ಸೋಮವಾರ, ಜೂನ್ 6, 2016

ಯಾರಿಗಾಗಿ...?


ಶಿವರಾಮ ಕಾರಂತರ ಬೆಟ್ಟದ ಜೀವ ಕಾದಂಬರಿಯ ನಾಯಕ ಗೋಪಾಲಯ್ಯ ಕೃಷಿಕ, ಸಾಹಸಿ. ಜನಸಂಚಾರವಿಲ್ಲದ, ಜನರು ಬರಲೂ, ಇರಲೂ ಹೆದರುವಂತಹ ಗುಡ್ಡವನ್ನು ಕಡಿದು ತೋಟ, ಗದ್ದೆಗಳನ್ನು ಮಾಡಿ ಗೆದ್ದ ಜೀವ. ಒಂದು ಸಂದರ್ಭದಲ್ಲಿ ಆತನ ಬಂಧು ನಾರಾಯಣ ಕೇಳುತ್ತಾನೆ, `ಮಾವಾ, ಇಂತಹ ಕೊಂಪೆಯಲ್ಲಿ ಯಾರಿಗಾಗಿ ಇಷ್ಟೆಲ್ಲಾ ಸೊತ್ತು...? ಯಾಕಾಗಿ ಇಂತಹ ಕಠಿಣ ದುಡಿತ? ಮಗಳು ಹೋಗಿಯಾಯ್ತು, ಮಗ ಇತ್ತ ಕಡೆಗೆ ಸುಳಿಯುವುದೇ ಇಲ್ಲಾ... ಮತ್ತೆ ಇದೆಲ್ಲಾ ಯಾರಿಗಾಗಿ..?' ಆಗ ಗೋಪಾಲಯ್ಯ ಕೊಡುವ ಉತ್ತರ, `ಹ್ಹ...,ಯಾರಿಗಾಗಿ? ಎನ್ನುವ ಭಾವವೇ ಹಾಸ್ಯಾಸ್ಪದ, ದುಡಿತದಲ್ಲಿ ನಾನು ಕಂಡ ಸಂತಸ ನಿಜವಲ್ಲವೇ? ನನ್ನೊಂದಿಗೆ ದುಡಿದ ಆಳುಮಕ್ಕಳಿಗೆ ದಿನಗಳಲ್ಲಿ ಅವರ ಜೀವನಕ್ಕೊಂದು ಆಧಾರ ದೊರೆತದ್ದು ಸುಳ್ಳೇ? ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಲು ದೊರೆತ ಕ್ಷಣಗಳು ಎಷ್ಟು ಅವಿಸ್ಮರಣೀಯ.., ನಾವು ಹುಟ್ಟುವಾಗಲೂ ಸಾಯುವಾಗಲೂ ಒಂಟಿಯೇ...ಹಾಗಿರುವಾಗ ಮಧ್ಯದಲ್ಲಿ ಮಾತ್ರ ಯಾಕಾಗಿ ಇನ್ನೊಬ್ಬರ ಮೇಲೇ ನಿರೀಕ್ಷೆಯ ಭಾರ ಹೇರಬೇಕು?'
