ಶುಕ್ರವಾರ, ಮೇ 26, 2017

ಮಾವಿನ ಹಣ್ಣಿನ ಗೊಜ್ಜು



ಇತ್ತೀಚೆಗೆ ನಾನು ಕೊಂಕಣಿ ಮಿತ್ರರೊಬ್ಬರ ಗೃಹಪ್ರವೇಶಕ್ಕೆ ಹೋಗಿದ್ದೆ. ಘಮಘಮಿಸುವ ಊಟಕ್ಕೆ ಮಾವಿನ ಹಣ್ಣಿನ ಗೊಜ್ಜು ಕಳಶಪ್ರಾಯವಾಗಿತ್ತು. ಅದು ನಾವು ಸಾಧಾರಣವಾಗಿ ತಯಾರಿಸುವ ಗೊಜ್ಜಿಗಿಂತ ಭಿನ್ನವಾಗಿತ್ತು ಮತ್ತು ನಾನದನ್ನು ತುಂಬಾ ಇಷ್ಟಪಟ್ಟೆ. ಹೊಟ್ಟೆ ಬಿರಿಯೆ ತಿಂದಿದ್ದೂ ಅಲ್ಲದೆ ಒಳಗೆ ಹೋಗಿ ರೆಸೆಪಿಯನ್ನೂ ಕೇಳಿಕೊಂಡೆ. ಮಾವಿನ ಸೀಸನ್ ಕೊನೆ ಹಂತಕ್ಕೆ ಬಂದಿದೆಯಾದರೂ ಇನ್ನೂ ಮುಕ್ತಾಯವಾಗಿಲ್ಲ. ನೀವೂ ಮಾಡಿ, ತಿಂದು ಸಂತಸಪಡಿ. ಕಾಡು ಮಾವಿನ ಹಣ್ಣು ಪಾಕವಿಧಾನಕ್ಕೆ ತುಂಬಾ ಹೊಂದಿಕೆಯಾಗುತ್ತದಾದರೂ ಬೇರೆಯವುಗಳಲ್ಲೂ ಮಾಡಬಹುದು (ನಾನು ಅರೆಹಣ್ಣಾದ ತೋತಾಪುರಿ ಅಥವಾ ಗಿಣಿಮೂತಿ ಮಾವಿನಲ್ಲೂ ಇದರ ಪ್ರಯೋಗವನ್ನು ಮಾಡಿದ್ದೇನೆ).
ಬೇಕಾಗುವ ಸಾಮಾಗ್ರಿಗಳು:
1. ಮಾವಿನಹಣ್ಣು- ಅಗತ್ಯಕ್ಕೆ ತಕ್ಕಷ್ಟು
2. ಒಗ್ಗರಣೆಗೆ- ಎಣ್ಣೆ, ಕೆಂಪು ಮೆಣಸು, ಉದ್ದಿನ ಬೇಳೆ, ಸಾಸಿವೆ, ಕರಿಬೇವಿನ ಸೊಪ್ಪು
3. ಕಡ್ಲೆ (ಬೇಸನ್) ಹಿಟ್ಟು- ಎರಡು ಟೀ ಸ್ಪೂನ್
4. ಮೆಣಸಿನ ಕಾಯಿ- ಒಂದೆರಡು
5. ಉಪ್ಪು
6. ಬೆಲ್ಲ
7. ಚಿಟಿಕೆ ಇಂಗು
ವಿಧಾನ: ಮೊದಲು ಮಾವಿನಹಣ್ಣನ್ನು ಶುಚಿಗೊಳಿಸಿ. ಸಿಪ್ಪೆಯನ್ನು ಕೈಯಿಂದ ಸುಲಿದು ತೆಗೆಯಿರಿ. ಒಂದೆರಡು ಲೋಟ ನೀರು ಹಾಕಿ ಗಿವುಚಿ ಅದರ ರಸವನ್ನು ತೆಗೆದು ಪಕ್ಕಕ್ಕಿಡಿ. (ಸಿಪ್ಪೆಯನ್ನು ಬಿಸಾಡಿ) ಮಾಂಸಲವಾದ ಗೊರಟುಗಳನ್ನು ಹಾಗೇ ಇಟ್ಟುಕೊಳ್ಳಿ. ಈಗ ಬಾಣಲೆಯನ್ನು ಬಿಸಿಗಿಡಿ. ಎಣ್ಣೆ ಹಾಕಿ ಒಗ್ಗರಣೆ ಮಾಡಿ. ಜೊತೆಗೆ ಇಂಗಿನ ಪುಡಿಯನ್ನೂ ಸಿಂಪಡಿಸಿ . ಇದಕ್ಕೆ ಗಿವುಚಿಟ್ಟ ಹಣ್ಣಿನ ರಸ ಮತ್ತು ಗೊರಟುಗಳನ್ನು ಸುರಿದು ಉಪ್ಪು, ಬೆಲ್ಲ, ಹೆಚ್ಚಿಟ್ಟ ಹಸಿರು ಮೆಣಸಿನ ಕಾಯಿಗಳನ್ನು ಸೇರಿಸಿ. ತಟ್ಟೆ ಮುಚ್ಚಿ ಬೇಯಿಸಿ. (ಬೆಂಕಿ ಮೀಡಿಯಮ್ ಆಗಿರಲಿ) ಕೆಲವೇ ನಿಮಿಷಗಳಲ್ಲಿ ಇದು ಬೆಂದಿರುತ್ತದೆ. ಈಗ ಕಡ್ಲೆ ಹಿಟ್ಟನ್ನು ಸ್ವಲ್ಪ ನೀರಿನೊಂದಿಗೆ ಗಂಟಿಲ್ಲದಂತೆ ಕಲಸಿ ಕುದಿಯುತ್ತಿರುವ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಕೈಯಾಡಿಸಿ. ಈಗ ಗೊಜ್ಜು ದಪ್ಪಗಾಗಿ ಬರುತ್ತದೆ. ಕೂಡಲೇ ಬೆಂಕಿಯಿಂದ ಇಳಿಸಿ. ರುಚಿಯಾದ ಗೊಜ್ಜನ್ನು ಅನ್ನದೊಂದಿಗೆ ಸವಿಯಿರಿ.
ಕಿವಿ ಮಾತು :- ಗೊಜ್ಜಿನ ಪ್ರಮಾಣಕ್ಕನುಸರಿಸಿ ನೀರಿನ ಪ್ರಮಾಣವನ್ನೂ ಹೆಚ್ಚು ಕಡಿಮೆ ಮಾಡಿಕೊಳ್ಳಿ.       

1 ಕಾಮೆಂಟ್‌: