ಕಳೆದ ವರ್ಷದ ಈ ದಿನ ನನ್ನ ನೆನಪಿನಲ್ಲಿ ಶಾಶ್ವತವಾಗಿ ಉಳಿದಿದೆ. ಯಾಕೆನ್ನುವಿರಾ? ಮುಂದೆ ಓದಿ. ಮಳೆ
ಬಂದು ಇಳೆ ತಂಪಾಗಿ ಮಣ್ಣಿನ
ಕಂಪು ಸೊಂಪಾಗಿ ಮೂಗಿಗಿಂಪಾಗಿ(ಸಾಧಾರಣವಾಗಿ
ಕಿವಿಗಲ್ಲವೇ ಇಂಪಾಗುವುದು.., ಇಲ್ಲಿ ಮೂಗಿಗೆ ಇಂಪಾದದ್ದು
ಹೇಗೆ? ಎಂದು ಕೇಳಬೇಡಿ. ಕವಿ
ಸಮಯದಲ್ಲಿ ಹಗಲು ಇರುಳಾಗುವ ಹಾಗೆ,
ಜಲಪಾತ ಕೆಳಗಿಂದ ಮೇಲಕ್ಕೆ ಧುಮ್ಮಿಕ್ಕುವ
ಹಾಗೆ ಇದೂ ಒಂದು ಎಂದು
ಅಂದಾಜಿಸಿಕೊಳ್ಳಬಹುದು) ಅದರ ಸುಖದಮಲಿನಲ್ಲಿ ಗೊದ್ದಡಿಯೊಳಗೆ
ಗುಪ್ಪೆಯಾಗಿ ಮಲಗಿದವಳನ್ನು ಎಬ್ಬಿಸಿದ್ದು `ಟ್ರೇಂ...ಟ್ರೀಂ...' ಎನ್ನುವ
ಆ ವಿಚಿತ್ರ ಶಬ್ಧ.
ಇನ್ನೂ ಬೆಳಗು ಹರಿದಿರಲಿಲ್ಲ. ಅಥವಾ
ಮೋಡಗಳ ದಟ್ಟಣೆಯಲ್ಲಿ ಸೂರ್ಯನ ಪ್ರವೇಶಕ್ಕೆ ಆಸ್ಪದವಿರಲಿಲ್ಲ.
ಧಿಗ್ಗನೆದ್ದು ಸಮಯ ನೋಡಿದೆ. ಬೆಳಗ್ಗಿನ
ಆರೂವರೆಯಾಗಿತ್ತು. ಗಂಡ, ಮಕ್ಕಳು ಕಾರ್ಯ
ನಿಮಿತ್ತ ಪರವೂರಿಗೆ ಹೋಗಿದ್ದುದರಿಂದ ಮನೆಯಲ್ಲಿ ನಾನೊಬ್ಬಳೇ ಇದ್ದೆ. ಕೆಲಸಗಳ ಗಡಿಬಿಡಿಯೇನೂ
ಇರಲಿಲ್ಲವಾದುದರಿಂದ ಮುಂಜಾನೆಯ ಸವಿನಿದ್ದೆಯನ್ನು ಚೆನ್ನಾಗಿಯೇ ಸವಿದುಬಿಡಬೇಕೆಂಬ ನನ್ನಾಸೆಗೆ ಕಲ್ಲು ಬಿದ್ದಿತ್ತು. ಆ
ವಿಚಿತ್ರ ಶಬ್ಧದಿಂದ ಒಂದು ಕ್ಷಣ ದಿಗಿಲು
ಹುಟ್ಟಿತ್ತಾದರೂ ಗಮನಕೊಟ್ಟು ಕೇಳಿದಾಗ ಅದು ಕಪ್ಪೆಯು
ನೋವಿನಿಂದ ಹೊರಡಿಸುವ ಧ್ವನಿ ಎಂದರಿತೆ.
ದಿನ ನಿತ್ಯ ಈ ಹೊತ್ತಲ್ಲಿ
`ಟರ್ರಾಂ...ಟರ್ರಾಂ..' ಎನ್ನುವ ಅದರ ಕೂಗಿಗೆ
ನಾನು ಹೊಂದಿಕೊಂಡಿದ್ದೆ. ಹಾಗಾಗಿ ಇದು ಅದರ
ಸಹಜ ಧ್ವನಿಯಲ್ಲವೆಂಬುದನ್ನು ಗಮನಿಸಿದೆ. ಕೈಯ್ಯಲ್ಲಿ ಟಾರ್ಚ್ ಹಿಡಿದು ಹೊರಕ್ಕೆ
ಬಂದೆ. ರಾತ್ರಿಯ ಭೀಕರ ಮಳೆಯಿಂದಾಗಿ
ವಿದ್ಯುತ್ ಕೈಕೊಟ್ಟಿತ್ತು. ತಣ್ಣನೆಯ ಗಾಳಿ, ಅಲ್ಲೊಂದು
ಇಲ್ಲೊಂದು ಬೀಳುತ್ತಿದ್ದ ದಪ್ಪನೆಯ ಮಳೆ ಹನಿಗಳು.
ಬಹುಶಃ ಇನ್ನೊಂದು ದೊಡ್ಡ ಮಳೆಗೆ ಪೂರ್ವ
ಪೀಠಿಕೆಯಿರಬೇಕು. ಕೊಡೆಯನ್ನು ಹಿಡಿಯದೇ ಅಂಗಳಕ್ಕಿಳಿದೆ. ನಿನ್ನೆ
ಸಂಜೆಯೇ ಅರಳಿ ಇಂದು ಮಗುಚಿಬಿದ್ದ
ಕೊಡೆಯಂತಾಗಿ ಹೋಗಿದ್ದ ಸುಗಂಧಿ ಹೂವಿನ
ಗೊಂಚಲು ಕಪ್ಪನೆಯ ಆಗಸದಲ್ಲಿ ಮಿರುಗುವ
ಬೆಳ್ಳಿಯಂತೆ ಟಾರ್ಚ್ ಬೆಳಕಿನ ಪ್ರಖರತೆಯಲ್ಲಿ
ಮಿರುಗಿತು. ಶುಭ್ರ ಬಿಳುಪಿನ ನಂದಿಬಟ್ಟಲ
ಹೂವಿನ ಮೇಲ್ಪದರದಲ್ಲಿ ನಿಂತ ಪಾರದರ್ಶಕ ನೀರಿನ
ಗುಳ್ಳೆ ಆಗಲೋ ಈಗಲೋ ಕೆಳಕ್ಕೆ
ಬೀಳಲು ಹವಣಿಸುವಂತಿತ್ತು. ಮರದಿಂದುದುರಿದ ಪಾರಿಜಾತದ ಹೂಗಳು ಸ್ವಲ್ಪ ಮೊದಲು
ಹರಿದು ಹೋಗಿದ್ದ ಮಳೆನೀರಿನೊಂದಿಗೆ ಸಾಗಿ
ಅಂಗಳದ ಮೂಲೆಯಲ್ಲಿ ಒಂದುಗೂಡಿ ಮುತ್ತು, ಹವಳದ ರಾಶಿಯನ್ನೇ
ಪೇರಿಸಿಟ್ಟಂತೆ ತೋರುತ್ತಿದ್ದುವು. ಅಂಗಳದಲ್ಲಿ ಬೆಳೆದಿದ್ದ ಮೆತ್ತನೆಯ ಹುಲ್ಲಿಗೆ ಬರಿ ಕಾಲೊತ್ತುವಾಗ ಅವು ಹಿಡಿದಿಟ್ಟ ನೀರು
ಬೆರಳಸಂದಿಯಿಂದ ಪಿಚಿಕ್, ಪಿಚಿಕ್ ಎಂದು
ಹೊರಕ್ಕೆ ರಟ್ಟುತ್ತಿದ್ದುವು. ತಲೆಗೆ ಬೀಳುತ್ತಿದ್ದ ಒಂದೊಂದು
ಮಳೆನೀರ ಹನಿ, ಮೂಗಿಗಡರುತ್ತಿದ್ದ ಹೂಗಳ
ಸಮ್ಮಿಶ್ರ ಸುಗಂಧ, ಕಾಲಿನಿಂದಲೇ ಮೇಲಕ್ಕೇರುತ್ತಿದ್ದ
ತಣ್ಣನೆಯ ಕೊರೆತ....,ದಟ್ಟ ಮೋಡಗಳ ಮರೆಯಿಂದ
ಹೌದೋ ಅಲ್ಲವೋ ಎಂಬಂತೆ ಗೋಚರಿಸುತ್ತಿದ್ದ
ಬೆಳ್ಳಿ ಗೆರೆ....,ಪ್ರಕೃತಿಯ ಈ ಲಾಸ್ಯಕ್ಕೆ ಸಾಕ್ಷಿಯಾದ
ನಾನು ಅಂಗಳಕ್ಕಿಳಿದ ಉದ್ದೇಶವನ್ನೇ ಮರೆತುಬಿಡುತ್ತಿದ್ದೆ ಪುನಃ ಆ ಕಪ್ಪೆ
ಕೂಗದಿರುತ್ತಿದ್ದರೆ.