  ಮೇಲಿನ ಮಾತುಗಳನ್ನು ಕಾರಂತರು ಗೋಪಾಲಯ್ಯನ ಬಾಯಲ್ಲಿ ಹೇಳಿಸಿದ್ದು 1950 ದಶಕದಲ್ಲಿ. ಎಪ್ಪತ್ತೈದು ವರ್ಷಗಳ ನಂತರ ಇಂದಿಗೂ ಮಾತುಗಳನ್ನು ನಾವು ಮನನ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಆಗಾಗ ನನಗೆ ಅನಿಸುವುದುಂಟು. ಇತ್ತೀಚೆಗೆ ನಾನು ಓರ್ವ ಸಂಬಂಧಿಕರ ಮನೆಗೆ ಹೋಗಿದ್ದೆ. ಅವರ ನೂತನ ಗೃಹ ಪ್ರವೇಶಕ್ಕೆ ಅನಿವಾರ್ಯ ಕಾರಣಗಳಿಂದ ಹೋಗಿರಲಿಲ್ಲವಾಗಿ ಮಾರನೆಯ ದಿನ ಸೌಹಾರ್ದ ಭೇಟಿಯಿತ್ತಿದ್ದೆ. ಸುಳ್ಯ-ಸುಬ್ರಹ್ಮಣ್ಯ ರಸ್ತೆಯಲ್ಲಿ ತೀರಾ ಹಳ್ಳಿಗಾಡಿನೊಳಗೆ ಕಟ್ಟಿದ ಮನೆಯಾಗಿತ್ತದು. ಅಡಿಕೆ, ಬಾಳೆ, ತೆಂಗು ಮತ್ತು ಸಕಲ ಅಲಫಲಗಳಿರುವ ಸೃಮೃದ್ಧ ಜಾಗ. ಪಿತ್ರಾರ್ಜತ  ಜಾಗವನ್ನು ಮಗ ಊರ್ಜಿತಗೊಳಿಸಿ ಆಧುನಿಕ ಅಗತ್ಯಗಳಿಗೆ ತಕ್ಕಂತೆ ದಿವ್ಯ, ಭವ್ಯ ಮನೆಯನ್ನು ಕಟ್ಟಿಸಿಕೊಂಡಿದ್ದ. ದೂರದೂರುಗಳಿಂದ ಬಂದ ಆತನ ಅಕ್ಕ, ತಂಗಿ, ಅಣ್ಣ, ತಮ್ಮಂದಿರು, ಅವರ ಮಕ್ಕಳಿಂದ ಮನೆ ಗಿಜಿಗುಡುತ್ತಿತ್ತು. ಸುಂದರ ಮನೆ, ಸೊಗಸಾದ ಊಟೋಪಚಾರ, ನಮ್ಮ ಸುತ್ತಲೇ ಗಿರಕಿ ಹೊಡೆಯುತ್ತಾ ಚಿಲಿಪಿಲಿಗುಟ್ಟುವ ಪುಟ್ಟ ಮಕ್ಕಳು, ನಂದನವನದಂತಿರುವ ತೋಟ..., ಎಲ್ಲವನ್ನೂ ಮನದಣಿಯೆ ಅನುಭವಿಸಿ ವಾಪಾಸಾದೆವು. ನಾವು ಮೂರ್ನಾಲ್ಕು ಮಂದಿ ಜೊತೆಯಲ್ಲಿ ಹೋಗಿದ್ದೆವು. ವಾಪಾಸು ಬರುತ್ತಾ ಸಹಜವಾಗಿಯೇ ಮನೆಯತ್ತ ನಮ್ಮ ಮಾತು ಹೊರಳಿತು.
`ಮನೆ ತುಂಬಾ ಚೆನ್ನಾಗಿದೆಯಲ್ಲವೇ?' ನಾನೆಂದೆ.
