ಶುಕ್ರವಾರ, ಜುಲೈ 8, 2016

ಅಂಗನವಾಡಿ-ಬಂಙದ ಗಾಡಿ


`ಅಂಗನವಾಡಿ' ಎನ್ನುವ ಶಬ್ಧದ ಬಗ್ಗೆ ನನಗೆ ಎಂದಿನಿಂದಲೋ ಒಂದು ಆಸಕ್ತಿ, ಕುತೂಹಲ. ಇತೀಚೆಗೆ ಬಸ್ಸಿನಲ್ಲಿ ಪ್ರಯಾಣಿಸುವಾಗ ಓರ್ವ ಅಂಗನವಾಡಿ ಕಾರ್ಯಕರ್ತೆಯ ಪರಿಚಯವಾಗಿ ಅವರ ಕೆಲಸದ ಬಗ್ಗೆ ತುಂಬ ಮಾತನಾಡಿದರು. ಅವರು ಹೇಳಿದ ಕೆಲವೇ ಕೆಲವು ವಿಷಯಗಳಿಂದಾಗಿ ಕುರಿತು ಇನ್ನಷ್ಟು ತಿಳಿಯುವ ಬಯಕೆ ಉಂಟಾಯಿತು. ಮನೆಗೆ ಬಂದು ಮಾಹಿತಿಗಾಗಿ ತಡಕಾಡತೊಡಗಿದೆ. ಅಂಗನವಾಡಿಯ ವಿರಾಟ ರೂಪದ ಚಿತ್ರಣ ಸಿಗುತ್ತಿದ್ದಂತೆ `ಅಬ್ಬ....,ಹೀಗೂ ಉಂಟೇ...?' ಎನಿಸಿತು. ಮತ್ತಷ್ಟು ವಿಷಯಗಳನ್ನು ಕಲೆ ಹಾಕತೊಡಗಿದೆ. ಆಗ ನನ್ನೊಳಗೆ ಒಂದು ಪ್ರಶ್ನೆ ಹುಟ್ಟಿಕೊಂಡಿತು. `ನಿಜವಾದ ಸಮಾಜ ನಿರ್ಮಾರ್ತೃ ಯಾರು...?' ಪ್ರಶ್ನೆ ಮೂಡಲು ಕಾರಣವಾದ ವಿಚಾರಗಳನ್ನು ನಿಮ್ಮೊಡನೆ ಹಂಚಿಕೊಳ್ಳಬೇಕೆನಿಸಿತು. ನಾಗರಿಕ ಸಮಾಜದಲ್ಲಿರುವ ಪ್ರತಿಯೊಬ್ಬರೂ ತಿಳಿಯಲೇಬೇಕಾದ ವಿಚಾರಗಳಿವು.
 1975 ರಲ್ಲಿ ಕೇಂದ್ರ ಸರಕಾರದ ಯೋಜನೆಯಾದ ಅಂಗನವಾಡಿಯ ಜನನವಾಯಿತು. ಉತ್ತರ ಭಾರತದಲ್ಲಿ ಸಾಮಾನ್ಯವಾಗಿ ಮನೆಯ ಹೊರಗೆ ಅಥವಾ ಮನೆಯ ನಡುಭಾಗದಲ್ಲಿ ತೆರೆದ ಅಂಕಣವಿರುತ್ತದೆ. ಅಲ್ಲಿ ಸಾಧಾರಣವಾಗಿ ಹಗ್ಗದ ಮಂಚವೊಂದು ಇದ್ದೇ ಇರುತ್ತದೆ. ಮನೆಯ ಹಿರಿಯರ ಖಾಯಂ ಸ್ಥಳವದು. ಅಲ್ಲೇ ನೆರಳಿಗೊಂದು ಮರವೂ ಅದಕ್ಕೊಂದು ವಿಶಾಲವಾದ ಕಟ್ಟೆಯೂ ಇರುತ್ತದೆ. ಅದು ಮಕ್ಕಳ ಆಟದ ತಾಣವೂ ಹೌದು. ಅತಿಥಿಗಳು ಬಂದರೆ ಕುಳಿತುಕೊಳ್ಳುವ ದಿವಾನ ಖಾನೆಯೂ ಹೌದು. ಕಡು ಬೇಸಿಗೆಯಲ್ಲಿ ಅಡುಗೆ ಮಾಡುವ ಜಾಗವೂ ಅದುವೇ. ಮನೆಯ ಸದಸ್ಯರೆಲ್ಲರ ಹರಟೆ ಕಟ್ಟೆಯೂ ಅದುವೇ. ಒಟ್ಟಿನಲ್ಲಿ ಅದೊಂದು ನಿರಂತರ ಚಟುವಟಿಕೆಯ ತಾಣ. ಅದನ್ನು ಹಿಂದಿಯಲ್ಲಿ `ಘರ್ ಕಾ ಅಂಗನ್' ಎನ್ನುತ್ತಾರೆ. `ಅಂಗನ್' ಶಬ್ಧಕ್ಕೆ ಪರ್ಯಾಯವಾಗಿ ನಾವು `ಜಗಲಿ' ಎಂಬ ಶಬ್ಧವನ್ನು ಉಪಯೋಗಿಸಬಹುದೇನೋ? ಅಂಗನವಾಡಿ ಎನ್ನುವ ಶಬ್ಧದ ಹುಟ್ಟಿಗೆ ಅದುವೇ ಸ್ಫೂರ್ತಿ. ಅಂದರೆ ಅಂಗನವಾಡಿಯು ಸಮಾಜದ ಜನಗಳೊಡನೆ ಬೆರೆತು ಸದಾ ಚಟುವಟಿಕೆಯಿಂದಿದ್ದು ಸಮಸ್ಯೆಯ ಒಳಹೊಕ್ಕು ಸುಧಾರಣೆ ತರುವಂತಾಗಬೇಕು ಎಂಬುದು ಇದರ ಹಿಂದಿನ ಉದ್ದೇಶ.
 0-6 ಪ್ರಾಯದ ಆರ್ಥಿಕ ಬಲಹೀನರ ಮಕ್ಕಳಲ್ಲಿರುವ ಅಪೌಷ್ಟಿಕತೆ, ಅನಾರೋಗ್ಯ, ಅಜ್ಙಾನಗಳ ವಿರುದ್ಧ ಹೊರಾಡಲೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮರ್ಗದರ್ಶನದಂತೆ .ಸಿ.ಡಿ.ಎಸ್. ಕಾರ್ಯ ನಿರ್ವಹಿಸುತ್ತದೆ(ಇಂಟೆಗ್ರೇಟೆಡ್ ಚೈಲ್ಡ್ ಡೆವೆಲಪ್ಮೆಂಟ್ ಸರ್ವಿಸೆಸ್). ಅದರ ಸುಪರ್ದಿನಲ್ಫ್ಲಿ ಅಂಗನವಾಡಿಗಳು ಕಾರ್ಯಾಚರಿಸುತ್ತವೆ. ಭಾರತದಲ್ಲಿ ಒಂದು ಮಿಲಿಯಕ್ಕೂ ಮೇಲ್ಪಟ್ಟು ಅಂಗನವಾಡಿ ಕೆಂದ್ರಗಳಿವೆ. ಎರಡು ಮಿಲಿಯಕ್ಕಿಂತಲೂ ಅಧಿಕ ಸಂಖ್ಯೆಯ ಮಹಿಳೆಯರು ಇವುಗಳಲ್ಲಿ ದುಡಿಯುತ್ತಿದ್ದಾರೆ. ಒಂದು ಅಂಗನವಾಡಿಯಲ್ಲಿ ಇಬ್ಬರು ಮಹಿಳಾ ಕೆಲಸಗಾರರನ್ನು ಆಯೋಜಿಸಲಾಗುತ್ತದೆ. ಒಬ್ಬಳು ಅಂಗನವಾಡಿ ವರ್ಕರ್(ಟೀಚರು ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ), ಇನ್ನೊಬ್ಬಳು ಸಹಾಯಕಿ. ಟೀಚರ ಕನಿಷ್ಟ ವಿದ್ಯಾರ್ಹತೆ ಹತ್ತನೇ ತರಗತಿ. .ಸಿ.ಡಿ.ಎಸ್.ಅಧಿಕಾರಿಗಳೇ ಇವರನ್ನು ನೇಮಕ ಮಾಡುತ್ತಾರೆ.
ಕಾರ್ಯಕರ್ತೆಯರು ಕೆಲಸಕ್ಕೆ ಹಾಜರಾಗುವ ಮೊದಲು ಅವರಿಗೆ ಸಾಧಾರಣ ನಾಲ್ಕು ತಿಂಗಳುಗಳ ಕಾಲ ಟ್ರೈನಿಂಗ್ ಕೊಡಲಾಗುತ್ತದೆ. ನಲುವತ್ತೈದರಿಂದ ಅರುವತ್ತು ಅಂಗನವಾಡಿಗಳಿಗೆ ಒಂದು ಸೆಕ್ಟರ್. ಸೆಕ್ಟರಿನ ಮೇಲ್ವಿಚಾರಣೆಗೆ ಒಬ್ಬಾಕೆಯನ್ನು ನೇಮಿಸಲಾಗುತ್ತದೆ. ಆಕೆಯನ್ನು ಸೂಪೆರವೈಸರ್(ಸ್ಟೇಟ್ ಡೆವಲಪ್ಮೆಂಟ್ ಪ್ರೊಜೆಕ್ಟ್ ಆಫೀಸರ್) ಅಥವಾ ಮುಖ್ಯ ಸೇವಿಕಾ ಎಂದೂ ಕರೆಲಾಗುತ್ತದೆ. ಆಕೆ ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಉತ್ತರಿಸಲು ಜವಾಬ್ದಾರಳು. ಅಂಗನವಾಡಿ ಕಾರ್ಯಕರ್ತೆ ಅಥವಾ ಟೀಚರು ಅದರ ಒಳಗೆ ಮತ್ತು ಹೊರಗೆ ನಿರ್ವಹಿಸಬೇಕಾದ ಕರ್ತವ್ಯಗಳೇನೆಂಬುದನ್ನು ನೋಡೋಣ.
1. ಎರಡು ವರ್ಷಕ್ಕಿಂತ ಮೇಲ್ಪಟ್ಟು ಆರು ವರ್ಷದೊಳಗಿನ ಮಕ್ಕಳು ಅಂಗನವಾಡಿಗೆ ಬರುತ್ತಾರೆ. ಇವರ ಸರ್ವತೋಮುಖ ಅಭಿವೃದ್ಧಿ ಅಂದರೆ ಮಾನಸಿಕ, ಬೌದ್ಧಿಕ, ಶಾರೀರಿಕ, ಭಾವನಾತ್ಮಕ ಬೆಳವಣಿಗೆಗೆ ತಕ್ಕಂತಹ ವಾತಾವರಣವನ್ನು ನಿರ್ಮಿಸಿ ಅದರ ಪೂರ್ಣ ಪ್ರಯೋಜನ ಅವರಿಗೆ ದೊರೆಯುವಂತೆ ದುಡಿಯುವುದು.
