ನಮ್ಮ ಹಿರಿಯರು ಯಾವಾಗಲೂ `ತಗ್ಗಿದ
ಗದ್ದೆಗೆ ಮೂರು ಬೆಳೆ' ಎಂಬಂತೆ
ಬಾಳು ಎನ್ನುತ್ತಿದ್ದರು. ಗದ್ದೆಗಳನ್ನು ಚಿತ್ರದಲ್ಲೋ ಸಿನೆಮಾದಲ್ಲೋ ನೋಡಿ ತಿಳಿಯಬೇಕಾದಂತಹ ಈ
ಕಾಲದಲ್ಲಿ ಆ ನಾಲ್ಕು ಶಬ್ಧಗಳು
ತೀರಾ ಅಪರಿಚಿತ ಎಂದು ತೋರೀತೇನೋ?
ತಗ್ಗು ಪ್ರದೇಶದಲ್ಲಿರುವ ಗದ್ದೆಗಳಿಂದ ಏಣಿಲು(ಮಳೆಗಾಲದಲ್ಲಿ ತೆಗೆಯುವ
ಬೆಳೆ), ಸುಗ್ಗಿ(ಅದರ ನಂತರದ
ಬೆಳೆ), ಕೊಳಕ್ಕೆ(ಬೇಸಿಗೆಯಲ್ಲಿ ತೆಗೆಯುವ
ಬೆಳೆ) ಎಂದು ಮೂರು ಬೆಳೆ
ತೆಗೆಯುತ್ತಿದ್ದರು. ಎತ್ತರ ಪ್ರದೇಶದಲ್ಲಿರುವ ಗದ್ದೆಗಳಿಗೆ
ನೀರು, ಗೊಬ್ಬರಗಳ ಸರಬರಾಜು ಮತ್ತಿತರ ಸಮಸ್ಯೆಗಳಿಂದಾಗಿ
ಏಣಿಲು ಬೆಳೆ ಮಾತ್ರ ತೆಗೆಯುತ್ತಿದ್ದರು.
ಆದರೆ ತಗ್ಗು ಪ್ರದೇಶದಲ್ಲಿ ಎಲ್ಲವೂ
ಅನುಕೂಲಕರವೇ. ಅದಕ್ಕಾಗಿ ಫಸಲೂ ಮುಪ್ಪಟ್ಟು, ಸಮೃದ್ಧಿಯೂ.
ಮೊನ್ನೆ ಹೀಗೊಂದು ಘಟನೆ ನಡೆಯಿತು. ಆ ಇಬ್ಬರು ಮಕ್ಕಳು
ಸಿ.ಇ.ಟಿ. ಪರೀಕ್ಷೆ
ಬರೆದು ಫಲಿತಾಂಶವನ್ನು ಎದುರು ನೋಡುತ್ತಿದ್ದರು. `ಪರೀಕ್ಷೆಯಲ್ಲಿ ಹೇಗೆ ಮಾಡಿದ್ದೀಯಪ್ಪಾ?' ಇದು ಸಾಧಾರಣ ಎಲ್ಲರೂ
ಕೇಳುವ ಪ್ರಶ್ನೆ. `ಓ...,ಫಸ್ಟ್ ಕ್ಲಾಸ್...,
ನೂರರೊಳಗಿನ rank ಗ್ಯಾರೆಂಟಿ...' ಮೊದಲನೆಯವನ
ಉತ್ತರ. ಇನ್ನೋರ್ವ ಹೇಳುತ್ತಾನೆ, ಪರ್ವಾಗಿಲ್ಲ ...,ಯಾವುದಕ್ಕೂ ರಿಸಲ್ಟ್ ಬರಲಿ ನೋಡೋಣ...'
ಸರಿ. ಫಲಿತಾಂಶ ಬಂತು, ಮೊದಲನೆಯವ
ಅರ್ಹತಾ ಪಟ್ಟಿಗೆ ಸೇರ್ಪಡೆಯಾಗುವಷ್ಟೂ ಅಂಕಗಳನ್ನು
ಗಳಿಸಿರಲಿಲ್ಲ. ಎರಡನೆಯವ ಅತ್ತ್ಯುತಮ rank ಗಳಿಸಿದ್ದ. ದಿನಪತ್ರಿಕೆಯಲ್ಲಿ ಇಬ್ಬರ ಫೊಟೋಗಳೂ ಅಚ್ಚಾಗಿದ್ದುವು.
ಅದು ಒಬ್ಬನ ಪ್ರತಿಭೆಗೆ ಸಂದ
ಗೌರವವಾಗಿದ್ದರೆ ಇನ್ನೊಬ್ಬನ ನಿಧನಕ್ಕಾಗಿ ಸಂತಾಪ ಸೂಚಿಸಲಾಗಿತ್ತು! ಆತ
ಅವಮಾನ ತಾಳದೆ ಆತ್ಮಹತ್ಯೆ ಮಾಡಿಕೊಂಡಿದ್ದ.
ಇನ್ನೊಂದು ಘಟನೆ ನೋಡಿ,
ಅತಿ ವಿಶಿಷ್ಟ ವ್ಯಕ್ತಿಯ ಸನ್ಮಾನ
ಕಾರ್ಯಕ್ರಮವಾಗಿತ್ತದು. ಸನ್ಮಾನಿತರು, ಸನ್ಮಾನಿಸುವವರು ಇಬ್ಬರೂ ವಿ.ವಿ.ಐ.ಪಿ.ಗಳೇ.
ಸನ್ಮಾನಿಸಲು ಆಗಮಿಸಿದ್ದ ಮಹನೀಯರು ಮಾತನಾಡುತ್ತಾ, `ಯಾವ
ಜನ್ಮದ ಪುಣ್ಯವೋ.., ಸಮಸ್ತ ಊರಿನ ಜನತೆಯ
ಪ್ರತಿನಿಧಿಯಾಗಿ, ಅವರ ಭಾವನೆಗಳ ಪ್ರತೀಕವಾಗಿ
ನಾನಿಂದು ನಿಮ್ಮನ್ನು ಅಭಿನಂದಿಸುತ್ತಿದ್ದೇನೆ. ವಿಶಾಲ ಹೃದಯದ ನೀವು
ನಮ್ಮ ಈ ಕಿರು ಕಾಣಿಕೆಯನ್ನು
ಸ್ವೀಕರಿಸಿ ನಮ್ಮನ್ನು ಕೃತಾರ್ಥರನ್ನಾಗಿಸಬೇಕು....' ಎಂದು ಹೇಳುತ್ತಾ ಬಹಳ
ವಿನೀತ ಭಾವದಿಂದ ಅವರಿಗೆ ಶಾಲು
ಹೊದೆಸಿ ಸನ್ಮಾನಿಸಿದರು. ಕೈ ಚಪ್ಪಾಳೆಗಳ ಸುರಿಮಳೆಯಾಯ್ತು.
ವೇದಿಕೆಯ ಮೇಲಿನ ಸಕಲ ಔಪಚಾರಿಕತೆಗಳೂ
ಮುಗಿದು ಇನ್ನೇನು ಎಲ್ಲರೂ ಕೆಳಗಿಳಿಯಬೇಕು
ಎನ್ನುವಷ್ಟರಲ್ಲಿ ಅವಸರವಸರವಾಗಿ ಸಭಾಗೃಹಕ್ಕೆ ಪ್ರವೇಶಿಸಿದ ಮಹನೀಯರೋರ್ವರು ಶಾಲಿನೊಂದಿಗೆ ವೇದಿಕೆಯನ್ನೇರಿದರು. ಮೈಕಿನ ಬಳಿಗೆ ಬಂದು
ಹೇಳತೊಡಗಿದರು,`ಶ್ರೀಮಾನ್ ..... ಇವರನ್ನು ನಾನು ಕನ್ನಡ
ಸಂಘಟನೆಯ ಮುಖ್ಯಸ್ಥನಾಗಿ ಅಭಿನಂದಿಸುತ್ತಿಲ್ಲ, ನಾನು ಸರಕಾರೀ ಕಾಲೇಜಿನ
ಪ್ರಾಂಶುಪಾಲನಾಗಿಯೂ ಇವರಿಗೆ ಶಾಲು ಹೊದೆಸುತ್ತಿಲ್ಲ
ಅಥವಾ ನಾನು ಒಂದು ಕಾಲದಲ್ಲಿ
ಇವರು ಸೇವೆ ಸಲ್ಲಿಸುತ್ತಿದ್ದ ಶಾಲೆಯ
ಮುಖ್ಯಸ್ಥ ಎನ್ನುವ ನೆಲೆಯಲ್ಲೂ ಇಲ್ಲಿ
ಬಂದಿಲ್ಲ, ನಾನು ಇವರ ಕಲಾ
ಪ್ರತಿಭೆಯನ್ನು ಬಹಳ ಮೆಚ್ಚಿಕೊಂಡಿರುವೆನಾದುದರಿಂದ ನನ್ನೆಲ್ಲಾ ತುರ್ತು ಕಾರ್ಯಗಳ ನಡುವೆಯೂ ಬಿಡುವು ಮಾಡಿಕೊಂಡು
ಇಲ್ಲಿ ಬಂದಿದ್ದೇನೆ. ಇವರನ್ನು ಅಭಿನಂದಿಸುತ್ತಿದ್ದೇನೆ...' ಇತ್ಯಾದಿ ಮಾತುಗಳನ್ನಾಡಿ ಶಾಲು ಹೊದೆಸಿ ಬಂದಷ್ಟೇ
ಗಡಿಬಿಡಿಯಿಂದ ವೇದಿಕೆಯಿಂದಿಳಿದು ಹೋದರು. ಸಭೆ ಮೌನದಿಂದ
ಅದನ್ನು ವೀಕ್ಷಿಸಿತು.