`ಹೂಂ..., ಚೆನ್ನಾಗಿಯೇನೋ ಇದೆ. ಹತ್ತಿರ ಹತ್ತಿರ ಸುಮಾರು ಒಂದು ಕೋಟಿ ಖರ್ಚು ಬಿದ್ದಿರಬಹುದು. ಹಳ್ಳಿ ಕೊಂಪೆಯಲ್ಲಿ ಕಟ್ಟಡಕ್ಕಾಗಿ ದುಡ್ಡು ಸುರಿಯುವುದು ವೇಸ್ಟ್..., ಕೆಲಸದವರ ಬರ ಇರುವ ಕಾಲದಲ್ಲಿ ಮುಂದಕ್ಕೆ ಕೃಷಿ ಯಾರು ಮಾಡುತ್ತಾರೆ? ಅವನ ( ಮನೆಯ ಗಂಡಸು) ನಂತರದ ಜನರೇಶನ್ ಅಂತೂ ಖಂಡಿತಕ್ಕೂ ಕೃಷಿಯನ್ನು ನೆಚ್ಚಿ ಬದುಕಲು ಸಾಧ್ಯವಿಲ್ಲ. ಮತ್ತೆ ಇವನು ಯಾರಿಗಾಗಿ ಇಷ್ಟೆಲ್ಲ ಇನ್ವೆಸ್ಟ್ ಮಾಡಿದ್ದು? ಒಂದು ವೇಳೆ ಆಸ್ತಿಯನ್ನು ಮಾರುತ್ತೇನೆ ಅಂದರೂ ತೆಗೆದುಕೊಳ್ಳುವವರು ಬೇಕಲ್ಲಾ? ಕೃಷಿ ಭೂಮಿಯಲ್ಲಿ ದೊಡ್ಡ ಮನೆ ಕಟ್ಟುವುದು ವೇಸ್ಟ್... ' ಹೀಗೆಲ್ಲಾ ಹೇಳಿ ನಮ್ಮ ಜೊತೆಗಿದ್ದವರು ತಮ್ಮ ಅಭಿಪ್ರಾಯವನ್ನು ಮಂಡಿಸಿ ವಿಷಯಕ್ಕೆ ಷರಾ ಬರೆದುಬಿಟ್ಟರು! ಇನ್ನೊಬ್ಬರು ಅವರಿಗಿಂತ ಒಂದು ಹೆಜ್ಜೆ ಮುಂದಿದ್ದರು.
`ಹ್ಹ...ಇಂತಹ ಮನೆ ಕಟ್ಟಿಸುವುದಿದ್ದರೆ ನಾನು ಹತ್ತು ವರ್ಷ ಹಿಂದೆಯೇ ಕಟ್ಟಿಸಿಬಿಡುತ್ತಿದ್ದೆ. ನಾನು ಮುಂದಾಲೋಚನೆ ಮಾಡಿಯೇ ಕಟ್ಟಲು ಹೋಗಿಲ್ಲ. ನನಗಿರುವುದು ಒಬ್ಬ ಮಗ. ಅವನು ಎಲ್ಲಿ ಸೆಟಲ್ ಆಗ್ತಾನೆ ಅಂತ ಈವಾಗಲೇ ಹೇಳುವುದು ಹೇಗೆ? ಹಾಗಾಗಿ ನಮಗೆ ಈಗಿರುವ ಬಾಡಿಗೆ ಮನೆಯೇ ಸಾಕು ಎಂದು ತೀರ್ಮಾನಿಸಿಬಿಟ್ಟಿದ್ದೇನೆ' ಎಂದರು.