2. ಬೆಳಗ್ಗೆ 10ರಿಂದ ಸಂಜೆ ಮೂರರವರೆಗೆ ಮಕ್ಕಳು ಇಲ್ಲಿರುತ್ತಾರೆ. ಬೆಳಗ್ಗೆ, ಮದ್ಯಾಹ್ನ, ಸಂಜೆ ಹೀಗೆ ಮೂರು ಬಾರಿ ಆರೋಗ್ಯ ಇಲಾಖೆ ನಿಗದಿ ಪಡಿಸಿದಂತಹ ಆಹಾರವನ್ನೇ ನೀಡಲಾಗುತ್ತದೆ. ಉದಾ:-ಸೋಮವಾರ ಬೆಳಗ್ಗೆ ಹತ್ತೂವರೆಗೆ ಕಡ್ಲೆ, ಹನ್ನೆರಡೂಮುಕ್ಕಾಲಕ್ಕೆ ಪಚ್ಚೆಹಸರುಅನ್ನ, ತರಕಾರೀ ಪದಾರ್ಥ, ಮೂರು ಘಂಟೆಗೆ ಸಜ್ಜಿಗೆ ಕೊಡಲಾಗುತ್ತದೆ. ರೀತಿಯಲ್ಲಿ ಪ್ರತಿ ದಿನವೂ ಮಗುವಿನ ಬೆಳವಣಿಗೆಗೆ ಬೇಕಾದಷ್ಟು ಪೌಷ್ಟಿಕಾಂಶಗಳು ದೊರೆಯಬಹುದಾದ ನಿಗದಿತ ಆಹಾರವನ್ನು ಕೊಡುತ್ತಾರೆ. ಇದರಲ್ಲಿ ಹಾಲು, ಮೊಟ್ಟೆ, ಬಾಳೆಹಣ್ಣೂ ಸೇರಿವೆ. ಆಹಾರ ತಯಾರಿಯ ಕೆಲಸ ಸಹಾಯಿಕೆ ಮಹಿಳೆಯ ಜವಾಬ್ದಾರಿ. ಟೀಚರು ಅಂಗನವಾಡಿಗೆ ಸಂಬಂಧಪಟ್ಟ ಕೆಲಸಗಳಿಗಾಗಿ ಹೊರ ಹೋದರೆ ಮಕ್ಕಳ ಪೂರ್ಣ ಜವಾಬ್ದಾರಿಯೂ ಇವರದೇ.
3. ವಿಷಯಾಧಾರಿತ ಕಲಿಸುವಿಕೆ (ಥೀಮ್ ಬೇಸ್ಡ್ ಟೀಚಿಂಗ್). ಬಣ್ಣ ಬಣ್ಣದ ಥೀಮ್ ಚಾರ್ಟುಗಳನ್ನು  ತೋರಿಸಿ ಅದರಲ್ಲಿರುವ ಚಿತ್ರಗಳನ್ನು ಹೆಸರಿಸುವಂತೆ ಮಕ್ಕಳನ್ನು ಪ್ರೋತ್ಸಾಹಿಸುವುದು. ಉದಾ:- ಒಂದು ಮನೆ ಮತ್ತು ಅದರ ಪರಿಸರದಲ್ಲಿರುವ ಎಲ್ಲಾ ಜೀವಿಗಳನ್ನು ಮತ್ತು ವಸ್ತುಗಳನ್ನು ಗುರುತಿಸಬೇಕು. ಥೀಮ್ ಚಾರ್ಟಿನಲ್ಲಿರುವ ಅದೇ ವಿಷಯಗಳನ್ನೊಳಗೊಂಡ ಕಪ್ಪು ಬಿಳುಪಿನ ಚಿತ್ರಗಳಿರುವ ಪಠ್ಯ ಪುಸ್ತಕಗಳನ್ನೂ ಮಕ್ಕಳಿಗೆ ವಿತರಿಸಲಾಗುತ್ತದೆ. ಥೀಮ್ ಚಾರ್ಟಿನಲ್ಲಿ ಏನನ್ನು ಗುರುತಿಸಿದ್ದಾರೋ ಅದನ್ನೇ ನೆನಪಿಟ್ಟುಕೊಂಡು ಪಠ್ಯಪುಸ್ತಕದಲ್ಲಿ ಬಣ್ಣ ಹಚ್ಚಿ ತುಂಬಿಸುವ ಮೂಲಕ ಮಕ್ಕಳ ಸ್ಮರಣಶಕ್ತಿಯನ್ನು ಉತ್ತೇಜಿಸಲಾಗುತ್ತದೆ.
4. ಹಾಡು, ಆಟ, ಊಟದಷ್ಟೇ ಪ್ರಾಮುಖ್ಯತೆ ನಿದ್ದೆಗೂ ಕೊಡಲಾಗುತ್ತದೆ. ಸ್ವಶೌಚ ಶುಚೀಕರಣ, ಊಟ, ಪಾಠಗಳಲ್ಲಿ ಅನುಸರಿಸಬೇಕಾದ ಶಿಸ್ತುಗಳಿಗೂ ಇಲ್ಲಿ ಅಡಿಪಾಯ ಹಾಕಲಾಗುತ್ತದೆ.
