ಮಕ್ಕಳಿಗೆ, ಮೊಮ್ಮಕ್ಕಳಿಗೆ ಸಂಭ್ರಮವೇ ಸಂಭ್ರಮ. ಬೆಂಗಳೂರು, ಮುಂಬೈ, ಚೆನ್ನೈಯಲ್ಲಿರುವವರೆಲ್ಲಾ ನಾಲ್ಕು ದಿವಸ ಮೊದಲೇ ಬಂದಿಳಿದಿದ್ದಾರೆ. ಇಷ್ಟ, ಮಿತ್ರ ಬಂಧುಗಳಿಗೆಲ್ಲಾ ಆಮಂತ್ರಣವಿತ್ತಿದ್ದಾರೆ. ಕೇವಲ ಒಂದು ವಾರದಲ್ಲಿ ಆ ಹಳೆಯ ಮನೆ ಹೊಸ ಮದುವಣಗಿತ್ತಿಯಂತೆ ಜಗಮಗಿಸುತ್ತಿದೆ. ಪೇಟೆಗೆ ಓಡುವುದೇನು...? ಸಾಮಾನು ಖರೀದಿಸುವುದೇನು...? ತಂದು ತಂದು ಮನೆಯಲ್ಲಿ ರಾಶಿ ಹಾಕುವುದೇನು? `ಇದು ನಿಮಗೆ ಒಪ್ಪಿಗೆಯೇ...? ಇದು ಸರಿ ಇದೆಯಲ್ಲವೇ...?' ಎಂದು ಕೇಳುವವರ ಧಾವಂತ, ಗಡಿಬಿಡಿ, ಕಾತರ..., ಛೆ..., ನೋಡಲೆರಡು ಕಣ್ಣು ಸಾಲದು. ಫಲಭರಿತ ಜೇನುಗೂಡನ್ನು ನೆನಪಿಸುವಂತಿತ್ತು ಆ ಮನೆ. ಇಷ್ಟಕ್ಕೂ ಅಲ್ಲಿ ನಡೆಯುತ್ತಿರುವುದಾದರೂ ಏನು? ಹರ್ಷ, ರಾಗಿಣಿಯರ ವೈವಾಹಿಕ ಜೀವನದ ವಜ್ರಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಕುಟುಂಬದ ಸದಸ್ಯರು ನಿರ್ಧರಿಸಿದ್ದೇ ಈ ಎಲ್ಲ ಗೌಜಿಗೆ ಕಾರಣ. ಅದು `ನ ಭೂತೋ ನ ಭವಿಷ್ಯತಿ' ಆಗಿರಬೇಕೆಂಬೆಂಬುದಕ್ಕಾಗಿ ಈ ಎಲ್ಲ ಓಡಾಟ. ಹೈಸ್ಕೂಲು ಶಿಕ್ಷಕರಾಗಿ ನಿವೃತ್ತರಾದ ಆ ದಂಪತಿ ಸ್ವಂತದ್ದಾದ ಪುಟ್ಟ ಮನೆಯೊಂದರಲ್ಲಿ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ಮಕ್ಕಳೆಲ್ಲ ವಿದ್ಯಾವಂತರಾಗಿ ದೂರವಾದಾಗ ಪ್ರತಿಯೊಬ್ಬರೂ ಇನ್ನು ಆ ಹಳೆಮನೆಯಲ್ಲಿ ಒಂಟಿಜೀವನ ಸಾಕು ತಮ್ಮಲ್ಲಿಗೆ ಬನ್ನಿರೆಂದು ಅಪ್ಪ ಅಮ್ಮನನ್ನು ಕರೆದವರೇ. ಊರು, ಕೇರಿ, ವಠಾರ, ಸ್ನೇಹಿತರು, ಅದೆಲ್ಲಕ್ಕಿಂತ ಹೆಚ್ಚಾಗಿ ತಮ್ಮ ದುಡಿಮೆಯ ಉಳಿಕೆಯಿಂದ ಕಟ್ಟಿಸಿದ ಈ ಪುಟ್ಟ ಗೂಡು.... ಇವೆಲ್ಲವೂ ಅವರ ಜೀವದ ಉಸಿರಾಗಿರುವಾಗ ಹೋಗುವುದಾದರೂ ಹೇಗೆ? ಮಕ್ಕಳ ಮನೆಯಲ್ಲಿ ಇಲ್ಲಿನಂತೆ ಸ್ವತಂತ್ರರಾಗಿರಲು ಸಾಧ್ಯವೇ? ಮಗಂದಿರು, ಅಳಿಯಂದಿರು ಉನ್ನತ ಉದ್ಯೋಗಸ್ಥರು, ಸೊಸೆಯಂದಿರೂ ಮೊಮ್ಮಕ್ಕಳೂ ಕಡಿಮೆಯೇನಲ್ಲ. ಐದಂಕಿ ಸಂಬಳದ ಒಡೆಯರು. ಅವರ ಶ್ರೀಮಂತ ಜೀವನ ವಿಧಾನಕ್ಕೂ ಇವರ ಮಧ್ಯಮ ತರಗತಿಯ ಮನಸ್ಥಿತಿಗೂ ಅಜಗಜಾಂತರ ವ್ಯತ್ಯಾಸ. ವರ್ಷಕ್ಕೊಂದು ಬಾರಿ ರಜಾದಲ್ಲಿ ಅವರೆಲ್ಲರೂ ಬರುತ್ತಿರುತ್ತಾರೆ. ಆಗೆಲ್ಲಾ ಹರ್ಷ, ರಾಗಿಣಿಯರು ಈ ಅಂತರವನ್ನು ಗಮನಿಸುತ್ತಲೇ ಬಂದಿದ್ದಾರೆ. `ನಮ್ಮ ಕಾಲಕ್ಕೆ ನಮ್ಮದು ಸರಿ, ಅವರ ಜಮಾನಾಕ್ಕಾಗುವಾಗ ಅವರದೇ ಸರಿ'. ಎಂದುಕೊಂಡು ತಮ್ಮನ್ನು ತಾವೇ ಸಮಾಧಾನಿಸಿಕೊಳ್ಳುತ್ತಾರೆ. ಎರಡು ಸಮಾನಾಂತರ ರೇಖೆಗಳು ಎಂದಾದರೂ ಒಂದಾಗುವುದಿದೆಯೇ? ಆದರೆ ಜೊತೆಯಲ್ಲಿ ಸಾಗುವುದಕ್ಕೆ ಅಡ್ಡಿಯಿಲ್ಲವಲ್ಲಾ? ಹಾಗಾಗಿಯೇ ಹಿರಿಯರು ಇಲ್ಲೇ ಉಳಿದಿದ್ದಾರೆ. ಕಷ್ಟ, ಖಾಯಿಲೆಗಳಿಗೆ ನೆರೆಕರೆ, ಇಷ್ಟ, ಮಿತ್ರರಿದ್ದಾರೆ. ನಿತ್ಯ ಖರ್ಚು ಪೆನ್ಶನ್ ದುಡ್ಡಿನಲ್ಲೇ ನಡೆಯುತ್ತಿರುತ್ತದೆ. ಮಕ್ಕಳು ಕೊಡುತ್ತಿರುವ ದುಡ್ಡು ಬ್ಯಾಂಕಿನಲ್ಲಿ ಇಡಿ ಗಂಟಾಗಿ ಇದೆ. ವರ್ಷಕ್ಕೊಂದು ಬಾರಿ ಎಲ್ಲರೂ ಸೇರಿದಾಗ ಸಂಸಾರ ಹಾಲು ಜೇನಾಗುತ್ತದೆ. ಆದರೆ ಈ ವರ್ಷ ವಜ್ರಮಹೋತ್ಸವದಂಗವಾಗಿ ಎರಡನೆಯ ಬಾರಿ ಎಲ್ಲರೂ ಒಟ್ಟಾಗುತ್ತಿದ್ದಾರೆ.
