ಮಂಗಳವಾರ, ಸೆಪ್ಟೆಂಬರ್ 6, 2016

ಪ್ರೇಮಕ್ಕೆ ಕಣ್ಣಿಲ್ಲ...


ಅಗೋಸ್ತು 25 ರಿಂದ ಸೆಪ್ಟೆಂಬರ್ 8 ವರೆಗೆ ರಾಷ್ಟ್ರೀಯ ನೇತ್ರದಾನ ಜಾಗೃತಿ ಪಾಕ್ಷಿಕವನ್ನು ಆಚರಿಸಲಾಗುತ್ತದೆ ಎಂಬ ಸುದ್ದಿಯನ್ನು ದಿನಪತ್ರಿಕೆಯಲ್ಲಿ ಓದಿದಾಗ ಯಾವಾಗಲೋ ಓದಿದ ಹೃದಯ ಸ್ಪರ್ಶಿ ಕಥೆಯೊಂದು ನೆನಪಿಗೆ ಬಂತು. ನನ್ನ ಕಲ್ಪನೆಯ ಹೂರಣದೊಂದಿಗೆ ಇವತ್ತು ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ.

ಆಕೆ ಹುಟ್ಟಾ ಅಂಧೆ, ಯೌವ್ವನ ಉಕ್ಕುವ ಸುಂದರಿ. ಆದರೇನು? ಆಕೆಯ ಸೌಂದರ್ಯವನ್ನು ಈಂಟುವ ಸಾವಿರಾರು ಜೋಡಿ ಕಣ್ಣುಗಳನ್ನು ಆಕೆ ಗುರುತಿಸಬಲ್ಲಳೇ...? ಮನೆಯೆದುರಿನ ಸರೋವರದಲ್ಲಿ ಹುಣ್ಣುಮೆಯ ರಾತ್ರಿ ಕಾಣುವ ಚಂದ್ರ ಬಿಂಬದೊಡನೆ ತನ್ನ ಬಿಂಬವನ್ನು ಹೋಲಿಸಬಲ್ಲಳೇ...? ತನ್ನ ದೌರ್ಭಾಗ್ಯಕ್ಕಾಗಿ ವಿಧಿಯನ್ನು ದೂರಿದಳು. ತನಗೆಸಗಿದ ಅನ್ಯಾಯಕ್ಕಾಗಿ ಸೃಷ್ಟಿದಾತನನ್ನು ದ್ವೇಷಿಸತೊಡಗಿದಳು. ತನ್ನ ಪ್ರಾಯದವರೆಲ್ಲರೂ ಜೀವನದ ಮಧು ಪಾತ್ರೆಯನ್ನು ಇಂಚಿಂಚಾಗಿ ಸವಿಯುವಾಗ ತಾನು ಮಾತ್ರ ಕರಿ ಪಾತ್ರೆಯ ಕಹಿಯನ್ನು ಉಣ್ಣುವುದೇ...? ಹುಡುಗಿ ಇಡೀ ವಿಶ್ವವನ್ನೇ ತನ್ನ ವೈರಿ ಎಂಬಂತೆ ನೋಡತೊಡಗಿದಳು. ಉದ್ಯಾನವನದ ಕಲ್ಲು ಬೆಂಚು ಈಕೆಯ ಕಣ್ಣೀರಿನ ಬಿಸಿಗೆ ಇಷ್ಟಿಷ್ಟೇ ಕರಗಿ ಹೋಗುತ್ತಿತ್ತೇನೋ...? ಹುಡುಗ ಬಾರದಿರುತ್ತಿದ್ದರೆ...., ಅವನು ಬಂದ...., ಈಕೆಯ ಬಳಿ ಕುಳಿತ. ಮೊದಮೊದಲು ಅವನ ಇರುವಿಕೆಯನ್ನು ಇಷ್ಟಪಡದವಳು ಅವನ ಪ್ರಾಮಾಣಿಕ ಧ್ವನಿಗೆ ಕರಗತೊಡಗಿದಳು, ತಾಜಾ ಉಸಿರಿಗೆ ಮೂಗರಳಿಸತೊಡಗಿದಳು. ಕ್ರಮೇಣ ಇಬ್ಬರೂ ಸ್ನೇಹಿತರಾದರು ಎನ್ನುವುದಕ್ಕಿಂತ ಅವಳ ಸ್ನೇಹಕ್ಕಾಗಿ ಅವನು ಹಾತೊರೆದು ಬರುತ್ತಾನಲ್ಲ...? ಅದನ್ನವಳು ಇಷ್ಟಪಟ್ಟಳು. ಆತ ಅವಳ ಕೈಯ್ಯನ್ನು ತನ್ನ ಕೆನ್ನೆಗಾನಿಸಿ ಕುಳಿತು