5. ನಗರ ಪ್ರದೇಶವಾದರೆ ಕಾರ್ಪೋರೇಷನ್, ಮುನಿಸಿಪಾಲಿಟಿ, ಹಳ್ಳಿ ಪ್ರದೇಶವಾದರೆ ಗ್ರಾಮ ಪಂಚಾಯ್ತು  ಅಂಗನವಾಡಿಯ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತವೆ. .ಸಿ.ಡಿ.ಎಸ್. ಮತ್ತು ಸ್ಥಳಿಯಾಡಳಿತದ ಸಮನ್ವಯತೆಯಲ್ಲಿ ಅಂಗನವಾಡಿಯ ಬೇಕು ಬೇಡಗಳು ಪೂರೈಕೆಯಾಗುತ್ತವೆ.
6. ಒಂದು ಸಾವಿರ ಜನಸಂಖ್ಯೆಯ ಪ್ರದೇಶಕ್ಕೊಂದರಂತೆ ಅಂಗನವಾಡಿ ಇರುತ್ತದೆ. ವರ್ಷಕ್ಕೊಂದು ಬಾರಿ ಪ್ರದೇಶಗಳ ಜನಸಂಖ್ಯಾ ಗಣತಿ ಮಾಡುವುದು, ತಿಂಗಳಿಗೊಂದು ಬಾರಿ ಜನಸಂಖ್ಯೆಯಲ್ಲಾದ ಏರುಪೇರು(ಜನನ, ಮರಣಗಳ ಲೆಕ್ಕಗಳನ್ನು ದಾಖಲಿಸುವ ಜವಾಬ್ದಾರಿ ಅಂಗನವಾಡಿ ಕಾರ್ಯಕರ್ತೆಯರದ್ದೇ ಆಗಿದೆ. ವರ್ಷದಲ್ಲಿ ಎರಡು ಬಾರಿ ಸರಕಾರದ ಯೋಜನೆಯಾದ ಉಚಿತ ಪೋಲಿಯೋ ಹನಿ ವಿತರಣಾ ಕಾರ್ಯಕ್ರಮದಲ್ಲಿ ಅಂಗನವಾಡಿಗಳೇ ವಿತರಣಾ ಬೂತುಗಳು. ಅಂತಹ ಸಂದರ್ಭಗಳಲ್ಲಿ ಪಿ.ಎಚ್.ಸಿ.(ಪ್ರಾಥಮಿಕ ಆರೋಗ್ಯ ಕೇಂದ್ರ) ಸಿಬ್ಬಂದಿಗಳಿಗೆ ಪೂರ್ಣ ಸಹಕಾರ ಕೊಟ್ಟು ಆಯಾಯ ಪ್ರದೇಶದಲ್ಲಿರುವ ಅರ್ಹ ಮಕ್ಕಳು ಇದರ ಪೂರ್ಣ ಪ್ರಯೋಜನ ಪಡೆಯುವಂತೆ ನೋಡಿಕೊಳ್ಳಬೇಕಾದದ್ದೂ ಅಂಗನವಾಡಿ ಕಾರ್ಯಕರ್ತೆಯರೇ. ನಿಗದಿತ ದಿನ ಪೋಲಿಯೋ ಹನಿ ಸ್ವೀಕರಿಸಲು ನಿರ್ಧಿಷ್ಟ ಮಗು ಅಸಮರ್ಥವಾದರೆ ಅದರ ಮನೆಯವರೆಗೂ ಹೋಗಿ ಔಷಧಿಯನ್ನು ಕೊಡಬೇಕಾದ ಜವಾಬ್ದಾರಿಯೂ ಇವರಿಗೇ. ಪ್ರತಿ ತಿಂಗಳು ಮಗುವಿನ ಎತ್ತರ. ಭಾರ ಮತ್ತು ಇತರ ಚಟುವಟಿಕೆಗಳನ್ನು ಆರೋಗ್ಯ ಇಲಾಖೆ ಕೊಡಮಾಡಿದ ಗ್ರೋತ್ ಚಾರ್ಟಿನಲ್ಲಿ ಕಾಲ ಕಾಲಕ್ಕೆ ದಾಖಲಿಸುತ್ತಾ ಇರಬೇಕು. ಉತ್ತಮ, ಸಾಮಾನ್ಯ, ಅತೃಪ್ತಿಕರ ಎನ್ನುವ ಮೂರು ವೀಭಾಗಗಳಲ್ಲಿ ಮಗು ಯಾವ ವಿಭಾಗಕ್ಕೆ ಒಳಪಡುತ್ತದೆ ಎಂಬುದನ್ನು ಕಂಡು ಹಿಡಿದು ಮೇಲಧಿಕಾರಿಗೆ ಮತ್ತು ಮಗುವಿನ ಹೆತ್ತವರಿಗೆ ಇದರ ಸೂಚನೆ ಕೊಟ್ಟು ಮುಂದಿನ ಹಂತದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಲು ತಾಯಿಯ ಮನವೊಲಿಸುವ ಚಾಕಚಕ್ಯತೆಯೂ ಈಕೆಗೆ ಇರಬೇಕು. ವರ್ಷಕ್ಕೊಮ್ಮೆ ವಿತರಿಸುವ ಆನೇಕಾಲು ರೋಗದ ಮದ್ದುಗಳನ್ನು ಮನೆ ಮನೆಗೆ ತಲುಪಿಸಬೇಕು.
7. ವಾರ್ಡ್ ಸಭೆ ಅಥವಾ ಪಂಚಾಯ್ತು ಸಭೆಗಳ(ತಿಂಗಳಿಗೊಂದು ಬಾರಿ)ಕುರಿತಾದ ನೋಟೀಸುಗಳನ್ನು ಆಯಾಯ ಮನೆಗಳಿಗೆ ತಲಪಿಸುವುದು, ಅಂಗನವಾಡಿಗೆ ಸಂಬಂಧಪಟ್ಟಂತೆ ಇರುವ ವೆಲ್ಫೇರ್ ಕಮಿಟಿಯ (ಹೆತ್ತವರು, ಊರ ಗಣ್ಯರು ಇದರ ಸದಸ್ಯರು)ಸಭೆ (ಶಾಲೆಯಲ್ಲಿ ಆಚರಿಸುವ ವಿಶೇಷ ದಿನಗಳ ಬಗ್ಗೆ, ಮಕ್ಕಳಿಗೆ ಒದಗಿಸಬೇಕಾದ ಸೌಕರ್ಯಗಳ ಬಗೆಗಿನ ವಿಚಾರ ವಿಮರ್ಶೆಗಾಗಿಯನ್ನು ಏರ್ಪಡಿಸುವ ಜವಾಬ್ದಾರಿಯೂ ಇದೆ.
8. ಗರ್ಭಿಣಿ ಮಹಿಳೆಯರು ತೆಗೆದುಕೊಳ್ಳಲೇಬೇಕಾದಂತಹ ಮುಂಜಾಗರೂಕತಾ ಕ್ರಮ(ಟಿ.ಟಿ.ಇಂಜೆಕ್ಷನ್, ವೈದ್ಯರ ಬಳಿ ತಪಾಸಣೆ ಇತ್ಯಾದಿಗಳ ಬಗ್ಗೆ ಅರಿವು ಮೂಡಿಸುವುದು, ನವಜಾತ ಶಿಶುವಿಗೆ ಕೊಡಲೇಬೇಕಾದಂತಹ ಔಷದಿ, ಇಂಜೆಕ್ಷನ್ನುಗಳು, ಎದೆಹಾಲು ಕೊಡಲೇಬೇಕಾದ ಅನಿವಾರ್ಯತೆ, ಸ್ವಚ್ಛತೆ...ಇತ್ಯಾದಿಗಳನ್ನು ಮನದಟ್ಟು ಮಾಡಿಸುವುದು.