ಸಂಜೆ ಹೊತ್ತು..., ಹರ್ಷ, ರಾಗಿಣಿಯರ ಮನೆ ರೇಷ್ಮೆಬಟ್ಟೆ, ಹೂ, ಚಿನ್ನ, ಸುಗಂಧದ್ರವ್ಯಗಳು, ಕ್ಯಾಮರಾ, ವಿಡಿಯೋಗಳ ಭರಾಟೆಯಲ್ಲಿ ಮುಳುಗಿ ಹೋಯ್ತು. ಹೊರಗಿನ ಹಜಾರದಲ್ಲಿ ಭವ್ಯವಾದ ಸಿಂಹಾಸನದಂತಹ ಎರಡು ಕುರ್ಚಿಗಳನ್ನು ಹಾಕಲಾಗಿತ್ತು. ಅವುಗಳಲ್ಲಿ ಅಜ್ಜ, ಅಜ್ಜಿ, ಆಸೀನರಾಗಬೇಕಾದ ಮುಹೂರ್ತವನ್ನೂ ಮೊಮ್ಮಕ್ಕಳು ನಿಗದಿಗೊಳಿಸಿದ್ದಾರೆ. ಅದಿನ್ನೂ ಬರಬೇಕಷ್ಟೆ. ಮುದ್ದಿನ ಮೊಮ್ಮಗಳು ಅಜ್ಜಿಯ ಶೃಂಗಾರದಲ್ಲಿ ತಲ್ಲೀನಳಾಗಿದ್ದಾಳೆ. `ಇಶ್ಶೀ...,ಇದೆಲ್ಲ ನನಗೆ ಎಂತಕೆ ಮರಾಯ್ತಿ....?' ಎನ್ನುತ್ತಿದ್ದ ರಾಗಿಣಿಯನ್ನು ಸುಮ್ಮನಿರಿಸಿ ಮೇಕಪ್ಪು ಮಾಡಿಯೇ ಬಿಟ್ಟಳು. ಬಿಳಿ ಮಿಶ್ರಿತ ಕಂದು ಕೂದಲು ಕಡು ಕಪ್ಪಾಗಿತ್ತು, ನೆರಿಗೆ ಕಟ್ಟಿದಂತಿದ್ದ ಕೆನ್ನೆಯನ್ನು ಉಜ್ಜಿ ಉಜ್ಜಿ ನಸುಕೆಂಪಗಾಗಿಸಿ ಕ್ರೀಮು, ಬ್ಲಶ್ಶರುಗಳ ಅನುಲೇಪನ, ತುಟಿಗಳಿಗೆ ಕಂಡೂ ಕಾಣದಂತೆ ಲಿಪ್ಸ್ಟಿಕ್ಕು, ಗುಳಿ ಬಿದ್ದ ಕಣ್ಣುಗಳಿಗೆ ಕಾಡಿಗೆಯ ಶೃಂಗಾರ, ತಾಳಿ ಸರ ಮಾತ್ರವಿದ್ದ ಕುತ್ತಿಗೆಗೆ ಜಗಮಗ ಸರಗಳು, ಭರ್ಜರಿ ಸೀರೆ ಇತ್ಯಾದಿಗಳನ್ನು ಚೊಕ್ಕವಾಗಿ ಪೂರೈಸಿದ ಅವಳು ತನ್ನ ಕುಶಲತೆಯನ್ನು ವೀಕ್ಷಿಸಲು ದೂರ ನಿಂತು ಪರಿಶೀಲನಾ ದೃಷ್ಟಿಯಿಂದ ಅಜ್ಜಿಯೆಡೆಗೆ ನೊಡಿದಳು. ಎಲ್ಲವೂ ಓ .ಕೆ. ಆದರೆ ಅಜ್ಜಿಯ ಕಣ್ಣಿನಲ್ಲಿ ಎಂದಿನಂತೆ ನಗೆಮಿಂಚು ಇಲ್ಲ! ಮುಖ ಯಾಕೋ ಮಂಕಾಗಿ ಹೋಗಿದೆ. `ಏನಜ್ಜಿ ಹೀಗೆ...?' ಕೇಳಿದ್ದಕ್ಕೆ ಎನೋ ಹಾರಿಕೆಯ ಉತ್ತರ ಕೊಟ್ಟರು. ಅದಕ್ಕಿಂತ ಹೆಚ್ಚು ಕೊಂಗಾಟ ಮಾಡಲು ಅವಳಿಗಾದರೂ ಪುರುಸೊತ್ತೆಲ್ಲಿ? ಅವಳ ಮೇಕಪ್ಪು ಇನ್ನೂ ಆಗಿಲ್ಲ. ಫೇಸ್ಬುಕ್ಕಲ್ಲಿ ತನ್ನ ಫೋಟೋ ಅಪ್ಲೋಡ್ ಮಾಡಬೇಕಿದ್ದರೆ ತಾನು ಅತಿ ಸುಂದರಳಾಗಿ ಕಾಣದಿದ್ದರೆ ಹೇಗೆ ಎಂಬ ಕಾತರ ಅವಳಿಗೆ. ಅಜ್ಜಿ ರಾಗಿಣಿಗಾದರೋ ಈ ಹೊಸ ಅವತಾರ ಅತಿಯಾದ ಹಿಂಸೆ ಎನಿಸಿತ್ತು. ಒಳಗಿನ ತಳಮಳದಿಂದಾಗಿ ಕಣ್ಗಳು ಮತ್ತೆ ಮತ್ತೆ ತುಂಬಿ ಬರುತ್ತಿದ್ದುವು. ಕಾರಣ? ನಿನ್ನೆಯವರೆಗೆ ಅವಳೂ ಬಹಳ ಸಂಭ್ರಮದಲ್ಲಿದ್ದವಳೇ. ನಂತರವೇ ಶುರುವಾದದ್ದು ಈ ತಳಮಳ. ಅವಳ ಕೆಳದವಡೆಯಲ್ಲಿರುವುದು ಕೃತಕ ದಂತ ಪಂಕ್ತಿ. ದಿನಾಲೂ ರಾತ್ರಿ ಮಲಗುವಾಗ ಅದನ್ನು ತೆಗೆದು ಸ್ವಚ್ಛಗೊಳಿಸಿ ಪುಟ್ಟ ಕರಂಡಕವೊಂದರಲ್ಲಿ ಭದ್ರಪಡಿಸಿ ಗೋಡೆಬದಿಯ ತನ್ನ ಹಾಸಿಗೆಯ ಪಕ್ಕದಲ್ಲಿಡುವುದು ವಾಡಿಕೆ. ಈಗ ಕೆಲವು ದಿನಗಳಿಂದ ಮನೆ ತುಂಬ ಜನ ಇದ್ದಾರಲ್ಲ? ಪ್ರಮಾದವಶಾತ್ ಯಾರಾದರೂ ಅದನ್ನು ತುಳಿದುಬಿಟ್ಟರೆ? ಮುಂದಾಲೋಚನೆಯಿಂದ ರಾತ್ರಿ ಯಾವಾಗಲೂ ಅದನ್ನು ಅಡುಗೆ ಕೋಣೆಯ ಕಟ್ಟೆಯಲ್ಲಿಡುತ್ತಿದ್ದಳು. ಇವತ್ತು ಬೆಳಗ್ಗೆದ್ದು ನೋಡಿದರೆ ಅದು ಮಾಯ! ಪ್ರತಿಯೊಬ್ಬರಲ್ಲೂ ಕೇಳಿಯಾಯಿತು. ಯಾರಿಗೂ ಗೊತ್ತಿಲ್ಲ. ಗಂಡನೊಡನಾದರೂ ಸವಿಸ್ತಾರವಾಗಿ ಹೇಳಿ ಮನಸ್ಸು ಹಗುರ ಮಾಡಿಕೊಳ್ಳೋಣವೆಂದರೆ ಆತ ಎಲ್ಲಿ ಸಿಗುತ್ತಾನೆ? ಮೊಮ್ಮಕ್ಕಳಿಗಿಂತ ಜೋರಾಗಿ ಓಡಾಟದಲ್ಲಿದ್ದ. `ಕರ್ಮ...ಕರ್ಮ...ದೇವರು ಕೊಟ್ಟರೂ ಪೂಜಾರಿ ಬಿಡ ಎನ್ನುವುದು ಇದಕ್ಕೇ ಏನೋ? ಬಗೆ ಬಗೆ ತಿಂಡಿಗಳು, ಸವಿ ಸವಿ ಊಟ....,ಇಂತಹಾ ಚೆಂದದ ವೇಷಭೂಶಣ....ಎಲ್ಲವೂ ಇದ್ದು ಏನು ಪ್ರಯೋಜನ? ಹಲ್ಲೊಂದಿಲ್ಲದಿದ್ದರೆ...? ಹೋಗಿ ಹೋಗಿ ಇವತ್ತೇ ಹೀಗಾಗಬೇಕೇ...?' ಹೀಗೆಲ್ಲಾ ಒಳಗೊಳಗೇ ಅತ್ತು ಕರೆದು ಕುಗ್ಗಿ ಹೋದಳು ರಾಗಿಣಿ.
ಮೊಮ್ಮಕ್ಕಳು ಅಜ್ಜ ಅಜ್ಜಿಯ ಕೈ ಹಿಡಿದು ಕರೆತಂದು ಸಿಂಹಾಸನದಲ್ಲಿ ಕುಳ್ಳಿರಿಸಿದರು. ರಾಗಿಣಿಯ ಹೊಸ ಅವತಾರ ನೋಡಿ ಹರ್ಷ ದಂಗುಬಡಿದು ಹೋದರು. ಕಣ್ಣುಗಳಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದುಬಂತು. ಅರ್ಧ ಶತಮಾನದ ಹಿಂದಿನ ಸುಂದರಿ, ಸೊಗಸುಗಾತಿ ರಾಗಿಣಿ ಅವರೆದುರು ಸುಳಿದು ಮಾಯವಾದಳು. ಗಂಡನ ಪ್ರತಿಕ್ರಿಯೆ ಗಮನಿಸಿದ ರಾಗಿಣಿಯ ಮುಖದ ಸುಕ್ಕುಗಳಲ್ಲಿ ಕೆಂಪು ಹರಿಯಲು ಹವಣಿಸಿತು. ಹರ್ಷ ಸಿಲ್ಕ್ ಜುಬ್ಬಾ ಪೈಜಾಮದಲ್ಲಿ ಮಿರಿ ಮಿರಿ ಮಿಂಚುತ್ತಿದ್ದರು. ಹೆಂಡತಿಯ ಮುಖದಲ್ಲಿ ಎಂದಿನಂತೆ ಪ್ರಸನ್ನತೆ ಇಲ್ಲದಿರುವುದನ್ನು ಅವರೂ ಗಮನಿಸಿದರು. ಆದರೆ ಎಲ್ಲರ ಎದುರು ವಿಚಾರಣೆ ಮಾಡುವುದಾದರೂ ಹೇಗೆ?
ಅತಿಥಿಗಳು ಒಬ್ಬೊಬ್ಬರಾಗಿ ಬಂದು ದಂಪತಿಗೆ ಶುಭಕೋರಿ ಜೊತೆಯಲ್ಲಿ ನಿಂತು ಫೊಟೋ ಕ್ಲಿಕ್ಕಿಸಿಕೊಂಡು ಸಭೆಯಲ್ಲಿ ಆಸೀನರಾದರು. ಮಕ್ಕಳು, ಮೊಮ್ಮಕ್ಕಳು ಪೈಪೋಟಿಗೆ ಬಿದ್ದಂತೆ ಭಾರೀ ಭಾರೀ ಉಡುಗೊರೆಗಳನ್ನಿತ್ತು ಅಜ್ಜ ಅಜ್ಜಿಯರನ್ನು ಬಳಸಿ ಹಿಡಿದು ಫೊಟೋ ತೆಗೆಸಿಕೊಂಡರು. ಈಗ ಎದುರುಗಿಟ್ಟಿರುವ ಕೇಕ್ ಕತ್ತರಿಸುವ ಸಮಯ. ಮೊದಲಿನ ತುಂಡನ್ನು ಹರ್ಷ ರಾಗಿಣಿಗೂ ರಾಗಿಣಿ ಹರ್ಷರಿಗೂ ತಿನ್ನಿಸಬೇಕೆಂದು ಮೊದಲೇ ತೀರ್ಮಾನವಾಗಿತ್ತು . ರಾಗಿಣಿ ನಿಜಕ್ಕೂ ಪೇಚಾಟಕ್ಕೊಳಗಾದದ್ದು ಈಗಲೇ.. ಕೆಳ ದವಡೆಯಲ್ಲಿ ಹಲ್ಲೇ ಇಲ್ಲ! ಆಹಾರ ಬಾಯಿಯನ್ನು ಪ್ರವೇಶಿಸುತ್ತಿದಂತೆ ಜೊಲ್ಲು ಹೊರಕ್ಕಿಳಿಯದಿದ್ದೀತೇ...