ನಾವೆಲ್ಲರೂ ಇಂತಹ ಮಾತುಗಳನ್ನು ದಿನ ನಿತ್ಯ ಎಂಬಂತೆ ಆಡುತ್ತಲೂ ಕೇಳುತ್ತಲೂ ಇರುತ್ತೇವೆ. ಇಂದಿನ ಒತ್ತಡದ ಜೀವನ ಶೈಲಿಯಲ್ಲಿ ಹೆಂಗಸಾಗಲೀ ಗಂಡಸಾಗಲೀ ತಮಗೆ ಬೇಕಾದಂತೆ ಸರಿಯಾಗಿ ಉಂಡು, ತಿಂದು, ತಿರುಗಾಡಿ ಅರೋಗ್ಯವಂತ ಜೀವನ ನಡೆಸಲು ಸಾಧ್ಯವಾಗುವುದು ಹೆಚ್ಚು ಕಡಿಮೆ ನಲುವತ್ತೈದರಿಂದ ಐವತ್ತು ವರ್ಷದವರೆಗೆ ಮಾತ್ರ. ನಂತರ
ಒಂದೊಂದೇ ಖಾಯಿಲೆಗಳು ಪುಟ್ಟ ಪುಟ್ಟ ಹೆಜ್ಜೆ ಇಟ್ಟು, ಬಣ್ಣದ ಅಂಗಿ ತೊಟ್ಟುಕೊಂಡು ನಮ್ಮ ಶರೀರವನ್ನು ಪ್ರವೇಶಿಸಿಬಿಡುತ್ತವೆ. ಆರೋಗ್ಯ, ಮನಸ್ಸಂತೋಷಗಳನ್ನು ಒತ್ತೆಯಿಟ್ಟು ಒಂದೇ ಸಮನೆ ದುಡಿದು ಕೂಡಿಟ್ಟ ಹಣವೆಲ್ಲಾ ನಡುಹರೆಯದ ನಂತರ ಆಸ್ಪತ್ರೆಯಿಂದ ಆಸ್ಪತ್ರೆಗೆ ಸುತ್ತುವುದರಲ್ಲಿಯೇ ನೀರಾಗಿಬಿಡುತ್ತದೆ. ಕಡೆ ಜೀವನವನ್ನು ಅನುಭವಿಸಿದ್ದೂ ಇಲ್ಲ, ಕಡೆ ಕೂಡಿಟ್ಟ ದುಡ್ಡನ್ನು ಮೂಸುವವರೂ ಇಲ್ಲ ಎನ್ನುವಂತಹ ಹಣೆಬರಹ ನಮ್ಮದೇಕಾಗಬೇಕು? ಮೇಲಿನ ಉದಾಹರಣೆಯನ್ನೇ ನೋಡಿ. ನಾವು ಹೋದ ಹೊಸಮನೆಯೊಡೆಯನ ಪ್ರಾಯ ಹೆಚ್ಚೆಂದರೆ ನಲುವತ್ತರ ಆಸುಪಾಸಿರಬಹುದು. ನಮ್ಮ ಬಂಧುಗಳು ಹೇಳಿದಂತೆ ಆತನ ಮುಂದಿನ ಜನರೇಶನ್ ಮನೆಯಲ್ಲಿ ಕುಳಿತುಕೊಳ್ಳಲಾರದು ಎಂದೇ ಇಟ್ಟುಕೊಳ್ಳೋಣ. ಅಂದರೆ ಮುಂದಿನ ತಲೆಮಾರು ಪ್ರಾಯಕ್ಕೆ ಬಂದು ಜೀವನದಲ್ಲಿ ಸೆಟ್ಲ್ ಆಗಲು ಏನಿಲ್ಲವೆಂದರೂ ಇನ್ನೂ ಇಪ್ಪತ್ತೈದರಿಂದ ಮೂವತ್ತು ವರ್ಷಗಳು ಬೇಕು. ಮನೆಯೊಡಯನಿಗೆ ಆವಾಗ ಎಪ್ಪತ್ತು- ಎಂಭತ್ತರ ಆಸುಪಾಸು. ಹಾಗಾದರೆ ಮೂವತ್ತು ವರ್ಷಗಳ ಕಾಲವೂ ಆತ ಹಳೆ ಮುರುಕಲು ಮನೆ(ಅಜ್ಜ ಕಟ್ಟಿಸಿದ್ದ ಅವರ ಮೊದಲಿನ ಮನೆ ಶೋಚನೀಯ ಸ್ಥಿತಿಗೆ ತಲುಪಿತ್ತು