ಎದುರು ಕಾಣುತ್ತಿರುವ ಬೃಹದಾಕಾರದ ಆಲದ ಮರವನ್ನು ವರ್ಣಿಸುತ್ತಿದ್ದರೆ ಆಕೆ ಅದರಲ್ಲಿ ಗೂಡು ಕಟ್ಟುವ ಹಕ್ಕಿಯಾಗಿಬಿಡುತ್ತಿದ್ದಳು. ಈತ ದೂರದಲ್ಲಿ ಕಾಣುತ್ತಿರುವ ಕಡಲಿನ ವರ್ಣನೆ ಮಾಡುತ್ತಿದ್ದರೆ ಆಕೆ ಅದರಲ್ಲಿ ತೇಲುವ ಹಡಗಾಗುತ್ತಿದ್ದಳು. ಸೃಷ್ಟಿಯನ್ನು ದ್ವೇಷಿಸುತ್ತಿದ್ದವಳು ತಾನೇ ಪ್ರಕೃತಿ ಎಂದು ಪರಿಭಾವಿಸತೊಡಗಿದಳು. ಹಾಗಿತ್ತು ಅವಳೊಂದಿಗಿನ ಆತನ ಮಾತು, ಭಾವ ಪರವಶತೆ. ಒಂದು ದಿನ ಈತ ಕೇಳಿದ,
"ನನ್ನೆದೆಯ ಉಸಿರೇ..., ಮದುವೆಯಾಗೋಣವೇನು ನಾವು...?"
ಆತನ ಕೈಯೊಳಗಿದ್ದ ಆಕೆಯ ಕೈಯ್ಯಲ್ಲಿ ಸಣ್ಣ ಕಂಪನ. ತುಟಿಯುಸಿರಿತು,
"ಛೆ...ಛೆ...,ಏನೆಂದು ತಿಳಿದುಕೊಂಡೆ ನನ್ನ...? ಕಣ್ಣಿಲ್ಲದ ನನಗೆ ಮದುವೆಯೇ...? ಸಾಧ್ಯವೇ ಇಲ್ಲ ಬಿಡು...ನಾನು ವಿಶ್ವದ ಸೌಂದರ್ಯವನ್ನು ನನ್ನಿನಿಯನೊಡನೆ ಮನದಣಿಯೆ ಸವಿಯಬೇಕು....,ಅದು ಸಾಧ್ಯವಾದರೆ ಮಾತ್ರ ಮದುವೆ...."
ಮತ್ತೆ ಯಥಾಪ್ರಕಾರ ಮುಂದುವರಿಯಿತು ಅವರ ಗೆಳೆತನ.

ಒಂದು ದಿನ ಅವಳ ಫೋನಿನೊಳಗೊಂದು ಸಂದೇಶವಿತ್ತು, `ನಿಮಗೆ ಕಣ್ಣುಗಳನ್ನು ದಾನ ಮಾಡಲು ದಾನಿಯೊಬ್ಬರು ಮುಂದೆ ಬಂದಿದ್ದಾರೆ. ಕೂಡಲೇ ನಿಮ್ಮ ನಿರ್ಧಾರವನ್ನು ತಿಳಿಸಿ...'
ಆಕೆ ಒಂದು ಕ್ಷಣವೂ ವ್ಯರ್ಥಗೊಳಿಸಲಿಲ್ಲ. ತನ್ನಿನಿಯನಿಗೊಂದು ಸಂದೇಶವನ್ನು ರವಾನಿಸಿ ಆಸ್ಪತ್ರೆಯ ಕಡೆಗೆ ಧಾವಿಸಿದಳು. ಮನಸ್ಸು ಅವ್ಯಕ್ತ ನಿರೀಕ್ಷೆಯಲ್ಲಿ ಉನ್ಮತ್ತವಾಗತೊಡಗಿತು.....,` ದೇವರು ಕೊನೆಗೂ ತನ್ನ ಪ್ರಾರ್ಥನೆಗೆ ಕಿವಿಯಾದನಲ್ಲಾ...? ತನಗೆ ದೃಷ್ಟಿ ದೊರೆತ ಕ್ಷಣ...., ಮೊದಲ ನೋಟವೇ ತನ್ನ ಹುಡುಗನಾಗಿರಬೇಕು. ಇದುವರೆಗೂ ತನ್ನ ಸೌಂದರ್ಯಕ್ಕೆ ಆತನೇ ಕಣ್ಣಾಗಿದ್ದ, ಮಾತಾಗಿದ್ದ. ಇನ್ನು ಮುಂದೆ ತನ್ನ ಸೌಂದರ್ಯಾರಾಧಕನ ಕಣ್ಣೋಟಕ್ಕೆ ತಾನೂ ಪಡಿನುಡಿಯಬಲ್ಲೆ...ತನ್ನ ಕಣ್ಣೋಟದ ಮೂಲಕ...'

