ಭಾನುವಾರ, ಜೂನ್ 26, 2016

ರೇಶ್ಮೆ ಬಟ್ಟೆಗಳ ಸಂರಕ್ಷಣೆ....,ನಮಗೆಷ್ಟು ತಿಳಿದಿದೆ?


ಮಳೆಗಾಲ ಕಾಲೂರಿತೋ ಮಹಿಳೆಯರಿಗೆಲ್ಲಾ ಏಕಪ್ರಕಾರವಾಗಿ ಕಾಡುವ ಚಿಂತೆಯೊಂದಿದೆ. ರೇಶ್ಮೆ ಬಟ್ಟೆಗಳನ್ನು ರಕ್ಷಿಸಿಡುವ ಚಿಂತೆ. ಅಂದರೆ ಮಳೆಗೆ ಒದ್ದೆಯಾದಾಗ ಏನು ಮಾಡಬೇಕು ಎಂಬ ಚಿಂತೆಯಲ್ಲ. ಕಾಪಾಟಿನೊಳಗೆ ಭದ್ರಪಡಿಸಿದ ರೇಶ್ಮೆ ಸೀರೆಗಳು ಮಂಕು ಬಡಿದು ಹೋಗಿರುತ್ತವೆ, ಬೂಸುರು ವಾಸನೆ ಬರುತ್ತಿರುತ್ತವೆ. ಮಡಚಿ ಇಟ್ಟ ಪದರಗಳ ನಡುವೆ ಅಲ್ಲಲ್ಲಿ ಅಂಗೈಗಲದ ಬಿಳಿ ಕಲೆಗಳು.... ರೀತಿಯಾದ ರೇಶ್ಮೆ ಬಟ್ಟೆಗಳ ಆಯಸ್ಸು ಮುಗಿಯಿತೆಂದೇ ಲೆಕ್ಕ. ಇದಕ್ಕೇನು ಪರಿಹಾರ? ಎಂಬುದೇ ಚಿಂತೆ. ಉಳಿದೆಲ್ಲ ಬಟ್ಟೆಗಳಂತೆ ರೇಶ್ಮೆ ಬಟ್ಟೆಗಳನ್ನು ಸೀದಾ ನೀರಿಗೆ ಹಾಕಿ ತೊಳೆಯುವ ಹಾಗೂ ಇಲ್ಲ. ಸಾವಿರಾರು ರೂಪಾಯಿ ಕೊಟ್ಟು ತಂದ ಸೀರೆಯ ಸ್ಥಿತಿ ಹೀಗಾದರೆ ಯಾರಿಗೆ ಹೊಟ್ಟೆ ಉರಿಯಲಾರದು ಹೇಳಿ? ರೇಶ್ಮೆ ಬಟ್ಟೆಗಳ ಬಾಳತನ ಇರುವುದೇ ಅದರ ಸಂರಕ್ಷಣೆಯಲ್ಲಿ. ಇವತ್ತು ಅದರ ಬಗ್ಗೆ ನೋಡೋಣ. ಅದಕ್ಕೂ ಮೊದಲು ರೇಶ್ಮೆಸೀರೆಗಳ ವೈವಿಧ್ಯತೆಯ ಕುರಿತು ಒಂದು ಸ್ಥೂಲ ನೋಟ.