ಛೆ...ಎಂತಹ ಅವಮಾನ...ಜಗಿಯುವುದಾದರೂ ಹೇಗೆ? ಅದೂ ಫೋಟೋ ತೆಗೆಯುವಾಗ...?ವಿಡಿಯೋದಲ್ಲಿ ಎಷ್ಟು ವಿಕಾರ ಬರಬಹುದೋ...? ಯೋಚನೆಗಳಿಂದ ಜರ್ಝರಿತಳಾಗಿ ಗಂಡನೆಡೆಗೆ ನೋಡಿದಳು. ಸಿಟ್ಟು ಉಕ್ಕಿ ಬಂತು, ತಾನಿಲ್ಲಿ ಇಷ್ಟು ಸಂಕಟಪಡುತ್ತಿದ್ದರೆ ಈತ ಎಷ್ಟು ಸೊಗಸಾಗಿ ನಗುತ್ತಿದ್ದಾನೆ....? ಉಳಿದವರು ಹೋಗಲಿ, ಈತನಿಗೂ ತನ್ನ ಕಷ್ಟ ಅರ್ಥವೇ ಆಗದಲ್ಲ...?
ಹಿರಿ ಮಗ ಶೃಂಗರಿಸಿದ ಚಾಕುವನ್ನು ತಂದೆಯ ಕೈಗಿತ್ತು ಕೇಕನ್ನು ತುಂಡರಿಸುವಂತೆ ವಿನಂತಿಸಿಕೊಂಡ. ವಿಡಿಯೋ ಇತ್ಯಾದಿಗಳು ಸಜ್ಜಾಗಿ ನಿಂತುವು. ಆಗ ಹರ್ಷ ಮಾತನಾಡಿದರು,
`ಒಂದು ನಿಮಿಷ ನಿಧಾನಿಸಿ..., ರಾಣೀ..., ಒಂದು ಕ್ಷಣ ನನ್ನ ಜೊತೆ ಬರ್ತೀಯಾ....?' ಎಂದು ಕೇಳಿದರು.
`ಅಯ್ಯೋ.., ಗಂಡ ಎಲ್ಲರೆದುರು ತನ್ನನ್ನು ರಾಣೀ ಎಂದು ಕರೆಯಬಹುದೇ...ಆ ಕರೆ ಯಾವಾಗಲೂ ತೀರ ಖಾಸಗಿಯಾಗಿತ್ತಲ್ಲ..? ಇದೇನು ಇವತ್ತಿನ ಹೊಸ ವರಸೆ? ಸಾಲದುದಕ್ಕೆ ಇಷ್ಟೆಲ್ಲ ಜನರು ನೆರೆದಿರುವಾಗ ತನ್ನನ್ನು ಮಾತ್ರ ಒಳಕ್ಕೆ ಕರೆಯುವುದು ಇದೆಂತಹ ಸಭ್ಯತೆ...?ಇಶ್ಶೀ...ಈ ಗಂಡಸರೇ ಹೀಗೆ...,ಹಲ್ಲಿಲ್ಲದ ತನ್ನ ಕಷ್ಟ ತನಗೆ...ಇವರಿಗಾದರೋ ತನ್ನೊಡನೆ ಪ್ರತ್ಯೇಕವಾಗಿ ಮಾತನಾಡುವ ಹಂಬಲ.... ಇಷ್ಟು ಹೊತ್ತು ಇಲ್ಲದ್ದು ಈಗ...?' ಹಾಗೆಂದು ಪತಿ ಕರೆಯುವಾಗ ಹೋಗದಿರಲು ಸಾಧ್ಯವೇ...?