ಹುಡುಗಿಯ ಕಣ್ಣಿನ ಶಸ್ತ್ರಕ್ರಿಯೆ ಯಶಸ್ವಿಯಾಯಿತು. ಕಣ್ಣಿಗೆ ಕಟ್ಟಿದ ಪಟ್ಟಿಯ ಸಹಿತ ಆಪರೇಷನ್ ಥೀಯೆಟರಿನಿಂದ ಹೊರಕ್ಕೆ ಬರುವಾಗ ಅಲ್ಲಿ ಆತ ನಿಂತಿದ್ದ. ಅವಳು ಕುಳಿತಿದ್ದ ವೀಲ್ ಚೇರಿನ ಹಿಡಿಯನ್ನು ದಾದಿಯ ಕೈಯಿಂದ ತನ್ನ ಕೈಗೆ ಬದಲಾಯಿಸಿಕೊಂಡ. ಅವಳ ಪ್ರತಿಯೊಂದು ಬೇಕು ಬೇಡಗಳನ್ನು ಪೂರೈಸಿದ. ಕೆಲವೇ ದಿನಗಳಲ್ಲಿ ಅವಳ ಕಣ್ಣಿಗೆ ಕಟ್ಟಿದ ಪಟ್ಟಿಯನ್ನು ಬಿಚ್ಚಿದರು. ಅವಳಾಸೆಯಂತೆ ಎದುರು ನಿಂತಿದ್ದ ಅವಳ ಹುಡುಗ! ಮೊತ್ತ ಮೊದಲು ಅವಳು ಗಮನಿಸಿದ್ದು....? ಆತ ದೃಷ್ಟಿಹೀನನಾಗಿದ್ದ. ಇಲ್ಲದ ದೃಷ್ಟಿಗೆ ಕಪ್ಪು ಗಾಜಿನ ಪರದೆ ಇತ್ತು. ಲವಲವಿಕೆಯಿಂದ ಚೆಲುವಿನ ರಾಣಿಯ ಬಳಿಗೆ ಬಂದ. ಆಪ್ಯಾಯತೆಯಿಂದ, ಅಭ್ಯಾಸಬಲದಿಂದ ಅವಳ ಕೈಯ್ಯನ್ನು ಹಿಡಿದೆತ್ತಿ ತನ್ನ ಕೆನ್ನೆಗಾನಿಸಿಕೊಂಡು ಕೇಳಿದ,
"ನನ್ನೊಲವಿನ ಹೂವೇ...,ದೃಷ್ಟಿ ಬಂತಲ್ಲವೇ ನಿನಗೆ...? ಈಗ ನನ್ನನ್ನು ಮದುವೆಯಾಗಬಹುದಲ್ಲ?"
ಹುಡುಗಿ ಕೈಯ್ಯನ್ನು ಹಿಂದಕ್ಕೆಳೆದುಕೊಂಡು ಹೇಳಿದಳು,
"ಛೆ...ಛೆ...,ನಾನು ನನ್ನಿನಿಯನ ಜೊತೆಯಲ್ಲಿ ಸೃಷ್ಟಿಯ ಸೌಂದರ್ಯವನ್ನು ಸವಿಯಬೇಕು...,ನಿನಗೆ ದೃಷ್ಟಿಯೇ ಇಲ್ಲವಲ್ಲ....?"
ಸರಿ.., ಮತ್ತಷ್ಟು ದಿನಗಳು ಸರಿದುವು. ಹುಡುಗಿಯ ಚಿಕಿತ್ಸೆ ಮುಗಿಯಿತು. ಈಗ ಆಕೆಗೆ ಕೋಲಿನ ಆಧಾರ ಬೇಕಾಗಿರಲಿಲ್ಲ. ಹುಡುಗನ ಭುಜದ ಆಸರೆಗಾಗಿ ತಡವರಿಸುವ ಅಗತ್ಯವಿರಲಿಲ್ಲ. ಆದರೂ ಹುಡುಗ ಬಳಿಯಲ್ಲೇ ಇದ್ದ. ಜೊತೆಯಾಗಿಯೇ ಹುಡುಗಿಯ ಪುಟ್ಟ ಮನೆಯನ್ನು ಪ್ರವೇಶಿಸಿದರು. ಎಷ್ಟೋ ದಿನಗಳ ಕಾಲ ಆಕೆ ಮನೆಯನ್ನು ಉಪಯೋಗಿಸಿರಲಿಲ್ಲ ಎಂಬ ಕುರುಹೇ ಇಲ್ಲದಂತೆ ಮನೆ ಹೊಸತನದಲ್ಲಿ ಲಕಲಕಿಸುತ್ತಿತ್ತು. ಹುಡುಗ ತನ್ನರಗಿಣಿಯ ಗೂಡನ್ನು ಸ್ವಚ್ಛಗೊಳಿಸುತ್ತಿದ್ದ. ಹುಡುಗಿಯ ಅಗತ್ಯಗಳೆಲ್ಲವನ್ನೂ ಪೂರೈಸಿ ಆತ ವಿದಾಯ ಹೇಳಿದ. ಅವಳು ಸೋಫಾದಲ್ಲಿ ಮೈಚೆಲ್ಲುತ್ತಿದ್ದಂತೆ ಎದುರಿನ ಟೀಪಾಯಿ ಮೇಲೆ ಆತ ಅವಳಿಗಾಗಿ ಇಟ್ಟು ಹೋಗಿದ್ದ ಹಣ್ಣಿನ ರಸದ ಲೋಟದಡಿಯಲ್ಲಿದ್ದ ಕಾಗದವು ಅವಳ ಗಮನ ಸೆಳೆಯಿತು. ಓದಿದಳು,
ಬ್ರೈಲ್ ಲಿಪಿ ಹಾಗೂ ಅದರ ಅಕ್ಷರ ರೂಪಗಳು ಹೀಗೆ ಹೇಳುತ್ತಿದ್ದುವು,

`ನನ್ನ ಹೃದಯದ ಅತಿ ಮಧುರ ನೆನಪೇ....
ಗೆಳೆಯ ಬೇಕೆನಿಸಿತೇ...?
ಕೊಡು ಒಂದು ಕರೆ...
ಇರುವೆ ನಾ ಕೂಗಳತೆಯಲ್ಲಿ
ಕಷ್ಟ ಬಂತೆನಿಸಿತೇ...?
ಕೊಡು ಒಂದು ಕರೆ...
ಇರುವೆ ನಾ ಕೂಗಳತೆಯಲ್ಲಿ
ಬೇನೆ ಬಂತೆನಿಸಿತೇ...?
ಕೊಡು ಒಂದು ಕರೆ...
ಇರುವೆ ನಾ ಕೂಗಳತೆಯಲ್ಲಿ
ನನ್ನ ಹೃದಯದಾ ಉಸಿರೇ...
ಜೋಪಾನ...ಜೋಪಾನಾ...ಜೀವನ ಬಹಳ ಉದ್ದವಿದೆ...
ಉದ್ದಕ್ಕೂ ಮರೆಯದಿರು ನಿನ್ನಾ.....
ತನು ಮನಗಳಾ...., ಜೊತೆ ಜೊತೆಗೇ...
ನಾನಿತ್ತಾ ಕಂಗಳಾ...
ಉದುರಿದಾ ಕಣ್ಣೀರಾ. 



     


           

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