9. ಕುಟುಂಬ ಯೋಜನೆಯ ಬಗ್ಗೆ ಅರಿವು ಮೂಡಿಸುವುದು. ಕಿಶೋರಿ ಶಕ್ತಿ ಯೋಜನ(ಕೆ.ಎಸ್.ವೈ.) ಎಂದರೆ ಹದಿಹರೆಯದ ಹೆಣ್ಣು ಮಕ್ಕಳ ಸಭೆಯನ್ನು ಕರೆದು ಕಾಲಕಾಲಕ್ಕೆ ಅವರಿಗೆ ವಯೋಸಹಜವಾದ ತಿಳುವಳಿಕೆ ನೀಡುವುದು. ಇದರ ಪರಿಣಾಮಕಾರಿ ಅನುಷ್ಟಾನದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸಕ್ರಿಯ ಪಾತ್ರವಹಿಸುವುದು.
10. ಎಲ್ಲಾ ಕೆಲಸಗಳ ನಿರ್ವಹಣೆಯ ದಾಖಲೆಯನ್ನು ಸೂಪರ್ವೈಸರಿಗೆ ಪ್ರತಿ ತಿಂಗಳು ಒಪ್ಪಿಸಬೇಕು ಮತ್ತು ಅವರ ನಿರ್ದೇಶನದಲ್ಲಿ ಹೊಸ ಪ್ರಾಜೆಕ್ಟುಗಳನ್ನು ಕಾರ್ಯರೂಪಕ್ಕೆ ತರಬೇಕು.


ಜನರ ನಡುವಿನಿಂದಲೇ ಬಂದು ಅವರದೇ ಭಾಷೆಯಲ್ಲಿ ಮಾತನಾಡಿ, ಅವರೊಡನೆ ಚೆನ್ನಾಗಿ ಹೊಕ್ಕು ಬಳಕೆಯಿರುವ ಅಂಗನವಾಡಿ ಕಾರ್ಯಕರ್ತೆ ಒಂದು ವಿಧದಲ್ಲಿ ಅರ್ಹ ವೈದ್ಯನಿಗಿಂತಲೂ ಮಹತ್ವದ ಪಾತ್ರವನ್ನು ಸಮಾಜದಲ್ಲಿ ನಿರ್ವಹಿಸುತ್ತಾಳೆ. ವೈದ್ಯರೆಂದರೆ ಸಾಮಾನ್ಯರಿಗಿರುವ ಭಯ ಮಿಶ್ರಿತ ಭಾವನೆ ಕಾರ್ಯಕರ್ತೆಯರೊಡನಿರುವುದಿಲ್ಲ. ಆದುದರಿಂದಲೇ 0-6 ವರೆಗಿನ ಮಕ್ಕಳು ಮತ್ತು ಅವರ ತಾಯಂದಿರ ಸರ್ವತೋಮುಖ ಅಭಿವೃದ್ಧಿಯಲ್ಲಿ ಅಂಗನವಾಡಿಯ ಪಾತ್ರ ಮಹತ್ತರವಾದದ್ದು
ಇಷೆಲ್ಲ ಜವಾಬ್ದಾರಿಗಳೊಂದಿಗೂ ನಗುಮುಖದ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸರಕಾರ ಕೊಡುತ್ತಿರುವ ಸೌಲಭ್ಯ, ಸಂಬಳಗಳನ್ನು ತಿಳಿಯಬೇಡವೇ? ವಿಪರ್ಯಾಸವೇನೆಂದರೆ ಅಂಗನವಾಡಿಯೆನ್ನುವುದು ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರದ ಸಮನ್ವಯತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರೂ ಅದರ ಕೆಲಸಗಾರರು ಸರಕಾರೀ ಉದ್ಯೋಗಸ್ಥರಲ್ಲ! ಇವರಿಗೆ ಸಂಬಳವಿಲ್ಲ, ಗೌರವಧನ ಕೊಡುತ್ತಿದೆ ಅಷ್ಟೆ. ಕಾರ್ಯಕರ್ತೆಗೆ  ರೂ.5,600(ರಾಜ್ಯ ಸರಕಾರ ರೂ. 