ಮೊಮ್ಮಕ್ಕಳು `ಹೋ...ರಾಣಿ...ರಾಣಿ...ರಾಣಿ...' ಎನ್ನುತ್ತಾ ಕಿವಿಗಡಚಿಕ್ಕುವಂತೆ ಕೈಚಪ್ಪಾಳೆ ತಟ್ಟಿ ಕುಣಿಯುತ್ತಾ ಹೇಷಾರವ ಮಾಡತೊಡಗಿದರು. ಪ್ರಾಣ ಹೋಗುವಷ್ಟು ನಾಚಿದ ರಾಗಿಣಿಯ ದೃಷ್ಟಿ ಕೆಳಕ್ಕೆ ಬಾಗಿತು. ಉಡುಗೊರೆಯ ರೂಪದಲ್ಲಿ ತನ್ನ ಮೇಲೆ ಹೇರಲಾದ ನಗನಟ್ಟುಗಳನ್ನು ಹೊರಲಾರದೆ ಹೊತ್ತುಕೊಂಡು ಗಂಡನನ್ನು ಹಿಂಬಾಲಿಸಿದರು. ರೂಮಿಗೆ ಮುಟ್ಟುತ್ತಲೂ ಹರ್ಷ ಬಾಗಿಲು ಮುಂದೆ ಮಾಡಿದರು.
`ಇಶ್ಶೀ...ಇದೇನಿದು...ಇಷ್ಟೆಲ್ಲ ಜನರಿರುವಾಗ....?' ಹರ್ಷ ಪ್ರತಿಯಾಡದೆ ತನ್ನ ಜೇಬಿನಿಂದ ಅದೇನೋ ಒಂದು ವಸ್ತುವನ್ನು ಹೊರಕ್ಕೆ ತೆಗೆದರು.
`ಎಲ್ಲಿ, ಬಾಯಿ ಆ ಮಾಡು...' ಎನ್ನುತ್ತಲೇ ಪೊಟ್ಟಣದಲ್ಲಿದ್ದ `ಅದನ್ನು' ಆಕೆಯ ಕೈಗಿತ್ತರು. ನಿನ್ನೆಯಿಂದ ಕಾಣೆಯಾಗಿ ರಾಗಿಣಿಯ ಸಕಲ ಸಂಕಟಗಳಿಗೆ ಕಾರಣವಾದ ಹಲ್ಲಿನ ಸೆಟ್ಟಾಗಿತ್ತದು!
`ಓ...ಹ್..., ಎಲ್ಲಿತ್ತಿದು...?' ರಾಗಿಣಿಯ ಧ್ವನಿಯಲ್ಲಿ ಸಂಭ್ರಮ ಉಕ್ಕೇರುತ್ತಿತ್ತು.
`ಬೆಳ್ಳಂಬೆಳಗ್ಗೆ ಬಚ್ಚಲೊಲೆಗೆ ಬೆಂಕಿ ಹಾಕಲೆಂದು ಸೌದೆ ರಾಶಿಯೆಡೆಗೆ ಹೋಗಿದ್ದೆ. ಅಲ್ಲಿ ಬಿದ್ದಿತ್ತು ನಿನ್ನ ಹಲ್ಲಿನ ಕರಂಡಕ. ಇಲಿಯೋ ಹೆಗ್ಗಣವೋ ರಾತ್ರಿ ಅಡುಗೆ ಕೋಣೆಗೆ ಬಂದಿರಬೇಕು. ಚಂದದ ಪೆಟ್ಟಿಗೆ ಕಂಡು ಅದಕ್ಕೂ ಆಸೆ ಹುಟ್ಟಿತೇನೋ? ಹೊತ್ತೊಯ್ದು ತೆರೆಯಲು ಪ್ರಯತ್ನ ಪಟ್ಟಿರಬೇಕು. ತಿರುಗಣೆ ಗಟ್ಟಿಯಾಗಿದ್ದುದಕ್ಕೆ ಅಲ್ಲೇ ಬಿಟ್ಟು ಹೋಗಿದೆ. ಅದು ಕಚ್ಚಿದ ಕುರುಹಾಗಿ ಪೆಟ್ಟಿಗೆ ಅಲ್ಲಲ್ಲಿ ಜಜ್ಜಿ ಹೋಗಿತ್ತು. ನಿನ್ನ ಅಚ್ಚುಮೆಚ್ಚಿನ ಆ ಪೆಟ್ಟಿಗೆಯನ್ನೇ ಹೋಲುವ ಹೊಸದನ್ನು ಕೊಳ್ಳಲು ನಾವಾಗ ಇಡೀ ಸಿಟಿಯನ್ನು ಜಾಲಾಡಬೇಕಾಯ್ತು. ಗಂಡ ಮಾತಿಗೇ ಸಿಗ್ತಾ ಇಲ್ಲ ಅಂತ ಬೇಸರವಾಯ್ತೇನು...?' ಮೃದುವಾಗಿ ಕೇಳಿದ ಹರ್ಷರ ಆ ಪರಿಗೆ ರಾಗಿಣಿ ಕರಗಿಯೇ ಹೋದಳು.