 ನಮ್ಮ ದೇಶದಲ್ಲಿ ವೇದ ಕಾಲದಲ್ಲೇ ರೇಶ್ಮೆಯ ಉಪಯೋಗ ಇತ್ತೆಂಬುದಕ್ಕೆ ಬೇಕಾದಷ್ಟು ಸಾಕ್ಷಿಗಳಿವೆ. ಮಹಾವಿಷ್ಣುವನ್ನು ಕುರಿತು ಹೇಳುವಾಗ ಪೀತಾಂಬರ(ಹಳದಿ ಬಣ್ಣದ ರೇಶ್ಮೆ ಬಟ್ಟೆ)ಧಾರಿ ಎನ್ನುವ ಶಬ್ಧದ ಬಳಕೆಯಾಗಿರುವುದನ್ನು ನಾವೆಲ್ಲರೂ ಗಮನಿಸಿಯೇ ಇದ್ದೇವೆ. ಮುಂದೆ ರಾಮಾಯಣ, ಮಹಾಭಾರತಗಳಲ್ಲೂ ರಾಜ- ರಾಣಿಯರ ಬಾಹ್ಯ ರೂಪ, ವಿವಾಹ ಸಂಧರ್ಭಗಳು, ಅರಮನೆಯ ವೈಭವದ ಚಿತ್ರಣ....ಇತ್ಯಾದಿಗಳ ವರ್ಣನೆಯಲ್ಲಿ ರೇಶ್ಮೆ ಹಾಸುಹೊಕ್ಕಾಗಿಯೇ ಇರುತ್ತಿತ್ತು. ಅನ್ಯರ ಆಕ್ರಮಣವಾಗುವವರೆಗೂ ಭರತವರ್ಷದ (ಅಫ್ಘಾನಿಸ್ತಾನ, ನೇಪಾಳ, ಭೂತಾನ್, ಪಾಕಿಸ್ತಾನಗಳು ಸೇರಿದ ಭಾರತದ ಭೂಪಟ) ರೇಶ್ಮೆ ತಾಜಾವಾಗಿದ್ದಿರಲೇಬೇಕು. ಮುಂದೆ ಅನ್ಯರ ಆಕ್ರಮಣ ನಮ್ಮ ದೇಶವನ್ನು ಎಲ್ಲಾ ವಿಧಗಳಲ್ಲೂ ಛಿದ್ರಗೊಳಿಸಿತು. ಭಾರತದ ಒರಿಜಿನಾಲಿಟಿ ಎನ್ನುವುದು ಏನಿತ್ತೋ ಅದೆಲ್ಲವೂ ಕಲಬೆರಕೆಯಾಗಿಹೋಯ್ತು. ಅವುಗಳಲ್ಲಿ ರೇಶ್ಮೆಯೂ ಒಂದು. ಚೀನಾದ ರೇಶ್ಮೆಯ ಥಳುಕಿನೆದುರು ನಮ್ಮ ತಾಜಾ ರೇಶ್ಮೆ ಮಂಕಾಗಿ ಹೋಗಿತ್ತು. ಮಾತ್ರವಲ್ಲ ತಾಜಾ ರೇಶ್ಮೆಗಿಂತ ಕಡಿಮೆ ಕೀಮತ್ತಿನಲ್ಲಿ ಹೆಚ್ಚು ಜಗಮಗಿಸುವ ಚೈನಾ ಸಿಲ್ಕ್ ಒಂದು ಸಂದರ್ಭದಲ್ಲಿ ನಮ್ಮ ರೇಶ್ಮೆ ಉದ್ದಿಮೆಯನ್ನೇ ಆಪೋಶನ ತೆಗೆದುಕೊಳ್ಳುತ್ತದೆಯೆನೋ ಎಂಬಷ್ಟು ಜನಪ್ರಿಯವಾಗಿತ್ತು. ಆದರೆ ರೇಶ್ಮೆ ಎಂದಿಗೂ ರೇಶ್ಮೆಯೇ. ನಮ್ಮ ನೇಕಾರರು ಸೋಲೊಪ್ಪಿಕೊಳ್ಳಲಿಲ್ಲ. ಕೇಂದ್ರ ಸರಕಾರವೂ ಅವರ ಸಹಾಯಕ್ಕೆ ನಿಂತಿತು. ಚೈನಾ ಸಿಲ್ಕಿನ ಪ್ರಭಾವವನ್ನು ಮೆಟ್ಟಿ ನಿಲ್ಲಲು ರೇಶ್ಮೆ ನೇಕಾರರು ಪಣತೊಟ್ಟರು. ಆಧುನಿಕ ಯುಗಕ್ಕೆ ತಕ್ಕಂತೆ ರೇಶ್ಮೆ ಸೀರೆಗಳ ಚಿತ್ತಾರದಲ್ಲಿ, ನೇಯ್ಗೆಯಲ್ಲಿ ಬದಲಾವಣೆಗಳಾದುವು. ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ, ಹಬ್ಬ ಹರಿದಿನಗಳಲ್ಲಿ ಇಂದಿಗೂ ನಮ್ಮ ರೇಶ್ಮೆ ಸೀರೆಗಳಿಗೇ ಅಗ್ರ ಸ್ಥಾನ.