ಎಂದೇ ಹೊಸ ಮನೆ ಕಟ್ಟಿಸಿದ್ದರು. ತಾಕತ್ತು ಇರುವುದಕ್ಕೆ ಭವ್ಯವಾಗಿಯೇ ಕಟ್ಟಿಸಿದ್ದರು) ಯಲ್ಲೇ ಇದ್ದುಕೊಂಡು ನಿರಾಶಾವಾದಿಯಂತೆ ಜೀವಿಸಬೇಕಿತ್ತೇ? ಹೊಸ ಮನೆ, ಹೆಚ್ಚು ಸೌಕರ್ಯ, ಕುಟುಂಬ ಸದಸ್ಯರ ಸಂತಸ, ಬಂಧು ಬಳಗದ ಮೆಚ್ಚುಗೆಯ ನುಡಿಗಳು..., ಇವೆಲ್ಲದರಿಂದ ವಂಚಿತನಾಗಿ `ಭವಿಷ್ಯದಲ್ಲಿ ಮಕ್ಕಳಿಗಾಗಿ' ಎಂಬ ದಡ ಕಾಣದ ನಿರೀಕ್ಷೆಯಲ್ಲಿ ಏನು ಸುಖವಿದೆ ಹೇಳಿ? ಉತ್ತಮ ಸಂಸ್ಕಾರದ ಮಕ್ಕಳಾದರೆ ಹಿರಿಯರ ದುಡ್ಡಿಗೆ ಆಸೆ ಪಡದೆ ತಾವೇ ಸಂಪಾದಿಸಿ ಹೆತ್ತವರಿಗೆ ಕೊಡುತ್ತಾರೆ. ನೀಚ ಸಂಸ್ಕಾರದವರಾದರೆ ಹಿರಿಯರು ಎಷ್ಟು ಕೂಡಿಟ್ಟರೂ ಅದು ಅವರ ಕೈಯ್ಯಲ್ಲಿ `ರಾವಣನ ಹೊಟ್ಟೆಗೆ ಕಾಸಿನ ಮಜ್ಜಿಗೆ' ಎನ್ನುವಂತಾದೀತು. ಹಾಗಾದರೆ ನಾವು ಅತಿಭದ್ರವಾಗಿ ಗಂಟುಕಟ್ಟಿಟ್ಟದ್ದು ಯಾರಿಗಾಗಿ ಮತ್ತು ಯಾಕಾಗಿನಮ್ಮಲ್ಲಿರುವ ಸಂಪತ್ತಿನ ವಿನಿಯೋಗ ಮಾಡುವಾಗ `ಯಾರಿಗಾಗಿ?' ಎನ್ನುವ ನಿರಾಶಾವಾದಕ್ಕಿಂತ `ನಮಗಾಗಿ' ಎನ್ನುವ ಧನಾತ್ಮಕ ಮನಸ್ಥಿತಿಯೊಂದಿಗೆ ಮುಂದಡಿಯಿಟ್ಟರೆ ಇರುವಷ್ಟು ಕಾಲವಾದರೂ ಸಂತೋಷದಲ್ಲಿರಬಹುದು. ಬೆಟ್ಟದ ಜೀವ ಕಾದಂಬರಿಯ ಮೂಲ ಆಶಯವೂ ಅದೇ. ಗೋಪಾಲಯ್ಯ ಇರುವವರೆಗೂ ಜನಾನುರಾಗಿಯಾಗಿ ಬದುಕಿದರು. ನಮ್ಮ ಹಿರಿಯರು ಹೇಳಿದಂತೆ `ಆಳಾಗಿ ದುಡಿ, ಅರಸಾಗಿ ಮೆರೆ' ಎನ್ನುವ ಮಾತನ್ನು ನಾವು ಸಾಕಾರಗೊಳಿಸಿದರೆ ಬದುಕು ಬಲು ಸುಂದರ.            
          

         

1 ಕಾಮೆಂಟ್‌:

  1. ತುಂಬಾ ಚೆನ್ನಾಗಿದೆ. ನಾವು ಬದುಕುವುದು ನಮಗೋಸ್ಕರ. ಕಾಣದ ನಾಳೆಗೊ ಕಳೆದು ಹೋದುದಕ್ಕೋ ಅಲ್ಲ

    ಪ್ರತ್ಯುತ್ತರಅಳಿಸಿ