`ಓ...ಹ್...ತುಂಬಾ ಥ್ಯಾಂಕ್ಸ್ ರೀ...ಅವರೆಲ್ಲರಿತ್ತ ಲಕ್ಷಗಟ್ಟಲೆ ಬೆಲೆಬಾಳುವ ಉಡುಗೊರೆಗಳಿಗಿಂತ ಇದು ತುಂಬಾ ಬೆಲೆಬಾಳುತ್ತೆ ರೀ...., ನಿಜವಾಗ್ಲೂ ನೀವು ನನ್ನನ್ನು ಅರ್ಥ ಮಾಡ್ಕೊಂಡಷ್ಟು ಇನ್ಯಾರೂ ಅರ್ಥ ಮಾಡ್ಕೊಂಡಿಲ್ಲಾ ಕಣ್ರೀ....ಹೇಳುತ್ತಾ ರಾಗಿಣಿಯ ಗಂಟಲುಬ್ಬಿ ಬಂತು.
`ಸರಿ..,ಸರಿ..., ಡಯಲಾಗ್ ಹೋಡೆಯೋದು ಆಮೇಲಾಗಲಿ..., ನಾನಿತ್ತ ಉಡುಗೊರೆಗೆ ಬದಲೇನು ಕೊಡ್ತೀಯಾ..?' ಹರ್ಷ ಮತ್ತೆ ನವ ಯುವಕರಾದರು. ರಾಗಿಣಿಯ ಭುಜ ಬಳಸಿದ ಅವರ ದೃಷ್ಟಿ ಮಡದಿಯ ಕೆನ್ನೆ ತುಟಿಗಳತ್ತ ಸಾಗಿದುವು.
`ಹೋ..., ಸೆನ್ಸಾರ್...ಸೆನ್ಸಾರ್...ಕಟ್...ಕಟ್...ಕಟ್...' ಎಂಬ ಕಿರುಚಾಟಕ್ಕೆ ಬೆಚ್ಚಿ ಬಿದ್ದ ವಜ್ರಮಹೋತ್ಸವದ ದಂಪತಿ ನಾಚಿ ದೂರ ಸರಿದರು. ಮೊಮ್ಮಕ್ಕಳು ನಿಶ್ಶಬ್ಧವಾಗಿ ಅವರನ್ನು ಹಿಂಬಾಲಿಸಿ ಅರೆಮುಚ್ಚಿದ ಬಾಗಿಲಿನ ಹಿಂಬದಿಯಲ್ಲಿ ಅವಿತಿದ್ದುದು ಅವರ ಗಮನಕ್ಕೇ ಬಂದಿರಲಿಲ್ಲ! ಹಲ್ಲು ಸೆಟ್ಟಿನ ಆಗಮನವು ಕಾರ್ಯಕ್ರಮವನ್ನು ಕಾಮನಬಿಲ್ಲಾಗಿಸಿತು ಎಂದು ಬೇರೆ ಹೇಳಬೇಕಾಗಿಲ್ಲ ತಾನೇ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