"ಆಂಟೀ...,ಯಾವಾಗಿಂದ ನಿಮ್ಮನ್ನ ಕರೀತಾ ಇದ್ದೇನೆ, ಫೋನು ಸ್ವಿಚ್ಡ್ ಆಫ್ ಅಂತಾನೇ ಬರ್ತಿತ್ತು. ಯಾಕೆ ಆಂಟೀ ಫೋನು ಆಫ್ ಮಾಡಿಟ್ಟದ್ದು...?" ದುಗುಡ ತುಂಬಿದ ಸ್ವರದಲ್ಲಿ ಉಮಾ ಕೇಳಿದಾಗ ಈ ಬೆಳ್ಳಂಬೆಳಗ್ಗೆ ಏನಿತ್ತಪ್ಪಾ ಅಂತ ಜರೂರು ಅಂತ ಯೋಚಿಸುತ್ತಲೇ ನಾನು ಯಾವಾಗಲೂ ರಾತ್ರಿ ಮಲಗುವ ಮೊದಲು ಅದನ್ನು ಏರೋಪ್ಲೇನ್ ಮೋಡಲ್ಲಿ ಇಡುತ್ತೇನೆ....ರೇಡಿಯೇಶನ್,.....,ಆರೋಗ್ಯ, ....ಇತ್ಯಾದಿ ಇತ್ಯಾದಿ ನನ್ನ ಪುರಾಣವನ್ನು ಅರ್ಧದಲ್ಲೇ ತುಂಡರಿಸಿ ಹೇಳಿದಳು,
"ಆಂಟೀ...,ನಮ್ಮ ಶ್ರೀದೇವಿ ಹೋದದ್ದು ಗೊತ್ತಾಯ್ತಾ....?"
"ಯಾವ ಶ್ರೀದೇವಿ...? ಎಲ್ಲಿಗೆ ಹೋದ್ದು..?"(ಬೆಳಗ್ಗೆ ಬೇಗನೇ ಹೋಗೋದಿದೆ, ಕಾಫಿ ಬೇಗ ರೆಡಿ ಮಾಡು ಹೇಳಿದ್ದರು ಪತಿ ದೇವರು, ಆ ಗಡಿಬಿಡಿಯ ಎಡೆಯಲ್ಲಿ ಇದೇನು ಬಂತಪ್ಪಾ ಗ್ರಾಚಾರಾ....) ಬೆಪ್ಪು ತಕ್ಕಡಿಯಂತ ನನ್ನ ಪ್ರಶ್ನೆಯನ್ನು ಉಮಾ ನಿರೀಕ್ಷಿಸಿರಲಿಲ್ಲ.ಅಸಹನೆಯ ತುಟ್ಟತುದಿಯಲ್ಲಿತ್ತು ಅವಳ ಸ್ವರ,
"ಆಂಟೀ...,ಸಿನೆಮಾ ತಾರೆ ಶ್ರೀದೇವಿ ಸತ್ತೋದ್ಲಂತೆ....ನಿನ್ನೆ ರಾತ್ರಿ ದುಬೈಯ ಹೋಟೆಲಲ್ಲಿ..."
"ಹಾ....ಏನೂ.....?"
"ಹೌದಾಂಟೀ....ಮದುವೆಗೆ ಹೋದವಳು ಹೋಟೆಲಲ್ಲಿ ಕಾರ್ಡಿಯಾಕ್ ಅರೆಸ್ಟ್ ಆಗಿ ತೀರಿ ಹೊದ್ದಂತೆ...."
ಅವಳು ಇನ್ನೂ ಏನೇನೋ ವಿವರಗಳನ್ನು ಹೇಳುತ್ತಲೇ ಇದ್ದಳು. ನನ್ನ ಕಿವಿಯಲ್ಲಿ ಮೊರೆಯುತ್ತಿದ್ದ ಗುಂಯೀ....ಎನ್ನೋ ಶಬ್ದ ಮಾತ್ರ ನನಗೆ ಕೇಳುತ್ತಿದ್ದುದು. ಅವಳು ಫೋನು ಇಟ್ಟಾಗಲೇ ನಾನು ಎಚ್ಚರಗೊಂಡಿದ್ದು.ಕೈಗಳು ಯಾಂತ್ರಿಕವಾಗಿ ಕೆಲಸ ಮಾಡುತ್ತಲೇ ಇತ್ತು. ಮನಸ್ಸಿಡೀ ಕತ್ತಲೋ....ಕತ್ತಲು....ಕಣ್ಣು ತುಂಬಿ ಬಂದು ಎದುರಿನ ತವಾದಲ್ಲಿ ಬೇಯುತ್ತಿದ್ದ ಚಪಾತಿ ಕರ್ರಗಾದದ್ದೂ ಗೊತ್ತೇ ಆಗಲಿಲ್ಲ. ಇವರನ್ನು ಹೇಗೋ ಕಳುಹಿಸಿಕೊಟ್ಟು ಸೋಫಾದಲ್ಲಿ ಕುಸಿದು ಕುಳಿತೆ.
"ಕಣೈ ಕಲೈಮಾನೇ
ಕನ್ನಿಮಯಿಲೆನ್ನ ಕಂಡೈನುನೈ ನಾನೇ
ಅಂದಿಪದಲು ನುಣೈ ನಾನ್ ಪಾಕ್ಕಿರಿ
ಅಂಡವನೈ ಇದೈತಾಲ್ ಕೇಟಿರೆ
ರಾರಿರಾರೋ....ಓ.... ರಾರಿರೋ...."