ಇದುವರೆಗೂ
ಎಲ್ಲೆಲ್ಲೋ ಸುತ್ತುತ್ತಿದ್ದ ನನ್ನ ಟಾರ್ಚ್ ಈಗ
ಗುರಿ ಮುಟ್ಟಿತು. ತೆಂಗಿನ ಕಟ್ಟೆಯ ಮೂಲೆಯಲ್ಲಿದ್ದ
ಕೊಳೆತ ತರಗೆಲೆ ರಾಶಿಯ ಬಳಿಯಿಂದ
ಕೇಳುತ್ತಿತ್ತು ಆ ಆರ್ತನಾದ. ಓಹ್...,
ಅಲ್ಲೊಂದು ಕೇರೆಹಾವು! ಅದರ ಬಾಯಲ್ಲಿ ಈ
ಭೀಮಗಾತ್ರದ ಕಪ್ಪೆ. ಅದು ಕುಂಯ್ಯೋ..,
ಮುರ್ರ್ಯೋ...ಎನ್ನುತ್ತಾ ತಪ್ಪಿಸಿಕೊಳ್ಳಲು ಶತಪ್ರಯತ್ನ ಮಾಡುತ್ತಿತ್ತು. ಪ್ರಕೃತಿ ನಿಯಮ, ಆಹಾರ
ಚಕ್ರ ಎಲ್ಲವನ್ನೂ ಮರೆತ ನಾನು ಆ
ಹಾವನ್ನು ಓಡಿಸಲು ಮುಂದಾದೆ. ಟಾರ್ಚ್ ಕೆಳಕ್ಕೆ ಬೀಳದಂತೆ ಕಂಕುಳದಲ್ಲಿ ಸಿಗಿಸಿಕೊಂಡೆ. ಅಲ್ಲೇ ಬದಿಯಲ್ಲಿ ಬಿದ್ದಿದ್ದ
ನೀರಿನ ಕೊಳವೆಗೆ ನೀರು ಚಾಲೂ
ಮಾಡಿ ರಭಸದಿಂದ ಕೇರೆ ಹಾವಿನ
ಮೇಲಕ್ಕೆ ಹಾಯಿಸಿದೆ. ಅದು ಕ್ಯಾರೇ ಎನ್ನಲಿಲ್ಲ.
ಉತ್ಕೃಷ್ಟ ಭೋಜನ ಬಾಯಲ್ಲಿದ್ದು
ಗಂಟಲಿಗೆ ಇಳಿಯಲಿಲ್ಲವೆಂದರೆ ಅದೇನು ಸಣ್ಣ ಮಾತೇ?
ನಾನು ಬಿಡೆ, ಅದು ಕೊಡೆ
ಎನ್ನುವಂತೆ ಸ್ವಲ್ಪ ಹೊತ್ತು ನಮ್ಮ
ನಡುವೆ ಜಟಾಪಟಿಯಾಯ್ತು. ಅಷರಲ್ಲಿ ಬೆಳಗು ಹರಿಯಿತು.
ನಮ್ಮ ಪೇಪರಿನ ಹುಡುಗನ ಆಗಮನವಾಯ್ತು.
ಆ ಗಡಿಬಿಡಿವಾಲಾ ಕ್ಷಣಾರ್ಧದಲ್ಲಿ
ಮಾಯವಾಗುವ ಮೊದಲು ಪರಿಸ್ಥಿತಿಯನ್ನು ವಿವರಿಸಿದೆ.
