುವಲ್ಲಿ ಫಲಕಾರಿಯಾಗಲಿಲ್ಲ.
ಪ್ರಾಣಿಗಳಲ್ಲಿ ಅತ್ಯಂತ ವಿಧೇಯ ಮತ್ತು ವಿಶ್ವಸನೀಯ ಪ್ರಾಣಿಗಳೆಂದರೆ ಕುದರೆ ಮತ್ತು ನಾಯಿ. ಒಮ್ಮೆ ಇವುಗಳು ಮಾನವಜೀವಿಯಲ್ಲಿ ಪ್ರೀತಿ, ನಂಬಿಕೆ ಇಟ್ಟವೋ ಮತ್ತೆಂದಿಗೂ ಯಾವುದೇ ಕಾರಣಕ್ಕೂ ಅವು ಅಲುಗಾಡಲಾರವು. ಒಡೆಯನ ಪ್ರತಿ ಸುಖ ದುಃಖಗಳಲ್ಲಿ ಅವು ಬಾಗಿಯಾಗಿಬಿಡುತ್ತವೆ. ಸೂಟು ಬೂಟು ತೊಟ್ಟು ಉದ್ದುದ್ದ ಡಿಗ್ರಿಗಳನ್ನಿಟ್ಟುಕೊಂಡು ದೇಶಾವರಿ ನಗೆ ಬೀರುವ ಸಮಯಸಾಧಕ ಮಾನವನ ಬದಲಾಗುವ ಬಣ್ಣಕ್ಕೆ ತಕ್ಕಂತೆ ಅವು ಬದಲಾಗಲಾರವು! ಸಮಾಜದಲ್ಲಿ ದಿನೇ ದಿನೇ ಪ್ರಾಣಿಗಳ ಸಂಖ್ಯೆ ಕ್ಷೀಣಿಸಲು ಇದೂ ಒಂದು ಕಾರಣ. ಹಸು ಎಂದಿಗೂ ಹಸುವೇ, ಹಿಂಸೆಗೊಳಗಾದೆನೆಂದು ಅದು ಹುಲಿಯಾಗಬಲ್ಲುದೇ? ಶಕ್ತಿಮಾನ್ ಸೋತದ್ದೂ ಅಲ್ಲೇ. ನಾನ್ನೂರೈವತ್ತು ಕಿಲೋಗಳಿಗೂ ಅಧಿಕ ತೂಕವಿದ್ದ ಅದು ತನ್ನ ಕಾಲನ್ನು ಒಮ್ಮೆ ಝಾಡಿಸಿದ್ದರೂ ಸಾಕಿತ್ತು. ಹೊಡೆಯುವವ ಕೊಳೆತ ಹಲಸಿನಂತೆ ಉದುರಿ ಬಿದ್ದು ಅಪ್ಪಚ್ಚಿಯಾಗಿಹೋಗಿರುತ್ತಿದ್ದ. ಆದರೆ ಅದೇನು ಮನುಷ್ಯನೇ ಹಾಗೆ ಸೇಡು ತೀರಿಸಲು? `ಸಮತೂಕ, ಸಮಭಾವ' ಎನ್ನುವ ಅದರ ವ್ಯಕ್ತಿತ್ವವೇ ಅದಕ್ಕೆ ಮುಳುವಾಯ್ತು.       
ಸಾವಿರದ ಒಂಭೈನೂರ ಅರುವತ್ತರ ಒಂದು ಕಾನೂನಿನ ಪ್ರಕಾರ ಯಾವುದೇ ಪ್ರಾಣಿಗಳಿಗೆ ದೈಹಿಕ ಹಿಂಸೆ ನೀಡಿದವರಿಗೆ ಹತ್ತು ರೂಪಾಯಿಯಿಂದ ಐವತ್ತು ರೂಪಾಯಿಯವರೆಗೆ ಜುಲ್ಮಾನೆ ಹಾಕಬಹುದಂತೆ! ಐವತ್ತು ವರ್ಷಗಳ ನಂತರವೂ ಅದರಲ್ಲೇನೂ ಬದಲಾವಣೆ ಆಗಲಿಲ್ಲವಂತೆ. .ಪಿ.ಸಿ. ಸೆಕ್ಷನ್ 429ಕ್ಕೆ ಅನುಗುಣವಾಗಿ ಪ್ರಾಣಿ ಹಿಂಸೆಗೆ ಐದು ವರ್ಷಗಳವರೆಗಿನ ಜೈಲು ಶಿಕ್ಷೆ ವಿಧಿಸಬಹುದು ಎಂದು ನಮ್ಮ ಕಾನೂನು ಹೇಳುತ್ತದೆ. ಆದರೆ `something' ಕೊಟ್ಟರೆ ಎಲ್ಲವನ್ನೂ ಸಫಾಯಿ ಮಾಡಬಲ್ಲ ವ್ಯವಸ್ಥೆಯಲ್ಲಿ ಪ್ರಾಣಿಗಳ ಹಕ್ಕು ಹಾಗೂ ರಕ್ಷಣೆಗಾಗಿ ಹೋರಾಡುವವರು ಹೋರಾಡುತ್ತಲೇ ಇರುತ್ತಾರೆ. ಅವುಗಳನ್ನು ಹಿಂಸಿಸಿ ಅಟ್ಟಹಾಸ ಮಾಡುವವರು ಮಾಡುತ್ತಲೇ ಇರುತ್ತಾರೆ. ಅಮಾಯಕ ಪ್ರಾಣಿಗಳು ನಮಗಾಗಿ ಜೀವ ತೇಯುತ್ತಲೇ ಇರುತ್ತವೆ.
                                           ಚಿತ್ರ, ಮಾಹಿತಿ ,
                                           ಇಂಡಿಯನ್  ಎಕ್ಸ್ಪ್ರೆಸ್ಸ್ ಮತ್ತು ಅಂತರ್ಜಾಲ.
                                                                  

       

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