ಅಂದು ಹದಿಹರೆಯದಲ್ಲಿದ್ದ ನಮ್ಮೆಲ್ಲರನ್ನೂ ಹುಚ್ಚರಲ್ಲಿ ಹುಚ್ಚರನ್ನಾಗಿಸಿದ ಹಾಡದು. 1982 ರಲ್ಲಿ ಗಲ್ಲಾ ಪೆಟ್ಟಿಗೆಯನ್ನು ಚಿಂದಿ ಉಡಾಯಿಸಿದ ತಮಿಳು ಚಿತ್ರ `ಮೂಂಡ್ರಾಮ್ ಪಿರ್ರೈ'. ಕಮಲಹಾಸನ್ ತೊಡೆಯಲ್ಲಿ ಮಲಗಿ ಆತನ ಹಾಡನ್ನು ಅನುಭವಿಸುತ್ತಾ ಮುದ್ದು `ಮಗು' ಶ್ರೀದೇವಿ ಮಾಡುವ ತುಂಟಾಟ ಬೇರೆ ಯಾವುದೇ ನಟಿ ಮಾಡಿರುತ್ತಿದ್ದರೂ ಅಲ್ಲೊಂದು ಕೃತ್ರಿಮತೆ ಎದ್ದು ಕಂಡಿರುತ್ತಿತ್ತು. ಆದರೆ ಶ್ರೀದೇವಿ? ಹೊರರೂಪ ಅರೆಬಿರಿದ ಕೆಂಡಸಂಪಿಗೆಯಾದರೆ ಒಳಗಿದ್ದುದು ವಠಪತ್ರದ ಮೇಲೆ ಪವಡಿಸಿ ಕಾಲ್ಬೆರಳನ್ನು ಕೈಯ್ಯಲ್ಲಾನಿಸಿ ಹಿಡಿದು ಚೀಪುವ ಅದೇ ಮುದ್ದು ಕೃಷ್ಣನ ಮುಗ್ಧತೆ! ಆದುದರಿಂದಲೇ ಕಮಲಹಾಸನ್ ಆಕೆಯ ಕೆನ್ನೆ ಸವರುತ್ತಾ ಹಾಡುವಾಗ ನಾಲಿಗೆಯನ್ನು ಹೊರಕ್ಕೆ ಚಾಚಿ ಆತನ ಕೈಯ್ಯನ್ನು ಪಿಚಕ್ಕನೆ ನೆಕ್ಕಿ ತನಗೇನೂ ಗೊತ್ತಿಲ್ಲವೆಂಬಂತೆ ಹೆಬ್ಬೆಟ್ಟು ಚೀಪುತ್ತಾ ನಿದ್ದೆಗೆ ಜಾರುವ ಆ ಮುಗ್ಧ ಕ್ಷಣ ಅಷ್ಟು ಸಹಜವಾಗಿ ಮೂಡಿ ಬಂದದ್ದು. ಪದಿನಾರು ವಯದಿನಿಲೆ(1977), ಕಲ್ಯಾಣ ರಾಮನ್(1979) ಈ ಎರಡೂ ಚಿತ್ರಗಳಲ್ಲಿ `ಹುಚ್ಚುಕೋಡಿ ಮನಸು....,ಅದು ಹದಿನಾರರ ವಯಸು...' ಎನ್ನುವಂತಹ ಹುಡುಗಿ ನಾಯಕಿ ಶ್ರೀದೇವಿ. ನಿಜವಾಗಿಯೂ ಅಂದು ಅವಳು ಅದಕ್ಕಿಂತಲೂ ಚಿಕ್ಕ ವಯಸ್ಸಿನವಳಾಗಿದ್ದಳು. (ಹತ್ತೋ ಹನ್ನೊಂದೋ ವಯಸ್ಸಿನಲ್ಲೇ ಅವಳು ಎರಡು ಶಿಫ್ಟಲ್ಲಿ ಕೆಲಸ ಮಾಡುತ್ತಿದ್ದಳಂತೆ!)
`ನಿನೈತಾಲ್ ಇನಿಕುಮ್ ನಲ್ಲ ನೇರಂ ಸೇಂರ್ದು ವರುಂ....
ಕೊಡುತ್ತಾಲ್ ಸುವೈಕ್ಕಂ....
ಇನ್ನೊಂದು ಹಾಡು,
`ಸೆಂಧೂರ ಪೂವೇ....ಸೆಂಧೂರ ಪೂವೇ....'