ಬಾರತ ವಿದೇಶೀಯರ ಆಕ್ರಮಣಕ್ಕೆ ಒಳಗಾದಾಗ ದೇಶಗಳ ಆಚಾರ, ವಿಚಾರ, ಸಂಸ್ಕೃತಿಗಳು ನಮ್ಮಲ್ಲಿ ಮಿಳಿತವಾಗಿ ಹೋದುವು. ಮೊಘಲರ ಕಾಲದಲ್ಲಿ ತುರ್ಕಮೇನಿಸ್ತಾನ, ಪರ್ಷಿಯಾದ ನೇಕಾರರಿಗೆ ಇಲ್ಲಿ ರಾಜಾಶ್ರಯ ದೊರೆಯಿತು. ಅವರ ಶೈಲಿ, ನೇಯ್ಗೆಯ ರೀತಿ ನಮ್ಮ ನೇಕಾರರ ಮೇಲೂ ಗಾಢವಾದ ಪ್ರಭಾವ ಬೀರಿರಲೇಬೇಕು. ಅವರು ನೇಯುತ್ತಿದ್ದ ಸೂಕ್ಷ್ಮ ಕುಸುರಿ ಕೆಲಸಗಳ ಪಳೆಯುಳಿಕೆಯನ್ನು ಇಂದಿಗೂ ಉತ್ತರ ಭಾರತದ ರೇಶ್ಮೆ ಸೀರೆಗಳಲ್ಲಿ ಕಾಣಬಹುದು. ವಾರಣಾಸಿ(ಬೆನಾರಸ್)ಯಲ್ಲಿ ತಯಾರಾಗುವ ಇಂತಹ ಬ್ರೊಕೇಡ್ ಸೀರೆಗಳಿಗೆ ಅಪಾರ ಬೇಡಿಕೆಯಿದೆ. ರೇಶ್ಮೆ ಸೀರೆ ನೇಯುವಾಗ ರೇಶ್ಮೆಯ ಎಳೆಗಳೊಂದಿಗೆ ಚಿನ್ನ, ಬೆಳ್ಳಿ ಅಥವಾ ತಾಮ್ರದ ಸರಿಗೆಗಳನ್ನು ಸೇರಿಸಿ ಮೂರು ಪದರ, ಏಳು ಪದರ ರೀತಿಯಾಗಿ ನೇಯ್ಗೆ ಹಾಕುತ್ತಾ ಸೂಕ್ಷ್ಮ ಚಿತ್ತಾರಗಳನ್ನು ಬಿಡಿಸುತ್ತಾ ನೇಯುವ ರೀತಿಗೆ ಬ್ರೊಕೇಡ್ ವರ್ಕ್ ಎನ್ನುತ್ತಾರೆ. ಇದನ್ನೇ ಜರತಾರೀ ಸೀರೆ ಎನ್ನುವುದು. ಇದು ಬಹಳ ಬೆಲೆ ಬಾಳುವಂತಾದ್ದು. ಜನಸಾಮಾನ್ಯರ ಕೈಗೆ ಎಟಕುವಂತಾದ್ದಲ್ಲ. ಇತ್ತೀಚೆಗೆ ಮುಕೇಶ್ ಅಂಬಾನಿಯವರ ಪತ್ನಿ ನಲುವತ್ತೆಂಟು ಲಕ್ಷ ರೂಪಾಯಿಗಳ ಬ್ರೊಕೇಡ್ ಸೀರೆಯುಟ್ಟ ಫೋಟೋವೊಂದು ವಾಟ್ಸಾಪಲ್ಲಿ ವೈರಲ್ ಆದುದನ್ನು ನೀವೂ ಗಮನಿಸಿರಬಹುದು. ಸಾದಾ ನೇಯ್ಗೆಯ ರೇಶ್ಮೆ ಸೀರೆಗಾಗಿ ಮೂರ್ನಾಲ್ಕು ರೇಶ್ಮೆ ಎಳೆಗಳನ್ನು ಜೋಡಿಸಿ ನೇಯುತ್ತಾರೆ. ಬೇರೆ ಬೇರೆ ಪ್ರದೇಶದ ನೇಕಾರರು ರೇಶ್ಮೆ ಎಳೆಗಳನ್ನು ಜೋಡಿಸುವ ವಿನ್ಯಾಸದಲ್ಲಿ ವ್ಯತ್ಯಾಸಗಳಿರುತ್ತವೆ. ಆದುದರಿಂದಲೇ ರೇಶ್ಮೆ ಸೀರೆಗಳಲ್ಲೂ ವೈವಿಧ್ಯತೆಯಿದೆ. ನಮ್ಮ ದೇಶದಲ್ಲಿ ನೂರಕ್ಕೂ ಅಧಿಕ ವಿಧದ ರೇಶ್ಮೆ ಸೀರೆಗಳು ತಯಾರಾಗುತ್ತವೆ. ಮುಖ್ಯವಾದುವಗಳನ್ನು ಮಾತ್ರ ಇಲ್ಲಿ ಹೆಸರಿಸುತ್ತೇನೆ.
ಕಾಶ್ಮೀರದ ಚಿನಾನ್, ವಾರಣಾಸಿಯ ಬನಾರಸ್ ಸಿಲ್ಕ್, ಗುಜರಾತಿನ ಪಟೋಲ, ಮಧ್ಯಪ್ರದೇಶದ ಚಂದೇರಿ,ಮಹೇಶ್ವರಿ,ಟಸ್ಸರ್, ಪಶ್ಚಿಮ ಬಂಗಾಳದ ಬಾಲುಚಾರಿ, ಅಸ್ಸಾಂನ ಮೂಘಾ ಸಿಲ್ಕ್, ಉಪ್ಪಡ ಸಿಲ್ಕ್, ತೆಲುಂಗಾಣದ ಪೋಚಂಪಲ್ಲಿ,ಗದ್ವಾಲ್, ಆಂಧ್ರದ ಆರಣಿ, ಧರ್ಮಾವರಂ, ಕರ್ನಾಟಕದ ಕೊಳ್ಳೇಗಾಲ, ಮೊಳಕಾಲ್ಮೂರು, ಮೈಸೂರು ರೇಶ್ಮೆಗಳು, ತಮಿಳುನಾಡಿನ ಕಾಂಜೀವರಂ, ಚೆಟ್ಟಿನಾಡ್....ಹೀಗೆ ನೂರಾರು ಜಾತಿಯ ರೇಶ್ಮೆ ಸೀರೆಗಳ ಆಯ್ಕೆ ನಮ್ಮ ಮುಂದಿವೆ. ಇಂದಿನ ಥಳಕಿನ ಯುಗದಲ್ಲಿ ಸಾಂಪ್ರದಾಯಿಕ ರೇಶ್ಮೆಗೆ ಪೈಪೋಟಿಯಾಗಿ ಜಗಮಗಿಸುವ ಫ್ಯಾನ್ಸೀ ಸೀರೆಗಳು ಲಗೆಯಿಟ್ಟು ಯುವತಿಯರ ಕಣ್ಮಣಿಗಳಾದುವು. ಸೋಲೊಪ್ಪಿಕೊಳ್ಳಲು ತಯಾರಿಲ್ಲದ ರೇಶ್ಮೆ ನೇಕಾರರು ಫ್ಯಾನ್ಸಿ ಸೀರೆಗಳಲ್ಲಿರುವಂತೆಯೇ ರೇಶ್ಮೆ ಸೀರೆಗಳಲ್ಲಿಯೂ ಕುಂದನ್ಸ್, ಬೀಡ್ಸ್, ಟಿಕ್ಲಿ ಇತ್ಯಾದಿಗಳನ್ನಿರಿಸಿ ಕಣ್ಮನ ಸೆಳೆಯುವ ಸೀರೆಗಳನ್ನು ತಯಾರಿಸಿದರು. ಹಳೆ ನೇಯ್ಗೆಯ ಅದೇ ರೇಶ್ಮೆ ಸೀರೆಗಳು ಹೊಸ ರೂಪ, ಹೊಸ ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟುವು. ವಸ್ತ್ರಕಲಾ, ಸಾಮುದ್ರಿಕಾ, ವಿವಾಹ....ಇತ್ಯಾದಿ ಹೆಸರುಗಳ ಆಧುನಿಕ ಸೀರೆಗಳು ನವಯುವತಿಯರಷ್ಟೇ ನಡುಹರೆಯದವರನ್ನೂ ಆಕರ್ಷಿಸುವಲ್ಲಿ ಸಫಲವಾಯ್ತು. ಸಿರಿವಂತಿಕೆಯ ದ್ಯೋತಕ, ಪ್ರತಿಷ್ಟೆಯ ಸಂಕೇತವಾಗಿ ರೇಶ್ಮೆ ಸೀರೆಗಳನ್ನು ಕೊಂಡರಷ್ಟೇ ಸಾಲದು. ಅದನ್ನು ಸಂಭಾಳಿಸುವುದೂ ಒಂದು ಕಲೆಯೇ. ತಾಜಾ ರೇಶ್ಮೆ ಸೀರೆಗಳನ್ನು ಸರಿಯಾಗಿ ಸಂರಕ್ಷಿಸಿದರೆ ಹತ್ತನ್ನೆರಡು ವರ್ಷಗಳವರೆಗೂ ಅದು ಮಹಿಳೆಯ ಸಂಗಾತಿಯಾಗಿ ಉಳಿಯುತ್ತದೆ. ಕುರಿತು ಕೆಲವು ಅಗತ್ಯದ ಮಾಹಿತಿಗಳು ಇಂತಿವೆ.
1. ಕಾರ್ಯಕ್ರಮಗಳಿಗೆ ಹೋಗಿ ಬಂದ ತಕ್ಷಣ ರೇಶ್ಮೆ ಸೀರೆಯನ್ನು ಬದಲಾಯಿಸಿಬಿಡಿ. ಸೀರೆಗಳನ್ನು ನೀರಿನಲ್ಲಿ ಮುಳುಗಿಸಿ ಒಗೆಯದಿರುವುದೇ ಜಾಣತನ. ಮೇಜೊಂದನ್ನು ಸ್ವಚ್ಛಗೊಳಿಸಿ ಅದರ ಮೇಲೆ ಸೀರೆಯನ್ನು ಹರಡಿ. ಸ್ವಚ್ಛವಾದ ಟವೆಲೊಂದನ್ನು  ಚೆನ್ನಾಗಿ ಒದ್ದೆಮಾಡಿ( ಟವೆಲು ಬಣ್ಣ ಬಿಡುವಂತಿರಬಾರದು) ಹಿಂಡಿ ಸೀರೆಯನ್ನು ಮೃದುವಾಗಿ ಉಜ್ಜಿ ಹಿಡಿದಿರಬಹುದಾದ ಬೆವರು, ಕೊಳೆಗಳನ್ನು ತೆಗೆಯಿರಿ. ನೇರವಾಗಿ ಬಿಸಿಲು ಬೀಳದ ಸ್ಥಳದಲ್ಲಿ ಗಾಳಿಗೆ ಹಾಕಿ ಒಣಗಿಸಿ. (ಸೀರೆಯನ್ನು ಉಡದಿದ್ದರೂ ವರ್ಷದಲ್ಲಿ ಒಂದೆರಡು ಸಲವಾದರೂ ಅವನ್ನು ಇಳಿಬಿಸಿಲಿಗೆ ಹಾಕಿ ಒಳಗಿಡುವ ಅಭ್ಯಾಸ ಒಳ್ಳೇದು)