`ಅದರ ಬಾಲಕ್ಕೆ ಒಂದು ಹೊಡೆಯಿರಿ
ಅಕ್ಕಾ, ನಿಮ್ಮ ಕಪ್ಪೆ ಬಚಾವಾಗುತ್ತೆ'
ಎಂದು ಹೇಳಿ ಓಟಕಿತ್ತ. ಹೇಗಾದರೂ
ಆ ಕಪ್ಪೆಯನ್ನು ಬದುಕಿಸಿಯೇ
ಸಿದ್ಧ ಎಂದು ನಿಶ್ಚೈಸಿದ್ದೆನಲ್ಲಾ? ಹಿಂಬದಿಗೋಡಿದೆ.
ಉದ್ದ ಕೋಲನ್ನು ತಂದು ದೂರ
ನಿಂತು ಆ ಹಾವಿನ ಬಾಲಕ್ಕೆ
ಹೊಡೆದೆ. ಈಗ ಅದರ ಏಕಾಗ್ರತೆಗೆ
ಭಂಗ ಬಂತು. ದವಡೆ ಸ್ವಲ್ಪ
ಸಡಿಲವಾದದ್ದೇ ತಡ ಕಪ್ಪೆ ಪುಸುಕ್ಕನೆ
ಹಾರಿ ಮಾಯವಾಯ್ತು. ಹಾವು ಅಲ್ಲೆಲ್ಲೋ ಪೊಟರೆಯ
ಸಂದಿಗೋಡಿಬಿಟ್ಟಿತು. ತೃಪ್ತಿಯಿಂದ ಮತ್ತೆ ಮಳೆಯ ಚೆಲುವನ್ನು
ಹೀರತೊಡಗಿದೆ. ಮಾರನೆಯ ದಿನ ಮಕ್ಕಳೊಡನೆ
ನನ್ನ ಸಾಹಸವನ್ನು ಬಣ್ಣಿಸಿದ್ದೇ ಬಣ್ಣಿಸಿದ್ದು. `ಹಾವು' ಎನ್ನುವ ಶಬ್ಧ
ಕೇಳಿದರೇ ಹಾರಿ ಬೀಳುವ ನನ್ನ
ಮಗಳು ಥರಗುಟ್ಟುತ್ತಲೇ ಎಲ್ಲವನ್ನೂ ಕೇಳಿ ಕೊನೆಗೆ ಹೇಳಿದಳು,`ಅಮ್ಮ, ನಿನ್ನ ಕೈಯ್ಯಲ್ಲಿ
ಸ್ಮಾರ್ಟ್ ಫ಼ೋನು ಇರುವುದು ದಂಡಕ್ಕೆ..., ಅದರ
ವಿಡಿಯೋ ಮಾಡಿ ನಮಗೆ ತೋರಿಸಬಹುದಿತ್ತಲ್ಲಾ..?'
ಎಂದಳು. ಗಾಳಿ ಹೋದ ಬೆಲೂನಿನಂತಾದೆ.
ಇವತ್ತು ಅದೇ ತಾರೀಕು.
ವರ್ಷ ಮಾತ್ರ ಒಂದು ಕಳೆದು
ಹೋಯ್ತು. ಸೆಖೆಯ ಉರಿಗೆ ನಿದ್ದೆಯಿಲ್ಲದೆ
ಹೊರಳಾಡಿ ಕೊನೆಗೂ ಸ್ವಲ್ಪ ಜೊಂಪು
ಹತ್ತಿದಂತಾಗಿತ್ತು. ಢಮಾರ್ ಎಂಬ ಶಬ್ಧದೊಂದಿಗೆ ಹತ್ತಾರು ಕಾಗೆಗಳ ಕರ್ಕಶ ಕೂಗಿಗೆ ಅದುರಿ ಬಿದ್ದೆ. ಘಂಟೆ
ನೋಡಿಕೊಂಡೆ. ಬೆಳಗ್ಗಿನ ಆರು. ತಲೆಯ ಮೇಲೆ
ತಿರುಗುವ ಫ್ಯಾನು ನಿಂತುಹೋಗಿತ್ತು. ಬಹುಶಃ
ನಮ್ಮ ಕಡೆಗೆ ಸರಬರಾಜು ಮಾಡುತ್ತಿದ್ದ
ವಿದ್ಯುತ್ತ್ ಟ್ರಾನ್ಸ್ಫಾರ್ಮರಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿರಬೇಕು.