ಈ ಎರಡು ಹಾಡುಗಳಲ್ಲೂ ಮಂಜಿನ ಹನಿಯಲ್ಲಿ ತೋಯ್ದು ನಿಂತ ನಂದಿಬಟ್ಟಲು ಹೂವಿನ ಮೇಲೆ ಬಿದ್ದ ಸ್ಫಟಿಕದ ಮಣಿಯಂತೆ ಶುಭ್ರಬಿಳಿ ಬಣ್ಣದ ಲಂಗ ದಾವಣಿಯಲ್ಲಿ ಅಷ್ಟೇ ಶುಭ್ರವಾದ ದಂತ ಪಂಙ್ತಿಯನ್ನು ಮಿನುಗಿಸುತ್ತಾ ತೊನೆಯುತ್ತಾ ತೇಲುತ್ತಾ ಬರುವ ಶ್ರೀದೇವಿ.....ಯಬ್ಬ...! ಎಸ್.ಜಾನಕಿಯವರ ಆ ಕಾಡುವ ಸ್ವರಕ್ಕೆ ಶ್ರೀದೇವಿಯ ಈಡುವ ಸೌಂದರ್ಯ.....ಆ ಎರಡು ಕಾಂಬಿನೇಷನ್ ಇದೆಯಲ್ಲಾ ಬಾಲಿವುಡ್ಡಲ್ಲಿ ಟಾರ್ಚ್ ಹಿಡಿದು ಹುಡುಕಿದರೂ ಅಂದು, ಇಂದು ಮುಂದೆಂದೂ ಸಿಗಲು ಸಾಧ್ಯವೇ ಇಲ್ಲ. ಯಾವುದೇ ಭಾಷೆಯ ಸಿನೆಮಾ ಇರಲಿ ನಾಯಕಿ ಶುಭ್ರಬಿಳಿ ಬಟ್ಟೆ ಧರಿಸಿಕೊಂಡು ಹಾಡಿಗೆ ಹೆಜ್ಜೆ ಹಾಕುತ್ತಾ ಎಂಟ್ರಿ ಕೊಟ್ಟಳೆಂದರೆ ಅಲ್ಲೊಂದು ಜಲಪಾತ ಇರಲೇ ಬೇಕು, ಆಕೆ ಒದ್ದೆಯಾಗಲೇ ಬೇಕು, ಆಕೆಯ ಮೈಸಿರಿ ನೋಡಿದ ಆಕೆಯ ನಾಯಕ, ನಾವು,ನೀವು....ಹೀಗೆ ಎಲ್ಲರೂ ಹುಚ್ಚರಾಗಲೇ ಬೇಕು. ಇದು ಸಿನೆಮಾದ ಒಂದು ಒಪ್ಪಿತ ಫಾರ್ಮೂಲಾ. ಆದರೆ ಶ್ರೀದೇವಿ ಒದ್ದೆಯಾಗದೇ ಪಡ್ಡೆಗಳ ನಿದ್ದೆ ಕೆಡಿಸಿದಳು, ಹೆಂಗಸರ ಹೃದಯ ಸಿಂಹಾಸನವನ್ನೇರಿದಳು. ಗಂಡಸರ ಒರಟು ಹೃದಯದ ಮೂಲೆಯಲ್ಲೊಂದು ಸಾಫ್ಟ್ ಕಾರ್ನರ್ ಆಕೆಗಾಗಿಯೇ ಕಾದಿರಿಸಲ್ಪಟ್ಟಿತ್ತು. ಸಾವಿರದ ಒಂಭೈನೂರಎಪ್ಪತ್ತು ಎಂಭತ್ತರ ಆ ಕಾಲದಲ್ಲಿ ನಮ್ಮ ಮನೆಯಲ್ಲಿ ಅಲಿಖಿತ ಸಂವಿಧಾನವೊಂದಿತ್ತು, ವರ್ಷಕ್ಕೆ ಮೂರೇ ಸಿನೆಮಾ ನೋಡಲಷ್ಟೇ ನಮಗೆ ಪರ್ಮಿಟ್. ಒಂದು ಸಿನೆಮಾ ಓಣಂ ರಜಾ ಸಮಯದಲ್ಲಿ, ಇನ್ನೊಂದು ಕ್ರಿಸಮಸ್ ರಜಾ ಬಂದಾಗ. ಮತ್ತೊಂದು ದೊಡ್ಡ ರಜೆಯಲ್ಲಿ ಅದೂ ತಂದೆಯವರ ಜೊತೆಯೇ ಹೋಗಬೇಕಾಗಿತ್ತು. ಈ ಸಂವಿಧಾನದಲ್ಲಿ ಬದಲಾವಣೆ ತಂದವಳು ಶ್ರೀದೇವಿ! ಹೌದು, ಆದಿಪರಾಶಕ್ತಿ ಸಿನೆಮಾ ನಮ್ಮೂರಿಗೆ ಬಂದಿತ್ತು. ಶ್ರೀದೇವಿಯ ಮುರುಗನ್ ಪಾತ್ರ ನೋಡಿ ಮೆಚ್ಚಿದ ನಮ್ಮಪ್ಪ ಶ್ರೀದೇವಿಯ ಸಿನೆಮಾಕ್ಕೆ ನಾವು ಗೆಳತಿಯರು ಮಾತ್ರವೇ ಹೋಗುತ್ತೇವೆ ಎಂದಾಗ ಮತ್ತೆಂದೂ ಅಡ್ಡಿಪಡಿಸಿರಲೇ ಇಲ್ಲ! ಅವಳು ನಟಿಸಿದ ಸುಮಾರು 72 ತಮಿಳು ಸಿನೆಮಾಗಳಲ್ಲಿ ಹೆಚ್ಚಿನವೂ ಕೌಟುಂಬಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಂತವೇ. 1982 ರಲ್ಲಿ `ವಾಳ್ವೈ ಮಾಯಮ್' ಎಂಬ ಸಿನೆಮಾ ಸೂಪೆರ್ ಡ್ಯೂಪರ್ ಹಿಟ್ ಆಗಿತ್ತು. ಅಂದು ನಾನದನ್ನು ಸಿನೆಮಾ ಥೇಟರಲ್ಲಿ ನೋಡಿದ್ದೆ. ಆನಂತರ ಅದನ್ನು ನೋಡಿದ್ದು ಮೊನ್ನೆ ಶ್ರೀದೇವಿ ಇನ್ನಿಲ್ಲವಾದಾಗ ಯೂ ಟ್ಯೂಬಲ್ಲಿ. ಇತ್ತೀಚೆಗೆ ಅವಳ ಹಿಂದಿ ಸಿನೆಮಾಗಳನ್ನೇ ನೋಡಿ ಅಭ್ಯಾಸವಾಗಿದ್ದ ನನಗೆ ಆ ತಮಿಳು ಸಿನೆಮಾ ನೋಡಿದಾಗ ಶ್ರೀದೇವಿ ಎನ್ನುವ `ನಟಿ' ಗೂ ಶ್ರೀದೇವಿ ಎನ್ನುವ `ತಾರೆ'ಗೂ ಎಂಥಾ ವ್ಯತ್ಯಾಸ ಇದೆಯಲ್ಲಾ ಎನಿಸದಿರಲಿಲ್ಲ. ಒಂದು ಚೂರೂ ವಲ್ಗಾರಿಟಿಗೆ ಎಡೆಯೇ ಇಲ್ಲದಂತೆ ಆದರೆ ಒಮ್ಮೆ ನೋಡಿದರೆ ಮತ್ತೆಂದೂ ಮರೆಯಲಾರದಂತಹ ಆ ಮುಖಭಾವದಲ್ಲಿ ಅವಳು `ರೋಗಿ' ಕಮಲಹಾಸನ್ಗೆ ಚೂರೇ ದೂರದಲ್ಲಿ ಕುಳಿತು `ಐ ಲೌ ಯೂ...' ಅಂತ ಹೇಳುವ ಆ ಪರಿ ಇದೆಯಲ್ಲಾ ಸಿಂಪ್ಲೀ ಸೂಪರ್ಬ್. ಏರ್ ಹೋಸ್ಟೆಸ್ ಶ್ರೀದೇವಿಗೆ ಶ್ರೀದೇವಿಯೇ ಸಾಟಿ.