ಎತ್ತರದ ಮುತ್ತುಗದ ಮರದಲ್ಲಿ
ಆಗುವ ಹೂವು ತನ್ನ ಢಾಳಾದ
ಬಣ್ಣದಿಂದ ನಮ್ಮ ಗಮನ ಸೆಳೆಯುತ್ತದೆ.
ಆದರೆ ಅದಕ್ಕೆ ಸುವಾಸನೆಯಿಲ್ಲ, ಅದನ್ನು
ಪೂಜೆಗೆ ಉಪಯೋಗಿಸುವುದಿಲ್ಲ. ಹೆಂಗಳೆಯರು ಮಾಲೆ ಕಟ್ಟಿ ತಲೆಗೇರಿಸುವುದೂ
ಇಲ್ಲ. ಒಣಗಿ ಬಿದ್ದ ಹೂವನ್ನು
ಗುಡಿಸಿ ಇತರ ತ್ಯಾಜ್ಯದೊಂದಿಗೆ ಹಾಕಿ
ಬಿಡುತ್ತಾರೆ. ಆದರೆ ಮಲ್ಲಿಗೆಯಾದರೋ...? ಮೊಗ್ಗಿರುವಾಗ ಅದು ಎಲೆ ಮರೆಯಲ್ಲೇ
ಇರುತ್ತದೆ. ಅದು ಬೀರುವ ಸುವಾಸನೆಯಿಂದಲೇ ಅದರ ಇರವನ್ನು ಪತ್ತೆ ಹಚ್ಚಿ ಕೊಯ್ಯುತ್ತಾರೆ.
ಸುಂದರವಾದ ಮಾಲೆ ದೇವರ ಮುಡಿಗೇರುತ್ತದೆ.
ಬಿಡಿ ಹೂಗಳು ಆತನ ಪಾದಕಮಲಕ್ಕೆ
ಅರ್ಪಣೆಯಾಗುತ್ತವೆ. ಸ್ತ್ರೀಯ ಮುಡಿಗೇರಿದ ಮಲ್ಲಿಗೆ
ಮಾಲೆ ಸೌಂದರ್ಯವರ್ಧಕವೂ ಹೌದು, ಸೌಂದರ್ಯ ಆರಾಧಕರ ಕಣ್ಮಣಿಯೂ
ಹೌದು. ಮಲ್ಲಿಗೆ ಹೂವಿಲ್ಲದೆ ಸಮಾರಂಭಗಳೇ
ಇಲ್ಲ. ಜನನದಿಂದ ಮರಣದವರೆಗೂ ಏಕಪ್ರಕಾರವಾದ
ಮರ್ಯಾದೆ ಸಿಗುವುದು ಮಲ್ಲಿಗೆಗೆ ಮಾತ್ರ. ಆದರೂ ಅದರ
ಬಳ್ಳಿ ಹೇಗಿದೆ ನೋಡಿ, ಬಾಗಿ
ಬಳುಕಿ ತಾನು ಯಾವ ಆಧಾರದೊಂದಿಗೆ
ನಿಂತಿದೆಯೋ ಅದಕ್ಕೆ ತಕ್ಕಂತೆ ಹಬ್ಬುತ್ತಿರುತ್ತದೆ.