ವಿದ್ಯುತ್ತ್ ತಂತಿಯಲ್ಲಿ ಕುಳಿತಿದ್ದ ಕಾಗೆ ಅದಕ್ಕೆ ಬಲಿಯಾಗಿರಬೇಕು
ಎಂದುಕೊಂಡೆ. (ಇಂತಹ ಘಟನೆ ಮೊದಲೂ
ಘಟಿಸಿತ್ತು) ಅವುಗಳ ಸಾಮೂಹಿಕ
ಕ್ರಾ...,ಕ್ರಾ ಕೂಗಿಗೆ ರೋಸಿ
ಹೋಗಿ ಎದ್ದು ಹೊರಕ್ಕೆ ಬಂದೆ.
ಕಾಂಕ್ರೀಟು ಹಾಕಿದ್ದ ಅಂಗಳದ ನೆಲ
ಇನ್ನೂ ನಿನ್ನೆಯ ಬಿಸಿಯನ್ನು ಉಳಿಸಿಕೊಂಡಿತ್ತು.
ಶುಭ್ರ ಆಕಾಶದಲ್ಲಿ ಒಂದೇ ಒಂದು ಮೋಡದ
ತುಣುಕಿರಲಿಲ್ಲ. ಆಗಲೇ ಮೂಡಣ ಬಾನು
ಬೆಳ್ಳಿಯಾಗಿತ್ತು. ಓಹ್...ಇವತ್ತಿಡೀ ವಿದ್ಯುತ್ತ್
ಇಲ್ಲವೇನೋ? ಗಿಡಗಳಿಗೆ ನೀರಿಲ್ಲ..? ಅಡುಗೆಗೆ ನೀರಿಲ್ಲ...? ಸ್ನಾನಕ್ಕೆ...?ಹರೋ...ಹರಾ...? ವಾತಾವರಣದ
ಬಿಸಿಯನ್ನು ತಾಳದೆ ಬಾಡಿ ಬಸವಳಿದು
ಹೋದ ಗಿಡಗಳು ಚಿಗುರಿಲ್ಲದೆ, ಮೊಗ್ಗಿಲ್ಲದೆ,
ಹೂವಿಲ್ಲದೆ ಬೆನ್ನು ಬಾಗಿಸಿ ನಿಂತು
ದೀನವಾಗಿ ನನ್ನನ್ನೇ ನೋಡುತ್ತಿದ್ದುವು.
`ಅಕ್ಕಾ...,
ಯಾರ ತಪ್ಪಿಗೆ ಯಾರಿಗೆ ಶಿಕ್ಷೆ...?'
ಯಾರೋ ಕೇಳಿದಂತಾಗಿ ತಿರುತಿರುಗಿ ನೋಡಿದೆ. ಯಾರೂ ಇಲ್ಲ!
ದೃಷ್ಟಿ ಅಚಾನಕ್ಕಾಗಿ ತೆಂಗಿನ ಕಟ್ಟೆಯ ಮೂಲೆಗೆ
ಹೊರಳಿತು. ಗಾರೆ ಎದ್ದ ಅಂಗಳದ
ಸಿಮೆಂಟು ನನ್ನನ್ನು ನೋಡಿ ಕಿಸಕ್ಕನೆ ನಕ್ಕಂತಾಯ್ತು.
`ಓ ಕಪ್ಪೇರಾಯಾ...ನೀನು ವಾಲಗ ಊದದೆ
ಮಳೆರಾಯ ಬಾರನಲ್ಲಾ...ಮಳೆರಾಯನ ಆಗಮನವಾಗದೆ ನೀನು
ವಾಲಗ ಊದಲಾರೆಯಾ...?' ಕಾಣದ ಆ ಕಪ್ಪೆಗೆ
ಪ್ರಶ್ನೆಯೊಂದನ್ನೆಸೆದು ಆಗಸದತ್ತ ದೃಷ್ಟಿ ಹಾಯಿಸಿದೆ.
ಬಾಲಾದಿತ್ಯ ಕೆಂಡವನ್ನೇ ಹೊತ್ತುಕೊಂಡು ಬಂದನೋ ಎನ್ನುವಂತೆ ಬಿಸಿ
ಚುಚತೊಡಗಿತ್ತಾದುದರಿಂದ ಒಳಕ್ಕಡಿಯಿಟ್ಟೆ. ಬಾಣಲೆಯಿಂದ ಬೆಂಕಿಗೆ ಎನ್ನುವಂತೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