ಮಿಸ್ಟರ್ ಇಂಡಿಯಾದವರೆಗಿನ ಆಕೆಯ ಹಿಂದಿ ಸಿನೆಮಾಗಳದ್ದೇ ಒಂದು ತೂಕವಾದರೆ ಮಿಸ್ಟರ್ ಇಂಡಿಯಾದ್ದೇ ಒಂದು ತೂಕವಾಗಿತ್ತು. ಶ್ರೀದೇವಿಯ ಗ್ಲಾಮರನ್ನು ಅತ್ಯಂತ ಸಮರ್ಪಕವಾಗಿ ಹೈಲೈಟ್ ಮಾಡಿ ತೋರಿಸಿದ ಆ ಸಿನೆಮಾವನ್ನು ಮೊದಲ ದಿನ ಮೊದಲ ಶೋ ನೋಡಲೇಬೇಕೆಂದು ನಮ್ಮ ಕಾಸರಗೋಡಿನಿಂದ ಮಂಗಳೂರಿಗೆ ಹೋದವರ ಗುಂಪಿನಲ್ಲಿ ಮೂರು ತಲೆಮಾರಿನ ಅಭಿಮಾನಿಗಳು ಇದ್ದುದನ್ನು ನಾನೇ ಕಣ್ಣಾರೆ ನೋಡಿದ್ದೇನೆ.(ಎರಡನೇ ತಲೆಮಾರಿನವಳು ನಾನೇ ಆಗಿದ್ದೆ!). ಶ್ರೀದೇವಿ.....,ಬಾರತೀಯ ಚಲನಚಿತ್ರರಂಗದ ಮೊತ್ತ ಮೊದಲ ಲೇಡಿ ಸೂಪರ್ ಸ್ಟಾರ್. ಸಿನೆಮಾ ಕ್ಷೇತ್ರದ ಉತ್ತುಂಗದಲ್ಲಿದ್ದಾಗಲೆ ಗೃಹಿಣಿಯಾಗಿ ತೆರೆಯ ಮರೆಗೆ ಸರಿದಾಕೆ. ಹದಿನೈದು ವರ್ಷಗಳ ನಂತರ ಮತ್ತೆ ಚಿತ್ರರಂಗಕ್ಕೆ ಎಂಟ್ರಿ. ಮುಂದಿನದು ಏನಿದ್ದರೂ ಬಾಡದಂತೆ ಬಣ್ಣ ಮಾಸದಂತೆ ರಾಸಾಯನಿಕ ಸ್ಪ್ರೇ ಮಾಡಿದ ಸುಗಂಧರಾಜ ಹೂವಿನ ಕಥೆ, ಮರೆಯಲ್ಲಿ ವ್ಯಥೆ. ದಕ್ಷಿಣದ ಖ್ಯಾತ ನಿರ್ದೇಶಕ ಭಾರತೀರಾಜ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಶ್ರೀದೇವಿಯ ಬಗ್ಗೆ ಹೇಳುತ್ತಾ ಹಿಂದಿ ಸಿನೆಮಾ ಕ್ಷೇತ್ರ ತನಗೆ ಹೇಳಿಸಿದ್ದಲ್ಲ, ತಾನಲ್ಲಿಗೆ ಹೋಗಲಾರೆ ಎಂದು ಆಕೆ ಹೇಳಿದಾಗ ಆ ಚೆಲುವು, ಪ್ರತಿಭೆ ನಿಂತ ನೀರಾಗಬಾರದು ಎಂಬ ಉದ್ದೇಶದಿಂದ ತಾನು ಮತ್ತು ಆಕೆಯ ತಾಯಿ ಹಾಕಿದ ಒತ್ತಡವೇ ಆಕೆಯನ್ನು ಅಲ್ಲಿ ನಟಿಸುವಂತೆ ಮಾಡಿತು, (ಇವರೇ ತಮಿಳಿನ ಪದಿನಾರು ವಯದಿನಿಲೆ ಸಿನೆಮಾವನ್ನು ಹಿಂದಿಯಲ್ಲಿ `ಸೊಲ್ವಾ ಸಾವನ್' ಎನ್ನುವ ಹೆಸರಿನಲ್ಲಿ ನಿರ್ದೇಶಿಸಿದ್ದರು. ಶ್ರೀದೇವಿ ನಾಯಕಿ ಎಂದು ಬೇರೆ ಹೇಳಬೇಕಾಗಿಲ್ಲ ತಾನೇ?) ಆದರೆ ಮುಂದೆ ಯಾವತ್ತೂ ಅವಳ ಆದ್ಯತೆ ಬಾಲಿವುಡ್ಡಿಗೇ ಮೀಸಲಾಗಿತ್ತು' ಎಂದಿದ್ದರು. ಅವರು ಹಾಗೆ ಹೇಳುವಾಗ ಅದು ಅವರೊಬ್ಬರದೇ ಪಶ್ಚಾತ್ತಾಪದ ಧ್ವನಿ ಎಂದು ನನಗನಿಸಿಲ್ಲ. ಆಕೆಯ ತವರೂರಿನ ಅಷ್ಟೂ ಜನರ ಹೃದಯ ಮಿಡಿತಕ್ಕೆ ಶಬ್ದಗಳ ರೂಪ ಕೊಟ್ಟಂತೆನೆಸಿತು. `ಛೇ...ಮಗಳನ್ನು ಗಿಣಿಯಂತೆ ಸಾಕಿ ಗಿಡುಗನ ಕೈಗಿಟ್ಟೆವಲ್ಲಾ.....' ಎಂದು ಅಲವತ್ತುಕೊಳ್ಳುವ ಹೆತ್ತವರ ದುಃಖಕ್ಕಿಂತ ಅದು ಕಡಿಮೆಯಾಗಿರಲಿಲ್ಲ.
ಪ್ಯಾರಿಸ್, ಮಿಲನ್(ಫ್ಯಾಶನ್ ತವರೂರು)ಗಳಲ್ಲಿಯೇ `ಸೈಝ್ ಝೀರೊ' ಎನ್ನುವ ಪರಿಕಲ್ಪನೆ ಮೂಲೆಗುಂಪಾಗಿ ಯಾವುದೋ ಕಾಲ ಆಗಿದೆ. ನಮ್ಮ ಬಾಲಿವುಡ್ಡಲ್ಲಿ ಇನ್ನೆಷ್ಟು ಜೀವಗಳ ಆಹುತಿಯಾಗಬೇಕೋ ಆ ಹುಚ್ಚು ಇಲ್ಲವಾಗಲು...? ಶ್ರೀ ಯಂತೂ ಡಿಸೈನರ್ಗಳ ಕೈಗೊಂಬೆ. ಇನ್ನೊಂದು ಅರ್ಥದಲ್ಲಿ ತೊಗಲು ಗೊಂಬೆಯೆಂದರೂ ಸರಿಯೇ. ಯಾರೆಷ್ಟು ನಮೂನೆಯ ಫ್ಯಾಷನ್ ಆವಿಷ್ಕಾರಗಳನ್ನು ಆಕೆಯ ಮೇಲೆ ಪ್ರಯೋಗ ಮಾಡಿದರೂ ಆಕೆಗೆ ಆಕ್ಷೇಪ ಎತ್ತಲು ಗೊತ್ತೇ ಇಲ್ಲ, ಗೊತ್ತಿರುವುದಾದರೂ ಹೇಗೆ...? ಬುದ್ಧಿ ಬಲಿಯುವ ಮೊದಲೇ ತಾಯಿಗೆ ಚಿನ್ನದ ಮೊಟ್ಟೆಯಿಡುವ ಕೋಳಿಯಾದಳು. ನಂತರ ಗಂಡನ ಕೈಗೊಂಬೆಯಾದಳು....ಓ ದೇವರೇ...ಆ ಮಕ್ಕಳಾದರೂ ಅವರಿಗಾಗಿಯೇ ಜೀವಿಸಲಿ....ಎಂದು ತನ್ನ ಮನಸ್ಸಿನ ಬೇಸರವನ್ನು ಹೊರಹಾಕಿದ್ದಳು. ಏನಿದರ ಅರ್ಥ?
1997ರಿಂದ 2012ರವರೆಗೆ ತೆರೆಯ ಮರೆಯಲ್ಲೇ ಇದ್ದು ಗಂಡ ಮಕ್ಕಳಿಗಾಗಿ ಜೀವ ತೇಯ್ದವಳು 2012 ರಲ್ಲಿ ಇಂಗ್ಲಿಷ್ ವಿಂಗ್ಲಿಷ್ ಮೂಲಕ ಸಿನೆಮಾ ರಂಗಕ್ಕೆ ರಿಎಂಟ್ರಿ ಕೊಟ್ಟಳಲ್ಲಾ? ಹೇಗಿದ್ದಿರಬಹುದು ಅವಳ ಮನಸ್ಥಿತಿ? ಹದಿಹರೆಯಕ್ಕೂ ಮೊದಲೇ ಶ್ರೀದೇವಿ ತಂದೆಯನ್ನು ಕಳೆದುಕೊಂಡಿದ್ದಳು. ಬದಿಯಲ್ಲಿ ನಿಂತು ಬೆನ್ನು ತಟ್ಟಿ ಎದೆಗಾನಿಸಿ ಕಣ್ಣೊರೆಸಿ, ಕೈಹಿಡಿದು ಮುನ್ನಡೆಸುತ್ತಿದ್ದ ಆ ಸಹೃದಯಿಯ ಸ್ಥಾನವನ್ನು ತುಂಬಬಲ್ಲ ಜೀವಿ ಮುಂದೆಂದೂ ಆಕೆಗೆ ದೊರೆಯಲೇ ಇಲ್ಲ. ಒಂದುಕಾಲದ ಬಾಲಿವುಡ್ಡಿನ ಅನಭಿಶಿಕ್ತ ರಾಣಿಯ ಪುನಃಪ್ರವೇಶ ಎಂದರೆ ಅದೇನು ಸಾಮಾನ್ಯವಾದ ಸಂಗತಿಯೇ? ಕಡ್ಡಿಯನ್ನು ಗುಡ್ಡ ಮಾಡಿ 24 ಘಂಟೆಯೂ ಲಬೋ ಲಬೋ ಎಂದು ಬಾಯಿ ಬಡಿದುಕೊಳ್ಳುವ ಮಾಧ್ಯಮಗಳು, ಅತಿಲೋಕಸುಂದರಿಯ ಅಭಿಮಾನಿಗಳ ಅತಿಯಾದ ನಿರೀಕ್ಷೆ.....