2. ಇಸ್ತ್ರಿ ಹಾಕುವಾಗ ಸೀರೆಯ ಮೇಲ್ಬಾಗಕ್ಕೆ ನೇರವಾಗಿ ಎಂದಿಗೂ ಬಿಸಿ ಇಸ್ತ್ರಿಪೆಟ್ಟಿಗೆಯನ್ನು ಇಡಬೇಡಿ. ಸೀರೆಯನ್ನು ಕವುಚಿ ಹರಡಿ. ತೆಳ್ಳಗಿನ ಪೇಪರನ್ನು ಅದರ ಮೇಲಿಟ್ಟು(ದಿನಪತ್ರಿಕೆಯ ಹಾಳೆ)ನಂತರ ಇಸ್ತ್ರಿ ಹಾಕಿ.
3. ಇಸ್ತ್ರಿ ಹಾಕಿದ ತಕ್ಷಣ ಸೀರೆಯನ್ನು ಮಡಚಿ ಕಪಾಟಿನಲ್ಲಿಡಬೇಡಿ. ಪದರಗಳೊಳಗಿನ ಬಿಸಿ ತಣಿಯುವ ಪ್ರಕ್ರಿಯೆಯಲ್ಲಿ ಆವಿಯ ಅಂಶ ಉಳಿಕೆಯಾದಾಗ ಬೂಸುರು ಹುಟ್ಟಿಕೊಳ್ಳುತ್ತದೆ. ಒಂದೆರಡು ಘಂಟೆಗಳ ಕಾಲ ಗಾಳಿಯಾಡುವಲ್ಲಿಟ್ಟು ನಂತರ ಕಪಾಟಿನಲ್ಲಿಡಿ.
 4.ರೇಶ್ಮೆ ಸೀರೆಯನ್ನು ಕಬ್ಬಿಣದ ಕಪಾಟಿನೊಳಗೆ ಇಡಬೇಡಿ. ಎಂತಹ ಉತ್ತಮ ರೀತಿಯ ಉಕ್ಕಿನ ಕಾಪಾಟೇ ಆಗಿರಲಿ ರೇಶ್ಮೆ ಬಟ್ಟೆಗೆ ಯೋಗ್ಯವಲ್ಲ. ಮಳೆಗಾಲದ ತಂಪು ಹವೆಯಿಂದಾಗಿ ಒಂದು ರೀತಿಯ ವಾಸನೆ ಅದರೊಳಗೆ ಸುಳಿದಾಡುತ್ತಿರುತ್ತದೆ ಮತ್ತು ಇದರಿಂದಾಗಿ ಬಟ್ಟೆ ನುಸಿಗಳು ರೇಶ್ಮೆ ಬಟ್ಟೆಗಳೆಡೆಗೆ ಆಕರ್ಷಿತವಾಗುತ್ತವೆ. ತೇವಾಂಶದಿಂದಾಗಿ ಬೂಸುರು ಹಿಡಿದ ರೇಶ್ಮೆ ಬಟ್ಟೆ ನುಸಿಗೆ ಆಹಾರವಾಗುತ್ತದೆ. ಕೆಲವೊಮ್ಮೆ ಉಕ್ಕಿನ ಕಲೆಗಳೂ ಹಿಡಿಯುವ ಸಾಧ್ಯತೆಗಳಿವೆ.
5. ರೇಶ್ಮೆ ಸೀರೆಗಳನ್ನು ಪಾಲಿಥಿನ್ ಬ್ಯಾಗುಗಳಲ್ಲಿ ಹಾಕಿ ಇಡಬೇಡಿ. ತೇವಾಂಶ ಹೀರುವ ಇವುಗಳಿಂದಾಗಿ ಕೆಲವು ಸಮಯದ ನಂತರ ಬಟ್ಟೆಯ ಮೇಲ್ಮೈಯ್ಯಲ್ಲಿ ಅಲ್ಲಲ್ಲಿ ಹಳದಿ ಬಣ್ಣದ ಕಲೆಗಳುಂಟಾಗುತ್ತವೆ
7. ಈ ಜಾತಿಯ ಸೀರೆಗಳನ್ನು ಬಿಳಿ ಬಣ್ಣದ ಕಾಟನ್ ಪಂಚೆಯಲ್ಲಿ ಸುತ್ತಿ ಮರದ ಕಪಾಟಿನಲ್ಲಿಡಿ. ಸೀರೆಗಳಿಡುವ ಕಪಾಟಿನ ಬಾಗಿಲುಗಳಿಗೆ ಆದಷ್ಟೂ ಮೇಲಿನಿಂದ ಕೆಳಗಿನವರೆಗೆ  ಒಂದೇ ಆಗಿರುವ ಬಿಜಾಗಿರಿಯನ್ನು ಇಡಿಸಿಕೊಳ್ಳಿ. ಗಾಳಿ, ತೇವಾಂಶ ಒಳನುಗ್ಗಲು ಸಾಧ್ಯವಿಲ್ಲದ ಇಂತಹ ಕಪಾಟುಗಳು ಸುರಕ್ಷಿತ.
8. ಹತ್ತಿಯ ಪಂಚೆಗಳನ್ನು ಹರಡಿ ಅದರಲ್ಲಿ ಒಂದರ ಮೇಲೊಂದರಂತೆ ಸೀರೆಗಳನ್ನು ಪೇರಿಸಿಡುವಾಗ ಮಧ್ಯೆ ಮಧ್ಯೆ ಅಂಗೈಗಲದ ಅತಿ ತೆಳ್ಳಗಿನ ಬಟ್ಟೆಯಲ್ಲಿ ಸುತ್ತಿದ ಲಾವಂಚದ ಬೇರಿನ ಪುಟ್ಟ ಗಂಟುಗಳನ್ನಿಡಬೇಕು. ಹೀಗೆ ಅಣಿಗೊಳಿಸಿದ ಪಂಚೆಯ ಗಂಟನ್ನು ಇಡುವ ಮೊದಲು ಕಪಾಟಿನ ಹಲಗೆಗೆ ಹಳೆಯ ಬಟ್ಟೆಯೊಂದನ್ನು ಹಾಸಿಕೊಳ್ಳಿ. ಇದರ ಮೂಲೆಗಳಲ್ಲಿ ಜಿರಳೆ ಕಾಯಿ (ನ್ಯಾಫ್ತಲಿನ್ ಗುಳಿಗೆಗಳು) ಗಳನ್ನು ಹಾಕಿ. ಇಂತಹ ಜಾಗದಲ್ಲಿ ಗಂಟು ಕಟ್ಟಿ ಇಟ್ಟ ರೇಶ್ಮೆ ಸೀರೆಗಳು ಯಾವುದೇ ಕಾರಣಕ್ಕೂ ವಾಸನೆಯನ್ನು ಬೀರುವುದಿಲ್ಲ. ಮಾತ್ರವಲ್ಲ ತನ್ನ ತಾಜಾತನವನ್ನು ಉಳಿಸಿಕೊಂಡು ಲಕಲಕಿಸುತ್ತಿರುತ್ತವೆ.
          
                



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