ತಗ್ಗಿನ
ಗದ್ದೆ, ಮಲ್ಲಿಗೆ ಬಳ್ಳಿ ಎರಡೂ
ನಮಗೆ ಪಾಠದಂತಿವೆ. ಮೇಲೆ ಹೇಳಿದ ಮೊದಲಿನ
ಉದಾಹರಣೆಯನ್ನು ಗಮನಿಸಿ ನೋಡಿ. ಬಾಯಿ
ಬಡುಕುತನ ತಂದ ಆಪತ್ತು ಎಂತಹ
ಘೋರವಾದದ್ದು...? ತಾನು ಬಹಳ ಬುದ್ಧಿವಂತ
ಎಂದು ಸಮಾಜದೆದುರು ಬಿಂಬಿಸಿಕೊಂಡಾತ ಫಲಿತಾಂಶ ಬಂದಾಗ ಅದೇ
ಸಮಾಜವನ್ನು ಎದುರಿಸದಾದ. ಧೃಢಮನಸ್ಕತೆ, ವಿನೀತ ಭಾವ ಇರುವವರಿಗೆ
ಬಡಾಯಿಕೊಚ್ಚಿಕೊಳ್ಳುವ ಅಭ್ಯಾಸವಿರುವುದಿಲ್ಲ. ವರ್ಷದಲ್ಲಿ ಮೂರು ಬೆಳೆಯಿತ್ತು ಪೊರೆಯುವ
ತಗ್ಗಿನ ಗದ್ದೆಯಂತೆ ಅವರಿದ್ದಲ್ಲಿ ಸಮೃದ್ಧಿ, ಸಮರಸವಿರುತ್ತದೆ. ಎರಡನೇ ಘಟನೆಯಲ್ಲಿ ಸನ್ಮಾನಿಸಿದ
ಆ ಮಹನೀಯರ ಮಾತುಗಳು
ಪ್ರೇಕ್ಷಕರ ಮನ ಸೂರೆಗೊಂಡಂತೆ ಕೊನೆಯಲ್ಲಿ
ವೇದಿಕೆಯೇರಿದ ಆ ಮಹನೀಯರ ಮಾತುಗಳು
ಜನರ ಹೃದಯವನ್ನು ತಟ್ಟಲಿಲ್ಲ. ಯಾಕೆನುವಿರಾ?
ಅವುಗಳಲ್ಲಿ ಬರಿಯ `ನಾನು'....`ನಾನು'
ಗಳೇ ತುಂಬಿದ್ದುವು.
ನಮ್ಮೊಳಗಿರುವುದನ್ನು
ಉಳಿದವರು ಪತ್ತೆ ಹಚ್ಚಿದಾಗ ಅಲ್ಲಿ
ಅಚ್ಚರಿಯ ಸಂತಸವಿರುತ್ತದೆ. ಸ್ವೀಕರಣೆಯ ಆಹ್ಲಾದವಿರುತ್ತದೆ. ಪ್ರೋತ್ಸಾಹದ ಜೀವಸೆಲೆಯಿರುತ್ತದೆ. `ಲೋ ಪ್ರೊಫೈಲ್' ಎನ್ನುವ
ಶಬ್ಧವನ್ನು ಸಾಧಾರಣವಾಗಿ ಜಂಭದಕೋಳಿಯಲ್ಲದ, ತಲೆ ಇನ್ನೂ ಹೆಗಲ
ಮೇಲೆಯೇ ಇರುವ ಸಮತೂಕದ ಜನ
ಎನ್ನುವ ಭಾವಾರ್ಥದಲ್ಲೇ ಉಪಯೋಗಿಸಲಾಗುತ್ತದೆ. ಹಿಂದಿನ ತಲೆಮಾರಿನವರು ಕೃಷಿಕರಾಗಿದ್ದುದರಿಂದ
ಗದ್ದೆಗೆ ಸಮೀಕರಿಸಿ ಜೀವನ ವಿಧಾನವನ್ನು ಹೇಳಿದರು.
ಇಂದು ಲೋಕವೇ ಕಂಪ್ಯೂಟರ್ ಹಿಡಿತದಲ್ಲಿದೆ.
ಕಂಪ್ಯೂಟರೀಕೃತ ಭಾಷೆಯೇ ಸರ್ವಮಾನ್ಯವಾಗಿರುವುದರಿಂದ ಈ ಲೇಖನಕ್ಕೆ
ಆ ತಲೆಬರಹವಿತ್ತೆ ಮತ್ತು
ಓದುಗರನ್ನು ಥಟ್ಟೆಂದು ಆಕರ್ಷಿಸಬೇಕಾದ ಹೊಣೆಗಾರಿಕೆಯೂ ಬರಹಗಾರರ ಮೇಲಿದೆಯಷ್ಟೆ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