ಹದಿನೈದು ವರ್ಷಗಳ ಕಾಲ ಬೆಳ್ಳಿತೆರೆಯನ್ನು ದೂರೀಕರಿಸಿದ್ದು....,ಇವೆಲ್ಲದರ ಜೊತೆಗೇ ತಾನು ಗೆಲ್ಲದಿದ್ದರೆ ಎನ್ನುವ ಅತಿಯಾದ ಆತಂಕ, ಈ ಎಲ್ಲ ಒತ್ತಡಗಳು ಮೈಮುಖದಲ್ಲಿ ಕಾಣದಿರುತ್ತವೆಯೇ? ಪರಿಹಾರ? ಕಾಸ್ಮೆಟಿಕ್ ಸರ್ಜರಿಗಳು ಮಾತ್ರವೇ ಎಂದು ಆಕೆ ಏಕೆ ತಿಳಿದುಕೊಂಡಳೋ (ಶ್ರೀದೇವಿ ಬದುಕಿದ್ದಾಗ ಒಮ್ಮೆಯೂ ಇದನ್ನು ಒಪ್ಪಿದವಳಲ್ಲ, ಯೋಗ, ಸಮತೋಲನ ಆಹಾರ, ಧನಾತ್ಮಕ ಚಿಂತನೆಗಳೇ ತನ್ನ ಸೌಂದರ್ಯದ ಗುಟ್ಟು ಎಂದೇ ಹೇಳುತ್ತಿದ್ದಳು),....ಅಥವಾ ಮೊದಲಿಂದಲೂ ಬಾಹ್ಯ ಒತ್ತಡವನ್ನು ನಿವಾರಿಸಿಕೊಳ್ಳಲಾರದಂತಹ ದುರ್ಬಲ ವ್ಯಕ್ತಿತ್ವವೇ ಆಕೆಗೆ ಮೈನಸ್ ಪಾಯಿಂಟ್ ಆಯಿತೇ?
ಐಶ್ವರ್ಯ ರೈಯನ್ನೊಮ್ಮೆ ನೆನಪು ಮಾಡಿಕೊಳ್ಳಿ. ಮಿಂಚಿನ ಬಳ್ಳಿಯಂತಿದ್ದವಳು ಗರ್ಭಿಣಿಯಾದಾಗ ನಮ್ಮೆಲ್ಲರಂತೆ ಊದಿ ಕುಂಬಳಕಾಯಂತಾಗಿದ್ದಳು. ಸ್ವತಃ ಸ್ತ್ರೀಯಾಗಿದ್ದುಕೊಂಡೇ ಒಬ್ಬಳು ಪತ್ರಕರ್ತೆ ಹೀಗೆ ಬರೆದಿದ್ದಳು, `ಬಲೂನು ಹೊಟ್ಟೆ ಕಾಣಬಾರದೆಂದು ಐಶು ಸೀರೆ ಸೆರಗನ್ನ ಎಳೆದದ್ದೇ ಎಳೆದದ್ದು....ವಿಚಿತ್ರವಾಗಿ ಕಾಣುತ್ತಿದ್ದ ಆಕೆ ಮನೆಯಲ್ಲೇ ಇರುತ್ತಿದ್ದರೆ ಈ ವಿಕಾರ ಫೊಟೋವನ್ನ ನೋಡುವ ದುರಾದೃಷ್ಟ ನಿಮ್ಮದಾಗಿರುತ್ತಿರಲಿಲ್ಲ.' ಗರ್ಭಿಣಿ ಐಶು ರೂಪದ ಬಗ್ಗೆ ಪತ್ರಕರ್ತರು ಕೆಣಕಿದಾಗ ಆಕೆಯ ಪತಿ ಕೊಟ್ಟ ಉತ್ತರವಾದರೂ ಎಂತಹುದು....? ಜೀವನದ ಬೇರೆ ಬೇರೆ ಘಟ್ಟಗಳ ಅನಾವರಣಕ್ಕೆ ನಮ್ಮನ್ನು ನಾವು ಒಡ್ಡಿಕೊಂಡಾಗಲಷ್ಟೇ ನಮ್ಮ ಗಟ್ಟಿತನದ ಪರೀಕ್ಷೆಯಾಗುವುದು. ತಾಯ್ತನ ಎನ್ನುವುದೂ ಅಂತಹ ಒಂದು ಘಟ್ಟ...., ಆ ಘಟ್ಟವನ್ನು ಎದುರಿಸುವಲ್ಲಿ ನನ್ನ ಪತ್ನಿಗೆ ಸಾಥಿಯಾಗಿ ಹೆಜ್ಜೆ ಹಾಕುವುದರಲ್ಲೇ ನನಗೆ ಸಂತೋಷವಿದೆ ಹೊರತಾಗಿ ಆಕೆಯ ಬಾಹ್ಯ ರೂಪದ ಬಗ್ಗೆ ನಾನು ಒಂದು ಚೂರೂ ತಲೆಕೆಡಿಸಿಕೊಂಡಿಲ್ಲ!' ಶ್ರೀದೇವಿಗೆ ಇಂತಹ ನೈತಿಕ ಬೆಂಬಲ ಕೊಡುವವರಾರಿದ್ದರು? ಕ್ಯಾನೆ ಚಿತ್ರೋತ್ಸವಕ್ಕೆ ಐಶು ಹಾಜರಿ ಹಾಕಿದ ಆ ವರ್ಷ ಅವಳ ಬೊಜ್ಜು ಇನ್ನೂ ಹಾಗೇ ಇತ್ತು. ಒಂದು ಚೂರೂ ತಲೆಕೆಡಿಸಿಕೊಳ್ಳದ ಆಕೆ ಬಿಡುಬೀಸಾಗಿ ಹೋಗಿ ಆ ವರ್ಷವೂ ರೆಡ್ ಕಾರ್ಪೆಟ್ ಸ್ವಾಗತವನ್ನೇ ಪಡೆದುಕೊಂಡು ಬಂದಿದ್ದಳು. ಮೊದಲಿನ ರೂಪದಲ್ಲಿ ಅಗಾಧ ವ್ಯತ್ಯಾಸವಾಗಿರುವಾಗಲೂ ಮಾಧ್ಯಮದವರನ್ನು ಅಭಿಮಾನಿಗಳನ್ನು ಎದುರಿಸಿಯೂ ಕೂಲ್....