2600, ಕೇಂದ್ರ ಸರಕಾರ ರೂ.3000. ಸಹಾಯಕಿಗೆ ರಾಜ್ಯ ಸರಕಾರ 2,600, ಕೇಂದ್ರ ಸರಕಾರ ರೂ.1500), ಸಹಾಯಕಿಗೆ ರೂ. 4,300 ಕೊಡುತ್ತಿದೆ. ಪೆನಷನ್ ಸೌಲಭ್ಯಗಳಾವುವೂ ಇಲ್ಲ. ರೂ. 500 ಕಾರ್ಯಕರ್ತೆಗೂ ರೂ.300 ಸಹಾಯಕಿಗೂ ನಿವೃತ್ತಿ ವೇತನ ಬರುತ್ತದೆ. ಬಿಸಿಲು, ಮಳೆಯೆನ್ನದೆ ಜನಗಣತಿಗೆ ಹೋಗುವ  ಮಹಿಳೆಯರಿಗೆ ಯಾವುದೇ ಭದ್ರತೆಗಳಿಲ್ಲ. ಊರಿನ ಮೂಲೆ ಮೂಲೆಗಳಲ್ಲಿರುವ ಮನೆಗಳಿಗೂ ಬೇಟಿ ಕೊಡಬೇಕಾದ ಅನಿವಾರ್ಯತೆ ಇರುವಾಗ ದೌರ್ಜನ್ಯಕ್ಕೊಳಗಾಗುವ ಸಾಧ್ಯತೆಗಳೂ ಇವೆ. ಅನಾರೋಗ್ಯ ಪೀಡಿತರಾದರೆ ದುಬಾರಿ ಔಷಧಿಗಳನ್ನೇ ಖರೀದಿಸಬೇಕು. ರಜೆಯ ಸೌಕರ್ಯಗಳಿಲ್ಲ. ಇತೀಚೆಗೆ ಅಂಗನವಾಡಿ ಕಾರ್ಯಕರ್ತೆಯರು  ಎಲ್ಲ ಅನ್ಯಾಯದ ವಿರುದ್ಧ ದೇಶವ್ಯಾಪಿ  ಪ್ರತಿಭಟನೆ ನಡೆಸಿದ್ದು ನಮಗೆಲ್ಲರಿಗೂ ಚೆನ್ನಾಗಿ ನೆನಪಿದೆ. ಸರಕಾರದ ಕಿವಿ ಹೇಗೂ ಕುರುಡು. ಕಾರ್ಯಕರ್ತೆಯರ ಬವಣೆ ನೋಡುವಾಗ ಕಣ್ಣೂ ಕುರುಡೇ ಆಗಿ ಹೋಗಿದೆಯೇನೋ ಎಂಬ ಭಾವನೆ ಬರುತ್ತದೆ. ಸರಕು ತುಂಬಿದ ಗಾಡಿಯನ್ನು ಕಷ್ಟದಿಂದ ಎತ್ತು ಎಳೆಯುತ್ತದಲ್ಲಾ...ಅದೇ ರೀತಿ ಅಂಗನವಾಡಿ ಕೆಲಸಗಾರರೂ ತಮ್ಮ ಮೇಲೆ ಹೊರಿಸಿದ ಬೆಟ್ಟದಂತಹ ಜವಾಬ್ದಾರಿಗಳ ಗಾಡಿಯನ್ನು ಹೊಟ್ಟೆಯ ಪಾಡಿಗಾಗಿ ಒಲ್ಲದ ಮನಸ್ಸಿನಿಂದ ಬೆನ್ನು ಬಾಗಿಸಿ ಶಕ್ತಿ ಮೀರಿ ಎಳೆಯುತ್ತಿದ್ದಾರೆ. ಪ್ರಿಯ ಓದುಗ ಮಿತ್ರರೇ, ಈಗ ಹೇಳಿ ನಿಮಗೂ `ಅಬ್ಬ...ಹೀಗೂ ಉಂಟೆ..?' ಎಂದು ಅನಿಸಿದೆಯಲ್ಲವೇ?                   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