ಕೂಲ್ ಆಗಿರಲು ಮನೋಧಾರ್ಢ್ಯ ತುಂಬಾನೇ ಬೇಕು. ಶ್ರೀದೇವಿಗೆ ಅದರ ಕೊರತೆ ಇತ್ತೇ? ಪ್ರತಿಯೊಂದು ಪ್ರಾಯಕ್ಕೂ ಅದರದರದ್ದೆ ಆದ ಚೆಲುವು ಬಿಗುವುಗಳಿವೆಯೆಂದೂ ತಿಳಿಯದಷ್ಟು ದಡ್ಡಳಾಗಿದ್ದಳೇ ನಮ್ಮ `ರೂಪ್ ಕೀ ರಾಣಿ...?'
ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಮಗಳು ಜಾನ್ವಿ ನಟಿ ಎನಿಸಿಕೊಳ್ಳುವುದಕ್ಕಿಂತಲೂ ಗೃಹಿಣಿಯಾಗಿ ಬಾಳುವುದನ್ನು ನೋಡಲು ಇಷ್ಟಪಡುತ್ತೇನೆ ಎಂದಿದ್ದಳು. ಆದರೆ ಮಗಳು ಅಮ್ಮನ ಹಾದಿಯಲ್ಲೇ ಸಾಗುತ್ತಿರುವುದು ಸ್ಪಷ್ಟವಾಗಿತ್ತು. ಉಳಿದೆಲ್ಲ ಬಾಹ್ಯ ಒತ್ತಡಕ್ಕಿಂತಲೂ ಮಗಳ ಮೊದಲ ಚಿತ್ರ ಯಶಸ್ವಿಯಾಗಲೇಬೇಕು ಎನ್ನುವ ಅತಿಯಾದ ನೀರೀಕ್ಷೆ ಶ್ರೀದೇವಿಯನ್ನು ಕಾದ ಕಾವಲಿಗೆ ಮೇಲೆ ಕುಳಿತಂತೆ ಮಾಡಿತ್ತು. ಆಕೆ ಯಶಸ್ವಿಯಾದಳೋ ಅದರ ಸಂಪೂರ್ಣ ಹೊಣೆಯನ್ನ ತಮ್ಮ ತಮ್ಮ ಹೆಗಲಿಗೆ ವರ್ಗಾಯಿಸಿಕೊಳ್ಳಲು ಕಾತರರಾಗಿದ್ದವರು ಒಬ್ಬಿಬ್ಬರಲ್ಲ, ಆದರೆ ಒಂದು ವೇಳೆ ಸಿನೆಮಾ ಮಗುಚಿಬಿತ್ತೋ ಅದರ ಪೂರ್ಣ ಹೊಣೆಯನ್ನು ಶ್ರೀದೇವಿಯ ತಲೆಗೆ ಕಟ್ಟಿಬಿಡುತ್ತಿದ್ದರು. ಎಂತಹಾ ಸಂದಿಗ್ಧತೆ ನೋಡಿ....ತನಗೆ ಇಷ್ಟವೇ ಇಲ್ಲದಿದ್ದರೂ ಮಗಳನ್ನು ಗೆಲ್ಲಿಸಿಕೊಡುವ ಅನಿವಾರ್ಯತೆ! ಇಂತಹ ಸಂದರ್ಭದಲ್ಲಿ ಹೇಮಾಮಾಲಿನಿಯ ನೆನಪು ಮಾಡಿಕೊಳ್ಳಲೇಬೇಕು. ಎಂತಹ ಬುದ್ಧಿವಂತೆ ಆಕೆ....,ಎಶಾ ಡಿಯೋಲ್ ನಟಿಯಾಗಿ ಗೋತಾ ಹೊಡೆದಾಗ ಹೇಮಾ ತಲೆಗೆ ಕೈಹೊತ್ತು ಕುಳಿತುಕೊಳ್ಳಲೇ ಇಲ್ಲ. ಸಿನೆಮಾ ಸೋತರೆ ಅದಕ್ಕೊಂದಿಷ್ಟು ಉಪ್ಪು....ಎಂದುಕೊಂಡದ್ದೂ ಅಲ್ಲದೆ ಮಗಳ ಇಷ್ಟದಂತೆಯೇ ಉದ್ಯಮಿಯೊಬ್ಬನೊಡನೆ ಮದುವೆಯನ್ನೂ ಮುಗಿಸಿಯೇ ಬಿಟ್ಟಳು. ಶ್ರೀದೇವಿಯಲ್ಲಿ ಈ ದಿಟ್ಟತನ ಇರಲಿಲ್ಲವೇ...? ಅಥವಾ ಅದನ್ನು ತೋರಿಸಿಕೊಳ್ಳಲು ಪೂರಕವಾದಂತಹ ವಾತಾವರಣ ಮನೆಯಲ್ಲಿ ಇರಲಿಲ್ಲ...?
ಇಂಗ್ಲಿಷ್ ವಿಂಗ್ಲಿಷ್ ನಾಯಕಿ ಶಶಿ ಗೋಡಬೋಲೆ ನಮ್ಮೆಲ್ಲರ ಹೃದಯಕ್ಕೆ ಎಷ್ಟು ಹತ್ತಿರವಾಗಿದ್ದಳೆಂದರೆ ಸಾಂಸಾರಿಕ ಶೋಶಣೆಗೆ ಎಷ್ಟು ಚೆಂದದ ಮುಖವಾಡವಲ್ಲವೇ? ಎಂದುಕೊಂಡು ಶ್ರೀದೇವಿಯ ನಟನೆಯನ್ನು ಮನಸಾರೆ ಮೆಚ್ಚಿಕೊಂಡೆವು. ಸ್ವತಃ ಶ್ರೀದೇವಿಯೇ ಓರ್ವ ಶೋಶಿತೆ ಎಂದು ನಮ್ಮರಿವಿಗೆ ಬರುವ ಹೊತ್ತಿಗೆ ಶ್ರೀದೇವಿ ಇನ್ನೆಲ್ಲಿ....? ಆಕೆಯ ಕೊನೆಯ ಮೂವಿ `ಮೊಮ್'. ಅಮ್ಮನ ಸಂದಿಗ್ಧತೆ, to be or not to be ಎನ್ನುವ ಆ ಇಬ್ಬಂದಿತನ....,ದೇವಕಿ ಸಬರವಾಲ್ ನಮ್ಮ ನಿಮ್ಮೆಲ್ಲರೊಳಗೆ ಇರುವ ಓರ್ವ ಅಪ್ಪಟ ತಾಯಿ.
ರಾಮೇಶ್ವರದ ಕಡಲ ಕಿನಾರೆಯಲ್ಲಿ ಮೊನ್ನೆ ಮೊನ್ನೆ ಆ ಅಪ್ಪ ಮಕ್ಕಳನ್ನು ಕಂಡಾಗ ಅಲೆಗಳು ಎದ್ದೆದ್ದು ಬಂದುವಂತೆ, ಸಂಭ್ರಮದಿಂದ ತವರಿಗೆ ಬರಬೇಕಿದ್ದ ಮಗಳು ಕೆಂಪು ಬಟ್ಟೆಯೊಳಗೆ ಬೂದಿಯಾಗಿ ಬಂದದ್ದನ್ನು ನೋಡಿ `ತಂಗೈ....,ನೀ ಇವುಳೌ ಸೀಘ್ರಂ ಪೋಯಿವಿಟ್ಟಿಯಾ....?' ಎಂದು ಕಣ್ಣೀರುಗರೆಯುತ್ತಾ ಹಿಂದಕ್ಕೆ ಸರಿದುವಂತೆ.
ಸೋಫಾದಲ್ಲಿ ಕುಸಿದೇ ಕುಳಿತಿದ್ದ ನಾನು ಹೊಟ್ಟೆ ಚೆನ್ನಾಗಿ ಚುರುಗುಟ್ಟುವಾಗ ಇಹಲೋಕಕ್ಕೆ ಬರಲೇಬೇಕಾಯ್ತು. ನನ್ನ ಮದುವೆಗೆ ಮೊದಲು ನಾನು ಶ್ರೀದೇವಿಯ ಭಕ್ತೆಯೇ ಆಗಿದ್ದೆ. ನಂತರ ಗೃಹಿಣಿಯಾಗಿ ಸಾಂಸಾರಿಕ ಜವಾಬ್ದಾರಿಗಳೇ ಪ್ರಮುಖವಾಗಿ ಶ್ರೀದೇವಿಯನ್ನು ಹೆಚ್ಚುಕಡಿಮೆ ಮರೆತೇಬಿಟ್ಟೆ ಎಂದುಕೊಂಡಿದ್ದೆ. ಆದರೆ ಅವಳ ಮರಣದ ಸುದ್ದಿ ತಿಳಿದ ನನ್ನ ಮೈಮನಸುಗಳು ತೋರಿದ ಪ್ರತಿಕ್ರಿಯೆ.....? ಅವಳು ಈಗಲೂ ನನ್ನೊಳಗನ್ನು ಪೂರ್ತಿಯಾಗಿ ಆವರಿಸಿಕೊಂಡೇ ಇದ್ದಾಳಲ್ಲ ಎನಿಸಿತು. ಪ್ರಶ್ನೆಗಳು ಮನದೊಳಗೆ ಉಕ್ಕೇರಿದಾಗ ನಿಮ್ಮೊಡನೆ ಹಂಚಿಕೊಂಡು ಹಗುರವಾಗಲೇಬೇಕು ಎಂದು ತೋರಿತು. ನನ್ನೊಳಗನ್ನು ಕಾಡಿದ ಪ್ರಶ್ನೆಗಳು ನಿಮ್ಮವೂ ಆಗಿರಬಹುದಲ್ವೇ....?



ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